ಹುಡುಕಿ

ರಷ್ಯಾ ಮತ್ತು ಕಜಕಿಸ್ತಾನದಲ್ಲಿ ರೇಚೆಲ್ಸ್ ವೈನ್ಯಾರ್ಡ್ ಕಾರ್ಯಕ್ರಮದ ಅಭಿವೃದ್ಧಿಗಾಗಿ ಒಗ್ಗೂಡಿರುವ ಭಕ್ತವಿಶ್ವಾಸಿಗಳು ಮತ್ತು ಧರ್ಮಗುರುಗಳು. ಚಿತ್ರ: ಎಸ್. ಖೊರೊಶಿಲೋವಾ ರಷ್ಯಾ ಮತ್ತು ಕಜಕಿಸ್ತಾನದಲ್ಲಿ ರೇಚೆಲ್ಸ್ ವೈನ್ಯಾರ್ಡ್ ಕಾರ್ಯಕ್ರಮದ ಅಭಿವೃದ್ಧಿಗಾಗಿ ಒಗ್ಗೂಡಿರುವ ಭಕ್ತವಿಶ್ವಾಸಿಗಳು ಮತ್ತು ಧರ್ಮಗುರುಗಳು. ಚಿತ್ರ: ಎಸ್. ಖೊರೊಶಿಲೋವಾ 

ಜೀವನದ ಪರವಾಗಿ ನಿಂತಿರುವ ರಷ್ಯಾ ಮತ್ತು ಕಜಕಿಸ್ತಾನದ ಭಕ್ತವಿಶ್ವಾಸಿಗಳು ಹಾಗೂ ಧರ್ಮಗುರುಗಳು

1920ರ ನವೆಂಬರ್ 18ರಂದು, ಸೋವಿಯತ್ ಒಕ್ಕೂಟವು ವಿನಂತಿಯ ಮೇರೆಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ರಾಷ್ಟ್ರವಾಯಿತು. ಜಾನ್‌ಸ್ಟನ್ ಆರ್ಕೈವ್ ಮಾಹಿತಿಯ ಪ್ರಕಾರ, ಸೋವಿಯತ್ ಆಡಳಿತದ 70 ವರ್ಷಗಳ ಅವಧಿಯಲ್ಲಿ 26 ಕೋಟಿಗಿಂತಲೂ ಹೆಚ್ಚು ಗರ್ಭಪಾತಗಳು ನಡೆದಿದ್ದವು. ಈ ಪ್ರಕ್ರಿಯೆಯ ವ್ಯಾಪಕ ಕಾನೂನುಬದ್ಧತೆ ಮತ್ತು ಸುಲಭ ಲಭ್ಯತೆಯು ಸಮಾಜದಲ್ಲಿ “ಗರ್ಭಪಾತ ಸಂಸ್ಕೃತಿ” ಎಂದು ಕರೆಯಲ್ಪಡುವ ಮನೋಭಾವ ಬೆಳೆಯಲು ಕಾರಣವಾಯಿತು.

ಲೇಖಕರು: ಸಹೋದರಿ ವಿಯೆರಾ (ಎಲೆನಾ) ಇಸಾಚೆಂಕೊ, SMCB

“ಸೋವಿಯತ್ ಯುಗದಲ್ಲಿ, ಗರ್ಭಪಾತವನ್ನು ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಅದು ಇಡೀ ಕುಟುಂಬದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಮಾನಸಿಕ ಸಮಸ್ಯೆಗಳು, ಭಾವನಾತ್ಮಕ ದೂರಾವಸ್ಥೆ ಮತ್ತು ಹಿಂಸಾಚಾರಕ್ಕೂ ಕಾರಣವಾಗುತ್ತದೆ. ಆದ್ದರಿಂದ ಇಂದಿನ ಸೋವಿಯತ್ ನಂತರದ ಜಗತ್ತಿನಲ್ಲಿ, ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಗರ್ಭಪಾತದ ನಂತರದ ಆಘಾತದ ಪರಿಣಾಮಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿತರಾಗಿದ್ದಾರೆ ಎಂದು ನಾನು ನಂಬುತ್ತೇನೆ” ಎಂದು ಮನೋವಿಜ್ಞಾನಿ ಇರಿನಾ ಮಾಲ್ಟ್ಸೇವಾ ವಿವರಿಸುತ್ತಾರೆ.

ರಷ್ಯಾದಲ್ಲಿ ಗರ್ಭಪಾತದ ಪರಿಣಾಮಗಳ ಕುರಿತು ಸಾರ್ವಜನಿಕ ಚರ್ಚೆಗಳು 1990ರ ದಶಕದ ಅಂತ್ಯದ ವೇಳೆಗೆ ಆರಂಭವಾದವು. ಆದರೆ ಆ ಸಂವಾದವು ಮುಖ್ಯವಾಗಿ ಧಾರ್ಮಿಕ ಮತ್ತು ಮನೋವೈಜ್ಞಾನಿಕ ವಲಯಗಳಲ್ಲಿಯೇ ಸೀಮಿತವಾಗಿತ್ತು.

ಸುಮಾರು ಎರಡು ದಶಕಗಳ ನಂತರ ಮೊದಲ ಕಾನೂನು ಕ್ರಮಗಳು ಜಾರಿಗೆ ಬಂದವು. ಉದಾಹರಣೆಗೆ, 2011ರಲ್ಲಿ ಕಡ್ಡಾಯ “ಮೌನದ ವಾರ”ವನ್ನು ಪರಿಚಯಿಸಲಾಯಿತು. ಇದು ಗರ್ಭಪಾತಕ್ಕೂ ಮುನ್ನ ಮಹಿಳೆಯರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಅವಕಾಶ ನೀಡುವ ಕಡ್ಡಾಯ ಕಾಯುವ ಅವಧಿಯಾಗಿದೆ.

ಆಘಾತದಿಂದ ಆಧ್ಯಾತ್ಮಿಕ ಗುಣಮುಖತೆ

2000ರ ದಶಕದ ಆರಂಭದಿಂದ, ವಿವಿಧ ಕಥೋಲಿಕ ಸಮುದಾಯಗಳು “ರೇಚೆಲ್ಸ್ ವೈನ್ಯಾರ್ಡ್” ಶಿಬಿರಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿವೆ. ಗರ್ಭಪಾತದ ಆಘಾತದಿಂದ ಆಧ್ಯಾತ್ಮಿಕ ಗುಣಮುಖತೆಯನ್ನು ಪಡೆಯುವ ಈ ಮಾರ್ಗವನ್ನು ಅಮೆರಿಕದ ಮನೋವಿಜ್ಞಾನಿ ಥೆರೇಸಾ ಬರ್ಕ್ ಅಭಿವೃದ್ಧಿಪಡಿಸಿದರು. ಆಳವಾದ ವೈಯಕ್ತಿಕ ದುಃಖಾಭಿವ್ಯಕ್ತಿ ಮತ್ತು ಬೆಂಬಲದ ವಾತಾವರಣದಲ್ಲಿ ದೇವರ ಕರುಣೆಯನ್ನು ಅನುಭವಿಸುವುದರ ಮೂಲಕ ಈ ಕಾರ್ಯಕ್ರಮ ನಡೆಯುತ್ತದೆ.

ರಷ್ಯಾ ಮತ್ತು ಕಜಕಿಸ್ತಾನದಲ್ಲಿ, ಜೀವನದ ರಕ್ಷಣೆಯನ್ನು ತಮ್ಮ ಜೀವನದ ಕರೆಯಾಗಿ ಸ್ವೀಕರಿಸಿದ ಧರ್ಮಗುರುಗಳು ಮತ್ತು ಭಕ್ತವಿಶ್ವಾಸಿಗಳ ಒಗ್ಗಟ್ಟಿನ ಪ್ರಯತ್ನದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ಬೆಳೆಯುತ್ತಿದೆ.

“ನಾನು ಜೀವನವನ್ನು ರಕ್ಷಿಸುವೆನೆಂದು ವಾಗ್ದಾನ ಮಾಡುತ್ತೇನೆ”

ಇರಿನಾ ಮಾಲ್ಟ್ಸೇವಾ ಅವರಿಗೆ ಜೀವಪರ ಸೇವೆಯ ಹಾದಿ ಮಾಸ್ಕೋದ ಪ್ರಧಾನ ದೇವಾಲಯದಲ್ಲಿ ಮನೋವಿಜ್ಞಾನಿ ಆಂದ್ರೇಜ್ ವಿಂಕ್ಲರ್ ನಡೆಸಿದ ಒಂದು ವಿಚಾರ ಸಂಕಿರಣದಿಂದ ಆರಂಭವಾಯಿತು.

“ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನ ಬಳಿ ಹಣ ಇರಲಿಲ್ಲ, ನಾನು ಸಹಾಯಕ ಗುರುಗಳಿಗೆ ಕರೆ ಮಾಡಿ ನನ್ನ ಪರಿಸ್ಥಿತಿಯನ್ನು ವಿವರಿಸಿದಾಗ, ಅವರು ‘ಜೀವನವನ್ನು ರಕ್ಷಿಸಲು ನಿನ್ನನ್ನು ಸಮರ್ಪಿಸಿಕೊಳ್ಳುವೆ ಎಂದು ನನಗೆ ವಾಗ್ದಾನ ಮಾಡು’ ಎಂದು ಹೇಳಿದರು. ನಾನು ಆ ವಾಗ್ದಾನ ಮಾಡಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಭಕ್ತವಿಶ್ವಾಸಿಗಳ ಮತ್ತು ಧರ್ಮಗುರುಗಳ ಸಾಮೂಹಿಕ ಪ್ರಯತ್ನ

2018ರಲ್ಲಿ, ರಷ್ಯಾದ ದೂರ ಪೂರ್ವ ಪ್ರದೇಶದಲ್ಲಿ ಸಹೋದರಿ ಎಂ. ಸ್ಟೆಲ್ಲಾ ವಿಟ್ಟರ್, CJD ಅವರಿಂದ ಪುನಃ ಆರಂಭಿಸಲ್ಪಟ್ಟ ರೇಚೆಲ್ಸ್ ವೈನ್ಯಾರ್ಡ್ ಶಿಬಿರದಲ್ಲಿ ಇರಿನಾ ಭಾಗವಹಿಸಿದರು. ಆ ಭೇಟಿಯು, ಜೀವನದ ರಕ್ಷಣೆಯನ್ನು ತಮ್ಮ ನಿಜವಾದ ಕರೆಯೆಂದು ಗುರುತಿಸಿದ ಭಕ್ತವಿಶ್ವಾಸಿಗಳು ಮತ್ತು ಧರ್ಮಗುರುಗಳ ನಡುವಿನ ಸಹಕಾರದ ಆರಂಭವಾಯಿತು. ಇಂದು ರಷ್ಯಾ ಮತ್ತು ಕಜಕಿಸ್ತಾನದಲ್ಲಿ ಆರು ತಂಡಗಳು ಕಾರ್ಯನಿರ್ವಹಿಸುತ್ತಿವೆ.

“ಈ ದೇಶಗಳಲ್ಲಿ ‘ರೇಚೆಲ್ಸ್ ವೈನ್ಯಾರ್ಡ್’ ಕಾರ್ಯಕ್ರಮಗಳಿಗಾಗಿ ಮಠಗಳು ಮತ್ತು ಧರ್ಮಕ್ಷೇತ್ರ ನಿವಾಸಗಳನ್ನು ಬಳಸಲಾಯಿತು, ಇದರಿಂದ ಅನೇಕ ವ್ಯವಸ್ಥಾಪನಾ ಸಮಸ್ಯೆಗಳು ಪರಿಹಾರವಾದವು. ಕನ್ಯಾಸ್ತ್ರೀಯರು ವಿಶ್ವಾಸಿಗಳನ್ನು ಹಾಗೂ ಅವರ ಜೀವನ ಕಥೆಗಳನ್ನು ಚೆನ್ನಾಗಿ ತಿಳಿದಿರುತ್ತಾರೆ. ಅವರು ಜನರನ್ನು ಶಿಬಿರಗಳಿಗೆ ಆಹ್ವಾನಿಸಿ ಆಧ್ಯಾತ್ಮಿಕ ಬೆಂಬಲ ನೀಡುತ್ತಾರೆ” ಎಂದು ಸಹೋದರಿ ಸ್ಟೆಲ್ಲಾ ಹೇಳುತ್ತಾರೆ.

ಪ್ರಾರ್ಥನೆಯ ಬೆಂಬಲ

“ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯಲ್ಲಿ ವೃತ್ತಿಪರರಾಗಿದ್ದೇವೆ,” ಎಂದು ಸೇಂಟ್ ಪೀಟರ್ಸ್‌ಬರ್ಗ್ ತಂಡದ ಸದಸ್ಯರಾದ ಸಹೋದರಿ ಅನ್ನಾ ಜಖರೋವಾ, FMM ಹೇಳುತ್ತಾರೆ.

“ನಮ್ಮ ತಂಡದಲ್ಲಿ ಭಕ್ತವಿಶ್ವಾಸಿಯಾದ  ನತಾಲಿಯಾ ಪ್ರೊಸ್ಕುರಿನಾ ಸಮಾಲೋಚನಾ ಮನೋವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕನ್ಯಾಸ್ತ್ರೀಯರಿಂದ ಮುಖ್ಯವಾಗಿ ನಿರೀಕ್ಷಿಸಲ್ಪಡುವುದು ಪ್ರಾರ್ಥನೆ ಎಂಬುದನ್ನು ಅವರು ಆಗಾಗ ಹೇಳುತ್ತಾರೆ.” ಕಾರ್ಮೆಲೈಟ್ ಮಠಗಳು ರೇಚೆಲ್ಸ್ ವೈನ್ಯಾರ್ಡ್ ಸದಸ್ಯರಿಗೆ ವಿಶೇಷ ಪ್ರಾರ್ಥನಾ ಕೋಟೆಯಾಗಿ ಕಾರ್ಯನಿರ್ವಹಿಸುತ್ತಿವೆ.

“ರಷ್ಯಾ ಅಥವಾ ಕಜಕಿಸ್ತಾನದಲ್ಲಿ ಯಾವಾಗ ಶಿಬಿರ ನಡೆಯುತ್ತದೆ ಎಂಬುದು ನಮಗೆ ಯಾವಾಗಲೂ ತಿಳಿದಿರುತ್ತದೆ,” ಎಂದು ಸಹೋದರಿ ಎಂ. ಐಡಾ ಖಾನ್, OCD ಹೇಳುತ್ತಾರೆ. “ನಾವು ಅವರಿಗೆ ಪ್ರಾರ್ಥನೆಯ ಮೂಲಕ ಬೆಂಬಲ ನೀಡುತ್ತೇವೆ. ನಮ್ಮ ಸಮುದಾಯದ ಮೂವರು ಕನ್ಯಾಸ್ತ್ರೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅದು ನಮಗೆ ವಿಶಿಷ್ಟ ಮತ್ತು ಆಳವಾದ ಅನುಭವವಾಗಿತ್ತು.”

“ನಮ್ಮೆಲ್ಲರಿಗೂ ಸೌಖ್ಯ ಬೇಕಾಗಿದೆ”

ಪರಸ್ಪರರ ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ಪ್ರಯಾಣ ಯಾವಾಗಲೂ ಸುಲಭವಾಗಿರಲಿಲ್ಲ. “ನನ್ನ ನೋವು ಮತ್ತು ನನ್ನ ಗರ್ಭಪಾತಗಳ ಅನುಭವಗಳೊಂದಿಗೆ ನಾನು ವೈನ್ಯಾರ್ಡ್‌ಗೆ ಬಂದೆ,” ಎಂದು ಕಜಕಿಸ್ತಾನದ ಕರಗಾಂಡಾದ ಸ್ವಯಂಸೇವಕಿ ವಿಕ್ಟೋರಿಯಾ ಇಲಿನ್ಸ್ಕಾಯಾ ಹೇಳುತ್ತಾರೆ.

“ನನ್ನ ಗುಂಪಿನಲ್ಲಿ ಒಬ್ಬ ಯಾಜಕ ಮತ್ತು ಕೆಲವು ಕನ್ಯಾಸ್ತ್ರೀಯರು ಇದ್ದರು. ‘ಇವರು ಇಲ್ಲಿ ಯಾಕೆ ಬಂದಿದ್ದಾರೆ? ಇವರಿಗೆ ಗರ್ಭಪಾತವಾಗಿಲ್ಲವಲ್ಲ’ ಎಂದು ನಾನು ವಿರೋಧಿಸಿದೆ. ಆದರೆ ನನ್ನ ನೋವನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಮತ್ತು ಇತರರ ಕಣ್ಣೀರು ನೋಡಿದಾಗ, ನಮ್ಮೆಲ್ಲರಿಗೂ ಎಷ್ಟೊಂದು ಗುಣಮುಖತೆ ಬೇಕಾಗಿದೆ ಎಂಬುದು ನನಗೆ ಅರ್ಥವಾಯಿತು.” ತಂಡದ ಪ್ರತಿಯೊಬ್ಬ ಸದಸ್ಯರೂ ಈ ಅನುಭವವನ್ನು ಕ್ರಿಸ್ತನ ಯಾತನಾಮಯ ದೇಹದಲ್ಲಿ ಪಾಲುಗಾರರಾಗುವಿಕೆಯಾಗಿ ವಿವರಿಸುತ್ತಾರೆ.

ಕೊನೆಗೂ ಹರಿಯಲು ಅವಕಾಶ ಪಡೆದ ಕಣ್ಣೀರು

ಈ ತಂಡಗಳ ಕಾರ್ಯವು ಶಿಬಿರಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಜೀವನದ ರಕ್ಷಣೆಗೆ ಸಮರ್ಪಿತವಾದ ಹೊಸ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಆರಂಭಿಸಿದ್ದಾರೆ: ಜನಿಸದ ಮಕ್ಕಳಿಗಾಗಿ ಆಧ್ಯಾತ್ಮಿಕ ದತ್ತು ಸ್ವೀಕಾರ, ತಪಸ್ಸುಕಾಲದಲ್ಲಿ ಜನಿಸದ ಮಕ್ಕಳಿಗಾಗಿ ಶಿಲುಬೆಯ ಮಾರ್ಗದ ಪ್ರಾರ್ಥನೆ, ಮತ್ತು ಗರ್ಭಪಾತ ಕಾನೂನುಬದ್ಧಗೊಂಡ ದಿನದ ವಾರ್ಷಿಕೋತ್ಸವದಂದು ನಡೆಯುವ ರಾತ್ರಿಯಿಡೀ ಜಾಗರಣೆಗಳು.

“ಅನೇಕ ಜನರಿಗೆ, ಈ ರೀತಿಯ ಪ್ರಾರ್ಥನೆಗಳು ಅವರು ಕೊನೆಗೂ ಸುರಿಸಲು ಅವಕಾಶ ಪಡೆದ ಕಣ್ಣೀರಾಗುತ್ತವೆ. ಗರ್ಭಪಾತದ ನಂತರ ಒಂದು ಮೌನವು ಕುಟುಂಬದ ಮೇಲೆ ಆವರಿಸುತ್ತದೆ. ರೇಚೆಲ್ಸ್ ವೈನ್ಯಾರ್ಡ್ ಶಿಬಿರದ ವೇಳೆ ಒಬ್ಬ ವ್ಯಕ್ತಿ ನನ್ನ ಬಳಿ ಬಂದು, ‘ನಾನು ಅಪಾರ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಹೃದಯ ಸಿಡಿಯುವಂತಾಗಿದೆ. ನನಗೆ ಏನಾಗುತ್ತಿದೆ?’ ಎಂದು ಕೇಳಿದ್ದನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ನಾನು ಅವರಿಗೆ, ‘ಇದು ಗರ್ಭಪಾತದಿಂದ ಕಳೆದುಹೋದ ಮಕ್ಕಳಿಗಾಗಿ ನೀನು ಎಂದಿಗೂ ಅನುಭವಿಸಲು ಅವಕಾಶ ಕೊಡದಿದ್ದ ನೋವು’ ಎಂದು ಹೇಳಿದೆ. ಅವರು ತಮ್ಮ ಪತ್ನಿಯೊಂದಿಗೆ ಶಿಬಿರದಲ್ಲಿ ಭಾಗವಹಿಸಿದ್ದರು. ಮೂರನೇ ದಿನ, ಆಧ್ಯಾತ್ಮಿಕ ವ್ಯಾಯಾಮಗಳ ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ತಮ್ಮ ಪತ್ನಿಯ ಪಕ್ಕದಲ್ಲಿ ಕುಳಿತು ಅವಳ ಕೈ ಹಿಡಿದರು. ಇಬ್ಬರೂ ಒಟ್ಟಿಗೆ ಅತ್ತರು. ಆ ಕಣ್ಣೀರು ಅವರ ಜೀವನವನ್ನು ಪರಿವರ್ತಿಸಿತು” ಎಂದು ಇರಿನಾ ಮಾಲ್ಟ್ಸೇವಾ ಸಾಕ್ಷ್ಯ ನೀಡುತ್ತಾರೆ.

“ಗರ್ಭಪಾತ ಸಂಸ್ಕೃತಿ”ಯ ವಿರುದ್ಧ ಹೋರಾಟ

ರಷ್ಯಾ ಮತ್ತು ಕಜಕಿಸ್ತಾನದ ಆರೋಗ್ಯ ಸಚಿವಾಲಯಗಳ ಅಂಕಿಅಂಶಗಳ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಗರ್ಭಪಾತಗಳ ಸಂಖ್ಯೆ ಕಡಿಮೆಯಾಗಿದೆ. ಆದಾಗ್ಯೂ, “ಗರ್ಭಪಾತ ಸಂಸ್ಕೃತಿ”ಯನ್ನು ಮೀರುವುದು ದೀರ್ಘ ಪಯಣವಾಗಿದೆ—ಭಕ್ತವಿಶ್ವಾಸಿಗಳು ಮತ್ತು ಧರ್ಮಗುರುಗಳು ಕೈಜೋಡಿಸಿ ಮುಂದುವರಿಸಬೇಕಾದ ಪಯಣವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

23 ಜೂನ್ 2026, 19:50