ಹುಡುಕಿ

2026ರ ಮೇ 23ರಂದು ಅಶೆರ್ರಾಗೆ ನೀಡಿದ ತಮ್ಮ ಪ್ರೇಷಿತ ಭೇಟಿಯ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಪುಟ್ಟ ಬಾಲಕಿಯೊಬ್ಬಳಿಗೆ ಆಶೀರ್ವಾದ ನೀಡುತ್ತಿರುವ ದೃಶ್ಯ. 2026ರ ಮೇ 23ರಂದು ಅಶೆರ್ರಾಗೆ ನೀಡಿದ ತಮ್ಮ ಪ್ರೇಷಿತ ಭೇಟಿಯ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಪುಟ್ಟ ಬಾಲಕಿಯೊಬ್ಬಳಿಗೆ ಆಶೀರ್ವಾದ ನೀಡುತ್ತಿರುವ ದೃಶ್ಯ.  (@VATICAN MEDIA)

ಅಶೆರ್ರಾಗೆ ಪೂಜ್ಯ ಜಗದ್ಗುರುಗಳ ಐತಿಹಾಸಿಕ ಭೇಟಿಯನ್ನು ಸ್ಮರಿಸಿದ ಇಟಾಲಿಯನ್ ಅಶೆರ್ರಾಗೆ ಪೂಜ್ಯ ಜಗದ್ಗುರುಗಳ ಐತಿಹಾಸಿಕ ಭೇಟಿಯನ್ನು ಸ್ಮರಿಸಿದ ಇಟಾಲಿಯನ್ ಯಾಜಕ

ನೇಪಲ್ಸ್ ಸಮೀಪದ ಅಶೆರ್ರಾದಲ್ಲಿರುವ ಸಂತ ಮರಿಯ ದೇವಾಲಯದ ರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಇಟಾಲಿಯನ್ ಯಾಜಕರಾದ ವಂ. ಗುರು ಲೂಯಿಜಿ ಪುಗ್ಲೀಸ್, 2026ರ ಮೇ 23ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಆ ಪ್ರದೇಶಕ್ಕೆ ನೀಡಿದ ಭೇಟಿಯ ಪರಿಣಾಮದ ಕುರಿತು ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು:ಏಂಜೆಲಾ ರ್ವೆಝೌಲಾ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು 2026ರ ಮೇ 23ರಂದು “ಟೆರ್ರಾ ದೇಯ್ ಫುಯೋಚಿ” (ಬೆಂಕಿಯ ನಾಡು) ಎಂದು ಕರೆಯಲ್ಪಡುವ ಅಶೆರ್ರಾ ಪ್ರದೇಶಕ್ಕೆ ಭೇಟಿ ನೀಡಿದರು.

ಕ್ಯಾಂಪಾನಿಯಾದ ಜುಲಿಯಾನೊದಲ್ಲಿರುವ “ಆವೇ ಮರಿಯಾ ಗ್ರಾಸಿಯಾ ಪ್ಲೇನಾ” ದೇವಾಲಯದ, ಅಂದರೆ ಘೋಷಣಾ ಮಾತೆಯ ದೇವಾಲಯದ ರೆಕ್ಟರ್ ಆಗಿರುವ ವಂ. ಗುರು ಲೂಯಿಜಿ ಪುಗ್ಲೀಸ್, ಜಗದ್ಗುರುಗಳ ಮಾತುಗಳು ಮತ್ತು ಸನ್ನೆಗಳು ತಮ್ಮ ಹೃದಯವನ್ನು ಆಳವಾಗಿ ಸ್ಪರ್ಶಿಸಿವೆ ಎಂದು ತಿಳಿಸಿದ್ದಾರೆ.

“ಅವರು ನಮಗೆ ಸಾಂತ್ವನ ನೀಡಲು ಬಂದಿದ್ದರು, ವಿಷಕಾರಿ ತ್ಯಾಜ್ಯಗಳ ಅಕ್ರಮ ವಿಸರ್ಜನೆಯಿಂದ ಬಾಧಿತರಾದ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ನೀಡಿದರು” ಎಂದು ವಂ. ಗುರು ಪುಗ್ಲೀಸ್ ಹೇಳಿದರು..

ಗಾಯಗೊಂಡ ಭೂಮಿ

ಅಪರಾಧ ಜಾಲಗಳಿಗೆ ಸಂಬಂಧಿಸಿದ ವಿಷಕಾರಿ ತ್ಯಾಜ್ಯಗಳ ಅಕ್ರಮ ವಿಸರ್ಜನೆ ಮತ್ತು ಅವುಗಳನ್ನು ಅಕ್ರಮವಾಗಿ ಸುಡುವ ಕಾರ್ಯಗಳಿಂದ ಆ ಪ್ರದೇಶದಲ್ಲಿ ತೀವ್ರ ಪರಿಸರ ಹಾನಿ ಉಂಟಾಗಿದ್ದು, ಕ್ಯಾನ್ಸರ್ ರೋಗಗಳ ಪ್ರಮಾಣವೂ ಹೆಚ್ಚಾಗಿದೆ. ತಮ್ಮ ಭೇಟಿಯ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಈ ಬಿಕ್ಕಟ್ಟಿಗೆ ಕಾರಣವಾದ ದುರಾಸೆ ಮತ್ತು ವ್ಯವಸ್ಥಾತ್ಮಕ ನಿರ್ಲಕ್ಷ್ಯವನ್ನು ಯಾವುದೇ ರಾಜಿ ಇಲ್ಲದೆ ಖಂಡಿಸಿದರು.

“ದುರದೃಷ್ಟವಶಾತ್, ನನ್ನ ನೆಲವನ್ನು ‘ಬೆಂಕಿಯ ನಾಡು’ ಎಂದು ಕರೆಯಲಾಗುತ್ತದೆ, ವಿಷಕಾರಿ ತ್ಯಾಜ್ಯಗಳಿಂದ ಉಂಟಾದ ಅನೇಕ ಗಾಯಗಳನ್ನು ಈ ನೆಲ ಹೊತ್ತುಕೊಂಡಿದೆ. ವಿಶೇಷವಾಗಿ ವಿವಿಧ ರೀತಿಯ ಕ್ಯಾನ್ಸರ್‌ಗಳಂತಹ ರೋಗಗಳ ಮೂಲಕ ನಾವು ಈ ಗಾಯಗಳ ಗುರುತುಗಳನ್ನು ಅನುಭವಿಸುತ್ತಿದ್ದೇವೆ. ಆದರೆ ಇನ್ನೂ ಕೆಲವು ಅಡಗಿದ ಗಾಯಗಳೂ ಇವೆ—ದುರ್ಬಲ ಶಿಕ್ಷಣ ವ್ಯವಸ್ಥೆ, ನಿರುದ್ಯೋಗ, ಮಾದಕ ವ್ಯಸನಕ್ಕೆ ಒಳಗಾಗುತ್ತಿರುವ ಯುವಜನತೆ, ಮೂಢನಂಬಿಕೆಗಳು, ಖಿನ್ನತೆ ಹಾಗೂ ಬದುಕಿನ ಮೇಲಿನ ನಿರಾಸೆ. ಇವು ಅನೇಕ ಬಾರಿ ಭರವಸೆಯ ಬೆಳಕನ್ನೇ ನಂದಿಸಿಬಿಡುತ್ತವೆ. ಪೂಜ್ಯ ಜಗದ್ಗುರುಗಳು ಆ ಭರವಸೆಯ ಕಿಡಿಯನ್ನು ಮತ್ತೆ ಹೊತ್ತಿಸಲು ಬಂದಿದ್ದಾರೆ.”

“ಪೂಜ್ಯ ಜಗದ್ಗುರುಗಳ ಭೇಟಿ ಮತ್ತು ಅವರ ಮಾತುಗಳ ಮಹತ್ವವನ್ನು ಸಾರುವ ಹಾಗೂ ನಮಗೆ ಅಪಾರ ಸಾಂತ್ವನ ಮತ್ತು ಬದ್ಧತೆಯನ್ನು ನೀಡಿದ ಪದವೆಂದರೆ ‘ಘನತೆ’,” ಎಂದು ವಂ. ಗುರು ಪುಗ್ಲೀಸ್ ಹೇಳಿದರು. “ಮಾನವ ಘನತೆಯನ್ನು ಆರ್ಥಿಕ ಹಿತಾಸಕ್ತಿಗಳು, ಲಾಭ ಅಥವಾ ಪಕ್ಷಪಾತದ ರಾಜಕೀಯ ತರ್ಕಗಳಿಗಾಗಿ ಬಲಿಕೊಡಬಾರದು.” ಯಾವ ಬೆಲೆ ತೆತ್ತಾದರೂ ಮಾನವ ಘನತೆಯನ್ನು ರಕ್ಷಿಸಬೇಕು ಎಂದು ಅವರು ಒತ್ತಿ ಹೇಳಿದರು.

ಯಾಜಕತ್ವ: ಆಲಿಸುವಿಕೆ, ಸೇವೆ ಮತ್ತು ದಾನಧರ್ಮ

ಇದೇ ಸಂದರ್ಭದಲ್ಲಿ, ವಂ.ಗುರು ಪುಗ್ಲೀಸ್ ಅವರು ಜೂನ್ 23ರಂದು ತಮ್ಮ ಯಾಜಕತ್ವದ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದಾರೆ. ಯಾಜಕ ಸೇವೆಯಲ್ಲಿ ಇಷ್ಟು ವರ್ಷಗಳ ಕಾಲ ತಮ್ಮನ್ನು ಮುನ್ನಡೆಸಿದ ಶಕ್ತಿಯೇನು ಎಂದು ಕೇಳಿದಾಗ, ಅವರು ತಮ್ಮ ಆಳವಾದ ಸಂತ ಕನ್ಯಾ ಮರಿಯಮ್ಮನವರ ಮೇಲಿನ ಭಕ್ತಿ ಎಂದರು.

“ಈ ಇಪ್ಪತ್ತೈದು ವರ್ಷಗಳಲ್ಲಿ ನಾನು ಯಾಜಕತ್ವದ ವಿವಿಧ ಹಂತಗಳನ್ನು ಅನುಭವಿಸಿದ್ದೇನೆ. ಆರಂಭದ ವರ್ಷಗಳಲ್ಲಿ ಸಹಾಯಕ ಗುರುಗಳಾಗಿ, ನಂತರ ಹದಿನೇಳು ವರ್ಷಗಳ ಕಾಲ ಸಾನ್ ಮತ್ತೆಯೊ ಧರ್ಮಕೇಂದ್ರದದ ಗುರುಗಳಾಗಿ, ಮತ್ತು ಕಳೆದ ಮೂರು ವರ್ಷಗಳಿಂದ ಕ್ಯಾಂಪಾನಿಯಾದ ಜುಲಿಯಾನೊದಲ್ಲಿರುವ ಆವೇ ಮರಿಯಾ ಗ್ರಾಸಿಯಾ ಪ್ಲೇನಾ ದೇವಾಲಯದ ರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದೇನೆ,” ಎಂದು ಅವರು ಹೇಳಿದರು.

“ಈ ಎಲ್ಲಾ ಯಾಜಕ ಸೇವೆಯ ಹಂತಗಳಲ್ಲಿ, ಇತ್ತೀಚೆಗೆ ಯಾಜಕರ ಪವಿತ್ರೀಕರಣಕ್ಕಾಗಿ ಪ್ರಾರ್ಥನಾ ದಿನದ ಸಂದರ್ಭದಲ್ಲಿ, ಯೇಸುವಿನ ಪವಿತ್ರ ಹೃದಯದ ಮಹಾಪರ್ವದಂದು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ನಮಗೆಲ್ಲಾ ಯಾಜಕರಿಗೆ ನೆನಪಿಸಿದಂತೆ, ಒಂದು ಕರೆಯು ಸ್ವಾರ್ಥದಿಂದ ಕಾಪಾಡಿಕೊಂಡು ಇರಿಸಿಕೊಳ್ಳಬೇಕಾದ ಉಡುಗೊರೆಯಲ್ಲ; ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದ ವರವಾಗಿದೆ. ಅದು ಸಾನ್ನಿಧ್ಯ, ಆಲಿಸುವಿಕೆ, ಸೇವೆ ಮತ್ತು ದಾನಧರ್ಮವಾಗಿ ರೂಪಾಂತರಗೊಂಡಾಗ ಮಾತ್ರ ನಿಜವಾದ ವರವಾಗುತ್ತದೆ,” ಎಂದು ಅವರು ಹೇಳಿದರು.

ನೇಪಲ್ಸ್‌ನ ಜನಪದ ಭಕ್ತಿ

ಆವೇ ಮರಿಯಾ ಗ್ರಾಸಿಯಾ ಪ್ಲೇನಾ ದೇವಾಲಯದ ರೆಕ್ಟರ್ ಆಗಿ ನೇಮಕಗೊಂಡದ್ದು ಮನೆಗೆ ಮರಳಿದ ಅನುಭವದಂತಿತ್ತು ಎಂದು ವಂ. ಗುರು ಪುಗ್ಲೀಸ್ ಹೇಳಿದ್ದಾರೆ. ಹಲವು ವರ್ಷಗಳಿಂದ ಅವರಿಗೆ ಈ ದೇವಾಲಯದೊಂದಿಗೆ ವಿಶೇಷವಾದ ನಂಟಿದೆ. ಆ ಬಾಂಧವ್ಯವು ಆಳವಾದ ಬೇರುಗಳನ್ನು ಹೊಂದಿದೆ.

“ನನ್ನ ಯಾಜಕ ಕರೆಯು ಇಪ್ಪತ್ತೈದು ವರ್ಷಗಳ ಹಿಂದೆ ಈ ದೇವಾಲಯದಲ್ಲೇ ಮೊಳಕೆಯೊಡೆದಿತು. ಆದರೆ ಅದರ ಬೇರುಗಳು ಇನ್ನೂ ಹಿಂದಕ್ಕೆ ಹೋಗುತ್ತವೆ, ನನಗೆ ಕೇವಲ ಏಳು ವರ್ಷ ವಯಸ್ಸಿದ್ದಾಗ, ನನ್ನ ತಾಯಿ ನನ್ನನ್ನು ಸಂತ ಕನ್ಯಾ ಮರಿಯಮ್ಮನವರಿಗೆ ಸಮರ್ಪಿತವಾದ ಆರಾಧನಾ ವಿಧಿಗಳು ಮತ್ತು ಹಬ್ಬಗಳಿಗೆ ಕರೆದೊಯ್ಯುತ್ತಿದ್ದರು. ಆ ಕ್ಷಣಗಳನ್ನು ನಾನು ಅನುಭವಿಸಿದ ಸರಳವಾದ ಮತ್ತು ಆಳವಾದ ಸಂತೋಷ ಇನ್ನೂ ನನ್ನ ನೆನಪಿನಲ್ಲಿದೆ. ಮರಿಯಮ್ಮನವರು ನನ್ನ ಯಾಜಕ ಜೀವನದ ಪಯಣದಲ್ಲಿ ಸದಾ ಜೊತೆಯಾದ ಸಾನ್ನಿಧ್ಯವಾಗಿದ್ದಾರೆ. ಅವರು ನನ್ನ ಕೈ ಹಿಡಿದು ತಮ್ಮ ಪುತ್ರನ ಕಡೆಗೆ ನಡೆಸಿದ ತಾಯಿಯಾಗಿದ್ದಾರೆ" ಎಂದು ವಂ. ಗುರು ಪುಗ್ಲೀಸ್ ನೆನಪಿಸಿಕೊಂಡರು.

ಜುಲಿಯಾನೊದ ಜನರಿಗೆ, ಮಾತೆ ಮರಿಯಮ್ಮನವರ ಮೇಲಿನ ಭಕ್ತಿಯೇ ಅವರ ನಂಬಿಕೆಯ ಹೃದಯ ಬಡಿತವಾಗಿದೆ. ಆ ಪ್ರದೇಶದಲ್ಲಿನ ಮಾತೆ ಮರಿಯಮ್ಮನವರ ಆಚರಣೆಗಳು ಮತ್ತು ಹಬ್ಬಗಳು ಪ್ರಾಚೀನ ಐತಿಹಾಸಿಕ ಬೇರುಗಳನ್ನು ಹೊಂದಿದ್ದು, ಸಂಪ್ರದಾಯದ ಸೌಂದರ್ಯ ಮತ್ತು ಭರವಸೆಯ ಬಲದಿಂದ ಆವರಿಸಲ್ಪಟ್ಟಿವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

22 ಜೂನ್ 2026, 18:03