ದಕ್ಷಿಣ ಫ್ಲೋರಿಡಾದಲ್ಲಿ ಕಥೋಲಿಕ ದತ್ತಿ ಸಂಸ್ಥೆಗಳಿಗೆ ಅಮೆರಿಕ ಸರ್ಕಾರ ಹಣಕಾಸು  ನೆರವನ್ನು ಕಡಿತಗೊಳಿಸಿದೆ. ದಕ್ಷಿಣ ಫ್ಲೋರಿಡಾದಲ್ಲಿ ಕಥೋಲಿಕ ದತ್ತಿ ಸಂಸ್ಥೆಗಳಿಗೆ ಅಮೆರಿಕ ಸರ್ಕಾರ ಹಣಕಾಸು ನೆರವನ್ನು ಕಡಿತಗೊಳಿಸಿದೆ.  (2026 Getty Images)

ಮಯಾಮಿ ಮಹಾಧರ್ಮಾಧ್ಯಕ್ಷರು: ಪೋಷಕರಿಲ್ಲದ ಅಪ್ರಾಪ್ತ ವಯಸ್ಕರಿಗಾಗಿ ಧರ್ಮಸಭೆಯ ಸಹಾಯ ಕಡಿತಕ್ಕೆ ವಿಷಾದ

ಮಯಾಮಿಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಥಾಮಸ್ ವೆನ್ಸ್ಕಿ ಅವರು, ಅಮೇರಿಕ ಸರ್ಕಾರವು ಧರ್ಮಸಭೆಯು ಪೋಷಕರಿಲ್ಲದ ಅಪ್ರಾಪ್ತ ವಯಸ್ಕರಿಗಾಗಿ ನೀಡುತ್ತಿದ್ದ ಸೇವೆಗಳ ಹಣಕಾಸು ಸಹಾಯವನ್ನು ಕಡಿತಗೊಳಿಸಿರುವುದರಿಂದ, ಆ ಸೇವೆಗಳು ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“60 ವರ್ಷಕ್ಕೂ ಹೆಚ್ಚು ಕಾಲ, ಮಯಾಮಿ ಮಹಾಧರ್ಮಪ್ರಾಂತ್ಯದ ಪೋಷಕರಿಲ್ಲದ ಅಪ್ರಾಪ್ತ ವಯಸ್ಕರ ಸೇವೆಗಳು ತಮ್ಮ ಉತ್ತಮ ಗುಣಮಟ್ಟಕ್ಕಾಗಿ ಗುರುತಿಸಲ್ಪಟ್ಟಿದ್ದು, ದೇಶದಾದ್ಯಂತ ಇತರ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ದುರ್ಬಲ ವರ್ಗಕ್ಕೆ ಸೇವೆ ಸಲ್ಲಿಸಿದ ನಮ್ಮ ದಾಖಲೆಯು ಸಮನಾದ ಸೇವೆ ಬೇರಿಲ್ಲ. ಆದರೂ, ಮೈಯಾಮಿ ಮಹಾಧರ್ಮಪ್ರಾಂತ್ಯದ ಕಥೋಲಿಕ ದತ್ತಿಯ(charity) ಸೇವೆಗಳ ಹಣಕಾಸು ಸಹಾಯವನ್ನು ಕಡಿತಗೊಳಿಸಲಾಗಿದ್ದು, ಮೂರು ತಿಂಗಳೊಳಗೆ ಅವು ಸ್ಥಗಿತಗೊಳ್ಳಬೇಕಾದ ಪರಿಸ್ಥಿತಿ ಬಂದಿದೆ.”

ಮೈಯಾಮಿ ಮಹಾಧರ್ಮಪ್ರಾಂತ್ಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಪ್ರಕಟಣೆಯಲ್ಲಿ, ಮಹಾಧರ್ಮಾಧ್ಯಕ್ಷರಾದ ಪೂಜ್ಯ ಥಾಮಸ್ ವೆನ್ಸ್ಕಿ ಅವರು, ಈ ದಾನಸೇವೆಯ ಸಹಾಯವನ್ನು ಕಡಿತಗೊಳಿಸಿ, 60 ವರ್ಷಕ್ಕೂ ಹೆಚ್ಚು ಕಾಲದ ಸಹಭಾಗಿತ್ವವನ್ನು ಅಂತ್ಯಗೊಳಿಸಿರುವ ಅಮೇರಿಕ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.

ಅವರು ಈ ಸಹಕಾರವು “ಪೆಡ್ರೋ ಪಾನ್” ಎಂಬ ಕಾರ್ಯಚಟುವಟಿಕೆಯಿಂದ ಆರಂಭವಾಯಿತು ಎಂದು ಸ್ಮರಿಸಿದರು. ಈ ಕಾರ್ಯವನ್ನು ಆಗ ಯುವ ಐರಿಷ್ ಯಾಜಕರಾದ ವಂ. ಗುರು ಮೊನ್ಸಿನೊರ್ ಬ್ರಯಾನ್ ಓ. ವಾಲ್ಶ್ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು; ಅವರು ಕ್ಯೂಬಾದಿಂದ ಒಬ್ಬರೇ ಕಳುಹಿಸಲ್ಪಟ್ಟ ಸುಮಾರು 14,000 ಮಕ್ಕಳಿಗೆ ಇಲ್ಲಿ ಪುನರ್ವಸತಿ ಸಹಾಯ ಮಾಡಿದ್ದರು. ಅವರ ಪೋಷಕರು ಕಮ್ಯೂನಿಸ್ಟ್ ಪ್ರಭಾವದಿಂದ ಅವರನ್ನು ರಕ್ಷಿಸಲು ಈ ಕ್ರಮ ತೆಗೆದುಕೊಂಡಿದ್ದರು.

ಮಹಾಧರ್ಮಾಧ್ಯಕ್ಷರು ಸೂಚಿಸಿದಂತೆ, 1960ರಿಂದ ಇಂದಿನವರೆಗೆ, ಮಹಾಧರ್ಮಪ್ರಾಂತ್ಯವು ಶರಣಾರ್ಥಿ ಪುನರ್ವಸತಿ ಕಚೇರಿಯೊಂದಿಗೆ ನಿಕಟವಾಗಿ ಕೆಲಸ ಮಾಡಿ, ವಿವಿಧ ದೇಶಗಳಿಂದ ಬಂದ ಸಾವಿರಾರು ಪೋಷಕರಿಲ್ಲದ ಅಪ್ರಾಪ್ತ ವಯಸ್ಕರಿಗೆ ಆಶ್ರಯ ಮತ್ತು ಇತರ ಸೇವೆಗಳನ್ನು ಒದಗಿಸಿದೆ.

ಇಂದು ಪಾಲ್ಮೆಟ್ಟೋ ಬೇಯಲ್ಲಿ ಇರುವ ಮೊನ್ಸಿನೊರ್ ಬ್ರಯಾನ್ ಓ. ವಾಲ್ಶ್ ಮಕ್ಕಳ ಗ್ರಾಮವು 81 ಅಪ್ರಾಪ್ತರಿಗೆ ವಸತಿ ನೀಡಬಹುದು ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮವು ಮಕ್ಕಳನ್ನು ಪಾಲನಾ ಕುಟುಂಬಗಳಲ್ಲಿ ಇರಿಸುವುದು, ಕುಟುಂಬ ಸದಸ್ಯರೊಂದಿಗೆ ಮರುಸೇರ್ಪಡೆ ಮಾಡುವುದು ಮತ್ತು ಸಹಾಯಕ ಸೇವೆಗಳನ್ನು ಒದಗಿಸುವುದನ್ನು ಒಳಗೊಂಡಿದೆ.

ಈ ಮಕ್ಕಳಲ್ಲಿ ಅನೇಕರು ಅಮೇರಿಕಾಗೆ ಬರುವ ಮೊದಲು ಅನುಭವಿಸಿದ ಮಾನಸಿಕ ಆಘಾತವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಮನೋವೈದ್ಯಕೀಯ ಸಹಾಯವನ್ನು ಸಹ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

“ಸರ್ಕಾರ ಮತ್ತು ಕಥೋಲಿಕ ಚಾರಿಟೀಸ್ ನಡುವಿನ ಈ ಸಹಕಾರದ ಸಕಾರಾತ್ಮಕ ಪರಿಣಾಮವನ್ನು,” ಅವರು ಒತ್ತಿಹೇಳಿದರು, “ಈ ಹಸ್ತಕ್ಷೇಪದ ಮೂಲಕ ಸಮಾಜದಲ್ಲಿ ಯಶಸ್ವಿ ಸದಸ್ಯರಾಗಿರುವ ಪೆಡ್ರೋ ಪಾನ್ ಮಕ್ಕಳ ಜೀವನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.”

ಅವರು ಮತ್ತಷ್ಟು ಹೇಳುವಂತೆ, ಪೆಡ್ರೋ ಪಾನ್ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿಗಳಲ್ಲಿ ವ್ಯಾಪಾರ ನಾಯಕರು, ರಾಜಕಾರಣಿಗಳು, ಮಾಜಿ ಸಂಸದರು, ಪಂಡಿತರು, ವೈದ್ಯರು, ವಕೀಲರು, ಯಾಜಕರು ಮತ್ತು ಧರ್ಮಾಧ್ಯಕ್ಷರು ಸೇರಿದ್ದಾರೆ. ಮಹಾಧರ್ಮಾಧ್ಯಕ್ಷರು ಒಪ್ಪಿಕೊಂಡಂತೆ, ದೇಶಕ್ಕೆ ಬರುತ್ತಿರುವ ಪೋಷಕರಿಲ್ಲದ ಅಪ್ರಾಪ್ತ ವಯಸ್ಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೆಲವು ಕಾರ್ಯಕ್ರಮಗಳನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಸಹಜವಾಗಿರಬಹುದು.

“ಆದರೆ, ಮೊನ್ಸಿನೊರ್ ಬ್ರಯಾನ್ ಓ. ವಾಲ್ಶ್ ಮಕ್ಕಳ ಗ್ರಾಮದ ಇತಿಹಾಸ ಮತ್ತು ಖ್ಯಾತಿಯನ್ನು ಗಮನಿಸಿದರೆ,ಭವಿಷ್ಯದಲ್ಲಿ ಮತ್ತೆ ಈ ರೀತಿಯ ಮಕ್ಕಳ ಪ್ರವಾಹ ಬಂದಾಗ, ಕಥೋಲಿಕ ಚಾರಿಟೀಸ್ ಸಾಧಿಸಿದ ಮಟ್ಟದ ಸಾಮರ್ಥ್ಯ ಮತ್ತು ಗುಣಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಪುನಃ ನಿರ್ಮಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ” ಎಂದು ಹೇಳಿದರು.

ಮಹಾಧರ್ಮಾಧ್ಯಕ್ಷರು ತಮ್ಮ ಪ್ರಕಟಣೆಯ ಅಂತ್ಯದಲ್ಲಿ, ಅಮೇರಿಕ ಆರೋಗ್ಯ ಮತ್ತು ಮಾನವ ಸೇವಾ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಶರಣಾರ್ಥಿ ಪುನರ್ವಸತಿ ಕಚೇರಿಯ ಉದ್ದೇಶವು ಪೋಷಕರಿಲ್ಲದ ವಿದೇಶಿ ಅಪ್ರಾಪ್ತ ವಯಸ್ಕರ ಆರೋಗ್ಯ, ಕಲ್ಯಾಣ ಮತ್ತು ಸ್ಥಿರತೆಯನ್ನು ಉತ್ತೇಜಿಸುವುದಾಗಿದೆ ಎಂದು ನೆನಪಿಸಿದರು.

“ಈ ಕಚೇರಿಯು ಮಕ್ಕಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ಬದ್ಧವಾಗಿದೆ,” ಎಂದು ಅವರು ಹೇಳಿ, “ಈ ಮಹತ್ವದ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

17 ಏಪ್ರಿಲ್ 2026, 16:18