ಶ್ರೀಲಂಕಾ: ಈಸ್ಟರ್ ಭಾನುವಾರದ ದಾಳಿಗಳ ಏಳನೇ ವರ್ಷದ ಸ್ಮರಣೆ – ನ್ಯಾಯಕ್ಕಾಗಿ ಮುಂದುವರಿದ ಕೋರಿಕೆ
ಲೇಖಕರು: ಲಿಂಡಾ ಬೋರ್ಡೊನಿ
ಶ್ರೀಲಂಕಾ ಈಸ್ಟರ್ ಭಾನುವಾರದ ಸ್ಫೋಟ ದಾಳಿಗಳ ಏಳನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ, ಧರ್ಮಸಭೆ ಸತ್ಯ, ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಇದನ್ನು, ಉತ್ತೇಜನಕಾರಿ ಬೆಳವಣಿಗೆಗಳ ಜೊತೆಗೆ ಮುಂದುವರಿಯುತ್ತಿರುವ ಅಡೆತಡೆಗಳ ಮಧ್ಯೆ ನಡೆಯುತ್ತಿರುವ ಪ್ರಯತ್ನವೆಂದು ಅದು ವಿವರಿಸಿದೆ.
2019ರ ಏಪ್ರಿಲ್ 21ರಂದು, ಈಸ್ಟರ್ ಹಬ್ಬವನ್ನು ಆಚರಿಸುತ್ತಿದ್ದ ಭಕ್ತರಿಂದ ತುಂಬಿದ್ದ ಮೂರು ದೇವಾಲಯಗಳ ಮೇಲೂ, ಹಾಗೆಯೇ ರಾಜಧಾನಿಯಾದ ಕೊಲಂಬೊದಲ್ಲಿನ ಹಲವು ಹೋಟೆಲ್‌ಗಳ ಮೇಲೂ ಸಂಯೋಜಿತ ಆತ್ಮಹತ್ಯಾ ಸ್ಫೋಟ ದಾಳಿಗಳು ನಡೆದವು. ಈ ದಾಳಿಗಳಲ್ಲಿ ಪವಿತ್ರ ಬಲಿಪೂಜೆಗೆ ಕೂಡಿದ್ದ ಅನೇಕ ಕುಟುಂಬಗಳನ್ನು ಒಳಗೊಂಡಂತೆ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು ನೂರಾರು ಜನರು ಗಾಯಗೊಂಡರು. ಈ ಘಟನೆಗಳು ದೇಶದ ಅಂತರ್ಯುದ್ಧದ ಅಂತ್ಯದ ನಂತರ ಸಂಭವಿಸಿದ ಅತ್ಯಂತ ಭೀಕರ ಹಿಂಸಾಚಾರದ ಘಟನೆಗಳಾಗಿ ಉಳಿದಿವೆ.
2023ರಲ್ಲಿ ಪ್ರಸಾರವಾದ ಚಾನೆಲ್ 4 ವರದಿಚಿತ್ರವು, ಅಧಿಕೃತ ತನಿಖೆಗಳ ನಿರ್ಣಯಗಳು ಮತ್ತು ದಾಳಿಗಳ ನಂತರದ ಮಾಹಿತಿಯ ನಿರ್ವಹಣೆ ಕುರಿತು ಹೊಸ ಚರ್ಚೆಗೆ ಕಾರಣವಾಯಿತು. ಆದಾಗ್ಯೂ, ಸತ್ಯವನ್ನು ಹುಡುಕುತ್ತಿರುವವರು ಪ್ರಗತಿ ಮತ್ತು ಭರವಸೆಗಳಿದ್ದರೂ ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ವಂ. ಗುರು ರೋಹನ್ ಸಿಲ್ವಾ,OMI ಅವರು ತನಿಖೆಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಚಿಂತನೆ ವ್ಯಕ್ತಪಡಿಸಿ, ಕೆಲವು ಮುಂದಿನ ಹೆಜ್ಜೆಗಳು ಇಡಲ್ಪಟ್ಟಿದ್ದರೂ ಪ್ರಮುಖ ಬೇಡಿಕೆಗಳು ಇನ್ನೂ ಈಡೇರಿಲ್ಲವೆಂದು ಹೇಳಿದರು.
ಬಹುಕಾಲದಿಂದ ಕೇಳಲಾಗುತ್ತಿರುವ ಸ್ವತಂತ್ರ ವಿಶೇಷ ಅಭಿಯೋಜಕರ ನೇಮಕಾತಿಯ ಬಗ್ಗೆ ಅವರು ಉಲ್ಲೇಖಿಸಿ, “ನಾವು ಇನ್ನೂ ಕಾಯುತ್ತಿದ್ದೇವೆ,” ಎಂದು CSR ಮುಖ್ಯಸ್ಥರಾದ ಅವರು ಹೇಳಿದರು. ಆರಂಭದಿಂದಲೇ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿ ಇರುವ ವಂ. ಗುರು ರೋಹನ್ ಅವರು, “ ಭರವಸೆ ನೀಡಲಾಗಿದೆ, ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಬಹಳ ಮುಖ್ಯವೆಂದು ನಾವು ಭಾವಿಸುತ್ತೇವೆ, ಮತ್ತು ಸರ್ಕಾರದ ಮೇಲೆ ಒತ್ತಡವನ್ನು ಮುಂದುವರಿಸಬೇಕು,” ಎಂದು ವಿವರಿಸಿದರು.
ಈ ಮಾತುಗಳು, ಹಿಂದಿನ ಸಂದರ್ಶನದಲ್ಲಿಯೂ ಅವರು ವ್ಯಕ್ತಪಡಿಸಿದ್ದ ಚಿಂತನೆಗಳನ್ನು ಪ್ರತಿಧ್ವನಿಸುತ್ತವೆ; ಅಲ್ಲಿ ಅವರು ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಸ್ವತಂತ್ರ ಕಾನೂನು ಮೇಲ್ವಿಚಾರಣೆಯ ಅಗತ್ಯವನ್ನು ಒತ್ತಿಹೇಳಿದ್ದರು.
ಉದ್ವಿಗ್ನತೆಯ ನಡುವೆಯೂ ಪ್ರಗತಿಯ ಸೂಚನೆಗಳು
ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡುತ್ತಾ, ವಂ. ಗುರು ರೋಹನ್ ಅವರು ಈ ವರ್ಷದ ಆರಂಭದಲ್ಲಿ ಮೇಜರ್ ಜನರಲ್ ಸುರೇಶ್ ಸಳ್ಳಾಯ್ ಅವರನ್ನು ಬಂಧಿಸಿರುವುದನ್ನು ಉಲ್ಲೇಖಿಸಿ, ದಾಳಿಗಳ ಸಂಚು ಮತ್ತು ಸಹಭಾಗಿತ್ವದ ಆರೋಪಗಳ ಹಿನ್ನೆಲೆದಲ್ಲಿ ಇದನ್ನು “ಒಂದು ಮಹತ್ವದ ಮುನ್ನಡೆ” ಎಂದು ವಿವರಿಸಿದರು.
ಇದನ್ನೇ ಸಮಯದಲ್ಲಿ, ಹಲವಾರು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಮುಖ್ಯ ಪ್ರಕರಣ—25 ಆರೋಪಿಗಳ ವಿರುದ್ಧ ದಾಖಲಾಗಿ, 23,000ಕ್ಕೂ ಹೆಚ್ಚು ಆರೋಪಗಳನ್ನು ಒಳಗೊಂಡಿರುವುದು—ಮೂರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೀಠದ ಮುಂದೆ ಪ್ರತಿದಿನ ವಿಚಾರಣೆಗೆ ಒಳಪಡುತ್ತಿದೆ. ಪೀಡಿತರೂ ಸಹ ಈಗ ಸಾಕ್ಷ್ಯ ಹೇಳಲು ಆರಂಭಿಸಿದ್ದು, ಇದು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಹಂತವಾಗಿದೆ.
ಇದರ ಜೊತೆಗೆ, 2023ರಲ್ಲಿ ಹೊರಬಂದ ಮಾಹಿತಿಗಳ ಆಧಾರದ ಮೇಲೆ ದಾಳಿಗಳ ಹಿಂದೆ ಇರುವ ವಿಶಾಲ ಸಂಚನ್ನು ಪರಿಶೀಲಿಸುವಂತೆ ತನಿಖೆಗಳು ವಿಸ್ತರಿಸಲ್ಪಟ್ಟಿವೆ. ವಂ. ಗುರು ರೋಹನ್ ಅವರ ಪ್ರಕಾರ, ಈ ತನಿಖಾ ದಿಕ್ಕು ಹಲವು ವ್ಯಕ್ತಿಗಳ ಮೇಲೆ ಹೊಸದಾಗಿ ಪರಿಶೀಲನೆ ನಡೆಸಲು ಕಾರಣವಾಗಿದ್ದು, ಈಗಾಗಲೇ ಕೆಲವು ಬಂಧನಗಳಿಗೂ ಕಾರಣವಾಗಿದೆ.
ಆದಾಗ್ಯೂ, ಈ ಬೆಳವಣಿಗೆಗಳು ವಿರೋಧವಿಲ್ಲದೆ ನಡೆದಿಲ್ಲವೆಂದು ಅವರು ಹೇಳಿದರು. “ಕೆಲವು ವಲಯಗಳಿಂದ ಬಲವಾದ ವಿರೋಧ ವ್ಯಕ್ತವಾಗುತ್ತಿದೆ,” ಎಂದು ವಂ. ಗುರು ರೋಹನ್ ವಿವರಿಸಿದರು. ದೇಶದ ಗೃಹಯುದ್ಧದ ಸಮಯದಲ್ಲಿ ವೀರರೆಂದು ಪರಿಗಣಿಸಲ್ಪಟ್ಟ ಸೈನಿಕ ಅಧಿಕಾರಿಗಳ ವಿರುದ್ಧ ಈ ತನಿಖೆಗಳು “ಮೂಢನಂಬಿಕೆಯ ಆರೋಪಗಳ ಹಿಂಸೆ” (witch hunt) ಎಂಬಂತೆ ನಡೆಯುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಅವರು ಸೂಚಿಸಿದರು.
“ಇದರಿಂದ ಕೇವಲ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧವೇ ಅಲ್ಲ, ಧರ್ಮಸಭೆಯ ವಿರುದ್ಧವೂ ಅಸಮಾಧಾನ ಮೂಡಿದೆ; ಈ ಎಲ್ಲವನ್ನು ನಾವು ಮುಂದೂಡುತ್ತಿದ್ದೇವೆ ಎಂಬ ಆರೋಪಗಳೂ ಕೇಳಿಬರುತ್ತಿವೆ,” ಎಂದು ಅವರು ಸೇರಿಸಿದರು.
ಇಂತಹ ಟೀಕೆಗಳ ನಡುವೆಯೂ, ಅಧಿಕಾರಿಗಳು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಒತ್ತಿಹೇಳಿದರು. “ಅವರು ತಮ್ಮ ಕೈಯಲ್ಲಿ ಸಮರ್ಪಕವಾದ ಸಾಕ್ಷ್ಯಗಳಿದ್ದ ನಂತರವೇ ಈ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ,” ಎಂದು ಅವರು ವಿವರಿಸಿದರು.
ಪಾರದರ್ಶಕತೆಗಾಗಿ ಮುಂದುವರಿದ ಬೇಡಿಕೆಗಳು
ನ್ಯಾಯಾಂಗ ಪ್ರಕ್ರಿಯೆಯೊಂದಿಗೆ ಜೊತೆಯಾಗಿ, ಹಿಂದಿನ ತನಿಖೆಗಳ ವರದಿಗಳನ್ನು ಸಾರ್ವಜನಿಕರಿಗೆ ಪ್ರಕಟಿಸುವಂತೆ ಧರ್ಮಸಭೆ ತನ್ನ ಕೋರಿಕೆಯನ್ನು ಮುಂದುವರಿಸುತ್ತಿದೆ. ಹಿಂದಿನ ಭರವಸೆಗಳಿದ್ದರೂ, ಆ ದಾಖಲೆಗಳು ಇನ್ನೂ ಬಹಿರಂಗಗೊಳ್ಳಲಿಲ್ಲ. “ನಾವು ಕೇಳುತ್ತಿದ್ದೇವೆ, ಮತ್ತು ಈ ದಾಖಲೆಗಳನ್ನು ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡವನ್ನು ಮುಂದುವರಿಸುತ್ತೇವೆ,ಆದರೆ ಆ ಬೇಡಿಕೆ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ”ಎಂದು ವಂ. ಗುರು ರೋಹನ್ ಹೇಳಿದರು.
ಮುಂದುವರಿಯುತ್ತಿರುವ ಪ್ರಗತಿಯನ್ನು ನಿಧಾನಗೊಳಿಸುವ ರಚನಾತ್ಮಕ ಸವಾಲುಗಳನ್ನೂ ಅವರು ಉಲ್ಲೇಖಿಸಿದರು. “ಸೈನಿಕ ವ್ಯವಸ್ಥೆಯ ಒಳಗೇ ಸಾಕಷ್ಟು ವಿರೋಧವನ್ನು ನಾವು ನೋಡುತ್ತಿದ್ದೇವೆ,” ಎಂದು ಅವರು ಹೇಳಿದರು. ಕೆಲವು ಅಧಿಕಾರಿಗಳು ಸಹಕಾರ ನೀಡಲು ಹಿಂಜರಿಯುತ್ತಿರುವುದು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಅವರು ವಿವರಿಸಿದರು. “ತನಿಖಾಧಿಕಾರಿಗಳು ಕೆಲ ಅಧಿಕಾರಿಗಳನ್ನು ವಿಚಾರಿಸಲು ಬಯಸಿದಾಗ, ಪ್ರತಿಕ್ರಿಯೆ ಸದಾ ಸಕಾರಾತ್ಮಕವಾಗಿರುವುದಿಲ್ಲ; ಇದು ಪ್ರಕ್ರಿಯೆಯನ್ನು ಅನಾವಶ್ಯಕವಾಗಿ ನಿಧಾನಗೊಳಿಸುತ್ತದೆ.”
ವಾಸ್ತವಿಕತೆಯೊಂದಿಗೆ ಸಮತೋಲನಗೊಂಡ ಭರವಸೆ
ಈ ಕಷ್ಟಗಳ ನಡುವೆಯೂ, ಭರವಸೆಯನ್ನು ಉಳಿಸಿಕೊಳ್ಳುವುದು ಅಗತ್ಯವೆಂದು ವಂ. ಗುರು ರೋಹನ್ ಒತ್ತಿಹೇಳಿದರು. “ನಾವು ಭರವಸೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ,ನ್ಯಾಯ ಒದಗಿಸಲು ಸಾಧ್ಯವಾಗುವ ಏಕೈಕ ಸರ್ಕಾರ ಇದೇ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಅವರು ಈ ಸಂಪೂರ್ಣ ಪಿತೂರಿಯ ಭಾಗವಾಗಿಲ್ಲ ಎಂದು ನಾವು ನಂಬುತ್ತೇವೆ. ”.”
ಇದೇ ಸಮಯದಲ್ಲಿ, ಪ್ರಮುಖ ಕ್ಷಣಗಳಲ್ಲಿ ದೃಢ ನಿರ್ಧಾರಗಳ ಕೊರತೆಯ ಬಗ್ಗೆ ಅವರು ಮಾತನಾಡಿದರು. “ತೆಗೆದುಕೊಳ್ಳಬೇಕಾದ ಧೈರ್ಯವಾದ ನಿರ್ಧಾರಗಳನ್ನು ನಾವು ಕಾಣುತ್ತಿಲ್ಲ” ಎಂದು ಅವರು ಗಮನಿಸಿದರು. ವಿವಿಧ ಒತ್ತಡಗಳು ತನಿಖೆಗಳ ವೇಗ ಮತ್ತು ದಿಕ್ಕಿನ ಮೇಲೆ ಪ್ರಭಾವ ಬೀರುತ್ತಿವೆ ಎಂಬುದನ್ನು ಅವರು ಸೂಚಿಸಿದರು.
ಈ ಕಾರಣದಿಂದಲೇ, ಸಾರ್ವಜನಿಕರ ನಿರಂತರ ಭಾಗವಹಿಸುವಿಕೆ ಅತ್ಯಾವಶ್ಯಕವೆಂದು ಅವರು ಹೇಳಿದರು. “ನಾವು ಮಾಡುತ್ತಿರುವುದು ನಮ್ಮ ಅಭಿಯಾನವನ್ನು ಇನ್ನಷ್ಟು ವಿಸ್ತರಿಸುವುದಾಗಿದೆ. ತನಿಖೆಗಳು ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಯಲು, ಸರ್ಕಾರದ ಮೇಲೆ ಒತ್ತಡವನ್ನು ನಿರಂತರವಾಗಿ ಹೇರಬೇಕು” ಎಂದು ಅವರು ಪುನರುಚ್ಚರಿಸಿದರು.
ಧರ್ಮಸಭೆಯ ಮುನ್ನಡೆಯ ಸಾಕ್ಷಿ
ಕೊಲಂಬೊ ಮಹಾಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪೂಜ್ಯ ಮಾಲ್ಕಮ್ ರಂಜಿತ್ ಅವರ ನಾಯಕತ್ವದಲ್ಲಿ, ಧರ್ಮಸಭೆ ನ್ಯಾಯಕ್ಕಾಗಿ ನಡೆಯುತ್ತಿರುವ ಹುಡುಕಾಟದಲ್ಲಿ ಮುಂಚೂಣಿಯಲ್ಲಿ ಮುಂದುವರಿಯುತ್ತಿದೆ. ಯಾಜಕರು, ಧಾರ್ಮಿಕ ಸಂಘಗಳು, ಕಾನೂನು ತಜ್ಞರು ಮತ್ತು ಸಾಮಾನ್ಯ ಪ್ರತಿನಿಧಿಗಳನ್ನು ಒಳಗೊಂಡ ರಾಷ್ಟ್ರೀಯ ಮತ್ತು ಧರ್ಮಪ್ರಾಂತ್ಯ ಮಟ್ಟದ ಸಮಿತಿಗಳ ಮೂಲಕ ಈ ಕಾರ್ಯ ನಡೆಯುತ್ತಿದೆ.
ಈ ವರ್ಷದ ಸ್ಮರಣೆಯ ಅಂಗವಾಗಿ, ದಾಳಿಗಳ ವಾರ್ಷಿಕೋತ್ಸವವಾದ ಏಪ್ರಿಲ್ 21ಕ್ಕೂ ಮುನ್ನ ದೇಶವ್ಯಾಪಿ ಪ್ರಾರ್ಥನಾ ದಿನವನ್ನು ಘೋಷಿಸಲಾಗಿದೆ. 2019ರಲ್ಲಿ ದಾಳಿಗೆ ಗುರಿಯಾದ ಸಂತ ಸೆಬಾಸ್ಟಿಯನ್ ದೇವಾಲಯ ಇರುವ ಕಟುವಾಪಿಟಿಯದಲ್ಲಿ ಸಾರ್ವಜನಿಕ ಮೆರವಣಿಗೆಯೊಂದಿಗೆ ಸ್ಮಾರಕ ಪ್ರಾರ್ಥನೆಗಳು ನಡೆಯಲಿವೆ.
ಈ ಉಪಕ್ರಮಗಳನ್ನು ವಂ. ಗುರು ರೋಹನ್ ಆತ್ಮೀಯ ಹಾಗೂ ನಾಗರಿಕ ಸ್ವಭಾವದವುಗಳೆಂದು ವಿವರಿಸಿದರು. “ನಾವು ಸತ್ಯವನ್ನು ತಿಳಿಯಲು ಮತ್ತು ಈ ಬಲಿದಾನಿಗಳಿಗೆ ನ್ಯಾಯ ತರುವ ಹೋರಾಟವನ್ನು ಇನ್ನೂ ಮುಂದುವರಿಸುತ್ತಿದ್ದೇವೆ ಎಂಬುದಕ್ಕೆ ಇದು ಒಂದು ಸಾಕ್ಷಿಯಾಗಿದೆ,” ಎಂದು ಅವರು ಹೇಳಿದರು.
ಬಲಿದಾನಿಗಳನ್ನು ಸ್ಮರಿಸಿ, ಸತ್ಯದ ಹುಡುಕಾಟ
ಈಸ್ಟರ್ ಭಾನುವಾರದಲ್ಲಿ ಧರ್ಮಸಭೆಗಳು ಮತ್ತು ಹೋಟೆಲ್‌ಗಳ ಮೇಲೆ ನಡೆದ ಸಂಯೋಜಿತ ಸ್ಫೋಟ ದಾಳಿಗಳಿಗೆ ಏಳು ವರ್ಷಗಳು ಕಳೆದಿದ್ದರೂ, ದ್ವೀಪದಾದ್ಯಂತ ಅನೇಕ ಕುಟುಂಬಗಳು ಮತ್ತು ಸಮುದಾಯಗಳ ಮನಸ್ಸಿನಲ್ಲಿ ಕಳೆದುಕೊಂಡ ನೋವು ಇನ್ನೂ ಮಾಸದೆ ಉಳಿದಿದೆ.
“ನಾವು ಮುಂದುವರಿಯಲೇಬೇಕು,” ಎಂದು ಅವರು ಹೇಳಿದರು, “ತನಿಖೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ನಾವು ನಂಬುತ್ತೇವೆ, ಆದರೆ ಅವು ಅಂತಿಮ ಹಂತವನ್ನು ತಲುಪಲು ಅವಕಾಶ ನೀಡಬೇಕು.” ಶ್ರೀಲಂಕಾ ಕಳೆದುಕೊಂಡ ಜೀವಗಳನ್ನು ಸ್ಮರಿಸಲು ನಿಲ್ಲುತ್ತಿರುವ ಈ ಸಂದರ್ಭದಲ್ಲಿ, ದೃಢವಾಗಿ, ಸಹನೆಯೊಂದಿಗೆ, ಅಪೂರ್ಣವಾಗಿಯೇ ಸತ್ಯದ ಕೋರಿಕೆ ಇನ್ನೂ ಪ್ರತಿಧ್ವನಿಸುತ್ತಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).