ಮಯನ್ಮಾರ್‌ನ ದೇವಾಲಯ ಮಯನ್ಮಾರ್‌ನ ದೇವಾಲಯ 

ಲೊಯಿಕಾವ್ ಕ್ಯಾಥೆಡ್ರಲ್ ಮರುಸ್ವಾಧೀನ-ಮಯನ್ಮಾರ್ ಕಥೋಲಿಕರ ಸಂಭ್ರಮ

ಹಲವು ತಿಂಗಳುಗಳ ಕಾಲ ಸೇನಾ ಆಕ್ರಮಣದಲ್ಲಿದ್ದ ಬಳಿಕ ಲೊಯಿಕಾವ್‌ನ ಕ್ರಿಸ್ತ ರಾಜ ಕ್ಯಾಥೆಡ್ರಲ್ ಮರುಸ್ವಾಧೀನಗೊಂಡಿರುವುದು, ಮಯನ್ಮಾರ್‌ನ ಕಥೋಲಿಕ ಸಮುದಾಯಕ್ಕೆ ಮಹತ್ವದ ಆಶಾಕಿರಣವಾಗಿ ಪರಿಣಮಿಸಿದೆ. ಇದೇ ವೇಳೆ, ಧರ್ಮಾಧ್ಯಕ್ಷರಾದ ಸೆಲ್ಸೊ ಬಾ ಶ್ವೆ ಅವರು, ಲಕ್ಷಾಂತರ ಆಂತರಿಕವಾಗಿ ಸ್ಥಳಾಂತರಗೊಂಡ ಜನರೊಂದಿಗೆ ಹೆಜ್ಜೆಹಾಕುವುದು ಮತ್ತು ಅವರಿಗೆ ಸಾಂತ್ವನ ನೀಡುವುದೇ ಧರ್ಮಸಭೆಯ ಪ್ರಮುಖ ಧ್ಯೇಯವಾಗಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ಮಯನ್ಮಾರ್‌ನ ಕಯಾ ರಾಜ್ಯದಲ್ಲಿರುವ ಲೊಯಿಕಾವ್ ಧರ್ಮಪ್ರಾಂತ್ಯವು, 2023ರ ನವೆಂಬರ್‌ನಿಂದ ಸೇನೆಯ ಆಕ್ರಮಣದಲ್ಲಿದ್ದ ಕ್ರಿಸ್ತ ರಾಜ ಕ್ಯಾಥೆಡ್ರಲ್ ಮತ್ತು ಅದರ ಪಾಲನಾ ಕೇಂದ್ರದ ಮರುಸ್ವಾಧೀನದ ಮೂಲಕ ಆಶಾದಾಯಕ ಬೆಳವಣಿಗೆಯನ್ನು ಕಂಡಿದೆ. 2021ರ ಫೆಬ್ರವರಿಯಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಸೇನಾ ದಂಗೆಯ ನಂತರ ಭುಗಿಲೆದ್ದ ಸಂಘರ್ಷದ ಅವಧಿಯಲ್ಲಿ ಈ ಸಂಕೀರ್ಣವನ್ನು ಸೇನಾ ನೆಲೆಯಾಗಿ ಬಳಸಲಾಗುತ್ತಿತ್ತು.

ಸಮುದಾಯದಲ್ಲಿ ಹೊಸ ಭರವಸೆ

ಧರ್ಮಾಧ್ಯಕ್ಷರಾದ ಸೆಲ್ಸೊ ಬಾ ಶ್ವೆ ಅವರು ಕ್ಯಾಥೆಡ್ರಲ್ ಮರಳಿರುವುದಕ್ಕೆ ಕೃತಜ್ಞತೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಸ್ಥಳೀಯ ಕಥೋಲಿಕ ಸಮುದಾಯಕ್ಕೆ ಇದು ಉತ್ತೇಜನ ನೀಡುವ ಕ್ಷಣವಾಗಿದೆ ಎಂದು ಅವರು ಹೇಳಿದರು. ಆದರೆ, ಪೂಜೆ ಮತ್ತು ಪಾಲನಾ ಸೇವೆಗಳ ಕೇಂದ್ರವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಕಟ್ಟಡಗಳಿಗೆ ಇನ್ನೂ ವ್ಯಾಪಕ ದುರಸ್ತಿ ಅಗತ್ಯವಿದೆ ಎಂದು ಅವರು ಸೂಚಿಸಿದರು. ಕೆಲವು ಭಾಗಗಳಲ್ಲಿ ನವೀಕರಣ ಕಾರ್ಯಗಳು ನಡೆದಿದ್ದರೂ, ಪಾಲನಾ ಕೇಂದ್ರದಲ್ಲಿ ಇನ್ನೂ ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಲಭ್ಯಗಳ ಕೊರತೆಯಿದೆ.

ಧರ್ಮಕ್ಷೇತ್ರದ ಸದಸ್ಯರು ನಿಧಾನವಾಗಿ ಹಿಂದಿರುಗುತ್ತಿರುವುದರಿಂದ, ಧರ್ಮಕ್ಷೇತ್ರದವು ತನ್ನ ಪಾಲನಾ ಚಟುವಟಿಕೆಗಳನ್ನು ಮರುಸಂಘಟಿಸಲು ಸಾಧ್ಯವಾಗುತ್ತಿದೆ. ಆದಾಗ್ಯೂ, ಧರ್ಮಾಧ್ಯಕ್ಷರು ಸ್ವತಃ ಇನ್ನೂ ಅಲ್ಲಿಗೆ ಮರಳಿ ವಾಸಿಸಲು ಪ್ರಾರಂಭಿಸಿಲ್ಲ. ತಮ್ಮ ಜನರು ಇರುವ ಸ್ಥಳದಲ್ಲೇ—ಅಂದರೆ ಸ್ಥಳಾಂತರಿತರ ನಡುವೆ—ತಮ್ಮ ಸೇವೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಸ್ಥಳಾಂತರಿತರ ನಡುವೆ ಸೇವೆ

ವ್ಯಾಟಿಕನ್‌ನ ಫೀಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ಈ ಸಂಘರ್ಷವು ದೇಶದ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದನ್ನು ಸೃಷ್ಟಿಸಿದೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಅದು ಮಾಡಿದೆ.ಧರ್ಮಾಧ್ಯಕ್ಷರು ಬಾ ಶ್ವೆ ಅವರ ಪ್ರಕಾರ, 3 ಲಕ್ಷಕ್ಕೂ ಹೆಚ್ಚು ಸ್ಥಳಾಂತರಿತರು ಧರ್ಮಪ್ರಾಂತ್ಯದಾದ್ಯಂತ ಹರಡಿರುವ ನೂರಾರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಪ್ರಸ್ತುತ ಅವರು ದೇವ ಮಾತೆ ಸ್ಬಾನ್ಸು ದೇವಾಲಯದಲ್ಲಿ ವಾಸಿಸುತ್ತಿದ್ದು, ನಿರಾಶ್ರಿತರ ಶಿಬಿರಗಳು ಮತ್ತು ಚದುರಿಹೋಗಿರುವ ಸಮುದಾಯಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಅನೇಕ ಕುಟುಂಬಗಳು ಕಾಡುಗಳು, ದೂರದ ಹಳ್ಳಿಗಳು ಮತ್ತು ತಾತ್ಕಾಲಿಕ ಆಶ್ರಯಗಳಲ್ಲಿ ಸುರಕ್ಷತೆಯನ್ನು ಹುಡುಕುತ್ತಿರುವುದರಿಂದ, ಹಲವಾರು ಧರ್ಮಕ್ಷೇತ್ರಗಳು ಖಾಲಿಯಾಗಿ ಮುಚ್ಚಲ್ಪಟ್ಟಿವೆ.

“ಶಿಬಿರಗಳಲ್ಲಿನ ಧರ್ಮಸಭೆಯ ಉಪಸ್ಥಿತಿಯು ಒಂದು ಹೊಸ ರೀತಿಯ ಶುಭಸಂದೇಶ ಸೇವೆಯಾಗಿದೆ,” ಎಂದು ಧರ್ಮಾಧ್ಯಕ್ಷರು ಹೇಳಿದರು. ಯಾಜಕರು ಮತ್ತು ಪಾಲನಾ ಕಾರ್ಯಕರ್ತರು ಸ್ಥಳಾಂತರಿತರೊಂದಿಗೆ ವಾಸಿಸುತ್ತಾ, ಅವರ ದೈನಂದಿನ ಕಷ್ಟಗಳನ್ನು ಹಂಚಿಕೊಳ್ಳುತ್ತಾ ಆಧ್ಯಾತ್ಮಿಕ ಬೆಂಬಲವನ್ನು ನೀಡುತ್ತಿದ್ದಾರೆ.

“ಇದು ಯಾಜಕರಾಗಿರುವುದರ ವಿಭಿನ್ನ ವಿಧಾನವಾಗಿದೆ,” ಎಂದು ಅವರು ವಿವರಿಸಿದರು. “ಪಾಲನಾ ಸೇವೆಯು ಇನ್ನು ಮುಂದೆ ಕೇವಲ ದೇವಾಲಯಗಳೊಳಗೆ ಸೀಮಿತವಾಗಿಲ್ಲ; ಜನರು ಎಲ್ಲಿದ್ದಾರೋ ಅಲ್ಲಿಯೇ ಅದು ನಡೆಯುತ್ತಿದೆ.” ಅವರು ಸಂಸ್ಕಾರಗಳ ಆಚರಣೆಯನ್ನೂ ನಿರಂತರವಾಗಿ ಮುಂದುವರಿಸುತ್ತಿದ್ದಾರೆ.

ಸಮನ್ವಯದ ಹುಡುಕಾಟ

“ಸಮುದಾಯದೊಳಗೆ ಪರಸ್ಪರ ಐಕ್ಯತೆಯ ಮನೋಭಾವವಿದೆ. ಅವರು ಒಬ್ಬರನ್ನೊಬ್ಬರು ಬೆಂಬಲಿಸುವುದರ ಮೂಲಕ ಬದುಕುಳಿಯುತ್ತಿದ್ದಾರೆ. ದಾನಿಗಳ ನೆರವು ಕೂಡ ಅನೇಕರ ಜೀವನವನ್ನು ಉಳಿಸಲು ಸಹಕಾರಿಯಾಗಿದೆ,” ಎಂದು ಧರ್ಮಾಧ್ಯಕ್ಷರು ಹೇಳಿದರು. ಈ ಹಂಚಿಕೊಂಡ ಬದ್ಧತೆಯು ದೇವರು ತನ್ನ ಜನರ ನಡುವೆ ಇರುವುದನ್ನು ಪ್ರತಿಬಿಂಬಿಸುತ್ತದೆ. ಮನೆಗಳಿಗೆ ಮರಳುವ ದಿನಕ್ಕಾಗಿ ಕಾಯುತ್ತಿರುವ ಸಮುದಾಯಗಳಿಗೆ ನಂಬಿಕೆಯು ಇನ್ನೂ ಶಕ್ತಿಯ ಮೂಲವಾಗಿದೆ.p

ಶಿಕ್ಷಣಕ್ಕೆ ಸೀಮಿತ ಪ್ರವೇಶವಿರುವ ಕಾರಣ, ಮಯನ್ಮಾರ್‌ನ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಕಳವಳಗಳು ಹೆಚ್ಚುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಧಾರ್ಮಿಕ ಸಹೋದರಿಯರು ಮತ್ತು ಧರ್ಮಸಭೆಯ ಕಾರ್ಯಕರ್ತರು ಲಭ್ಯವಿರುವ ಅಲ್ಪ ಸಂಪನ್ಮೂಲಗಳಲ್ಲಿಯೇ ಅನೌಪಚಾರಿಕ ಶಾಲೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಮಾನವೀಯ ಅಗತ್ಯಗಳು ತೀವ್ರವಾಗಿದ್ದರೂ, ಮಯನ್ಮಾರ್‌ನ ಜನರ ನಡುವೆ ಸಮನ್ವಯ ಮತ್ತು ಸೌಹಾರ್ದತೆ ಮೂಡಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು. ರಾಜಕೀಯ ನಾಯಕರು, ಸಶಸ್ತ್ರ ಗುಂಪುಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಸಂವಾದ ಮತ್ತು ಏಕತೆಯ ಮೂಲಕ ಮಾತ್ರ ಶಾಶ್ವತ ಶಾಂತಿ ಸಾಧ್ಯ ಎಂದು ಅವರು ನಂಬುತ್ತಾರೆ.

“ನಾವು ಶಾಂತಿ ಮತ್ತು ಸಮನ್ವಯವನ್ನು ಬಯಸುತ್ತೇವೆ, ಸಮನ್ವಯವಿಲ್ಲದೆ ಶಾಂತಿ ಸಾಧ್ಯವಿಲ್ಲ.” ಪ್ರಾರ್ಥನೆ, ಪ್ರೋತ್ಸಾಹ ಮತ್ತು ದುಃಖದಲ್ಲಿರುವವರೊಂದಿಗೆ ಹತ್ತಿರವಾಗಿರುವ ಮೂಲಕ, ಮಯನ್ಮಾರ್‌ನ ಧರ್ಮಸಭೆಯು ಭರವಸೆಯ ಸಾಕ್ಷಿಯಾಗುವುದನ್ನು ಮುಂದುವರಿಸುತ್ತಿದೆ. ದೇವರು ತನ್ನ ಜನರನ್ನು ಎಂದಿಗೂ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಅದು ಮುನ್ನಡೆಯುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಜೂನ್ 2026, 08:55