ಹುಡುಕಿ

 ಭವ್ಯ ಮಾನವೀಯತೆ(Magnifica humanitas) ಭವ್ಯ ಮಾನವೀಯತೆ(Magnifica humanitas)  (AFP or licensors)

ಮೈಕ್ರೋಸಾಫ್ಟ್ AI ನಿರ್ದೇಶಕ: ಭವ್ಯ ಮಾನವೀಯತೆ(Magnifica humanitas) ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ

ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಭವ್ಯ ಮಾನವೀಯತೆ(Magnifica humanitas) ವಿಶ್ವಪತ್ರಿಕೆಯು, ಮಾನವರು ಅತ್ಯಂತ ವೈಯಕ್ತಿಕ ಮಟ್ಟದಲ್ಲಿ ಸಂವಹನ ನಡೆಸುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ ಸಂದರ್ಭದಲ್ಲಿ, AI ಅಭಿವೃದ್ಧಿಪರರಿಗೆ ಅಮೂಲ್ಯವಾದ ಮಾನವಶಾಸ್ತ್ರೀಯ ಕೊಡುಗೆಯನ್ನು ಒದಗಿಸುತ್ತದೆ ಎಂದು ಮೈಕ್ರೋಸಾಫ್ಟ್‌ನ AI ಮತ್ತು ವೆಂಚರ್ ಇಕೋಸಿಸ್ಟಮ್ಸ್ ವಿಭಾಗದ ನಿರ್ದೇಶಕರಾದ ಟೇಲರ್ ಬ್ಲ್ಯಾಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೇಖಕರು: ಡೆವಿನ್ ವಾಟ್ಕಿನ್ಸ್

ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರನ್ನು ನೇರವಾಗಿ ಉದ್ದೇಶಿಸಿರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಾದ ಭಾರೀ ಪ್ರಗತಿಯು, ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸುತ್ತಿರುವ ಕಂಪನಿಗಳೊಂದಿಗೆ ಧರ್ಮಸಭೆಯು ಹೆಚ್ಚು ಆಳವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಈ ಬೆಳವಣಿಗೆಯು, AI ಅಭಿವೃದ್ಧಿಯ ದಿಕ್ಕನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ತಂತ್ರಜ್ಞಾನ ಕಂಪನಿಗಳೊಂದಿಗೆ ಧರ್ಮಸಭೆಯು ನಡೆಸುತ್ತಿರುವ ಸಂವಾದದ ಕುರಿತು ಟೀಕೆಗಳಿಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಧರ್ಮಸಭೆಯೊಂದಿಗೆ ಸಂವಾದ ನಡೆಸುವವರ ಬಗ್ಗೆ ತಂತ್ರಜ್ಞಾನ ಕ್ಷೇತ್ರದೊಳಗೆಯೂ ಟೀಕೆಗಳು ವ್ಯಕ್ತವಾಗಿವೆ.

ಆದರೆ ಧರ್ಮ ಮತ್ತು ದೇವಶಾಸ್ತ್ರವನ್ನು “ಐಚ್ಛಿಕ ಕ್ಷೇತ್ರ”ಕ್ಕೆ ತಳ್ಳುವ ಮೂಲಕ, ಅಭಿವೃದ್ಧಿಪರರು ತಮ್ಮ ಬಳಕೆದಾರರು ಹೇಗೆ ಯೋಚಿಸುತ್ತಾರೆ ಎಂಬುದನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಟೇಲರ್ ಬ್ಲ್ಯಾಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಲ್ಯಾಕ್ ಅವರು ಮೈಕ್ರೋಸಾಫ್ಟ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಕಚೇರಿಯಲ್ಲಿ AI ಮತ್ತು ವೆಂಚರ್ ಇಕೋಸಿಸ್ಟಮ್ಸ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, ಅಮೆರಿಕದ ಕಥೋಲಿಕ ವಿಶ್ವವಿದ್ಯಾಲಯದಲ್ಲಿರುವ ಲಿಯೋನ್ AI ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಎರಡೂ ಜವಾಬ್ದಾರಿಗಳ ಜೊತೆಗೆ, ಫೀನಿಕ್ಸ್‌ನ ಬೈಜಾಂಟೈನ್ ಕಥೋಲಿಕ ಎಪಾರ್ಕಿಗಾಗಿ ಡೀಕನ್ ಅಧ್ಯಯನಗಳನ್ನು ಮಾಡುತ್ತಿರುವ ಅವರು, AIಯ ಭವಿಷ್ಯದ ಕುರಿತು ತಾತ್ವಿಕವಾಗಿ ಚಿಂತಿಸುವುದಕ್ಕೂ, AI ಸ್ಟಾರ್ಟ್‌ಅಪ್‌ಗಳಲ್ಲಿ ಮೈಕ್ರೋಸಾಫ್ಟ್‌ನ ಬಂಡವಾಳ ಹೂಡಿಕೆಗಳಿಗೆ ಮಾರ್ಗದರ್ಶನ ನೀಡುವುದಕ್ಕೂ ಅವಕಾಶ ಪಡೆದಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿದ ಬ್ಲ್ಯಾಕ್, ತಂತ್ರಜ್ಞಾನವು ತನ್ನದೇ ಆದ ಮಾನವಶಾಸ್ತ್ರ ಅಥವಾ ಮಾನವ ವ್ಯಕ್ತಿಯ ಕುರಿತು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿಲ್ಲ ಎಂದು ಸೂಚಿಸಿದರು. ಬದಲಾಗಿ, ಜನರೇಟಿವ್ ಅಥವಾ ಏಜೆಂಟಿಕ್ AI ಉತ್ಪನ್ನಗಳು ಸಂಭವನೀಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಅವುಗಳಿಗೆ ನೀಡಲಾದ ತರಬೇತಿ ದತ್ತಾಂಶ ಮತ್ತು ಬಳಕೆದಾರರ ಸೂಚನೆಗಳ ಆಧಾರದ ಮೇಲೆ ಮುಂದಿನ ಪದ ಅಥವಾ ಮುಂದಿನ ಕ್ರಿಯೆಯನ್ನು ಊಹಿಸುತ್ತವೆ. ಇದರ ಪರಿಣಾಮವಾಗಿ, ಬಳಕೆದಾರರು ತಮ್ಮ ಅನುಭವಗಳನ್ನು ಸಹ-ಸೃಷ್ಟಿಸುತ್ತಾರೆ. ಆದ್ದರಿಂದ ಉತ್ಪನ್ನಗಳು ಬಳಕೆದಾರರ ಚಿಂತನಾ ವಿಧಾನವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ನೆಲೆಯ ಮೇಲೆ ರೂಪುಗೊಳ್ಳಬೇಕು.

ಈ ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾದರಿಗೆ ಪ್ರತಿಕ್ರಿಯೆಯಾಗಿ, 2025ರ ಜನವರಿಯಲ್ಲಿ ವಿಶ್ವಾಸ ಸಿದ್ಧಾಂತ ವಿಭಾಗ ಮತ್ತು ಸಂಸ್ಕೃತಿ ಹಾಗೂ ಶಿಕ್ಷಣ ವಿಭಾಗವು “Antiqua et Nova: ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆಯ ನಡುವಿನ ಸಂಬಂಧದ ಕುರಿತು ಟಿಪ್ಪಣಿ” ಎಂಬ ದಸ್ತಾವೇಜನ್ನು ಪ್ರಕಟಿಸಿತು. ನಂತರ 2026ರ ಮೇ 25ರಂದು, ಪೂಜ್ಯ ಜಗದ್ಗುರು 14ನೇ ಲಿಯೋ ಅವರು ತಮ್ಮ ಮೊದಲ ವಿಶ್ವಪತ್ರಿಕೆ Magnifica humanitas ಅನ್ನು ಪ್ರಕಟಿಸುವ ಮೂಲಕ ತಮ್ಮ ಸ್ಥಾನೀಯ ಬೋಧನಾ ಅಧಿಕಾರವನ್ನು ಚಲಾಯಿಸಿದರು. ಈ ಎರಡೂ ದಸ್ತಾವೇಜುಗಳು, ಮಾನವ ವ್ಯಕ್ತಿಯ ಕುರಿತ ಕಥೋಲಿಕ ಧರ್ಮಸಭೆಯ ಆಳವಾದ ಅನುಭವ ಮತ್ತು ತಿಳುವಳಿಕೆಯನ್ನು AI ಎಂಬ ಉದಯೋನ್ಮುಖ ತಂತ್ರಜ್ಞಾನಕ್ಕೆ ಅನ್ವಯಿಸಲು ಪ್ರಯತ್ನಿಸುತ್ತವೆ.

AI ಚಾಟ್‌ಬಾಟ್ ನೀಡುವ ಮಾಹಿತಿಯನ್ನು ಪರಿಶೀಲಿಸದೆ ಸ್ವೀಕರಿಸಿ, ವಿಮರ್ಶಾತ್ಮಕ ಚಿಂತನೆಯನ್ನು ಬದಿಗೊತ್ತಿದರೆ, AI ತನ್ನ ಬಳಕೆದಾರರ ವ್ಯಕ್ತಿತ್ವದ ಬೆಳವಣಿಗೆಯ ಮೇಲೆಯೂ ಪ್ರಭಾವ ಬೀರಬಹುದು ಎಂಬುದನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರ ವಿಶ್ವಪತ್ರಿಕೆ ಗುರುತಿಸುತ್ತದೆ ಎಂದು ಬ್ಲ್ಯಾಕ್ ಹೇಳಿದರು. ಈ ಅಪಾಯವು ವಿಶೇಷವಾಗಿ ಮಕ್ಕಳಿಗೆ ಸಂಬಂಧಿಸಿದೆ. ಏಕೆಂದರೆ ಅವರ ಮೆದುಳಿನ ಪ್ರೀಫ್ರಂಟಲ್ ಲೋಬ್ ಸುಮಾರು ಇಪ್ಪತ್ತರ ಮಧ್ಯಭಾಗದವರೆಗೆ ಬೆಳವಣಿಗೆಯನ್ನು ಮುಂದುವರಿಸುತ್ತದೆ ಎಂದು ಅವರು ವಿವರಿಸಿದರು.

ಇದನ್ನು ವಿವರಿಸಲು, ಒಬ್ಬ ಪೋಷಕರು ತಮ್ಮ ಮಗುವನ್ನು ನೈತಿಕವಾಗಿ ಸಂಶಯಾಸ್ಪದ ವ್ಯಕ್ತಿಯ ಬಳಿ ಬಿಟ್ಟು ಹೋಗುವ ಉದಾಹರಣೆಯನ್ನು ಅವರು ನೀಡಿದರು. ಆ ವ್ಯಕ್ತಿಗೆ ಅಪಾರ ಜ್ಞಾನ ಇರಬಹುದು, ಆದರೆ ದುರುದ್ದೇಶವಿಲ್ಲದಿದ್ದರೂ ಸಹ, ಪೋಷಕರು ತಮ್ಮ ಮಗುವು ತಿಳಿಯಬಾರದೆಂದು ಬಯಸುವ ಮಾಹಿತಿಯನ್ನು ನೀಡುವ ಸಾಧ್ಯತೆಯೂ ಇದೆ. ಸಹಾಯ ಮಾಡುವ ಉದ್ದೇಶದಿಂದ AI ನಮ್ಮ ಧ್ವನಿಯನ್ನು ಅಥವಾ ನಮ್ಮ ಮುಖವನ್ನು ಸಹ ಬದಲಾಯಿಸಬಹುದು. ಕೆಲವೊಮ್ಮೆ ಅದು ನಮ್ಮ ನಿಜವಾದ ವ್ಯಕ್ತಿತ್ವವನ್ನು ಬದಿಗೊತ್ತಿ, ಒಂದು ಆದರ್ಶ ರೂಪಕ್ಕೆ ಆದ್ಯತೆ ನೀಡಬಹುದು.

“ನಾವು ಬಯಸಿದರೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಅದು ನಮ್ಮನ್ನು ರೂಪಿಸುತ್ತಿದೆ, ಆದರೆ ಮತ್ತೆ, ನಾವು ಮಕ್ಕಳಾಗಿದ್ದರೆ, ನಮ್ಮದೇ ಆದ ಸೃಜನಾತ್ಮಕ ಕೊಡುಗೆ, ನಮ್ಮ ಧ್ವನಿ ಮತ್ತು ಜಗತ್ತಿನಲ್ಲಿ ಇರುವ ನಮ್ಮದೇ ಆದ ವಿಧಾನವಿಲ್ಲದೆ, ಆ ರೂಪುಗೊಳಿಸುವಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ವಯಸ್ಕರು ಮಾಡುವಂತೆ ಮಕ್ಕಳು ಅದನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ.”

ಪ್ರಶ್ನೆ: ನೀವು ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತಾತ್ವಿಕ ಮಟ್ಟದಲ್ಲಿಯೂ ಹಾಗೂ ಮೈಕ್ರೋಸಾಫ್ಟ್‌ನೊಂದಿಗೆ ಹಣಕಾಸಿನ ಮಟ್ಟದಲ್ಲಿಯೂ ಆಳವಾಗಿ ತೊಡಗಿಸಿಕೊಂಡಿದ್ದೀರಿ. Magnifica humanitas ತಂತ್ರಜ್ಞಾನ ಕ್ಷೇತ್ರದಲ್ಲಿ AIಯ ನೈತಿಕ ಅಭಿವೃದ್ಧಿಗೆ ಹೇಗೆ ಮಾರ್ಗದರ್ಶನ ನೀಡಬಲ್ಲದು?

ಟೇಲರ್ ಬ್ಲ್ಯಾಕ್: ತಂತ್ರಜ್ಞಾನ ಕ್ಷೇತ್ರವು ಮಾನವ ವ್ಯಕ್ತಿಯ ಕುರಿತು ಉತ್ತಮ ತಿಳುವಳಿಕೆಯನ್ನು ಪಡೆಯುವ ಉದ್ದೇಶದಿಂದ ವಿವಿಧ ಧಾರ್ಮಿಕ ಸಂಪ್ರದಾಯಗಳತ್ತ ಮುಖಮಾಡಿರುವುದಕ್ಕೆ ಒಂದು ಪ್ರಮುಖ ಕಾರಣವಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಉತ್ಪಾದಕ ಅಥವಾಸ್ವಾಯತ್ತ(ಜನರೇಟಿವ್ ಅಥವಾ ಏಜೆಂಟಿಕ್) AI ಸ್ವರೂಪದ ಉತ್ಪನ್ನಗಳನ್ನು ನಿರ್ಮಿಸುವಾಗ, ಅವು ಸಂಭವನೀಯತೆಯ (probabilistic) ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಇದರ ಅರ್ಥವೆಂದರೆ, ನಮ್ಮ ಉತ್ಪನ್ನಗಳ ಬಳಕೆದಾರರು ಈಗ ನಾವು ನಿರ್ಮಿಸಿರುವ ವ್ಯವಸ್ಥೆಯೊಂದಿಗೆ ಸೇರಿ ತಮ್ಮ ಅನುಭವವನ್ನು ಸಹ-ಸೃಷ್ಟಿಸುತ್ತಿದ್ದಾರೆ.

ತಂತ್ರಜ್ಞಾನ ಉತ್ಪನ್ನಗಳ ಇತಿಹಾಸದಲ್ಲಿ ಇದು ಹೊಸ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ AIಗೂ ಮುನ್ನ, ನಾವು ನಿರ್ದಿಷ್ಟ ಫಲಿತಾಂಶವನ್ನು ನೀಡುವ ಉತ್ಪನ್ನಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು. ಬಳಕೆದಾರರು ನಮ್ಮ ಉತ್ಪನ್ನವನ್ನು ಬಳಸಿದಾಗ ಏನಾಗುತ್ತದೆ ಎಂಬುದು ನಮಗೆ ತಿಳಿದಿರುತ್ತಿತ್ತು. ಆದರೆ ಈಗ, ಬಳಕೆದಾರರು ಏನನ್ನು ಸಹ-ಸೃಷ್ಟಿಸಬಲ್ಲರು ಎಂಬುದರ ಕುರಿತು ನಮಗೆ ಅಷ್ಟೊಂದು ಸ್ಪಷ್ಟತೆ ಇರುವುದಿಲ್ಲ. ಅದರ ಪರಿಣಾಮವಾಗಿ, ಅವರು ನಮ್ಮ ಉತ್ಪನ್ನಗಳನ್ನು ಬಳಸಿದಾಗ ಸಂಭವಿಸಬಹುದಾದ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು, ನಾವು ಬಳಕೆದಾರರನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ತಂತ್ರಜ್ಞಾನಕ್ಕೆ ತನ್ನದೇ ಆದ ಮಾನವಶಾಸ್ತ್ರವಿಲ್ಲ. ಅದು ಯಾವುದನ್ನೂ ಪ್ರತಿಪಾದಿಸುವುದಿಲ್ಲ. ಮಾನವಶಾಸ್ತ್ರದ ತಜ್ಞ ಎಂದು ಅದು ಹೇಳಿಕೊಳ್ಳುವುದಿಲ್ಲ. ಆದರೆ ಈಗ ನಾವು ಮಾನವ ವ್ಯಕ್ತಿಯ ಕುರಿತು ಹೆಚ್ಚು ಆಳವಾಗಿ ಪರಿಗಣಿಸಬೇಕಾಗಿದೆ. ಏಕೆಂದರೆ ಅದು ನಮ್ಮ ಉತ್ಪನ್ನಗಳನ್ನು ನಿರ್ಮಿಸುವ ವಿಧಾನ, ಅವುಗಳನ್ನು ಅಭಿವೃದ್ಧಿಪಡಿಸುವ ವಿಧಾನ ಮತ್ತು ಬಳಕೆದಾರರು ಅವುಗಳನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

ಇದರ ಮೂಲಕ ನಮ್ಮ ಬಳಕೆದಾರರು ಉತ್ತಮ ಅನುಭವವನ್ನು ಪಡೆಯಬಹುದು. ಪ್ರಾಮಾಣಿಕವಾಗಿ ಹೇಳುವುದಾದರೆ, ಅವರು ನಮ್ಮ ಉತ್ಪನ್ನಗಳೊಂದಿಗೆ ನಡೆಸುವ ಪರಸ್ಪರ ಕ್ರಿಯೆ ಮತ್ತು ಸಹ-ಸೃಜನಾತ್ಮಕ ಅನುಭವಗಳಲ್ಲಿ ಮೌಲ್ಯವನ್ನು ಕಂಡುಕೊಳ್ಳುವುದರಿಂದ, ಅವರನ್ನು ಬಳಕೆದಾರರಾಗಿ ಉಳಿಸಿಕೊಳ್ಳಲೂ ನಮಗೆ ಸಾಧ್ಯವಾಗುತ್ತದೆ.

ಪ್ರಶ್ನೆ: ಮೈಕ್ರೋಸಾಫ್ಟ್‌ನಲ್ಲಿ ಯಾವ ಸ್ಟಾರ್ಟ್‌ಅಪ್‌ಗಳ ಆಲೋಚನೆಗಳು ಮತ್ತು ವ್ಯವಹಾರ ಯೋಜನೆಗಳಿಗೆ ಹಣಕಾಸಿನ ಬೆಂಬಲ ದೊರೆಯಬೇಕು ಎಂಬುದನ್ನು ಆಯ್ಕೆ ಮಾಡುವುದು ನಿಮ್ಮ ಕೆಲಸ. ವಿಶ್ವಪತ್ರಿಕೆ ಹಾಗೂ ಧರ್ಮಸಭೆ ಮತ್ತು ಬಿಗ್ ಟೆಕ್ ನಡುವಿನ ಸಂಬಂಧವು ನಿಮ್ಮ ಸಹೋದ್ಯೋಗಿಗಳ ಹೂಡಿಕೆ ನಿರ್ಧಾರಗಳಿಗೆ ಹೇಗೆ ಮಾರ್ಗದರ್ಶನ ನೀಡಬಲ್ಲದು?

ಟೇಲರ್ ಬ್ಲ್ಯಾಕ್: ಇದು ಮತ್ತೊಮ್ಮೆ ಉತ್ಪನ್ನ-ಚಿಂತನೆಯ ಪ್ರಶ್ನೆಗೆ ಮರಳುತ್ತದೆ. ಒಂದು ಸ್ಟಾರ್ಟ್‌ಅಪ್ ಅಥವಾ ಉತ್ಪನ್ನವು AIಯನ್ನು ಬಳಸಿಕೊಂಡಿದ್ದರೆ, ಮತ್ತು ಮಾನವ ವ್ಯಕ್ತಿಯ ಕುರಿತು ಮೇಲ್ನೋಟದ ತಿಳುವಳಿಕೆಯನ್ನು ಮಾತ್ರ ಹೊಂದಿರುವ ಕಾರಣದಿಂದ ಅಸ್ತಿತ್ವದಲ್ಲೇ ಇಲ್ಲದ ಬಳಕೆದಾರನನ್ನು ಮನಸ್ಸಿನಲ್ಲಿಟ್ಟುಕೊಂಡು ಅದನ್ನು ವಿನ್ಯಾಸಗೊಳಿಸಿದ್ದರೆ, ಆ ಉತ್ಪನ್ನವು ಮಾರುಕಟ್ಟೆಯಲ್ಲಿ ಸಾಧಿಸಬಹುದಾದ ಯಶಸ್ಸನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಅದು ಮಾನವರು ಹೇಗೆ ಯೋಚಿಸುತ್ತಾರೆ ಮತ್ತು ಹೇಗೆ ನಿರ್ಣಯಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಗೌರವಿಸಿ ನಿರ್ಮಿತವಾಗಿದ್ದರೆ, ಅದರ ಯಶಸ್ಸಿನ ಸಾಧ್ಯತೆ ಹೆಚ್ಚಿರುತ್ತದೆ.

ಈ ರೀತಿಯ ಚಿಂತನೆಯ ಪರಿಣಾಮವಾಗಿ, ಮತ್ತು ವಿಶ್ವಪತ್ರಿಕೆಯು ಇದನ್ನು ವಿವರಿಸುವ ವಿಧಾನದ ಪರಿಣಾಮವಾಗಿ, ಮಾನವರು ವಾಸ್ತವವಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಉತ್ತಮವಾಗಿ ಗೌರವಿಸುವ ಸ್ಟಾರ್ಟ್‌ಅಪ್‌ಗಳು ಮತ್ತು ಉತ್ಪನ್ನಗಳ ಬಗ್ಗೆ ನಮಗೆ ವಿಶೇಷ ಆಸಕ್ತಿ ಇದೆ. ಏಕೆಂದರೆ ಅದರ ಫಲವಾಗಿ, ಆ ಸ್ಟಾರ್ಟ್‌ಅಪ್‌ಗಳ ಗ್ರಾಹಕರು ಹಾಗೂ ಬಿಗ್ ಟೆಕ್ ಕಂಪನಿಗಳ ಗ್ರಾಹಕರು ಆ ಉತ್ಪನ್ನಗಳನ್ನು ಬಳಸುವಾಗ ಉತ್ತಮ ಅನುಭವವನ್ನು ಪಡೆಯುತ್ತಾರೆ.

ಅದರ ಪರಿಣಾಮವಾಗಿ, ಒಂದು ಸ್ಟಾರ್ಟ್‌ಅಪ್ ಅಥವಾ ಉತ್ಪನ್ನವು ತನ್ನ ವಿನ್ಯಾಸ ವಿಧಾನವನ್ನು ಹೇಗೆ ರೂಪಿಸುತ್ತದೆ, ಜವಾಬ್ದಾರಿಯುತ AI ಕುರಿತು ಹೇಗೆ ಚಿಂತಿಸುತ್ತದೆ ಮತ್ತು ಈ AI ವ್ಯವಸ್ಥೆಗಳಿಗಾಗಿ ಸಂಪರ್ಕ ಸಾಧನಗಳು (interfaces) ಹಾಗೂ ಪರಸ್ಪರ ಕ್ರಿಯೆಗಳನ್ನು ಹೇಗೆ ನಿರ್ಮಿಸುತ್ತದೆ ಎಂಬುದು ನಮಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ AI ಮಾನವ ವ್ಯಕ್ತಿಯ ಚಿಂತನಾ ಪ್ರಕ್ರಿಯೆಯೊಳಗೆ ಇನ್ನಷ್ಟು ಆಳವಾಗಿ ಸಂಯೋಜಿತವಾಗುತ್ತಿದೆ. ಅದೇ ರೀತಿ, ಹೆಚ್ಚು ಏಜೆಂಟಿಕ್ ಸ್ವರೂಪದ ಸಂಪರ್ಕ ಸಾಧನಗಳ ಮೂಲಕ ವ್ಯಕ್ತಿಗಳು ಅಥವಾ ತಂಡಗಳು ಪರಸ್ಪರ ಸಂವಹನ ನಡೆಸುವ ವಿಧಾನಗಳೊಳಗೂ ಅದು ಇನ್ನಷ್ಟು ಆಳವಾಗಿ ಪ್ರವೇಶಿಸುತ್ತಿದೆ.

ಈ ಎರಡೂ ಪರಿಸ್ಥಿತಿಗಳು, ತಂತ್ರಜ್ಞಾನ ಕ್ಷೇತ್ರವು ಈವರೆಗೆ ಹೊಂದಿದ್ದಕ್ಕಿಂತ ಹೆಚ್ಚು ಆಳವಾದ ಮಾನವ ವ್ಯಕ್ತಿಯ ತಿಳುವಳಿಕೆಯನ್ನು ಪೂರ್ವಾಪೇಕ್ಷಿತವಾಗಿ ಬೇಡುತ್ತವೆ. ಏಕೆಂದರೆ ಈ ತಂತ್ರಜ್ಞಾನವು ಈಗ ಮಾನವ ವ್ಯಕ್ತಿಯ ಜೀವನದೊಂದಿಗೆ ಇನ್ನಷ್ಟು ಆಳವಾಗಿ ಸಂಯೋಜಿತವಾಗುತ್ತಿದೆ.

ಪ್ರಶ್ನೆ: ಅಮೆರಿಕದ ಕಥೋಲಿಕ ವಿಶ್ವವಿದ್ಯಾಲಯದ AI ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿಯೂ ಹಾಗೂ ಒಬ್ಬ ತಂದೆಯಾಗಿಯೂ, ಯುವಜನರಿಗೆ AI ಜೊತೆಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಕಲಿಸಲು Magnifica humanitas ಅನ್ನು ನೀವು ಹೇಗೆ ಬಳಸಲು ಆಶಿಸುತ್ತೀರಿ?

ಟೇಲರ್ ಬ್ಲ್ಯಾಕ್: ವಾಸ್ತವವಾಗಿ, ಈ ವಾರದ ಆರಂಭದಲ್ಲೇ ನಾನು ಸಿಯಾಟಲ್ ಪ್ರದೇಶದಲ್ಲಿರುವ ನನ್ನ ಮಕ್ಕಳ ಶಾಸ್ತ್ರೀಯ ವಿಧಾನವನ್ನು ಅನುಸರಿಸುವ ಕಥೋಲಿಕ ಶಾಲೆಯ ಹಲವಾರು ಪೋಷಕರಿಗೆ ಒಂದು ಉಪನ್ಯಾಸ ನೀಡುತ್ತಿದ್ದೆ. ನಾವು ಚರ್ಚಿಸಿದ ವಿಷಯಗಳಲ್ಲಿ ಒಂದೆಂದರೆ, ಮಕ್ಕಳಿಗಾಗಿ ಯಾವ ರೀತಿಯ ಪರದೆ ಆಧಾರಿತ ಸಂಪರ್ಕ ಸಾಧನಗಳು, ಸಾಮಾಜಿಕ ಮಾಧ್ಯಮ ಸಂಪರ್ಕ ಸಾಧನಗಳು ಮತ್ತು ಸಹಜವಾಗಿಯೇ AI ಸಂಪರ್ಕ ಸಾಧನಗಳನ್ನು ಬಳಸಬೇಕು ಎಂಬ ವಿಷಯದಲ್ಲಿ ವಿಶ್ವಪತ್ರಿಕೆಯು ನೀಡುವ ಎಚ್ಚರಿಕೆ. ವಿಶೇಷವಾಗಿ ಈ ಸ್ವಾಯತ್ತ AI ಮತ್ತು ಉತ್ಪಾದಕ AI ಸಂಪರ್ಕ ಸಾಧನಗಳನ್ನು ಬಳಸುವಾಗ ಹೆಚ್ಚಿನ ವಿವೇಚನೆಯ ಅಗತ್ಯವಿರುತ್ತದೆ. ಏಕೆಂದರೆ ಅವು ಹೇಳುವ ವಿಷಯವು ಸತ್ಯವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಇದಲ್ಲದೆ, ಇನ್ನೊಂದು ಚಿಂತೆಯೂ ಇದೆ. ಅದು, ಒಬ್ಬ ವ್ಯಕ್ತಿಯ ಸ್ವಂತ ಧ್ವನಿಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೊದಲು, ಅವನ ಧ್ವನಿಯನ್ನು ಬೇರೆ ಯಾವುದೋ ರೂಪಿಸುವ ಅಪಾಯದ ಬಗ್ಗೆ. ಈ ಎರಡೂ ಅಂಶಗಳು ನಾನು ಆ ಪೋಷಕರೊಂದಿಗೆ ನಡೆಸಿದ ಸಂಭಾಷಣೆಯ ಮೇಲೂ, ನನ್ನ ಸ್ವಂತ ಮಕ್ಕಳ ಪೋಷಣೆಯ ಮೇಲೂ ಪ್ರಭಾವ ಬೀರಿವೆ. ವಿಶೇಷವಾಗಿ, ನನ್ನ ಮಕ್ಕಳು ಆ ತಂತ್ರಜ್ಞಾನಗಳೊಂದಿಗೆ ಸಮರ್ಪಕವಾಗಿ ಹೋರಾಡಿ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯವನ್ನು ಪಡೆಯುವ ಮೊದಲು, ಅವರ ತಂತ್ರಜ್ಞಾನ ಬಳಕೆಯನ್ನು ಕಡಿಮೆಗೊಳಿಸುವ ವಿಚಾರದಲ್ಲಿ ಪ್ರಭಾವ ಬೀರಿವೆ.

ನಾನು ಜನರಿಗೆ ಆಗಾಗ ನೆನಪಿಸುವುದು ಏನೆಂದರೆ, ಮಕ್ಕಳಿಗೆ ಕೇವಲ “ಸಾಫ್ಟ್‌ವೇರ್ ಸಮಸ್ಯೆಗಳು” ಮಾತ್ರ ಇರುವುದಿಲ್ಲ; ಅವರಿಗೆ “ಹಾರ್ಡ್‌ವೇರ್ ಸಮಸ್ಯೆಗಳೂ” ಇವೆ. ಅಂದರೆ, ಅವರ ಮೆದುಳಿನ ಮುಂಭಾಗದ ಹೊರಪದರ ಸುಮಾರು ಇಪ್ಪತ್ತರ ಆರಂಭದವರೆಗೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವುದಿಲ್ಲ. ಈ ಸಂಗತಿಯು ಮಕ್ಕಳಿಗೆ ನಾವು ಯಾವ ರೀತಿಯ ಅನುಭವಗಳನ್ನು ನೀಡುತ್ತೇವೆ ಎಂಬ ವಿಷಯದಲ್ಲಿ ನಮ್ಮನ್ನು ಯೋಚಿಸುವಂತೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ.

ಆ ಪೋಷಕರೊಂದಿಗೆ ಮಾತನಾಡುವಾಗ ನಾನು ನೀಡಿದ ಉದಾಹರಣೆ ಎಂದರೆ, ನಿಮ್ಮ ಮಗುವನ್ನು ಅತ್ಯಂತ ಬುದ್ಧಿವಂತನಾದರೂ ನೈತಿಕವಾಗಿ ಅಸ್ಪಷ್ಟನಾಗಿರುವ ನಿಮ್ಮ ವಯಸ್ಕ ಸ್ನೇಹಿತನೊಂದಿಗೆ ಒಬ್ಬಂಟಿಯಾಗಿ ಬಿಟ್ಟುಹೋಗುವುದು. ಆ ವಯಸ್ಕ ಸ್ನೇಹಿತನು ನಕ್ಷತ್ರಗಳು, ಆಕಾಶಗಂಗೆಗಳು, ರಸಾಯನಶಾಸ್ತ್ರ, ಬರವಣಿಗೆ ಹಾಗೂ ಇತರ ಅನೇಕ ವಿಷಯಗಳ ಕುರಿತು ಅತ್ಯುತ್ತಮ ಒಳನೋಟಗಳನ್ನು ನೀಡಬಲ್ಲನು. ಆದರೆ ಅವನ ನೈತಿಕ ಅಸ್ಪಷ್ಟತೆಯ ಕಾರಣದಿಂದ, ಅವನು ನಿಮ್ಮ ಮಕ್ಕಳು ಕೇಳಬಾರದ ವಿಷಯಗಳನ್ನು ಅವರಿಗೆ ಹೇಳಬಹುದು, ಅಥವಾ ಅವರಿಗೆ ಹೇಳಬಾರದ ವಿಷಯಗಳನ್ನು ತಿಳಿಸಬಹುದು, ಅಥವಾ ಅವರು ಹೇಳಬಾರದ ಮಾತುಗಳನ್ನು ಹೇಳುವಂತೆ ಪ್ರೇರೇಪಿಸಬಹುದು. ಇದು ದುರುದ್ದೇಶದಿಂದ ಆಗಬೇಕೆಂದಿಲ್ಲ. ಇದು ಕೇವಲ ಸಂಭವನೀಯತೆಯ ಆಧಾರದ ಮೇಲೆ ನಡೆಯಬಹುದು. ಆದರೆ ಮಗುವಿನ ಬಳಿ ಆ ವಿಷಯವನ್ನು ಸರಿಯಾಗಿ ವಿವೇಚಿಸುವ ಸಾಮರ್ಥ್ಯವು, ಸಂಪೂರ್ಣವಾಗಿ ಬೆಳೆಯಿರುವ ವಯಸ್ಕರಷ್ಟಿರದು.

ಇಲ್ಲಿ ಮತ್ತೊಂದು ಆಸಕ್ತಿದಾಯಕ ಅಂಶವೂ ಇದೆ. ಪೂಜ್ಯ ಜಗದ್ಗುರು 14ನೇ ಲಿಯೋ ಅವರು ತಮ್ಮ ವಿಶ್ವಪತ್ರಿಕೆಯಲ್ಲಿಯೂ ಹಾಗೂ ಈ ವರ್ಷದ ಆರಂಭದಲ್ಲಿ ನೀಡಿದ ಕೆಲವು ಅಭಿಪ್ರಾಯಗಳಲ್ಲಿಯೂ, ವ್ಯಕ್ತಿಯು ತನ್ನ ಸ್ವಂತ ಧ್ವನಿ ಮತ್ತು ತನ್ನ ಸ್ವಂತ ಪ್ರತಿರೂಪದ ಮೇಲೆ ಹಕ್ಕು ಹೊಂದಿರುವ ವಿಷಯವನ್ನು ಉಲ್ಲೇಖಿಸಿದ್ದಾರೆ. ಅವರು ಈ ಅಂಶದ ಬಗ್ಗೆ ಚಿಂತಿಸುವಾಗ, ನಮ್ಮಂತಹ ವಯಸ್ಕರು ಒಂದು ವಿಶೇಷ ಅನುಕೂಲವನ್ನು ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ. ಅಂದರೆ, ಈ ಜನರೇಟಿವ್ AI ಸಾಧನಗಳಿಲ್ಲದೆ ನಾವು ಬೆಳೆದಿದ್ದೇವೆ ಮತ್ತು ನಮ್ಮದೇ ಆದ ಚಿಂತನಾ ವಿಧಾನ, ಬರವಣಿಗೆಯ ಶೈಲಿ ಹಾಗೂ ಮಾತನಾಡುವ ವಿಧಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ಹೊಂದಿದ್ದೇವೆ.

ಆದರೆ ಉತ್ಪಾದಕ AI ಸಾಧನಗಳು, ಸಹಾಯ ಮಾಡಲು ತೀವ್ರವಾಗಿ ಪ್ರಯತ್ನಿಸುವ ತಮ್ಮ ಸ್ವಭಾವದಲ್ಲಿ, ನಮ್ಮ ಭಾಷೆಯನ್ನು ರೂಪಿಸುತ್ತವೆ. ಅವು ನಮ್ಮ ಧ್ವನಿ ಹೇಗೆ ಕೇಳಿಸುತ್ತದೆ ಎಂಬುದನ್ನು ಬದಲಾಯಿಸಬಲ್ಲವು. ಡಿಜಿಟಲ್ ಮಾಧ್ಯಮದಲ್ಲಿ ನಮ್ಮ ಮುಖ ಹೇಗೆ ಕಾಣುತ್ತದೆ ಎಂಬುದನ್ನೂ ಬದಲಾಯಿಸಬಲ್ಲವು. ಕೆಲವೊಮ್ಮೆ ಅದು ನಮ್ಮದೇ ಆಗಿರುವುದಿಲ್ಲ.

ನಾವು ಬಯಸಿದರೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಅದು ನಮ್ಮನ್ನು ರೂಪಿಸುತ್ತಿದೆ. ಆದರೆ ಮತ್ತೆ, ನಾವು ಮಕ್ಕಳಾಗಿದ್ದರೆ, ನಮ್ಮದೇ ಆದ ಸೃಜನಾತ್ಮಕ ಕೊಡುಗೆ — ನಮ್ಮ ಧ್ವನಿ, ಜಗತ್ತಿನಲ್ಲಿ ಇರುವ ನಮ್ಮದೇ ಆದ ವಿಧಾನ — ಇವುಗಳಿಲ್ಲದೆ ಆ ರೂಪುಗೊಳಿಸುವಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ವಯಸ್ಕರು ಮಾಡುವಷ್ಟು ಸಮರ್ಪಕವಾಗಿ ಮಕ್ಕಳು ಅದನ್ನು ನಿರ್ವಹಿಸಲು ಸಾಧ್ಯವಿಲ್ಲ.

ಈಗ ನಮ್ಮ ಬಳಿ ಈ ಸಾಧನಗಳಿರುವುದರಿಂದ, ನಮ್ಮ ಜೀವನದುದ್ದಕ್ಕೂ ನಾವು ಹೇಗೆ ಕೇಳಿಸಿಕೊಳ್ಳಬೇಕೆಂದು ಬಯಸಿದ್ದೇವೋ ಅದರಂತೆಯೇ ಕೇಳಿಸುವ ಒಂದು ರೂಪವನ್ನು ಅವು ನಮ್ಮ ಪರವಾಗಿ ಸೃಷ್ಟಿಸಬಲ್ಲವು. ಆದರೆ ಮಕ್ಕಳ ವಿಷಯದಲ್ಲಿ ಅದು ತಪ್ಪು ದಿಕ್ಕಿಗೆ ಕೊಂಡೊಯ್ಯಬಹುದು. ಅವರ ಸ್ವಂತ ಧ್ವನಿಯು, ಅವರು ಉದ್ದೇಶಿಸದ ದಿಕ್ಕಿನತ್ತ ತಳ್ಳಲ್ಪಡುವ ಒಂದು ಮಾರ್ಗವಾಗಬಹುದು.

ಪ್ರಶ್ನೆ: ಪೂಜ್ಯ ಜಗದ್ಗುರು 14ನೇ ಲಿಯೋ ಅವರ ವಿಶ್ವಪತ್ರಿಕೆಯ ಪ್ರಕಟಣೆಯು AI ಕುರಿತ ಧರ್ಮಸಭೆಯ ಪ್ರಯಾಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. AI ಅಭಿವೃದ್ಧಿಪರರೊಂದಿಗೆ ಧರ್ಮಸಭೆಯ ಸಂಬಂಧದ ಮುಂದಿನ ಹೆಜ್ಜೆಗಳು ಯಾವುವಾಗಿರಬೇಕು ಎಂದು ನೀವು ಭಾವಿಸುತ್ತೀರಿ?

ಟೇಲರ್ ಬ್ಲ್ಯಾಕ್: ಈ ಕ್ಷೇತ್ರದಲ್ಲಿ ಹಲವಾರು ಲಾಭರಹಿತ ಸಂಸ್ಥೆಗಳು ಮತ್ತು ಸಂಶೋಧನಾ ಗುಂಪುಗಳು ಅತ್ಯಂತ ಆಸಕ್ತಿದಾಯಕ ಕೆಲಸಗಳನ್ನು ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ. ಧರ್ಮಸಭೆಯು ವಿಶಾಲ ಮತ್ತು ಉನ್ನತ ಮಟ್ಟದಲ್ಲಿ ಹೇಳಿರುವ ವಿಚಾರಗಳನ್ನು ತೆಗೆದುಕೊಂಡು, ಅವುಗಳನ್ನು ಈ ವ್ಯವಸ್ಥೆಗಳ ನೈಜ ರಚನೆ, ನಿರ್ಮಾಣ ಮತ್ತು ಇಂಜಿನಿಯರಿಂಗ್ ಪ್ರಕ್ರಿಯೆಗಳಲ್ಲಿ ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ. ವಾಸ್ತವವಾಗಿ, ಈ ವಿಶ್ವಪತ್ರಿಕೆಯು ಸ್ವತಃ ಅಭಿವೃದ್ಧಿಪರರು ಮಾಡುತ್ತಿರುವ ಕಾರ್ಯದ ನೈತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.

ವ್ಯಾಟಿಕನ್ ಪ್ರಸ್ತಾಪಿಸಬಲ್ಲ ತಾತ್ವಿಕ ಸಿದ್ಧಾಂತಗಳ ಮತ್ತು ನಾವು ನಿರ್ಮಾಪಕರಾಗಿ ಈ ಸಾಧನಗಳನ್ನು ಅಭಿವೃದ್ಧಿಪಡಿಸುವಾಗ ಅನುಸರಿಸಬೇಕಾದ ಪ್ರಾಯೋಗಿಕ ಕಾರ್ಯವಿಧಾನಗಳ ನಡುವಿನ ಸಂಬಂಧ ಇನ್ನಷ್ಟು ಆಳವಾಗುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ನಾವು ಈ ಸಾಧನಗಳನ್ನು ನಿರ್ಮಿಸುವಾಗ ನಿಜವಾಗಿಯೂ ಕೀಬೋರ್ಡ್ ಮೇಲೆ ಕೈ ಇಡುವಾಗ ಅಥವಾ AI ಏಜೆಂಟ್‌ಗಳೊಂದಿಗೆ ಕಾರ್ಯನಿರ್ವಹಿಸುವಾಗ, ಅಲ್ಲಿ ಈ ಸಿದ್ಧಾಂತಗಳು ಪ್ರಾಯೋಗಿಕ ರೂಪ ಪಡೆಯುತ್ತವೆ. ಅಲ್ಲಿಯೇ ನಿಜವಾದ ಸವಾಲು ಆರಂಭವಾಗುತ್ತದೆ. ತಂತ್ರಜ್ಞಾನ ತಜ್ಞರು ತಮ್ಮ ಸಮಸ್ಯೆಗಳನ್ನು ಧರ್ಮಸಭೆಯ ಮುಂದೆ, ಅಥವಾ ತತ್ವಶಾಸ್ತ್ರ ಮತ್ತು ದೇವಶಾಸ್ತ್ರದ ಮುಂದೆ ತಂದು, “ತಾಂತ್ರಿಕ ದೃಷ್ಟಿಕೋನದಿಂದ ಈ ತಂತ್ರಜ್ಞಾನ ಹೀಗೆ ಕಾರ್ಯನಿರ್ವಹಿಸುತ್ತದೆ” ಎಂದು ವಿವರಿಸುವ ಅವಕಾಶ ಇರಬೇಕು.

ಅದೇ ರೀತಿ, ದೇವಶಾಸ್ತ್ರಜ್ಞರು, ತತ್ವಜ್ಞಾನಿಗಳು ಮತ್ತು ಧರ್ಮಸಭೆಯು, “ನೀವು ಈ ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿರುವುದರಿಂದ, ಅದನ್ನು ಈ ದಿಕ್ಕಿನಲ್ಲಿ ವಿನ್ಯಾಸಗೊಳಿಸಬೇಕು ಅಥವಾ ಈ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು” ಎಂದು ಮಾರ್ಗದರ್ಶನ ನೀಡಲು ಸಾಧ್ಯವಾಗಬೇಕು. ಈ ಪರಸ್ಪರ ಸಂವಾದ, ಈ ಕಠಿಣ ಪ್ರಶ್ನೆಗಳನ್ನು ನೈಜ ನಿರ್ಮಾಣ ಪ್ರಕ್ರಿಯೆಯಲ್ಲೇ ಎದುರಿಸಿ ಪರಿಹರಿಸುವ ಅಗತ್ಯತೆ, ಸಂಪೂರ್ಣ ವಿಶ್ವಪತ್ರಿಕೆಯುದ್ದಕ್ಕೂ ಒತ್ತಿಹೇಳಲ್ಪಟ್ಟಿದೆ. ನಾನು ಇದನ್ನು ಬಹಳವಾಗಿ ಮೆಚ್ಚುತ್ತೇನೆ ಮತ್ತು ಇಂತಹ ಸಂಬಂಧಗಳು ಇನ್ನಷ್ಟು ಆಳವಾಗಿ ಬೆಳೆಯುವುದನ್ನು ಹಾಗೂ ಅಭಿವೃದ್ಧಿಯಾಗುವುದನ್ನು ಎದುರುನೋಡುತ್ತಿದ್ದೇನೆ.

ಪ್ರಶ್ನೆ: ನೈತಿಕವಾಗಿ ಸಂಶಯಾಸ್ಪದ ಎಂದು ಕೆಲವರು ಪರಿಗಣಿಸುವ AI ಅಭಿವೃದ್ಧಿಪರರೊಂದಿಗೆ ಸಂವಾದ ನಡೆಸುತ್ತಿರುವುದಕ್ಕಾಗಿ ಕೆಲವು ವಲಯಗಳಿಂದ ಕಥೋಲಿಕರು ಟೀಕೆಗೆ ಒಳಗಾಗಿದ್ದಾರೆ. ಅದೇ ಸಮಯದಲ್ಲಿ, ಧರ್ಮಸಭೆಯೊಂದಿಗೆ ಸಂವಾದ ನಡೆಸುತ್ತಿರುವುದಕ್ಕಾಗಿ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಧರ್ಮಸಭೆಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸುತ್ತಾ ಅಭಿವೃದ್ಧಿಪರರೂ ಟೀಕೆಗೆ ಗುರಿಯಾಗಿದ್ದಾರೆ. ಅಭಿವೃದ್ಧಿಪರರ ಕಡೆಯಿಂದ ಇಂತಹ ಟೀಕೆಗಳನ್ನು ನೀವು ಗಮನಿಸಿದ್ದೀರಾ?

ಟೇಲರ್ ಬ್ಲ್ಯಾಕ್: ಹೌದು, ನಾನು ಇಂತಹ ಟೀಕೆಗಳನ್ನು ಗಮನಿಸಿದ್ದೇನೆ. ನಿಜವಾಗಿ ಹೇಳಬೇಕೆಂದರೆ, ಎರಡೂ ಕಡೆಯ ಟೀಕೆಗಳು ಅಷ್ಟಾಗಿ ಆಳವಾದ ಚಿಂತನೆಯಿಂದ ಕೂಡಿಲ್ಲ ಎಂದು ನಾನು ಭಾವಿಸುತ್ತೇನೆ. ಅದರ ಕಾರಣವೆಂದರೆ, ಅವು ಸಾಮಾನ್ಯವಾಗಿ ಅಮೆರಿಕದಲ್ಲಿ ಧರ್ಮ ಮತ್ತು ರಾಜ್ಯವನ್ನು ಪ್ರತ್ಯೇಕಿಸಿರುವ ವಿಧಾನವನ್ನು ಅತ್ಯಂತ ಸರಳವಾಗಿ ಅರ್ಥಮಾಡಿಕೊಳ್ಳುವ ದೃಷ್ಟಿಕೋನದ ಮೇಲೆ ಆಧಾರಿತವಾಗಿರುತ್ತವೆ. ಅದು ಖಂಡಿತವಾಗಿಯೂ ಒಂದು ಆಸಕ್ತಿದಾಯಕ ಐತಿಹಾಸಿಕ ಬೆಳವಣಿಗೆಯಾಗಿದೆ.

ಆದರೆ ಅದರ ಪರಿಣಾಮವಾಗಿ, ಧರ್ಮ, ದೇವಶಾಸ್ತ್ರ ಮತ್ತು ಇಂತಹ ಆಳವಾದ ಪ್ರಶ್ನೆಗಳನ್ನು ಜನರ ನೈಜ ಜೀವನದ ಕೇಂದ್ರದಿಂದ ದೂರ ಸರಿಸಿ, ಕೇವಲ ಐಚ್ಛಿಕ ಕ್ಷೇತ್ರಕ್ಕೆ ತಳ್ಳುವ ಪ್ರವೃತ್ತಿ ಕಂಡುಬರುತ್ತದೆ. ಆದರೆ ವಾಸ್ತವದಲ್ಲಿ, ನಮ್ಮೆಲ್ಲರ ಜೀವನದಲ್ಲೂ ಅತೀತವಾದುದರ ಅಗತ್ಯ ಅಥವಾ ಆರಾಧನೆಯ ಅಗತ್ಯ ಅನುಭವವಾಗುತ್ತದೆ. ಇದು ನನ್ನ ತಾತ್ವಿಕ ಉತ್ತರ.

ಪ್ರಾಯೋಗಿಕವಾಗಿ ನೋಡಿದರೆ, ನಾವು ನಮ್ಮ ಗ್ರಾಹಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. AI ಬರುವ ಮೊದಲು ನಾವು ಉತ್ಪನ್ನಗಳನ್ನು ನಿರ್ಮಿಸುವಾಗ, ನಮ್ಮ ಗ್ರಾಹಕರು ಒಂದು ಸಂಪರ್ಕ ಸಾಧನದ (interface) ಮೂಲಕ ಹೇಗೆ ಕಾರ್ಯನಿರ್ವಹಿಸುತ್ತಾರೆ, ಅವರು ಕೆಲಸಗಳನ್ನು ಹೇಗೆ ಪೂರ್ಣಗೊಳಿಸುತ್ತಾರೆ, ನಾವು ನಿರ್ಮಿಸಿದ ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆವು. ನಂತರ ಬಳಕೆದಾರರು ತಮ್ಮ ಕೆಲಸವನ್ನು ಉತ್ತಮವಾಗಿ ಪೂರ್ಣಗೊಳಿಸಲು ಸಾಧ್ಯವಾಗುವಂತೆ, ಸಂಪರ್ಕ ಸಾಧನವನ್ನು ಅಥವಾ ಸಾಧನದ ಕಾರ್ಯವಿಧಾನವನ್ನು ನಿರ್ದಿಷ್ಟ ರೀತಿಯಲ್ಲಿ ಬದಲಾಯಿಸುತ್ತಿದ್ದೆವು.

ಆದರೆ ಈಗ, ಬಳಕೆದಾರರ ಅಧ್ಯಯನವು ವಿಭಿನ್ನವಾಗಿದೆ. ಒಬ್ಬ ವ್ಯಕ್ತಿ ಪ್ರಶ್ನೆಯನ್ನು ಟೈಪ್ ಮಾಡಿ, ನಂತರ ಬಂದ ಉತ್ತರದಿಂದ ತೃಪ್ತನಾಗದಿರುವುದನ್ನು ನಾವು ನೋಡಬಹುದು. ಆದರೆ ಆ ಪ್ರತಿಕ್ರಿಯೆಯ ಬಹುಭಾಗವು ಆ ವ್ಯಕ್ತಿಯ ಮನಸ್ಸಿನೊಳಗೇ ನಡೆಯುತ್ತದೆ. ಆದ್ದರಿಂದ ಈಗ, ನಮ್ಮ ಉತ್ಪನ್ನಗಳನ್ನು ಬಳಕೆದಾರರು ಹೇಗೆ ಅನುಭವಿಸುತ್ತಿದ್ದಾರೆ ಮತ್ತು ಈ ಜನರೇಟಿವ್ AI ಸಂಪರ್ಕ ಸಾಧನದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅವರು ಏನನ್ನು ಸಹ-ಸೃಷ್ಟಿಸಲು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಎರಡನೇ ಹಂತದ ಸಾಮರ್ಥ್ಯ ನಮಗೆ ಅಗತ್ಯವಾಗಿದೆ.

ಉತ್ಪನ್ನಗಳನ್ನು ನಿರ್ಮಿಸುವ ದೃಷ್ಟಿಕೋನದಿಂದಲೇ ಇದು ಮಾನವ ವ್ಯಕ್ತಿಯ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತದೆ. ಆದ್ದರಿಂದ, ಮಾನವ ವ್ಯಕ್ತಿ ಯಾರು ಮತ್ತು ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ದೃಢವಾದ ದೃಷ್ಟಿಕೋನಗಳನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಸಂವಾದ ನಡೆಸದೆ, ಮಾನವ ವ್ಯಕ್ತಿಯ ವಿವಿಧ ಪರಿಕಲ್ಪನೆಗಳನ್ನು ಅನ್ವೇಷಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅಂತಹ ಸಂವಾದವನ್ನು ತಪ್ಪಿಸುವುದು, ಗ್ರಾಹಕರು ಇಷ್ಟಪಡುವ ಮತ್ತು ನಂಬುವ ಉತ್ಪನ್ನಗಳನ್ನು ನಿರ್ಮಿಸುವ ಕಾರ್ಯವನ್ನು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುವ ಹಾಗೂ ಅಪೂರ್ಣಗೊಳಿಸುವ ವಿಧಾನವಾಗಿದೆ.

ಇತಿಹಾಸದ ಕೆಲವು ಬೆಳವಣಿಗೆಗಳಾದ ಧರ್ಮ ಮತ್ತು ರಾಜ್ಯದ ಪ್ರತ್ಯೇಕತೆಯಂತಹ ಅಂಶಗಳ ಆಧಾರದ ಮೇಲೆ ಮಾತ್ರ, ದೊಡ್ಡ ಮತ್ತು ಸಣ್ಣ ತಂತ್ರಜ್ಞಾನ ಕಂಪನಿಗಳು ಉತ್ಪನ್ನ ನಿರ್ಮಾಣದ ವಾಸ್ತವಿಕತೆಯನ್ನು ಸೀಮಿತಗೊಳಿಸಿಕೊಳ್ಳುವುದು ನನಗೆ ಆಶ್ಚರ್ಯಕರವಾಗಿ ತೋರುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಜೂನ್ 2026, 19:02