ನವ ಧರ್ಮೋಪದೇಶ ಮಾರ್ಗದ 60ನೇ ವಾರ್ಷಿಕೋತ್ಸವ: “ಶುಭಸಂದೇಶ ಪ್ರಸಾರವೇ ಧರ್ಮಸಭೆಯ ಕರ್ತವ್ಯ” ಎಂದ ಪೂಜ್ಯ ಜಗದ್ಗುರು
ಲೇಖಕರು: ದೆಬೋರ ಡೊನ್ನಿನಿ – ಮ್ಯಾಡ್ರಿಡ್, ಸ್ಪೇನ್
ದೇವರ ವಿಶ್ವಾಸಾರ್ಹ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತಾ, ಸಾವಿರಾರು ಭಕ್ತರು ಮೇ 30ರ ಸಂಜೆ ಮ್ಯಾಡ್ರಿಡ್‌ನ ಅಲ್ಮುಡೆನಾ ಪ್ರಧಾನ ದೇವಾಲಯದಲ್ಲಿ ನವ ಧರ್ಮೋಪದೇಶ ಮಾರ್ಗದ 60ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಂತೋಷದಿಂದ ಸೇರಿದ್ದರು.
ಮುಂಭಾಗದ ಆಸನಗಳಲ್ಲಿ ಕುಳಿತಿದ್ದ ಹಿರಿಯರ ಮುಖಗಳಲ್ಲಿ ಭಾವುಕತೆ ಮತ್ತು ಕೃತಜ್ಞತೆಯ ಆಳವಾದ ಭಾವನೆ ಸ್ಪಷ್ಟವಾಗಿ ಕಾಣುತ್ತಿತ್ತು. 1960ರ ದಶಕದ ಮಧ್ಯಭಾಗದಲ್ಲಿ ಕಿಕೊ ಅರ್ಗುಯೆಲ್ಲೊ ಮತ್ತು ಕಾರ್ಮೆನ್ ಹೆರ್ನಾಂಡೆಸ್ ಮೊದಲ ಬಾರಿಗೆ ಪಾಲೊಮೆರಾಸ್ ಅಲ್ತಾಸ್ ಎಂಬ ಗುಡಿಸಲು ಪ್ರದೇಶದಲ್ಲಿ ಭೇಟಿಯಾದಾಗ ಆರಂಭವಾದ ಈ ಧಾರ್ಮಿಕ ಅನುಭವದ ಮೊದಲ ದಿನಗಳಿಗೆ ಅವರಲ್ಲಿ ಅನೇಕರು ಸಾಕ್ಷಿಯಾಗಿದ್ದರು. ಅನೇಕ ಮಕ್ಕಳಿರುವ ಕುಟುಂಬಗಳೂ ಈ ಆಚರಣೆಯಲ್ಲಿ ಭಾಗವಹಿಸಿದ್ದವು. ಆ ಮಕ್ಕಳಲ್ಲಿ ಹಲವರು ನವ ಧರ್ಮೋಪದೇಶ ಮಾರ್ಗದ ಆರಂಭಿಕ ದಿನಗಳನ್ನು ಕಂಡವರ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳಾಗಿದ್ದಾರೆ.
ಈ ಚಳುವಳಿಯು ಪೂರ್ವಯೋಜಿತ ಕಾರ್ಯಕ್ರಮವಾಗಿ ರೂಪುಗೊಂಡದ್ದಲ್ಲ; ಅದು ಕ್ರಮೇಣ ಮತ್ತು ಸಹಜವಾಗಿ ಬೆಳೆಯಿತು. ಇಂದು ಇದು ಐದು ಖಂಡಗಳ 138 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿದ್ದು, 20,350ಕ್ಕೂ ಹೆಚ್ಚು ಸಮುದಾಯಗಳನ್ನು ಒಳಗೊಂಡಿದೆ. ಇದಕ್ಕೆ ಸಾಮಾನ್ಯ ವಿಶ್ವಾಸಿಗಳು, ದಾಂಪತ್ಯ ದಂಪತಿಗಳು ಸೇರಿದಂತೆ ಅಸಂಖ್ಯಾತ ಮಿಷನರಿಗಳ ಸೇವೆಯೇ ಕಾರಣವಾಗಿದೆ.
ಈ ಪವಿತ್ರ ಬಲಿಪೂಜೆಯಲ್ಲಿ ಮ್ಯಾಡ್ರಿಡ್‌ನ ನಿವೃತ್ತ ಮಹಾಧರ್ಮಾಧ್ಯಕ್ಷರಾ ದಕಾರ್ಡಿನಲ್ ಆಂಟೋನಿಯೊ ಮರಿಯಾ ರೂಕೊ, ಹಲವಾರು ಧರ್ಮಾಧ್ಯಕ್ಷರು ಮತ್ತು ನೂರಕ್ಕೂ ಹೆಚ್ಚು ಯಾಜಕರು ಸಹಯಾಜಕರಾಗಿ ಭಾಗವಹಿಸಿದ್ದರು.
ಪೂಜ್ಯ ಜಗದ್ಗುರು: ಶುಭಸಂದೇಶ ಪ್ರಸಾರದ ಕರೆಯನ್ನು ಅಪ್ಪಿಕೊಳ್ಳಿ
ನವ ಧರ್ಮೋಪದೇಶ ಮಾರ್ಗದ ಶುಭಸಂದೇಶ ಪ್ರಸಾರದ ಬದ್ಧತೆಯನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಸಂದೇಶವು ವಿಶೇಷವಾಗಿ ಒತ್ತಿಹೇಳಿತು. ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರ ಸಹಿಯೊಂದಿಗೆ ಕಳುಹಿಸಲಾದ ಈ ಸಂದೇಶವನ್ನು ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ವಾಚಿಸಲಾಯಿತು.
“ಧರ್ಮಸಭೆಯ ಸಮಗ್ರ ಶುಭಸಂದೇಶ ಪ್ರಸಾರದ ಕಾರ್ಯವು ಇಡೀ ಧರ್ಮಸಭೆಯ ಮೂಲಭೂತ ಕರ್ತವ್ಯವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಂತ ಮುಖ್ಯ,” ಎಂದು ಸಂದೇಶದಲ್ಲಿ ತಿಳಿಸಲಾಗಿದೆ. “ಸಂತೋಷ ಮತ್ತು ವಿನಯದಿಂದ, ತನ್ನ ಎಲ್ಲ ಸದಸ್ಯರ ಐಕ್ಯತೆಯನ್ನು ಅರಸುತ್ತಾ ಹಾಗೂ ಪವಿತ್ರಾತ್ಮರ ಕಾರ್ಯಕ್ಕೆ ವಿಧೇಯಳಾಗಿರುವ ಧರ್ಮಸಭೆಯು, ರಕ್ಷಣೆಯ ವರವನ್ನು ಪ್ರತಿಯೊಬ್ಬರ ಬಳಿಗೂ ಕೊಂಡೊಯ್ಯಲು ಕರೆಯಲ್ಪಟ್ಟಿದ್ದಾಳೆ.”
“ಈ ದೃಢ ನಂಬಿಕೆಯು,ದೇವರ ಪ್ರೀತಿಯ ಮಕ್ಕಳ ಹಿತಕ್ಕಾಗಿ ನವೀಕೃತ ಸುವಾರ್ತಾ ಪ್ರಸಾರದ ಉತ್ಸಾಹವನ್ನು ಪ್ರೇರೇಪಿಸಲಿ.”
ಕಿಕೊ: ನವ ಧರ್ಮೋಪದೇಶ ಮಾರ್ಗದ ಎರಡನೇ ವ್ಯಾಟಿಕನ್ ಮಹಾಸಭೆಯ ಫಲ
ನವ ಧರ್ಮೋಪದೇಶ ಮಾರ್ಗದ ಆರಂಭದ ಕಥೆಯು ಅತ್ಯಂತ ಗಮನಾರ್ಹವಾಗಿದೆ. ಪವಿತ್ರ ಬಲಿಪೂಜೆಯ ಆರಂಭದಲ್ಲಿ ನೀಡಿದ ಪರಿಚಯ ಭಾಷಣದಲ್ಲಿ, ಕಾರ್ಮೆನ್ ಹೆರ್ನಾಂಡೆಸ್ ಅವರೊಂದಿಗೆ ಸೇರಿ ಈ ಚಳುವಳಿಯನ್ನು ಸ್ಥಾಪಿಸಿದ ಕಿಕೊ ಅರ್ಗುಯೆಲ್ಲೊ, 1964ರ ನವೆಂಬರ್‌ನಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಚಿತ್ರಕಲೆಯ ವೃತ್ತಿಯನ್ನು ತೊರೆದು, ಸಂತ ಚಾರ್ಲ್ಸ್ ಡಿ ಫೂಕೋ ಅವರ ಮಾದರಿಯಿಂದ ಪ್ರೇರಿತರಾಗಿ ಮ್ಯಾಡ್ರಿಡ್‌ನ ಈ ಬಡ ಪ್ರದೇಶದಲ್ಲಿ ವಾಸಿಸಲು ಬಂದ ಸಂಗತಿಯನ್ನು ಸ್ಮರಿಸಿದರು.
ಅವರು ಪ್ರಾರ್ಥನೆ ಮಾಡುತ್ತಾ, ಗಿಟಾರ್ ನುಡಿಸುತ್ತಾ ಮತ್ತು ಪವಿತ್ರ ಬೈಬಲ್ ಓದುತ್ತಿದ್ದಾಗ, ಜಿಪ್ಸಿಗಳು ಹಾಗೂ ಸಮಾಜದ ಅಂಚಿನಲ್ಲಿದ್ದ ಇತರ ಜನರು ಕ್ರಮೇಣ ಅವರ ಸುತ್ತ ಸೇರಲಾರಂಭಿಸಿದರು ಮತ್ತು ಕೆರಿಗ್ಮಾ ಸಂದೇಶವನ್ನು ಆಲಿಸಲಾರಂಭಿಸಿದರು. 1965ರ ಆಗಸ್ಟ್ ತಿಂಗಳಲ್ಲಿ, ಅಲ್ಲಿದ್ದ ಗುಡಿಸಲುಗಳನ್ನು ತೆರವುಗೊಳಿಸಲು ನಾಗರಿಕ ರಕ್ಷಣಾ ಪಡೆ (Civil Guard) ಬಂದಾಗ, ಕಿಕೊ ಅವರು ಆಗಿನ ಮ್ಯಾಡ್ರಿಡ್ ಮಹಾಧರ್ಮಾಧ್ಯಕ್ಷರಾದ ಮಾನ್ಯ ಕ್ಯಾಸಿಮಿರೊ ಮೊರ್ಸಿಲ್ಲೊ ಅವರಿಗೆ ದೂರವಾಣಿ ಕರೆ ಮಾಡಲು ಯಶಸ್ವಿಯಾದರು. ಮಹಾಧರ್ಮಾಧ್ಯಕ್ಷರು ಕೂಡಲೇ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯವನ್ನು ನಿಲ್ಲಿಸಿದರು. ಪ್ರಾರ್ಥನೆಗಾಗಿ ಒಂದಾಗಿ ಸೇರಿದ್ದ ಆ ಬಡ ಜನರ ಸಮುದಾಯವನ್ನು ಕಂಡು ಅವರು ಆಳವಾಗಿ ಸ್ಪರ್ಶಿತರಾದರು. ಮಹಾಧರ್ಮಾಧ್ಯಕ್ಷ ಮೊರ್ಸಿಲ್ಲೊ ತೋರಿದ ಪ್ರೀತಿ ಮತ್ತು ಕಾಳಜಿಯನ್ನು ಕಂಡ ಕಾರ್ಮೆನ್, ಸಹಜವಾಗಿ ರೂಪುಗೊಂಡಿದ್ದ ಈ ಸಮುದಾಯವು ನಿಜವಾಗಿಯೂ ದೇವರ ಕಾರ್ಯವಾಗಿದೆ ಎಂದು ನಂಬಿದರು ಮತ್ತು ಕಿಕೊ ಅವರ ಧ್ಯೇಯದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು.
“ಮಾನ್ಯ ಕ್ಯಾಸಿಮಿರೊ ಅವರು ನಮ್ಮನ್ನು ಧರ್ಮಕೇಂದ್ರಗಳಿಗೆ ಹೋಗುವಂತೆ ಆಹ್ವಾನಿಸಿದರು. ನಾವು ಎಂದಿಗೂ ಅದರ ಬಗ್ಗೆ ಯೋಚಿಸಿರಲಿಲ್ಲ,” ಎಂದು ಕಿಕೊ ಸ್ಮರಿಸಿದರು. “ಆ ವಿಧೇಯತೆಯ ಕ್ರಿಯೆಯ ಮೂಲಕ ಈ ಕ್ರೈಸ್ತೀಯ ದೀಕ್ಷೆಯ ಪಯಣವು ಒಂದು ಸಣ್ಣ ಬೀಜದಂತೆ ಆರಂಭವಾಯಿತು. ಅದು ಅಸಂಖ್ಯಾತ ಜನರು ಮತ್ತು ಕುಟುಂಬಗಳ ಜೀವನದಲ್ಲಿ ಆಶೀರ್ವಾದವಾಗಿ ಪರಿಣಮಿಸಿದೆ ಮತ್ತು ಇಂದು 138 ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ.” ಮ್ಯಾಡ್ರಿಡ್ ಮತ್ತು ಇತರ ಪ್ರದೇಶಗಳ ಧರ್ಮಕೇಂದ್ರಗಳಲ್ಲಿ ಮೊದಲ ಧರ್ಮಬೋಧನೆಗಳು 1966ರಲ್ಲಿ ಆರಂಭವಾದವು.
“ಆದ್ದರಿಂದಲೇ ಈ ಆಚರಣೆಯಲ್ಲಿ ಕಾರ್ಡಿನಲ್ ಕೋಬೊ ಅವರ ಉಪಸ್ಥಿತಿಯು ಬಹಳ ಮಹತ್ವದ್ದಾಗಿದೆ,” ಎಂದು ಕಿಕೊ ವಿವರಿಸಿದರು. “ನವ ಧರ್ಮೋಪದೇಶ ಮಾರ್ಗದಲ್ಲಿ ನಾವು ಪೂಜ್ಯ ಜಗದ್ಗುರು ಮತ್ತು ಧರ್ಮಾಧ್ಯಕ್ಷರಿಲ್ಲದೆ ಏನನ್ನೂ ಮಾಡುವುದಿಲ್ಲ. ಈ ಚಳುವಳಿಯು ಇಷ್ಟು ಅದ್ಭುತ ರೀತಿಯಲ್ಲಿ ಹರಡಿರುವುದು, ಸಂತ ಆರನೇ ಪೌಲರಿಂದ ಆರಂಭಿಸಿ ಎಲ್ಲಾ ಪೂಜ್ಯ ಜಗದ್ಗುರುಗಳ ಬೆಂಬಲದಿಂದಲೇ ಸಾಧ್ಯವಾಗಿದೆ. ಅವರು ಇದನ್ನು ಧರ್ಮಸಭೆಯ ಒಳಿತಿಗಾಗಿ ಪವಿತ್ರಾತ್ಮರ ವರವೆಂದು ಗುರುತಿಸಿದ್ದಾರೆ.”
ಕ್ರೈಸ್ತೀಯ ದೀಕ್ಷೆ, ಸಮುದಾಯ ಮತ್ತು ಐಕ್ಯತೆ
ನವ ಧರ್ಮೋಪದೇಶ ಮಾರ್ಗ “ಎರಡನೇ ವ್ಯಾಟಿಕನ್ ಮಹಾಸಭೆಯ ಫಲಗಳಲ್ಲಿ ಒಂದಾಗಿ ಪವಿತ್ರಾತ್ಮರಿಂದ ಉದ್ಭವಿಸಲ್ಪಟ್ಟ ಕ್ರೈಸ್ತೀಯ ದೀಕ್ಷೆಯ ಪಯಣವಾಗಿದೆ” ಎಂದು ಕಿಕೊ ಹೇಳಿದರು. ಈ ಸಂದರ್ಭದಲ್ಲಿ ಅವರು ಕಳೆದ ಗುರುವಾರ ಇಟಲಿಯ ಧರ್ಮಾಧ್ಯಕ್ಷರ ಸಮ್ಮೇಳನದ 82ನೇ ಮಹಾಸಭೆಯನ್ನು ಉದ್ದೇಶಿಸಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ನೀಡಿದ ಸಂದೇಶವನ್ನು ಸ್ಮರಿಸಿದರು.
“ಕ್ರೈಸ್ತೀಯ ದೀಕ್ಷೆಯ ಕಡೆಗೆ ನವೀಕೃತ ಗಮನ” ಎಂಬ ವಿಷಯವನ್ನು ಉಲ್ಲೇಖಿಸಿದ ಪೂಜ್ಯ ಜಗದ್ಗುರುಗಳು, “ಇದನ್ನು ಕೇವಲ ಸಂಸ್ಕಾರಗಳಿಗಾಗಿ ನೀಡುವ ಸಿದ್ಧತೆಯೆಂದು ಅರ್ಥಮಾಡಿಕೊಳ್ಳಬಾರದು. ಬದಲಾಗಿ, ಇದು ಸಮುದಾಯವು ವಿಶ್ವಾಸಕ್ಕೆ ಜನ್ಮ ನೀಡುವ ಮತ್ತು ಜನರನ್ನು ಪಾಸ್ಕಾ ಜೀವನಕ್ಕೆ, ಪ್ರಭುವಿನೊಂದಿಗಿನ ಸಹಭಾಗಿತ್ವಕ್ಕೆ ಹಾಗೂ ಧರ್ಮಸಭೆಯ ಸಹೋದರತ್ವಕ್ಕೆ ಪರಿಚಯಿಸುವ ‘ಗರ್ಭ’ವಾಗಿದೆ” ಎಂದು ತಿಳಿಸಿದ್ದರು.
ಪರಮ ಪವಿತ್ರ ತ್ರಿತ್ವದ ಮಹಾಪರ್ವವನ್ನು ಉಲ್ಲೇಖಿಸಿದ ಕಿಕೊ, ನಜರೇತಿನ ಪವಿತ್ರ ಕುಟುಂಬವು ಆ ಮಹಾರಹಸ್ಯದ ಪ್ರತಿರೂಪವಾಗಿದೆ ಎಂದು ಹೇಳಿದರು. 1959ರಲ್ಲಿ ತಮಗೆ ಕನ್ಯಾ ಮರಿಯಮ್ಮನಿಂದ ಒಂದು ಪ್ರೇರಣೆ ದೊರಕಿತು: “ನಜರೇತಿನ ಪವಿತ್ರ ಕುಟುಂಬದಂತಿರುವ ಕ್ರೈಸ್ತ ಸಮುದಾಯಗಳನ್ನು ನಿರ್ಮಿಸಿರಿ — ವಿನಯ, ಸರಳತೆ ಮತ್ತು ಸ್ತುತಿಯ ಜೀವನವನ್ನು ನಡೆಸುವ ಸಮುದಾಯಗಳನ್ನು. ಅಲ್ಲಿ ಮತ್ತೊಬ್ಬ ವ್ಯಕ್ತಿಯೇ ಪ್ರಭು ಕ್ರಿಸ್ತರಾಗಿರುತ್ತಾರೆ.”
“ಇಂದು ಪ್ರಭು ನಮ್ಮನ್ನು ಕರೆಯುತ್ತಿರುವ ಮಹಾನ್ ರಹಸ್ಯವೇ ಇದು,” ಎಂದು ಕಿಕೊ ವಿವರಿಸಿದರು. “ಪ್ರೀತಿಸುವುದು, ಪವಿತ್ರಾತ್ಮರಲ್ಲಿ ಪರಿಪೂರ್ಣ ಐಕ್ಯತೆಯನ್ನು ಅನುಭವಿಸುವುದು ಮತ್ತು ಸಹಭಾಗಿತ್ವವನ್ನು ಕಾಪಾಡಿಕೊಳ್ಳುವುದು. ಏಕೆಂದರೆ ಮಾನವ ಆತ್ಮವನ್ನು ನಿಜವಾಗಿಯೂ ತೃಪ್ತಿಪಡಿಸಬಲ್ಲ ಏಕೈಕ ಸಂಗತಿಯೆಂದರೆ ಪರಮ ಪವಿತ್ರ ತ್ರಿತ್ವದೊಂದಿಗಿನ ಸಂಪೂರ್ಣ ಐಕ್ಯತೆ.”
ವಿಶ್ವಾಸಾರ್ಹ ಮತ್ತು ಕರುಣಾಮಯ ದೇವರು
ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ವಾಚನಗಳ ಪರಿಚಯವನ್ನು ನೀಡಿದ ವಂ. ಗುರು ಮಾರಿಯೋ ಪೆಜ್ಜಿ ಮತ್ತು ಅಸೆನ್ಸಿಯೊನ್ ರೊಮೆರೊ — ಕಿಕೊ ಅವರೊಂದಿಗೆ ನವ ಧರ್ಮೋಪದೇಶ ಮಾರ್ಗದ ಅಂತರರಾಷ್ಟ್ರೀಯ ತಂಡವನ್ನು ರೂಪಿಸಿರುವವರು — ಸಹಭಾಗಿತ್ವದ ಮಹತ್ವವನ್ನು ಮತ್ತು ದೇವರ ವಾಕ್ಯವು ಜನರ ಜೀವನದಲ್ಲಿ ಮಾಂಸಧಾರಿಯಾಗಿ ಜೀವಂತವಾಗುವ ಅನುಭವವನ್ನು ವಿಶೇಷವಾಗಿ ಒತ್ತಿಹೇಳಿದರು.
“ನಾವು ವಿಶ್ವಾಸಾರ್ಹ ಮತ್ತು ಕರುಣಾಮಯ ದೇವರನ್ನು ಅರಿತುಕೊಂಡಿದ್ದೇವೆ,” ಎಂದು ರೊಮೆರೊ ಹೇಳಿದರು. ಆಚರಣೆಯ ಅಂತ್ಯದಲ್ಲಿ, ಅವರು ಕಾರ್ಡಿನಲ್ ಕೋಬೊ ಕಾನೊ ಅವರಿಗೆ ಕಿಕೊ ಅವರು ರಚಿಸಿದ ಪರಮ ಪವಿತ್ರ ತ್ರಿತ್ವದ ಪವಿತ್ರ ಚಿತ್ರ (ಐಕಾನ್)ದ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
ಕಾರ್ಡಿನಲ್ ಕೋಬೊ ಕಾನೊ: ಧರ್ಮಸಭೆ ಎಂದರೆ ಸಹಭಾಗಿತ್ವ
“ಮ್ಯಾಡ್ರಿಡ್ ಧರ್ಮಪ್ರಾಂತ್ಯ ಮತ್ತು ಅದರ ಧರ್ಮಾಧ್ಯಕ್ಷರು, ಈ ನಗರದ ಅನೇಕ ಭಾಗಗಳಲ್ಲಿ ಅರವತ್ತು ವರ್ಷಗಳಿಂದ ಸುವಾರ್ತಾ ಪ್ರಸಾರದ ಕಾರ್ಯವನ್ನು ನಡೆಸಿರುವ ನವ ಧರ್ಮೋಪದೇಶ ಮಾರ್ಗಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾರೆ,” ಎಂದು ಕಾರ್ಡಿನಲ್ ಕೋಬೊ ಕಾನೊ ತಮ್ಮ ಪ್ರವಚನದಲ್ಲಿ ಹೇಳಿದರು. ಧರ್ಮಪ್ರಾಂತ್ಯದ ಜೀವನದೊಂದಿಗೆ ಸಾಮರಸ್ಯದಲ್ಲಿದ್ದು, ಧರ್ಮಸಭೆಯ ಸಹಭಾಗಿತ್ವವನ್ನು ಕಾಪಾಡಿಕೊಂಡು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುತ್ತಾ ತಮ್ಮ ಶುಭಸಂದೇಶ ಪ್ರಸಾರದ ಧ್ಯೇಯವನ್ನು ಮುಂದುವರಿಸಬೇಕೆಂದು ಅವರು ಸಭಿಕರನ್ನು ಉತ್ತೇಜಿಸಿದರು.
ಪರಮ ಪವಿತ್ರ ತ್ರಿತ್ವದ ಮಹಾರಹಸ್ಯವನ್ನು ಕುರಿತು ಚಿಂತಿಸುತ್ತಾ, ಧರ್ಮಸಭೆಯು “ಕೇವಲ ಒಂದು ಸಂಘಟನೆ ಅಥವಾ ಜನರ ಸಮೂಹವಲ್ಲ ಬದಲಾಗಿ, ಅದು “ಸಹಭಾಗಿತ್ವ” ಎಂದು ಹೇಳಿದರು.
“ನಿಮ್ಮ ನಡುವೆ ಪವಿತ್ರತೆಯ ಅನೇಕ ಚಿಹ್ನೆಗಳು ಕಂಡುಬಂದಿವೆ, ಕಾರ್ಮೆನ್ ಅವರ ಪವಿತ್ರ ಪದವೀಕರಣದ ಪ್ರಕ್ರಿಯೆಯನ್ನು ನಮ್ಮ ಧರ್ಮಪ್ರಾಂತ್ಯದಲ್ಲಿ ಆರಂಭಿಸಿರುವುದಕ್ಕೆ ನಾವು ಸಂತೋಷಪಡುತ್ತೇವೆ.”
ಈ ಪ್ರಕ್ರಿಯೆಯ ಒಂದು ಪ್ರಮುಖ ಹಂತವು ಜೂನ್ 2, ಮಂಗಳವಾರ ನಡೆಯಲಿದೆ. ಆ ದಿನ ಮ್ಯಾಡ್ರಿಡ್‌ನ ರೆಡೆಂಪ್ಟೋರಿಸ್ ಮಾತೆರ್ ಸೆಮಿನರಿಯಲ್ಲಿ, ಕಾರ್ಡಿನಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಮೆನ್ ಅವರ ಧನ್ಯ ಪದವಿ ಪ್ರಕ್ರಿಯೆಯ ಧರ್ಮಪ್ರಾಂತ್ಯ ಹಂತದ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಡಿನಲ್ ಫಾರೆಲ್: ಕ್ರೈಸ್ತೀಯ ದೀಕ್ಷೆಯ ವೃಕ್ಷದಿಂದ ಅನೇಕ ಫಲಗಳು
ಸಾಮಾನ್ಯ ವಿಶ್ವಾಸಿಗಳು, ಕುಟುಂಬ ಮತ್ತು ಜೀವದ ಕುರಿತ ವಿಭಾಗದ (Dicastery for the Laity, Family and Life) ಪ್ರಾಧ್ಯಕ್ಷರಾದ ಕಾರ್ಡಿನಲ್ ಕೆವಿನ್ ಫಾರೆಲ್ ಅವರೂ ಶುಭಾಶಯ ಸಂದೇಶವನ್ನು ಕಳುಹಿಸಿದರು.
ಸ್ಪೇನ್ ದೇಶವು ಸಂತರು, ರಕ್ತಸಾಕ್ಷಿಗಳು ಮತ್ತು ಶುಭಸಂದೇಶ ಪ್ರಸಾರದ ಅನೇಕ ಉಪಕ್ರಮಗಳ ಮೂಲಕ ಧರ್ಮಸಭೆಗೆ ಆಧ್ಯಾತ್ಮಿಕ ನವೀಕರಣದ ಪ್ರಕಾಶಮಾನ ಉದಾಹರಣೆಗಳನ್ನು ನೀಡಿದೆ ಎಂದು ಅವರು ಸ್ಮರಿಸಿದರು. “ಈ ಫಲಗಳಲ್ಲಿ, ನವ ಧರ್ಮೋಪದೇಶ ಮಾರ್ಗ ನಿಸ್ಸಂದೇಹವಾಗಿ ಒಂದು ವಿಶೇಷ ಸ್ಥಾನಕ್ಕೆ ಅರ್ಹವಾಗಿದೆ. ಇದು ಅದರ ಇಬ್ಬರು ಪ್ರವರ್ತಕರಾದ ಕಿಕೊ ಅರ್ಗುಯೆಲ್ಲೊ ಮತ್ತು ಕಾರ್ಮೆನ್ ಹೆರ್ನಾಂಡೆಸ್ ಅವರ ಹಾಗೂ ಮ್ಯಾಡ್ರಿಡ್‌ನ ಅತ್ಯಂತ ಬಡ ಪ್ರದೇಶಗಳ ಜನರ ನಡುವಿನ ಫಲಪ್ರದ ಭೇಟಿಯಿಂದ ಹುಟ್ಟಿಕೊಂಡಿತು.” ಅರವತ್ತು ವರ್ಷಗಳ ಹಿಂದೆ ನಡೆದ ಆ ವಿನಮ್ರ ಆರಂಭಗಳಿಂದ “ಅಸಂಖ್ಯಾತ ಜನರು ವಿಶ್ವಾಸಕ್ಕೆ ಮತ್ತು ಧರ್ಮಸಭೆಗೆ ಮರಳಿರುವುದು, ಅಸಂಖ್ಯಾತ ಮತಾಂತರಗಳು, ಕ್ರೈಸ್ತೀಯ ಕುಟುಂಬಗಳ ಉದಯ, ಯಾಜಕತ್ವ ಮತ್ತು ಧಾರ್ಮಿಕ ಜೀವನಕ್ಕೆ ಬಂದಿರುವ ಕರೆಗಳು ಹಾಗೂ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಶುಭಸಂದೇಶ ಪ್ರಸಾರದ ಕಾರ್ಯಗಳು ಮುಂತಾದ ಅನೇಕ ಫಲಗಳು ಹೊರಹೊಮ್ಮಿವೆ.
ಕಾರ್ಡಿನಲ್ ಫಾರೆಲ್ ಮುಂದುವರೆಸುತ್ತಾ, “ಪ್ರಾಚೀನ ಧರ್ಮಸಭೆಯ ಧರ್ಮೋಪದೇಶ ಪರಂಪರೆಯ ಮೂಲಕ ಮರುಶೋಧಿಸಲ್ಪಟ್ಟು ಆಚರಣೆಗೆ ತರಲ್ಪಟ್ಟ ಕ್ರೈಸ್ತೀಯ ದೀಕ್ಷೆಯ ‘ವೃಕ್ಷ’ದಿಂದ ಅನೇಕ ಇತರ ‘ಶಾಖೆಗಳು’ ಬೆಳೆದುಬಂದಿವೆ ಮತ್ತು ಧರ್ಮಸಭೆಗೆ ಸಮೃದ್ಧ ಫಲಗಳನ್ನು ನೀಡುತ್ತಿವೆ. ಅವುಗಳಲ್ಲಿ ಸಂಚಾರಿ ಧರ್ಮಬೋಧಕರು, ಮಿಷನರಿ ಧರ್ಮಪ್ರಾಂತ್ಯ ಸೆಮಿನರಿಗಳು, ಮಿಷನರಿ ಕುಟುಂಬಗಳು, ಶುಭಸಂದೇಶ ಪ್ರಸಾರದ ಪ್ರದೇಶಗಳಲ್ಲಿ ಸ್ಥಾಪಿತವಾದ ಹೊಸ ಧರ್ಮಕೇಂದ್ರಗಳು, Missio ad Gentes ಎಂಬ ಶುಭಸಂದೇಶ ಪ್ರಸಾರದ ಕಾರ್ಯ, ಹಾಗೂ ಮಾಸಿಕ Lectio Divina ಮತ್ತು ವಾರ್ಷಿಕ ಬೇಸಿಗೆ ಯಾತ್ರೆಗಳ ಮೂಲಕ ಹದಿಹರೆಯದವರು ಮತ್ತು ಯುವಜನರಿಗೆ ನೀಡಲಾಗುವ ರೂಪುಗೊಳಿಸುವಿಕೆ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳು ಸೇರಿವೆ.”
“ಇವೆಲ್ಲವೂ ವರಗಳಾಗಿವೆ,ಇವುಗಳನ್ನು ಕಾಪಾಡಿಕೊಳ್ಳಲು ಮತ್ತು ಇಡೀ ಧರ್ಮಸಭೆಯ ಒಳಿತಿಗಾಗಿ ಮತ್ತಷ್ಟು ಬೆಳೆಯುವಂತೆ ಸಹಕರಿಸಲು ನಿಮಗೆ ಕರೆ ನೀಡಲಾಗಿದೆ ” ಎಂದು ಅವರು ಸಮಾರೋಪದಲ್ಲಿ ಹೇಳಿದರು.
ಜೀವಂತ ಇತಿಹಾಸದ ಸಂಭ್ರಮಾಚರಣೆ
ಈ ಆಚರಣೆಯು ಇಡೀ ನವ ಧರ್ಮೋಪದೇಶ ಮಾರ್ಗಕ್ಕೆ ಸಂತೋಷದ ಸಂದರ್ಭವಾಗಿತ್ತು. ಏಕೆಂದರೆ ಮ್ಯಾಡ್ರಿಡ್‌ನ ಗುಡಿಸಲು ಪ್ರದೇಶಗಳ ಅನುಭವವೇ ಈ ದೀಕ್ಷಾಸ್ನಾನದ ಮರುಶೋಧನೆಯ ಪಯಣವು ರೂಪುಗೊಂಡ ತೊಟ್ಟಿಲಾಗಿತ್ತು. ದೇವರ ವಾಕ್ಯ, ಪೂಜಾವಿಧಿ ಮತ್ತು ಸಮುದಾಯ ಎಂಬ ಮೂರು ಸ್ತಂಭಗಳ ಮೇಲೆ ನಿರ್ಮಿತವಾದ ಈ ಪಯಣವು ಸಣ್ಣ ಸಮುದಾಯಗಳಲ್ಲಿ ಜೀವಿಸಲ್ಪಡುತ್ತಿದ್ದು, ಇಂದು ವಿಶ್ವದ ಸುಮಾರು 1,400 ಧರ್ಮಪ್ರಾಂತ್ಯಗಳಲ್ಲಿರುವ 6,250ಕ್ಕೂ ಹೆಚ್ಚು ಧರ್ಮಕೇಂದ್ರಗಳಲ್ಲಿ ಅಸ್ತಿತ್ವದಲ್ಲಿದೆ.
ಈ ಧಾರ್ಮಿಕ ವಾಸ್ತವತೆ ಮತ್ತು ಮ್ಯಾಡ್ರಿಡ್ ಧರ್ಮಸಭೆಯ ನಡುವಿನ ಆಳವಾದ ಸಂಬಂಧಕ್ಕೆ ಪ್ರಧಾನ ದೇವಾಲಯವೇ ಸಾಕ್ಷಿಯಾಗಿದೆ. ದೇವಾಲಯದ ಮುಖ್ಯ ಭಾಗದಲ್ಲಿರುವ ಚಿತ್ರಕಲೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಕಿಕೊ ಅರ್ಗುಯೆಲ್ಲೊ ಅವರು 2004ರಲ್ಲಿ ರಚಿಸಿದ್ದರು. ಅಲ್ಲದೆ, ದೇವಾಲಯದ ಪಾರ್ಶ್ವದ ಪ್ರಾರ್ಥನಾ ಮಂದಿರಗಳಲ್ಲಿ ಒಂದರಲ್ಲಿ ಅವರು ಚಿತ್ರಿಸಿದ ಕನ್ಯಾ ಮರಿಯಮ್ಮನ ಮೂಲ ಐಕಾನ್ ಸಂರಕ್ಷಿಸಲಾಗಿದೆ.
ನಿನ್ನೆ ನಡೆದದ್ದು ಕೇವಲ ಒಂದು ವಾರ್ಷಿಕೋತ್ಸವದ ಆಚರಣೆಯಲ್ಲ. ಅದು ಸಮೃದ್ಧ ಫಲಗಳನ್ನು ನೀಡಿದ ಒಂದು ಇತಿಹಾಸದ ಸ್ಮರಣೆಯಾಗಿತ್ತು — ಸ್ಪೇನ್ ರಾಜಧಾನಿಯ ಅತ್ಯಂತ ಅಂಚಿನಲ್ಲಿದ್ದ ಪ್ರದೇಶಗಳಲ್ಲಿ ಒಂದರಲ್ಲಿ ಆರಂಭವಾಗಿ, ಪ್ರಭು ತಮ್ಮ ಮುಂದೆ ಇರಿಸಿದ್ದ ಮಾರ್ಗವನ್ನು ಅನುಸರಿಸಲು ಕಿಕೊ ಮತ್ತು ಕಾರ್ಮೆನ್ ತೋರಿದ ಸಿದ್ಧತೆಯಿಂದ ಬೆಳೆದು ಬಂದ ಒಂದು ಇತಿಹಾಸದ ಸ್ಮರಣೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).