ಅಟ್ಲಾಂಟಿಕ್ ಸಿಟಿಯಲ್ಲಿ ವಾರ್ಷಿಕ ಸಮ್ಮೇಳನಕ್ಕಾಗಿ ಅಮೆರಿಕದ ಕಥೋಲಿಕ ಪತ್ರಕರ
ವ್ಯಾಟಿಕನ್ ವರದಿ
ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು, ಸಂಪಾದಕರು, ಪ್ರಕಾಶಕರು ಮತ್ತು ಸಂವಹನ ತಜ್ಞರು, ಕ್ಯಾಥೋಲಿಕ್ ಮೀಡಿಯಾ ಅಸೋಸಿಯೇಷನ್ ಆಯೋಜಿಸಿರುವ ವಾರ್ಷಿಕ ಕಥೋಲಿಕ ಮಾಧ್ಯಮ ಸಮ್ಮೇಳನಕ್ಕಾಗಿ ಜೂನ್ 16ರಿಂದ 19ರವರೆಗೆ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ಒಟ್ಟುಗೂಡಿದ್ದಾರೆ.
“ಧ್ಯೇಯದಲ್ಲಿ ಬೇರೂರಿದ ನವೋದ್ಯಮ” (Innovation Anchored in Mission) ಎಂಬ ಧ್ಯೇಯವಾಕ್ಯದಡಿ ಹರ್ರಾಸ್ ರೆಸಾರ್ಟ್ನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು, ಹೆಚ್ಚು ಸಂಕೀರ್ಣವಾಗುತ್ತಿರುವ ಮಾಧ್ಯಮ ಪರಿಸರದಲ್ಲಿ ಪತ್ರಿಕೋದ್ಯಮ, ಶುಭಸಂದೇಶ ಸೇವೆ ಮತ್ತು ಡಿಜಿಟಲ್ ಸಂವಹನ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಕುರಿತು ಚಿಂತನೆ ನಡೆಸಲು ಕಥೋಲಿಕ ಸಂವಹನಕಾರರನ್ನು ಒಂದೆಡೆ ಸೇರಿಸಿದೆ.
ಕಾರ್ಯಕ್ರಮವು ಸೇಂಟ್ ನಿಕೋಲಸ್ ಆಫ್ ಟೊಲೆಂಟೈನ್ ದೇವಾಲಯದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಬಳಿಕ ಅಟ್ಲಾಂಟಿಕ್ ಸಿಟಿಯ ಬೋರ್ಡ್‌ವಾಕ್‌ನಲ್ಲಿ ಭಾಗವಹಿಸಿದವರ ವಿಶೇಷ ಸಮಾಗಮ ನಡೆಯಿತು. ವಾರದ ಅವಧಿಯಲ್ಲಿ, ಭಾಗವಹಿಸುವವರು ಕಾರ್ಯಾಗಾರಗಳು, ದುಂಡುಮೇಜಿನ ಚರ್ಚೆಗಳು ಹಾಗೂ ಪ್ರಮುಖ ಉಪನ್ಯಾಸಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವು ಕಥೋಲಿಕ ಸಂವಹನದ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿವೆ.
ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ, ಮೈಕ್ರೋಸಾಫ್ಟ್ ಹಾಗೂ ಅಮೆರಿಕದ ಕಥೋಲಿಕ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿರುವ ಟೇಲರ್ ಬ್ಲಾಕ್ ಅವರು “ಕೃತಕ ಬುದ್ಧಿಮತ್ತೆ ಮತ್ತು ಕಥೋಲಿಕ ಸಂವಹನ” ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಇದಲ್ಲದೆ, ತಪ್ಪುಮಾಹಿತಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಯುಗದಲ್ಲಿ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರ ಸಂವಹನದ ದೃಷ್ಟಿಕೋನವನ್ನು ಪರಿಶೀಲಿಸುವ ವಿಶೇಷ ಚರ್ಚಾ ವೇದಿಕೆಯೂ ನಡೆಯುತ್ತಿದೆ. ಸಮ್ಮೇಳನದಲ್ಲಿ ಸಾಕ್ಷ್ಯಚಿತ್ರಗಳ ಪ್ರದರ್ಶನವೂ ಸೇರಿದೆ. ಅವುಗಳಲ್ಲಿ “ಪ್ರತಿಮೆಗಳು ಮತ್ತು ಸಂತರ ಕುರಿತು ಚರ್ಚೆ (Debating Statues & Saints)” ಸಮಕಾಲೀನ ಸಮಾಜದಲ್ಲಿನ ಧ್ರುವೀಕರಣ ಮತ್ತು ಸಮನ್ವಯದ ವಿಷಯಗಳನ್ನು ಅನ್ವೇಷಿಸುತ್ತದೆ. ಮತ್ತೊಂದು ಚಿತ್ರವಾದ “ಅಮೇರಿಕದ ರಕ್ತಸಾಕ್ಷಿ ಸ್ಟಾನ್ಲಿ ರೋಥರ್ ಕಥನ (American Martyr: The Stanley Rother Story)”, ಅಮೆರಿಕದಲ್ಲಿ ಜನಿಸಿದ ಮೊದಲ ಯಾಜಕ ಮತ್ತು ರಕ್ತಸಾಕ್ಷಿಯಾದ ವಂ. ಸ್ಟ್ಯಾನ್ಲಿ ರೋಥರ್ ಅವರ ಜೀವನ ಮತ್ತು ಸಾಕ್ಷ್ಯವನ್ನು ವಿವರಿಸುತ್ತದೆ.
ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ, ಪವಿತ್ರ ಸಿಂಹಾಸನದ ಸಂವಹನ ವಿಭಾಗದ ಆಡಳಿತಾಧಿಕಾರಿ ಡಾ. ಪಾವ್ಲೊ ರುಫಿನಿ ಅವರೂ ಸೇರಿದ್ದಾರೆ. ಅದೇ ರೀತಿ, ಮಾರಿಯಾ ಮೊಂಟ್ಸೆರಾಟ್ ಅಲ್ವಾರಾಡೊ ಅವರೂ ಹಾಜರಿದ್ದು, ಅವರು ನವೆಂಬರ್ 1ರಿಂದ ಸಂವಹನ ವಿಭಾಗದ ಹೊಸ ಆಡಳಿತಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).