ಹುಡುಕಿ

ಸಭೆಯೊಂದರ ವೇಳೆ  ಸಹೋದರಿ ಮ್ಬುಲಿ ಹಾಗೂ ಆರೋಗ್ಯ ಕಾರ್ಯಕರ್ತರ ಐಕ್ಯತೆ ಮತ್ತು ಸಹಕಾರ. ಸಭೆಯೊಂದರ ವೇಳೆ ಸಹೋದರಿ ಮ್ಬುಲಿ ಹಾಗೂ ಆರೋಗ್ಯ ಕಾರ್ಯಕರ್ತರ ಐಕ್ಯತೆ ಮತ್ತು ಸಹಕಾರ. 

ಕೀನ್ಯಾ: ಟುರ್ಕಾನಾ ಪೂರ್ವದಲ್ಲಿ ಕರುಣಾ ಸಹೋದರಿಯರು ಜೀವನಗಳನ್ನು ಪರಿವರ್ತಿಸುತ್ತಿದ್ದು, ಸ್ಥಿತಿಗತಿಗಳನ್ನು ಬದಲಾಯಿಸುತ್ತಿದ್ದಾರೆ

ಕೀನ್ಯಾದ ಲೋಡ್ವಾರ್ ಕಥೋಲಿಕ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿರುವ ಶುಷ್ಕ ಮತ್ತು ದೂರದ ಲೋಕೋರಿ ಪ್ರದೇಶದಲ್ಲಿ, ಕರುಣಾ ಸಹೋದರಿಯರ ಸಭೆ (Sisters of Mercy) ಸಮುದಾಯಗಳ ಜೀವನವನ್ನು ಪರಿವರ್ತಿಸುತ್ತಿದ್ದು, ಕೀನ್ಯಾದ ಅತ್ಯಂತ ದುರ್ಬಲ ಜನಸಮೂಹಗಳಲ್ಲಿ ಅನೇಕರಿಗೆ ಮಾನವ ಘನತೆಯನ್ನು ಮರುಸ್ಥಾಪಿಸುತ್ತಿದೆ. ಇವರಲ್ಲಿ ಬಹುತೇಕರು ಅರೆ-ಅಲೆಮಾರಿ ಜೀವನಶೈಲಿಯನ್ನು ಅನುಸರಿಸುವವರಾಗಿದ್ದಾರೆ.

ಲೇಖಕರು: ಸಹೋದತಿ ಮಿಷೆಲ್ ನಂಜೇರಿ, OSF

ಲೋಡ್ವಾರ್ ಧರ್ಮಪ್ರಾಂತ್ಯದಲ್ಲಿನ ಈ ಸೇವೆಯ ಹೃದಯಭಾಗದಲ್ಲಿ ಸಹೋದರಿ ಸೆಲಿನಾ ಮ್ಬುಲಿ ಇದ್ದಾರೆ. ಲೋಕೋರಿಯಲ್ಲಿ ಅವರು ನಡೆಸುತ್ತಿರುವ ಕಾರ್ಯವು ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರು, ಅಲೆಮಾರಿ ಕುಟುಂಬಗಳು, ದುರ್ಬಲ ಪರಿಸ್ಥಿತಿಯಲ್ಲಿರುವ ಮಕ್ಕಳು ಹಾಗೂ ವಯೋವೃದ್ಧ ಆರೈಕೆದಾರರು ಸೇರಿದಂತೆ ಅನೇಕ ಜನರಿಗೆ ಮಹತ್ವದ ಆಸರೆಯಾಗಿದೆ.

ಸಿಸ್ಟರ್ಸ್ ಆಫ್ ಮರ್ಸಿ ಲೋಕೋರಿ ಆರೋಗ್ಯ ಕೇಂದ್ರದಲ್ಲಿ, ರೋಗಿಗಳಿಗೆ ಹಿಂದೆ ಸಮಗ್ರ ಆರೋಗ್ಯ ಸೇವೆಗಳು ಲಭ್ಯವಿದ್ದವು. ಇದರಲ್ಲಿ ಹುಲ್ಲುಗಾವಲು ಮತ್ತು ನೀರಿನ ಹುಡುಕಾಟದಲ್ಲಿ ಸ್ಥಳಾಂತರಗೊಳ್ಳುವ ಅಲೆಮಾರಿ ಕುಟುಂಬಗಳಿಗೆ ಸೇವೆ ನೀಡುತ್ತಿದ್ದ ಸಂಚಾರಿ ಚಿಕಿತ್ಸಾ ಶಿಬಿರಗಳೂ ಸೇರಿದ್ದವು.

ಆದರೆ ಇಂದು, ಅಂತರರಾಷ್ಟ್ರೀಯ ದಾನಿಗಳ ಕೊರತೆಯ ಪರಿಣಾಮವಾಗಿ ಉಂಟಾದ ಧನಸಹಾಯದ ಕಡಿತದಿಂದ ಈ ವ್ಯವಸ್ಥೆ ತೀವ್ರ ಒತ್ತಡಕ್ಕೆ ಒಳಗಾಗಿದೆ. ಇದರ ಪರಿಣಾಮವಾಗಿ ಹಲವು ಸೇವೆಗಳು ಗಮನಾರ್ಹವಾಗಿ ಹಿನ್ನಡೆಯನ್ನು ಅನುಭವಿಸುತ್ತಿವೆ.

“ನಾವು ಆರೋಗ್ಯ ಕಾರ್ಯಕರ್ತರ ಒಂದು ಬಲಿಷ್ಠ ತಂಡವನ್ನು ನೇಮಿಸಿ, ಅವರಿಗೆ ನಮ್ಮ ಮೌಲ್ಯಗಳ ಆಧಾರದ ಮೇಲೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದೆವು. ಆದರೆ ಈಗ ಕಡಿಮೆಯಾದ ಸಂಬಳ ಮತ್ತು ಉತ್ತಮ ಅವಕಾಶಗಳ ಹುಡುಕಾಟದ ಕಾರಣದಿಂದ ಅನೇಕರೂ ಕೆಲಸ ತೊರೆಯುತ್ತಿದ್ದಾರೆ. ಈ ಸವಾಲುಗಳ ನಡುವೆಯೂ, ನಮ್ಮ ಸಭೆಯು ಎಚ್‌ಐವಿ ಸೋಂಕಿತರಿಗಾಗಿ ಸಮಗ್ರ ಸೇವೆಗಳನ್ನು ಒದಗಿಸುವ ಕಾರ್ಯಕ್ಕೆ ತನ್ನ ಬೆಂಬಲವನ್ನು ಮುಂದುವರಿಸುತ್ತಿದೆ,” ಎಂದು ಸಹೋದರಿ ಮ್ಬುಲಿ ತಿಳಿಸಿದರು.

ಎಚ್‌ಐವಿ ವಿರುದ್ಧದ ಹೋರಾಟದಲ್ಲಿ ಸಮಯದೊಂದಿಗೆ ನಡೆಯುತ್ತಿರುವ ಪೈಪೋಟಿ

ಪ್ರತಿ ವರ್ಷ ಲೋಕೋರಿ ಆರೋಗ್ಯ ಕೇಂದ್ರವು ವಿಶ್ವ ಏಡ್ಸ್ ದಿನವನ್ನು ಔಷಧೋಪಚಾರ, ಆಹಾರ ಸಹಾಯ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಆಚರಿಸುತ್ತದೆ. ಎಚ್‌ಐವಿಯನ್ನು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯವಾಗಿ ನಿರ್ಮೂಲನೆಗೊಳಿಸುವ 2030ರ ಜಾಗತಿಕ ಗುರಿಯನ್ನು ಸಾಧಿಸಲು ಈಗ ಕೇವಲ ಕೆಲವೇ ವರ್ಷಗಳು ಉಳಿದಿವೆ. “ನಾವು ಇನ್ನೂ ಸಮಯದೊಂದಿಗೆ ಪೈಪೋಟಿ ನಡೆಸುತ್ತಿದ್ದೇವೆ. ಎಚ್‌ಐವಿ ಈ ಪ್ರದೇಶದ ವಾಸ್ತವಿಕತೆಯಾಗಿದೆ,” ಎಂದು ಸಹೋದರಿ ಮ್ಬುಲಿ ಹೇಳಿದರು. “ಎಚ್‌ಐವಿ ಸೋಂಕಿಗೆ ಸಂಬಂಧಿಸಿದ ಕಳಂಕ ಮತ್ತು ಚಿಕಿತ್ಸೆಯನ್ನು ನಿರಂತರವಾಗಿ ಅನುಸರಿಸುವಲ್ಲಿನ ಸವಾಲುಗಳನ್ನು ಎದುರಿಸಲು, ನಾವು ಸಮಾಲೋಚನೆ, ಚಿಕಿತ್ಸಾತ್ಮಕ ಚಟುವಟಿಕೆಗಳು ಮತ್ತು ‘ಆಲ್ಕೊಹಾಲಿಕ್ಸ್ ಅನಾನಿಮಸ್’ ಮಾದರಿಯಿಂದ ಪ್ರೇರಿತವಾದ ಹೊಂದಾಣಿಕೆಯ ಬೆಂಬಲ ವ್ಯವಸ್ಥೆಗಳನ್ನು ಪರಿಚಯಿಸಿದ್ದೇವೆ.”

ಜೀವನೋಪಾಯದ ಮೂಲಕ ಸಮುದಾಯಗಳನ್ನು ಸಬಲೀಕರಿಸುವುದು

ಆರೋಗ್ಯ ಸೇವೆಗಳಾಚೆಗೂ, ಕರುಣಾ ಸಹೋದರಿಯರು ಬಡತನ, ಹಸಿವು ಮತ್ತು ಅವಲಂಬಿತ ಜೀವನವನ್ನು ಎದುರಿಸಲು ಆದಾಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. “ನಾವು ಉಳಿತಾಯ ಮತ್ತು ಸಾಲ ಸಮುದಾಯಗಳನ್ನು (SILC ಗುಂಪುಗಳು) ಸ್ಥಾಪಿಸಿದ್ದೇವೆ. ಹತ್ತು ಟೇಬಲ್-ಬ್ಯಾಂಕಿಂಗ್ ಗುಂಪುಗಳಲ್ಲಿ 290ಕ್ಕೂ ಹೆಚ್ಚು ಸದಸ್ಯರಿದ್ದಾರೆ,” ಎಂದು ಸಹೋದರಿ ಮ್ಬುಲಿ ಹೇಳಿದರು. “ನಾವು ಸದಸ್ಯರಿಗೆ ಮೂಲಭೂತ ಹಣಕಾಸು ಸಾಕ್ಷರತೆ, ಉದ್ಯಮಶೀಲತಾ ಕೌಶಲ್ಯಗಳು ಹಾಗೂ ಸಣ್ಣ ಸಾಲಗಳ ಸೌಲಭ್ಯವನ್ನೂ ಒದಗಿಸುತ್ತೇವೆ. ಇದರ ಜೊತೆಗೆ, ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಲೋಕೋರಿ ಫ್ರೆಶ್ ಬೇಕರಿ ಎಂಬ ಯೋಜನೆಯೂ ನಮ್ಮಲ್ಲಿದೆ. ಜನರು ತಮ್ಮ ಅಭಿವೃದ್ಧಿಯ ಹೊಣೆಯನ್ನು ತಾವೇ ವಹಿಸಿಕೊಳ್ಳಬೇಕು ಮತ್ತು ತಮ್ಮ ಮಾನವ ಘನತೆಯನ್ನು ಮರುಸ್ಥಾಪಿಸಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ.”

ಮರುಭೂಮಿಯಿಂದ ಹಸಿರಿನತ್ತ: ಲೋಕೋರಿ ಗ್ರೀನ್ ಉಪಕ್ರಮ

ಲೌದಾತೋ ಸಿ’ ಸಂದೇಶದಿಂದ ಪ್ರೇರಣೆ ಪಡೆದು, ಜನರು ಹಾಗೂ ಪರಿಸರದ ಆರೈಕೆಯನ್ನು ತನ್ನ ಧ್ಯೇಯವಾಗಿಸಿಕೊಂಡು, ಕರುಣೆಯ ಸಹೋದರಿಯರು ಲೋಕೋರಿ ಗ್ರೀನ್ ಉಪಕ್ರಮವನ್ನು ಆರಂಭಿಸಿದರು. “ಈ ಉಪಕ್ರಮದ ಮೂಲಕ ನಾವು ಪರಿಸರ ಸಂರಕ್ಷಣೆ ಮತ್ತು ವೈಯಕ್ತಿಕ ಪುನಶ್ಚೇತನ ಎರಡನ್ನೂ ಉತ್ತೇಜಿಸುತ್ತಿದ್ದೇವೆ,” ಎಂದು ಸಹೋದರಿ ಮ್ಬುಲಿ ಹೇಳಿದರು. “ನಾವು ಕಲ್ಲುಗಳಿಂದ ಕೂಡಿದ ಬಂಜರು ಭೂಮಿಯಿಂದ ಆರಂಭಿಸಿದ್ದೆವು. ಎಲ್ಲರೂ ಸೇರಿ ಮಣ್ಣನ್ನು ತಂದು, ಪರಿಸರ ಸ್ನೇಹಿ ಕೃಷಿ ತೋಟವನ್ನು ಅಭಿವೃದ್ಧಿಪಡಿಸಿ, ಮರಗಳನ್ನು ನೆಟ್ಟೆವು. ಇಂದು ನಾವು 41 ಜೇನುಗೂಡುಗಳನ್ನು ಹೊಂದಿರುವ ಜೇನು ಸಾಕಾಣಿಕೆ ಕೇಂದ್ರವನ್ನೂ ನಿರ್ವಹಿಸುತ್ತಿದ್ದೇವೆ. ನಾವು ಜನರಿಗೆ ಆಶಾಕಿರಣವನ್ನು ನೀಡಿದ್ದೇವೆ ಮತ್ತು ಅವರ ಮಾನವ ಘನತೆಯನ್ನು ಮರುಸ್ಥಾಪಿಸಿದ್ದೇವೆ.”

ಶಿಕ್ಷಣ ಮತ್ತು ರಕ್ಷಣೆ: ಮುಂದಿನ ಪೀಳಿಗೆಗೆ ಬೆಂಬಲ

ಕರುಣಾ ಸಹೋದರಿಯರು ಶಿಕ್ಷಣ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಹಾನಿಕಾರಕ ಸಾಂಸ್ಕೃತಿಕ ಆಚರಣೆಗಳನ್ನು ಎದುರಿಸುವುದರ ಜೊತೆಗೆ ಯುವಜನರನ್ನು ಸಬಲೀಕರಿಸಲು ಶ್ರಮಿಸುತ್ತಿದ್ದಾರೆ. “ಸ್ಥಳೀಯ ನಾಯಕರೊಂದಿಗೆ ಸಹಕರಿಸಿ, ನಾವು ಬಾಲಕಿಯರನ್ನು ಅಕಾಲಿಕ ಮತ್ತು ಬಲವಂತದ ವಿವಾಹಗಳಿಂದ ರಕ್ಷಿಸುತ್ತೇವೆ. ಹಿತೈಷಿಗಳ ಸಹಾಯದಿಂದ ಅವರ ಶಿಕ್ಷಣಕ್ಕೂ ಬೆಂಬಲ ನೀಡುತ್ತೇವೆ,” ಎಂದು ಸಹೋದರಿ ಮ್ಬುಲಿ ಹೇಳಿದರು. “ಅಲ್ಲದೆ, ನಾವು ‘ಕುರುಬರ ಶಾಲೆಗಳನ್ನು’ ನಡೆಸುತ್ತೇವೆ. ಹಗಲಿನಲ್ಲಿ ಜಾನುವಾರುಗಳನ್ನು ಮೇಯಿಸುವ ಹುಡುಗರು—ಮತ್ತು ಕೆಲವೊಮ್ಮೆ ಹುಡುಗಿಯರು ಕೂಡ—ಸಂಜೆ ವೇಳೆ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಶಿಕ್ಷಣದ ಮೂಲಕ ನಾವು ಸಮುದಾಯಗಳನ್ನು ಸಬಲೀಕರಿಸುತ್ತಿದ್ದೇವೆ.”

ಒಮ್ಮೆ ಕುರುಬ ಬಾಲಕನಾಗಿದ್ದ ಸಿಲ್ವೆಸ್ಟರ್ ಲೋಕುಟೊ, ಇಂದು ಲೋಕೋರಿ ಗ್ರೀನ್ ಉಪಕ್ರಮದ ಸಂಯೋಜಕರಾಗಿದ್ದಾರೆ. “ನಾನು ಕುರುಬರ ಶಾಲೆಗೆ ಸೇರಿದಾಗ, ಸಹೋದರಿಯರು ನನ್ನ ಶೈಕ್ಷಣಿಕ ಸಾಮರ್ಥ್ಯವನ್ನು ಗುರುತಿಸಿ, ವಿಶ್ವವಿದ್ಯಾನಿಲಯದವರೆಗೆ ನನ್ನ ಶಿಕ್ಷಣಕ್ಕೆ ಬೆಂಬಲ ನೀಡಿದರು,” ಎಂದು ಅವರು ಹೇಳಿದರು. “ಕರುಣಾ ಸಹೋದರಿಯರು ನನ್ನ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ನನ್ನ ಸಮುದಾಯವನ್ನು ಮೇಲಕ್ಕೆತ್ತಲು ಮತ್ತು ಅದಕ್ಕೆ ಮರಳಿ ಸೇವೆ ಸಲ್ಲಿಸಲು ನಾನು ಹಿಂದಿರುಗಿದ್ದೇನೆ.”

ತಮ್ಮ ಪ್ರೇರಣೆಯ ಕುರಿತು ಕೇಳಿದಾಗ ಅವರು ಹೀಗೆ ಹೇಳಿದರು: “ನನ್ನ ಜನರಿಗೆ ಸ್ಫೂರ್ತಿ ನೀಡಬೇಕು ಎಂಬ ಉತ್ಸಾಹ ಮತ್ತು ಬಯಕೆಯೇ ನನ್ನನ್ನು ಮುನ್ನಡೆಸುತ್ತಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಪರಿಸರವನ್ನು ಪುನರುಜ್ಜೀವನಗೊಳಿಸಲು, ಲೋಕೋರಿ ಗ್ರೀನ್ ಉಪಕ್ರಮವು ನಮ್ಮ ಸಮುದಾಯಗಳಾದ್ಯಂತ ವಿಸ್ತರಿಸಬೇಕು ಎಂಬುದು ನನ್ನ ಕನಸು. ಜೊತೆಗೆ, ಇಲ್ಲಿ ಜನರು ನೀರಿಗಾಗಿ ಬಹಳ ದೂರ ನಡೆಯಬೇಕಾಗಿರುವುದರಿಂದ, ಒಂದು ಕೊಳವೆಬಾವಿ (ಬೋರ್‌ವೆಲ್) ನಿರ್ಮಾಣವಾಗಲಿ ಎಂಬ ಆಶೆಯೂ ನನಗಿದೆ.”

ಕರುಣೆಯಲ್ಲಿ ಬೇರೂರಿರುವ ಒಂದು ಧ್ಯೇಯ

ಲೋಕೋರಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದ್ದರೂ, ನೀರಿನ ಕೊರತೆಯು ಇನ್ನೂ ಗಂಭೀರ ಸವಾಲಾಗಿ ಉಳಿದಿದೆ. “ಮಹಿಳೆಯರು ದಿನವಿಡೀ ಬಿಸಿಲಿನಡಿಯಲ್ಲಿ ನೀರಿಗಾಗಿ ಸರದಿಯಲ್ಲಿ ನಿಂತು, ದೂರದೂರಿಗೆ ನಡೆದು ಹೋಗಬೇಕಾಗುತ್ತದೆ. ಇದು ಅವರನ್ನು ವಿವಿಧ ಅಪಾಯಗಳಿಗೆ ಒಳಪಡಿಸುವುದರ ಜೊತೆಗೆ ಅವರ ಉತ್ಪಾದಕತೆಯನ್ನೂ ಕುಂಠಿತಗೊಳಿಸುತ್ತದೆ. ಇಂದು ಬೆಳಿಗ್ಗೆ ನಾನು ಮಹಿಳೆಯರನ್ನು, ‘ನೀವು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದೀರಿ?’ ಎಂದು ಕೇಳಿದೆ. ಅವರು ಒಂದೇ ಉತ್ತರ ನೀಡಿದರು: ‘ನೀರು’,” ಎಂದು ಸಹೋದರಿ ಮ್ಬುಲಿ ಕಳವಳಭರಿತ ಧ್ವನಿಯಲ್ಲಿ ಹೇಳಿದರು. “ಹತ್ತಿರದಲ್ಲೇ ಒಂದು ಕೊಳವೆಬಾವಿ ನಿರ್ಮಾಣವಾದರೆ, ಅದು ನೂರಾರು ಕುಟುಂಬಗಳ ಜೀವನವನ್ನು ಪರಿವರ್ತಿಸಬಲ್ಲದು.”

ಸಹೋದರಿ ಮ್ಬುಲಿ ಅವರ ಪಾಲಿಗೆ, ಈ ಕಾರ್ಯವು ಕೇವಲ ಒಂದು ಸೇವೆಯಲ್ಲ—ಅದು ಒಂದು ಕರೆಯಾಗಿದೆ. “ಕರುಣಾ ಸಹೋದರಿಯರ ಆತ್ಮಸ್ಫೂರ್ತಿಯು ನನಗೆ ಪ್ರೇರಣೆ ನೀಡುತ್ತದೆ. ಲೋಕೋರಿಯಲ್ಲಿ ಅದರ ಪರಿಣಾಮವನ್ನು ನಾನು ಸ್ಪಷ್ಟವಾಗಿ ಕಾಣುತ್ತಿದ್ದೇನೆ: ಮರಗಳು ಬೆಳೆಯುತ್ತಿವೆ, ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ಮತ್ತು ಜನರ ಜೀವನಗಳು ಪುನರುಜ್ಜೀವನಗೊಳ್ಳುತ್ತಿವೆ. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯುವ, ಎಚ್‌ಐವಿ ಇನ್ನು ಮುಂದೆ ಅಪಾಯವಾಗಿರದ ಮತ್ತು ಸಮುದಾಯಗಳು ತಮ್ಮನ್ನು ತಾವೇ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಭವಿಷ್ಯವೇ ನನ್ನ ಕನಸು. ಬದಲಾವಣೆಯನ್ನು ತರಲು ಸಾಧ್ಯವಿದೆ; ನಾವು ಕೇವಲ ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು.” ಲೋಕೋರಿಯಲ್ಲಿ ಕರುಣಾ ಸಹೋದರಿಯರ ಸೇವೆ, ದಯೆ, ಶಿಕ್ಷಣ, ಆರೋಗ್ಯ ಮತ್ತು ಮಾನವ ಘನತೆಯ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

16 ಜೂನ್ 2026, 08:39