ವಲಸೆ ಮತ್ತು ಕ್ಯಾನರಿ ದ್ವೀಪಗಳು: ‘ನಾಚಿಕೆಯ ಬಂದರಿನಿಂದ ಭರವಸೆಯ ಬಂದರಿನವರೆಗೆ’
ಲೇಖಕರು: ಕೀಲ್ ಗಸ್ಸಿ-ಲಾಸ್ ಪಾಲ್ಮಾಸ್ ಡಿ ಗ್ರಾನ್ ಕೆನರಿಯಾ
“ನೀವು ನನ್ನ ಮನಸ್ಸನ್ನೇ ಓದಿದ್ದೀರಲ್ಲವೇ? ಸಮುದ್ರ ಮಾರ್ಗದ ಮೂಲಕ ಆಗಮಿಸುತ್ತಿರುವ ವಲಸಿಗರ ಪರಿಸ್ಥಿತಿಯ ಕಾರಣದಿಂದ ನಾನು ಕ್ಯಾನರಿ ದ್ವೀಪಗಳಿಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇನೆ.”
2024ರ ಸೆಪ್ಟೆಂಬರ್‌ನಲ್ಲಿ ಏಷ್ಯಾ ಮತ್ತು ಓಷೇಯಾನಿಯಾಗೆ ಕೈಗೊಂಡ ತಮ್ಮ ಅತಿದೀರ್ಘ ಅಪೋಸ್ತೋಲಿಕ ಪ್ರವಾಸದಿಂದ ಹಿಂದಿರುಗುವ ವೇಳೆ, ವಲಸಿಗರ ಆರೈಕೆಯು ತಮ್ಮ ಅಧಿಕಾರ ಸ್ಥಾನದ ಪ್ರಮುಖ ವಿಷಯವಾಗಿದ್ದ ಕಾರಣ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಕ್ಯಾನರಿಯಾಸ್ ಧರ್ಮಪ್ರಾಂತ್ಯವು, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಸಹಿಯುಳ್ಳ, ತಮ್ಮ ಭೇಟಿ ನೀಡುವ ಉದ್ದೇಶವನ್ನು ತಿಳಿಸುವ ಪತ್ರವನ್ನೂ ಸ್ವೀಕರಿಸಿತ್ತು. ಆದಾಗ್ಯೂ, ಅರ್ಜೆಂಟೀನಾದ ಆ ಪೂಜ್ಯ ಜಗದ್ಗುರುಗಳಿಗೆ ಆ ಪ್ರಯಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಆದರೆ ಜೂನ್ 11ರಂದು — ಆ ವಿಮಾನಯಾನದ ಒಂದು ವರ್ಷ ಮತ್ತು ಎಂಟು ತಿಂಗಳ ನಂತರ — ಪೂಜ್ಯ ಜಗದ್ಗುರು 14ನೇ ಲಿಯೋ ಅವರು ತಮ್ಮ ಪೂರ್ವಾಧಿಕಾರಿಯ ಬಹುಕಾಲದ ಆಶಯವನ್ನು ನೆರವೇರಿಸಿ, ಮೊರೊಕ್ಕೊ ಕರಾವಳಿಯ ಸಮೀಪದಲ್ಲಿರುವ ಸ್ಪ್ಯಾನಿಷ್ ದ್ವೀಪಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದು ಕ್ಯಾನರಿ ದ್ವೀಪಗಳಿಗೆ ಒಬ್ಬ ಪೂಜ್ಯ ಜಗದ್ಗುರು ಅಧಿಕೃತ ಅಪೋಸ್ತೋಲಿಕ ಪ್ರವಾಸ ಕೈಗೊಳ್ಳುವ ಮೊದಲ ಸಂದರ್ಭವಾಗಲಿದೆ. ಈ ಹಿಂದೆ ಕೆಲವರು ಇಲ್ಲಿವರೆಗೆ ಸಮೀಪಿಸಿದ್ದರು. ಪೂಜ್ಯ ಜಗದ್ಗುರು 2ನೇ ಜಾನ್ ಪಾಲ್ ಹಾಗೂ ಪೂಜ್ಯ ಜಗದ್ಗುರು ಬೆನೆಡಿಕ್ಟ್ 16ನೇ ಅವರು ಒಟ್ಟು ಎಂಟು ಬಾರಿ ಸ್ಪೇನ್‌ಗೆ ಭೇಟಿ ನೀಡಿದ್ದರು. ಅದೇ ರೀತಿ, ಪೂಜ್ಯ ಜಗದ್ಗುರು 2ನೇ ಜಾನ್ ಪಾಲ್ ಹಾಗೂ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಸಮೀಪದ ಮೊರೊಕ್ಕೊ ದೇಶಕ್ಕೂ ಭೇಟಿ ನೀಡಿದ್ದರು.
ಪೂಜ್ಯ ಜಗದ್ಗುರುಗಳ ಈ ಐತಿಹಾಸಿಕ ಭೇಟಿಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ, ಅಪೋಸ್ತೋಲಿಕ ಪ್ರವಾಸದ ಗ್ರ್ಯಾಂಡ್ ಕ್ಯಾನರಿ ದ್ವೀಪಗಳ ಕಾರ್ಯಕ್ರಮದ ಸಂಘಟಕಿ ಹಾಗೂ ಪಾಲನಾ ಸೇವಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾದ ಎನೆಲಿದಾ ಹೆರ್ನಾಂಡೆಸ್ ಮೊನ್ಸೋನ್ ಅವರು ಈ ಭೇಟಿಯ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಬಹಳಷ್ಟು ಕೆಲಸ, ಸಮನ್ವಯ ಮತ್ತು ಸಹಕಾರ ನಡೆಯುತ್ತಿದೆ,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಆದರೆ ಇನ್ನೂ ಅಣಿಗೊಳಿಸಬೇಕಾದ ಅನೇಕ ವಿವರಗಳಿರುವುದರಿಂದ “ಸ್ವಲ್ಪ ಆತಂಕವೂ ಇದೆ” ಎಂದು ಅವರು ಒಪ್ಪಿಕೊಂಡರು. “ಆದರೆ ಸಂತೋಷ, ಭರವಸೆ ಮತ್ತು ಪೂಜ್ಯ ಜಗದ್ಗುರುಗಳನ್ನು ನಮ್ಮ ನಡುವೆ ಸ್ವಾಗತಿಸುವ ಉತ್ಸಾಹದೊಂದಿಗೆ, ಈ ಕೆಲಸವು ಇನ್ನಷ್ಟು ಆನಂದದಾಯಕವಾಗುತ್ತದೆ” ಎಂದು ಅವರು ಹೇಳಿದರು.
ಇಮ್ಮಡಿ ಆಶ್ಚರ್ಯ
ಕ್ಯಾನರಿ ದ್ವೀಪಗಳ ಜನರು ಪೂಜ್ಯ ಜಗದ್ಗುರುಗಳ ಭೇಟಿಗಾಗಿ ಆಶಿಸುತ್ತಿದ್ದರೂ, ಅದು 14ನೇ ಲಿಯೋ ಅವರ ಅಧಿಕಾರಾವಧಿಯ ಇಷ್ಟು ಆರಂಭಿಕ ಹಂತದಲ್ಲೇ ಸಂಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಹಲವು ಬಾರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರೂ, ಈ ಘೋಷಣೆಯು ತಮ್ಮನ್ನು ಆಶ್ಚರ್ಯಗೊಳಿಸಿತು ಎಂದು ಹೆರ್ನಾಂಡೆಸ್ ತಿಳಿಸಿದ್ದಾರೆ.
ತಮ್ಮ ಅಧಿಕಾರಾವಧಿಯ ಕೇವಲ ಒಂದು ವರ್ಷದೊಳಗೆ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ದ್ವೀಪಗಳಿಗೆ ಭೇಟಿ ನೀಡುವ ನಿರ್ಧಾರವು “ಇಮ್ಮಡಿ ಆಶ್ಚರ್ಯ ಮತ್ತು ಇಮ್ಮಡಿ ಸಂತೋಷ”ವಾಗಿದೆ ಎಂದು ಅವರು ವಿವರಿಸಿದರು.
ಪ್ರೇಷಿತ ಸಂತ ಪೇತ್ರರ ಉತ್ತರಾಧಿಕಾರಿಯು ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡುತ್ತಿರುವುದು “ಅತ್ಯಂತ ಮಹತ್ವದ್ದಾಗಿದೆ” ಎಂದು ಸಂಘಟಕಿ ಹೇಳಿದರು. ಏಕೆಂದರೆ ಪೂಜ್ಯ ಜಗದ್ಗುರುಗಳು “ಎಲ್ಲಾ ಕ್ರೈಸ್ತರನ್ನು ಅವರ ವಿಶ್ವಾಸದಲ್ಲಿ ಬಲಪಡಿಸುತ್ತಾರೆ.” ಅವರು ಅವರ ಆಧ್ಯಾತ್ಮಿಕ ಪಯಣದಲ್ಲಿ ಧೈರ್ಯ ತುಂಬುತ್ತಾರೆ ಮತ್ತು ಶುಭಸಂದೇಶಕ್ಕಾಗಿ ತಮ್ಮ ಧ್ಯೇಯವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ. ಇದಲ್ಲದೆ, ಈ ಭೇಟಿಯು “ಕ್ಯಾನರಿ ದ್ವೀಪಗಳ ಧರ್ಮಪ್ರಾಂತ್ಯದಲ್ಲಿ ಅನೇಕ ಶತಮಾನಗಳಿಂದ ನಡೆಯುತ್ತಿರುವ ಸೇವಾ ಕಾರ್ಯಗಳನ್ನು ದೃಢೀಕರಿಸುತ್ತದೆ ಮತ್ತು ಗೌರವಿಸುತ್ತದೆ” ಎಂದು ಹೆರ್ನಾಂಡೆಸ್ ಒತ್ತಿಹೇಳಿದರು.
ಭರವಸೆಯ ಭೇಟಿ
ಪೂಜ್ಯ ಜಗದ್ಗುರುಗಳು ಸಂತ ಆನ್ನೆ ಮಹಾಗಿರಿಜಾಘರದಲ್ಲಿ ಧರ್ಮಗುರುಗಳು, ಧಾರ್ಮಿಕ ಸೇವಕ- ಸೇವಕಿಯರು ಮತ್ತು ಪಾಲನಾ ಸೇವಾ ಕಾರ್ಯಕರ್ತರನ್ನು ಭೇಟಿಯಾಗುವುದು ಹಾಗೂ ಗ್ರಾನ್ ಕ್ಯಾನರಿಯಾ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಿರತರಾಗಿರಲಿದ್ದಾರೆ. ಆದರೆ ಲಾಸ್ ಪಾಲ್ಮಾಸ್ ದೆ ಗ್ರಾನ್ ಕ್ಯಾನರಿಯಾದಲ್ಲಿ ಅತ್ಯಂತ ನಿರೀಕ್ಷಿತ ಕಾರ್ಯಕ್ರಮವೆಂದರೆ ಅರ್ಗಿನೆಗುಯಿನ್ ಬಂದರಿನಲ್ಲಿ ವಲಸಿಗರೊಂದಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳೊಂದಿಗೆ ನಡೆಯಲಿರುವ ಜಗದ್ಗುರುಗಳ ವಿಶೇಷ ಭೇಟಿಯಾಗಿದೆ.
2020ರಲ್ಲಿ ಇದೇ ಬಂದರಿನಲ್ಲಿ 2,600ಕ್ಕೂ ಹೆಚ್ಚು ವಲಸಿಗರನ್ನು — ಅಂದರೆ ಬಂದರಿನ ಸಾಮರ್ಥ್ಯಕ್ಕಿಂತ ಆರು ಪಟ್ಟು ಹೆಚ್ಚು ಜನರನ್ನು — ತೆರೆದ ಆಕಾಶದಡಿ ನಿರ್ಮಿಸಲಾದ ಶಿಬಿರದಲ್ಲಿ ವಾಸಿಸಲು ವ್ಯವಸ್ಥೆ ಮಾಡಲಾಗಿತ್ತು. ಅವರು ಕಂಬಳಿಗಳ ಮೇಲೆ ಮಲಗಬೇಕಾಗಿತ್ತು ಮತ್ತು ತೀವ್ರ ಬಿಸಿಲಿನ ನಡುವೆಯೇ ಬದುಕಬೇಕಾಗಿತ್ತು. ದ್ವೀಪಗಳಿಗೆ ಆಗಮಿಸಿದ ವಲಸಿಗರ ಸಂಖ್ಯೆಯಲ್ಲಿ ಉಂಟಾದ ಭಾರೀ ಏರಿಕೆಗೆ ಸಮರ್ಪಕ ಸೌಲಭ್ಯಗಳು ಲಭ್ಯವಾಗಿರಲಿಲ್ಲ. ಇದರ ಪರಿಣಾಮವಾಗಿ, ಈ ಸ್ಥಳವು “ನಾಚಿಕೆಯ ಬಂದರು” ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಈಗ, “ಅದೇ ಬಂದರು ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಸಾನ್ನಿಧ್ಯವನ್ನು ಅನುಭವಿಸಲಿದೆ,” ಎಂದು ಹೆರ್ನಾಂಡೆಸ್ ಹೇಳಿದ್ದಾರೆ. “ಆ ವರ್ಷಗಳಲ್ಲಿ ಅಸಂಖ್ಯಾತ ದೋಣಿಗಳು ನಮ್ಮ ಕರಾವಳಿಯನ್ನು ತಲುಪಿದ ನಂತರ ಉಂಟಾದ ಅಪಾರ ನೋವು ಮತ್ತು ದುಃಖಕ್ಕೆ ಸಾಕ್ಷಿಯಾಗಿದ್ದ ಅದೇ ಬಂದರು ಇದು.” ಆದ್ದರಿಂದ, ಪೂಜ್ಯ ಜಗದ್ಗುರುಗಳು ಮತ್ತು ವಲಸಿಗರ ನಡುವಿನ ಈ ಭೇಟಿಯು ಕೇವಲ ಜೀವನದಲ್ಲಿ ಒಮ್ಮೆ ಸಿಗುವ ಅವಕಾಶವಲ್ಲ; ಇದು ಒಂದು ಹೊಸ ಸಾಧ್ಯತೆಯ ಸಂಕೇತವಾಗಿದೆ. ಇದು ಒಂದು ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. “ಬಹುಕಾಲದಿಂದ ನಿರೀಕ್ಷಿಸಿದ್ದ ಭವಿಷ್ಯದತ್ತ ಪ್ರವೇಶದ್ವಾರವಾಗಿದ್ದ ಅದೇ ಬಂದರಿನಲ್ಲಿ ನಡೆಯಲಿರುವ ಈ ಭೇಟಿಯು, ಆ ಜನರಿಗೆ ಪೂಜ್ಯ ಜಗದ್ಗುರುಗಳು ತಮ್ಮೊಂದಿಗಿದ್ದಾರೆ ಎಂಬ ಅನುಭವವನ್ನು ನೀಡಲಿದೆ” ಎಂದು ಹೆರ್ನಾಂಡೆಸ್ ಹಂಚಿಕೊಂಡರು.
ಈ ಜಗದ್ಗುರುಗಳ ಭೇಟಿಯ ಆಯೋಜನೆಯಲ್ಲಿ ವಲಸಿಗರು ಸ್ವತಃ ಭಾಗವಹಿಸಿದ್ದಾರೆ. ಅವರ ಆರೈಕೆಯಲ್ಲಿ ತೊಡಗಿರುವ ಧರ್ಮಪ್ರಾಂತ್ಯದ ಕಾರಿತಾಸ್, ವಲಸೆ ಸಚಿವಾಲಯ ಹಾಗೂ ವಲಸಿಗ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.
ಒಂದೇ ಕ್ಯಾನರಿಯನ್ ಸಮುದಾಯ
ಕ್ಯಾನರಿ ದ್ವೀಪಗಳಿಗೆ ಆಗಮಿಸುವ ಕೆಲವು ವಲಸಿಗರಿಗೆ, ಹೊಸ ಜೀವನ ಮತ್ತು ಸಮಾಜದೊಂದಿಗೆ ಹೊಂದಾಣಿಕೆಯ ಪಯಣದಲ್ಲಿ ವಿಶ್ವಾಸವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೆರ್ನಾಂಡೆಸ್ ಅವರ ಪ್ರಕಾರ, ಕ್ರೈಸ್ತರಾಗಿರದ ಕೆಲವರು ಅಲ್ಲಿಗೆ ಬಂದ ನಂತರ “ಇನ್ನಷ್ಟು ಆಳವಾಗಿ ವಿಶ್ವಾಸವನ್ನು ಸ್ವೀಕರಿಸಿದ್ದಾರೆ. ಅವರು ಮತಾಂತರದ ಒಂದು ಪಯಣವನ್ನು ಅನುಭವಿಸಿದ್ದಾರೆ.” ಅವರಿಗೂ ಹಾಗೂ ಜೂನ್ 11ರ ಸಂಜೆ ಪೂಜ್ಯ ಜಗದ್ಗುರು 14ನೇ ಲಿಯೋ ಅವರೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಲು ಗ್ರಾನ್ ಕ್ಯಾನರಿಯಾ ಕ್ರೀಡಾಂಗಣವನ್ನು ತುಂಬಲಿರುವ ಸುಮಾರು 50,000 ಜನರಿಗೂ ಇದು ಒಂದು ವಿಶೇಷ ಆಧ್ಯಾತ್ಮಿಕ ಅನುಭವವಾಗಲಿದೆ.
ಇಂದಿನ ಪರಿಸ್ಥಿತಿಯ ಸಂದರ್ಭದಲ್ಲಿ, ಕ್ರೈಸ್ತರು ಯಾವಾಗಲೂ ಕೇಳಲು ಆಶಿಸುವ ಸಂದೇಶವನ್ನು — ಮತ್ತು ಪೂಜ್ಯ ಜಗದ್ಗುರುಗಳು ಖಂಡಿತವಾಗಿಯೂ ಸ್ಪರ್ಶಿಸುವ ವಿಷಯವೆಂದು ತಾವು ನಂಬುವ ಸಂದೇಶವನ್ನು — ಹೆರ್ನಾಂಡೆಸ್ ಹೀಗೆ ವಿವರಿಸುತ್ತಾರೆ: “ನಮ್ಮ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಮುಂದುವರಿಯಲು, ನಮ್ಮ ವಿಶ್ವಾಸ, ನಿರೀಕ್ಷೆ ಮತ್ತು ಪ್ರೀತಿಯನ್ನು ಇನ್ನಷ್ಟು ಬಲಪಡಿಸಲು ದೊರೆಯುವ ಪ್ರೋತ್ಸಾಹ.”
ನಾವು ನಮಗಾಗಿ, ಭವಿಷ್ಯದ ತಲೆಮಾರುಗಳಿಗಾಗಿ, ನಮ್ಮ ಕುಟುಂಬಗಳು ಮತ್ತು ಸ್ನೇಹಿತರಿಗಾಗಿ, ಹಾಗೆಯೇ ನಾವು ಎಂದಿಗೂ ಭೇಟಿಯಾಗದವರಿಗಾಗಿ ಸಹ ಒಂದು ಉತ್ತಮ ಜಗತ್ತನ್ನು ನಿರ್ಮಿಸಲು ಕರೆಯಲ್ಪಟ್ಟಿದ್ದೇವೆ. ಜಗದ್ಗುರುಗಳ ಪವಿತ್ರ ಬಲಿಪೂಜೆಯು ಈ ಸಾರ್ವತ್ರಿಕ ಕರೆಯನ್ನು ಮತ್ತೊಮ್ಮೆ ನೆನಪಿಸಲಿದೆ: “ಒಳ್ಳೆಯದನ್ನು ಮಾಡುವುದು, ಇತರರಿಗೆ ಸೇವೆ ಸಲ್ಲಿಸುವುದು, ದುರ್ಬಲರನ್ನು ಮತ್ತು ಅಗತ್ಯದಲ್ಲಿರುವವರನ್ನು ಬೆಂಬಲಿಸುವುದು.”
ಆದರೆ ಈ ಸಂದೇಶವು ಕೇವಲ ಕ್ರೈಸ್ತರಿಗಷ್ಟೇ ಸೀಮಿತವಾಗಿಲ್ಲ. ಕ್ರೀಡಾಂಗಣವು ಕ್ರೈಸ್ತರಲ್ಲದವರು, ಮುಸ್ಲಿಮರು ಹಾಗೂ ವಿವಿಧ ಧರ್ಮಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ಪ್ರತಿನಿಧಿಗಳಿಂದ ಕೂಡಿರಲಿದೆ. ಹೆರ್ನಾಂಡೆಸ್ ಅವರ ಮಾತಿನಂತೆ, ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಈ ಭೇಟಿಯು ಐಕ್ಯತೆಯ ಭೇಟಿಯಾಗಿದೆ. ಅದು ಜನರನ್ನು ಅವರ ಧರ್ಮ ಯಾವುದೇ ಆಗಿರಲಿ, ವಿಶ್ವಾಸ ಮತ್ತು ಭರವಸೆಯ ಪಯಣದಲ್ಲಿ ಒಂದಾಗಿಸುವ ಭೇಟಿಯಾಗಿದೆ. ತಮ್ಮ ತಾಯ್ನಾಡುಗಳನ್ನು ಬಿಟ್ಟು ಕ್ಯಾನರಿ ದ್ವೀಪಗಳಿಗೆ ಆಗಮಿಸಿರುವ ವಲಸಿಗರು “ಕ್ಯಾನರಿಯನ್ ಸಮುದಾಯದ ಮತ್ತೊಂದು ಅವಿಭಾಜ್ಯ ಭಾಗವಾಗಿದ್ದಾರೆ.”
ಇತರರಿಗೆ ಒಂದು ಮಾದರಿ
ಒಟ್ಟಾರೆ ಕ್ಯಾನರಿ ದ್ವೀಪಗಳಲ್ಲಿನ ವಲಸೆ ಪರಿಸ್ಥಿತಿಯನ್ನು ಕುರಿತು ಮಾತನಾಡಿದ ಹೆರ್ನಾಂಡೆಸ್, ಸಂಪನ್ಮೂಲಗಳು ಸೀಮಿತವಾಗಿವೆ ಮತ್ತು ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ನೀತಿಗಳನ್ನು ಇನ್ನಷ್ಟು ಉತ್ತಮಗೊಳಿಸುವ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು. ಆದಾಗ್ಯೂ, “ಪ್ರಗತಿ ನಡೆಯುತ್ತಿದೆ ಮತ್ತು ಜನರು ಅಗತ್ಯ ಬೆಂಬಲವನ್ನು ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.
ಸಂಸ್ಥಾತ್ಮಕ ಮಟ್ಟದಲ್ಲಿಯೂ ಹಾಗೂ ಧರ್ಮಸಭೆಯ ವಿವಿಧ ಸಂಘಟನೆಗಳ ಮೂಲಕವೂ, ವಲಸಿಗರನ್ನು ಸ್ಥಳೀಯ ಸಮುದಾಯಗಳಲ್ಲಿ ಹೇಗೆ ಯಶಸ್ವಿಯಾಗಿ ಒಳಗೊಳ್ಳಿಸಬಹುದು ಎಂಬುದಕ್ಕೆ ಕ್ಯಾನರಿ ದ್ವೀಪಗಳು ಒಂದು ಮಾದರಿಯಾಗಬಹುದು ಎಂದು ಅವರು ವಾದಿಸಿದರು. ಒಬ್ಬರೇ ಆಗಮಿಸಿದ ಅಪ್ರಾಪ್ತ ವಯಸ್ಕರು ಭಾಷಾ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರನ್ನು ಸ್ಥಳೀಯ ಕುಟುಂಬಗಳು ತಮ್ಮ ಮನೆಗಳಲ್ಲಿ ಸ್ವಾಗತಿಸಿ ಆರೈಕೆ ಮಾಡುತ್ತಿವೆ.
ಲಾಸ್ ಪಾಲ್ಮಾಸ್ ದ್ವೀಪದ ಒಳಭಾಗದಲ್ಲಿರುವ ಒಂದು ಹಳ್ಳಿಯ ಉದಾಹರಣೆಯನ್ನು ಹೆರ್ನಾಂಡೆಸ್ ನೀಡಿದರು. ಆ ಹಳ್ಳಿಯು ಜನಸಂಖ್ಯೆ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ ಒಂದು ಹಂತದಲ್ಲಿ, ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಇಡೀ ಸಮುದಾಯವು ಒಟ್ಟಾಗಿ ಸೇರಿ, ಒಬ್ಬರೇ ಬಂದಿದ್ದ ವಲಸಿಗ ಅಪ್ರಾಪ್ತ ವಯಸ್ಕರನ್ನು ಸ್ವಾಗತಿಸಿತು. ಈ ಮಕ್ಕಳು ಕೇವಲ ಆ ಪ್ರದೇಶಕ್ಕೆ ಹೊಸ ಚೈತನ್ಯವನ್ನು ನೀಡುವುದಷ್ಟೇ ಅಲ್ಲ, ಹಳ್ಳಿಯ ಜೀವನದಲ್ಲಿ ಸಂಪೂರ್ಣವಾಗಿ ಒಳಗೊಳ್ಳುವಂತೆಯೂ ಆಯಿತು. ಆದರೆ ಅದಕ್ಕಿಂತ ಮುಖ್ಯವಾಗಿ, “ಅವರು ಮತ್ತೆ ಸಂತೋಷದಿಂದ ಬದುಕುವುದು ಹೇಗೆ ಎಂಬುದನ್ನು ಕಲಿಸುವ ಕುಟುಂಬಗಳನ್ನು ಕಂಡುಕೊಂಡರು. ಹಾಗೆಯೇ, ತಮ್ಮ ತಾಯ್ನಾಡಿನಲ್ಲಿ ಬಿಟ್ಟು ಬಂದಿರಬಹುದಾದ ಪ್ರೀತಿ ಮತ್ತು ಆರೈಕೆಯನ್ನು ಅವರು ಇಲ್ಲಿ ಪಡೆಯುತ್ತಿದ್ದಾರೆ” ಎಂದು ಹೆರ್ನಾಂಡೆಸ್ ಹೇಳಿದರು.
ಈ ಮಕ್ಕಳ ಕುಟುಂಬಗಳು “ತಮ್ಮ ಮಕ್ಕಳಿಗೆ ಉತ್ತಮ ಜೀವನ ದೊರಕಲಿ ಎಂಬ ಆಶಯದಿಂದ ಅತ್ಯಂತ ನೋವಿನ ತ್ಯಾಗಗಳನ್ನು ಮಾಡಿದ್ದಾರೆ” ಎಂದು ಅವರು ಒತ್ತಿಹೇಳಿದರು. ಅನೇಕ ಸಂದರ್ಭಗಳಲ್ಲಿ, ಈ ಮಕ್ಕಳಿಗೆ ಆ ಅವಕಾಶವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಕ್ಯಾನರಿಯನ್ ಕುಟುಂಬಗಳ ಮೂಲಕ ದೊರೆತಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).