ಹುಡುಕಿ

ಪ್ರಭುವಿನ ದಿನದ ಧ್ಯಾನ: 'ಅಹಂಕಾರದ ಮೌನ ಕುಸಿತ ಮತ್ತು ಮನಃಪರಿವರ್ತನೆ'

ಧರ್ಮಸಭೆಯು ಇಂದು ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವಂ. ಗುರು ಮರಿಯನ್ ನ್ಗುಯೆನ್, OSB ಅವರು "ಅಹಂಕಾರದ ಮೌನ ಕುಸಿತ ಮತ್ತು ಮನಃಪರಿವರ್ತನೆ" ಎಂಬ ವಿಷಯದಡಿ ದಿನದ ದಿವ್ಯ ವಾಚನಗಳ ಕುರಿತು ತಮ್ಮ ಚಿಂತನೆಯನ್ನು ಹಂಚಿಕೊಳ್ಳುತ್ತಾರೆ.

ಲೇಖಕರು: ವಂ. ಗುರು ಮರಿಯನ್ ನ್ಗುಯೆನ್, OSB*

ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವವು ಸಾರ್ವತ್ರಿಕ ಧರ್ಮಸಭೆಯ ಎರಡು ಮಹಾನ್ ಸ್ತಂಭಗಳ ಮುಂದೆ ನಮ್ಮನ್ನು ನಿಲ್ಲಿಸುತ್ತದೆ.

ಸಂತ ಪೌಲರ ವ್ಯಕ್ತಿತ್ವವನ್ನು ನಾವು ಅವಲೋಕಿಸಿದಾಗ, ಅವರ ಮನಃಪರಿವರ್ತನೆಯು ತಕ್ಷಣದ, ಸ್ಪಷ್ಟವಾದ ಹಾಗೂ ಅದ್ಭುತ ಘಟನೆಯಾಗಿ ಗೋಚರಿಸುತ್ತದೆ. ದಮಸ್ಕದ ಮಾರ್ಗದಲ್ಲಿ ಕಣ್ಣು ಕುಕ್ಕುವ ದಿವ್ಯ ಪ್ರಕಾಶ (ಪ್ರೇಷಿತರ ಕಾರ್ಯಕಲಾಪಗಳು 9:3-6), ಸ್ವರ್ಗದಿಂದ ಕೇಳಿಬಂದ ಧ್ವನಿ ಹಾಗೂ ಅವರ ಬದುಕಿನಲ್ಲಿ ಸಂಭವಿಸಿದ ಸಂಪೂರ್ಣ ಆಮೂಲಾಗ್ರ ಪರಿವರ್ತನೆ ಇದಕ್ಕೆ ಸಾಕ್ಷಿಯಾಗಿದೆ.

ಆದರೆ ಸಂತ ಪೇತ್ರರ ಮನಃಪರಿವರ್ತನೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಅವರ ಜೀವನದ ಮಹತ್ತರ ತಿರುವು ಒಂದೇ ಕ್ಷಣದಲ್ಲಿ, ಮಿಂಚಿನಂತೆ ಸಂಭವಿಸಲಿಲ್ಲ. ಬದಲಾಗಿ ಅದು ಅತ್ಯಂತ ಸೂಕ್ಷ್ಮವಾದ, ದುರ್ಬಲತೆಯಿಂದ ಕೂಡಿದ ಹಾಗೂ ನೋವಿನ ಅನುಭವಗಳ ಮೂಲಕ ಸಾಗಿದ ದೀರ್ಘ ಪಯಣವಾಗಿತ್ತು. ಆದಾಗ್ಯೂ, ಅಂತಿಮವಾಗಿ ಸಂತ ಪೇತ್ರ ಮತ್ತು ಸಂತ ಪೌಲ—ಇಬ್ಬರಿಗೂ ಒಂದೇ ಅಗತ್ಯವಿತ್ತು: ಮನಃಪರಿವರ್ತನೆ.

ಸಂತ ಪೇತ್ರರ ಮನಃಪರಿವರ್ತನೆಯು ಯಾವುದೇ ಬಾಹ್ಯ ಗದ್ದಲವಿಲ್ಲದೆ, ವೈಯಕ್ತಿಕ ವೈಫಲ್ಯದ ಅನುಭವದ ಮೂಲಕ ರೂಪುಗೊಂಡ ಕಾರಣ, ಅದು ನಮ್ಮ ಜೀವನಕ್ಕೂ ಹಾಗೂ ನಮ್ಮ ಕಾಲದ ಸಂಕೀರ್ಣ ವಾಸ್ತವತೆಗಳಿಗೂ ಅತ್ಯಂತ ಹತ್ತಿರವಾಗಿರುವ ಅನುಭವವಾಗಿದೆ.

ಈ ಪಯಣದ ಪರಮಾವಧಿಯು ಗಲಿಲಾಯ ಸಮುದ್ರದ ತೀರದಲ್ಲಿ, ಯೊವಾನ್ನರ ಶುಭಸಂದೇಶ (21:15-19) ದಾಖಲಿಸಿರುವ ಪ್ರಸಿದ್ಧ ಸಂಭಾಷಣೆಯಲ್ಲಿ ಅನಾವರಣಗೊಳ್ಳುತ್ತದೆ. ಈ ಪುನಃಸ್ಥಾಪನೆಯ ಆಳವನ್ನು ಗ್ರಹಿಸಲು, ಸಂತ ಅಗಸ್ಟಿನ್ ಅವರ ಅಮೂಲ್ಯ ಪಿತೃಪರಂಪರೆಯ ಒಳನೋಟವನ್ನು ಹಾಗೂ ಕಾರ್ಡಿನಲ್ ಆಲ್ಬರ್ಟ್ ವಾನ್‌ಹೊಯೆ ಅವರು ತಮ್ಮ "Pietro e Paolo" (ಪೇತ್ರ ಮತ್ತು ಪೌಲ: ಬೈಬಲ್ ಆಧ್ಯಾತ್ಮಿಕ ಸಾಧನೆಗಳು) ಕೃತಿಯಲ್ಲಿ ನೀಡಿರುವ ಗ್ರೀಕ್ ಮೂಲಪಾಠದ ಆಳವಾದ ವಿಶ್ಲೇಷಣೆಯನ್ನು ಪರಸ್ಪರ ಸಂವಾದಕ್ಕೆ ತರುವುದು ಅತ್ಯಂತ ಫಲಪ್ರದವಾಗಿದೆ.

ಯೊವಾನ್ನರ ಶುಭಸಂದೇಶದ ಮೇಲಿನ ತಮ್ಮ ವ್ಯಾಖ್ಯಾನದಲ್ಲಿ (Iohannis Evangelium Tractatus, 123, 5) ಸಂತ ಅಗಸ್ಟಿನ್ ಈ ಘಟನೆಯ ಮನೋವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಚಲನೆಯನ್ನು ಅದ್ಭುತವಾಗಿ ಸಂಕ್ಷಿಪ್ತಗೊಳಿಸುತ್ತಾರೆ. ಅವರು ಹೀಗೆ ಬರೆಯುತ್ತಾರೆ: "ಭಯವು ಎಷ್ಟು ಬಾರಿ ನಿರಾಕರಿಸಿತೋ, ಪ್ರೀತಿಯೂ ಅಷ್ಟೇ ಬಾರಿ ತನ್ನನ್ನು ಒಪ್ಪಿಕೊಳ್ಳಬೇಕು" (reddatur trinae negationi trina confessio, ne minus amori lingua serviat quam timori).

ಪ್ರಭು ಯೇಸು ಕ್ರಿಸ್ತರ ಪ್ರಶ್ನೆಯ ಅಂತಿಮ ಉದ್ದೇಶ ವಿಚಾರಣೆ ನಡೆಸುವುದಲ್ಲ; ಬದಲಾಗಿ ನಿಜವಾದ "Ordo Amoris" — ಅಂದರೆ ಸಮರ್ಪಕವಾಗಿ ಕ್ರಮಬದ್ಧವಾದ ಪ್ರೀತಿಯ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿದೆ. ಅಲ್ಲಿ ಮಾನವೀಯ ಪ್ರೀತಿಯು ಅಹಂಕಾರದ ಪ್ರತಿಯೊಂದು ಕಲೆಗಳಿಂದ ಶುದ್ಧೀಕರಿಸಲ್ಪಟ್ಟು, ಸಂಪೂರ್ಣವಾಗಿ ಸ್ವಸ್ಥಗೊಳ್ಳುತ್ತದೆ.

ಕಾರ್ಡಿನಲ್ ವಾನ್‌ಹೊಯೆ ಅವರು ಸಂತ ಅಗಸ್ಟಿನ್ ಅವರ ಈ ಅಮೂಲ್ಯ ಚಿಂತನೆಗೆ ತಮ್ಮ "Pietro e Paolo" ಕೃತಿಯಲ್ಲಿ ಗ್ರೀಕ್ ಮೂಲಪಾಠದ ಆಳವಾದ ಅಧ್ಯಯನದ ಮೂಲಕ ಮತ್ತಷ್ಟು ಬೆಳಕು ಚೆಲ್ಲುತ್ತಾರೆ.

ಮೊದಲ ಎರಡು ಪ್ರಶ್ನೆಗಳಲ್ಲಿ (ಯೊವಾನ್ನ 21:15-16), ಪ್ರಭು ಯೇಸು ಕ್ರಿಸ್ತರು "ಅಗಪಾವೋ" (agapao) ಎಂಬ ಗ್ರೀಕ್ ಕ್ರಿಯಾಪದವನ್ನು ಬಳಸುತ್ತಾರೆ. ಇದು ಸಂಪೂರ್ಣ, ದೈವಿಕ ಹಾಗೂ ನಿರಪೇಕ್ಷ ಪ್ರೀತಿಯನ್ನು ಸೂಚಿಸುತ್ತದೆ: "ಇವರಿಗಿಂತ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯೇ?" (agapas me).

ಆದರೆ ಮೇಲ್ಮನೆಯಲ್ಲಿದ್ದಾಗ, "ನಿಮಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ" (ಯೊವಾನ್ನ 13:37) ಎಂದು ಧೈರ್ಯದಿಂದ ಘೋಷಿಸಿ, ನಂತರ ಮೂರು ಬಾರಿ ಪ್ರಭು ಯೇಸು ಕ್ರಿಸ್ತರನ್ನು ನಿರಾಕರಿಸಿದ (ಯೊವಾನ್ನ 18:15-27) ತನ್ನ ಹಿಂದಿನ ಅಹಂಕಾರದ ನೆನಪಿನಿಂದ ಗಾಯಗೊಂಡಿದ್ದ ಸಂತ ಪೇತ್ರರು, ಇನ್ನು ಮುಂದೆ ತಮ್ಮನ್ನು ಇತರರಿಗಿಂತ ಶ್ರೇಷ್ಠರೆಂದು ಭಾವಿಸುವ ಧೈರ್ಯ ಮಾಡಲಿಲ್ಲ. ಆದ್ದರಿಂದ ಅವರು "ಫಿಲೆಯೋ" (phileo) ಎಂಬ ಕ್ರಿಯಾಪದವನ್ನು ಬಳಸುತ್ತಾರೆ. ಇದು ಮಾನವೀಯ ಪ್ರೀತಿ ಹಾಗೂ ನಿಜವಾದ ಸ್ನೇಹವನ್ನು ಸೂಚಿಸುತ್ತದೆ: "ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂಬುದು ನಿಮಗೆ ತಿಳಿದಿದೆ" (philō se).

ಈ ಸಂಭಾಷಣೆಯಲ್ಲಿ ಅತ್ಯಂತ ಸೂಕ್ಷ್ಮವಾದ ದೈವಿಕ ಬೋಧನೆಯ ಸೌಂದರ್ಯವು ಅನಾವರಣಗೊಳ್ಳುತ್ತದೆ. ಪ್ರಭು ಯೇಸು ಕ್ರಿಸ್ತರು ಸಂತ ಪೇತ್ರರ ಲಜ್ಜೆಯ ಆಳವನ್ನು ಅಪರಿಮಿತ ತಾಳ್ಮೆ ಮತ್ತು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಅವರು ಒಂದೇ ಕ್ಷಣದಲ್ಲಿ ಭೂತಕಾಲವನ್ನು ಅಳಿಸಿಹಾಕುವುದಿಲ್ಲ; ಹಾಗೆಯೇ ತಮ್ಮ ಪ್ರೇಷಿತರ ದುರ್ಬಲತೆಗಳ ಕಾರಣ ಅವರನ್ನು ತಿರಸ್ಕರಿಸುವುದೂ ಇಲ್ಲ.

ಇದಕ್ಕೆ ವಿರುದ್ಧವಾಗಿ, ಮೂರನೆಯ ಪ್ರಶ್ನೆಯಲ್ಲಿ (ಯೊವಾನ್ನ 21:17), ಪ್ರಭು ಯೇಸು ಕ್ರಿಸ್ತರು ತಮ್ಮ ಪಾಲನಾ ಪ್ರೀತಿಯ ಅದ್ಭುತವನ್ನು ತೋರಿಸುತ್ತಾರೆ. ಅವರು ಸಂತ ಪೇತ್ರರ ಮಟ್ಟಕ್ಕೆ ಇಳಿದು, ಅವರೇ ಬಳಸಿದ ಅದೇ ಕ್ರಿಯಾಪದವನ್ನು ಬಳಸುತ್ತಾರೆ: "ನೀನು ನನ್ನನ್ನು ಪ್ರೀತಿಸುತ್ತೀಯೇ? (phileis me)."

ಆ ಕ್ಷಣದಲ್ಲಿಯೇ ಸಂತ ಪೇತ್ರರ ಅಹಂಕಾರವು ಸಂಪೂರ್ಣವಾಗಿ ಕುಸಿದುಬಿಡುತ್ತದೆ. ಪ್ರಭು ಯೇಸು ಕ್ರಿಸ್ತರು ತಮ್ಮಿಂದ ಯಾವುದೇ ದೋಷರಹಿತ ಸಾಧನೆಯನ್ನು ನಿರೀಕ್ಷಿಸುತ್ತಿಲ್ಲ; ಬದಲಾಗಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ನಿರ್ವ್ಯಾಜ ಸತ್ಯನಿಷ್ಠೆಯನ್ನು ಮಾತ್ರ ಅಪೇಕ್ಷಿಸುತ್ತಾರೆ ಎಂಬುದನ್ನು ಅವರು ಅರಿತುಕೊಳ್ಳುತ್ತಾರೆ. ನಿಜವಾಗಿ ಕುಸಿದದ್ದು ಸಂತ ಪೇತ್ರರಲ್ಲ; ತಾವು ತಮ್ಮ ಬಗ್ಗೆ ಕಟ್ಟಿಕೊಂಡಿದ್ದ ಭ್ರಮೆಯ ಪ್ರತಿರೂಪವೇ ಕುಸಿಯಿತು.

ಹೀಗೆ ತನ್ನನ್ನೇ ಸಂಪೂರ್ಣವಾಗಿ ತ್ಯಜಿಸಿ, ಮನಃಪರಿವರ್ತನೆ ಹೊಂದಿದ ನಾಯಕನಿಗೆ ಮಾತ್ರ ಪ್ರಭು ಯೇಸು ಕ್ರಿಸ್ತರು ಸಾರ್ವತ್ರಿಕ ಧರ್ಮಸಭೆಯ ಧರ್ಮಪ್ರಚಾರದ ಹೊಣೆಗಾರಿಕೆಯನ್ನು ಒಪ್ಪಿಸುತ್ತಾರೆ: "ನನ್ನ ಕುರಿಗಳನ್ನು ಮೇಯಿಸು" (ಯೊವಾನ್ನ 21:17). ಕಾರ್ಡಿನಲ್ ವಾನ್‌ಹೊಯೆ ಅವರ ಪ್ರಕಾರ, ಇಲ್ಲಿ ಒತ್ತು ನೀಡಿರುವುದು ಸಂಪೂರ್ಣವಾಗಿ ಹಿಂಡಿನ ಯಜಮಾನಿಕೆಯ ಮೇಲಿದೆ. ಆ ಕುರಿಗಳು ಪ್ರಭು ಯೇಸು ಕ್ರಿಸ್ತರಿಗೆ ಸೇರಿವೆ; ಅವು ಎಂದಿಗೂ ಸಂತ ಪೇತ್ರರಿಗೆ ಸೇರಿರುವುದಿಲ್ಲ.

ಈ ಸಂದೇಶವು ಇಂದು ಅತ್ಯಂತ ತುರ್ತಾಗಿ ನಮ್ಮೊಂದಿಗೆ ಮಾತನಾಡುತ್ತದೆ. ನಾವು ವ್ಯಕ್ತಿತ್ವವನ್ನೇ ಆರಾಧಿಸುವ ನಾಯಕತ್ವವು ಪ್ರಾಬಲ್ಯ ಹೊಂದಿರುವ ಸಮಾಜದಲ್ಲಿ ಜೀವಿಸುತ್ತಿದ್ದೇವೆ. ಡಿಜಿಟಲ್ ಜಗತ್ತಿನಲ್ಲಿ ವ್ಯಕ್ತಿಯ ಮೌಲ್ಯವನ್ನು ಅವನು ತನ್ನ ಕುರಿತು ನಿರ್ಮಿಸಿಕೊಂಡಿರುವ ಬಾಹ್ಯ ಚಿತ್ರಣದ ಆಧಾರದ ಮೇಲೆ ಅಳೆಯಲಾಗುತ್ತದೆ. ಈ ಮನೋಭಾವವು ವಿಶ್ವದ ಮಹಾನ್ ರಾಜಕೀಯ ನಾಯಕರಿಂದ ಹಿಡಿದು ಸಾಮಾನ್ಯವಾಗಿ ಜನಪ್ರಿಯರಾದ ಟಿಕ್‌ಟಾಕ್ ಅಥವಾ ಯೂಟ್ಯೂಬ್ ಸೃಜನಶೀಲರ ತನಕ ಎಲ್ಲೆಡೆ ಗೋಚರಿಸುತ್ತದೆ.

ನಾವು ಪ್ರತಿದಿನ ಈ ಮಾಧ್ಯಮದ ಪ್ರವಾಹದಲ್ಲಿ ಮುಳುಗಿದ್ದೇವೆ. ಕ್ಷಣಕ್ಷಣವೂ ಅದರ ವಿಷಯಗಳನ್ನು ಗ್ರಹಿಸುತ್ತಾ, ಅದು ನಮ್ಮ ಆತ್ಮವನ್ನು ವಿರೂಪಗೊಳಿಸುವ ಪ್ರಭಾವವನ್ನು ಕಡೆಗಣಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಈ ಸಂಸ್ಕೃತಿಯು ನಿರಂತರವಾಗಿ ನಮ್ಮ ಅಹಂಕಾರವನ್ನು ದೇವರ ಸ್ಥಾನದಲ್ಲಿ ಇರಿಸಲು, ನಮ್ಮ ದುರ್ಬಲತೆಗಳನ್ನು ಮರೆಮಾಚಲು ಹಾಗೂ ನಮ್ಮ ಶಕ್ತಿ ಅಥವಾ ಜನಮನ್ನಣೆಯ ಆಧಾರದ ಮೇಲೆ ನಿರಂತರ ಮಾನ್ಯತೆಯನ್ನು ಹುಡುಕುವಂತೆ ನಮ್ಮನ್ನು ಪ್ರಲೋಭಿಸುತ್ತದೆ.

ಆದರೆ, ನಮ್ಮ ಸಂಸ್ಕೃತಿಯ ಈ ಅತಿರೇಕಗಳನ್ನು ಟೀಕಿಸುವ ಮೊದಲು, ನಾವು ನಮಗೇ ಒಂದು ವೈಯಕ್ತಿಕ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ನಮ್ಮಲ್ಲಿ ಯಾರು ದಾಂಪತ್ಯ ಜೀವನದ, ಆಳವಾದ ಸ್ನೇಹದ, ಕುಟುಂಬ ಜೀವನದ ಅಥವಾ ಸಮುದಾಯ ಜೀವನದ ವರ್ಷಗಳ ಅನುಭವದ ನಂತರ ನಿಜವಾದ ಪ್ರೀತಿಯು ಕೊನೆಗೆ ಪ್ರತಿಯೊಂದು ಭ್ರಮೆಯನ್ನೂ ಕಳಚಿಹಾಕುತ್ತದೆ ಎಂಬುದನ್ನು ಅರಿತಿಲ್ಲ? ದೀರ್ಘಕಾಲ ನಮ್ಮೊಂದಿಗೆ ಇರುವವರು ನಮ್ಮ ಶಕ್ತಿಗಳನ್ನು ಮಾತ್ರವಲ್ಲ, ನಮ್ಮ ದೌರ್ಬಲ್ಯಗಳನ್ನೂ ತಿಳಿದುಕೊಳ್ಳುತ್ತಾರೆ.

ಆದ್ದರಿಂದ ಪ್ರಶ್ನೆಯು ನಾವು ಬಹಳ ಜಾಗರೂಕತೆಯಿಂದ ನಿರ್ಮಿಸಿಕೊಂಡಿರುವ ಬಾಹ್ಯ ಮುಖವಾಡವು ಕುಸಿಯುತ್ತದೆಯೇ ಎಂಬುದಲ್ಲ; ಅದು ಕುಸಿದಾಗ, ಸಂತ ಪೇತ್ರರಂತೆ, ಆ ಕುಸಿತವನ್ನು ಇನ್ನಷ್ಟು ಆಳವಾದ ಮನಃಪರಿವರ್ತನೆಯ ಆರಂಭವನ್ನಾಗಿ ನಾವು ಸ್ವೀಕರಿಸುತ್ತೇವೆಯೇ ಎಂಬುದಾಗಿದೆ.

ಸಾರ್ವತ್ರಿಕ ಧರ್ಮಸಭೆಯ ನಿಜವಾದ "ರಾಜಕುಮಾರರಾದ" ಸಂತ ಪೇತ್ರ ಮತ್ತು ಸಂತ ಪೌಲರ ಜೀವನವು ನಮಗೆ ಸಂಪೂರ್ಣ ವಿಭಿನ್ನ ದಾರಿಯನ್ನು ತೋರಿಸುತ್ತದೆ. ಸಂತ ಪೇತ್ರರು ತಮ್ಮನ್ನು ತಾವು ಅತ್ಯಂತ ಬಲಶಾಲಿಯೆಂದು ಭಾವಿಸಿದ್ದಾಗ ಧರ್ಮಸಭೆಯ ಶಿಲೆಯಾಗಲಿಲ್ಲ; ಬದಲಾಗಿ ತಾವು ಸದಾ ಬಲಶಾಲಿಯಂತೆ ಕಾಣಬೇಕೆಂಬ ಅಗತ್ಯವನ್ನು ಸಂಪೂರ್ಣವಾಗಿ ತ್ಯಜಿಸಿದಾಗ ಅವರು ಧರ್ಮಸಭೆಯ ಶಿಲೆಯಾದರು.

ಪ್ರಭು ಯೇಸು ಕ್ರಿಸ್ತರ ಹಿಂಡಿನ ಕುರುಬನಾಗುವ ಮೊದಲು, ಅವರು ಪುನರುತ್ಥಾನ ಹೊಂದಿದ ಪ್ರಭುವಿನ ಕರುಣಾಮಯ ದೃಷ್ಟಿಯ ಸಮ್ಮುಖದಲ್ಲಿ, ತಮ್ಮ ಸ್ವಾವಲಂಬನೆಯ ಭ್ರಮೆಯು ಸಾಯಲು ಅವಕಾಶ ನೀಡುವುದನ್ನು ಕಲಿತ ಶಿಷ್ಯರಾಗಿದ್ದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ). 

ವಂ. ಗುರು ಮರಿಯನ್ ನ್ಗುಯೆನ್, OSB — ಅಮೆರಿಕದ ವಾಷಿಂಗ್ಟನ್ ರಾಜ್ಯದ ಲೇಸಿ ಪಟ್ಟಣದಲ್ಲಿರುವ ಸಂತ ಮಾರ್ಟಿನ್ ಮಠದ ಮಠಾದೀಶರು.

 

28 ಜೂನ್ 2026, 19:51