ಹುಡುಕಿ

ಎಡಭಾಗದಲ್ಲಿ: ಬ್ರೆಜಿಲ್‌ನ ಮಾಟೊ ಗ್ರೊಸ್ಸೊ ರಾಜ್ಯದಲ್ಲಿ ಶನಿವಾರ ಧನ್ಯರೆಂದು ಘೋಷಿಸಲ್ಪಟ್ಟ ವಂ. ಗುರು ನಜರೇನೊ ಲಂಚ್ಚೋತ್ತಿ. ಎಡಭಾಗದಲ್ಲಿ: ಬ್ರೆಜಿಲ್‌ನ ಮಾಟೊ ಗ್ರೊಸ್ಸೊ ರಾಜ್ಯದಲ್ಲಿ ಶನಿವಾರ ಧನ್ಯರೆಂದು ಘೋಷಿಸಲ್ಪಟ್ಟ ವಂ. ಗುರು ನಜರೇನೊ ಲಂಚ್ಚೋತ್ತಿ. 

ಬ್ರೆಜಿಲ್‌ನಲ್ಲಿದ್ದ ಇಟಾಲಿಯನ್ ಮಿಷನರಿಯೋರ್ವರಿಗೆ ಜೂನ್ 13ರಂದು ‘ಧನ್ಯ’ ಪಟ್ಟ

ಅತ್ಯಂತ ದುರ್ಬಲರ ಪರವಾಗಿ ನಡೆಸಿದ ಸೇವೆಯ ಕಾರಣದಿಂದ ರಕ್ತಸಾಕ್ಷಿಯಾದ ಪವಿತ್ರ ಸಂಸ್ಕಾರ ಮತ್ತು ಮರಿಯಮ್ಮನವರ ಭಕ್ತರಾದ ವಂ. ಗುರು ನಜರೇನೊ ಲಂಚ್ಚೋತ್ತಿ ಅವರನ್ನು, ಜೂನ್ 13ರಂದು ಬ್ರೆಜಿಲ್‌ನಲ್ಲಿ ಧನ್ಯರೆಂದು ಘೋಷಿಸಲಾಯಿತು.

ಲೇಖಕರು: ವಿಕ್ಟರ್ ಹ್ಯೂಗೋ ಬರೋಸ್

ಬ್ರೆಜಿಲ್‌ಗೆ ತಮ್ಮ ಜೀವನವನ್ನು ಸಮರ್ಪಿಸಿದ್ದ ಇಟಾಲಿಯನ್ ಮಿಷನರಿ ವಂ. ಗುರು ನಜರೇನೊ ಲಂಚ್ಚೋತ್ತಿ ಅವರನ್ನು ಜೂನ್ 13ರಂದು ಧನ್ಯರೆಂದು ಘೋಷಿಸಲಾಯಿತು. 2001ರಲ್ಲಿ ರಕ್ತಸಾಕ್ಷಿಯಾಗುವವರೆಗೂ 30 ವರ್ಷಗಳ ಕಾಲ ಅವರುಸೇವೆ ಸಲ್ಲಿಸಿದ್ದ ಮಾಟೊ ಗ್ರೊಸ್ಸೊ ರಾಜ್ಯದ ಜೌರು ನಗರದಲ್ಲಿ ಈ ಸಮಾರಂಭ ನಡೆಯಲಿದೆ.

1940ರ ಮಾರ್ಚ್ 3ರಂದು ಇಟಲಿಯ ರೋಮ್‌ನಲ್ಲಿ ಜನಿಸಿದ ಲಾಂಚಿಯೊಟ್ಟಿ ಅವರು 1966ರಲ್ಲಿ ಯಾಜಕರಾಗಿ ದೀಕ್ಷೆ ಪಡೆದರು. 1971ರಲ್ಲಿ ಅವರು ಮಿಷನರಿಯಾಗಿ ಬ್ರೆಜಿಲ್‌ಗೆ ಆಗಮಿಸಿ ಜೌರುದಲ್ಲಿ ನೆಲೆಸಿದರು. ಅಲ್ಲಿ ಫಲಪ್ರದವಾದ ಪ್ರೇಷಿತ ಸೇವೆಯನ್ನು ನಡೆಸಿ, ತಮ್ಮನ್ನು ಪರಿಚಯಿಸಿಕೊಂಡ ಎಲ್ಲರ ಹೃದಯಗಳಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿದರು. ಅವರ ಜೀವನದ ಮಹತ್ವದ ಅಂಶಗಳನ್ನು ನೆನಪಿಸಿಕೊಳ್ಳುವವರಲ್ಲಿ ಧನ್ಯರ ಆತ್ಮೀಯ ಸ್ನೇಹಿತರಾದ ಒಸ್ವಾಲ್ಡೊ ಪಿವಾ ಕೂಡ ಒಬ್ಬರು.

“ಬಾಲ್ಯದಲ್ಲಿ ಅವರು ತುಂಬಾ ಚಂಚಲ ಸ್ವಭಾವದವರಾಗಿದ್ದರು. ಆದರೆ ಸೆಮಿನರಿಗೆ ಸೇರಿದ ನಂತರ ಮೌನ, ಪ್ರಾರ್ಥನೆ ಮತ್ತು ವಿಧೇಯತೆಯನ್ನು ಕಲಿತರು. ಅವರಿಗೆ ಮಾತೆ ಮರಿಯಮ್ಮನವರ ಮೇಲೂ ಪವಿತ್ರ ಪರಮ ಪ್ರಸಾದದಲ್ಲಿರುವ ಪ್ರಭುಯೇಸುವಿನ ಮೇಲೂ ಅಪಾರ ಭಕ್ತಿ ಇತ್ತು. ಯಾಜಕರಾಗಿ ದೀಕ್ಷೆ ಪಡೆದಾಗ ಅವರು ಮಾತೆ ಮರಿಯಮ್ಮನವರ ಬಳಿ ಎರಡು ವರಗಳನ್ನು ಬೇಡಿಕೊಂಡಿದ್ದರು: ಪರಿಶುದ್ಧತೆಯಲ್ಲಿ ಜೀವಿಸುವುದು ಮತ್ತು ಹಣದ ಮೇಲೆ ಆಸಕ್ತಿ ಹೊಂದದಿರುವುದು,” ಎಂದು ಪಿವಾ ಸಾಕ್ಷ್ಯ ನೀಡುತ್ತಾರೆ.

ವಂ. ಗುರು ನಜರೇನೊ ಅವರ ಅತ್ಯಂತ ಗಮನಾರ್ಹ ಗುಣಗಳಲ್ಲಿ ಒಂದು ದೈವಿಕ ಪರಿಪಾಲನೆಯ ಮೇಲಿನ ಅವರ ಅಚಲ ವಿಶ್ವಾಸವಾಗಿತ್ತು. ವಿದ್ಯುತ್ ಮತ್ತು ಮೂಲಭೂತ ಸಂವಹನ ಸೌಲಭ್ಯಗಳೇ ಇಲ್ಲದಿದ್ದ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರು ಎಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ.

“ಅವರು ಅನೇಕ ಸ್ಥಳಗಳನ್ನು ನಿರ್ಮಿಸಿದ್ದಾರೆ; ಕೆಲಸಗಳನ್ನು ನೆರವೇರಿಸುವ ವ್ಯಕ್ತಿಯಾಗಿದ್ದರು. ಆದರೆ ಹಣ ಇರಲಿಲ್ಲ. ಇಟ್ಟಿಗೆ, ಸಿಮೆಂಟ್ ಮತ್ತು ಇತರ ಸಾಮಗ್ರಿಗಳಿಗೆ ಏಳು ಸಾವಿರ ಐನೂರು ರಿಯಾಯ್ಸ್ ಪಾವತಿಸಬೇಕಾದ ದಿನ ಬಂದಾಗ, ಎಲ್ಲಿಂದೋ ಅವರ ಖಾತೆಗೆ ಹಣ ಜಮೆಯಾಗುತ್ತಿತ್ತು. ದೈವಿಕ ಪರಿಪಾಲನೆ ಅವರನ್ನು ಎಂದಿಗೂ ಒಂಟಿಯಾಗಿರಲು ಬಿಡಲಿಲ್ಲ,” ಎಂದು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಜನರಿಗೆ ಹತ್ತಿರವಾಗಿದ್ದ ಧನ್ಯ ಸ್ನೇಹಿತ

ಭವಿಷ್ಯದ ಧನ್ಯರೊಂದಿಗೆ ಜೊತೆಯಾಗಿ ಬದುಕಿದ ಅನುಭವದಿಂದ ಒಟಾವಿಯೊ ಮಾತನಾಡುತ್ತಾ, ವಾರಕ್ಕೊಮ್ಮೆ ನಡೆದ ದೂರವಾಣಿ ಸಂಭಾಷಣೆಗಳು ಮತ್ತು ಭೇಟಿಗಳು ನಮ್ಮ ಕಾಲದ ಒಬ್ಬ ಹುತಾತ್ಮರೊಂದಿಗೆ ಆಳವಾದ ಸ್ನೇಹವನ್ನು ಬೆಳೆಸಿದವು ಎಂದು ನೆನಪಿಸಿಕೊಳ್ಳುತ್ತಾರೆ. “ನಾವು ದೂರವಾಣಿಯಲ್ಲಿ ಬಹಳಷ್ಟು ಮಾತನಾಡುತ್ತಿದ್ದೆವು. ಅವರು ನನ್ನ ಮನೆಗೆ ಬರುತ್ತಿದ್ದರು, ಮತ್ತು ನಾನು ಜೌರುಗೆ ಹೋಗಿ ಅವರ ಮನೆಯಲ್ಲಿ ತಂಗುತ್ತಿದ್ದೆ. ಪ್ರತಿ ವರ್ಷದ ಡಿಸೆಂಬರ್ ತಿಂಗಳ ಪೂರ್ತಿ ಅವರು ನನ್ನ ಮಕ್ಕಳನ್ನು ಸ್ವಾಗತಿಸುತ್ತಿದ್ದರು. ಅವರು ನನಗೆ ಬಹಳ ಸಹಾಯ ಮಾಡಿದರು. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು ಕಠಿಣ ಸ್ವಭಾವದ ಇಟಾಲಿಯನ್ ವ್ಯಕ್ತಿಯಾಗಿದ್ದರು. ‘ನಾನು ಇವರ ಬಳಿ ಪಾಪನಿವೇದನೆಗೆ ಹೋದರೆ, ಅವರು ನನ್ನನ್ನು ಬೈಯಬಹುದು’ ಎಂದು ನಾನು ಯೋಚಿಸಿದ್ದೆ. ಆದರೆ ಪಾಪನಿವೇದನೆಯ ಸಮಯದಲ್ಲಿ ಅವರು ಪವಿತ್ರ ಪರಮ ಪ್ರಸಾದದಲ್ಲಿರುವ  ಯೇಸುವಿನಂತಾಗುತ್ತಿದ್ದರು. ಅದು ಸುಂದರವಾಗಿತ್ತು, ಅದ್ಭುತವಾಗಿತ್ತು. ಪಾಪನಿವೇದನೆ ಎಂದರೆ ದಾರಿತಪ್ಪಿದ ಮಗನು ತಂದೆಯ ಬಳಿಗೆ ಹಿಂದಿರುಗುವುದು’ ಎಂದು ಅವರು ಹೇಳುತ್ತಿದ್ದರು. ಆ ಮಾತು ನನ್ನ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು,” ಎಂದು ಅವರು ಭಾವುಕರಾಗಿ ಹೇಳುತ್ತಾರೆ.

ಯಾಜಕರ ಮರಿಯಮ್ಮನ ಚಳವಳಿ

ಈ ಇಬ್ಬರು ವ್ಯಕ್ತಿಗಳ ನಡುವಿನ ಸ್ನೇಹವು ಯಾಜಕರ ಮರಿಯಮ್ಮನ ಚಳವಳಿಯ ಮೂಲಕ ಬೆಳೆಯಿತು. ಈ ಚಳವಳಿಯಲ್ಲಿ ವಂ. ಗುರು ನಜರೇನೊ ಅವರು ಬ್ರೆಜಿಲ್‌ನ ರಾಷ್ಟ್ರೀಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಈ ಚಳವಳಿಯ ರಾಷ್ಟ್ರೀಯ ಸಾಮಾನ್ಯ ಪ್ರತಿನಿಧಿಯಾಗಿರುವ ಒಟಾವಿಯೊ, ನಜರೇನೊ ಜೀವನದ ಮೇಲೆ ಅದರ ಆಧ್ಯಾತ್ಮಿಕ ಪ್ರಭಾವವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. “ಈ ಚಳವಳಿಯ ಆಧ್ಯಾತ್ಮಿಕತೆಯು ಆಗಲೇ ಅವರ ಆತ್ಮದಲ್ಲಿ, ಹೃದಯದಲ್ಲಿ ಮತ್ತು ಜೀವನದಲ್ಲಿ ನೆಲೆಗೊಂಡಿತ್ತು. ಅವರು ಮರಿಯಮ್ಮನ ಭಕ್ತರೂ ಪವಿತ್ರ ಪರಮ ಪ್ರಸಾದದ ಭಕ್ತರೂ ಆಗಿದ್ದರು. ಪಾಪನಿವೇದನೆಗಳನ್ನು ಆಲಿಸುವುದನ್ನು ಪ್ರೀತಿಸುತ್ತಿದ್ದರು ಮತ್ತು ಕಠಿಣ ತಪಸ್ಸನ್ನು ಆಚರಿಸುತ್ತಿದ್ದರು. ನಮ್ಮ ಚಳವಳಿಯ ಸಣ್ಣ ಆಧ್ಯಾತ್ಮಿಕ, ಆತ್ಮೀಕ ಬಾಲ್ಯ, ಮರಿಯಮ್ಮನ ಹೃದಯಕ್ಕೆ ಸಮರ್ಪಣೆ ಮತ್ತು ದೇವರಲ್ಲಿ ಸಂಪೂರ್ಣ ವಿಶ್ವಾಸಪೂರ್ವಕ ಶರಣಾಗತಿ—ಇವೆಲ್ಲವೂ ಅವರ ಜೀವನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದ ಗುಣಗಳಾಗಿದ್ದವು,” ಎಂದು ಅವರು ವಿವರಿಸುತ್ತಾರೆ.

ರಕ್ತಸಾಕ್ಷಿಯಾಗುವವರೆಗೂ ನಂಬಿಕೆಗೆ ನಿಷ್ಠ

ದೇವರಲ್ಲಿ ಸಂಪೂರ್ಣ ಶರಣಾಗತಿಯ ಈ ಮನೋಭಾವವೇ ಅವರನ್ನು ಅತ್ಯಂತ ಬಡವರು ಮತ್ತು ನಿರ್ಲಕ್ಷಿಸಲ್ಪಟ್ಟವರ ಸೇವೆಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವಂತೆ ಮಾಡಿತು. ಅವರು ಸೇವೆ ಸಲ್ಲಿಸುತ್ತಿದ್ದ ಅವರ್ ಲೇಡಿ ಆಫ್ ದ ಪಿಲ್ಲರ್ ಧರ್ಮಕೇಂದ್ರದಲ್ಲಿ, ದುರ್ಬಲ ಪರಿಸ್ಥಿತಿಯಲ್ಲಿದ್ದ ಜನರಿಗೆ ವೈದ್ಯಕೀಯ ಆರೈಕೆ ಒದಗಿಸುವ ಒಂದು ದತ್ತಿ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲದೆ, ಕಾರ್ಮಿಕರು ಮತ್ತು ಅವರ ಕುಟುಂಬಗಳ ಪರವಾಗಿ ಕಾರ್ಯನಿರ್ವಹಿಸಿ, ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಯ ವಿರುದ್ಧ ಹೋರಾಡಿದರು.

ಅವರ ಈ ಧರ್ಮಕೇಂದ್ರದ ಸೇವೆಗೆ ಪ್ರತೀಕಾರವಾಗಿ, 2001ರ ಫೆಬ್ರವರಿ 11ರ ರಾತ್ರಿ ಇಬ್ಬರು ಮುಖವಾಡಧಾರಿಗಳು ಅವರ ಮನೆಗೆ ನುಗ್ಗಿದರು. ಅವರಲ್ಲಿ ಒಬ್ಬನು ಯಾಜಕರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದನು. ಆ ಗುಂಡು ಅವರ ನಾಲ್ಕನೇ ಕಶೇರುಖಂಡಕ್ಕೆ ತಗುಲಿತು. ತಮ್ಮ ಮೇಲೆ ದಾಳಿ ಮಾಡಿದವರನ್ನು ಕ್ಷಮಿಸಿದ ನಂತರ, ವಂ. ಗುರು ನಜರೇನೊ ಲಂಚ್ಚೋತ್ತಿ ಅವರು 61ನೇ ವಯಸ್ಸಿನಲ್ಲಿ ಫೆಬ್ರವರಿ 22, 2001ರಂದು ನಿಧನರಾದರು. ಇದು ಕನ್ಯಾ ಮರಿಯಮ್ಮನ ಮಾದರಿಯನ್ನು ಅನುಸರಿಸಿ ದೇವರಿಗೆ ಸಂಪೂರ್ಣವಾಗಿ ಸಮರ್ಪಿತವಾದ ಜೀವನದ ಒಂದು ಸ್ಪಷ್ಟ ಸಂಕೇತವಾಗಿತ್ತು.

“ವಂ. ಗುರು ನಜರೇನೊ ಅವರ ಪಾವಿತ್ರ್ಯದ ರಹಸ್ಯವೆಂದರೆ ಮಾತೆ ಮರಿಯಮ್ಮನವರು. ಅವರು ಯೇಸುವನ್ನು ಆರಾಧಿಸಲು ಮತ್ತು ಕಲ್ವಾರಿಯ ಮೇಲೆ ಕ್ರಿಸ್ತನ ಬಲಿದಾನವನ್ನು ತಮ್ಮ ಜೀವನದಲ್ಲಿ ಮರುಅನುಭವಿಸಲು ಅವರನ್ನು ಮುನ್ನಡೆಸಿದರು. ಅವರು ತಮ್ಮನ್ನು ಮಾತೆ ಮರಿಯಮ್ಮನವರಿಗೆ ಸಮರ್ಪಿಸಿಕೊಂಡರು; ಮರಿಯಮ್ಮನವರು ಅವರನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡು, ಪವಿತ್ರ ಪರಮ ಪ್ರಸಾದದಲ್ಲಿರುವ, ಅತೀಂದ್ರಿಯ ಮತ್ತು ಆರಾಧನಾಪರ ಮತ್ತೊಬ್ಬ ಯೇಸುವನ್ನಾಗಿ ರೂಪಿಸಿದರು. ನಂತರ ಅವರು ರಕ್ತಸಾಕ್ಷಿಯಾದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ಅವರು ತಮ್ಮ ಜೀವವನ್ನೇ ಅರ್ಪಿಸಿದರು. ಯೇಸು ತಮ್ಮ ಜೀವವನ್ನು ಅರ್ಪಿಸಿದಂತೆ, ಅವರೂ ತಮ್ಮ ಜೀವವನ್ನು ಅರ್ಪಿಸಿದರು,” ಎಂದು ಪಿವಾ ದೃಢಪಡಿಸುತ್ತಾರೆ.

2025ರ ಏಪ್ರಿಲ್ 14ರಂದು, “ಒಡಿಯುಮ್ ಫಿದೇಯಿ” (ನಂಬಿಕೆಯ ಮೇಲಿನ ದ್ವೇಷದ ಕಾರಣದಿಂದ) ಸಂಭವಿಸಿದ ರಕ್ತಸಾಕ್ಷಿಯೆಂದು ವಂ. ಗುರು ನಜರೇನೊ ಅವರ ಮರಣವನ್ನು ಧರ್ಮಸಭೆಯು ಅಧಿಕೃತವಾಗಿ ಮಾನ್ಯಗೊಳಿಸಿತು. ಇದು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಪದವಿಯ ಅವಧಿಯಲ್ಲಿ ಪ್ರಕಟವಾದ ಕೊನೆಯ ರಕ್ತಸಾಕ್ಷಿಯ ಆದೇಶವಾಗಿತ್ತು.

ಧನ್ಯರ ಘೋಷಣೆಯ ಸಮಾರಂಭವು ಜೂನ್ 13ರಂದು ಜೌರುದಲ್ಲಿರುವ ಅವರ್ ಲೇಡಿ ಆಫ್ ದ ಪಿಲ್ಲರ್ ಧರ್ಮಕೇಂದ್ರದಲ್ಲಿ ಬೆಳಿಗ್ಗೆ 10:00 ಗಂಟೆಗೆ ಆರಂಭವಾಯಿತು. ಪವಿತ್ರ ಬಲಿಪೂಜೆಯನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಪ್ರತಿನಿಧಿಯಾಗಿ ಕಾರ್ಡಿನಲ್ ಜೋವೊ ಬ್ರಾಜ್ ಡಿ ಅವಿಸ್ ನೆರವೇರಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

13 ಜೂನ್ 2026, 17:37