ಹುಡುಕಿ

ಪೂಜ್ಯ ಜಗದ್ಗುರುಗಳನ್ನು ಸ್ವಾಗತಿಸಲು ಮ್ಯಾಡ್ರಿಡ್‌ನ ಬೀದಿಗಳ ಎರಡೂ ಬದಿಗಳಲ್ಲಿ  ಸಾಲುಗಟ್ಟಿ ನಿಂತಿದ್ದ ಜನರು ಪೂಜ್ಯ ಜಗದ್ಗುರುಗಳನ್ನು ಸ್ವಾಗತಿಸಲು ಮ್ಯಾಡ್ರಿಡ್‌ನ ಬೀದಿಗಳ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರು  (@Vatican Media)

ಮ್ಯಾಡ್ರಿಡ್ ಯುವಜನರಿಗಿಗಾಗಿ ಒಂದು ದಿನ

ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಸ್ಪೇನ್‌ನ ಮ್ಯಾಡ್ರಿಡ್ ಭೇಟಿಯ ಮೊದಲ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಒಟ್ಟುಗೂಡಿಸುವ ಸಾಮಾನ್ಯ ಕೊಂಡಿಯೆಂದರೆ ಯುವಜನರ ಉಪಸ್ಥಿತಿ. ಗೃಹರಹಿತರ ಸ್ವಾಗತ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಸ್ವಯಂಸೇವಕರಿಂದ ಹಿಡಿದು ಸಂಜೆ ನಡೆದ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಿದವರವರೆಗೆ ಯುವಜನರು ಎಲ್ಲೆಡೆ ಪ್ರಮುಖ ಪಾತ್ರ ವಹಿಸಿದರು.

ಲೇಖಕರು: ಕೀಲ್ ಗಸ್ಸಿ – ಮ್ಯಾಡ್ರಿಡ್, ಸ್ಪೇನ್

ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಮ್ಯಾಡ್ರಿಡ್ ಭೇಟಿಯ ಮೊದಲ ದಿನವು ಯುವಜನರಿಂದ ತುಂಬಿದ ದಿನವಾಗಿತ್ತು. ಕಾರಿತಾಸ್ ಮ್ಯಾಡ್ರಿಡ್‌ನ ಸಾಮಾಜಿಕ ಯೋಜನೆಯ ಭಾಗವಾಗಿರುವ ಸೀಡಿಯಾ 24 ಅವರ್ಸ್ (Cedia 24 Horas) ಕೇಂದ್ರಕ್ಕೆ ಜಗದ್ಗುರು ಭೇಟಿ ನೀಡಿದರು. ಅಲ್ಲಿ ಅನೇಕ ಯುವಜನರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ, ಸಂಜೆ ನಡೆದ ಪ್ರಾರ್ಥನಾ ಜಾಗರಣೆಯೂ ನಗರದ ಯುವಜನರಿಂದ ಆಯೋಜಿಸಲ್ಪಟ್ಟು, ಅವರ ನೇತೃತ್ವದಲ್ಲಿ ನಡೆಯಿತು ಹಾಗೂ ಯುವಜನರಿಗಾಗಿಯೇ ಸಮರ್ಪಿಸಲ್ಪಟ್ಟಿತ್ತು.

ಸಮೃದ್ಧಗೊಳಿಸುವ ಅನುಭವ

ಸಾಮಾಜಿಕ ಯೋಜನೆಯಾದ ಸೀಡಿಯಾ 24 ಅವರ್ಸ್ (Cedia 24 Horas), ಕಾರಿತಾಸ್ ಮ್ಯಾಡ್ರಿಡ್‌ನ ಅತ್ಯಂತ ಹಳೆಯ ಯೋಜನೆಗಳಲ್ಲಿ ಒಂದಾಗಿದೆ. 1977ರಲ್ಲಿ ಸ್ಥಾಪಿತವಾದ ಈ ಯೋಜನೆಯು ಆರಂಭದಲ್ಲಿ ಗೃಹರಹಿತರಿಗೆ ಕಾಫಿ ವಿತರಿಸುವ ವಾಹನವಾಗಿ ಕಾರ್ಯನಿರ್ವಹಿಸುತ್ತಿತ್ತು. ಕಳೆದ 49 ವರ್ಷಗಳಲ್ಲಿ, ತನ್ನ ಸುತ್ತಲಿನ ಜನರ ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಈ ಸಂಸ್ಥೆಯು ಬೆಳೆಯುತ್ತಾ, ರೂಪಾಂತರಗೊಳ್ಳುತ್ತಾ ಬಂದಿದೆ. ಇಂದು ಇದು “ಸರಳ ಮತ್ತು ಸಂಪೂರ್ಣ ಸಾಮಾಜಿಕ ಬಹಿಷ್ಕಾರ” ಅನುಭವಿಸುವವರಿಗೆ “ಮೊದಲ ಪ್ರತಿಕ್ರಿಯೆ ನೀಡುವ ಯೋಜನೆ”ಯಾಗಿ ಪರಿಣಮಿಸಿದೆ.

ಬೆಂಬಲದ ಅಗತ್ಯವಿರುವವರ ಸಂಖ್ಯೆ ಹೆಚ್ಚುತ್ತಿದ್ದು — ಕಳೆದ ವರ್ಷ ಸುಮಾರು 2,500 ಜನರು ಸಹಾಯ ಪಡೆದಿದ್ದಾರೆ — ಇದು ಸ್ಥಿರ ವಸತಿ ಪಡೆಯುವಲ್ಲಿ ಜನರು ಎದುರಿಸುತ್ತಿರುವ ಹೆಚ್ಚುತ್ತಿರುವ ಕಷ್ಟಗಳನ್ನು ಪ್ರತಿಬಿಂಬಿಸುತ್ತದೆ. ಸೀಡಿಯಾ 24 ಅವರ್ಸ್ (Cedia 24 Horas) ಸಂಸ್ಥೆಯ ಕಾರ್ಯವು ಅದರ ಸ್ವಯಂಸೇವಕರ ಸೇವೆಯಿಂದ ಸಾಧ್ಯವಾಗುತ್ತಿದೆ.

ಮ್ಯಾಡ್ರಿಡ್ ಕೇಂದ್ರದಲ್ಲಿ ಸ್ವಯಂಸೇವಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಾರಾ ವೀಕ್ ಅಲ್ಲಿ ಕೆಲಸ ಮಾಡುವುದನ್ನು ತಾನು ಬಹಳ ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ. ಏಕೆಂದರೆ ತಮ್ಮ ಸೇವೆಯ ಮೂಲಕ ಭೇಟಿಯಾಗುವ ಜನರಿಂದ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. “ಈ ಕೇಂದ್ರದಲ್ಲಿ ಭಾಷೆ ಮತ್ತು ಸಂಸ್ಕೃತಿಯ ವಿನಿಮಯ ನಡೆಯುತ್ತದೆ,” ಎಂದು ಅವರು ವಿವರಿಸುತ್ತಾರೆ.

ಪ್ರತಿದಿನವೂ ಜನರ ಜೀವನ ಕಥೆಗಳು ತನ್ನನ್ನು ಆಶ್ಚರ್ಯಗೊಳಿಸುತ್ತವೆ ಎಂದು ಕ್ಲಾರಾ ಹೇಳುತ್ತಾರೆ. “ಅವರು ಏನನ್ನು ಅನುಭವಿಸುತ್ತಿದ್ದಾರೆ, ಹೇಗೆ ಮುಂದುವರಿಯುತ್ತಿದ್ದಾರೆ, ತಮ್ಮ ಕನಸುಗಳನ್ನು ಹೇಗೆ ಬೆನ್ನಟ್ಟುತ್ತಿದ್ದಾರೆ, ಇನ್ನೂ ಹೇಗೆ ನಂಬಿಕೆಯನ್ನು ಕಳೆದುಕೊಳ್ಳದೆ ತಾವು ಹುಡುಕುತ್ತಿರುವುದನ್ನು ಕಂಡುಕೊಳ್ಳುವ ಆಶಾಭರವೊಂದಿಗೆ ಬದುಕುತ್ತಿದ್ದಾರೆ ಎಂಬುದನ್ನು ಕೇಳಿದಾಗ ನನ್ನ ಹೃದಯ ಸ್ಪರ್ಶಿತವಾಗುತ್ತದೆ,” ಎಂದು ಕ್ಲಾರಾ ಹಂಚಿಕೊಳ್ಳುತ್ತಾರೆ.

ಸೀಡಿಯಾ 24 ಅವರ್ಸ್ (Cedia 24 Horas) ನಲ್ಲಿ ಸೇವೆ ಸಲ್ಲಿಸುವುದು ಎಂದರೆ ಆಹಾರ ವಿತರಿಸುವುದು, ತೋಟದ ಕೆಲಸ ಮಾಡುವುದು ಅಥವಾ ಆರೈಕೆ ಪಡೆಯುತ್ತಿರುವ ಜನರೊಂದಿಗೆ ಸಮಯ ಕಳೆಯುವುದೂ ಆಗಿರಬಹುದು. ಕೇಂದ್ರದಲ್ಲಿ 20ಕ್ಕೂ ಹೆಚ್ಚು ವೃತ್ತಿಪರರು, ಸಮಾಜಸೇವಕರು ಮತ್ತು ಮನೋವಿಜ್ಞಾನಿಗಳು ಸೇರಿದಂತೆ, ಬೆಂಬಲ ಮತ್ತು ನೆರವು ನೀಡಲು ಕಾರ್ಯನಿರ್ವಹಿಸುತ್ತಿದ್ದಾರೆ.

ಅಲ್ಲಿನ ಕಾರ್ಯಕರ್ತರು ಜನರಿಗೆ ಸೇವೆ ಸಲ್ಲಿಸುವ ರೀತಿ, ಯುವ ಕ್ಲಾರಾಳ ಮೇಲೂ ಆಳವಾದ ಪ್ರಭಾವ ಬೀರಿದೆ. “ಇಲ್ಲಿನ ಸಮಾಜಸೇವಕರು ಜನರು ತಮ್ಮ ಕನಸುಗಳತ್ತ ಸಾಗಲು ಮತ್ತು ತಾವು ಹುಡುಕುತ್ತಿರುವುದನ್ನು ಸಾಧಿಸಲು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದು ನನ್ನ ಮನಸ್ಸನ್ನು ಸ್ಪರ್ಶಿಸುತ್ತದೆ,” ಎಂದು ಅವರು ಹೇಳುತ್ತಾರೆ. ಒಟ್ಟಾರೆಯಾಗಿ, ಸೀಡಿಯಾ 24 ಅವರ್ಸ್ (Cedia 24 Horas) ನಲ್ಲಿ ಪಡೆದ ಅನುಭವವು “ಅತ್ಯಂತ ಸಮೃದ್ಧಗೊಳಿಸುವ ಅನುಭವ”ವಾಗಿದೆ ಎಂದು ಕ್ಲಾರಾ ಒತ್ತಿಹೇಳುತ್ತಾರೆ.

ಸಮುದಾಯದ ಅವಿಭಾಜ್ಯ ಅಂಗ

ಮ್ಯಾಡ್ರಿಡ್‌ನ ಮತ್ತೊಂದು ಯುವಜನರ ಗುಂಪಿಗೂ ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಪ್ರವಾಸದ ಒಂದು ವಿಶೇಷ ಕಾರ್ಯಕ್ರಮದೊಂದಿಗೆ ಆಪ್ತ ಸಂಬಂಧವಿದೆ: ಪ್ಲಾಜಾ ದೆ ಲಿಮಾದಲ್ಲಿ ನಡೆದ ಪ್ರಾರ್ಥನಾ ಜಾಗರಣೆ. ಮ್ಯಾಡ್ರಿಡ್ ಯುವಜನ ಪ್ರತಿನಿಧಿ ಮಂಡಳಿಯು ತಮ್ಮ ಧರ್ಮಕ್ಷೇತ್ರಗಳು ಮತ್ತು ಧಾರ್ಮಿಕ ಚಳುವಳಿಗಳಲ್ಲಿ ಸಕ್ರಿಯವಾಗಿರುವ ಯುವಜನರಿಂದ ಕೂಡಿದೆ. ಮರೀನಾ ಪಿಂಟೋ ಅವರ ಮಾತಿನಲ್ಲಿ, ಅವರು ಮ್ಯಾಡ್ರಿಡ್‌ನ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ — “ಉತ್ತರ ಮತ್ತು ದಕ್ಷಿಣ, ಎಲ್ಲಾ ಭಿನ್ನತೆಗಳೊಂದಿಗೆ.”

ಸ್ಪೇನ್‌ನಲ್ಲಿ ಪೂಜ್ಯ ಜಗದ್ಗುರುಗಳ ಮೊದಲ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ ಈ ಜಾಗರಣೆಯ ಆಯೋಜಕರಲ್ಲಿ ಒಬ್ಬರಾದ ಮರೀನಾ, ವಿಭಿನ್ನ ಹಿನ್ನೆಲೆಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದರೂ, ಈ ಗುಂಪು ಕಳೆದ ಕೆಲವು ತಿಂಗಳುಗಳಿಂದ ಜಗದ್ಗುರುಗಳ ಭೇಟಿಗಾಗಿ ಒಟ್ಟಾಗಿ ಸಿದ್ಧತೆ ನಡೆಸಿದೆ ಎಂದು ತಿಳಿಸುತ್ತಾರೆ.

ಸ್ಥಳೀಯ ಯುವಜನರು ಮತ್ತು ಯುವ ವಯಸ್ಕರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆಯುವುದು ಅಪೋಸ್ತೋಲಿಕ ಪ್ರವಾಸಗಳ ವೇಳೆ ಸಾಮಾನ್ಯವಾಗಿ ಕಂಡುಬರುವ ಸಂಪ್ರದಾಯವಾಗಿದೆ. ಆದರೆ, ಯುವಜನರಿಗೆ ತಮ್ಮ ಧ್ವನಿಯನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಮೂಲಕ ಧರ್ಮಸಭೆಯ ಧ್ಯೇಯದ ಒಂದು ಭಾಗವೂ ಇದಾಗಿದೆ ಎಂದು ಮರೀನಾ ಒತ್ತಿಹೇಳುತ್ತಾರೆ.

ಇದು ಎಂದಿಗೂ ನಿಲ್ಲಬಾರದು ಎಂಬುದು ಅವರ ಆಶಯ. ಏಕೆಂದರೆ ಯುವಜನರು “ಸಮುದಾಯದ ಬಲಿಷ್ಠ ಭಾಗವಾಗಿದ್ದಾರೆ. ಅವರು ಕೇವಲ ಭವಿಷ್ಯವಲ್ಲ; ಅವರು ವರ್ತಮಾನವೂ ಆಗಿದ್ದಾರೆ. ಆದ್ದರಿಂದ ಅವರ ಮಾತುಗಳನ್ನು ಆಲಿಸುತ್ತಲೇ ಇರುವುದು ಅತ್ಯಂತ ಮುಖ್ಯ” ಎಂದು ಅವರು ಹೇಳುತ್ತಾರೆ.

ಈ ಜಾಗರಣೆಯು ಕೇವಲ ಮ್ಯಾಡ್ರಿಡ್ ಮತ್ತು ಜಗತ್ತಿನ ಯುವ ಕಥೋಲಿಕರಿಗಷ್ಟೇ ಅಲ್ಲ, ಕಥೋಲಿಕರಲ್ಲದ ಯುವಜನರಿಗೂ ಮಹತ್ವದ್ದಾಗಿದೆ. “ಎಲ್ಲಾ ಯುವಜನರೂ ಪೂಜ್ಯ ಜಗದ್ಗುರುಗಳೊಂದಿಗೆ ನಡೆಯುವ ಈ ಜಾಗರಣೆಗೆ ಆಹ್ವಾನಿತರಾಗಿದ್ದಾರೆ ಎಂಬ ಭಾವನೆಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆ,” ಎಂದು ಮರೀನಾ ಹೇಳುತ್ತಾರೆ. ವಿಶೇಷವಾಗಿ, ಸ್ಪೇನ್‌ನಲ್ಲಿ ಕಥೋಲಿಕ ವಿಶ್ವಾಸದ ಬಗ್ಗೆ ಆಸಕ್ತಿ ತೋರಿಸುತ್ತಿರುವ ಯುವಜನರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಇದು ಇನ್ನಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಧರ್ಮಸಭೆಯ ಬಗ್ಗೆ ಯಾವುದೇ ಜ್ಞಾನ ಅಥವಾ ತರಬೇತಿ ಇಲ್ಲದವರಿಗೂ ಸ್ವಾಗತ ನೀಡುವ ಅಗತ್ಯವಿದೆ ಎಂದು ಅವರು ಒತ್ತಿಹೇಳುತ್ತಾರೆ. ಮುಖ್ಯವಾದ ಸಂಗತಿ ಏನೆಂದರೆ, ಅವರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಂದರೆ ಅವರು ಯಾವುದೋ ಒಂದು ಸತ್ಯವನ್ನು ಹುಡುಕುತ್ತಿದ್ದಾರೆ. ಈ ಜಾಗರಣೆಯು ಆ ಆಲೋಚನೆಯ ಸುತ್ತ, ಯುವಜನರ ಹುಡುಕಾಟದ ಸುತ್ತ ಕೇಂದ್ರೀಕೃತವಾಗಿದೆ ಎಂದು ಮರೀನಾ ಹೇಳುತ್ತಾರೆ.

ಪೂಜ್ಯ ಜಗದ್ಗುರುಗಳೊಂದಿಗೆ ನೇರ ಸಂವಾದ

ಕೆಲವು ಯುವಜನರಿಗೆ ಈ ಪ್ರಾರ್ಥನಾ ಜಾಗರಣೆಯು ಇನ್ನಷ್ಟು ವಿಶೇಷವಾಗಿರಲಿದೆ. ಏಕೆಂದರೆ ಅವರಿಗೆ ಪೂಜ್ಯ ಜಗದ್ಗುರು 14ನೇ ಲಿಯೋ ಅವರೊಂದಿಗೆ ನೇರವಾಗಿ ಮಾತನಾಡುವ ಮತ್ತು ತಮ್ಮ ಜೀವನ ಸ್ಥಿತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಅವಕಾಶ ದೊರೆಯಲಿದೆ.

ಫರ್ನಾಂಡೊ ಅಂತಹ ಯುವಕರಲ್ಲಿ ಒಬ್ಬರು. ಪೂಜ್ಯ ಜಗದ್ಗುರುಗಳ ಉತ್ತರವು “ಮ್ಯಾಡ್ರಿಡ್‌ನ ಯುವಜನರು ಹಾಗೂ ಜಗತ್ತಿನಾದ್ಯಂತದ ಯುವಜನರ ನೈಜ ಜೀವನದೊಂದಿಗೆ ಆಳವಾಗಿ ಸಂಪರ್ಕ ಹೊಂದಿರಬೇಕು. ಅವರು ಸತ್ಯಕ್ಕಾಗಿ ಹಾತೊರೆಯುತ್ತಿದ್ದಾರೆ ಮತ್ತು ತಮ್ಮ ಜೀವನಕ್ಕೆ ಅರ್ಥವನ್ನು ನೀಡುವ ಯಾವುದನ್ನೋ ಹುಡುಕುತ್ತಿದ್ದಾರೆ” ಎಂಬುದು ತಮ್ಮ ಆಶಯ ಎಂದು ಅವರು ಹಂಚಿಕೊಳ್ಳುತ್ತಾರೆ.

ಈ ಜಾಗರಣೆಯ ಸಿದ್ಧತೆ, ಕೇಳಲಿರುವ ಪ್ರಶ್ನೆಗಳು ಮತ್ತು ಹಾಡುಗಳು — ಇವೆಲ್ಲವೂ ಸತ್ಯದತ್ತ ಸಾಗುವ ಈ ಸಮುದಾಯದ ಹುಡುಕಾಟವನ್ನು ಪ್ರತಿಬಿಂಬಿಸುತ್ತವೆ. ಮ್ಯಾಡ್ರಿಡ್‌ನಲ್ಲಿ ಪೂಜ್ಯ ಜಗದ್ಗುರುಗಳ ಭೇಟಿಯ ಧ್ಯೇಯವೂ ಇದೇ ಸಂದೇಶವನ್ನು ಒಳಗೊಂಡಿದೆ: “Alzada la mirada”- “ನಿಮ್ಮ ದೃಷ್ಟಿಯನ್ನು ಮೇಲಕ್ಕೆ ಎತ್ತಿರಿ.”

ಇದು ಕೇವಲ ಈ ಭೇಟಿಯ ಧ್ಯೇಯವಾಕ್ಯ ಮಾತ್ರವಲ್ಲ, ಯುವಜನರು ತಮ್ಮ ಜೀವನದುದ್ದಕ್ಕೂ ಅನುಸರಿಸಬಹುದಾದ ಒಂದು ಜೀವನ ಮಂತ್ರವೂ ಆಗಬಹುದು ಎಂದು ಮರೀನಾ ಹೇಳುತ್ತಾರೆ. “ಸಮಸ್ಯೆಗಳಿವೆ. ಕೆಟ್ಟ ಸಂಗತಿಗಳು ನಡೆಯುತ್ತಿವೆ. ಆದರೆ ನಾವು ಮೇಲಕ್ಕೆ ನೋಡುವುದನ್ನು ಮುಂದುವರಿಸಲು ಪ್ರಯತ್ನಿಸಬೇಕು. ಏಕೆಂದರೆ ಇನ್ನೂ ನಿರೀಕ್ಷೆಯಿದೆ,” ಎಂದು ಅವರು ಹೇಳುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಜೂನ್ 2026, 16:34