ಮಾನವ ಕಳ್ಳಸಾಗಣೆ ವಿರುದ್ಧ ಜಾಗತಿಕ ಹೋರಾಟ ಬಲಪಡಿಸಲು ಥೈಲ್ಯಾಂಡ್‌ನಲ್ಲಿ ಕಥೋಲಿಕ ನಾಯಕರ ಸಭೆ
ಲೇಖಕರು: ಚೈನರಾಂಗ್ ಮೊಂತಿಯನ್‌ವಿಚಿಯೆಂಚೈ, LiCAS ನ್ಯೂಸ್
ತಲಿಥಾ ಕುಮ್ ನಾಯಕತ್ವ ತರಬೇತಿ ಕಾರ್ಯಕ್ರಮದ 6ನೇ ಅಂತರರಾಷ್ಟ್ರೀಯ ಆವೃತ್ತಿಯು ಜೂನ್ 24ರಿಂದ 30ರವರೆಗೆ ಬ್ಯಾಂಕಾಕ್‌ನ ಪಶ್ಚಿಮ ಭಾಗದಲ್ಲಿರುವ ಸಾಮ್ಫ್ರಾನ್‌ನ ಬಾನ್ ಫು ವಾನ್ ಪಾಸ್ಟೋರಲ್ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದ್ದು, 23 ದೇಶಗಳ 30 ಪ್ರತಿನಿಧಿಗಳನ್ನು ಒಟ್ಟುಗೂಡಿಸಿದೆ.
ಶುಭಸಂದೇಶದಲ್ಲಿರುವ "ತಲಿಥಾ ಕುಮ್" ("ಮಗಳೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು") ಎಂಬ ಯೇಸುವಿನ ವಾಕ್ಯದಿಂದ ತನ್ನ ಹೆಸರನ್ನು ಪಡೆದಿರುವ ಈ ಜಾಗತಿಕ ಜಾಲತಾಣವು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವುದು, ಬದುಕುಳಿದವರನ್ನು ರಕ್ಷಿಸುವುದು ಹಾಗೂ ಜನರನ್ನು ಶೋಷಣೆಗೆ ಗುರಿಯಾಗುವಂತೆ ಮಾಡುವ ವ್ಯವಸ್ಥಾತ್ಮಕ ಕಾರಣಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ.
ಇತ್ತೀಚಿನ ಅಂದಾಜುಗಳ ಪ್ರಕಾರ, ವಿಶ್ವದಾದ್ಯಂತ ಸುಮಾರು 4.96 ಕೋಟಿ ಜನರು ಆಧುನಿಕ ಗುಲಾಮಗಿರಿಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರಲ್ಲಿ 2.76 ಕೋಟಿ ಜನರು ಬಲವಂತದ ದುಡಿಮೆಯಲ್ಲಿ, 2.2 ಕೋಟಿ ಜನರು ಬಲವಂತದ ವಿವಾಹಗಳಲ್ಲಿ ಸಿಲುಕಿದ್ದಾರೆ.
ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿ (UNODC) 2022ರಲ್ಲಿ ಪತ್ತೆಯಾದ ಮಾನವ ಕಳ್ಳಸಾಗಣೆ ಸಂತ್ರಸ್ತರ ಸಂಖ್ಯೆ 2019ರಿಗಿಂತ 25 ಶೇಕಡಾ ಹೆಚ್ಚಾಗಿದೆ ಎಂದು ತಿಳಿಸಿದೆ. ಬಾಲಕ-ಬಾಲಕಿಯರ ಸಂತ್ರಸ್ತರ ಸಂಖ್ಯೆ 31 ಶೇಕಡಾ ಹೆಚ್ಚಳ ಕಂಡಿದ್ದು, ಗುರುತಿಸಲಾದ ಸಂತ್ರಸ್ತರಲ್ಲಿ 71 ಶೇಕಡಾ ಮಹಿಳೆಯರು ಮತ್ತು ಬಾಲಕಿಯರೇ ಆಗಿದ್ದಾರೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಪ್ರಕಾರ, ಬಲವಂತದ ದುಡಿಮೆಯಿಂದ ಪ್ರತಿ ವರ್ಷ ಸುಮಾರು 23600 ಕೋಟಿ ಅಮೆರಿಕನ್ ಡಾಲರ್ ಅಕ್ರಮ ಲಾಭ ಗಳಿಸಲಾಗುತ್ತಿದೆ. ಇದರಲ್ಲಿ 17,320 ಕೋಟಿ ಬಿಲಿಯನ್ ಡಾಲರ್, ಅಂದರೆ ಒಟ್ಟು ಮೊತ್ತದ ಸುಮಾರು ನಾಲ್ಕನೇ ಮೂರರಷ್ಟು ಭಾಗ, ಬಲವಂತದ ಲೈಂಗಿಕ ಶೋಷಣೆಯಿಂದ ಬರುತ್ತದೆ.
ಆಧುನಿಕ ಗುಲಾಮಗಿರಿಯ ಅತಿ ದೊಡ್ಡ ಹೊರೆ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಮೇಲಿದೆ. ಈ ಪ್ರದೇಶದಲ್ಲಿ ಸುಮಾರು 2.93 ಕೋಟಿ ಜನರು ಶೋಷಣೆಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಬಲವಂತದ ದುಡಿಮೆಯಿಂದ ಮಾತ್ರವೇ ವರ್ಷಕ್ಕೆ ಸುಮಾರು 6200 ಕೋಟಿ ಅಮೆರಿಕನ್ ಡಾಲರ್ ಅಕ್ರಮ ಲಾಭ ಗಳಿಸಲಾಗುತ್ತಿದೆ ಎಂದು ILO ಅಂದಾಜಿಸಿದೆ.
UNODC ಪ್ರಕಾರ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ಫಿಲಿಪ್ಪೀನ್ಸ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆನ್‌ಲೈನ್ ವಂಚನಾ ಕೇಂದ್ರಗಳಿಗೆ ಸಂಬಂಧಿಸಿದ ಮಾನವ ಕಳ್ಳಸಾಗಣೆಯ ಪ್ರಮುಖ ಕೇಂದ್ರವಾಗಿ ಆಗ್ನೇಯ ಏಷ್ಯಾ ರೂಪುಗೊಂಡಿದೆ. ಕನಿಷ್ಠ ಮೂರು ಲಕ್ಷ ಜನರನ್ನು ವಂಚನಾ ಕೇಂದ್ರಗಳಲ್ಲಿ ಬಲವಂತವಾಗಿ ಕೆಲಸ ಮಾಡಲು ಕಳ್ಳಸಾಗಣೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಈ ಅಪರಾಧ ಜಾಲಗಳು ವರ್ಷಕ್ಕೆ 5000 ಕೋಟಿಯಿಂದ 7500 ಕೋಟಿ ಅಮೆರಿಕನ್ ಡಾಲರ್ ಆದಾಯ ಗಳಿಸುತ್ತಿದ್ದು, ವಂಚನಾ ಚಟುವಟಿಕೆಗಳನ್ನು ವಿಸ್ತರಿಸಲು ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸುತ್ತಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ASEAN) 2025ರಲ್ಲಿ "ನಾನ್-ಪನಿಶ್ಮೆಂಟ್ ಪ್ರಿನ್ಸಿಪಲ್" ಮಾರ್ಗಸೂಚಿಯನ್ನು ಅಂಗೀಕರಿಸಿತು. ಇದರ ಉದ್ದೇಶ, ಕಳ್ಳಸಾಗಣೆದಾರರ ನಿಯಂತ್ರಣದಲ್ಲಿ ಇದ್ದಾಗ ಬಲವಂತವಾಗಿ ಮಾಡಬೇಕಾದ ಅಪರಾಧಗಳಿಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರನ್ನು ಶಿಕ್ಷಿಸದಂತೆ ನೋಡಿಕೊಳ್ಳುವುದಾಗಿದೆ.
ರೋಮ್‌ನಲ್ಲಿರುವ ಕ್ಯಾಥೋಲಿಕ ಮಹಿಳಾ ಧಾರ್ಮಿಕ ಮೇಲಧಿಕಾರಿಣಿಯರ ಅಂತರರಾಷ್ಟ್ರೀಯ ಒಕ್ಕೂಟ (UISG) ಅಡಿಯಲ್ಲಿ ಕಾರ್ಯನಿರ್ವಹಿಸುವ ತಲಿಥಾ ಕುಮ್ ಅಂತರರಾಷ್ಟ್ರೀಯ ಜಾಲತಾಣವು, ನೈರೋಬಿಯ ಟಂಗಾಜಾ ವಿಶ್ವವಿದ್ಯಾಲಯ ಹಾಗೂ ರೋಮ್‌ನ ಪೊಂಟಿಫಿಕಲ್ ಯೂನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್ ಸಹಯೋಗದಲ್ಲಿ ಈ ವಾರ್ಷಿಕ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಉದ್ದೇಶ ತಲಿಥಾ ಕುಮ್ ಜಾಲತಾಣದ ನಾಯಕರನ್ನು ವ್ಯವಸ್ಥಾತ್ಮಕ ದುರ್ಬಲತೆಗಳನ್ನು ಎದುರಿಸಲು ಸಜ್ಜುಗೊಳಿಸುವುದಾಗಿದೆ.
ಕಾನ್ರಾಡ್ ಎನ್. ಹಿಲ್ಟನ್ ಪ್ರತಿಷ್ಠಾನದ ಸಹಕಾರದೊಂದಿಗೆ ನಡೆದ ಈ ಮಿಶ್ರ (ಹೈಬ್ರಿಡ್) ತರಬೇತಿ ಕಾರ್ಯಕ್ರಮವು ಆನ್‌ಲೈನ್ ಪೂರ್ವಸಿದ್ಧತಾ ತರಬೇತಿ ಹಾಗೂ ನೇರ ವಸತಿ ತರಬೇತಿಯನ್ನು ಒಳಗೊಂಡಿದ್ದು, ನಾಯಕತ್ವ, ಸಹಯಾತ್ರಿಕ ಧರ್ಮಸಭಾ ದೃಷ್ಟಿಕೋನ (Synodality), ಸಂವಹನ ಕೌಶಲ್ಯ ಮತ್ತು ಯೋಜನಾ ರೂಪಿಸುವಿಕೆ ಮೇಲೆ ವಿಶೇಷ ಒತ್ತು ನೀಡಿತು.
ಈ ವರ್ಷದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತಲಿಥಾ ಕುಮ್ ಥೈಲ್ಯಾಂಡ್ ತನ್ನ ಕಾರ್ಯವನ್ನು ಪರಿಚಯಿಸಿತು. ಶಿಕ್ಷಣವೇ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಒಂದಾಗಿದೆ ಎಂಬುದನ್ನು ಅದು ಪ್ರದರ್ಶಿಸಿತು.
2018ರಲ್ಲಿ ರೋಮ್‌ನಲ್ಲಿ ನಡೆದ ಮೊದಲ ನಾಯಕತ್ವ ತರಬೇತಿ ಕಾರ್ಯಕ್ರಮದ ಹಳೆ ವಿದ್ಯಾರ್ಥಿನಿಯಾಗಿರುವ SPP ಸಭೆಯ ಸಹೋದರಿ ಮೇರಿ-ಆಗ್ನೆಸ್ ಸುವನ್ನಾ ಬುಅಸಾಪ್ ಅವರ ನೇತೃತ್ವದಲ್ಲಿ, ಬಾಲ್ಯದಿಂದಲೇ ಮಕ್ಕಳ ದುರ್ಬಲತೆಯನ್ನು ನಿವಾರಿಸುವ ನವೀನ ತಡೆಗಟ್ಟುವ ವಿಧಾನವನ್ನು ಸ್ಥಳೀಯ ಜಾಲತಾಣ ಅಭಿವೃದ್ಧಿಪಡಿಸಿದೆ. ಮಾನವ ಕಳ್ಳಸಾಗಣೆ ಕುರಿತು ಜಾಗೃತಿಯನ್ನು ಪ್ರತ್ಯೇಕ ವಿಷಯವಾಗಿ ಬೋಧಿಸುವ ಬದಲು, "ಡೋಂಟ್ ಟಚ್ ಮೀ" ಎಂಬ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಸರಣಿಯನ್ನು ಅವರು ರೂಪಿಸುತ್ತಿದ್ದಾರೆ. ಶಿಶುವಿಹಾರದಿಂದ ಪ್ರೌಢಶಾಲೆಯವರೆಗಿನ ವಿದ್ಯಾರ್ಥಿಗಳಿಗಾಗಿ ಸಿದ್ಧವಾಗುತ್ತಿರುವ ಈ ಪಠ್ಯಕ್ರಮವನ್ನು ಎಲ್ಲಾ ವಿಷಯಗಳು ಮತ್ತು ತರಗತಿಗಳಲ್ಲಿ ಅಳವಡಿಸಲಾಗುತ್ತಿದೆ.
"ಮಕ್ಕಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಿಕ್ಷಕರ ಸಹಯೋಗದಲ್ಲಿ ನಾವು ಈ ಸಮಸ್ಯೆಯ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತೇವೆ,ಸ್ಥಳೀಯ ಸಮುದಾಯಗಳಲ್ಲಿ ಶಾಶ್ವತ ಜಾಗರೂಕ ರಕ್ಷಣಾ ಜಾಲವನ್ನು ನಿರ್ಮಿಸುವುದೇ ನಮ್ಮ ಗುರಿಯಾಗಿದೆ" ಎಂದು ಧಾರ್ಮಿಕ ಸಹೋದರಿ ಮೇರಿ-ಆಗ್ನೆಸ್ ಹೇಳಿದರು.
ಈ ವ್ಯವಸ್ಥಾತ್ಮಕ ವಿಧಾನವು ಗಮನಾರ್ಹ ಫಲಿತಾಂಶಗಳನ್ನು ನೀಡಿದೆ. 2026ರ ಜೂನ್ 5ರಂದು ಥೈಲ್ಯಾಂಡ್‌ನ ಸಾಮಾಜಿಕ ಅಭಿವೃದ್ಧಿ ಮತ್ತು ಮಾನವ ಭದ್ರತಾ ಸಚಿವಾಲಯವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಗಳಿಗೆ ಮಾದರಿ ಶೈಕ್ಷಣಿಕ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಿತು.
ಥೈಲ್ಯಾಂಡ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಝೇವಿಯರ್ ವಿರಾ ಅರ್ಪೊಂಡ್ರಟಾನಾ ಅವರು ಬ್ಯಾಂಕಾಕ್‌ನ ಸಂತ ಲೂಯಿಸ್ ಶಾಲೆ, ಫೆಚ್‌ಚಬುರಿಯ ಸಂತ ಜೋಸೆಫ್ ಶಾಲೆ, ಲೋಪ್ಬುರಿಯ ಅಸಂಪ್ಷನ್ ಕಾನ್ವೆಂಟ್ ಶಾಲೆಗಳನ್ನು 2026ರ ಅಧಿಕೃತ "ಮಾನವ ಕಳ್ಳಸಾಗಣೆ ತಡೆಗಟ್ಟುವ ಮಾದರಿ ಶಾಲೆಗಳು" ಎಂದು ಪ್ರಶಂಸಿಸಿದರು.
"ಶಾಲೆಗಳು ಮಕ್ಕಳಿಗೆ ಮತ್ತು ಯುವಜನರಿಗೆ ಸುರಕ್ಷಿತ ಸ್ಥಳಗಳಾಗಿವೆ. ಇಲ್ಲಿ ಮಾನವೀಯ ಮೌಲ್ಯಗಳು, ಮಾನವ ಘನತೆ ಮತ್ತು ದುರ್ಬಲರ ರಕ್ಷಣೆಯ ಮನೋಭಾವ ಬೆಳೆಸಲಾಗುತ್ತದೆ ಎಂಬುದಕ್ಕೆ ಇದು ದೃಢೀಕರಣವಾಗಿದೆ, ಮಾನವ ಕಳ್ಳಸಾಗಣೆ ತಡೆಗಟ್ಟುವ ಕಾರ್ಯವು ತರಗತಿಯಲ್ಲೇ, ಶಿಕ್ಷಕರ ಹೃದಯದಲ್ಲೇ ಹಾಗೂ ಶಾಲೆ ನಿರ್ಮಿಸುವ ಪ್ರೀತಿ ಮತ್ತು ಸುರಕ್ಷತೆಯ ಸಮುದಾಯದಲ್ಲೇ ಆರಂಭವಾಗುತ್ತದೆ" ಎಂದು ಧರ್ಮಾಧ್ಯಕ್ಷ ಅರ್ಪೊಂಡ್ರಟಾನಾ ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಮಾನವ ಕಳ್ಳಸಾಗಣೆಯ ಹೊಸ ರೂಪಗಳ ಬಗ್ಗೆ ಚರ್ಚಿಸಿದರು. ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM), ಆಸಿಯಾನ್-ಆಸ್ಟ್ರೇಲಿಯಾ ಕೌಂಟರ್ ಟ್ರಾಫಿಕಿಂಗ್ ಉಪಕ್ರಮ, ಹಾಗೂ ಥೈಲ್ಯಾಂಡ್‌ನ ಮಾನವ ಕಳ್ಳಸಾಗಣೆ ವಿರೋಧಿ ವಿಭಾಗದ ನಿರ್ದೇಶಕರು ಆನ್‌ಲೈನ್ ಮೂಲಕ ಜನರನ್ನು ವಂಚಿಸಿ ಶೋಷಿಸುವ ಜಾಲಗಳ ಹೆಚ್ಚುತ್ತಿರುವ ಅಪಾಯದ ಬಗ್ಗೆ ವಿವರಿಸಿದರು. ಸೈಬರ್ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿರುವ ಕಳ್ಳಸಾಗಣೆ ಆಗ್ನೇಯ ಏಷ್ಯಾದಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು.
ಫಿಲಿಪ್ಪೀನ್ಸ್‌ನ ಮೇರಿಕ್ನೋಲ್ ಧಾರ್ಮಿಕ ಸಭೆಯ ಸಹೋದರಿ ಹಾಗೂ ತಲಿಥಾ ಕುಮ್ ಅಂತರರಾಷ್ಟ್ರೀಯ ಸಂಯೋಜಕಿ ಧಾರ್ಮಿಕ ಸಹೋದರಿ ಅಬ್ಬಿ ಅವೆಲಿನೋ ಅವರು ಥೈಲ್ಯಾಂಡ್‌ನ ಶಿಕ್ಷಣ ಆಧಾರಿತ ಕಾರ್ಯಕ್ರಮಗಳನ್ನು ಜಾಗತಿಕ ಮಾದರಿಯೆಂದು ಶ್ಲಾಘಿಸಿದರು.
"ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಶಿಕ್ಷಣವೇ ಅತ್ಯುತ್ತಮ ಸಾಧನವಾಗಿದೆ, "ಇಲ್ಲಿನ ಧಾರ್ಮಿಕ ಸಹೋದರಿಯರು ರೂಪಿಸಿರುವ 'ತಲಿಥಾ ಕುಮ್ ಮಕ್ಕಳು' ಮತ್ತು 'ತಾಲಿಥಾ ಕುಮ್ ಶಿಕ್ಷಕರು' ಎಂಬ ಪರಿಕಲ್ಪನೆಯು ಏಷ್ಯಾ ಮತ್ತು ವಿಶ್ವದಾದ್ಯಂತ ವಿಸ್ತರಿಸಬಹುದಾದ ಅತ್ಯುತ್ತಮ ಮಾದರಿಯಾಗಿದೆ" ಎಂದು ಸಹೋದರಿ ಅವೆಲಿನೋ ಹೇಳಿದರು.
ಭಾಗವಹಿಸಿದವರು ಬ್ಯಾಂಕಾಕ್‌ನ ಗುಡ್ ಶೆಫರ್ಡ್ ಧಾರ್ಮಿಕ ಸಭೆಯ ಸೇವಾ ಕೇಂದ್ರಕ್ಕೂ ಭೇಟಿ ನೀಡಿ, ಮಹಿಳೆಯರು ಮತ್ತು ಇತರ ದುರ್ಬಲ ಪರಿಸ್ಥಿತಿಯಲ್ಲಿರುವವರಿಗೆ ನೀಡಲಾಗುತ್ತಿರುವ ಸೇವೆಗಳನ್ನು ವೀಕ್ಷಿಸಿದರು. ಇದರಿಂದ ತರಬೇತಿಯನ್ನು ನೈಜ ಪಾಲನಾ ಸೇವೆಯೊಂದಿಗೆ ಸಂಪರ್ಕಿಸುವ ಅವಕಾಶ ದೊರೆಯಿತು.
ಟಾಂಜಾನಿಯಾದ ಅವರ್ ಲೇಡಿ ಆಫ್ ಆಫ್ರಿಕಾ ಧಾರ್ಮಿಕ ಸಭೆಯ ಸಹೋದರಿ ಏಂಜೆಲಾ ಕಪಿಟಿಂಗಾನಾ ಅವರು ಈ ಕಾರ್ಯಕ್ರಮದ ಆಧ್ಯಾತ್ಮಿಕ ಅನುಭವವನ್ನು ಹೀಗೆ ವಿವರಿಸಿದರು: "ಇದು ಹೊಸ ಅರಿವು ನೀಡಿದ, ಪ್ರೇರಣಾದಾಯಕ ಅನುಭವವಾಗಿತ್ತು. ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಗುರಿಯನ್ನು ಸಾಧಿಸಲು ಧೈರ್ಯ ಮತ್ತು ಸೃಜನಶೀಲತೆಯಿಂದ ಮುಂದಾಗಬೇಕೆಂಬ ಸವಾಲನ್ನೂ ಇದು ನಮ್ಮ ಮುಂದೆ ಇಟ್ಟಿದೆ."
ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).