ಕಥೋಲಿಕ ನಂಬಿಕೆಯತ್ತ ಹೆಚ್ಚುತ್ತಿರುವ ಆಸಕ್ತಿಯನ್ನು ಅನಾವರಣಗೊಳಿಸಿದ ಹೊಸ ಅಧ್ಯಯನ
ವ್ಯಾಟಿಕನ್ ವರದಿ
ಅಮೆರಿಕದ 20 ಕಥೋಲಿಕ ಧರ್ಮಪ್ರಾಂತ್ಯಗಳಲ್ಲಿನ ಕ್ರೈಸ್ತ ದೀಕ್ಷೆಯ ವಯಸ್ಕರ ಪ್ರಕ್ರಿಯೆ (OCIA) ಯಲ್ಲಿ ಭಾಗವಹಿಸಿದ 2,100ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ಈ ಅಧ್ಯಯನವು, ವಿಶೇಷವಾಗಿ ಯುವ ವಯಸ್ಕರಲ್ಲಿ ಕಥೋಲಿಕ ನಂಬಿಕೆಯ ಬಗ್ಗೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಸೂಚಿಸುತ್ತದೆ.
ಚಿಕಾಗೋ ಮಹಾಧರ್ಮಪ್ರಾಂತ್ಯವು ಇತರ 19 ಧರ್ಮಪ್ರಾಂತ್ಯಗಳ ಸಹಯೋಗದೊಂದಿಗೆ ಜೂನ್ 18ರಂದು ಈ ಅಧ್ಯಯನವನ್ನು ಪ್ರಕಟಿಸಿತು. 2026ರ ಫೆಬ್ರವರಿಯಿಂದ ಮೇ ತಿಂಗಳವರೆಗೆ OCIA ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 2,127 ಜನರ ಅನುಭವಗಳನ್ನು ಈ ಸಮೀಕ್ಷೆ ಪರಿಶೀಲಿಸಿದೆ. ಅಧ್ಯಯನದಲ್ಲಿ ಭಾಗವಹಿಸಿದ ಧರ್ಮಪ್ರಾಂತ್ಯಗಳು ವಯಸ್ಕರ ನಂಬಿಕೆ ರೂಪುಗೊಳಿಸುವ ಕಾರ್ಯಕ್ರಮಗಳಲ್ಲಿ ದಾಖಲೆಯ ಮಟ್ಟದ ಭಾಗವಹಿಸುವಿಕೆಯನ್ನು ವರದಿ ಮಾಡಿವೆ.
ಅಧ್ಯಯನದ ಪ್ರಕಾರ, ಧರ್ಮಸಭೆಯನ್ನು ಸೇರುವವರನ್ನು ಮುಖ್ಯವಾಗಿ ಎರಡು ಪ್ರಮುಖ ಅಂಶಗಳು ಪ್ರೇರೇಪಿಸುತ್ತಿವೆ. ಮೊದಲನೆಯದಾಗಿ, ಒಳಿತು, ಸತ್ಯ, ಆಂತರಿಕ ಶಾಂತಿ ಮತ್ತು ಜೀವನದ ಉದ್ದೇಶಕ್ಕಾಗಿ ನಡೆಸುವ ವೈಯಕ್ತಿಕ ಹುಡುಕಾಟ; ಎರಡನೆಯದಾಗಿ, ಕಥೋಲಿಕ ಧರ್ಮಸಭೆಯ ಆರಾಧನಾ ಪದ್ಧತಿ, ಬೋಧನೆಗಳು ಮತ್ತು ಎರಡು ಸಾವಿರ ವರ್ಷಗಳ ಪರಂಪರೆಯತ್ತ ಇರುವ ಆಕರ್ಷಣೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 28 ಪ್ರತಿಶತ ಮಂದಿ ತಮ್ಮ ಕಥೋಲಿಕ ನಂಬಿಕೆಯ ಪಯಣ ಆರಂಭಿಸುವ ಮೊದಲು ಯಾವುದೇ ಧಾರ್ಮಿಕ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. ಇತರರು ಪ್ರೊಟೆಸ್ಟೆಂಟ್ ಸಮುದಾಯಗಳಿಂದ ಬಂದವರಾಗಿದ್ದರೆ, ಕೆಲವರು ತಮ್ಮ ಸಂಸ್ಕಾರಾತ್ಮಕ ದೀಕ್ಷೆಯನ್ನು ಪೂರ್ಣಗೊಳಿಸುತ್ತಿದ್ದ ಕಥೋಲಿಕರು.
ಸದ್ಗುಣಗಳಲ್ಲಿ ಬೆಳೆಯುವ ಹಂಬಲ
ಸಂಶೋಧಕರ ಪ್ರಕಾರ, ಆಧ್ಯಾತ್ಮಿಕ ಪ್ರೇರಣೆಗಳು ರಾಜಕೀಯ ಅಥವಾ ಸಾಮಾಜಿಕ ಕಾರಣಗಳಿಗಿಂತ ಬಹಳ ಮೇಲುಗೈ ಸಾಧಿಸಿವೆ. ಭಾಗವಹಿಸಿದವರಲ್ಲಿ 77 ಪ್ರತಿಶತ ಮಂದಿ ಸದ್ಗುಣಗಳಲ್ಲಿ ಬೆಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 76 ಪ್ರತಿಶತ ಮಂದಿ ಸತ್ಯದ ಆಳವಾದ ಅರಿವನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ 72 ಪ್ರತಿಶತ ಮಂದಿ ಹೆಚ್ಚಿನ ಆಂತರಿಕ ಶಾಂತಿಯ ಅನ್ವೇಷಣೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಈ ಅಧ್ಯಯನವು ಡಿಜಿಟಲ್ ಶುಭಸಂದೇಶ ಸೇವೆಯ ಹೆಚ್ಚುತ್ತಿರುವ ಪಾತ್ರವನ್ನೂ ಎತ್ತಿ ತೋರಿಸಿದೆ. ಅನೇಕರು ಪ್ರಾರ್ಥನಾ ಅಪ್ಲಿಕೇಶನ್, ಪಾಡ್‌ಕಾಸ್ಟ್‌ಗಳು, ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮದ ವಿಷಯಗಳು ಕಥೋಲಿಕ ನಂಬಿಕೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಅನ್ವೇಷಿಸಲು ತಮಗೆ ಸಹಾಯ ಮಾಡಿವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಧರ್ಮಸಭೆಯನ್ನು ಸೇರುವ ಸಂದರ್ಭದಲ್ಲಿ ಕೆಲವು ಸವಾಲುಗಳೂ ಎದುರಾಗುತ್ತಿವೆ ಎಂದು ಅಧ್ಯಯನ ತಿಳಿಸಿದೆ. ವಿಶೇಷವಾಗಿ ಜನರೇಶನ್ Z ಯುವಜನರಲ್ಲಿ, ಆತ್ಮೀಕವಾಗಿ ಸಾಕಷ್ಟು ಸಿದ್ಧರಾಗಿಲ್ಲ ಎಂಬ ಭಾವನೆ, ಧರ್ಮಕ್ಷೇತ್ರದ ಸಮುದಾಯದಲ್ಲಿ ತಮ್ಮನ್ನು ಸ್ವೀಕರಿಸಲಾಗುತ್ತದೆಯೇ ಎಂಬ ಅನಿಶ್ಚಿತತೆ ಮತ್ತು ಆರಾಧನಾ ವಿಧಿಗಳಲ್ಲಿ ಭಾಗವಹಿಸುವುದರ ಕುರಿತ ಆತಂಕಗಳು ಪ್ರಮುಖ ಅಡೆತಡೆಗಳಾಗಿ ಗುರುತಿಸಲ್ಪಟ್ಟಿವೆ.
ವೈಯಕ್ತಿಕ ಸಹಯಾತ್ರೆಗೆ ಕರೆ
ಈ ವರದಿಯು ಧರ್ಮಕೇಂದ್ರಗಳು ಮತ್ತು ಧರ್ಮಕ್ಷೇತ್ರಗಳು ವೈಯಕ್ತಿಕ ಸಹಯಾತ್ರೆ, ನಂಬಿಕೆಯ ಅನ್ವೇಷಣೆಗೆ ಹೆಚ್ಚು ಸ್ಪಷ್ಟವಾದ ಮಾರ್ಗಗಳು ಹಾಗೂ ಧರ್ಮಸಭೆಯನ್ನು ಸೇರಿದ ನಂತರವೂ ನಿರಂತರ ನಂಬಿಕೆ ರೂಪುಗೊಳಿಸುವಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಿಫಾರಸು ಮಾಡುತ್ತದೆ.
ನಂಬಿಕೆಯ ಮೊದಲ ಹೆಜ್ಜೆಗಳನ್ನು ಇಡುತ್ತಿರುವವರೊಂದಿಗೆ ಜೊತೆಯಾಗಿ ನಡೆಯಬಲ್ಲ, ಅವರನ್ನು ಸ್ವಾಗತಿಸುವ ಮತ್ತು ಬೆಂಬಲಿಸುವ ಸಮುದಾಯಗಳನ್ನು ನಿರ್ಮಿಸುವ ಮಹತ್ವವನ್ನೂ ವರದಿಯು ಒತ್ತಿಹೇಳುತ್ತದೆ.
ಅಧ್ಯಯನದ ಲೇಖಕರ ಪ್ರಕಾರ, ಇಂದಿನ ದಿನಗಳಲ್ಲಿ ಅನೇಕರು ಕುಟುಂಬದ ಪರಂಪರೆ ಅಥವಾ ವಿವಾಹದ ಕಾರಣದಿಂದ ಮಾತ್ರವಲ್ಲದೆ, ಜೀವನದ ಅರ್ಥ, ಸತ್ಯ ಮತ್ತು ದೇವರೊಂದಿಗೆ ಆಳವಾದ ಸಂಬಂಧವನ್ನು ಹುಡುಕುವ ವೈಯಕ್ತಿಕ ಆಧ್ಯಾತ್ಮಿಕ ಪಯಣದ ಮೂಲಕ ಕಥೋಲಿಕ ಧರ್ಮಸಭೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದನ್ನು ಈ ಸಂಶೋಧನೆಯ ಫಲಿತಾಂಶಗಳು ಸೂಚಿಸುತ್ತವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).