ಗಾಜಾದ ಗಾಯಗೊಂಡ ವಿಶ್ವಾಸಿಗಳನ್ನು ಭೇಟಿ ಮಾಡಿದ ಜೆರುಸಲೇಮಿನ ಧರ್ಮಾಧ್ಯಕ್ಷರು
ಲೇಖಕರು: ಫೆಡೆರಿಕೊ ಪಿಯಾನಾ
ಜೂನ್ 22ರಿಂದ, ಜೆರುಸಲೇಮಿನ ಗ್ರೀಕ್ ಆರ್ಥೊಡಾಕ್ಸ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಮೂರನೇ ಥಿಯೋಫಿಲೋಸ್ ಹಾಗೂ ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ಗಾಜಾಗೆ ಪ್ರೇಷಿತೀಯ ಭೇಟಿಯನ್ನು ಆರಂಭಿಸಿದರು. ಯುದ್ಧದ ಕ್ರೌರ್ಯಗಳಿಂದ ನಲುಗಿರುವ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳ ಗಾಯಗಳಿಗೆ ಸಾಂತ್ವನ ನೀಡುವುದು ಈ ಭೇಟಿಯ ಉದ್ದೇಶವಾಗಿದೆ.
ಅವರೊಂದಿಗೆ ಸಾರ್ವಭೌಮ ಮಾಲ್ಟಾ ಸೇನಾ ಸಂಸ್ಥೆಯ ಗ್ರ್ಯಾಂಡ್ ಹಾಸ್ಪಿಟಲರ್ ಡಾ. ಜೋಸೆಫ್ ಬ್ಲೋಟ್ಜ್ ಹಾಗೂ ಜಗತ್ತಿನ ಅನೇಕ ಭಾಗಗಳಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಮಾಲ್ಟೆಸರ್ ಇಂಟರ್‌ನ್ಯಾಷನಲ್ ಪ್ರತಿನಿಧಿಗಳು ಸಹ ಭಾಗವಹಿಸಿದ್ದರು.
ಪ್ರೇಷಿತೀಯ ಸಾನ್ನಿಧ್ಯ
ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ಭೇಟಿ “ಜೆರುಸಲೇಮಿನ ಧರ್ಮಸಭೆಗಳು ಸ್ಥಳೀಯ ಧರ್ಮಸಭೆಗಳತ್ತ ಹಾಗೂ ಗಾಜಾದ ಸಂಪೂರ್ಣ ಜನಸಮೂಹದತ್ತ ಹೊಂದಿರುವ ಪ್ರೇಷಿತೀಯ ಜವಾಬ್ದಾರಿಯ ಅಭಿವ್ಯಕ್ತಿಯಾಗಿದೆ” ಎಂದು ತಿಳಿಸಿದೆ. ಅಲ್ಲಿ ಕುಟುಂಬಗಳು ಇನ್ನೂ ತೀವ್ರ ಮಾನವೀಯ ಸಂಕಷ್ಟ, ಭಯ, ನಷ್ಟ ಮತ್ತು ಅನಿಶ್ಚಿತತೆಯನ್ನು ಅನುಭವಿಸುತ್ತಿವೆ.
ಅಲ್ಲದೆ, ಎಲ್ಲಾ ಭರವಸೆಗಳನ್ನೂ ಕಸಿದುಕೊಂಡಂತೆ ತೋರುವ ದುಃಖದ ವಾತಾವರಣದಲ್ಲಿ ಪ್ರಾರ್ಥನೆಯ ಅನಿವಾರ್ಯ ಮಹತ್ವವನ್ನು ಪ್ರಕಟಣೆ ಒತ್ತಿಹೇಳಿದೆ.
“ಗ್ರೀಕ್ ಆರ್ಥೊಡಾಕ್ಸ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಮೂರನೇ ಥಿಯೋಫಿಲೋಸ್ ಮತ್ತು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರ ಸಾನ್ನಿಧ್ಯವು, ಗಾಯಗೊಂಡ ಗಾಜಾದ ವಿಶ್ವಾಸಿಗಳಿಗೂ ಹಾಗೂ ಸಂಕಷ್ಟದಲ್ಲಿರುವ ಎಲ್ಲರಿಗೂ ಜೆರುಸಲೇಮಿನ ಪ್ರಾರ್ಥನೆಯನ್ನು ತಲುಪಿಸುತ್ತದೆ. ಇದು ಶುಭಸಂದೇಶದಲ್ಲಿ ಮತ್ತು ಪವಿತ್ರ ನಗರಿಯ ಪವಿತ್ರ ಕರೆಯಲ್ಲಿ ಬೇರುಬಿಟ್ಟಿರುವ ಸಾಂತ್ವನ, ಕರುಣೆ ಮತ್ತು ದೃಢವಾದ ಕ್ರೈಸ್ತ ಸಾಕ್ಷ್ಯದ ಸೇವೆಯಾಗಿದೆ.”
ನವೀಕೃತ ಭರವಸೆ
ಅಧಿಕೃತ ಕಾರ್ಯಕ್ರಮದ ಪ್ರಕಾರ, ಕಾರ್ಡಿನಲ್ ಮತ್ತು ಧರ್ಮಾಧ್ಯಕ್ಷರು ಧರ್ಮಗುರುಗಳು, ಧಾರ್ಮಿಕ ಸಮುದಾಯಗಳು, ಸ್ಥಳೀಯ ಕ್ರೈಸ್ತ ಕುಟುಂಬಗಳು ಹಾಗೂ ಮುಂದುವರಿಯುತ್ತಿರುವ ಮಾನವೀಯ ಬಿಕ್ಕಟ್ಟಿನಿಂದ ಬಾಧಿತರಾದ ಜನರನ್ನು ಭೇಟಿಯಾಗುತ್ತಿದ್ದಾರೆ. ಪ್ರಾರ್ಥನೆ ಮತ್ತು ಪ್ರೇಷಿತೀಯ ಸಾನ್ನಿಧ್ಯದ ಮೂಲಕ ಅವರು ಆಧ್ಯಾತ್ಮಿಕ ಬಲ, ಸಾಂತ್ವನ ಮತ್ತು ನವೀಕೃತ ಭರವಸೆಯನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಆರೋಗ್ಯ ಸೇವೆಗಳು, ಪರಿಹಾರ ಕಾರ್ಯಗಳು ಮತ್ತು ಮಾನವ ಘನತೆಯ ರಕ್ಷಣೆಯತ್ತ ಧರ್ಮಸಭೆಗಳ ಬದ್ಧತೆಯನ್ನು ಪುನರುಚ್ಚರಿಸುವುದೂ ಅವರ ಧ್ಯೇಯವಾಗಿದೆ.
ಆತ್ಮೀಯ ಸ್ವಾಗತ
ಪವಿತ್ರ ಕುಟುಂಬಕ್ಕೆ ಸಮರ್ಪಿತವಾದ ಲ್ಯಾಟಿನ್ ಧರ್ಮಕ್ಷೇತ್ರದ ಪ್ರವೇಶ ದ್ವಾರಕ್ಕೆ ಆಗಮಿಸಿದ ಕಾರ್ಡಿನಲ್ ಪಿಜ್ಜಬಲ್ಲಾ ಮತ್ತು ಧರ್ಮಾಧ್ಯಕ್ಷ ಮೂರನೇ ಥಿಯೋಫಿಲೋಸ್ ಅವರನ್ನು ಚಪ್ಪಾಳೆ ಹಾಗೂ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.
ಧರ್ಮಕ್ಷೇತ್ರದ ಗುರುಗಳಾದ ವಂ. ಗುರು ಗ್ಯಾಬ್ರಿಯೆಲ್ ರೊಮಾನೆಲ್ಲಿ ಅವರ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯ ಬಳಿಕ, ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಜ್ಜಬಲ್ಲಾ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಧರ್ಮಕ್ಷೇತ್ರದ ವಿಶ್ವಾಸಿಗಳು ಹಾಗೂ ದೇವಾಲಯದ ಸುತ್ತಮುತ್ತ ವಾಸಿಸುವವರಷ್ಟೇ ಅಲ್ಲದೆ, ಈ ಸಂಕಷ್ಟಪೀಡಿತ ನಗರದ ನಿವಾಸಿಗಳ ಕಣ್ಣಲ್ಲಿಯೂ ನೋಡುವ ಅವಕಾಶ ದೊರೆತಿರುವುದಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು.
ಪರಿಸ್ಥಿತಿ ಇನ್ನೂ ಕಠಿಣವಾಗಿಯೇ ಇದೆ. ಆದರೆ ಧರ್ಮಸಭೆಯ ನಾಯಕರ ಸಾನ್ನಿಧ್ಯವು ಗಾಜಾದತ್ತ ಧರ್ಮಸಭೆಗಳು ಇನ್ನೂ ನೀಡುತ್ತಿರುವ ಕಾಳಜಿ ಮತ್ತು ಗಮನವನ್ನು ತೋರಿಸುತ್ತದೆ. ಗಾಜಾ ಇನ್ನೂ ಅವರ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ನಿರಂತರ ಕಾಳಜಿ
ಕಾರ್ಡಿನಲ್ ಪಿಜ್ಜಬಲ್ಲಾ ಅವರು ಇದಕ್ಕೂ ಮುನ್ನ 2025ರ ಡಿಸೆಂಬರ್ 19ರಂದು ಗಾಜಾದ ಜನರನ್ನು ಭೇಟಿ ಮಾಡಿದ್ದರು. ಎರಡು ದಿನಗಳ ಬಳಿಕ, ಡಿಸೆಂಬರ್ 21ರಂದು ಅವರು ಪವಿತ್ರ ಕುಟುಂಬ ಧರ್ಮಕ್ಷೇತ್ರದಲ್ಲಿ ಮುಂಗಡ ಕ್ರಿಸ್ತಜಯಂತಿ ಬಲಿಪೂಜೆಯನ್ನು ಅರ್ಪಿಸಿದ್ದರು. ಆ ಆಚರಣೆಯಲ್ಲಿ ಭಾಗವಹಿಸಿದ್ದ ಅನೇಕ ವಿಶ್ವಾಸಿಗಳು ಆಳವಾಗಿ ಸ್ಪರ್ಶಿತರಾಗಿದ್ದರು.
ಕಳೆದ ವರ್ಷದ ಜುಲೈ 17ರಂದು ಧರ್ಮಕ್ಷೇತ್ರದ ಮೇಲೆ ನಡೆದ ಇಸ್ರಾಯೇಲಿ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಇನ್ನೂ ಹನ್ನೊಂದು ಮಂದಿ ಗಾಯಗೊಂಡ ಬಳಿಕ, ಕಾರ್ಡಿನಲ್ ಪಿಜ್ಜಬಲ್ಲಾ ಮತ್ತು ಧರ್ಮಾಧ್ಯಕ್ಷ ಮೂರನೇ ಥಿಯೋಫಿಲೋಸ್ ಅವರು ಒಟ್ಟಾಗಿ ಗಾಜಾಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳೊಂದಿಗೆ ಐಕ್ಯತೆ ವ್ಯಕ್ತಪಡಿಸಿದ್ದರು ಹಾಗೂ ಸ್ಥಳಾಂತರಿತ ನಿವಾಸಿಗಳನ್ನು ಭೇಟಿಯಾಗಿದ್ದರು.
ಆ ಭೇಟಿ ಐತಿಹಾಸಿಕವೆಂದು ಪರಿಗಣಿಸಲ್ಪಟ್ಟಿತ್ತು. ಏಕೆಂದರೆ ಯುದ್ಧಕಾಲದಲ್ಲಿ ನಡೆದ ಮೊದಲ ಸಾರ್ವತ್ರಿಕ ಕ್ರೈಸ್ತ (ಎಕ್ಯುಮೆನಿಕಲ್) ಭೇಟಿಯಾಗಿತ್ತು. ತಮ್ಮ ಭೇಟಿಯ ಸಂದರ್ಭದಲ್ಲಿ ಇಬ್ಬರು ಧರ್ಮಾಧ್ಯಕ್ಷರು ವಿಶ್ವ ನಾಯಕರಿಗೆ ಯುದ್ಧವನ್ನು ಅಂತ್ಯಗೊಳಿಸುವಂತೆ ಹಾಗೂ ಸಂಪೂರ್ಣ ಪವಿತ್ರ ಭೂಮಿಯಲ್ಲಿ ಸೌಖ್ಯ ಮತ್ತು ಸೌಹಾರ್ದತೆಯ ಹೊಸ ಪಯಣವನ್ನು ಆರಂಭಿಸುವಂತೆ ಮನವಿ ಮಾಡಿದ್ದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).