ಹುಡುಕಿ

ಮಾನ್ಸಿಂಜರ್ ರೆನಾಟೊ ಗ್ರಾಸೆಲ್ ಮಾನ್ಸಿಂಜರ್ ರೆನಾಟೊ ಗ್ರಾಸೆಲ್ 

ಮಾನ್ಸಿಂಜರ್ ಗ್ರಾಸೆಲ್ಲಿ: ಶುಭಸಂದೇಶ ಸೇವೆಯ ಮೂಲಕ ದೈವಾನುಗ್ರಹದ ಅನುಭವ

ಇಟಲಿಯ ಮಧ್ಯ ಭಾಗದಲ್ಲಿರುವ ಮಾರ್ಕೆ ಪ್ರದೇಶದ ಪೋರ್ಟೊ ಸಾನ್ ಜಿಯೊರ್ಜಿಯೊ ನಗರದ “ಟೆಂಟ್ ಆಫ್ ಗ್ಯಾದರಿಂಗ್”ನಲ್ಲಿ ಸಂತೋಷ ಮತ್ತು ನಿರೀಕ್ಷೆಯ ವಾತಾವರಣ ತುಂಬಿಕೊಂಡಿದೆ. ಇಲ್ಲಿ ಸುಮಾರು 800 ಯಾಜಕರು, ನವ ಧರ್ಮೋಪದೇಶ ಮಾರ್ಗ ಆಯೋಜಿಸಿರುವ ಆಧ್ಯಾತ್ಮಿಕ ಧ್ಯಾನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಗವಹಿಸುತ್ತಿರುವವರಲ್ಲಿ ಹೆಚ್ಚಿನ ಯಾಜಕರು ಉತ್ತರ, ಮಧ್ಯ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಇರುವ 37 ರೆಡೆಂಪ್ಟೋರಿಸ್ ಮಾತರ್ ಧರ್ಮಪ್ರಾಂತ್ಯೀಯ ಗುರುತರಬೇತಿಕೇಂದ್ರಗಳಲ್ಲಿ ರೂಪುಗೊಂಡವರಾಗಿದ್ದಾರೆ. ಈ ಗುರುತರಬೇತಿಕೇಂದ್ರಗಳು  ವ್ಯಾಂಕೋವರ್‌ನಿಂದ ಮೆಕ್ಸಿಕೊ ನಗರವರೆಗೆ ಮತ್ತು ಅಮೆಜಾನ್ ಪ್ರದೇಶದಲ್ಲಿ ಶುಭಸಂದೇಶ ಸೇವೆಗೆ ವಿಶೇಷ ಒತ್ತು ನೀಡುವ ಬೆಲೇಮ್ ವರೆಗೂ ವ್ಯಾಪಿಸಿವೆ.

ಜೂನ್ 19ರ ಶುಕ್ರವಾರ ಸಂಜೆ, ಈ ಯಾಜಕರು ಲೊರೆಟೊದ ಪವಿತ್ರ ಮಂದಿರದ ಬಸಿಲಿಕಾದ ಮುಂಭಾಗದ ಚೌಕದಲ್ಲಿ, ಕಿಕೊ ಅರ್ಗುಯೆಲ್ಲೊ ಅವರ ಸಿಂಫೋನಿಕ್ ಸಂಗೀತ ಕೃತಿಯ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಶನಿವಾರದಿಂದ ಯಾಜಕರು ಇಬ್ಬರು–ಇಬ್ಬರ ಗುಂಪುಗಳಾಗಿ ಇಟಲಿಯಾದ್ಯಂತ ನಾಲ್ಕು ದಿನಗಳ ಶುಭಸಂದೇಶ ಸೇವಾ ಅನುಭವಕ್ಕಾಗಿ ಹೊರಡಲಿದ್ದಾರೆ. ಈ ಸೇವಾ ಯಾತ್ರೆಯಲ್ಲಿ ಅವರು ಯಾವುದೇ ಹಣವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗದೆ ಶುಭಸಂದೇಶವನ್ನು ಸಾರಲಿದ್ದಾರೆ.

ನ್ಯೂವರ್ಕ್‌ನ ರಿಡೆಂಪ್ಟೋರಿಸ್ ಮಟರ್ ಗುರುತರಬೇತಿಕೇಂದ್ರದ ರೆಕ್ಟರ್ ಮಾನ್ಸಿಂಜರ್ ರೆನಾಟೊ ಗ್ರಾಸೆಲ್ಲಿ ಅವರ ಪ್ರಕಾರ, ಈ ಶುಭಸಂದೇಶ ಸೇವೆಯು ಅತ್ಯಂತ ಮಹತ್ವದ ನಂಬಿಕೆಯ ಅನುಭವವಾಗಿದೆ. ಈ ಯಾಜಕರಲ್ಲಿ ಹಲವರು ತಮ್ಮ ತರಬೇತಿಯ ಅವಧಿಯಲ್ಲಿಯೇ ಇಂತಹ ಅನುಭವವನ್ನು ಈಗಾಗಲೇ ಪಡೆದಿದ್ದಾರೆ.

ಮಾನ್ಸಿಂಜರ್ ಗ್ರಾಸೆಲ್ಲಿ ಅವರು, ನ್ಯೂವರ್ಕ್  ಗುರುತರಬೇತಿಕೇಂದ್ರದಲ್ಲಿ ರೂಪುಗೊಂಡ 130 ಯಾಜಕರು ಇದುವರೆಗೆ ಯಾಜಕಾಭಿಷೇಕ ಪಡೆದಿದ್ದಾರೆ ಎಂದು ತಿಳಿಸಿದರು. ಅವರಲ್ಲಿ 45 ಪ್ರತಿಶತ ಮಂದಿ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಶುಭಸಂದೇಶ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದವರು ತಮ್ಮ ತಮ್ಮ ಮಹಾಧರ್ಮಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಲ್ಲದೆ, ಅಮೆರಿಕ ಖಂಡದಿಂದ ಬಂದಿರುವ ಯಾಜಕರು ತಮ್ಮ ಶುಭಸಂದೇಶ ಸೇವಾ ಯಾತ್ರೆಯನ್ನು ಪೂರ್ಣಗೊಳಿಸಿದ ಬಳಿಕ, ಮುಂದಿನ ಬುಧವಾರ ನಡೆಯಲಿರುವ ಜಗದ್ಗುರುಗಳ ಅವರ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಲಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.

ಈ ಉಪಕ್ರಮದ ಮಹತ್ವವನ್ನು ವಿವರಿಸಿದ ಮಾನ್ಸಿಂಜರ್ ಗ್ರಾಸೆಲ್ಲಿ, ಈ ಶುಭಸಂದೇಶ ಸೇವೆಯು ದೈವಾನುಗ್ರಹದೊಂದಿಗೆ ನಡೆಯುವ ನೈಜ ಭೇಟಿಯಾಗಿದೆ ಎಂದು ಹೇಳಿದರು. ಯಾವುದೇ ಭೌತಿಕ ಭದ್ರತೆಯಿಲ್ಲದೆ ಹೊರಡುವುದು, ದೇವರ ಮೇಲೆ ಸಂಪೂರ್ಣ ಭರವಸೆ ಇಟ್ಟು ಶುಭಸಂದೇಶವನ್ನು ಸಾರುವವರನ್ನು ದೇವರು ಹೇಗೆ ಜೊತೆಯಾಗಿದ್ದು ಬೆಂಬಲಿಸುತ್ತಾನೆ ಎಂಬುದನ್ನು ಸ್ಪಷ್ಟವಾಗಿ ಅನುಭವಿಸಲು ಯಾಜಕರಿಗೆ ಅವಕಾಶ ನೀಡುತ್ತದೆ ಎಂದು ಅವರು ವಿವರಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

19 ಜೂನ್ 2026, 16:06