ಹುಡುಕಿ

ವಂ. ಗುರು ಪೌಲ್ ಸಮಸುಮೋ (ಎಡಭಾಗದಲ್ಲಿ) ಮತ್ತು ವಂ. ಗುರು ಡೆನ್ನಿಸ್ ಪಿನೆಡಾ (ಬಲಭಾಗದಲ್ಲಿ). ವಂ. ಗುರು ಪೌಲ್ ಸಮಸುಮೋ (ಎಡಭಾಗದಲ್ಲಿ) ಮತ್ತು ವಂ. ಗುರು ಡೆನ್ನಿಸ್ ಪಿನೆಡಾ (ಬಲಭಾಗದಲ್ಲಿ). 

ನಾವು ವಲಸಿಗರು, ವಲಸಿಗರ ಸೇವೆಯಲ್ಲಿ ತೊಡಗಿರುವವರು

ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಬಾರ್ಸಿಲೋನಾದ ಎಲ್ ರಾವಲ್ ಪ್ರದೇಶದಲ್ಲಿರುವ ಸಂತ್ ಅಗಸ್ಟಿನ್ (ಅಗುಸ್ತಿ ನೋ) ದೇವಾಲಯಕ್ಕೆ ಆಗಮಿಸಿದಾಗ, ಅವರನ್ನು ಒಂದು ರೀತಿಯಲ್ಲಿ ಅವರ ಸಹೋದರರಾದ ಬಾರ್ಸಿಲೋನಾದ ಈ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಅಗಸ್ಟಿನಿಯನ್ ಧಾರ್ಮಿಕರು ಆತಿಥ್ಯಪೂರ್ವಕವಾಗಿ ಸ್ವಾಗತಿಸಿದರು. ಈ ಸಣ್ಣ ಅಗಸ್ಟಿನಿಯನ್ ಸಮುದಾಯದಲ್ಲಿ ಇಬ್ಬರು ಫಿಲಿಪ್ಪೀನ್ಸ್ ದೇಶದವರಾಗಿದ್ದು, ಇನ್ನಿಬ್ಬರು ಟಾಂಜಾನಿಯಾದವರಾಗಿದ್ದಾರೆ. ವ್ಯಾಟಿಕನ್ ಸುದ್ದಿ ಸಂಸ್ಥೆ ಈ ಸಮುದಾಯದ ಮುಖ್ಯಸ್ಥರಾದ ವಂ. ಗುರು ಡೆನ್ನಿಸ್ ಪಿನೆಡಾ ಅವರೊಂದಿಗೆ ಮಾತನಾಡಿತು. ಅವರು ಮೂಲತಃ ಫಿಲಿಪ್ಪೀನ್ಸ್ ದೇಶದವರಾಗಿದ್ದು, ಸ್ಪೇನ್‌ನಲ್

ಲೇಖಕರು: ವಂ. ಗುರು ಪಾಲ್ ಸಮಸುಮೊ - ಬಾರ್ಸಿಲೋನಾ

ಬಾರ್ಸಿಲೋನಾದ ಯಾವುದೇ ದೇವಾಲಯವು ಆಂಟೋನಿ ಗೌಡಿ ಅವರ ಸಾಗ್ರಾದ ಫಮಿಲಿಯಾ ಮಹಾಗಿರಿಜಾಘರದ ವಾಸ್ತುಶಿಲ್ಪದ ವೈಭವಕ್ಕೆ ಸರಿಸಾಟಿಯಾಗಲಾರದು. ಆದ್ದರಿಂದ ಸ್ಥಳೀಯರು ಸಂತ್ ಅಗಸ್ಟಿನ್ ದೇವಾಲಯವನ್ನು “ಬಡವರ ಕ್ಯಾಥೆಡ್ರಲ್” ಎಂದು ಕರೆಯುತ್ತಾರೆ. ಆದರೆ ಈ ಹೆಸರಿಗೆ ಇನ್ನೂ ಆಳವಾದ ಮಹತ್ವವಿದೆ. ಪ್ಲಾಸಾ ದೆ ಸಂತ್ ಅಗಸ್ಟಿಯಲ್ಲಿರುವ ಈ 18ನೇ ಶತಮಾನದ ದೇವಾಲಯವು ದೀರ್ಘಕಾಲದಿಂದ ಬಾರ್ಸಿಲೋನಾದ ರಾವಲ್ ಜಿಲ್ಲೆಯ ಕಾರ್ಮಿಕ ವರ್ಗದ ನಿವಾಸಿಗಳಿಗೆ ಆಶ್ರಯಸ್ಥಾನವಾಗಿ ಸೇವೆ ಸಲ್ಲಿಸುತ್ತ ಬಂದಿದೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ, ಆದರೆ ಈ ಬಾರಿ ಏಷ್ಯಾ, ಲ್ಯಾಟಿನ್ ಅಮೆರಿಕಾ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳಿಂದ ಬಂದಿರುವ ವಲಸಿಗರ ಅಗತ್ಯಗಳಿಗೆ ಸ್ಪಂದಿಸುತ್ತಿದೆ.

ಕ್ಯಾಟಲೋನಿಯಾದ ಅಗಸ್ಟಿನಿಯನ್ ಸಮುದಾಯ

ವಂ. ಗುರು ಡೆನ್ನಿಸ್ ಪಿನೆಡಾ ಅವರು ಕ್ಯಾಟಲೋನಿಯಾದ ಅಗಸ್ಟಿನಿಯನ್ ಸಮುದಾಯದ ಮುಖ್ಯಸ್ಥರಾಗಿದ್ದು, ಬಡಲೋನಾದ ಸಂತ್ ರೋಕ್ ಧರ್ಮಕೇಂದ್ರದ ರೆಕ್ಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಾರ್ಸಿಲೋನಾದ ರಾವಲ್ ಪ್ರದೇಶದಲ್ಲಿರುವ ಸಂತ್ ಅಗಸ್ಟಿ ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಸದಸ್ಯರ ಅಗಸ್ಟಿನಿಯನ್ (OSA) ತಂಡದ ನೇತೃತ್ವ ವಹಿಸಿದ್ದಾರೆ. ಇದೇ ಸ್ಥಳದಲ್ಲಿ ಅವರು ಈ ವಾರ ಪೂಜ್ಯ ಜಗದ್ಗುರು 14ನೇ ಲಿಯೋ ಅವರನ್ನು ಸ್ವಾಗತಿಸಿದರು. ಧರ್ಮಪ್ರಾಂತ್ಯದ ದತ್ತಿ ಸಂಸ್ಥೆಗಳು ಮತ್ತು ಇತರ ಸಮಾಜಸೇವಾ ಸಂಘಟನೆಗಳನ್ನು ಭೇಟಿಯಾಗಲು ಪೂಜ್ಯ ಜಗದ್ಗುರುಗಳು ಇಲ್ಲಿಗೆ ಆಗಮಿಸಿದ್ದರು.

ಪೂಜ್ಯ ಜಗದ್ಗುರುಗಳ ಭೇಟಿಗೆ ಒಂದು ದಿನ ಮುಂಚಿತವಾಗಿ, ವಂ. ಗುರು ಡೆನ್ನಿಸ್ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, “ಪೂಜ್ಯ ಜಗದ್ಗುರು 14ನೇ ಲಿಯೋ  ಹೆಸರಿನ ಮತ್ತೋರ್ವ ಅಗಸ್ಟಿನಿಯನ್ ಸೇವಕರನ್ನು ಸ್ವಾಗತಿಸುವುದು ಅಪಾರ ಸಂತೋಷವಾಗಿದೆ” ಎಂದು ಹೇಳಿದರು.ಅವರು ತಮ್ಮನ್ನು ಮತ್ತು ತಮ್ಮ ಸಹೋದ್ಯೋಗಿಗಳನ್ನು ಇತರ ವಲಸಿಗರ ಸೇವೆ ಮಾಡುವ ವಲಸಿಗರು ಹಾಗೂ ಅಗತ್ಯದಲ್ಲಿರುವವರ ಸೇವೆಯಲ್ಲಿ ತೊಡಗಿರುವ ಧಾರ್ಮಿಕರು ಎಂದು ವಿವರಿಸಿದರು.

ಬಹುಸಾಂಸ್ಕೃತಿಕ ಧರ್ಮಕೇಂದ್ರ

“ಇದು ಅತ್ಯಂತ ವಿಶಿಷ್ಟವಾದ ದೇವಾಲಯ ಮತ್ತು ಸಮುದಾಯವಾಗಿದೆ; ಬಾರ್ಸಿಲೋನಾದಲ್ಲಿರುವ ನಿಜವಾದ ಬಹುಸಾಂಸ್ಕೃತಿಕ ಧರ್ಮಕೇಂದ್ರವಾಗಿದೆ,” ಎಂದು  ವಂ. ಗುರು ಡೆನ್ನಿಸ್ ವಿವರಿಸಿದರು. “ಇಲ್ಲಿ ವಿವಿಧ ದೇಶಗಳು ಮತ್ತು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ ಜನರಿದ್ದಾರೆ. ತಮ್ಮ ಕಥೋಲಿಕ ವಿಶ್ವಾಸವನ್ನು ಆಚರಿಸಲು ಹಾಗೂ ವಿಶ್ವಾಸದಲ್ಲಿ ಒಂದಾಗಿರಲು ನಾವು ಅವರಿಗೆ ಸ್ಥಳವನ್ನು ಒದಗಿಸುತ್ತೇವೆ. ‘ಒಂದಾಗಿರುವುದು’ ಎನ್ನುವುದು ನಮ್ಮ ಅಗಸ್ಟಿನಿಯನ್ ಗುರುತಿನ ಭಾಗವೂ ಆಗಿದೆ,” ಎಂದು ವಂ. ಗುರು ಡೆನ್ನಿಸ್ ಹೇಳಿದರು. ಅವರು ಮುಂದುವರಿದು, “ಈ ಸಂತ್ ಅಗಸ್ಟಿ ದೇವಾಲಯದ ಅಡಿಯಲ್ಲಿ ನಾವು ಎರಡು ಧರ್ಮಕೇಂದ್ರಗಳಿಗೆ ಸೇವೆ ಸಲ್ಲಿಸುತ್ತೇವೆ: ಫಿಲಿಪ್ಪೀನ್ಸ್ ಸಮುದಾಯ ಮತ್ತು ವಿವಿಧ ಹಿನ್ನೆಲೆಗಳಿಂದ ಬಂದಿರುವ ವಿಶಾಲವಾದ ವಿಶ್ವಾಸಿಗಳ ಸಮುದಾಯ. ಬೊಲಿವಿಯಾ, ಪೆರು, ಪರಾಗ್ವೆ ಹಾಗೂ ಇತರ ಲ್ಯಾಟಿನ್ ಅಮೆರಿಕನ್ ಸಮುದಾಯಗಳಿಗೂ ನಾವು ಸೇವೆ ಸಲ್ಲಿಸುತ್ತೇವೆ,” ಎಂದು ಹೇಳಿದರು.

ಸಂಸ್ಕೃತಿ ಮತ್ತು ಭಕ್ತಿಪರ ಆಚರಣೆಗಳು

ವಿವಿಧ ರಾಷ್ಟ್ರಗಳಿಂದ ಬಂದ ಜನರು ಧರ್ಮಕೇಂದ್ರಕ್ಕೆ ಆಗಮಿಸಿದಾಗ, ತಮ್ಮ ತಾಯ್ನಾಡಿನ ನೆನಪುಗಳನ್ನು ಹಾತೊರೆಯುವುದು ಸಹಜವೆಂದು ವಂ. ಗುರು ಡೆನ್ನಿಸ್ ಅರ್ಥಮಾಡಿಕೊಂಡಿದ್ದಾರೆ. “ಅವರು ಇಲ್ಲಿಗೆ ಬಂದಾಗ, ನಾವು ಅವರ ವೈವಿಧ್ಯತೆಯನ್ನು ಸ್ವಾಗತಿಸುತ್ತೇವೆ. ತಮ್ಮ ದೇಶದಲ್ಲಿದ್ದ ಕೆಲವು ಭಕ್ತಿಪರ ಆಚರಣೆಗಳು, ಸಂತರು ಅಥವಾ ಮಾತೆಯ ಹಬ್ಬಗಳಿಂದ ಅವರು ವಂಚಿತರಾಗುತ್ತಾರೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ತಿಂಗಳಿಗೆ ಒಮ್ಮೆ, ಅವರ ಆಚರಣೆಗಳಿಗಾಗಿ ವಿಶೇಷ ಸ್ಥಳವನ್ನು ಒದಗಿಸುತ್ತೇವೆ. ಅಲ್ಲಿ ಅವರು ತಮ್ಮ ನೆಚ್ಚಿನ ಸಂತರ ಮೂರ್ತಿಗಳನ್ನು ತರಬಹುದು, ತಮ್ಮ ಭಕ್ತಿಗೀತೆಗಳನ್ನು ಹಾಡಬಹುದು, ಸಂಗೀತ ವಾದಿಸಬಹುದು, ಪ್ರಾರ್ಥಿಸಬಹುದು ಮತ್ತು ತಮ್ಮದೇ ಸಂಸ್ಕೃತಿಗೆ ವಿಶಿಷ್ಟವಾದ ರೀತಿಯಲ್ಲಿ ಆಚರಿಸಬಹುದು,” ಎಂದು ಅವರು ವಿವರಿಸಿದರು.

“ಮುಖ್ಯ ವಿಷಯವೆಂದರೆ, ನಾವು ಇಲ್ಲಿ ಯಾಜಕರಾಗಿದ್ದರೂ, ನಾವು ಸ್ವತಃ ವಲಸಿಗರಾಗಿದ್ದೇವೆ ಎಂಬ ಅರಿವು ನಮಗಿದೆ,” ಎಂದು ಮುಖ್ಯಸ್ಥರಾದ ವಂ. ಗುರು ಡೆನ್ನಿಸ್ ಒತ್ತಿಹೇಳಿದರು. “ತಾಯ್ನಾಡಿನ ಯಾವುದೋ ಒಂದು ವಿಷಯವನ್ನು ಮಿಸ್ ಮಾಡಿಕೊಳ್ಳುವುದು ಎಂದರೇನು ಎಂಬುದು ನಮಗೆ ಗೊತ್ತಿದೆ. ಸಂತ್ ಅಗಸ್ಟಿ ದೇವಾಲಯದಲ್ಲಿ ನೀವು ಅದನ್ನೇ ಕಾಣುತ್ತೀರಿ.” ಇದರ ಜೊತೆಗೆ, ಸಂತ್ ಅಗಸ್ಟಿ ದೇವಾಲಯದ ಹಿಂಭಾಗದಲ್ಲಿರುವ ಅನ್ನಸಂತರ್ಪಣಾ ಕೇಂದ್ರವನ್ನು ವಂ. ಗುರು ಡೆನ್ನಿಸ್ ಉಲ್ಲೇಖಿಸಿದರು. ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ‘ಮಿಷನರೀಸ್ ಆಫ್ ಚಾರಿಟಿ’ ಸಹೋದರಿಯರು ಈ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಕೆಲವೊಮ್ಮೆ ಪ್ರತಿದಿನ 400ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗುತ್ತದೆ, ಮತ್ತು ಅಗಸ್ಟಿನಿಯನ್ ಸಮುದಾಯವೂ ಈ ಸೇವೆಯಲ್ಲಿ ಸಕ್ರಿಯವಾಗಿ ಸಹಕರಿಸುತ್ತದೆ.

ಪೂಜ್ಯ ಜಗದ್ಗುರು 14ನೇ ಲಿಯೋ ಅವರಿಂದ ಸ್ಫೂರ್ತಿ ಪಡೆದ ಭರವಸೆ

ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಭೇಟಿಯ ನಂತರ ಸಂತ್ ಅಗಸ್ಟಿ ಸಮುದಾಯದ ಬಗ್ಗೆ ತಮ್ಮ ನಿರೀಕ್ಷೆಗಳೇನು ಎಂದು ಕೇಳಿದಾಗ,  ವಂ. ಗುರು ಡೆನ್ನಿಸ್ ಹೀಗೆ ಉತ್ತರಿಸಿದರು: “ತಮ್ಮ ಅಪೋಸ್ತೋಲಿಕ ಪ್ರವಾಸಗಳಲ್ಲಿ ಪೂಜ್ಯ ಜಗದ್ಗುರುಗಳು ಯಾವಾಗಲೂ ವಲಸಿಗರು ಮತ್ತು ಸಮಾಜದ ಅಂಚಿನಲ್ಲಿರುವವರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ತೋರಿಸುತ್ತಾರೆ. ಅವರು ಇವರು ನಮ್ಮ ಸಹೋದರರು ಮತ್ತು ಸಹೋದರಿಯರು, ಸಹಾಯದ ಅಗತ್ಯವಿರುವವರು ಎಂದು ಒತ್ತಿಹೇಳುತ್ತಾರೆ. ನಾವು ವಿಭಿನ್ನ ಧರ್ಮಸಭೆಗಳಿಂದ, ವಿವಿಧ ರಾಷ್ಟ್ರೀಯತೆಗಳಿಂದ ಮತ್ತು ಬೇರೆ ಬೇರೆ ಹಿನ್ನೆಲೆಗಳಿಂದ ಬಂದವರಾಗಿರಬಹುದು. ಆದರೆ ದಿನದ ಕೊನೆಯಲ್ಲಿ, ಮಾನವಕುಲ ಒಂದೇ ಆಗಿದೆ. ಪೂಜ್ಯ ಜಗದ್ಗುರುಗಳ ಈ ಬಾರ್ಸಿಲೋನಾ ಭೇಟಿಯು ನಮಗೆ ಒಂದು ಮಹತ್ವದ ನೆನಪನ್ನು ನೀಡಲಿ ಎಂದು ನಾನು ಆಶಿಸುತ್ತೇನೆ: ಧರ್ಮಸಭೆಯಾಗಿ ನಾವು ಏನೇ ಕಾರ್ಯಗಳನ್ನು ಮಾಡಿದರೂ, ಮಾನವಕುಲ ಒಂದೇ ಎಂಬ ಸತ್ಯವನ್ನು ನಾವು ಎಂದಿಗೂ ಮರೆಯಬಾರದು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

11 ಜೂನ್ 2026, 19:52