ಮನೋ ಆರೋಗ್ಯದ ಕುರಿತು ವಿಚಾರಸಂಕಿರಣ ನಡೆಸಿಕೊಡುತ್ತಿರುವ ಶಾಲೆಯೊಂದರ ವಿದ್ಯಾರ್ಥಿಗಳೊಂದಿಗೆ ಸಹೋದರಿ  ಕಕಲಿ (ಮುಂಭಾಗದ ಮಧ್ಯದಲ್ಲಿ). (ಚಿತ್ರ ಕೃಪೆ: ಶಾಲೆಯ ಶಿಕ್ಷಕರು) ಮನೋ ಆರೋಗ್ಯದ ಕುರಿತು ವಿಚಾರಸಂಕಿರಣ ನಡೆಸಿಕೊಡುತ್ತಿರುವ ಶಾಲೆಯೊಂದರ ವಿದ್ಯಾರ್ಥಿಗಳೊಂದಿಗೆ ಸಹೋದರಿ ಕಕಲಿ (ಮುಂಭಾಗದ ಮಧ್ಯದಲ್ಲಿ). (ಚಿತ್ರ ಕೃಪೆ: ಶಾಲೆಯ ಶಿಕ್ಷಕರು)  

ಮನೋವಿಜ್ಞಾನ ಮತ್ತು ಶುಭಸಂದೇಶ: ಭಾರತದಲ್ಲಿ ಯುವಜನರಿಗೆ ಭರವಸೆಯನ್ನು ನೀಡುತ್ತಿರುವ ಸಹೋದರಿ ಕಕಲಿ

ತಂತ್ರಜ್ಞಾನ ಆಧಿಪತ್ಯ ಮತ್ತು ಡಿಜಿಟಲೀಕರಣದ ಹಿನ್ನೆಲೆಗಳಲ್ಲಿ, ವಿದ್ಯಾರ್ಥಿಗಳು ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಏಕಾಂತತೆಯನ್ನು ಅನುಭವಿಸುತ್ತಿದ್ದಾರೆ. ಮನೋವೈಜ್ಞಾನಿಕವಾಗಿ ಆಲಿಸುವ ಸೇವೆ ಮತ್ತು ತಮ್ಮ ಧಾರ್ಮಿಕ ಅನುಭವವನ್ನು ಒಂದಾಗಿ ಸೇರಿಸಿ, ಶುದ್ಧೀಕರಣದಲ್ಲಿರುವ ಪವಿತ್ರ ಆತ್ಮಗಳ ಸಹಾಯಕರ ಸಭೆಯ ಸಹೋದರಿ ಕಕಲಿ ಅವರು, ಯುವಜನರ ಗುಣಮುಖತೆಯ ಪಯಣದಲ್ಲಿ ಜೊತೆಗಿದ್ದಾರೆ.

ಲೇಖಕರು: ಸಹೋದರಿ ಇಲ್ಲಾರಿಯ ಡಿ ಲಿಲ್ಲೋ, S.A

ಯುವಜನರಿಗೆ ನಂಬಿಕೆ ಮತ್ತು ಆಲಿಸುವ ವಾತಾವರಣವನ್ನು ನೀಡುವುದು ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸುವುದು ಪಶುದ್ಧೀಕರಣದಲ್ಲಿರುವ ಪವಿತ್ರ ಆತ್ಮಗಳ ಸಹಾಯಕರ ಸಭೆಯ ಸಹೋದರಿ ಕಕಲಿ ಮಾಳಿ ಅವರ ಸೇವೆಯಾಗಿದೆ. ಅವರು ಭಾರತ ದೇಶದ ಪಶ್ಚಿಮ ಬಂಗಾಳದ ಕೊಲ್ಕತ್ತಾದ ಜೆಸುಯಿಟ್ ಸಂಸ್ಥೆ ನಡೆಸುವ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

“ದೇಶದ ಸಾಮಾಜಿಕ ಪರಿಸ್ಥಿತಿ ಯುವಜನರಲ್ಲಿ ವ್ಯಾಪಕವಾಗುತ್ತಿರುವ ಖಿನ್ನತೆಯ ಮೇಲೆ ಬಹಳ ಪ್ರಭಾವ ಬೀರುತ್ತಿದೆ. ರಾಜಕೀಯ ಅನಿಶ್ಚಿತತೆದಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ವ್ಯಾಪಕ ಬಳಕೆಯವರೆಗೆ, ಹಲವಾರು ದಿಕ್ಕುಗಳಲ್ಲಿ ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ,” ಎಂದು ಸಹೋದರಿ ಕಕಲಿ ವಿವರಿಸುತ್ತಾರೆ.

ಈ ಪರಿಸ್ಥಿತಿಯಲ್ಲಿ, ಮನೋವಿಜ್ಞಾನಿಯಾಗಿ ಅವರ ಕೆಲಸವು ವಿದ್ಯಾರ್ಥಿಗಳ ಗುಣಮುಖತೆಯ ಪಯಣದಲ್ಲಿ ಅವರ ಜೊತೆಯಾಗಿರಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ದೇವ ವಾಕ್ಯದ ಜ್ಞಾನವು ಅವರೊಂದಿಗೆ ಕೈಗೊಂಡಿರುವ ಭರವಸೆಯ ಪಯಣದಲ್ಲಿ ಮಾರ್ಗದರ್ಶನ ನೀಡುತ್ತದೆ, ಮಂದವಾಗಿರುವ ಆಸೆಯ ಜ್ವಾಲೆಯನ್ನು ಮತ್ತೆ ಹೊತ್ತಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಆಲಿಸುವಿಕೆ ಮತ್ತು ಜೊತೆ ಸಾಗುವಿಕೆಯ ಸಂಯೋಜನೆ

ಕೊಲ್ಕತ್ತಾದಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಚಿಕಾಗೋದಲ್ಲಿ ಸಲಹಾ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಸಹೋದರಿ ಕಕಲಿ ಅವರು 2024ರಲ್ಲಿ ಚಿಕಿತ್ಸಕಿಯಾಗಿ ಕಾರ್ಯಾರಂಭ ಮಾಡಿ, ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಕಲ್ಯಾಣವನ್ನು ಬೆಂಬಲಿಸುತ್ತಿದ್ದಾರೆ. ತಾವು ಮನೋವಿಜ್ಞಾನದಲ್ಲಿ ಪಡೆದ ಕೌಶಲ್ಯಗಳನ್ನು ಬಳಸಿಕೊಂಡು, ಅವನ್ನು ಸಮರ್ಪಿತ ಜೀವನದ ಮಾನವೀಯ ಮತ್ತು ಆಧ್ಯಾತ್ಮಿಕ ಕೌಶಲ್ಯಗಳೊಂದಿಗೆ ಏಕೀಕರಿಸುವ ಅಗತ್ಯತೆಯನ್ನು ಅವರು ಕ್ರಮೇಣ ಅರಿತುಕೊಂಡರು.

ಒಂದೆಡೆ, ಮನೋವೈಜ್ಞಾನಿಕ ಆಲಿಸುವಿಕೆಯ ವೃತ್ತಿಪರ ಗುಣಲಕ್ಷಣಗಳು ಅವರಿಗೆ ಚಿಕಿತ್ಸೆ ಮೂಲಕ ಪರಿಸ್ಥಿತಿಗಳಲ್ಲಿ ಹಸ್ತಕ್ಷೇಪ ಮಾಡುವ ಅವಕಾಶವನ್ನು ಒದಗಿಸುತ್ತವೆ. ಮತ್ತೊಂದೆಡೆ, ಕ್ರಿಸ್ತನಲ್ಲಿ ದೊರೆಯುವ ರಕ್ಷಣಾತ್ಮಕ ಅನುಭವವು, ಸಮಾಜದ ಸಂಕಷ್ಟಗಳಿಗೆ ಅಂತ್ಯ ಕಾಣದ ಸಂದರ್ಭಗಳಲ್ಲಿಯೂ, ಅವರನ್ನು ಆಶೆಯಲ್ಲಿ ಸ್ಥಿರಗೊಳಿಸುತ್ತದೆ. “ಮನೋವಿಜ್ಞಾನಿಯಾಗಿ ಮತ್ತು ಸಮರ್ಪಿತ ಜೀವನವನ್ನು ನಡೆಸುವವಳಾಗಿ, ನನ್ನ ಕೆಲಸವು ಹೃದಯದಲ್ಲಿ ಗಾಯಗೊಂಡವರನ್ನು ಬೆಂಬಲಿಸುವ ಕಾರ್ಯಕ್ಕೆ ಸಂಬಂಧಿಸಿದೆ,” ಎಂದು ಸಹೋದರಿ ಕಕಲಿ ಹೇಳಿದ್ದಾರೆ.

ಸಂಕಷ್ಟದ ಸಂದರ್ಭಗಳಲ್ಲಿ ಅಥವಾ ನೋವಿನ ಅನುಭವಗಳಲ್ಲಿ, ರೋಗಿಗಳ ಜೊತೆ ಹತ್ತಿರವಾಗಿ ಇರುವುದೂ ಮತ್ತು ಜೀವಿತದ ಕಡೆಗೆ ಜೊತೆ ಸಾಗುವುದೂ ಪವಿತ್ರ ಶನಿವಾರದ ಕತ್ತಲೆಯಿಂದ ಪುನರುತ್ಥಾನದ ಬೆಳಕಿನವರೆಗೆ ಇರುವ ಪಯಣದಂತೆಯೇ ಎಂದು ಅವರು ಸೇರಿಸುತ್ತಾರೆ. ಯುವಜನರು ತಮ್ಮ ಜೀವನದ ಅರ್ಥವನ್ನು ಕಳೆದುಕೊಂಡಿದ್ದೇವೆಂದು ಭಾವಿಸುವ ಈ ಅನಿಶ್ಚಿತ ಸಮಯದಲ್ಲಿ ಯುವಜನರ ಪಕ್ಕದಲ್ಲೇ ನಿಲ್ಲಲು ಸಹೋದರಿ ಕಕಲಿ ಬಯಸುತ್ತಾರೆ.

ಸ್ವೀಕಾರ ಮತ್ತು ಕರುಣೆಯನ್ನು ನೀಡುವ ಆಧಾರ

ಸಾಮಾಜಿಕ ಪರಿಸ್ಥಿತಿಯಲ್ಲಿ ಸ್ಪಷ್ಟ ದಿಕ್ಕುಗಳಿಲ್ಲದ ಸಂದರ್ಭದಲ್ಲಿ, ಯುವಜನರಿಗೆ ಮನೋವೈಜ್ಞಾನಿಕ ಬೆಂಬಲವನ್ನು ನೀಡುವುದು ಅವರು ಹಿಡಿದುಕೊಳ್ಳಲು ಸಾಧ್ಯವಾದ ಒಂದು ಆಧಾರವನ್ನು ಒದಗಿಸುವಂತಿದೆ. ಸಹೋದರಿ ಕಕಲಿ ಅವರು ತಮ್ಮ ಬಳಿಗೆ ಬರುವ ಯುವಜನರಿಗೆ ಸೂಕ್ತವಾದ ಸ್ಥಳವನ್ನು ಒದಗಿಸಲು ಪ್ರಯತ್ನಿಸುತ್ತಾರೆ. “ಸಲಹಾ ಪ್ರಕ್ರಿಯೆಯಲ್ಲಿ, ತೀರ್ಪು ನೀಡದ ಮತ್ತು ಕರುಣೆಯಿಂದ ಕೂಡಿದ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ನಾನು ಪ್ರಯತ್ನಿಸುತ್ತೇನೆ, ಅಲ್ಲಿ ಯುವಜನರು ಸ್ವತಂತ್ರವಾಗಿ ತಮ್ಮನ್ನು ವ್ಯಕ್ತಪಡಿಸಬಹುದು,” ಎಂದು ಅವರು ಹೇಳುತ್ತಾರೆ.

ಮಾತನಾಡಲು ಅವಕಾಶ ಇರುವಂತಹ ಒಂದು ಸ್ಥಳವು ಕ್ರಮೇಣ ವಿಮುಕ್ತಿಯನ್ನು ನೀಡುತ್ತದೆ ಮತ್ತು “ಅವರು ತಮ್ಮ ಒಳಗಿನ ಶಕ್ತಿಯನ್ನು ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಮರುಕಂಡುಕೊಳ್ಳಲು ಸಹಾಯ ಮಾಡುತ್ತದೆ.” ಈ ಪಯಣ ನಿಧಾನವಾಗಿಯೂ ಅನಿಶ್ಚಿತವಾಗಿಯೂ ಇರುತ್ತದೆ; ಇಲ್ಲಿ ಕರುಣಾಮಯ ಸಮಾರ್ಯದವನ ಮನೋಭಾವ ಅಗತ್ಯವಾಗಿರುತ್ತದೆ. ಇದು ಸಂಪೂರ್ಣ ಬೋಧನಾ ಸಮುದಾಯದ ಭಾಗವಹಿಸುವಿಕೆ, ನಿರಂತರ ಅಧ್ಯಯನ ಮತ್ತು ಕರುಣೆಯಿಂದ ಕೂಡಿದ ವೃತ್ತಿಪರ ಸೇವೆಯನ್ನು ಒಳಗೊಂಡ ಪ್ರಕ್ರಿಯೆಯಾಗಿದೆ ಎಂದು ಅವರು ವಿವರಿಸುತ್ತಾರೆ.

ಖಿನ್ನತೆಗೆ ಕಾರಣವಾಗಿರುವ ಸಮಾಜ ಮತ್ತು ತಂತ್ರಜ್ಞಾನ

ಸಹೋದರಿ ಕಕಲಿ ಅವರು ಯುವಜನರಲ್ಲಿ ಗಮನಿಸಿದ ಸಮಸ್ಯೆಗಳೆಂದರೆ: ಭವಿಷ್ಯದ ಬಗ್ಗೆ ಆತಂಕ, ಅಪನಂಬಿಕೆ, ಭಾವನಾತ್ಮಕ ಕುಸಿತಗಳು ಮತ್ತು ಅಸ್ಥಿರ ಸಂಬಂಧಗಳು. “ಅವರಲ್ಲಿ ಹಲವರಿಗೆ ದೊಡ್ಡ ಕನಸುಗಳಿವೆ, ಆದರೆ ಅವರಿಗೆ ತಾಳ್ಮೆಯ ಕೊರತೆಯಿದೆ,” ಎಂದು ಅವರು ವಿವರಿಸುತ್ತಾರೆ. “ಅವರು ವಿಫಲತೆಗಳನ್ನು ಎದುರಿಸಿದಾಗ, ಅದನ್ನು ಸವಾಲುಗಳಾಗಿ ನೋಡುವ ಬದಲು ವೈಯಕ್ತಿಕ ಸೋಲಾಗಿ ನೋಡುತ್ತಾರೆ.”

ಈ ಅಶಾಂತಿಯ ಮೂಲದಲ್ಲಿ ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆ ಇದೆ, ಇದನ್ನು ಸಹೋದರಿ ಕಕಲಿ ಮತ್ತು ಅವರ ಸಹೋದ್ಯೋಗಿಗಳು ಗಮನದಲ್ಲಿಟ್ಟುಕೊಳ್ಳುತ್ತಾರೆ: ರಾಜಕೀಯ ಅನಿಶ್ಚಿತತೆ, ಸಾಮಾಜಿಕ ಒತ್ತಡ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪಕ ಪ್ರಭಾವವು ಮಾನವ ಸಂಬಂಧಗಳನ್ನು ಮರುರೂಪಗೊಳಿಸಿದೆ.

ಸಹೋದರಿ ಕಕಲಿ ಅವರ ಪ್ರಕಾರ, ರಾಜಕೀಯ ಧ್ರುವೀಕರಣವು ಸಮಾಜದಲ್ಲಿ ವಿಭಜನೆಯನ್ನು ಹೆಚ್ಚಿಸುತ್ತದೆ, ಇದರಿಂದ ಹಿಂಸಾಚಾರ ಮತ್ತು ಬಡತನ ಉಂಟಾಗುತ್ತದೆ. ಅತಿಯಾದ ಡಿಜಿಟಲ್ ಸಂಪರ್ಕವು ಯುವಜನರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ ಮತ್ತು ಮುಖಾಮುಖಿ ಸಂಘರ್ಷ ಹಾಗೂ ಸ್ಪರ್ಧೆಯನ್ನು ಹೆಚ್ಚಿಸುತ್ತದೆ.

ವೈಯಕ್ತಿಕ ಗುರುತುಗಳು “ಲೈಕ್ಸ್”ಗಳ ಸಂಖ್ಯೆಯಿಂದ ರೂಪುಗೊಳ್ಳುತ್ತವೆ ಮತ್ತು ಅವುಗಳಿಗೆ ಮೌಲ್ಯ ನೀಡಲಾಗುತ್ತದೆ. “ಅವರಲ್ಲಿ ಹಲವರು, ಅವಾಸ್ತವ ನಿರೀಕ್ಷೆಗಳನ್ನು ಹೊಂದಿದ್ದಾರೆ, ಸಂವಹನ ಸಾಮರ್ಥ್ಯ ಕಡಿಮೆ ಇದೆ ಮತ್ತು ಏಕಾಂತತೆಯ ಕಡೆಗೆ ಒಲವು ತೋರುತ್ತಾರೆ” ಎಂದು ಸಹೋದರಿ ಕಕಲಿ ಹೇಳುತ್ತಾರೆ.

ಪರಸ್ಪರ ರೂಪಾಂತರದ ಕಡೆಗೆ ಜೊತೆಗೂಡಿ ನಡೆಯುವ ಪಯಣ

ಸಹೋದರಿ ಕಕಲಿ ಈ ಸವಾಲನ್ನು ಗಂಭೀರವಾದ ಅಪೋಸ್ತೋಲಿಕ ಕರೆಯಾಗಿ ಕಾಣುತ್ತಿದ್ದು, ಯುವಜನರ ಒಳಗಿನ ಅಶಾಂತಿಗೆ ಧ್ವನಿ ನೀಡುವುದಕ್ಕೂ ಮತ್ತು ಅವರ ವ್ಯಕ್ತಿತ್ವ ನಿರ್ಮಾಣದ ಪಯಣದಲ್ಲಿ ಜೊತೆಗಿರುವುದಕ್ಕೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ; ಮತ್ತು ಈ ಸೇವೆಯ ಮೂಲಕ ತಾವೂ ಭರವಸೆಯನ್ನು ಕಲಿಯುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

“ಯುವಜನರು ಅತ್ಯಂತ ನಾಜೂಕಿನ ಸ್ಥಿತಿಯಲ್ಲಿ ಇರುವ ಸಮಯದಲ್ಲಿ ಅವರ ಪಕ್ಕದಲ್ಲಿ ನಡೆಯುವ ಅವಕಾಶ ನನಗೆ ದೊರೆತಿದೆ. ಇದರಿಂದ ನನ್ನಲ್ಲೂ ಒಂದು ಬಗೆಯ ಮಾರ್ಪಾಡು ಕಾಣುತ್ತದೆ,” ಎಂದು ಅವರು ವಿವರಿಸುತ್ತಾರೆ. ಪ್ರತಿದಿನದ ಈ ಅನುಭವವು ಆಲಿಸುವಿಕೆ, ನಾಜೂಕು ಮತ್ತು ತಾಳ್ಮೆಯ ಬಗ್ಗೆ ಪಾಠವಾಗಿದ್ದು, ಸಹೋದರಿ ಕಕಲಿ ಅವರು ಯುವಜನರ ಜೀವನಗಳೊಂದಿಗೆ ತಾವು ಸಂಪರ್ಕ ಹೊಂದಲು ಮತ್ತು ಅವರ ಜೊತೆ ನಡೆಯಲು ಕಲಿಯುತ್ತಾರೆ.

ಗುಣಮುಖತೆಯ ಪಥದಲ್ಲಿ ಸಹಾಯ ಮಾಡುವಾಗ, ಯುವಜನರಲ್ಲಿ ಕಾಣಿಸುವ ಸಣ್ಣ ಆದರೆ ಸ್ಪಷ್ಟವಾದ ರೂಪಾಂತರದ ಸೂಚನೆಗಳನ್ನು ನೋಡುವುದು, ಅವರ ಪಕ್ಕದಲ್ಲಿ ನಿಲ್ಲುವ ಇಚ್ಛೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಸಮುದ್ರದಲ್ಲಿನ ಒಂದು ಹನಿಯಂತೆ ಕಾಣಬಹುದು, ಆದರೆ “ಆಶೆ ಎಂಬುದು ನಿರಾಶೆ ಮತ್ತು ಸಾಧ್ಯತೆಯ ನಡುವೆ ಇರುವ ಒಂದು ಸೇತುವೆಯಾಗಿದೆ,” ಎಂದು ಅವರು ಅಂತಿಮವಾಗಿ ಹೇಳುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಏಪ್ರಿಲ್ 2026, 16:25