ನವಧರ್ಮೋಪದೇಶಮಾರ್ಗ ನವಧರ್ಮೋಪದೇಶಮಾರ್ಗ  (AFP or licensors)

ಇಟಲಿಯಲ್ಲಿ ಶುಭಸಂದೇಶ ಸಾರಲು ತೆರಳಿದ ಮಿಯಾಮಿ ಯಾಜಕ

ಅಮೆರಿಕದ ಒಂದು ಧರ್ಮಕ್ಷೇತ್ರದಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿರುವ 29 ವರ್ಷದ ವಂ. ಗುರು ಮಿಕೆಲೆ ಸೆಗಾ ಅವರು, ಉತ್ತರ, ಮಧ್ಯ ಹಾಗೂ ದಕ್ಷಿಣ ಅಮೆರಿಕದ ಸುಮಾರು 800 ಯಾಜಕರಿಗಾಗಿ ನವೀನ ನವಧರ್ಮೋಪದೇಶಮಾರ್ಗ ಆಯೋಜಿಸಿದ್ದ ಆಧ್ಯಾತ್ಮಿಕ ಶಿಬಿರದ ಕೆಲವು ಪ್ರಮುಖ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಪೂಜ್ಯ ಜಗದ್ಗುರುಗಳ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಿದ್ದು ಹಾಗೂ ಜೋಡಿಯಾಗಿ, ಯಾವುದೇ ಹಣವಿಲ್ಲದೆ ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ಶುಭಸಂದೇಶ ಸಾರಿದ ಧರ್ಮಪ್ರಚಾರ ಯಾತ್ರೆಯೂ ಸೇರಿವೆ.

ಲೇಖಕರು: ಡೆಬೋರಾ ಡೊನ್ನಿನಿ – ಪೋರ್ಟೊ ಸಾನ್ ಜಾರ್ಜಿಯೊ

ಹೃದಯದಲ್ಲಿ ಆತಂಕ ಮತ್ತು ಅನೇಕ ಪ್ರಶ್ನೆಗಳೊಂದಿಗೆ ಅವರು ಪ್ರಯಾಣ ಆರಂಭಿಸಿದರು. ಆದರೆ ಹಿಂದಿರುಗಿದಾಗ, ದೇವರ ಪ್ರೀತಿಯ ಅನುಭವ ಮಾತ್ರ ಜೀವನದಲ್ಲಿ ನೀಡಬಲ್ಲಂತಹ ಅಪಾರ ಸಂತೋಷದಿಂದ ತುಂಬಿ ಮರಳಿದರು.

ಉತ್ತರ, ಮಧ್ಯ ಹಾಗೂ ದಕ್ಷಿಣ ಅಮೆರಿಕದ ಸುಮಾರು 800 ಯಾಜಕರು, ನವಧರ್ಮೋಪದೇಶಮಾರ್ಗ ಆಯೋಜಿಸಿದ್ದ ಆಧ್ಯಾತ್ಮಿಕ ಶಿಬಿರಕ್ಕಾಗಿ ಇನ್ನೂ ಪೋರ್ಟೊ ಸಾನ್ ಜಾರ್ಜಿಯೊದಲ್ಲಿ ನೆಲೆಸಿದ್ದು, ಕಳೆದ ಕೆಲವು ದಿನಗಳಲ್ಲಿ ಇಟಲಿಯಲ್ಲಿ ನಡೆಸಿದ ಧರ್ಮಪ್ರಚಾರದ ಅನುಭವಗಳನ್ನು ಹಂಚಿಕೊಂಡರು.

ಕಳೆದ ಜೂನ್ 20, ಶನಿವಾರ ಅವರು ಭುಜದ ಮೇಲೆ ಬೆನ್ನುಚೀಲ ಹೊತ್ತು, ಯಾವುದೇ ಹಣ ಅಥವಾ ಮೊಬೈಲ್ ಫೋನ್ ಇಲ್ಲದೆ ಇಬ್ಬರು-ಇಬ್ಬರಾಗಿ ಪ್ರಯಾಣ ಆರಂಭಿಸಿದರು. ಪೀಡ್ಮಾಂಟ್‌ನಿಂದ ಸಿಸಿಲಿಯವರೆಗೆ ಹಾಗೂ ಸಾರ್ಡಿನಿಯಾದ ಅನೇಕ ಪಟ್ಟಣಗಳನ್ನು ದಾಟುತ್ತಾ, ಇಟಲಿಯ ವಿವಿಧ ಪ್ರದೇಶಗಳ ನಗರಗಳಿಗೆ ಅವರು ತೆರಳಿದರು.

ಅವರ ಬಳಿ ಇದ್ದದ್ದು ಮುಂದಿನ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳು, ಒಂದು ಪವಿತ್ರ ಬೈಬಲ್ ಹಾಗೂ ಜಪಮಾಲೆ ಮಾತ್ರ. ತಾವು ತಲುಪಿದ ಬಳಿಕ, ಮೊದಲು ಅಲ್ಲಿನ ಧರ್ಮಾಧ್ಯಕ್ಷರ ಆಶೀರ್ವಾದವನ್ನು ಪಡೆದು, ನಂತರ ಸ್ಥಳೀಯ ಧರ್ಮಕ್ಷೇತ್ರದ ಯಾಜಕರನ್ನು ಭೇಟಿಯಾದರು.

ಪ್ರಭು  ಅವರಿಗೆ ಶುಭಸಂದೇಶ ಸಾರಲು ಅನೇಕ ಅವಕಾಶಗಳನ್ನು ಒದಗಿಸಿದರು ಎಂದು ಕಟಾನಿಯಾದಲ್ಲಿ ಧರ್ಮಪ್ರಚಾರ ಕಾರ್ಯಕ್ಕೆ ತೆರಳಿದ್ದ 29 ವರ್ಷದ ವಂ. ಗುರು ಮಿಕೆಲೆ ಸೆಗಾ ಸಂದರ್ಶನದಲ್ಲಿ ತಿಳಿಸಿದರು. ಕೇವಲ ಒಂದು ತಿಂಗಳ ಹಿಂದೆ ಯಾಜಕರಾಗಿ ದೀಕ್ಷೆ ಪಡೆದಿರುವ ಅವರು, ಪ್ರಸ್ತುತ ಅಮೆರಿಕದ ಮಿಯಾಮಿಯ ಒಂದು ಧರ್ಮಕ್ಷೇತ್ರದಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಭು ಯೇಸು ಕ್ರಿಸ್ತರು ತಮ್ಮ ಶಿಷ್ಯರನ್ನು ಕಳುಹಿಸಿದ ರೀತಿಯಲ್ಲಿಯೇ—ಹಣವಿಲ್ಲದೆ, ಬೇರೆ ಯಾವುದೇ ಆಸರೆಯಿಲ್ಲದೆ—ತಾವು ಧರ್ಮಪ್ರಚಾರಕ್ಕೆ ತೆರಳಿದ್ದರಿಂದ, ಈ ಅನುಭವವು ತಮ್ಮ ಯಾಜಕ ಸೇವೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದೆ ಎಂದು ಅವರು ಹೇಳಿದರು.

ಉತ್ತರ, ಮಧ್ಯ ಹಾಗೂ ದಕ್ಷಿಣ ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿ ರೆಡೆಂಪ್ಟೋರಿಸ್ ಮಾತರ್ ಯಾಜಕ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದ ಈ ಯಾಜಕರಿಗೆ, ಈ ಧರ್ಮಪ್ರಚಾರ ಯಾತ್ರೆಯುದ್ದಕ್ಕೂ ಬಹುತೇಕ ಎಲ್ಲೆಡೆ ಆತ್ಮೀಯ ಸ್ವಾಗತ ದೊರೆಯಿತು.

ಕಳೆದ ಬುಧವಾರ, ಈ ಶುಭಸಂದೇಶ ಪ್ರಚಾರದ ಅನುಭವದ ಸಮಾರೋಪವಾಗಿ, ಅವರು ಪೂಜ್ಯ ಜಗದ್ಗುರುಗಳ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಿದರು. ಬಳಿಕ ಮಧ್ಯಾಹ್ನ, "ಸಂತ ಪೇತ್ರರ ಮಹಾದೇವಾಲಯದ ಸಂತ ಪೇತ್ರರ ಆಸನದ ಬಲಿಪೀಠದಲ್ಲಿ” ನಡೆದ ಬಲಿಪೂಜೆಯಲ್ಲಿ, ಅರೆಕ್ವಿಪಾದ ಮಹಾಧರ್ಮಾಧ್ಯಕ್ಷರಾದ ವಂ. ಜಾವಿಯರ್ ಡೆಲ್ ರಿಯೊ ಅವರ ಅಧ್ಯಕ್ಷತೆಯಲ್ಲಿ ಬಲಿಪೂಜೆ ಅರ್ಪಿಸಿದರು. ಈ ಸಾರ್ಥಕ ದಿನಗಳ ಸಮಾರೋಪವಾಗಿ, ಜೂನ್ 26, ಶುಕ್ರವಾರ, ಯಾಜಕರು ಲೊರೆಟೊದಲ್ಲಿರುವ ಪವಿತ್ರ ಗೃಹದ ಮಹಾದೇವಾಲಯದಲ್ಲಿ ಸಹಬಲಿದಾನ ಅರ್ಪಿಸಿದರು.

ಲೊರೆಟೊದ ಮಹಾಧರ್ಮಾಧ್ಯಕ್ಷರು ಹಾಗೂ ಪವಿತ್ರ ಗೃಹದ ದೇವಾಲಯದ ಜಗದ್ಗುರುಗಳ ಪ್ರತಿನಿಧಿಯಾದ ಮಹಾಧರ್ಮಾಧ್ಯಕ್ಷರಾದ ವಂ. ಫಾಬಿಯೊ ಡಾಲ್ ಸಿನ್ ಅವರು ಅವರನ್ನುದ್ದೇಶಿಸಿ, “ಮರಿಯಮ್ಮನ ‘ಹೌದು’ ಎಂಬ ಪ್ರತಿಕ್ರಿಯೆಯಿಂದ ಶಕ್ತಿಯನ್ನು ಪಡೆದು, ನಿಮ್ಮ ಯಾಜಕ ವಾಗ್ದಾನಗಳನ್ನು ನವೀಕರಿಸಿಕೊಳ್ಳಿ” ಎಂದು ಕರೆ ನೀಡಿದರು.

ಪವಿತ್ರ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಧರ್ಮಾಧ್ಯಕ್ಷರಾದ ವಂ. ಡೆಲ್ ರಿಯೊ ಅವರು, ಎಲ್ಲಕ್ಕಿಂತ ಹೆಚ್ಚಾಗಿ ದೇವರಲ್ಲಿ ಭರವಸೆ ಇಡಬೇಕೆಂದು ಯಾಜಕರಿಗೆ ಪ್ರೇರೇಪಿಸಿದರು. “ತಮ್ಮ ಕುರಿಗಳಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಒಳ್ಳೆಯ ಕುರುಬನಾದ ಪ್ರಭು ಯೇಸು ಕ್ರಿಸ್ತರನ್ನು ಜಗತ್ತಿಗೆ ಸನಿಹಗೊಳಿಸುವ ಯಾಜಕರು ಇಂದು ಜಗತ್ತಿಗೆ ಅತ್ಯಗತ್ಯ” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಜೂನ್ 2026, 19:45