ಆಡ್ ಲಿಮಿನಾ ಭೇಟಿಯ ವೇಳೆ ಸಿನೊಡಾಲಿಟಿ ಮತ್ತು ಭರವಸೆಯ ಕುರಿತು ಹಾಂಗ್ ಕಾಂಗ್
ವ್ಯಾಟಿಕನ್ ವರದಿ
ಹಾಂಗ್ ಕಾಂಗ್ ಮತ್ತು ಮಕಾವೊದ ಧರ್ಮಾಧ್ಯಕ್ಷರು ರೋಮ್‌ಗೆ ತಮ್ಮ ಆಡ್ ಲಿಮಿನಾಪ್ರೇಷಿತ ಭೇಟಿಯ ಸಂದರ್ಭದಲ್ಲಿ ಕೃತಜ್ಞತೆ, ಶುಭಸಂದೇಶದ ನವೀಕರಣ ಹಾಗೂ ಸಿನೊಡಾಲಿಟಿಯ ಜೀವಂತ ಅನುಭವದ ಕುರಿತು ಮಾತನಾಡಿದರು. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಮತ್ತು ವ್ಯಾಟಿಕನ್ ವಿಭಾಗಗಳೊಂದಿಗಿನ ಭೇಟಿಯನ್ನು ಅವರು ವಿಶ್ವವ್ಯಾಪಿ ಧರ್ಮಸಭೆಯೊಂದಿಗೆ ಆಳವಾದ ಐಕ್ಯತೆಯ ಕ್ಷಣವೆಂದು ವಿವರಿಸಿದರು.
ಎರಡೂ ಧರ್ಮಕ್ಷೇತ್ರಗಳು ಮಹತ್ವದ ವಾರ್ಷಿಕೋತ್ಸವಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಚಿಂತನೆಗಳು ವ್ಯಕ್ತವಾಗಿವೆ. ಮಕಾವೊ ಧರ್ಮಕ್ಷೇತ್ರವು ತನ್ನ ಸ್ಥಾಪನೆಯ 450ನೇ ವರ್ಷವನ್ನು ಆಚರಿಸುತ್ತಿದ್ದರೆ, ಹಾಂಗ್ ಕಾಂಗ್ ಧರ್ಮಕ್ಷೇತ್ರವಾಗಿ ಘೋಷಣೆಯಾದ 80ನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತಿದೆ.
ಸಿನೊಡಾಲಿಟಿ
ಹಾಂಗ್ ಕಾಂಗ್‌ನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಸ್ಟೀಫನ್ ಚೌ ಸೌ-ಯಾನ್ ಅವರು ಸಿನೊಡಾಲಿಟಿಯ ದೃಷ್ಟಿಕೋನದಿಂದ ಈ ಭೇಟಿಯ ಕುರಿತು ಚಿಂತನೆ ನಡೆಸಿದರು. ಧರ್ಮಾಧ್ಯಕ್ಷರು ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ನಡುವಿನ ಭೇಟಿಯ ಸಂದರ್ಭದಲ್ಲಿ ನಡೆದ ಪರಸ್ಪರ ಆಲಿಸುವಿಕೆಯ ಮಹತ್ವವನ್ನು ಅವರು ವಿಶೇಷವಾಗಿ ಒತ್ತಿ ಹೇಳಿದರು.
ಹಾಂಗ್ ಕಾಂಗ್ ಮತ್ತು ಮಕಾವೊದಲ್ಲಿ ಬಳಸಲಾಗುವ ಸಿನೊಡಾಲಿಟಿಯ ಚೀನೀ ಭಾಷಾಂತರವಾದ “ಗೊಂಗ್ ಯಿ ತೋಂಗ್ ಶಿಂಗ್” ಎಂಬ ಪದಗಳನ್ನು ಒಳಗೊಂಡ ಸುರುಳಿಯನ್ನು ಧರ್ಮಾಧ್ಯಕ್ಷರು ಜಗದ್ಗುರುಗಳಿಗೆ ಅರ್ಪಿಸಿದರು ಎಂದು ಕಾರ್ಡಿನಲ್ ತಿಳಿಸಿದರು. “ಮೊದಲ ಎರಡು ಪದಗಳ ಅರ್ಥ ಒಟ್ಟಾಗಿ ಸಂವಾದಿಸುವುದು, ಒಟ್ಟಾಗಿ ಚರ್ಚಿಸುವುದು ಮತ್ತು ಒಟ್ಟಾಗಿ ವಿವೇಚಿಸುವುದು,” ಎಂದು ಅವರು ವಿವರಿಸಿದರು. “ಕೊನೆಯ ಎರಡು ಪದಗಳ ಅರ್ಥ ಒಟ್ಟಾಗಿ ನಡೆಯುವುದು ಮತ್ತು ಒಟ್ಟಾಗಿ ಪಯಣಿಸುವುದು. ಆದ್ದರಿಂದ ಸಿನೊಡಾಲಿಟಿ ಎಂದರೇನು ಎಂಬುದರ ಸಂಪೂರ್ಣ ಚಿತ್ರಣವನ್ನು ಇದು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.”
ಕಾರ್ಡಿನಲ್ ಚೌ ಅವರ ಪ್ರಕಾರ, ಪೂಜ್ಯ ಜಗದ್ಗುರುಗಳೊಂದಿಗಿನ ಭೇಟಿಯು ಸಿನೊಡಲ್ ಪ್ರಕ್ರಿಯೆಯ ಈ ಅರ್ಥವನ್ನೇ ನಿಖರವಾಗಿ ಪ್ರತಿಬಿಂಬಿಸಿತು. “ನಾವು ಇಲ್ಲಿ ಇದ್ದೇವೆ ಮತ್ತು ನಮ್ಮ ಅನುಭವವನ್ನು ಜಗದ್ಗುರುಗಳೊಂದಿಗೆ ಹಂಚಿಕೊಳ್ಳುವ ನಿಜವಾದ ಅವಕಾಶವನ್ನು ಪಡೆದಿದ್ದೇವೆ, ಅವರು ಅತ್ಯುತ್ತಮವಾಗಿ ಆಲಿಸುವ ವ್ಯಕ್ತಿ. ಅವರು ಆಲಿಸುತ್ತಾರೆ. ಅವರು ನಮಗೆ ಕಿವಿಗೊಡುವ ಈ ಅವಕಾಶವನ್ನು ಹೊಂದಿರುವುದು ಬಹಳ ಮುಖ್ಯ. ಹಾಗೆಯೇ ಅವರೊಂದಿಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವೂ ನಮಗಿದೆ,” ಎಂದು ಕಾರ್ಡಿನಲ್ ಹೇಳಿದರು.
ಇಂತಹ ಆಲಿಸುವಿಕೆಯು ಧರ್ಮಸಭೆಯ ವಿವೇಚನೆ ಮತ್ತು ಧ್ಯೇಯಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಅವರು ವಿವರಿಸಿದರು. “ಈ ರೀತಿಯಾಗಿ ಅವರು ಧರ್ಮಸಭೆಯನ್ನು ಮುನ್ನಡೆಸುವಲ್ಲಿ ಇನ್ನಷ್ಟು ಉತ್ತಮ ವಿವೇಚನೆ ನಡೆಸಬಹುದು,” ಎಂದು ಅವರು ಹೇಳಿದರು. ವಿಶೇಷವಾಗಿ ಚೀನಾದಲ್ಲಿನ ಧರ್ಮಸಭೆಗೆ ಸಂಬಂಧಿಸಿದ ವಿಷಯಗಳಲ್ಲಿ ಇದು ಮಹತ್ವದ್ದಾಗಿದೆ ಎಂದರು.
ಅದೇ ಸಮಯದಲ್ಲಿ, ಧರ್ಮಾಧ್ಯಕ್ಷರಿಗೂ ಪೂಜ್ಯ ಜಗದ್ಗುರುಗಳ ಆಶಯಗಳು ಮತ್ತು ಕಾಳಜಿಗಳನ್ನು ಆಲಿಸುವ ಅವಕಾಶ ದೊರೆಯಿತು. “ಅವರ ಕಾಳಜಿಗಳು, ಅವರ ಆಶಯಗಳು ಹಾಗೂ ಕೆಲವು ವಿಷಯಗಳ ಕುರಿತು ಅವರು ನಮ್ಮಿಂದ ಬಯಸುವ ಹೆಚ್ಚಿನ ಸ್ಪಷ್ಟೀಕರಣಗಳನ್ನು ನಾವು ಆಲಿಸಲು ಸಾಧ್ಯವಾಯಿತು,” ಎಂದು ಕಾರ್ಡಿನಲ್ ಚೌ ಹೇಳಿದರು.
ಹಾಂಗ್ ಕಾಂಗ್ ಮತ್ತು ಮಕಾವೊದ ಅನುಭವಗಳು ಹಾಗೂ ಚೀನಾದ ಮುಖ್ಯಭೂಭಾಗದೊಂದಿಗಿನ ದೀರ್ಘಕಾಲದ ಸಂಪರ್ಕಗಳನ್ನು ಉಲ್ಲೇಖಿಸಿದ ಕಾರ್ಡಿನಲ್, ತಮ್ಮ ದೃಷ್ಟಿಕೋನಗಳು ಮತ್ತು ಅನುಭವಗಳನ್ನು ಜಗದ್ಗುರುಗಳೊಂದಿಗೆ ಹಂಚಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು. “ನಮ್ಮ ಅನುಭವಗಳು, ನಮ್ಮ ಗ್ರಹಿಕೆಗಳು ಮತ್ತು ನಮ್ಮ ತಿಳುವಳಿಕೆಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳಬಹುದು,” ಎಂದು ಅವರು ಹೇಳಿದರು. “ಇದು ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು.” ಈ ಭೇಟಿಯ ಆತ್ಮವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ ಕಾರ್ಡಿನಲ್ ಚೌ ಸರಳವಾಗಿ ಹೇಳಿದರು: “ಅದೇ ಸಿನೊಡಾಲಿಟಿ.
ನವೀಕರಣದ ಧ್ಯೇಯ
ಮಕಾವೊದ ಧರ್ಮಾಧ್ಯಕ್ಷರಾದ ಸ್ಟೀಫನ್ ಲೀ ಬನ್-ಸಾಂಗ್ ಅವರ ಪ್ರಕಾರ, ಈ ವಾರ್ಷಿಕೋತ್ಸವದ ವರ್ಷವು ಕೃತಜ್ಞತೆ ಮತ್ತು ನವೀಕೃತ ಪ್ರೇಷಿತ ಬದ್ಧತೆಯ ಮೇಲೆ ನೆಲೆಗೊಂಡಿದೆ. “ನವೀಕರಣವು ನಮ್ಮ 450 ವರ್ಷಗಳ ಆಚರಣೆಯ ಧ್ಯೇಯದ ಒಂದು ಭಾಗವಾಗಿದೆ,” ಎಂದು ಅವರು ಹೇಳಿದರು. ಏಷ್ಯಾದಾದ್ಯಂತ ಮಕಾವೊದಿಂದ ಶುಭಸಂದೇಶವನ್ನು ಕೊಂಡೊಯ್ದ ಪ್ರೇಷಿತರ ಪೀಳಿಗೆಗಳ ಬಗ್ಗೆ ಕೃತಜ್ಞತೆಯೇ ಈ ಮಹೋತ್ಸವದ ಮೊದಲ ಆಯಾಮವಾಗಿದೆ ಎಂದು ಅವರು ವಿವರಿಸಿದರು.
“ನಾನೂರ ಐವತ್ತು ವರ್ಷಗಳು ಬಹಳ ದೀರ್ಘ ಅವಧಿಯಾಗಿದೆ. ಪ್ರೇಷಿತರ ಹೆಜ್ಜೆಗುರುತುಗಳ ಮೂಲಕ ದೇವರು ನಮಗೆ ಅಪಾರ ಕೃಪೆಯನ್ನು ನೀಡಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞತೆ ಸಲ್ಲಿಸಬೇಕು, ಅವರಲ್ಲಿ ಅನೇಕರು ಮಕಾವೊದಿಂದ ಶುಭಸಂದೇಶವನ್ನು ಸಾರಲು ಹಾಗೂ ದೂರ ಪೂರ್ವದ ಅನೇಕ ಭಾಗಗಳಿಗೆ ಅದನ್ನು ಕೊಂಡೊಯ್ಯಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ.”
ಧರ್ಮಕ್ಷೇತ್ರದ ಧ್ಯೇಯವಾಕ್ಯವನ್ನು ಸ್ಮರಿಸುತ್ತಾ, ಧರ್ಮಾಧ್ಯಕ್ಷ ಲೀ ಅವರು ವಿಶ್ವಾಸಿಗಳನ್ನು “450 ವರ್ಷಗಳ ಪಯಣದ ಮೂಲಕ ದೇವರ ಕರುಣಾಮಯ ಮುಖವನ್ನು ನೋಡುವಂತೆ” ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
“ಪ್ರೇಷಿತರ ಮೂಲಕ ದೇವರು ನಮಗೆ ನೀಡಿದ ಕೃಪೆಗಳ ಮೂಲಕ ಅವರ ಕರುಣೆಯನ್ನು ನಾವು ನಿಜವಾಗಿಯೂ ಅನುಭವಿಸಬಹುದು,” ಎಂದು ಅವರು ಹೇಳಿದರು. ಮಕಾವೊವನ್ನು ತೊರೆದು ಶುಭಸಂದೇಶ ಸಾರಲು ಹೊರಟವರ ಸಾಕ್ಷ್ಯವನ್ನು ಉಲ್ಲೇಖಿಸಿದ ಅವರು, ಈ ಆಚರಣೆಯು ಕೇವಲ ಭೂತಕಾಲದ ಸ್ಮರಣೆಯಲ್ಲ ಎಂದು ಒತ್ತಿಹೇಳಿದರು.
“ಸುಂದರವಾದ ಮತ್ತು ಅರ್ಥಪೂರ್ಣವಾದ ಭೂತಕಾಲದ ನೆನಪುಗಳಲ್ಲಿಯೇ ನಾವು ಉಳಿಯುವುದಿಲ್ಲ. ಬದಲಾಗಿ ಅದನ್ನು ಮುಂದಕ್ಕೆ ಸಾಗಲು ಮತ್ತು ನಮ್ಮನ್ನು ನಾವು ನವೀಕರಿಸಿಕೊಳ್ಳಲು ಬಳಸಬೇಕು,” ಎಂದು ಅವರು ಹೇಳಿದರು. ಈ ನವೀಕರಣವು ಎಲ್ಲಾ ವಿಶ್ವಾಸಿಗಳ ಪ್ರೇಷಿತ ಶಿಷ್ಯತ್ವದ ಕಡೆಗೆ ಕೇಂದ್ರೀಕೃತವಾಗಿದೆ ಎಂದು ಅವರು ವಿವರಿಸಿದರು.
“ಇತ್ತೀಚೆಗೆ ದೀಕ್ಷಾಸ್ನಾನ ಪಡೆದ ಕಥೋಲಿಕರನ್ನು ಒಳಗೊಂಡು ಪ್ರತಿಯೊಬ್ಬರೂ ಆ ಪ್ರೇಷಿತ ಮನೋಭಾವವನ್ನು ಹೊಂದಿರಬೇಕು. ಶುಭಸಂದೇಶವನ್ನು ಸಾರುವ ಉತ್ಸಾಹವನ್ನು ಹೊಂದಿ, ದೇವರ ಕರುಣಾಮಯ ಕೃಪೆಯೊಂದಿಗೆ ಮತ್ತೊಮ್ಮೆ ಮುಂದಕ್ಕೆ ಸಾಗಬೇಕು,” ಎಂದು ಅವರು ಹೇಳಿದರು. “ಈ ರೀತಿಯಲ್ಲಿಯೇ ನಾವು ಕೇವಲ ನಮ್ಮ ಪಾವಿತ್ರ್ಯತೆಯಲ್ಲಷ್ಟೇ ಅಲ್ಲ, ಶುಭಸಂದೇಶವನ್ನು ಸಾರುವ ಪ್ರೇಷಿತ ಉತ್ಸಾಹದಲ್ಲಿಯೂ ನವೀಕರಣವನ್ನು ಕಂಡುಕೊಳ್ಳಬಹುದು.”
ಭರವಸೆಯ ಸಂದೇಶ
ಧ್ಯೇಯ ಮತ್ತು ಭರವಸೆಯ ಕುರಿತ ಇದೇ ಒತ್ತಡವು ಹಾಂಗ್ ಕಾಂಗ್‌ನ ಸಹಾಯಕ ಧರ್ಮಾಧ್ಯಕ್ಷರಾದ ಜೋಸೆಫ್ ಹಾ ಚಿ-ಶಿಂಗ್ ಅವರ ಚಿಂತನೆಗಳಲ್ಲಿಯೂ ವ್ಯಕ್ತವಾಯಿತು. ಹಾಂಗ್ ಕಾಂಗ್ ಧರ್ಮಕ್ಷೇತ್ರವಾಗಿ ಘೋಷಿಸಲ್ಪಟ್ಟ80ನೇ ವಾರ್ಷಿಕೋತ್ಸವವನ್ನು “ಭರವಸೆ” ಎಂಬ ಧ್ಯೇಯದಡಿ ಆಚರಿಸುತ್ತಿದೆ.
“ನಮ್ಮ ಆಚರಣೆಯ ಧ್ಯೇಯವು ಭರವಸೆಯ ಸಂದೇಶವಾಗಿದೆ,” ಎಂದು ಧರ್ಮಾಧ್ಯಕ್ಷ ಹಾ ಹೇಳಿದರು. “ಭರವಸೆಯನ್ನು ನೀಡುವ ಶುಭಸಂದೇಶವನ್ನು ನಾವು ಪ್ರೇಷಿತರಿಂದ ಸ್ವೀಕರಿಸಿದ್ದೇವೆ. ಆದರೆ ಅದನ್ನು ಇತರರಿಗೆ ತಲುಪಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ.” ಆಡ್ ಲಿಮಿನಾ ಯಾತ್ರೆಯ ಮಹತ್ವವನ್ನು “ನಮಗೆ ಅತ್ಯಂತ ವಿಶೇಷ ಅರ್ಥವನ್ನು ಹೊಂದಿರುವ, ಅಮೂಲ್ಯ ಕ್ಷಣ” ಎಂದು ವರ್ಣಿಸಿದರು.
ವ್ಯಾಟಿಕನ್ ವಿಭಾಗಗಳೊಂದಿಗಿನ ಭೇಟಿಗಳು ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ನಡೆದ ಸಂದರ್ಶನದ ಮೂಲಕ, ಧರ್ಮಾಧ್ಯಕ್ಷರು ವಿಶ್ವವ್ಯಾಪಿ ಧರ್ಮಸಭೆಗೆ ಸೇರಿರುವ ಆಳವಾದ ಅನುಭವವನ್ನು ಪಡೆದರು ಎಂದು ಅವರು ಹೇಳಿದರು.
“ಇದು ನಮಗೆ ಒಂದು ವಿಶೇಷ ಅನುಭವವನ್ನು ನೀಡುತ್ತದೆ. ವಿಶ್ವವ್ಯಾಪಿ ಧರ್ಮಸಭೆಯೊಂದಿಗೆ ನಾವು ಸಂಪರ್ಕ ಹೊಂದಿದ್ದೇವೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ, ಕ್ರಿಸ್ತನ ಸಂಪೂರ್ಣ ಹಿಂಡಿನೊಂದಿಗೆ ಐಕ್ಯತೆಯಲ್ಲಿ ಇರುವ ಅನುಭವವನ್ನು ಇದು ನೀಡುತ್ತದೆ.”
ಈ ಅನುಭವವು ಸ್ಥಳೀಯ ಧರ್ಮಸಭೆಯನ್ನು ತನ್ನ ಧ್ಯೇಯದಲ್ಲಿ ಇನ್ನಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು. “ನಾವು ಧರ್ಮಸಭೆಯ ಭಾಗವಾಗಿದ್ದೇವೆ ಎಂಬ ಭರವಸೆಯನ್ನು ಇದು ನಮಗೆ ನೀಡುತ್ತದೆ. ಆದ್ದರಿಂದ ಶುಭಸಂದೇಶದಿಂದ ಬರುವ ಈ ಭರವಸೆಯನ್ನು ಮುಂದುವರಿಸಲು ಮತ್ತು ಇತರರಿಗೆ ತಲುಪಿಸಲು ಇದು ನಮ್ಮನ್ನು ಪ್ರೋತ್ಸಾಹಿಸುತ್ತದೆ.”
“ಹಾಂಗ್ ಕಾಂಗ್‌ನಲ್ಲಿಯೂ ಮತ್ತು ಇತರ ಪ್ರದೇಶಗಳಲ್ಲಿಯೂ ಮುಂದಿನ ಪೀಳಿಗೆಗಳಿಗಾಗಿ ನಾವೇ ಪ್ರೇಷಿತರಾಗಬೇಕು,” ಎಂದು ಭವಿಷ್ಯದತ್ತ ದೃಷ್ಟಿ ಹರಿಸುತ್ತಾ, ಇಂದಿನ ಕಥೋಲಿಕರ ಮೇಲಿರುವ ಜವಾಬ್ದಾರಿಯನ್ನು ಧರ್ಮಾಧ್ಯಕ್ಷ ಹಾ ಒತ್ತಿಹೇಳಿದರು ಹೇಳಿದರು. ಈ ಭೇಟಿಯು “ನಮಗಾಗಿ ದೇವರು ಹೊಂದಿರುವ ಯೋಜನೆಯ ಒಂದು ಭಾಗವಾಗಿದೆ” ಎಂದು ಅವರು ವಿವರಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).