‘ಹಿಂಸೆ ಮತ್ತಷ್ಟು ಹಿಂಸೆಗೆ ಕಾರಣವಾಗುತ್ತದೆ’: ಮರಣದಂಡನೆ ರದ್ದತಿಗಾಗಿ ಅಮೆರಿಕದ ಕಥೋಲಿಕರ ಕರೆ
ಲೇಖಕರು: ಡೆವಿನ್ ವಾಟ್ಕಿನ್ಸ್
2025ರಲ್ಲಿ ಅಮೆರಿಕದ ವಿವಿಧ ರಾಜ್ಯಗಳು ಮರಣದಂಡನೆಗೆ ಗುರಿಯಾಗಿದ್ದ 47 ಪುರುಷರು ಮತ್ತು ಮಹಿಳೆಯರನ್ನು ಗಲ್ಲಿಗೇರಿಸಿವೆ. ಕಳೆದ ಹತ್ತು ವರ್ಷಗಳ ಸರಾಸರಿ ಮರಣದಂಡನೆಗಳ ಸಂಖ್ಯೆಯೊಂದಿಗೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚು.
“ಇದು ಮರಣದಂಡನೆಗಳ ಸಂಖ್ಯೆಯಲ್ಲಿ ಕಂಡುಬಂದಿರುವ ದುಃಖಕರ ಮತ್ತು ಗಮನಾರ್ಹ ಏರಿಕೆಯಾಗಿದೆ. ವಿಶೇಷವಾಗಿ, ಅಮೆರಿಕದ ಜನರು ಮರಣದಂಡನೆಯನ್ನು ಹೆಚ್ಚಾಗಿ ಅಸ್ವೀಕಾರಾರ್ಹವೆಂದು ಪರಿಗಣಿಸುತ್ತಿರುವ ಮತ್ತು ಅದರ ರದ್ದತಿಗೆ ಬೆಂಬಲ ಹೆಚ್ಚುತ್ತಿರುವ ಈ ಸಮಯದಲ್ಲಿ ಇದು ಇನ್ನಷ್ಟು ಕಳವಳಕಾರಿ,” ಎಂದು ಕ್ರಿಸಾನ್ ವೈಲನ್‌ಕೋರ್ಟ್ ಮರ್ಫಿ ಹೇಳಿದ್ದಾರೆ. ವೈಲನ್‌ಕೋರ್ಟ್ ಮರ್ಫಿ ಅವರು ಕಥೋಲಿಕ ಮೊಬಿಲೈಸಿಂಗ್ ನೆಟ್‌ವರ್ಕ್ ಎಂಬ ವಕಾಲತ್ತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯು ಅಮೆರಿಕದಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲು ಮತ್ತು ಪುನಶ್ಚೇತನಾತ್ಮಕ ನ್ಯಾಯವನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತಿದೆ.
ರೋಮ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಮರಣದಂಡನೆಯು ಒಬ್ಬ ವ್ಯಕ್ತಿ ಅಪರಾಧದ ವಿರುದ್ಧ ಕಠಿಣ ನಿಲುವು ಹೊಂದಿದ್ದಾನೆ ಎಂಬ ಸಂದೇಶವನ್ನು ಸುಲಭವಾಗಿ ತಲುಪಿಸುವ ಸಾಧನವಾಗಬಹುದು,” ಎಂದು ಹೇಳಿದರು. “ಕೆಲವು ರಾಜ್ಯಗಳಲ್ಲಿ ಇದು ಕೆಲವೊಮ್ಮೆ ರಾಜಕೀಯ ಲಾಭವನ್ನೂ ತಂದುಕೊಡುತ್ತದೆ,” ಎಂದು ಅವರು ಸೇರಿಸಿದರು. “ಆದರೆ ಹಿಂಸೆಯು ಮತ್ತಷ್ಟು ಹಿಂಸೆಯನ್ನು ಹುಟ್ಟುಹಾಕುತ್ತದೆ. ನಿಜವಾದ ನ್ಯಾಯವು ಪ್ರತೀಕಾರದಲ್ಲಲ್ಲ, ಬದಲಾಗಿ ಮಾನವ ಘನತೆಯನ್ನು ಗೌರವಿಸುವ ಮತ್ತು ಗುಣಪಡಿಸುವ ಮಾರ್ಗಗಳಲ್ಲಿ ಕಂಡುಬರಬೇಕು.”
ಮರಣದಂಡನೆ ಮತ್ತು ಕಥೋಲಿಕ ಬೋಧನೆ
ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ರಾಜ್ಯಗಳ ನಡುವೆ ಸ್ಪಷ್ಟವಾದ ವ್ಯತ್ಯಾಸ ಕಂಡುಬರುತ್ತದೆ. 2025ರಲ್ಲಿ ಕೇವಲ 11 ರಾಜ್ಯಗಳು ಮಾತ್ರ 47 ಮರಣದಂಡನೆಗಳನ್ನು ಜಾರಿಗೊಳಿಸಿದರೆ, ಉಳಿದ 39 ರಾಜ್ಯಗಳಲ್ಲಿ ಒಂದೂ ಮರಣದಂಡನೆ ಜಾರಿಯಾಗಿಲ್ಲ. ಪ್ರಸ್ತುತ, 23 ರಾಜ್ಯಗಳು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ.
ಫ್ಲೋರಿಡಾ ರಾಜ್ಯದಲ್ಲಿ ಒಂದರಲ್ಲೇ 2025ರಲ್ಲಿ 19 ಮರಣದಂಡನೆಗಳು ಜಾರಿಯಾಗಿದ್ದು, ಸರಾಸರಿಯಾಗಿ ಪ್ರತಿ ಎರಡು ವಾರಗಳಿಗೊಮ್ಮೆ ಒಬ್ಬ ವ್ಯಕ್ತಿಯನ್ನು ಮರಣದಂಡನೆಗೆ ಗುರಿಪಡಿಸಿದಂತಾಗಿದೆ. ಪ್ರತಿಯೊಂದು ಮರಣದಂಡನೆಯೂ ಇನ್ನಷ್ಟು ಒಡೆದ ಕುಟುಂಬಗಳನ್ನು ಮತ್ತು ಹೆಚ್ಚುವರಿ ನೋವನ್ನು ಉಂಟುಮಾಡುತ್ತದೆ ಎಂದು ಕ್ರಿಸಾನ್ ವೈಲನ್‌ಕೋರ್ಟ್ ಮರ್ಫಿ ತಿಳಿಸಿದ್ದಾರೆ.
“ಸಂತ್ರಸ್ತರ ಪಾಲಿಗೆ ಇದು ಅಂತಿಮ ಸಮಾಧಾನದ ಭಾವನೆಯನ್ನು ತರುವುದಿಲ್ಲ; ಇದು ಗುಣಮುಖತೆಯನ್ನು ನೀಡುವುದಿಲ್ಲ; ಬದಲಾಗಿ ಇನ್ನಷ್ಟು ಹಿಂಸೆ ಮತ್ತು ನೋವನ್ನು ಉಂಟುಮಾಡುತ್ತದೆ,” ಎಂದು ಅವರು ಹೇಳಿದರು. “ಹಿಂಸೆಯು ಮತ್ತಷ್ಟು ಹಿಂಸೆಯನ್ನು ಹುಟ್ಟುಹಾಕುವ ವ್ಯವಸ್ಥೆಯಲ್ಲಿ ಇದು ಹೆಚ್ಚುವರಿ ಹಾನಿ, ಹೆಚ್ಚುವರಿ ನೋವು ಮತ್ತು ಇನ್ನಷ್ಟು ಸಂತ್ರಸ್ತರನ್ನು ಸೃಷ್ಟಿಸುತ್ತದೆ.”
ಮರಣದಂಡನೆಯು ಕಥೋಲಿಕ ಧರ್ಮಸಭೆಯ ಬೋಧನೆಗೂ ವಿರುದ್ಧವಾಗಿದೆ. ಕಥೋಲಿಕ ಧರ್ಮಸಭೆಯ ಧರ್ಮೋಪದೇಶ ಗ್ರಂಥ (CCC 2267) ಸ್ಪಷ್ಟವಾಗಿ, “ಮರಣದಂಡನೆಯು ವ್ಯಕ್ತಿಯ ಉಲ್ಲಂಘಿಸಲಾಗದ ಘನತೆ ಮತ್ತು ಗೌರವದ ಮೇಲಿನ ಆಕ್ರಮಣವಾಗಿರುವುದರಿಂದ ಅದು ಅಂಗೀಕಾರಾರ್ಹವಲ್ಲ” ಎಂದು ಹೇಳುತ್ತದೆ.
ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು 2026ರ ಏಪ್ರಿಲ್ 24ರಂದು ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಮರಣದಂಡನೆ ರದ್ದತಿಗೆ ತಮ್ಮ ಸ್ಪಷ್ಟ ಬೆಂಬಲವನ್ನು ವ್ಯಕ್ತಪಡಿಸಿದರು. ಆ ದಿನ ಅಮೆರಿಕದ ಇಲಿನಾಯ್ ರಾಜ್ಯವು ಮರಣದಂಡನೆ ರದ್ದತಿಯ 15ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿತ್ತು. “ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಜಗತ್ತಿನಾದ್ಯಂತ ಮರಣದಂಡನೆ ರದ್ದತಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ನಾನು ನನ್ನ ಬೆಂಬಲವನ್ನು ನೀಡುತ್ತೇನೆ,” ಎಂದು ಜಗದ್ಗುರುಗಳು ಹೇಳಿದರು. “ನಿಮ್ಮ ಪ್ರಯತ್ನಗಳು ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಿ ಮತ್ತು ಇದೇ ನ್ಯಾಯಸಮ್ಮತ ಉದ್ದೇಶಕ್ಕಾಗಿ ಇತರರನ್ನೂ ಕಾರ್ಯನಿರ್ವಹಿಸಲು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.”
ಮಾನವ ಘನತೆಯನ್ನು ಕುಂದಿಸುವುದರ ಜೊತೆಗೆ, ಅಪರಾಧ ಎಸಗಿದವರನ್ನು ಹೊಣೆಗಾರರನ್ನಾಗಿ ಮಾಡಲು ಅಥವಾ ಅವರು ಮುಂದಿನ ಅಪರಾಧಗಳನ್ನು ತಡೆಯಲು ಮರಣದಂಡನೆಯ ಅಗತ್ಯವಿಲ್ಲ ಎಂದು ವೈಲನ್‌ಕೋರ್ಟ್ ಮರ್ಫಿ ಅಭಿಪ್ರಾಯಪಟ್ಟರು.
“ಇಂದು ಸಮಾಜವನ್ನು ರಕ್ಷಿಸಲು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಬೇರೆ ಪರಿಣಾಮಕಾರಿ ಮಾರ್ಗಗಳಿವೆ. ಆದ್ದರಿಂದ ಮಾನವ ಜೀವವನ್ನು ಕಸಿದುಕೊಳ್ಳುವ ಅಗತ್ಯವೇ ಇಲ್ಲ,” ಎಂದು ಅವರು ಹೇಳಿದರು. “ನ್ಯಾಯವು ಪ್ರತೀಕಾರದ ಮೂಲಕವಲ್ಲ, ಬದಲಾಗಿ ಸತ್ಯ, ಹೊಣೆಗಾರಿಕೆ, ಗುಣಮುಖತೆ ಮತ್ತು ಮಾನವ ಘನತೆಯ ಗೌರವದ ಮೂಲಕ ಸಾಧಿಸಬೇಕು.”
ಕರುಣೆ ತೋರಿಸಲು ಅಪೂರ್ವ ಅವಕಾಶ
ಪ್ರಸ್ತುತ ಓಹಿಯೊ ರಾಜ್ಯದಲ್ಲಿ 114 ಮಂದಿ ಮರಣದಂಡನೆ ಕೈದಿಗಳಿದ್ದು, ಅವರಲ್ಲಿ 28 ಮಂದಿ ತಮ್ಮ ಮೇಲ್ಮನವಿ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ್ದಾರೆ. ಕ್ರಿಸಾನ್ ವೈಲನ್‌ಕೋರ್ಟ್ ಮರ್ಫಿ ಅವರ ಪ್ರಕಾರ, ಓಹಿಯೊ ರಾಜ್ಯದ ಗವರ್ನರ್ ಮೈಕ್ ಡಿವೈನ್ ಅವರು 2027ರ ಜನವರಿಯಲ್ಲಿ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು, ಈ 114 ಮಂದಿಯ—ಅವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ—ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಅಪೂರ್ವ ಅವಕಾಶವನ್ನು ಹೊಂದಿದ್ದಾರೆ.
ಕಥೋಲಿಕ ನಂಬಿಕೆಯನ್ನು ಆಚರಿಸುವ ಗವರ್ನರ್ ಡಿವೈನ್ ಅವರು ಮರಣದಂಡನೆಗೆ ತಮ್ಮ ವಿರೋಧವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು, ತಮ್ಮ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಓಹಿಯೊದಲ್ಲಿ ಮರಣದಂಡನೆ ಜಾರಿಗೊಳಿಸುವಿಕೆಗೆ ತಾತ್ಕಾಲಿಕ ತಡೆ (moratorium) ವಿಧಿಸಿದ್ದರು.
“ಮಾನವ ಜೀವಕ್ಕೆ ಮೌಲ್ಯವಿದೆ, ಅಪರಾಧ ಸಂಭವಿಸಿದ ಸಂದರ್ಭದಲ್ಲಿಯೂ ಸಹ, ನಾವು ಪುನರುಜ್ಜೀವನ ಮತ್ತು ಪರಿವರ್ತನೆಗೆ ಅವಕಾಶಗಳನ್ನು ಸೃಷ್ಟಿಸಬಹುದು. ಸಮಾಜವನ್ನು ಸುರಕ್ಷಿತವಾಗಿರಿಸಬಹುದು ಮತ್ತು ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಯೂ ಇರಿಸಬಹುದು. ಗವರ್ನರ್ ಡಿವೈನ್ ಅವರಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ.”
ಜೀವನದ ಗೌರವದ ಮೂಲಕ ಹಿಂಸೆಯ ಚಕ್ರದ ಅಂತ್ಯ
ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದು ಎಂದರೆ ಮರಣದಂಡನೆ ಕೈದಿಯನ್ನು ಬಿಡುಗಡೆ ಮಾಡುವುದು ಅಲ್ಲ. ಸಾಮಾನ್ಯವಾಗಿ ಇದರ ಅರ್ಥ, ಆ ವ್ಯಕ್ತಿಯು ಪೆರೋಲ್ ಅವಕಾಶವಿಲ್ಲದೆ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುವುದಾಗಿದೆ. ಕ್ರೈಸ್ತ ದೃಷ್ಟಿಕೋನದಿಂದ ನೋಡಿದರೆ, ಇದು ಅಪರಾಧಿಗೆ ತನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಜೀವನವನ್ನು ಪರಿವರ್ತಿಸಿಕೊಳ್ಳಲು ಹಾಗೂ ಹಿಂಸೆಯ ಚಕ್ರವನ್ನು ಮುಂದುವರಿಸುವ ಬದಲು ಅದನ್ನು ಅಂತ್ಯಗೊಳಿಸಲು ಅವಕಾಶ ನೀಡುತ್ತದೆ.
“ನಾವು ಸಂತ್ರಸ್ತರನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ನೋವು ಮತ್ತು ಅವರಿಗುಂಟಾದ ಹಾನಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಗುಣಮುಖತೆಯ ಮಾರ್ಗಗಳನ್ನು ಹುಡುಕಬೇಕು ಮತ್ತು ಸಾಧ್ಯವಾದರೆ ಕ್ಷಮೆಗೆ ಅವಕಾಶಗಳನ್ನು ಸೃಷ್ಟಿಸಬೇಕು,” ಎಂದು ವೈಲನ್‌ಕೋರ್ಟ್ ಮರ್ಫಿ ಹೇಳಿದರು.
ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಗಳಲ್ಲಿ ಮರಣದಂಡನೆಗೆ ಬೆಂಬಲವು ಕ್ರಮೇಣ ಕುಸಿಯುತ್ತಿರುವ ಈ ಸಂದರ್ಭದಲ್ಲಿ, ಗರ್ಭಧಾರಣೆಯಿಂದ ಹಿಡಿದು ಸಹಜ ಮರಣದವರೆಗಿನ ಪ್ರತಿಯೊಂದು ಜೀವದ ಗೌರವವನ್ನು ಸಾರುವ ಬಲವಾದ ನೈತಿಕ ದಾರಿದೀಪವನ್ನು ಕಥೋಲಿಕರು ಜಗತ್ತಿಗೆ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
“ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಇದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ,” ಎಂದು ಅವರು ಕೊನೆಗೊಳಿಸಿದರು. “ಧರ್ಮಸಭೆಯು ಮುನ್ನಡೆಯಬೇಕು ಮತ್ತು ಭರವಸೆಯ ಸಂಕೇತವಾಗಬೇಕು ಎಂದು ಅವರು ಪ್ರೋತ್ಸಾಹಿಸುತ್ತಿದ್ದಾರೆ. ಅಮೆರಿಕಕ್ಕೂ ಹಾಗೂ ಇಡೀ ಜಗತ್ತಿಗೂ, ಜೀವನದ ಪ್ರತಿಯೊಂದು ಹಂತವನ್ನು ಗೌರವಿಸಬಹುದು ಮತ್ತು ಮರಣದಂಡನೆಯು ನಮ್ಮ ನಂಬಿಕೆಗೆ ವಿರುದ್ಧವಾಗಿದೆ ಎಂಬುದನ್ನು ನಾವು ತೋರಿಸಬೇಕು.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).