ಪ್ರಭುವಿನ ದಿನದ ಧ್ಯಾನ: ‘ಜೀವನಯಾತ್ರೆಯ ಪಥಾಹಾರ’ ಪ್ರಭುವಿನ ದಿನದ ಧ್ಯಾನ: ‘ಜೀವನಯಾತ್ರೆಯ ಪಥಾಹಾರ’ 

ಪ್ರಭುವಿನ ದಿನದ ಧ್ಯಾನ: ‘ಜೀವನಯಾತ್ರೆಯ ಪಥಾಹಾರ’

ಧರ್ಮಸಭೆಯು ಅತ್ಯಂತ ಪವಿತ್ರವಾದ ಪ್ರಭು ಕ್ರಿಸ್ತರ ದೇಹ ಮತ್ತು ರಕ್ತದ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವಂ. ಗುರು ಎಡ್ಮಂಡ್ ಪವರ್ ಅವರು “ಜೀವನಯಾತ್ರೆಯ ಪಥಾಹಾರ” ಎಂಬ ವಿಷಯದ ಕುರಿತು ತಮ್ಮ ಚಿಂತನೆಯನ್ನು ಹಂಚಿಕೊಳ್ಳುತ್ತಾರೆ.

ಲೇಖಕರು: ವಂ. ಗುರು ಎಡ್ಮಂಡ್ ಪವರ್,OSB

ಇಂಗ್ಲಿಷ್ ಮಾತನಾಡುವ ಬಹುತೇಕ ದೇಶಗಳಲ್ಲಿ, ಸಾಮಾನ್ಯವಾಗಿ ಕಾರ್ಪಸ್ ಕ್ರಿಸ್ತಿ(Corpus Christi) ಎಂದು ಕರೆಯಲ್ಪಡುವ ಅತ್ಯಂತ ಪವಿತ್ರವಾದ ಪ್ರಭು ಕ್ರಿಸ್ತರ ದೇಹ ಮತ್ತು ರಕ್ತದ ಮಹೋತ್ಸವವನ್ನು,ಪರಮ ತ್ರಿತ್ವ ಭಾನುವಾರದ ನಂತರದ ಭಾನುವಾರ ಆಚರಿಸಲಾಗುತ್ತದೆ.

ಎರಡನೇ ಸಹಸ್ರಮಾನದ ಅವಧಿಯಲ್ಲಿ(13ನೇ ಶತಮಾನದಲ್ಲಿ) ಸ್ಥಾಪಿತವಾದ ಈ ಹಬ್ಬವು, ವಾಸ್ತವವಾಗಿ ಪವಿತ್ರ ಪರಮ ಪ್ರಸಾದದ ಪ್ರಮುಖ ಹಬ್ಬವಾದ ಪವಿತ್ರ ಗುರುವಾರದ ಭಕ್ತಿಪೂರ್ವಕ ವಿಸ್ತರಣೆಯಾಗಿದೆ. ಪವಿತ್ರ ಗುರುವಾರವು ಪ್ರಭು ಕ್ರಿಸ್ತರ ದೇಹ ಮತ್ತು ರಕ್ತದ ರಹಸ್ಯವನ್ನು ಪಾಸ್ಕ ಹಬ್ಬದ ತ್ರಿದಿನಾಚರಣೆಯ ಸಂದರ್ಭದಲ್ಲಿ ದೃಢವಾಗಿ ಸ್ಥಾಪಿಸುತ್ತದೆ.

ಇಂದಿನ ಶುಭಸಂದೇಶವನ್ನು ಯೊವಾನ್ನರ ಶುಭಸಂದೇಶದ 6ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಪ್ರಭು ಯೇಸು ಕ್ರಿಸ್ತರು, “ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿಯು ನಾನೇ” ಎಂದು ಘೋಷಿಸುತ್ತಾರೆ. ಆದರೆ ಧರ್ಮಸಭೆಯು ನಮ್ಮ ಚಿಂತನೆಯನ್ನು ಮೊದಲು ನಿರ್ಗಮನದ ಅನುಭವದಲ್ಲಿ ಆರಂಭಿಸಲು ಆಹ್ವಾನಿಸುತ್ತದೆ.

ಇಸ್ರಾಯೇಲಿನ ಇತಿಹಾಸದಲ್ಲಿನ ನಿರ್ಣಾಯಕ ಘಟನೆಯಾಗಿರುವುದನ್ನು ಬಿಟ್ಟು ನೋಡಿದರೂ, ಮರಳುಗಾಡು ಮತ್ತು ಬಂಡೆಗಳ ನಡುವೆ, ಅಪಾಯಕರ ನೀರಿನ ಪ್ರದೇಶಗಳನ್ನು ದಾಟುತ್ತಾ, ಮಧ್ಯೆ ಮಧ್ಯೆ ವಿಶ್ರಾಂತಿ ಮತ್ತು ಸಾಂತ್ವನದ ಕ್ಷಣಗಳನ್ನು ಅನುಭವಿಸುತ್ತಾ ನಡೆದ ಆ ಕಠಿಣ ಪ್ರಯಾಣವು, ವಿಶ್ವಾಸಿಗಳ ಸಮುದಾಯವಾಗಿ ಹಾಗೂ ದೇವರ ಮುಖವನ್ನು ಹುಡುಕುವ ವ್ಯಕ್ತಿಗಳಾಗಿ ನಾವು ಜೀವನದಲ್ಲಿ ನಡೆಸುವ ಯಾತ್ರೆಯ ಮುನ್ಸೂಚನೆಯಾಗಿದೆ.

ಮೊದಲ ವಾಚನವು ಚಿಕ್ಕದಾಗಿದ್ದರೂ, ಅದು ಜೀವನಯಾತ್ರೆಗೆ ಮಾರ್ಗದರ್ಶನ ನೀಡುವ ಅನೇಕ ಬೆಳಕುಗಳ ಸಮೂಹವನ್ನು ಒದಗಿಸುತ್ತದೆ. ಅವುಗಳಲ್ಲಿ ಏಳು ಮುಖ್ಯ ಅಂಶಗಳಿವೆ. ಮೊದಲನೆಯದು, ನಾವು ಸದಾ ಪ್ರಯಾಣದಲ್ಲಿರಬೇಕು: “ನಿನ್ನ ದೇವರಾದ ಪ್ರಭು ನಿನ್ನನ್ನು ನಡೆಸಿದ ಎಲ್ಲಾ ಮಾರ್ಗವನ್ನು ಸ್ಮರಿಸು.” ಇಲ್ಲಿ ನಿಲ್ಲುವಿಕೆಯೇ ಇರಬಾರದು. ಸನ್ಯಾಸಿ ಜಾನ್ ಕ್ಯಾಸಿಯನ್ ಹೇಳುವ “ಮಾರಕ ನಿದ್ರೆ” ಎಂದಿಗೂ ಹೃದಯದ ಆಕಾಂಕ್ಷೆಯನ್ನು ಮಂದಗೊಳಿಸಬಾರದು.

ಎರಡನೆಯದು, ಈ ಯಾತ್ರೆಯು ಯಾವಾಗಲೂ ಸಹಯಾತ್ರಿಗಳೊಂದಿಗೆ ಒಗ್ಗಟ್ಟಿನಲ್ಲಿ ನಡೆಯುತ್ತದೆ. ಮೋಶೆ ಜನರನ್ನು ಸಮೂಹವಾಗಿ ಉದ್ದೇಶಿಸಿ ಮಾತನಾಡುತ್ತಾರೆ. ಅವರು ಒಟ್ಟಿಗೆ ನಡೆಯುತ್ತಾರೆ ಮತ್ತು ಒಬ್ಬರಿಗೊಬ್ಬರು ಬೆಂಬಲವಾಗುತ್ತಾರೆ. ಇದು ಪವಿತ್ರ ಪರಮ ಪ್ರಸಾದ ಸಮುದಾಯದ ಸಂಸ್ಕಾರವಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಅದು ಪ್ರಭು ಕ್ರಿಸ್ತರ ದೇಹದಿಂದ ಉದ್ಭವಿಸುವುದಷ್ಟೇ ಅಲ್ಲ, ನಮ್ಮನ್ನೂ ಪ್ರಭು ಕ್ರಿಸ್ತರ ದೇಹವಾಗಿ ರೂಪಿಸುತ್ತದೆ.

ಮೂರನೆಯದು, ಮುಂದಕ್ಕೆ ಸಾಗುವಂತೆ ಮಾಡುವ ಶಕ್ತಿ — ಆಕಾಂಕ್ಷೆ. “ಅವರು ನಿನ್ನನ್ನು ತಗ್ಗಿಸಿ, ಹಸಿವಾಗುವಂತೆ ಮಾಡಿದರು.” ಹಸಿವು ಮತ್ತು ಬಾಯಾರಿಕೆ ಆಕಾಂಕ್ಷೆಗೆ ತೀಕ್ಷ್ಣತೆಯನ್ನು ನೀಡುತ್ತವೆ ಮತ್ತು ಪವಿತ್ರ ಪರಮ ಪ್ರಸಾದದ ಕಡೆಗೆ ನಮ್ಮನ್ನು ತೆರೆದಿಡುತ್ತವೆ.

ನಾಲ್ಕನೆಯದು, ನಾವು ಎದುರಿಸುವ ಸಂಕಟ ಮತ್ತು ದುಃಖ. “ಉರಿಯುವ ಹಾವುಗಳು ಮತ್ತು ಚೇಳುಗಳಿಂದ ಕೂಡಿದ ಭಯಾನಕ ಮಹಾ ಅರಣ್ಯ” ಎಂದು ವಾಚನ ಹೇಳುತ್ತದೆ. ಇಂತಹ ಸಂಕಷ್ಟಗಳು ಪ್ರಭು ನಮಗೆ ನೀಡಲಿರುವ ವರಗಳಿಗಾಗಿ ನಮ್ಮ ಆಕಾಂಕ್ಷೆಯನ್ನು ಇನ್ನಷ್ಟು ಆಳಗೊಳಿಸಬಹುದು.

ಐದನೆಯದು, ಪ್ರಭು ಒದಗಿಸುವ ಪೋಷಣೆ. “ಅವರು ನಿಮಗೆ ಮನ್ನಾವನ್ನು ಆಹಾರವಾಗಿ ನೀಡಿದರು.”

ಆರನೆಯದು, ವಾಕ್ಯ — ವಿಶೇಷವಾಗಿ ದೇವರ ವಾಕ್ಯ. “ಮಾನವನು ಕೇವಲ ರೊಟ್ಟಿಯಿಂದ ಮಾತ್ರವಲ್ಲ, ಪ್ರಭುವಿನ ಬಾಯಿಂದ ಹೊರಡುವ ಪ್ರತಿಯೊಂದು ವಾಕ್ಯದಿಂದ ಜೀವಿಸುತ್ತಾನೆ.” ಇದು ದೇವರ ವಾಕ್ಯ ಮತ್ತು ಪವಿತ್ರ ಪರಮ ಪ್ರಸಾದದ ನಡುವಿನ ಅವಿನಾಭಾವ ಸಂಬಂಧವನ್ನು ನಮಗೆ ನೆನಪಿಸುತ್ತದೆ.

ಏಳನೆಯ ಮತ್ತು ಕೊನೆಯದು, ನಿರೀಕ್ಷೆ. ನಾವು ಭಯವಿಲ್ಲದೆ ಪ್ರಯಾಣಿಸುತ್ತೇವೆ. ಏಕೆಂದರೆ ಪ್ರಭು “ಕಲ್ಲಿನ ಬಂಡೆಯಿಂದ ನಿಮಗೆ ನೀರನ್ನು ಹೊರತಂದರು.” ಅತ್ಯಂತ ನಿರೀಕ್ಷೆಯಿಲ್ಲದ ನೆಲವೂ ಜೀವವನ್ನು ನೀಡಬಲ್ಲದು.

ಧರ್ಮಸಭೆಯ ಸಂಪ್ರದಾಯದಲ್ಲಿ, ಮರಣದ ಅಂಚಿನಲ್ಲಿರುವ ವ್ಯಕ್ತಿಯು ಸ್ವೀಕರಿಸುವ ಕೊನೆಯ ಪವಿತ್ರ ಪ್ರಸಾದವನ್ನು “ವಿಯಾಟಿಕುಮ್” ಎಂದು ಕರೆಯಲಾಗುತ್ತಿತ್ತು. ಅದರ ಅರ್ಥ “ಪ್ರಯಾಣಕ್ಕೆ ಅಗತ್ಯವಾದದ್ದು.”

ಆದರೆ ವಾಸ್ತವವಾಗಿ, ನಾವು ಸ್ವೀಕರಿಸುವ ಪ್ರತಿಯೊಂದು ಪವಿತ್ರ ಪ್ರಸಾದವೂ ಒಂದು ವಿಯಾಟಿಕುಮ್ ಆಗಿದೆ — ಪೂರ್ಣ ಜೀವಿತದತ್ತ ಸಾಗುವ ಮಾರ್ಗದಲ್ಲಿ ಅಗತ್ಯವಾದ ಪೋಷಣೆ. ಆ ವಿಯಾಟಿಕುಮ್ ಇಂದಿನ ಯೊವಾನ್ನರ ಶುಭಸಂದೇಶದಲ್ಲಿ ಘೋಷಿಸುವವರೇ ಆಗಿದ್ದಾರೆ: “ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿಯು ನಾನೇ.” ಆದರೆ ಅವರು ಕೇವಲ ರೊಟ್ಟಿಯಷ್ಟೇ ಅಲ್ಲ; “ಮಾರ್ಗವೂ, ಸತ್ಯವೂ, ಜೀವವೂ” (ಯೊವಾನ್ನ 14:6) ಆಗಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಜೂನ್ 2026, 11:59