ಹುಡುಕಿ

ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯಕ್ಕೆ ಉಡುಗೊರೆಯಾಗಿ ನೀಡಲಾದ ಪವಿತ್ರ ಪಾತ್ರೆ (ಚಾಲಿಸ್) ಯನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರಿಂದ ಸ್ವೀಕರಿಸುತ್ತಿರುವ ಕಾರ್ಡಿನಲ್ ಜೋಸೆ ಕೋಬೊ ಕಾನೊ. ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯಕ್ಕೆ ಉಡುಗೊರೆಯಾಗಿ ನೀಡಲಾದ ಪವಿತ್ರ ಪಾತ್ರೆ (ಚಾಲಿಸ್) ಯನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರಿಂದ ಸ್ವೀಕರಿಸುತ್ತಿರುವ ಕಾರ್ಡಿನಲ್ ಜೋಸೆ ಕೋಬೊ ಕಾನೊ.  (@Vatican Media)

ಕಾರ್ಡಿನಲ್ ಕೋಬೊ: ‘ಮ್ಯಾಡ್ರಿಡ್, ಪೂಜ್ಯ ಜಗದ್ಗುರುಗಳು ಎಲ್ಲರಿಗೂ ನೈತಿಕ ಮಾರ್ಗದರ್ಶಕರಾಗಿದ್ದಾರೆ ಎಂಬುದನ್ನು ತೋರಿಸಿದೆ’

ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಸ್ಪೇನ್‌ನಲ್ಲಿನ ತಮ್ಮ ಅಪೋಸ್ತೋಲಿಕ ಪ್ರವಾಸದ ಮೊದಲ ಹಂತವನ್ನು ಮುಕ್ತಾಯಗೊಳಿಸುತ್ತಿರುವ ಸಂದರ್ಭದಲ್ಲಿ, ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೋಸೆ ಕೋಬೊ ಕಾನೊ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಮ್ಯಾಡ್ರಿಡ್‌ನಲ್ಲಿ ನಡೆದ ನಾಲ್ಕು ದಿನಗಳ ಭೇಟಿಗೆ ಯುವಜನರು ಮತ್ತು ರಾಜಕೀಯ ನಾಯಕರು ನೀಡಿದ ಆತ್ಮೀಯ ಪ್ರತಿಕ್ರಿಯೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಸಾಲ್ವಟೋರ್ ಸೆರ್ನುಜಿಯೊ ಮತ್ತು ಪೆಟ್ರಿಸಿಯಾ ಯೆನೆಸ್ಟ್ರೋಜಾ - ಮ್ಯಾಡ್ರಿಡ್

ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಮ್ಯಾಡ್ರಿಡ್‌ನಿಂದ ಬಾರ್ಸಿಲೋನಾಕ್ಕೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ, ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೋಸೆ ಕೋಬೊ ಕಾನೊ ಅವರು, ಈ ಮೊದಲ ಕೆಲವು ತೀವ್ರವಾದ ದಿನಗಳ ನಂತರ ಪೂಜ್ಯ ಜಗದ್ಗುರುಗಳು ಧರ್ಮಸಭೆಗೂ ಮತ್ತು ಸ್ಪ್ಯಾನಿಷ್ ಸಮಾಜಕ್ಕೂ ಭವಿಷ್ಯಕ್ಕಾಗಿ ಅನುಸರಿಸಬೇಕಾದ ಅತ್ಯಂತ ಸ್ಪಷ್ಟವಾದ ಮಾರ್ಗಗಳನ್ನು ಈಗಾಗಲೇ ತೋರಿಸಿದ್ದಾರೆ ಎಂದು ಹೇಳಿದರು. ಕಾರ್ಡಿನಲ್ ಜೋಸೆ ಕೋಬೊ ಕಾನೊ ಅವರು ಮ್ಯಾಡ್ರಿಡ್‌ನಲ್ಲಿ ಪೂಜ್ಯ ಜಗದ್ಗುರುಗಳೊಂದಿಗೆ ಇದ್ದರು ಮತ್ತು ಬಾರ್ಸಿಲೋನಾ ಹಾಗೂ ಕ್ಯಾನರಿ ದ್ವೀಪಗಳಲ್ಲಿಯೂ ಅವರೊಂದಿಗೆ ಮುಂದುವರಿಯಲಿದ್ದಾರೆ.

ಮ್ಯಾಡ್ರಿಡ್ ಭೇಟಿಯ ಅಂತ್ಯದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಾರ್ಡಿನಲ್ ಅವರು, ಸ್ಪೇನ್‌ನಲ್ಲಿನ ಅಪೋಸ್ತೋಲಿಕ ಪ್ರವಾಸದ ಮೊದಲ ಹಂತವು ಎಲ್ಲ ನಿರೀಕ್ಷೆಗಳನ್ನು ಮೀರಿದೆ ಎಂದು ಹೇಳಿದರು. ನಗರದ ಜನರು ನೀಡಿದ ಉತ್ಸಾಹಭರಿತ ಪ್ರತಿಕ್ರಿಯೆಯೇ ಅದಕ್ಕೆ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು. ರಾಜಕೀಯ ನಾಯಕರಿಗೆ ಪೂಜ್ಯ ಜಗದ್ಗುರುಗಳು ನೀಡಿದ ಸಂದೇಶವನ್ನೂ ಹಾಗೂ ಧಾರ್ಮಿಕ ಸೇವಕರಿಂದ ನಡೆದ ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನು ಭೇಟಿಯಾದ ಸಂದರ್ಭವನ್ನೂ ಅವರು ಸ್ಮರಿಸಿದರು. ಈ ವಿಷಯವನ್ನು ಧರ್ಮಸಭೆಯು ಗಂಭೀರವಾಗಿ ಎದುರಿಸುತ್ತಿದ್ದು, “ಯಾವುದೇ ಸಂತ್ರಸ್ತರು ನಿರ್ಲಕ್ಷ್ಯಕ್ಕೊಳಗಾದ ಭಾವನೆಯನ್ನು ಅನುಭವಿಸಬಾರದು” ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಡಿನಲ್ ಅವರು ವಿವರಿಸಿದರು.

ಪ್ರಶ್ನೆ: ಗೌರವಾನ್ವಿತ ಕಾರ್ಡಿನಲ್ ಅವರೇ, ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಭೇಟಿಯ ಸಂದರ್ಭದಲ್ಲಿ ಮ್ಯಾಡ್ರಿಡ್ ಅನುಭವಿಸಿದ ಈ ದಿನಗಳ ಬಗ್ಗೆ ನಿಮ್ಮ ಮೌಲ್ಯಮಾಪನವೇನು?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಇವು ತೀವ್ರವಾದ ಸಿದ್ಧತೆಯ ದಿನಗಳಾಗಿದ್ದವು. ನಾವು ಈ ಭೇಟಿಯು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯದೆ, ಒಂದು ನೈಜ ಆಧ್ಯಾತ್ಮಿಕ ಪಯಣವಾಗಬೇಕೆಂದು ಬಯಸಿದ್ದರಿಂದ ಅತ್ಯಂತ ಸೂಕ್ಷ್ಮವಾಗಿ ಸಿದ್ಧತೆ ನಡೆಸಿದ್ದೆವು. ವಾಸ್ತವವಾಗಿ, ಇವು ಬಹಳ ಗಾಢವಾದ ದಿನಗಳಾಗಿದ್ದವು. ನಾವು ಪಡೆದ ಪ್ರತಿಕ್ರಿಯೆ ಹಾಗೂ ಪೂಜ್ಯ ಜಗದ್ಗುರು ಪಡೆದ ಸ್ವಾಗತ ನಮಗೆ ಆಶ್ಚರ್ಯವನ್ನುಂಟುಮಾಡಿತು. ಇದು ಕೇವಲ ಜನರ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಮ್ಯಾಡ್ರಿಡ್ ಧರ್ಮಸಭೆಯು ತೋರಿದ ಆತ್ಮೀಯತೆಯ ದೃಷ್ಟಿಯಿಂದಲೂ ವಿಶೇಷವಾಗಿತ್ತು. ಅದೇ ರೀತಿ, ಸಂಸತ್ತಿನಲ್ಲಿ ಪೂಜ್ಯ ಜಗದ್ಗುರುಗಳಿಗೆ ದೊರೆತ ಆತ್ಮೀಯ ಸ್ವಾಗತವೂ ನಮ್ಮನ್ನು ಆಶ್ಚರ್ಯಗೊಳಿಸಿತು.

ಪ್ರಶ್ನೆ: ಇದು ಎಲ್ಲರನ್ನೂ ಆಶ್ಚರ್ಯಗೊಳಿಸಿದ ಸಂಗತಿಯಾಗಿದೆ. ವಿಶೇಷವಾಗಿ, ಎಲ್ಲಾ ರಾಜಕಾರಣಿಗಳಿಂದ ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಸರ್ವಾನುಮತದ ಕರತಾಡನ ಮತ್ತು “ಜಗದ್ಗುರುಗಳಿಗೆ ಜಯವಾಗಲಿ!” ಎಂಬ ನಿಂತು ಗೌರವ ಸಲ್ಲಿಸಿದ ಕ್ಷಣ. ರಾಜಕೀಯ ಮತ್ತು ಸಮಾಜವು ಇಂತಹ ಸಂದೇಶಗಳಿಗಾಗಿ ಹಾತೊರೆಯುತ್ತಿದೆ ಎಂಬುದರ ಸಂಕೇತಗಳೆಂದು ಇದನ್ನು ಹೇಳಬಹುದೇ? ನಿಮ್ಮ ಅಭಿಪ್ರಾಯವೇನು?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಇದು ಧರ್ಮಸಭೆಯು ಭಾಗವಹಿಸುವ ಒಂದು ಸಂವಾದವಾಗಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ, ನಮ್ಮ ದೃಷ್ಟಿಯನ್ನು ಮೇಲಕ್ಕೆ ಎತ್ತುವಂತೆ ಸದಾ ಆಹ್ವಾನಿಸುವ ಸಂದೇಶವಾಗಿದೆ. ಯುರೋಪಿನ ರಾಜಕೀಯ ವಲಯದಲ್ಲಿ ಪೂಜ್ಯ ಜಗದ್ಗುರುಗಳು ತಮ್ಮ ಪ್ರಸ್ತಾಪಗಳ ಮೂಲಕ ಹಾಗೂ ಧರ್ಮಸಭೆಯ ಬೋಧನೆಗಳ ಮೂಲಕ ನೈತಿಕ ಮಾರ್ಗದರ್ಶಕರಾಗಿ ಮತ್ತು ಧಾರ್ಮಿಕ-ನೈತಿಕ ಆದರ್ಶವಾಗಿ ಇನ್ನಷ್ಟು ಗೌರವವನ್ನು ಗಳಿಸಿದ್ದಾರೆ ಎಂದು ನಾನು ನಂಬುತ್ತೇನೆ. ಪೂಜ್ಯ ಜಗದ್ಗುರುಗಳು ನಮ್ಮನ್ನು ಭೂತಕಾಲದತ್ತ ಮಾತ್ರ ನೋಡುವುದಕ್ಕೆ ಆಹ್ವಾನಿಸಲಿಲ್ಲ. ಸ್ಪೇನ್‌ನ ಕಥೋಲಿಕ ಸಾಂಸ್ಕೃತಿಕ ಪರಂಪರೆಯ ಮೇಲೆಯೇ ಅವಲಂಬಿತರಾಗಿರದೆ, ಭವಿಷ್ಯದತ್ತ ದೃಷ್ಟಿ ಹರಿಸುವಂತೆ ಅವರು ನಮಗೆ ಕರೆ ನೀಡಿದರು.

ಪ್ರಶ್ನೆ: ಪೂಜ್ಯ ಜಗದ್ಗುರುಗಳ ಈ ಕರೆಯನ್ನು ನೀವು ಹೇಗೆ ಅರ್ಥೈಸುತ್ತೀರಿ?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಪೂಜ್ಯ ಜಗದ್ಗುರುಗಳು ಹೇಳುವಂತೆಯೇ, ಧರ್ಮಸಭೆಯು ನಿರಂತರವಾಗಿ ಬೆಳೆಯಬೇಕೆಂಬ ಸವಾಲನ್ನು ಎದುರಿಸುತ್ತಿದೆ ಎಂದು ನಾನು ನಂಬುತ್ತೇನೆ. ಇದು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಹೇಳಿದ ಬೋಧನೆಗಳ ಮುಂದುವರಿಕೆಯಾಗಿದೆ. ಈ ಪರಿವರ್ತನೆಯ ಕಾಲದಲ್ಲಿ, ಈ ವಿಶಿಷ್ಟ ಸಂದರ್ಭದಲ್ಲಿಯೂ, ಧರ್ಮಸಭೆಯು ಅತ್ಯಂತ ಸ್ಪಷ್ಟವಾದ ಪರಂಪರೆ ಮತ್ತು ಸಮೃದ್ಧ ಅನುಭವಗಳನ್ನು ಹೊಂದಿದೆ. ಆದರೆ ಅವುಗಳನ್ನು ಯಥಾವತ್ತಾಗಿ ಪುನರಾವರ್ತಿಸಲೇಬೇಕೆಂಬ ಬಾಧ್ಯತೆ ಅವಳಿಗಿಲ್ಲ. ಇದರ ಅರ್ಥ, ಇತಿಹಾಸದಿಂದ ಪಾಠಗಳನ್ನು ಕಲಿಯುವುದು; ಆದರೆ ಅದೇ ಸಮಯದಲ್ಲಿ ನಮ್ಮ ಭಾಷೆಯನ್ನು, ನಮ್ಮ ರಚನೆಗಳನ್ನು ನವೀಕರಿಸುವುದು ಮತ್ತು ಉದ್ಭವಿಸುತ್ತಿರುವ ಹೊಸ ಸವಾಲುಗಳಿಗೆ ನಿರಂತರವಾಗಿ ಉತ್ತರ ನೀಡುವುದು. ಈ ದೃಷ್ಟಿಯಿಂದ, ಪೂಜ್ಯ ಜಗದ್ಗುರುಗಳ “Magnifica humanitas” ವಿಶ್ವಪತ್ರಿಕೆಯು ಒಂದು ಬೆಳಕು ಮತ್ತು ಮಾರ್ಗದರ್ಶಿಯಾಗಿದೆ. ವಿಶೇಷವಾಗಿ, ಸಾಮಾನ್ಯರ ಕರೆ (Lay Vocations) ಮತ್ತು ಅವರನ್ನು ಧರ್ಮಸಭೆಯ ಪಯಣದಲ್ಲಿ ಇನ್ನಷ್ಟು ಸಮಗ್ರವಾಗಿ ಒಳಗೊಳ್ಳಿಸುವ ವಿಚಾರವನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಸ್ಪಷ್ಟ ದಿಕ್ಕನ್ನು ನೀಡುತ್ತದೆ.

ಪ್ರಶ್ನೆ: ಈ ಕ್ಷೇತ್ರದಲ್ಲಿ ಯಾವ ರೀತಿಯ ಸವಾಲುಗಳು ಉದ್ಭವಿಸಬಹುದು ಮತ್ತು ಅವುಗಳನ್ನು ಹೇಗೆ ಎದುರಿಸಬೇಕು?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಮೊದಲನೆಯದಾಗಿ, ನಾವು ಈ ಸವಾಲನ್ನು ಸ್ವೀಕರಿಸಬೇಕು. ಅಂದರೆ, ನಾವು ಬೆಳವಣಿಗೆಯ ಒಂದು ಹಂತವನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು ಗುರುತಿಸಬೇಕು. ಆದರೆ ಇದು ನಾವು ರೂಪಿಸಬೇಕಾದ ಬೆಳವಣಿಗೆಯಾಗಿದೆ. ಅದನ್ನು ಸಾಮಾನ್ಯರ ಪಾಲ್ಗೊಳ್ಳುವಿಕೆಯೊಂದಿಗೆ, ಅವರ ತರಬೇತಿಯೊಂದಿಗೆ ಮತ್ತು ಅವರ ಮೇಲಿನ ವಿಶ್ವಾಸದೊಂದಿಗೆ ರೂಪಿಸಬೇಕಾಗಿದೆ. ಇದು ಜವಾಬ್ದಾರಿಯನ್ನು ಕ್ರಮೇಣ ಸ್ವೀಕರಿಸುವ ಒಂದು ಪ್ರಕ್ರಿಯೆಯಾಗಿದೆ. ಈ ವಿಷಯದಲ್ಲಿ ಸಂಪೂರ್ಣ ಸಿನೋಡಲ್ ಪಯಣವು ನಮಗೆ ಒಂದು ಬೆಳಕನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ನಾವು ಈಗಾಗಲೇ ಆರಂಭಿಸಿರುವ ಮಾರ್ಗವೂ ಇದೇ ಆಗಿದೆ. ಅಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಕರೆಯುವಿಕೆಗೆ ಅನುಗುಣವಾಗಿ ಧರ್ಮಸಭೆಯಲ್ಲಿ ತನ್ನ ಸ್ಥಾನವನ್ನು ಪಡೆದು ತನ್ನ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕು. ಮ್ಯಾಡ್ರಿಡ್‌ನಲ್ಲಿ ಈ ದಿನಗಳಲ್ಲಿ ಪೂಜ್ಯ ಜಗದ್ಗುರುಗಳು ನಮಗೆ ನೀಡಿದ ಎಲ್ಲಾ ಸಂದೇಶಗಳಲ್ಲಿಯೂ ಈ ವಿಷಯವು ಪುನರಾವರ್ತಿತವಾಗಿ ಕೇಳಿಬಂದ ಪ್ರಮುಖ ಸಂದೇಶವಾಗಿದೆ.

ಪ್ರಶ್ನೆ: ಸ್ವತಂತ್ರ ಆಯ್ಕೆಯ ಮೂಲಕ ನವೀಕೃತ ಧರ್ಮಸಭೆಯ ದಾರಿಯನ್ನು ರೂಪಿಸುತ್ತಿರುವ ಹೊಸ ತಲೆಮಾರಿನವರಾದ Gen Z ಯುವಜನರನ್ನು ನೋಡುವುದು ಆಸಕ್ತಿದಾಯಕವಾಗಿದೆ.

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಹೌದು, ನಿಸ್ಸಂದೇಹವಾಗಿ ಒಂದು ಜಾಗೃತಿ ಮೂಡುತ್ತಿದೆ ಎಂದು ನಾನು ನಂಬುತ್ತೇನೆ. ಆದರೆ ನಾವು ಎಚ್ಚರಿಕೆಯಿಂದಿರಬೇಕು, ಏಕೆಂದರೆ ಈ ಜಾಗೃತಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಕೆಲವು ಅಧ್ಯಯನಗಳು ಜನರಲ್ಲಿ ಅತೀಂದ್ರಿಯತೆಯ ಕಡೆಗೆ ಆಕರ್ಷಣೆ ಮತ್ತು ಆಧ್ಯಾತ್ಮಿಕ ಹುಡುಕಾಟದ ಹಂಬಲವಿದೆ ಎಂದು ಸೂಚಿಸುತ್ತವೆ. ಆದರೆ ಅದೇ ಸಮಯದಲ್ಲಿ, ನಾವು ಅವರಿಗೆ ಪ್ರಭು ಯೇಸು ಕ್ರಿಸ್ತರ ಮೂಲ ಸಂದೇಶದತ್ತ, ಶುಭಸಂದೇಶದ ಸಾರದತ್ತ ಹಾಗೂ ಧರ್ಮಸಭೆಯ ಪರಂಪರೆಯತ್ತ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅಂದರೆ, ಅವರು ಇವುಗಳಿಂದ ದೂರವಾಗದಂತೆ ಸಹಾಯ ಮಾಡಬೇಕು.

ಈ ಕ್ಷಣದಲ್ಲಿ, ಪ್ರಭು ಧರ್ಮಸಭೆಯ ಬಾಗಿಲಿನ ಮುಂದೆ ತಂದಿಟ್ಟಿರುವ ಒಂದು ಮಹತ್ತರ ಸವಾಲನ್ನು ನಾವು ಎದುರಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ಅದು ಜನರನ್ನು ಪ್ರಭು ಯೇಸು ಕ್ರಿಸ್ತರಲ್ಲಿನ ವಿಶ್ವಾಸದ ಅನುಭವದತ್ತ ಮತ್ತು ಧರ್ಮಸಭೆಯಲ್ಲಿನ ವಿಶ್ವಾಸದ ಅನುಭವದತ್ತ ನಡೆಸುವುದಾಗಿದೆ. ನಾವು ಕೇವಲ ಸಂಖ್ಯೆಗಳಲ್ಲೇ ಸಿಲುಕಿಕೊಳ್ಳಬಾರದು ಅಥವಾ “ನಮ್ಮಲ್ಲಿ ಎಷ್ಟು ಜನರಿದ್ದಾರೆ!” ಅಥವಾ “ಇನ್ನೆಷ್ಟು ಜನರು ಬರಲಿದ್ದಾರೆ?” ಎಂಬ ಉತ್ಸಾಹದಲ್ಲೇ ಮುಳುಗಬಾರದು. ಇವೆಲ್ಲವೂ ಒಳ್ಳೆಯದೇ, ಆದರೆ ಅವು ಕೇವಲ ಆರಂಭ ಮಾತ್ರ. ಈ ಕ್ಷಣದಲ್ಲಿ ಇದು ಸಂಪೂರ್ಣ ಧರ್ಮಸಭೆಗೆ, ವಿಶೇಷವಾಗಿ ಸ್ಪೇನ್‌ನ ಧರ್ಮಸಭೆಗೆ, ಒಂದು ಜವಾಬ್ದಾರಿಯ ಕರೆಯಾಗಿದೆ.

ಪ್ರಶ್ನೆ: ಸಿಬೆಲೆಸ್‌ನಲ್ಲಿ ನಡೆದ ಪೂಜ್ಯ ಜಗದ್ಗುರುಗಳ ಪವಿತ್ರ ಬಲಿಪೂಜೆಯಲ್ಲಿ ಮತ್ತು ಕಾರ್ಪಸ್ ಕ್ರಿಸ್ತಿ ಮೆರವಣಿಗೆಯಲ್ಲಿ ಸುಮಾರು ಹದಿನೈದು ಲಕ್ಷ ಜನರನ್ನು ನಾವು ನೋಡಿದೆವು. ಅದಕ್ಕೂ ಮುನ್ನದ ಸಂಜೆ, ಪ್ಲಾಜಾ ದೆ ಲಿಮಾದಲ್ಲಿ ನಡೆದ ಜಾಗರಣೆಯಲ್ಲಿ ಆರು ಲಕ್ಷ ಯುವಜನರು ಪವಿತ್ರ ಸಂಸ್ಕಾರದ ಮುಂದೆ ಮಂಡಿಯೂರಿ, ಪ್ರಾರ್ಥನೆ ಮತ್ತು ಮೌನದಲ್ಲಿ ಭಾಗವಹಿಸಿದರು. ಹಾಗಾದರೆ, ಜನರು ಹೇಳುವಷ್ಟು ಸ್ಪೇನ್ ನಿಜವಾಗಿಯೂ ಧರ್ಮನಿರಪೇಕ್ಷವಾಗಿದೆಯೇ, ಅಥವಾ ಇಲ್ಲವೇ?

 ಕಾರ್ಡಿನಲ್ ಜೋಸೆ ಕೋಬೊ ಕಾನೊ:ಇಲ್ಲ, ಇಲ್ಲ. ಸ್ಪೇನ್ ಒಂದು ಉದಯೋನ್ಮುಖ ದೇಶವಾಗಿದೆ. ಇಲ್ಲಿ ದೇವರಿಗಾಗಿ ಮಹತ್ತರವಾದ ಹುಡುಕಾಟ ನಡೆಯುತ್ತಿದೆ. ಅನೇಕ ಜನರು — ಮತ್ತು ನಾವು ಅದನ್ನು ಜಾಗರಣೆಯಲ್ಲಿಯೂ ಕಂಡೆವು — ವಿಶೇಷವಾಗಿ ಯುವಜನರು ದೇವರನ್ನು ಹುಡುಕುತ್ತಿದ್ದಾರೆ. ಈ ಕ್ಷಣದಲ್ಲಿ ಇದು ಧರ್ಮಸಭೆಯ, ಸ್ಪೇನ್‌ನ ಧರ್ಮಸಭೆಯ ಹಾಗೂ ವಿಶೇಷವಾಗಿ ಮ್ಯಾಡ್ರಿಡ್ ಧರ್ಮಸಭೆಯ ಒಂದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ನಾನು ನಂಬುತ್ತೇನೆ. ಈ ಜಾಗೃತಿಯ ಪಯಣದಲ್ಲಿ ನಾವು ಜನರೊಂದಿಗೆ ಹೇಗೆ ನಡೆಯಬಹುದು? ನಮ್ಮ ಬಳಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಗಾಯಗಳು, ಪ್ರಶ್ನೆಗಳು ಮತ್ತು ಹುಡುಕಾಟಗಳೊಂದಿಗೆ ನಾವು ವೈಯಕ್ತಿಕವಾಗಿ ಜೊತೆಯಾಗಬೇಕು.

ನಿಸ್ಸಂದೇಹವಾಗಿ, ಈ ಭೇಟಿಯು ಅತ್ಯಂತ ಆಳವಾದ ಅನುಭವವಾಗಿತ್ತು. ಪವಿತ್ರ ಬಲಿಪೂಜೆಯ ನಂತರ ಜನರು ಭಾವೋದ್ವೇಗದಿಂದ ಕಣ್ಣೀರು ಸುರಿಸುವುದನ್ನು ನೋಡುವುದಷ್ಟೇ ಅಲ್ಲ, ದೇವರ ಜನಾಂಗದ ಭಾಗವಾಗಿದ್ದೇವೆ ಎಂಬ ಬಲವಾದ ಅನುಭವವನ್ನು ಅವರಲ್ಲಿ ಕಾಣಲು ಸಾಧ್ಯವಾಯಿತು.ಇದು ನಾವು ಮತ್ತು ಪೂಜ್ಯ ಜಗದ್ಗುರುಗಳು ಜನರಿಗೆ ತಾವು ದೇವರ ಜನರ ಒಂದು ಭಾಗವೆಂದು ಅನುಭವಿಸುವ ಅವಕಾಶವನ್ನು ನೀಡಿದ ಕ್ಷಣವಾಗಿತ್ತು. ಈಗ, ಮುಂದಿನ ದಿನಗಳಲ್ಲಿಯೂ ನಾವು ಅವರೊಂದಿಗೆ ನಡೆಯುತ್ತಾ, ಅವರಿಗೆ ಮಾರ್ಗದರ್ಶನ ಮತ್ತು ಸಹವಾಸವನ್ನು ನೀಡಬೇಕಾಗಿದೆ.

ಪ್ರಶ್ನೆ: ನಂತರ ದೌರ್ಜನ್ಯಗಳ ವಿಷಯವೂ ಇದೆ. ನಿನ್ನೆ ಪೂಜ್ಯ ಜಗದ್ಗುರುಗಳು ನುಂಶಿಯೇಚರ್‌ನಲ್ಲಿ ಹಲವಾರು ಸಂತ್ರಸ್ತರನ್ನು ಭೇಟಿಯಾದರು. ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸ್ಪೇನ್‌ನ ಧರ್ಮಸಭೆ ಯಾವ ಹಂತದಲ್ಲಿದೆ?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಇದು ಭೂತಕಾಲದ ಒಂದು ಗಾಯವಾಗಿದೆ. ಆದರೆ ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ನಾವು ಪ್ರಯತ್ನಿಸುತ್ತಿರುವ ಗಾಯವೂ ಆಗಿದೆ.ಇದು ಧರ್ಮಸಭೆಯು ಎದುರಿಸುತ್ತಿರುವ ಒಂದು ಪರೀಕ್ಷೆಯಾಗಿದೆ. ಕನಿಷ್ಠ ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದಲ್ಲಿ, ಕಳೆದ ಹತ್ತು ವರ್ಷಗಳಿಂದ ನಾವು ಸಂತ್ರಸ್ತರೊಂದಿಗೆ ನಡೆದುಕೊಂಡು, ಅವರಿಗೆ ಸಹಾಯ ಮತ್ತು ಬೆಂಬಲ ನೀಡುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ನಾನು ನಂಬುತ್ತೇನೆ. ನಾವು ಕ್ಷಮೆಯಾಚಿಸಿದ ಸಂದರ್ಭಗಳೂ ಇದ್ದವು. ಏಕೆಂದರೆ ನಾವು ಹಿಂದೆ ಪಡೆದಿದ್ದ ಸಂಸ್ಕೃತಿಯಿಂದ ಭಿನ್ನವಾದ ಒಂದು ಹೊಸ ಸಂಸ್ಕೃತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ.

ಸ್ಪೇನ್‌ನ ಧರ್ಮಸಭೆಯು ವೈವಿಧ್ಯಮಯವಾಗಿದ್ದರೂ, ಈ ಹೊಸ ಸಂಸ್ಕೃತಿಯನ್ನು ಬೆಳೆಸಲು, ಸೂಕ್ತ ಬೆಂಬಲವನ್ನು ಒದಗಿಸಲು ಮತ್ತು ಯಾವುದೇ ಸಂತ್ರಸ್ತರು ತಮ್ಮನ್ನು ನಿರ್ಲಕ್ಷಿಸಲ್ಪಟ್ಟವರೆಂದು ಭಾವಿಸದಂತೆ ನೋಡಿಕೊಳ್ಳಲು ನಿಜವಾದ ಹೆಜ್ಜೆಗಳನ್ನು ಇಡುತ್ತಿದೆ. ವಾಸ್ತವವಾಗಿ, ಇದು ಅತ್ಯಂತ ಸಂಕೀರ್ಣ ಮತ್ತು ವೈವಿಧ್ಯಮಯ ಪರಿಸ್ಥಿತಿಯಾಗಿದೆ. “ಸಂತ್ರಸ್ತರು” ಎಂಬ ಸಾಮಾನ್ಯ ಪದದಲ್ಲಿ ಎಲ್ಲರನ್ನೂ ಸೇರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸಂತ್ರಸ್ತರೂ ವಿಶಿಷ್ಟ ವ್ಯಕ್ತಿಯಾಗಿದ್ದಾರೆ ಮತ್ತು ಪ್ರತಿಯೊಬ್ಬರಿಗೂ ವಿಶೇಷವಾದ ಕಾಳಜಿ ಹಾಗೂ ಸಹಾಯದ ಅಗತ್ಯವಿದೆ. ಆದ್ದರಿಂದ, ಸಂತ್ರಸ್ತರ ಬಗ್ಗೆ ಸಾಮಾನ್ಯೀಕರಿಸಿ ಮಾತನಾಡಲು ಸಾಧ್ಯವಿಲ್ಲ.

ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ಈ ಸಂದರ್ಭದಲ್ಲಿ ಸರ್ಕಾರವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ. ಸರ್ಕಾರ, ಧರ್ಮಾಧ್ಯಕ್ಷರ ಸಮ್ಮೇಳನ ಮತ್ತು ವಿವಿಧ ಧರ್ಮಪ್ರಾಂತ್ಯಗಳ ನಡುವಿನ ಒಪ್ಪಂದಗಳು ಸಾಕಷ್ಟು ಸಕಾರಾತ್ಮಕವಾದ ಮಾರ್ಗವನ್ನು ರೂಪಿಸುತ್ತಿವೆ.

ಪ್ರಶ್ನೆ: ಪೂಜ್ಯ ಜಗದ್ಗುರುಗಳು ಧರ್ಮಾಧ್ಯಕ್ಷರೊಂದಿಗೆ ಮಾತನಾಡುವಾಗಲೂ ದೌರ್ಜನ್ಯಗಳ ಸಂತ್ರಸ್ತರ ಪರಿಸ್ಥಿತಿಯ ಕುರಿತು ಪ್ರಸ್ತಾಪಿಸಿದರು ಮತ್ತು ಅವರನ್ನು ಇನ್ನಷ್ಟು ಆತ್ಮೀಯವಾಗಿ ಸ್ವಾಗತಿಸಲು ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಿದರು.

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಪೂಜ್ಯ ಜಗದ್ಗುರುಗಳು “ಒಳ್ಳೆಯ ಸಮಾರ್ಯದ ಧರ್ಮಸಭೆ”ಯ ಪಾತ್ರವನ್ನು ಆಳವಾಗಿ ಗ್ರಹಿಸಿದ್ದಾರೆ ಎಂದು ನಾನು ನಂಬುತ್ತೇನೆ. ಇದು ಧರ್ಮಸಭೆಯು ಯಾವಾಗಲೂ ಹೊಂದಿರುವ ಕರೆಯುವಿಕೆ ಮತ್ತು ಧ್ಯೇಯವಾಗಿದೆ. ಧರ್ಮಸಭೆಯು ಶಿಲುಬೆಯ ಪಾದದಲ್ಲಿ, ಒಬ್ಬ ಸಂತ್ರಸ್ತನ ಪಾದದಲ್ಲಿ ಜನಿಸಿತು. ಆದ್ದರಿಂದ ಧರ್ಮಸಭೆಯು ಯಾವಾಗಲೂ ದುರ್ಬಲರ ಪಕ್ಕದಲ್ಲಿ, ಶಿಲುಬೆಗೇರಿಸಲ್ಪಟ್ಟವರ ಪಕ್ಕದಲ್ಲಿ ನಿಲ್ಲುವ ಸಮುದಾಯವಾಗಿ ಗುರುತಿಸಲ್ಪಡಬೇಕು ಎಂದು ನಾನು ನಂಬುತ್ತೇನೆ.

ಪೂಜ್ಯ ಜಗದ್ಗುರುಗಳು ಈ ಚಿಂತನೆಯನ್ನು ಪ್ರತಿಯೊಂದು ಪರಿಸ್ಥಿತಿಗೂ ಅನ್ವಯಿಸಿದರು. ಅವರು ದುರ್ಬಲರ ಕುರಿತು, ವಿವಿಧ ರೀತಿಯ ಸಂಕಷ್ಟಗಳು ಮತ್ತು ಅನ್ಯಾಯಗಳ ಸಂತ್ರಸ್ತರ ಕುರಿತು ಮಾತನಾಡಿದರು. ಅದು ಜೊತೆಯಾಗಿ ನಡೆಯುವು, ಬೆಂಬಲ ನೀಡುವ ಮತ್ತು ಎಂದಿಗೂ ಮರೆಯದಿರುವ ಎಧರ್ಮಸಭೆಯ ಸ್ಥಾನ ಯಾವುದು ಎಂಬುದನ್ನು ಜಗದ್ಗುರುಗಳು ನಮಗೆ ಮತ್ತೊಮ್ಮೆ ನೆನಪಿಸಿದರು.

ಪ್ರಶ್ನೆ: ಗೌರವಾನ್ವಿತ ಕಾರ್ಡಿನಲ್ ಅವರೇ, ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಈ ಭೇಟಿಯ ನಂತರ ಏನಾಗಬೇಕೆಂದು ನೀವು ಆಶಿಸುತ್ತೀರಿ? ಈ ಅಪೋಸ್ತೋಲಿಕ ಪ್ರವಾಸವು ಸ್ಪೇನ್‌ನ ಧರ್ಮಸಭೆಗೆ ಹೊಸ ಚೈತನ್ಯವನ್ನು ನೀಡಿದೆ ಎಂದು ಹೇಳಬಹುದೇ, ಅಥವಾ ಈಗಾಗಲೇ ಜೀವಂತವಾಗಿದ್ದ ಧರ್ಮಸಭೆಗೆ ಮತ್ತಷ್ಟು ಉತ್ತೇಜನವನ್ನು ನೀಡಿದೆಯೇ?

ಕಾರ್ಡಿನಲ್ ಜೋಸೆ ಕೋಬೊ ಕಾನೊ: ಇಲ್ಲ, ಇದು ಧರ್ಮಸಭೆಗೆ ನಿಜವಾಗಿಯೂ ಹೊಸ ಚೈತನ್ಯವನ್ನು ನೀಡಿದೆ. ಪೂಜ್ಯ ಜಗದ್ಗುರು ನಮಗೆ ಭವಿಷ್ಯಕ್ಕಾಗಿ ಅನೇಕ ಕಾರ್ಯಗಳನ್ನು ಬಿಟ್ಟುಹೋಗಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಅವರು ನಾವು ಅನುಸರಿಸಬೇಕಾದ ಮಾರ್ಗವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.

ಸಂಸ್ಕೃತಿ, ರಾಜಕೀಯ, ಆರ್ಥಿಕತೆ ಮತ್ತು ಧರ್ಮಸಭೆಯ ಜೀವನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ — ಮ್ಯಾಡ್ರಿಡ್ ಧರ್ಮಪ್ರಾಂತ್ಯದ ಸಮುದಾಯದೊಂದಿಗೆ ಮಾತನಾಡುವಾಗಲೂ ಅವರು ಹೇಳಿದಂತೆ — ಪೂಜ್ಯ ಜಗದ್ಗುರುಗಳು ಕಾರ್ಯನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು, ದೃಢವಾದ ನಿಲುವುಗಳನ್ನು ಮತ್ತು ಪರಸ್ಪರ ಸಹಕಾರಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ನೆಲೆಗಳನ್ನು ನಮಗೆ ನೀಡಿದ್ದಾರೆ ಎಂದು ನಾನು ನಂಬುತ್ತೇನೆ. ಇದಕ್ಕಾಗಿ ನಾವು ಅವರ ಬಗ್ಗೆ ಆಳವಾದ ಕೃತಜ್ಞತೆಯನ್ನು ಹೊಂದಿದ್ದೇವೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

09 ಜೂನ್ 2026, 19:08