ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಸಮಿತಿಯ ಕಚೇರಿ ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಸಮಿತಿಯ ಕಚೇರಿ 

ಅಮೇರಿಕಾ: ಧರ್ಮಾಧ್ಯಕ್ಷರ ಸಿದ್ಧಾಂತ ವಿಭಾಗದ ಅಧ್ಯಕ್ಷರಿಂದ ‘ನ್ಯಾಯಯುದ್ಧ ತತ್ವ’ ಕುರಿತು ಸ್ಪಷ್ಟನೆ

ಪೂಜ್ಯ ಧರ್ಮಾಧ್ಯಕ್ಷರಾದ ಜೇಮ್ಸ್ ಮಸ್ಸಾ ಅವರು ಯುದ್ಧ ಮತ್ತು ಶಾಂತಿಯ ಕುರಿತು ಧರ್ಮಸಭೆಯ ಉಪದೇಶಕ್ಕೆ ಸಂಬಂಧಿಸಿದ ಸಾರ್ವಜನಿಕ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟಣೆ ಹೊರಡಿಸಿದ್ದಾರೆ.

ವ್ಯಾಟಿಕನ್ ವರದಿ

ಇತ್ತೀಚಿನ ದಿನಗಳಲ್ಲಿ ಯುದ್ಧ ಮತ್ತು ಶಾಂತಿಯ ಕುರಿತು ಕಥೋಲಿಕ ಧರ್ಮಸಭೆಯ ಉಪದೇಶಕ್ಕೆ ಸಂಬಂಧಿಸಿದ ಸಾರ್ವಜನಿಕ ಅಭಿಪ್ರಾಯಗಳ ಹಿನ್ನೆಲೆಯಲ್ಲಿ, ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಸಮಿತಿ (USCCB) ಏಪ್ರಿಲ್ 15, 2026 ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಪ್ರಕಟಣೆಯಲ್ಲಿ, ಸಿದ್ಧಾಂತ ಸಮಿತಿಯ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷ ಜೇಮ್ಸ್ ಮಸ್ಸಾ ಅವರು ಹೀಗೆ ಹೇಳಿದ್ದಾರೆ:

“ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಕಥೋಲಿಕ ಧರ್ಮಸಭೆ ‘ನ್ಯಾಯಯುದ್ಧ ತತ್ವ’ವನ್ನು ಬೋಧಿಸುತ್ತಿದೆ, ಮತ್ತು ಯುದ್ಧದ ಕುರಿತು ಪೂಜ್ಯ ಜಗದ್ಗುರು ಅವರ ಅಭಿಪ್ರಾಯಗಳು ಈ ದೀರ್ಘ ಪರಂಪರೆಯನ್ನು ಎಚ್ಚರಿಕೆಯಿಂದ ಉಲ್ಲೇಖಿಸುತ್ತವೆ. ಈ ಸಾವಿರ ವರ್ಷದ ಪರಂಪರೆಯ ಒಂದು ಸ್ಥಿರ ಸಿದ್ಧಾಂತವೆಂದರೆ, ಒಂದು ರಾಷ್ಟ್ರವು ಕೇವಲ ‘ಸ್ವಯಂ ರಕ್ಷಣೆಗೆ, ಎಲ್ಲಾ ಶಾಂತಿಯ ಪ್ರಯತ್ನಗಳು ವಿಫಲವಾದ ನಂತರ ಮಾತ್ರ’ ಯುದ್ಧಕ್ಕೆ ಮುಂದಾಗಬಹುದು (ಕಥೋಲಿಕ ಧರ್ಮಸಭೆಯ ಧರ್ಮೋಪದೇಶ, ಸಂ. 2308). ಅಂದರೆ, ಒಂದು ಯುದ್ಧ ನ್ಯಾಯಯುತವಾಗಿರಬೇಕಾದರೆ, ಅದು ಯುದ್ಧವನ್ನು ಪ್ರಾರಂಭಿಸಿರುವ ಮತ್ತೊಬ್ಬರ ವಿರುದ್ಧದ ರಕ್ಷಣೆಯಾಗಿರಬೇಕು. ಪೂಜ್ಯ ಜಗದ್ಗುರು ಅವರು ಹೇಳಿದುದೂ ಇದೇ: ‘ಯುದ್ಧ ನಡೆಸುವವರ ಪ್ರಾರ್ಥನೆಗಳನ್ನು ದೇವರು ಆಲಿಸುವುದಿಲ್ಲ.’

“ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ವಿಶ್ವವ್ಯಾಪಿ ಧರ್ಮಸಭೆಯ ಪರಮ ಗುರುವಾಗಿ ಮಾತನಾಡುವಾಗ, ಅವರು ಕೇವಲ ಧರ್ಮಶಾಸ್ತ್ರದ ಅಭಿಪ್ರಾಯಗಳನ್ನು ನೀಡುವುದಿಲ್ಲ; ಅವರು ಸುವಾರ್ತೆಯನ್ನು ಸಾರುತ್ತಾರೆ ಮತ್ತು ಕ್ರಿಸ್ತನ ಪ್ರತಿನಿಧಿಯಾಗಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾರೆ. ಧರ್ಮಸಭೆಯ ನಿರಂತರ ಉಪದೇಶವು ಎಲ್ಲ ಸಜ್ಜನರು ಶಾಶ್ವತ ಶಾಂತಿಗೆ ಪ್ರಾರ್ಥನೆ ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿ ಕಾರ್ಯ ಮಾಡಬೇಕು ಎಂದು ಒತ್ತಿ ಹೇಳುತ್ತದೆ, ಮತ್ತು ಎಲ್ಲಾ ಯುದ್ಧಗಳಿಗೆ ಸಂಬಂಧಿಸಿದ ದುಷ್ಪರಿಣಾಮಗಳು ಮತ್ತು ಅನ್ಯಾಯಗಳನ್ನು ತಪ್ಪಿಸಬೇಕು ಎಂದು ಸೂಚಿಸುತ್ತದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

16 ಏಪ್ರಿಲ್ 2026, 19:19