ಮುಖ್ಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಸ್ವಿಯಾತೋಸ್ಲಾವ್ ಶೆವ್ಚುಕ್ ಮುಖ್ಯ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಸ್ವಿಯಾತೋಸ್ಲಾವ್ ಶೆವ್ಚುಕ್  (©UGCC Department of Information)

ಮಹಾಧರ್ಮಾಧ್ಯಕ್ಷ ಶೆವ್ಚುಕ್: ಶಾಂತಿಗಾಗಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ಉಕ್ರೇನಿಯರು ಒಂದಾಗಿದ್ದಾರೆ

ಮುಖ್ಯ ಮಹಾಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಉಕ್ರೇನಿಯರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ನೇತೃತ್ವದಲ್ಲಿ ನಡೆಯುವ ಶಾಂತಿಯ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಾರ್ಥನೆ ಪೂರ್ವದ ಪುನರುತ್ಥಾನ ಮಹೋತ್ಸವದ ಸಂಜೆ, ಪವಿತ್ರ ಪೇತ್ರರ ಬಸಿಲಿಕಾದಲ್ಲಿ ನಡೆಯಲಿದೆ. ಅವರು ಯುದ್ಧವಿಲ್ಲದ ಲೋಕದ ಭರವಸೆಯನ್ನು ವ್ಯಕ್ತಪಡಿಸಿ, ವಿಶೇಷವಾಗಿ, ಉಕ್ರೇನ್ ದೇಶವು ನಿಜವಾದ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಅನುಭವಿಸಬೇಕೆಂಬ ತಮ್ಮ ಆಳವಾದ ಬಯಕೆಯನ್ನು ಹಂಚಿಕೊಂಡರು.

ಲೇಖಕರು : ಸ್ವಿಟ್ಲಾನಾ ದುಖೋವಿಚ್

ಯುದ್ಧದ ನಡುವೆ ದುರ್ಬಲತೆಯಲ್ಲೇ ದೇವರ ಶಕ್ತಿ

“ಯುದ್ಧದ ಸಂದರ್ಭದಲ್ಲಿರುವ ಮಾನವನ ದುರ್ಬಲತೆ, ಪ್ರಭು ಯೇಸುವಿನ ಸ್ವಂತ ದುರ್ಬಲತೆಯಾಗಿದೆ.” ಆದರೆ ಅಪಹರಣಗೊಂಡು ನಂತರ ಬಿಡುಗಡೆಗೊಂಡ ಉಕ್ರೇನಿನ ಮಕ್ಕಳ ಸಾಕ್ಷಿಗಳು, “ಆ ದುರ್ಬಲತೆಯಲ್ಲೇ ನಮ್ಮ ಮಧ್ಯೆ ಇರುವ ಪ್ರಭುವಿನ ಶಕ್ತಿ ವ್ಯಕ್ತವಾಗುತ್ತಿದೆ” ಎಂಬುದನ್ನು ತೋರಿಸುತ್ತವೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕೀವ್-ಹಾಲಿಚ್‌ನ ಮಹಾಧರ್ಮಾಧ್ಯಕ್ಷರು ಹಾಗೂ ಉಕ್ರೇನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರಾದ ಸ್ವಿಯಾತೋಸ್ಲಾವ್ ಶೆವ್ಚುಕ್ ಅವರು, ಏಪ್ರಿಲ್ 12ರಂದು ಯುದ್ಧದ ಸ್ಥಿತಿಯಲ್ಲಿಯೇ ಉಕ್ರೇನ್ ಅನುಭವಿಸುತ್ತಿರುವ ಐದನೇ ಪುನರುತ್ಥಾನ ಮಹೋತ್ಸವದ ಬಗ್ಗೆ ಚಿಂತನೆ ಮಾಡುತ್ತಾ ಈ ಮಾತುಗಳನ್ನು ಹೇಳಿದರು.

ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಸಂದೇಶವನ್ನೂ ಮರುಉಲ್ಲೇಖಿಸಿ — ಇಂದಿನ ಸಂಜೆ ಸಂತ ಪೇತ್ರರ ಬಸಿಲಿಕಾದಲ್ಲಿ ನಡೆಯುವ ಶಾಂತಿಯ ಪ್ರಾರ್ಥನಾ ಜಾಗರಣೆಗೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ: “ಯುದ್ಧ ಜಯಿಸುವುದಿಲ್ಲ. ಮಕ್ಕಳಿಗೆ ನಿಜವಾದ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಹಕ್ಕಿದೆ.”

ಪ್ರಶ್ನೆ: “ಪೂಜ್ಯರೇ, ಉಕ್ರೇನ್‌ನಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಯುದ್ಧದ ಸಂದರ್ಭದಲ್ಲಿ, ಇದು ಈಗಾಗಲೇ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಮುಂದುವರಿದಿದೆ, ಪೂರ್ವ ಪುನರುತ್ಥಾನ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ನೀವು ಹಂಚಿಕೊಳ್ಳಲು ಬಯಸುವ ಚಿಂತನೆಗಳು ಯಾವುವು?”

ಹೌದು, ನಿಜವಾಗಿಯೂ, ಇದು ಈಗಾಗಲೇ ದೊಡ್ಡ ಪ್ರಮಾಣದ ಯುದ್ಧದ ನಡುವೆ ನಡೆಯುತ್ತಿರುವ ಐದನೇ ಪುನರುತ್ಥಾನ ಮಹೋತ್ಸವವಾಗಿದೆ. ನಮ್ಮ ಮುಖ್ಯ ಚಿಂತನೆ, ನಮ್ಮ ಮುಖ್ಯ ಪ್ರಾರ್ಥನೆ ಎಂದರೆ ಉಕ್ರೇನಿನಲ್ಲಿ ಶಾಂತಿ. ಪವಿತ್ರ ವಾರದ ಸಂದರ್ಭದಲ್ಲಿ, ಧರ್ಮಸಭೆಯ ವರ್ಷದಲ್ಲಿಯೇ ಅತ್ಯಂತ ಆಧ್ಯಾತ್ಮಿಕ ಕ್ಷಣಗಳಲ್ಲಿ, ನಾವು ಕ್ರಿಸ್ತನನ್ನು ಧ್ಯಾನಿಸುತ್ತೇವೆ: ದೋಷಾರೋಪಣೆ ಹೊತ್ತ ಕ್ರಿಸ್ತ, ಹಿಂಸಿಸಲ್ಪಟ್ಟ ಕ್ರಿಸ್ತ, ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತ, ಸಮಾಧಿಯಲ್ಲಿ ಇಡಲ್ಪಟ್ಟ ಕ್ರಿಸ್ತ, ಆದರೆ ಜೊತೆಗೆ ಪುನರುತ್ಥಾನಗೊಂಡ ಕ್ರಿಸ್ತನನ್ನೂ ಸಹ. ಕ್ರಿಸ್ತನ ಪಾಡುಗಳ ಈ ಕ್ಷಣಗಳು ಉಕ್ರೇನಿಯ ಜನರ ಹೃದಯಗಳಲ್ಲಿ ವಿಶೇಷ ರೀತಿಯಲ್ಲಿ ಪ್ರತಿಧ್ವನಿಸುತ್ತವೆ, ಏಕೆಂದರೆ ನಾವು ನಮ್ಮ ಪ್ರಭುವಾದ ಯೇಸು ಕ್ರಿಸ್ತನೊಂದಿಗೆ ಒಂದೇ ಶಿಲುಬೆಯ ಹಾದಿಯಲ್ಲಿ ಸಾಗುತ್ತಿರುವಂತೆ ತಿಳಿದುಕೊಳ್ಳುತ್ತೇವೆ.

ನಾವು ದೋಷಾರೋಪಣೆ ಹೊತ್ತ ಯೇಸು ಕ್ರಿಸ್ತನನ್ನು ಧ್ಯಾನಿಸುವಾಗ, ಇದು ನಮ್ಮ ಭೂಮಿ, ನಮ್ಮ ಜನರು, ಮರಣಕ್ಕೆ ದೋಷಾರೋಪಣೆಗೊಳಗಾದವರು ಎಂಬುದು ನಮಗೆ ತಿಳಿಯುತ್ತದೆ. ಬಿಡುಗಡೆಯಾದ ಕೈದಿಗಳ ಸಾಕ್ಷ್ಯಗಳನ್ನು ಕೇಳಿದಾಗ: ಅವನನ್ನು ದೋಷಾರೋಪಣೆ ಮಾಡಿ ಹಿಂಸಿಸುವವರ ಎದುರು ಕೈದಿಯ ಮೌನ ಅವರಲ್ಲಿ ಅನೇಕರು ಅದನ್ನು ನ್ಯಾಯಸಭೆಯ(Sanhedrin) ಮುಂದೆ ಕ್ರಿಸ್ತನ ಮೌನದಂತೆ ಅನುಭವಿಸಿದರು. ನಾವು ಅಪಹರಿಸಲ್ಪಟ್ಟು ನಂತರ ಬಿಡುಗಡೆಗೊಂಡ ಉಕ್ರೇನಿಯ ಮಕ್ಕಳ ಸಾಕ್ಷ್ಯಗಳನ್ನು ಕೇಳಿದಾಗ, ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿರುವ, ಶಸ್ತ್ರಸಜ್ಜಿತ ದಮನದ ಎದುರು ಸಂಪೂರ್ಣ ನಿರ್ಗತಿಕತೆಯನ್ನು ಅನುಭವಿಸಿದ ಭಾವನೆಯನ್ನು ಹಂಚಿಕೊಂಡರು. ಈ ಮಾನವ ದುರ್ಬಲತೆ ಯುದ್ಧದ ಸಂದರ್ಭದಲ್ಲಿ ಕ್ರಿಸ್ತನ ಸ್ವಂತ ದುರ್ಬಲತೆಯಾಗಿ ಪರಿಣಮಿಸಿದೆ.

ಆದರೆ ಈ ಮಕ್ಕಳು, ಈ ದುರ್ಬಲತೆ ನಮ್ಮ ನಡುವೆ ಇರುವ ಪ್ರಭುವಿನ ಶಕ್ತಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳುತ್ತಾರೆ. ನಾವು ತಮ್ಮ ಮನೆಗಳನ್ನು ಕಳೆದುಕೊಂಡ, ಎಲ್ಲವನ್ನೂ ಕಳೆದುಕೊಂಡ, ಯುದ್ಧದಿಂದ ಸ್ಥಳಾಂತರಗೊಂಡ ನಮ್ಮ ಸ್ವಯಂಸೇವಕರ ಸಾಕ್ಷ್ಯಗಳನ್ನು ಕೇಳಿದಾಗ, ಅವರು ಸಹಾನುಭೂತಿ ಮತ್ತು ಕರುಣೆಯ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ ಎಂಬುದನ್ನು ಕಂಡೆವು. ಅವರು ಅಗತ್ಯವಿರುವವರಲ್ಲಿ ಕರುಣೆ ತೋರಿಸುವ ಸ್ವಯಂಸೇವಕರಾಗಿ ರೂಪಾಂತರಗೊಂಡಿದ್ದಾರೆ ಮತ್ತು ಅವರು ತಮ್ಮ ಶಿಲುಬೆಯನ್ನು ಹೊತ್ತು ಕುಸಿಯುತ್ತಿರುವವರಿಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿದ ಸಿರೇನ್ಯದ ಸಿಮೋನ ಜೀವಂತ ಪ್ರತಿರೂಪವಾಗಿದ್ದಾರೆ. 

ಪ್ರಶ್ನೆ: “ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು ಇಂದು ಸಂಜೆ 6 ಗಂಟೆಗೆ ನಡೆಯುವ ಶಾಂತಿಯ ಜಾಗರಣೆಗೆ ಎಲ್ಲರನ್ನು ತಮ್ಮೊಂದಿಗೆ ಸೇರಲು ಆಹ್ವಾನಿಸಿದ್ದಾರೆ. ಈ ಪ್ರಯತ್ನವನ್ನು ಉಕ್ರೇನ್‌ನಲ್ಲಿ ಹೇಗೆ ಸ್ವೀಕರಿಸಲಾಗುತ್ತಿದೆ?”

 ನಿಶ್ಚಯವಾಗಿಯೂ, ಉಕ್ರೇನಿಯರು ಜಗದ್ಗುರುಗಳೊಂದಿಗೆ ಸೇರಿ ಶಾಂತಿಗಾಗಿ ಪ್ರಾರ್ಥಿಸಿ ಜಾಗರಣೆ ನಡೆಸುತ್ತಾರೆ. ಇದು ಹೊರಗಿನಿಂದ ಹೇರಲ್ಪಟ್ಟ ಪ್ರಾರ್ಥನೆ ಅಲ್ಲ; ಅದು ನಮ್ಮ ಹೃದಯಗಳಿಂದ ಹೊರಹೊಮ್ಮುವ ಪ್ರಾರ್ಥನೆ.ಉಕ್ರೇನ್‌ನಲ್ಲಿ, ನಾವು ಪುನರುತ್ಥಾನದ ಭರವಸೆಯಲ್ಲಿ ಯೇಸುವಿನ ಸಮಾಧಿಯ ಬಳಿಯಲ್ಲಿ ಜಾಗರಣೆ ನಡೆಸುತ್ತೇವೆ, ಏಕೆಂದರೆ ಉಕ್ರೇನ್‌ನಲ್ಲಿ ಈ ಶನಿವಾರವು ಪುನರುತ್ಥಾನ ಭಾನುವಾರದ ಮುಂಚಿನ ಶನಿವಾರವಾಗಿದೆ. ಆದ್ದರಿಂದ, ಈ ಪ್ರಯತ್ನಕ್ಕಾಗಿ ನಾವು ಜಗದ್ಗುರುಗಳಿಗೆ ಕೃತಜ್ಞರಾಗಿದ್ದೇವೆ, ಏಕೆಂದರೆ ಮಾನವನ ಮನಸ್ಸುಗಳನ್ನು ಜಾಗೃತಗೊಳಿಸಲು, ಆಹ್ವಾನಿಸಲು, ಮತ್ತು ಕೆಲವೊಮ್ಮೆ ಶಾಂತಿಗಾಗಿ ಪ್ರಾರ್ಥಿಸಲು ಪ್ರೇರೇಪಿಸಲು ಈ ರೀತಿಯ ಪ್ರಯತ್ನಗಳ ಅಗತ್ಯವಿದೆ. ಮತ್ತು, ಕ್ರಿಸ್ತನು ಮರಣಕ್ಕಿಂತ ಶಕ್ತಿಶಾಲಿಯಾಗಿ ಪುನರುತ್ಥಾನಗೊಂಡಂತೆ,  ಕ್ರಿಸ್ತನ ಶಾಂತಿ ಇಂದಿನ ಲೋಕದಲ್ಲಿ ಯುದ್ಧದ ಮೇಲೆ ಜಯ ಸಾಧಿಸಲಿ ಎಂಬ ಭರವಸೆಯಲ್ಲಿದ್ದೇವೆ.

ಪ್ರಶ್ನೆ: ಪೂಜ್ಯರೇ, ವಿಶ್ವದ ವಿವಿಧ ದೇಶಗಳಲ್ಲಿ ಇರುವ ಕ್ರೈಸ್ತರಿಗೆ ನೀವು ನೀಡಬಯಸುವ ಸಂದೇಶವೇನು?

ಯುದ್ಧ ಅಂತ್ಯವಾಗಲಿ, ಮಕ್ಕಳು ಮನೆಗೆ ಮರಳಿ ಬರಲಿ, ನಮ್ಮ ಸೈನಿಕರು, ನಮ್ಮ ರಕ್ಷಕರು, ಹುಡುಗರು ಮತ್ತು ಹುಡುಗಿಯರು, ತಮ್ಮ ಕುಟುಂಬಗಳಿಗೆ ಸುರಕ್ಷಿತವಾಗಿ ಮರಳಿ ಬರಲಿ. ಹಿಂಸೆಗೆ ಒಳಗಾದ ಯುದ್ಧ ಕೈದಿಗಳು ಬಿಡುಗಡೆ ಹೊಂದಲಿ. ಪುನರುತ್ಥಾನ ಮಹೋತ್ಸವವು ನಿಜವಾಗಿಯೂ ಯುದ್ಧರಹಿತ ಲೋಕಕ್ಕೆ ಹೊಸ ಆರಂಭವಾಗಲಿ. ಮಾರಿಯುಪೋಲ್‌ನ ಒಬ್ಬ ಉಕ್ರೇನಿಯ ಮಗುವಿನಿಂದ ಒಂದು ಗಮನಾರ್ಹ ಸಾಕ್ಷ್ಯ ಬರುತ್ತದೆ; ಅವನನ್ನು ರಷ್ಯಾಕ್ಕೆ ಕರೆದೊಯ್ಯಲಾಗಿತ್ತು. ಅವನ ತಾಯಿ ಇನ್ನೂ ರಷ್ಯಾದ ಕಾರಾಗೃಹದಲ್ಲಿದ್ದಾರೆ, ಆದರೆ ಪವಿತ್ರ ಪೀಠದ ಮಧ್ಯಸ್ಥಿಕೆಯಿಂದ ಅವನು ಬಿಡುಗಡೆಗೊಂಡನು. ಅವನು ಉಕ್ರೇನಿಯ ಮಕ್ಕಳ ಶಾಂತಿಯ ಸಂದೇಶವನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದನು: “ನಾವು ಶತ್ರುವಿನ ಮರಣವನ್ನು ಬಯಸುವುದಿಲ್ಲ; ಆದರೆ ಲೋಕದ ಯಾವುದೇ ಮಗು ಈಗ ಉಕ್ರೇನಿಯ ಮಕ್ಕಳು ಅನುಭವಿಸುತ್ತಿರುವ ಈ ನೋವನ್ನು ಅನುಭವಿಸಬಾರದು” ಎಂದು ಹೇಳಿದರು. ಈ ಸಾಕ್ಷ್ಯವನ್ನು ಒಂದು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು: ಉಕ್ರೇನಿಯ ಅಂಚೆ ಸಂಸ್ಥೆ ಪೂಜ್ಯ ಜಗದ್ಗುರುಗಳಾದ ಲಿಯೋ  ಅವರಿಗಾಗಿಯೇ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು, ಮತ್ತು ಪವಿತ್ರ ಗುರುವಾರದಂದು ಅದನ್ನು ಪರಿಚಯಿಸಲಾಯಿತು. ಈ ಅಂಚೆ ಚೀಟಿ ಪವಿತ್ರ ತಂದೆಯವರ ಸಂದೇಶವನ್ನು ಪ್ರತಿಧ್ವನಿಸಿತು; “ಯುದ್ಧವು ಜಯ ಸಾಧಿಸುವುದಿಲ್ಲ. ಮತ್ತು ಮಕ್ಕಳಿಗೆ ನಿಜವಾದ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಹಕ್ಕು ಇದೆ.” ನನ್ನ ಅಭಿಪ್ರಾಯದಲ್ಲಿ, ಈ ಮಗುವಿನ ಮಾತುಗಳೇ ಶಾಂತಿಯ ಅತ್ಯಂತ ಮಹತ್ವದ ಸಂದೇಶವಾಗಿದೆ—ಉಕ್ರೇನಿಯ ನೋವು ಅನುಭವಿಸುತ್ತಿರುವ ಮಕ್ಕಳಿಂದ ಹೊತ್ತೊಯ್ಯಲ್ಪಡುವ ಸಂದೇಶ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

11 ಏಪ್ರಿಲ್ 2026, 19:20