ಭಾರತದ ಕಾರ್ಡಿನಲ್ ಪೂಲಾ: Magnifica humanitas ‘ಸ್ಪಷ್ಟ ನೈತಿಕ ದಿಕ್ಸೂಚಿ,
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಲ್ಲಿ ಅತ್ಯಂತ ಸಕ್ರಿಯವಾಗಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ, ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಮೊದಲ ವಿಶ್ವಪತ್ರಿಕೆ ‘ಭವ್ಯ ಮಾನವೀಯತೆ (Magnifica humanitas)’ಯನ್ನು ಸ್ವಾಗತಿಸಿದೆ. ದಸ್ತಾವೇಜು ಬಿಡುಗಡೆಯಾದ ನಂತರ ಹೊರಡಿಸಿದ ಪ್ರಕಟಣೆಯಲ್ಲಿ, AIಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು “ನೈತಿಕ ಮಾರ್ಗದರ್ಶಿ”ಯನ್ನು ಒದಗಿಸಿರುವುದಕ್ಕಾಗಿ ಧರ್ಮಾಧ್ಯಕ್ಷರು ಪೂಜ್ಯ ಜಗದ್ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದ ಜನರು ಎದುರಿಸುತ್ತಿರುವ ತುರ್ತು ಸವಾಲುಗಳಿಗೆ ಸ್ಪಂದನೆ
ನಿರುದ್ಯೋಗ, ಅಸಮಾನತೆ, ಕಣ್ಗಾವಲು ಮತ್ತು ಅಧಿಕಾರದ ಕೇಂದ್ರೀಕರಣವು ಭಾರತದ ಜನರು ಎದುರಿಸುತ್ತಿರುವ ತುರ್ತು ಸವಾಲುಗಳಾಗಿವೆ ಎಂದು ಧರ್ಮಾಧ್ಯಕ್ಷರು ವಿಶೇಷವಾಗಿ ಒತ್ತಿಹೇಳಿದ್ದಾರೆ. ಈ ಸಮಸ್ಯೆಗಳ ಕುರಿತು ವಿಶ್ವಪತ್ರಿಕೆಯಲ್ಲಿ ವ್ಯಕ್ತವಾಗಿರುವ ಅರಿವು ಹಾಗೂ ಕೃತಕ ಬುದ್ಧಿಮತ್ತೆಯು ಅವುಗಳನ್ನು ಇನ್ನಷ್ಟು ತೀವ್ರಗೊಳಿಸಬಹುದಾದ ಸಾಧ್ಯತೆಯನ್ನು ಗುರುತಿಸಿರುವುದು ವಿಶೇಷವಾಗಿ ಮೌಲ್ಯಯುತವಾಗಿದೆ ಎಂದು ಅವರು ಸೂಚಿಸಿದರು.
Magnifica humanitas ವಿಶ್ವಪತ್ರಿಕೆಯಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು, “ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಮಾನವನ ಕೇಂದ್ರಸ್ಥಾನವನ್ನು” ಪುನರುಚ್ಚರಿಸುವ ಮೂಲಕ ಈ ಸಮಸ್ಯೆಗಳನ್ನು ಎದುರಿಸುವ ದೃಷ್ಟಿಕೋನವನ್ನು ನೀಡಿದ್ದಾರೆ ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ. ಜೊತೆಗೆ, ತಂತ್ರಜ್ಞಾನ ಅಭಿವೃದ್ಧಿಯು “ಮಾನವ ಘನತೆ, ನ್ಯಾಯ ಮತ್ತು ಸಾಮಾನ್ಯ ಹಿತದ ಮೇಲೆ ಆಧಾರಿತ ನೈತಿಕ ತತ್ವಗಳಿಂದ ಮಾರ್ಗದರ್ಶಿತವಾಗಿರಬೇಕು” ಎಂಬುದನ್ನೂ ಅವರು ಒತ್ತಿಹೇಳಿದರು.
ಧರ್ಮಸಭೆಯ ಸಾಮಾಜಿಕ ಬೋಧನೆಗೆ ಅಮೂಲ್ಯ ಕೊಡುಗೆ
ಧರ್ಮಾಧ್ಯಕ್ಷರು ಈ ದಸ್ತಾವೇಜನ್ನು “ಧರ್ಮಸಭೆಯ ಸಾಮಾಜಿಕ ಬೋಧನೆಗೆ ಅಮೂಲ್ಯ ಕೊಡುಗೆ” ಎಂದು ಸಹ ಬಣ್ಣಿಸಿದ್ದು, ಪೂಜ್ಯ ಜಗದ್ಗುರು 13ನೇ ಲಿಯೋ ಅವರ ‘ನವ ವಿಷಯಗಳು(Rerum novarum)’ ವಿಶ್ವಪತ್ರಿಕೆಯೊಂದಿಗೆ ಇದರ ನಿರಂತರತೆಯನ್ನು ಒತ್ತಿಹೇಳುತ್ತಾರೆ.
ವ್ಯಾಟಿಕನ್ ಫಿಡೆಸ್ ಸುದ್ದಿಸಂಸ್ಥೆ ಪ್ರಕಾರ, ಸುಮಾರು 2 ಕೋಟಿ ವಿಶ್ವಾಸಿಗಳನ್ನು ಹೊಂದಿರುವ ಭಾರತದ ಧರ್ಮಸಭೆಯು, ಕೃತಕ ಬುದ್ಧಿಮತ್ತೆಯ ಕುರಿತು ಶಿಕ್ಷಣ ನೀಡಲು ಮತ್ತು ಜಾಗೃತಿ ಮೂಡಿಸಲು ಈ ವಿಶ್ವಪತ್ರಿಕೆಯನ್ನು ಧರ್ಮಕ್ಷೇತ್ರಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ಉದ್ದೇಶವನ್ನು ಹೊಂದಿದೆ.
ಭಾರತದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ವೇಗವಾಗಿ ವಿಸ್ತರಿಸುತ್ತಿರುವುದನ್ನು ಮತ್ತು ಅದು ಕೆಲಸ, ಶಿಕ್ಷಣ ಹಾಗೂ ಸಮಾಜದ ಮೇಲೆ ಉಂಟುಮಾಡುತ್ತಿರುವ ಪರಿವರ್ತನಾತ್ಮಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, CBCI ಈ ವಿಶ್ವಪತ್ರಿಕೆಯನ್ನು ಧರ್ಮಗುರುಗಳು, ಶಿಕ್ಷಕರು, ನೀತಿ ನಿರೂಪಕರು ಹಾಗೂ ವಿಶ್ವಾಸಿಗಳಿಗೆ ಅಮೂಲ್ಯ ಮಾರ್ಗದರ್ಶಿಯಾಗಿ ಶಿಫಾರಸು ಮಾಡುತ್ತದೆ.
ಈ ವಿಶ್ವಪತ್ರಿಕೆಯನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಿ, ವ್ಯಾಪಕವಾಗಿ ಪ್ರಸಾರ ಮಾಡುವ ಬದ್ಧತೆಯನ್ನು ಧರ್ಮಾಧ್ಯಕ್ಷರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ತರಬೇತಿ ಕಾರ್ಯಕ್ರಮಗಳು, ಕ್ಯಾಕಥೋಲಿಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾಜಿಕ ಸೇವಾ ಉಪಕ್ರಮಗಳ ಮೂಲಕ ಇದನ್ನು ಮುಂದುವರಿಸಲು ಅವರು ಸಂಕಲ್ಪ ವ್ಯಕ್ತಪಡಿಸಿದ್ದಾರೆ.
‘ಸ್ಪಷ್ಟ ನೈತಿಕ ದಿಕ್ಸೂಚಿ’
CBCI ಅಧ್ಯಕ್ಷರಾದ ಕಾರ್ಡಿನಲ್ ಆಂಥೋನಿ ಪೂಲಾ ಅವರು, ಈ ದಸ್ತಾವೇಜು “ವೇಗವಾದ ತಾಂತ್ರಿಕ ಬದಲಾವಣೆಗಳ ಯುಗದಲ್ಲಿ ಸ್ಪಷ್ಟ ನೈತಿಕ ದಿಕ್ಸೂಚಿಯನ್ನು ಒದಗಿಸುತ್ತದೆ” ಎಂದು ಒತ್ತಿಹೇಳಿದರು. ಅಲ್ಲದೆ, ನಿಯಂತ್ರಣವಿಲ್ಲದ ಕೃತಕ ಬುದ್ಧಿಮತ್ತೆಯಿಂದ ಉಂಟಾಗಬಹುದಾದ ಋಣಾತ್ಮಕ ಪರಿಣಾಮಗಳಿಂದ ಅತ್ಯಂತ ದುರ್ಬಲರನ್ನು ರಕ್ಷಿಸುವ ಅಗತ್ಯವನ್ನೂ ಇದು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಕಾರ್ಡಿನಲ್ ಪೂಲಾ ಅವರು, ಭಾರತದ ಕಥೋಲಿಕ ಧರ್ಮಾಧ್ಯಕ್ಷರು “ಎಲ್ಲಾ ಕಥೋಲಿಕರು ಮತ್ತು ಸದ್ಭಾವನೆಯುಳ್ಳ ಜನರು ಈ ವಿಶ್ವಪತ್ರಿಕೆಯನ್ನು ಪ್ರಾರ್ಥನಾ ಮನೋಭಾವದಿಂದ ಓದಬೇಕು ಹಾಗೂ ತಂತ್ರಜ್ಞಾನವು ಪ್ರತಿಯೊಬ್ಬ ಮಾನವನ ಸಮಗ್ರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಸಂಸ್ಕೃತಿಯನ್ನು ಬೆಳೆಸಬೇಕು” ಎಂದು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದರು.
ಫಿಡೆಸ್ ತಿಳಿಸುವಂತೆ, ಭಾರತದಲ್ಲಿನ ಧರ್ಮಸಭೆಯು ದಲಿತರ ಮೇಲೆ AI ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆಯೂ ಕಾಳಜಿ ಹೊಂದಿದೆ. ಐತಿಹಾಸಿಕ ತಾರತಮ್ಯಗಳನ್ನು ಇನ್ನಷ್ಟು ತೀವ್ರಗೊಳಿಸುವ ಅಪಾಯವಿದೆ ಎಂದು ಧರ್ಮಾಧ್ಯಕ್ಷರು ಗಮನಿಸಿದರೂ, ನೈತಿಕ ತತ್ವಗಳ ಪ್ರಕಾರ ಬಳಸಿದರೆ AI ಹೆಚ್ಚಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಸಾಧನವಾಗಬಹುದು ಎಂಬುದನ್ನೂ ಅವರು ಒಪ್ಪಿಕೊಳ್ಳುತ್ತಾರೆ.
ಈ ಹಿನ್ನೆಲೆಯಲ್ಲೇ, ವಿಶೇಷವಾಗಿ ಶಿಕ್ಷಣ, ಉದ್ಯೋಗ ಮತ್ತು ದುರ್ಬಲ ವರ್ಗಗಳ ಮೇಲೆ AIಯ ನೈತಿಕತೆ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ Magnifica humanitas ಪ್ರಕಟವಾಗುತ್ತಿದೆ ಎಂದು ಫಿಡೆಸ್ ಗಮನ ಸೆಳೆಯುತ್ತದೆ.
ಉದ್ಯೋಗಗಳಿಗೆ ಇರುವ ಅಪಾಯಗಳು ಮತ್ತು ನಿಯಂತ್ರಣಾತ್ಮಕ ಅಂಶಗಳ ಮೇಲೆ ಮಾಧ್ಯಮಗಳ ಗಮನ
ಇದಲ್ಲದೆ, ಫಿಡೆಸ್ ವರದಿ ಮಾಡುವಂತೆ, ಈ ವಿಶ್ವಪತ್ರಿಕೆಯು ಭಾರತದಲ್ಲಿ ಮಾಧ್ಯಮಗಳ ಗಮನವನ್ನು ಸೆಳೆದಿದೆ. ಉದಾಹರಣೆಗೆ, The Hindu ಪತ್ರಿಕೆಯು “AIಯನ್ನು ನಿರಾಯುಧಗೊಳಿಸಬೇಕು” ಎಂಬ ಪೂಜ್ಯ ಜಗದ್ಗುರುಗಳ ಕರೆಯನ್ನು ಪ್ರಮುಖವಾಗಿ ಪ್ರಸ್ತುತಪಡಿಸಿದೆ. ಭಾರತವು ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುವ “ಜಾಗತಿಕ ನೈತಿಕ ಘೋಷಣಾಪತ್ರ”ವಾಗಿ ಈ ದಸ್ತಾವೇಜನ್ನು ಅದು ಚಿತ್ರಿಸಿದೆ.
ವಿಶೇಷವಾಗಿ, ದೇಶದ ವಿಶಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಉಂಟಾಗಬಹುದಾದ ಹೆಚ್ಚಿನ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಮಾಧ್ಯಮಗಳು ಇದರ ಉದ್ಯೋಗ ಸಂಬಂಧಿತ ಒತ್ತು ನೀಡುವಿಕೆಗೆ ಹೆಚ್ಚಿನ ಗಮನ ಹರಿಸಿವೆ ಎಂದು ಸುದ್ದಿಸಂಸ್ಥೆ ತಿಳಿಸುತ್ತದೆ. ಬಹುತೇಕ ಭಾರತೀಯ ಮಾಧ್ಯಮಗಳು, AI ಪ್ರಕ್ರಿಯೆಗಳ ಬಗ್ಗೆ ಎಚ್ಚರಿಕೆಯಿಂದ ನಿಯಂತ್ರಣವನ್ನು ಜಾರಿಗೊಳಿಸಬೇಕೆಂಬ ವಿಶ್ವಪತ್ರಿಕೆಯ ಕರೆಯನ್ನೂ, ಮಾನವ ವ್ಯಕ್ತಿ ಹಾಗೂ ಸಾಮಾನ್ಯ ಹಿತವನ್ನು ರಕ್ಷಿಸಬೇಕೆಂಬ ಪೂಜ್ಯ ಜಗದ್ಗುರುಗಳ ಒತ್ತಾಯವನ್ನೂ ಸ್ವಾಗತಿಸಿವೆ ಎಂದು ವರದಿ ತಿಳಿಸಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).