ರೋಮ್‌ನಲ್ಲಿರುವ ಅಮೆರಿಕನ್ ಯಾಜಕರ ‘ಮನೆ’ಗೆ ಸ್ವಾಗತ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
“ನಾನು ರೋಮ್‌ನಲ್ಲಿ ಕಳೆದ ಸಮಯದ ಮೂಲಕ ಆ ಕರೆಗೆ ಸಿದ್ಧನಾಗಿದ್ದೇನೆ ಎಂಬ ಭಾವನೆ ನನ್ನೊಳಗೆ ಮೂಡುತ್ತದೆ. ಮೊದಲನೆಯದಾಗಿ, ಈ ಸಮುದಾಯದಲ್ಲಿ ನಮಗೆ ಪ್ರಭುವಿನ ಮೇಲಿನ ನಮ್ಮ ಪ್ರೀತಿ ಇನ್ನಷ್ಟು ಆಳವಾಗಲು, ಇನ್ನಷ್ಟು ಉರಿಯಲು ಸಮಯವೂ ದೊರೆಯುತ್ತದೆ, ಸ್ಥಳವೂ ದೊರೆಯುತ್ತದೆ….”
ಈ ರೀತಿಯಲ್ಲಿ ಜಗದ್ಗುರುಗಳ ಉತ್ತರ ಅಮೇರಿಕಾದ ಕಾಲೇಜಿನ (ಪೊಂಟಿಫಿಕಲ್ ನಾರ್ತ್ ಅಮೆರಿಕನ್ ಕಾಲೇಜಿನ) ಕಾಸಾ ಸಂತಾ ಮಾರಿಯಾ ಬಗ್ಗೆ ವಿವರಿಸಿದವರು, ಅಮೆರಿಕದ ಮಿಲ್ವಾಕಿ ಮಹಾಧರ್ಮಪ್ರಾಂತ್ಯದ ವಂ. ಗುರು ಕಾರ್ಲೋಸ್ ಲೊಂಡೋನೊ; ಅವರು ರೋಮ್‌ನ ಪೊಂಟಿಫಿಕಲ್ ಯುನಿವರ್ಸಿಟಿ ಆಫ್ ಸೆಂಟ್ ಥಾಮಸ್ ಅಕ್ವೈನಸ್ (ಆಂಜೆಲಿಕಮ್) ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮೂಲತಃ ಕೊಲಂಬಿಯಾದವರಾದ ಅವರು 2020ರ ಮೇನಲ್ಲಿ ಮಿಲ್ವಾಕಿ ಮಹಾಧರ್ಮಪ್ರಾಂತ್ಯಕ್ಕಾಗಿ ಯಾಜಕರಾಗಿ ಅಭಿಷೇಕಗೊಂಡಿದ್ದು, “ಕಾಸಾ”ಯಲ್ಲಿ ವಾಸಿಸುತ್ತಿದ್ದಾರೆ.
ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಈ ಕಟ್ಟಡದ ಒಳನೋಟವನ್ನು ವಿಶೇಷವಾಗಿ ನೀಡಲಾಗಿದ್ದು, ಅಲ್ಲಿ ವಾಸಿಸುವ ಯಾಜಕರೊಂದಿಗೆ ಮತ್ತು ಗೃಹದ ಮೇಲ್ವಿಚಾರಕರಾದ ಮಾನ್ಸಿಂನೋರ್(ಕಥೋಲಿಕ ಧರ್ಮಸಭೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಗೌರವಾನ್ವಿತ ಗುರುಗಳಿಗೆ ಜಗದ್ಗುರುಗಳು ನೀಡುವ ವಿಶೇಷ ಗೌರವ ಸೂಚಕ ಪದವಿ ಅಥವಾ ಬಿರುದು ಇದಾಗಿದೆ) ವಿಲಿಯಂ ಮಿಲಿಯಾ, ಒಬ್ಬ ಹಳೆಯ ವಿದ್ಯಾರ್ಥಿ, ಅವರೊಂದಿಗೆ ಮಾತುಕತೆ ನಡೆಸಲಾಯಿತು.
ಪೊಂಟಿಫಿಕಲ್ ನಾರ್ತ್ ಅಮೆರಿಕನ್ ಕಾಲೇಜಿನ ಒಂದು ವಿಭಾಗವಾಗಿರುವ ಕಾಸಾ ಸಂತಾ ಮಾರಿಯಾ, ಇಂಗ್ಲಿಷ್ ಮಾತನಾಡುವ ಯಾಜಕರಿಗೆ ಮುಂದುವರಿದ ಆಧ್ಯಾತ್ಮಿಕ ತರಬೇತಿ ಮತ್ತು ವಾಸದ ಸ್ಥಳವಾಗಿದ್ದು, ಅವರನ್ನು ಅವರ ಮೇಲಧಿಕಾರಿಗಳು ರೋಮ್‌ನಲ್ಲಿ ಉನ್ನತ ಮಟ್ಟದ ಅಧ್ಯಯನಕ್ಕಾಗಿ ನಿಯೋಜಿಸುತ್ತಾರೆ. ಮಾನ್ಸಿಂನೋರ್. ಮಿಲಿಯಾ ಅವರು 2025ರ ಜೂನ್ 30ರಂದು ತಮ್ಮ ಆರು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ವಂ. ಜೇಮ್ಸ್ ಕಾನ್, SJ ಅವರ ನಂತರ ಈ ಹುದ್ದೆಯನ್ನು ವಹಿಸಿಕೊಂಡರು.
ನಿತ್ಯನಗರದ ಹೃದಯಭಾಗದಲ್ಲಿ ಇರುವ ಕಾಸಾ ಸಂತಾ ಮಾರಿಯಾ ಪ್ರಾರ್ಥನಾತ್ಮಕ, ಶೈಕ್ಷಣಿಕ ಮತ್ತು ಸಹೋದರತ್ವದ ವಾತಾವರಣವನ್ನು ಒದಗಿಸುತ್ತದೆ. ಅಮೆರಿಕದ ಧರ್ಮಪ್ರಾಂತ್ಯಗಳಿಂದ ಬಂದ ಯಾಜಕರು ತಮ್ಮ ಧರ್ಮಾಧ್ಯಕ್ಷರುಗಳ ನಿಯೋಜನೆಯೊಂದಿಗೆ ಇಲ್ಲಿ ಅಧ್ಯಯನ ಮಾಡುತ್ತಿದ್ದು, ಪೊಂಟಿಫಿಕಲ್ ವಿಶ್ವವಿದ್ಯಾಲಯಗಳು ನೀಡುವ ತತ್ವಶಾಸ್ತ್ರ, ಧರ್ಮಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಧರ್ಮಸಭಾ ಕಾನೂನಿನಿಂದ ಹಿಡಿದು ಸರ್ವಧರ್ಮ ಐಕ್ಯತೆ, ವಿವಾಹ ಮತ್ತು ಕುಟುಂಬ ಅಧ್ಯಯನಗಳು, ಮನಃಶಾಸ್ತ್ರ ಮತ್ತು ಗುರುಗಳ ತರಬೇತಿ ಮುಂತಾದ ವಿವಿಧ ವಿದ್ಯಾ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುತ್ತಾರೆ.
ಕಾಸಾ ಸಂತಾ ಮಾರಿಯಾದ ಸಮುದಾಯ ಜೀವನವು ವೈಯಕ್ತಿಕ ಮತ್ತು ಸಾಮೂಹಿಕ ಪ್ರಾರ್ಥನೆ, ಪರಸ್ಪರ ಬೆಂಬಲ ಮತ್ತು ಯಾಜಕ ಸಹೋದರತ್ವದ ಸಂತೋಷಪೂರ್ಣ ಮನೋಭಾವದಿಂದ ಗುರುತಿಸಲ್ಪಟ್ಟಿದ್ದು, ಅಲ್ಲಿ ವಾಸಿಸುವವರ ಗಂಭೀರ ಶೈಕ್ಷಣಿಕ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಆಂಜೆಲಿಕಮ್‌ನಲ್ಲಿ ಅಧ್ಯಯನ ಮಾಡುತ್ತಿರುವ ಮಿಲ್ವಾಕಿ ಮಹಾಧರ್ಮಪ್ರಾಂತ್ಯದ ಯಾಜಕರಾದ ವಂ. ಗುರು ಕಾರ್ಲೋಸ್ ಲೊಂಡೋನೊ ತಮ್ಮ ಅನುಭವವನ್ನು ಪರಾಮರ್ಶಿಸಿದರು.
ವಿಶ್ವಾಸದ ಮೇಲೆ ಹೆಚ್ಚುವ ಪ್ರೀತಿ
“ ರೋಮ್‌ನಲ್ಲಿ ಕಳೆಯುವ ಸಮಯ ನನಗೆ ಹೊತ್ತಿ ಉರಿಯುವ ಅವಕಾಶವಾಗಿದೆ,” ಎಂದು ಅವರು ಹೇಳಿದರು. “ಇಲ್ಲಿ ಪೂಜ್ಯ ಜಗದ್ಗುರುಗಳಿದ್ದಾರೆ; ನಮ್ಮ ಸುತ್ತಲೂ ಅನೇಕ ಸಂತರು, ವಿಶ್ವಾಸದ ಸಾಕ್ಷಿಗಳು ಇದ್ದಾರೆ. ಇಲ್ಲಿ ಧರ್ಮಸಭೆಯ ಮೇಲೂ ಪ್ರಭುವಿನ ಮೇಲೂ ಪ್ರೀತಿಯಲ್ಲಿ ಹೊತ್ತಿ ಉರಿಯುವುದೇ,ಇಲ್ಲಿ ನಮಗೆ ಮಾಡಲು ಸಿಗುವ ಅಧಿಕೃತ ಕೆಲಸ” ಎಂದು ಅವರು ಒತ್ತಿಹೇಳಿದರು.
ಇದನ್ನೇ ತನ್ನ ದೇಶಕ್ಕೆ ಕೊಂಡೊಯ್ಯಬೇಕೆಂದು ಅವರು ಬಯಸುತ್ತಾರೆ . “ನಮ್ಮ ಕಥೋಲಿಕ ವಿಶ್ವಾಸದ ಒಳ್ಳೆಯತನದ ಸಾಕ್ಷಿ, ಧರ್ಮಸಭೆಯ ಒಳ್ಳೆಯತನ, ಮತ್ತು ಅಮೆರಿಕಾದ ಎಲ್ಲ ಭಾಗಗಳಿಂದ ಬಂದ ಅನೇಕ ಯಾಜಕರ ಒಳ್ಳೆಯತನವನ್ನು ನನ್ನ ದೇಶಕ್ಕೆ ಕೊಂಡೊಯ್ಯಬೇಕು” ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಲ್ಲಿ ಕಾಸಾ ಸಂತಾ ಮಾರಿಯಾದಲ್ಲಿನ ತನ್ನ ಜೀವನ “ಕುಟುಂಬ”ವಾಗಿ ಮಾರ್ಪಟ್ಟಿದೆ ಎಂದು ಅವರು ಮನನ ಮಾಡಿದರು. “ನಿಜವಾಗಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ನಾನು ವಿಶೇಷ ರೀತಿಯಲ್ಲಿ ಮನೆಯಲ್ಲಿರುವ ಅನುಭವ ಪಡೆದಿದ್ದೆನೆ. ಲ್ಯಾಟಿನ್ ಅಮೆರಿಕನ್ ಆಗಿರುವುದರಿಂದ ಅರ್ಜೆಂಟಿನಾದವರಾದ ಜಗದ್ಗುರು ಫ್ರಾನ್ಸಿಸ್ ಅವರೊಂದಿಗೆ ನನಗೆ ಹತ್ತಿರದ ಸಂಬಂಧವಿತ್ತು; “ಹಾಗೂ ಈಗಿನ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗಿನ ಸಂಬಂಧ-ನಾವಿಬ್ಬರೂ ಅಮೇರಿಕನ್ ಯಾಜಕರು, ಪ್ರೇಷಿತ ಪೇತ್ರರೇ ನನ್ನನ್ನು ವೈಯಕ್ತಿಕವಾಗಿ ಅರಿತಿರುವ ಮತ್ತು ಹತ್ತಿರವಾಗಿರುವ ಅನುಭವವಾಗುತ್ತದೆ" ಎಂದು ಅವರು ಹೇಳಿದರು.
ವಂ. ಗುರು ಕಾರ್ಲೋಸ್ ಅವರ ಮಾತಿನಲ್ಲಿ, ಈ ಇಬ್ಬರು ಜಗದ್ಗುರುಗಳೊಂದಿಗೆ ವರ್ಷಗಳಿಂದ ಹೊಂದಿರುವ ಈ ಸಂಬಂಧವು ಅವರಿಗೆ ಇನ್ನಷ್ಟು ಹತ್ತಿರದ ಅನುಭವವನ್ನು ನೀಡಿದ್ದು, ತಮ್ಮ ಧಾರ್ಮಿಕ ಸೇವೆಯನ್ನು ಮತ್ತಷ್ಟು ಪ್ರೇರೇಪಿಸಿದೆ.
ಪ್ರಭುವು ಎಲ್ಲರನ್ನು ಪ್ರೀತಿಸುವಂತೆ ಪ್ರೀತಿಸುವ ಯಾಜಕರು
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಸಂದೇಶಗಳಲ್ಲಿ ಯಾವುದು ಅವರನ್ನು ಸ್ಪರ್ಶಿಸಿತು ಎಂದು ಕೇಳಿದಾಗ, ಅವರು ಕ್ರಿಸ್ತನಿಗೆ ಹತ್ತಿರವಾಗುವ ಕರೆಯನ್ನು ಉಲ್ಲೇಖಿಸಿದರು.“ಪೂಜ್ಯ ಜಗದ್ಗುರುಗಳ ಕರೆಯೆಂದರೆ ಪ್ರಭುವಿನ ಬಳಿಗೆ ಹೋಗುವುದು, ಪ್ರಭುವಿನ ಮೇಲೆ ಪ್ರೀತಿಯಲ್ಲಿ ಬೀಳುವುದು. ‘ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ’ ಎಂದು ಪ್ರಭು ಹೇಳುವಂತೆ ಅವರು ಪ್ರೀತಿಸುವವರನ್ನು ನಾವು ಇನ್ನಷ್ಟು ಉರಿಯುವ ಪ್ರೀತಿಯಿಂದ ಪ್ರೀತಿಸುವುದು. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಕರೆ ಕ್ರಿಸ್ತನ ಮೇಲೆ ಹೆಚ್ಚಿನ ಪ್ರೀತಿಗೆ; ಅಲ್ಲಿಂದ ಧರ್ಮಸಭೆಯನ್ನು ಪ್ರೀತಿಸಲು, ಮತ್ತು ಲೋಕದಲ್ಲಿರುವ ಎಲ್ಲ ಪುರುಷರು ಹಾಗೂ ಸ್ತ್ರೀಯರನ್ನು ಪ್ರೀತಿಸಲು,” ಎಂದು ಅವರು ಹೇಳಿದರು.
ಈ ಕರೆಗಾಗಿ ತಾನು ಇಲ್ಲಿ ರೋಮ್‌ನಲ್ಲಿ ಕಳೆದ ಸಮಯದಿಂದ ಸಿದ್ಧನಾಗಿದ್ದೇನೆ ಎಂಬ ಭಾವನೆ ಇದೆ ಎಂದು ಅವರು ಹೇಳಿದರು. “ಮೊದಲನೆಯದಾಗಿ, ಈ ಸಮುದಾಯದಲ್ಲಿ ನಮಗೆ ಪ್ರಭುವಿನ ಮೇಲಿನ ಪ್ರೀತಿ ಇನ್ನಷ್ಟು ಬೆಳೆಯಲು, ಮತ್ತು ನಾವು ಪ್ರತಿಯೊಬ್ಬರೂ ಒಂದು ವಿಶೇಷ ಆಶೀರ್ವಾದ ಎಂಬುದನ್ನು ಅರಿಯಲುಸಮಯವೂ ಇದೆ, ಸ್ಥಳವೂ ಇದೆ.”
ಎಲ್ಲ ಯಾಜಕರು ವಿಭಿನ್ನವಾಗಿ ಯೋಚಿಸಬಹುದು, ಮತ್ತು ವೈಯಕ್ತಿಕ ಸಮಯದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಾರ್ಥಿಸಬಹುದು ಎಂಬುದನ್ನು ಅವರು ಒಪ್ಪಿಕೊಂಡರೂ, ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಎಂದರು. “ನಾವು ಎಲ್ಲರೂ ಒಂದು ಕುಟುಂಬ. ಇದನ್ನೆಲ್ಲ ನನ್ನೊಡನೆ ಅಮೆರಿಕಕ್ಕೆ ಕೊಂಡೊಯ್ಯಲು ನಾನು ಎದುರು ನೋಡುತ್ತಿದ್ದೇನೆ. ಒಗ್ಗಟ್ಟು ಸಾಧ್ಯವೆಂಬುದನ್ನು ನಿಜವಾಗಿ ಸಾರಲು ನಾನು ಸಿದ್ಧನಾಗಿದ್ದೇನೆ. ವಿಭಿನ್ನತೆಯಲ್ಲಿಯೇ ಏಕತೆ — ನಾವು ಸೇರಿ ಸಾಧಿಸಬಹುದಾದ ವಾಸ್ತವಿಕತೆ,” ಎಂದು ಅವರು ಹೇಳಿದರು.
ಮಾನ್ಸಿಂನೋರ್ ಮಿಲಿಯಾ: ‘ಇಲ್ಲಿ ಯಾಜಕರು ಅಪಾರವಾಗಿ ಸಮೃದ್ಧರಾಗುತ್ತಾರೆ’
ಮೇಲ್ವಿಚಾರಕರಾದ ಮಾನ್ಸಿಂನೋರ್ ಮಿಲಿಯಾ ಸಮುದಾಯದ ಜೀವನ ಮತ್ತು ಅದರ ಧ್ಯೇಯದ ಬಗ್ಗೆ ಚಿತ್ರಣ ನೀಡಿದರು.
“ಇಲ್ಲಿ ಅಧ್ಯಯನ ಮಾಡಿದ ಯಾಜಕರು ತಮ್ಮ ಸೇವೆಗೆ ಮರಳುವಾಗ ಧರ್ಮಕೇಂದ್ರ ಯಾಜಕರಾಗಿಯೂ, ಆಡಳಿತ ಸೇವೆಯಲ್ಲಿಯೂ — ವಿಶ್ವಾಸಿಗಳನ್ನು ಮಾರ್ಗದರ್ಶನ ಮಾಡುವುದಕ್ಕೂ, ಅಮೆರಿಕಾದ ಧರ್ಮಸಭೆಯನ್ನು ಕಟ್ಟುವುದಕ್ಕೂ ಅಪಾರವಾಗಿ ಸಮೃದ್ಧರಾಗುತ್ತಾರೆ” ಎಂದು ಅವರು ಹೇಳಿದರು. ಇಂದಿನ ಸಮಾಜದಲ್ಲಿ ವಿಭಜನೆ ಹೆಚ್ಚಾಗಿದೆ, ಜನರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅವರು ಒಪ್ಪಿಕೊಂಡು, ಸುವಾರ್ತೆಯ ಸಂದೇಶವು ಪ್ರತಿಯೊಬ್ಬರಿಗೂ, ಅವರವರ ಪರಿಸ್ಥಿತಿಯಲ್ಲಿ ತಲುಪಬೇಕೆಂದು ಹೇಳಿದರು. “ಹೀಗಾಗಿ, ಒಬ್ಬ ಯಾಜಕನು ತನ್ನ ದೇಶಕ್ಕೆ ಹಿಂತಿರುಗಿ, ಆಧ್ಯಾತ್ಮಿಕವಾಗಿಯೂ, ಬೌದ್ಧಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿಕೊಂಡು, ಆ ಪರಿಸ್ಥಿತಿಯಲ್ಲಿರುವ ಜನರಿಗೆ ಈ ಸಂದೇಶವನ್ನು ಸಾರಬಲ್ಲವನಾದರೆ, ಅವನು ಮಹತ್ವದ ಪ್ರೇಷಿತ ಸೇವೆಯನ್ನು ಮಾಡುತ್ತಿದ್ದಾನೆ. ಅದಕ್ಕಾಗಿಯೇ ನಾವು ಇಲ್ಲಿ ಇದ್ದೇವೆ. ಅದನ್ನು ಉತ್ತೇಜಿಸಲು ನಾವು ಇಲ್ಲಿದ್ದೇವೆ,” ಎಂದು ಅವರು ಹೇಳಿದರು.
ವಿದೇಶದಲ್ಲಿ ಸೇವೆ ಮಾಡುವ ಭವಿಷ್ಯವಿಲ್ಲದಿದ್ದರೂ ಸಹ, ಯಾಜಕರು ಈ ಅನುಭವದಿಂದ ಲಾಭ ಪಡೆಯುತ್ತಾರೆ ಎಂದು ಅವರು ಹೇಳಿದರು. “ಅಮೆರಿಕನ್ ಕಾಲೇಜಿನ ಅನುಭವದಲ್ಲಿ — ಗುರುತರಬೇತಿಕೇಂದ್ರದಲ್ಲಿ ವಿಭಾಗದಲ್ಲಿಯೂ, ಉನ್ನತ ಅಧ್ಯಯನದಲ್ಲಿಯೂ — ಒಂದು ಮಹತ್ವದ ಅಂಶವೆಂದರೆ, ಇಲ್ಲಿ ವಿದೇಶದಲ್ಲಿ ವಾಸಿಸಿ, ಭಾಷೆಯನ್ನು ಬಳಸಿಕೊಂಡು, ಸುವಾರ್ತೆಯ ಬಗ್ಗೆ ಮಾತನಾಡುವುದು, ಪ್ರಭುವಿನ ಬಗ್ಗೆ ಮಾತನಾಡುವುದು, ವಿಶ್ವಾಸದ ರಹಸ್ಯಗಳನ್ನು ಬೇರೆ ಭಾಷೆಯಲ್ಲಿ ಆಲೋಚಿಸುವುದು — ಇವು ನಮ್ಮ ದೇಶಕ್ಕೆ ಹಿಂತಿರುಗಿ, ಜಗತ್ತಿನಾದ್ಯಂತ ಪ್ರೇಷಿತರು ಸಾರುತ್ತಿರುವ ಅದೇ ಸಂದೇಶವನ್ನು ಜನರಿಗೆ ಸಾರಲು ಅತ್ಯುತ್ತಮ ಸಿದ್ಧತೆಯಾಗುತ್ತದೆ,” ಎಂದು ಅವರು ಹೇಳಿದರು.
ದಾಖಲಾತಿ ಮತ್ತು ಆರ್ಥಿಕ ಬೆಂಬಲದ ವಿಷಯದಲ್ಲಿ ಸಂಸ್ಥೆಯ ಕೆಲವು ಸವಾಲುಗಳನ್ನೂ ಅವರು ಒಪ್ಪಿಕೊಂಡರು. “ಅಮೆರಿಕಾದಲ್ಲಿ ಯಾಜಕರ ಕೊರತೆ ಇರುವುದರಿಂದ, ಧರ್ಮಾಧ್ಯಕ್ಷರು ಹಲವು ವರ್ಷಗಳ ಕಾಲ ಒಬ್ಬ ಯಾಜಕನನ್ನು ಉನ್ನತ ಅಧ್ಯಯನಕ್ಕೆ ಕಳುಹಿಸಲು ಹಿಂಜರಿಯುತ್ತಾರೆ. ನಮ್ಮ ಬಳಿ ಇದ್ದಷ್ಟು ಮಾನವ ಸಂಪನ್ಮೂಲ ಈಗಿಲ್ಲ. ಇದರಿಂದಲೇ ನಮ್ಮ ದಾಖಲಾತಿಗೆ ಪರಿಣಾಮ ಬಿದ್ದಿದೆ. ಯಾವುದೇ ಸಂಸ್ಥೆಗೆ ದಾಖಲಾತಿ ಮುಖ್ಯ. ಮುಂದಿನ ದಿನಗಳಲ್ಲಿ ಇದು ಸುಧಾರಿಸಲಿದೆ ಎಂಬ ನಿರೀಕ್ಷೆ ನಮ್ಮದು,” ಎಂದು ಅವರು ಹೇಳಿದರು.
ಕ್ಯಾಂಪಸ್‌ನಲ್ಲಿ ವ್ಯಾಟಿಕನ್‌ಗೆ ಭೇಟಿ ನೀಡುವ ಯಾತ್ರಿಕರಿಗೆ ಅಮೆರಿಕದ ಧರ್ಮಾಧ್ಯಕ್ಷರ ಕಚೇರಿ ಸಹಾಯ ಮಾಡುತ್ತದೆ; ಜೊತೆಗೆ ಕಾಸಾದ ಯಾಜಕರು ಪಾಪನಿವೇದನಾ ಸಂಸ್ಕಾರವನ್ನೂ ನೀಡುತ್ತಾರೆ.
ಯಾಜಕರಿಗೆ ಒಗ್ಗಟ್ಟಿನ ಬಗ್ಗೆ ಕಲಿಸುವ ಅಮೆರಿಕನ್ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ
ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್ ಮಹಾಧರ್ಮಪ್ರಾಂತ್ಯದ ವಂ. ಗುರು ಜಾನ್ ಗ್ಯಾಂಕಾರ್ಜ್, ತಮ್ಮ ಡಾಕ್ಟರೇಟ್ ಪೂರ್ಣಗೊಳಿಸುತ್ತಿದ್ದವರು ಮತ್ತು ಹಿಂದೆ ಕಾಸಾದಲ್ಲಿ ವಾಸಿಸಿದ್ದವರು, ತಮ್ಮ ಅನುಭವವನ್ನು ಹಂಚಿಕೊಂಡರು.
“ಕಾಸಾ ಸಂತಾ ಮಾರಿಯಾ — ಮೊದಲನೆಯದಾಗಿ ಹೇಳಬೇಕಾದರೆ, ಇದು ಸಮುದಾಯ. ಇದು ಧರ್ಮಸಭೆಯ ಅನುಭವ. ನಾನು ಭಾವಿಸುವಂತೆ, ಪ್ರತಿಯೊಬ್ಬ ಯಾಜಕನು ತಾನು ವಾಸಿಸುವ ಸ್ಥಳದ ಬಗ್ಗೆ ಇದೇ ಹೇಳುತ್ತಾನೆ. ಇಲ್ಲಿ ಅಮೆರಿಕದಿಂದ ಬಂದ ಸುಮಾರು 40 ಯಾಜಕರು ಒಟ್ಟಾಗಿ ವಾಸಿಸುತ್ತಿದ್ದೇವೆ, ಒಟ್ಟಾಗಿ ಅಧ್ಯಯನ ಮಾಡುತ್ತೇವೆ, ಒಟ್ಟಾಗಿ ಪ್ರಾರ್ಥಿಸುತ್ತೇವೆ. ಇದು ನಿಜವಾಗಿಯೂ ಬಲವಾದ ಸಮುದಾಯದ ಅನುಭವ. ಒಂದರ್ಥದಲ್ಲಿ ಇದು ಒಂದು ಪ್ರೇಷಿತ ಸೇವೆಯ ಭಾವನೆಯೂ ಹೌದು — ಏಕೆಂದರೆ ನಾವು ನಮ್ಮ ಮನೆಗಳಿಂದ ದೂರದಲ್ಲಿದ್ದರೂ, ಗುರುತರಬೇತಿಕೇಂದ್ರದಲ್ಲಾಗಲಿ, ಧರ್ಮಕೇಂದ್ರದಲ್ಲಾಗಲಿ, ಅಥವಾ ಬೇರೆ ಯಾವುದೇ ಪರಿಸ್ಥಿತಿಯಲ್ಲಾಗಲಿ ನಮ್ಮ ದೇಶಕ್ಕೆ ಹಿಂತಿರುಗಿ ಸುವಾರ್ತೆಯನ್ನು ಕೊಂಡೊಯ್ಯಲು, ಬೋಧಿಸಲು ಸಿದ್ಧರಾಗುತ್ತಿದ್ದೇವೆ” ಎಂದು ಅವರು ಹೇಳಿದರು.
ಕನೆಕ್ಟಿಕಟ್‌ನಲ್ಲಿ ವಿಶ್ವಾಸಿಗಳಿಗೆ ಸೇವೆ ಸಲ್ಲಿಸುತ್ತಿರುವ ಈ ಯಾಜಕರು, ತಮ್ಮನ್ನು ಬೆಂಬಲಿಸಿದ ಎಲ್ಲಾ ಕಥೋಲಿಕ ವಿಶ್ವಾಸಿಗಳಿಗೂ ಮತ್ತು ಉಪಕಾರಕರ್ತರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಧರ್ಮಸಭೆಯ ಹೃದಯದಲ್ಲಿ ಇರುವ ಅದ್ಭುತ ಸ್ಥಳ
“ಧರ್ಮಸಭೆಯ ಹೃದಯಭಾಗದಲ್ಲಿ ಇರುವ ಇದು ನಿಜವಾಗಿಯೂ ಅದ್ಭುತ ಸ್ಥಳ. ವಿಶ್ವವಿದ್ಯಾಲಯಗಳಲ್ಲಿ ನಮಗೆ ದೊರೆಯುವ ಧರ್ಮಶಾಸ್ತ್ರದ ಗುರುಗಳ ಕಾರಣ ಮಾತ್ರವಲ್ಲ, ಇಲ್ಲಿ ರೋಮ್‌ನಲ್ಲಿ ಪೂಜ್ಯ ಜಗದ್ಗುರುಗಳಿಗೂ ಧರ್ಮಸಭೆಯ ಜೀವಿತಕ್ಕೂ ಹತ್ತಿರವಾಗಿರುವ ಅವಕಾಶವೂ ಇದೆ,” ಎಂದು ಅವರು ಹೇಳಿದರು.
ಜಗತ್ತಿನ ಎಲ್ಲ ಭಾಗಗಳಿಂದ ಜನರು ರೋಮ್‌ಗೆ ಬರುವುದರಿಂದ, ಇದು ನಿಜವಾದ ಶೈಕ್ಷಣಿಕ ಅನುಭವವಾಗುತ್ತದೆ. ಪವಿತ್ರ ಗ್ರಂಥಗಳಲ್ಲಿಯೂ ಧರ್ಮಶಾಸ್ತ್ರದಲ್ಲಿಯೂ ನಾವು ಕಲಿಯುವುದರಿಂದ ಮಾತ್ರವಲ್ಲ, ಪ್ರಾರ್ಥನೆ ಮತ್ತು ಅಧ್ಯಯನದೊಂದಿಗೆ ಒಟ್ಟಾಗಿ ಜೀವಿಸುವ ಈ ನಗರದ ಜೀವನದಿಂದಲೂ ಈ ಅನುಭವ ಅದ್ಭುತವಾಗಿದೆ ಎಂದು ಅವರು ಹೇಳಿದರು. ವಂ. ಗುರು ಜಾನ್, ವಿಶೇಷವಾಗಿ ಕಥೋಲಿಕ ವಿಶ್ವಾಸಿಗಳಲ್ಲಿ ,ಕೆಲವೊಮ್ಮೆ ವಿಭಿನ್ನ ಹಾಗೂ ಬಲವಾದ ಅಭಿಪ್ರಾಯಗಳನ್ನು ಹೊಂದಿರುವ ಅಮೆರಿಕದವರಲ್ಲಿಯೂ ಒಗ್ಗಟ್ಟನ್ನು ಉತ್ತೇಜಿಸುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಉದಾಹರಣೆಯನ್ನು ಪರಾಮರ್ಶಿಸಿದರು.
“ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರಲ್ಲಿರುವ ಒಂದು ವಿಶೇಷ ಗುಣವೆಂದರೆ, ಯಾರೇ ಆಗಿರಲಿ, ಎಲ್ಲರಲ್ಲಿಯೂ ಇರುವ ಒಳ್ಳೆಯದನ್ನು ಕಾಣುವ ವರ. ನಾವು ಕಥೋಲಿಕ ವಿಶ್ವಾಸಿಗಳಾದರೂ — ಪ್ರಭು ನಮ್ಮನ್ನು ನೋಡುವಾಗ ನಾವು ಎಲ್ಲರೂ ಪಾಪಿಗಳೇ. ಆದರೆ ಪ್ರಭು ನಮ್ಮೊಳಗಿನ ಒಳ್ಳೆಯದನ್ನೇ ಕಾಣುತ್ತಾರೆ. ಅವರು ಈ ಲೋಕದಲ್ಲಿರುವ ಪ್ರತಿಯೊಬ್ಬನನ್ನೂ ಪ್ರೀತಿಸುತ್ತಾರೆ. ಪೂಜ್ಯ ಜಗದ್ಗುರುಗಳು ಧರ್ಮಸಭೆಯಲ್ಲಿರುವ ಪ್ರತಿಯೊಬ್ಬನನ್ನೂ ನೋಡಿ, ‘ಇಲ್ಲಿ ಅವರು ಮಾಡುತ್ತಿರುವ ಒಳ್ಳೆಯದು ಏನು?’ ಎಂದು ಅರಿತು, ಅದನ್ನು ಬೆಂಬಲಿಸಲು ಬಯಸುವವರಂತೆ ಕಾಣುತ್ತಾರೆ. ‘ನೀವು ಈ ವಿಷಯದಲ್ಲಿ ಒಪ್ಪದಿರಬಹುದು; ಆದರೆ, ಇದರಲ್ಲಿ ಒಪ್ಪುತ್ತೀರಲ್ಲವೇ?’ — ಇಲ್ಲಿರುವ ಈ ಒಳ್ಳೆಯದನ್ನೇ ನೋಡೋಣ,” ಎಂದು ಅವರು ಹೇಳಿದರು.
ಅಮೆರಿಕದ ಧರ್ಮಕೇಂದ್ರಗಳಲ್ಲಿ ವಿಶ್ವಾಸಿಗಳಿಗೆ ಕ್ರಿಸ್ತಸಮಾನ ಪ್ರೀತಿಯ ಮಾದರಿ
ಈ ವಿಷಯವು ಅಮೆರಿಕನ್ ಯಾಜಕರಿಗೆ ತಮ್ಮ ಧರ್ಮಕೇಂದ್ರದ ಜೀವನದಲ್ಲಿಯೂ, ತಮ್ಮ ದೇಶಕ್ಕೆ ಹಿಂತಿರುಗಿದಾಗ ಎದುರಾಗುವ ವಿಭಿನ್ನ ಅಭಿಪ್ರಾಯಗಳ ನಡುವೆಯೂ, ಒಳ್ಳೆಯ ದಾರಿಯನ್ನು ನೀಡುತ್ತದೆ ಎಂದು ಈ ಯಾಜಕರು ಮನನ ಮಾಡಿದರು. “ನಾವು ಒಬ್ಬರನ್ನೊಬ್ಬರನ್ನು ಶತ್ರುವಾಗಿ ನೋಡುವುದನ್ನು ನಿಲ್ಲಿಸಿದಾಗ — ಹೋರಾಡಬೇಕಾದವರಾಗಿ, ಟೀಕಿಸಬೇಕಾದವರಾಗಿ ನೋಡದೇ — ‘ಇವನು ಪ್ರಭು ಪ್ರೀತಿಸುವವನು; ಇವನಲ್ಲೂ ಪ್ರೀತಿಸುವ ಸಾಮರ್ಥ್ಯ ಇದೆ’ ಎಂದು ನೋಡಲು ಆರಂಭಿಸಿದಾಗ… ಧರ್ಮಸಭೆಯ ವಿವಿಧ ಭಾಗಗಳಲ್ಲಿರುವ ಕೆಟ್ಟದನ್ನು ನೋಡುವುದನ್ನು ಬಿಟ್ಟು, ಜನರಲ್ಲಿರುವ ಒಳ್ಳೆಯದನ್ನು ನೋಡಲು ಆರಂಭಿಸೋಣ,” ಎಂದು ಅವರು ಹೇಳಿದರು.
ಇದೇ ಒಗ್ಗಟ್ಟಿನ ಕೆಲಸ ಎಂದು ಅವರು ಹೇಳಿದರು — ಮತ್ತು ಇದು ಸುಲಭವಾದದ್ದಲ್ಲ ಎಂಬುದನ್ನೂ ಒಪ್ಪಿಕೊಂಡರು. ವಂ. ಗುರು ಜಾನ್ ಅವರ ಮಾತಿನಲ್ಲಿ, ಒಗ್ಗಟ್ಟನ್ನು ನಿರ್ಮಿಸಲು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನಮಗೆ ಕರೆ ನೀಡುತ್ತಿರುವುದು ಆರಾಮದಾಯಕವಾಗಿರದ, ಆದರೆ ಅಗತ್ಯವಾದ ಒಂದು ಪ್ರಕ್ರಿಯೆಗೆ. “ಇದು ಪ್ರಭುವೇ ನಮಗೆ ನೀಡಿದ ಕರೆಯಾಗಿದೆ. ಶಿಲುಬೆಯ ಮೇಲಿನ ಅವರ ಬಲಿಯೇ ಒಗ್ಗಟ್ಟಿನ ಪರಮ ತ್ಯಾಗ,” ಎಂದು ಅವರು ನೆನಪಿಸಿದರು.
“ಕಾಸಾ ಸಂತಾ ಮಾರಿಯಾದಲ್ಲಿರುವ ನಮ್ಮೆಲ್ಲರಿಗೂ — ಮತ್ತು ವೈಯಕ್ತಿಕವಾಗಿ ನನಗೆ — ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಸಾಕ್ಷಿಯನ್ನು ನೋಡಿದಾಗ, ಇಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಬಹುದಾದ ಒಳ್ಳೆಯದನ್ನು ಕಾಣುವುದು, ಮತ್ತು ಕೆಲವೊಮ್ಮೆ ಪ್ರಯತ್ನಪಟ್ಟು, ಕಷ್ಟಪಟ್ಟರೂ ಸಹ, ಈ ವ್ಯಕ್ತಿ ಹುಡುಕುತ್ತಿರುವ ಒಳ್ಳೆಯದು ಏನು ಎಂಬುದನ್ನು ಅರಿಯಲು ಪ್ರಯತ್ನಿಸುವುದೇ ಮುಖ್ಯ,” ಎಂದು ಅವರು ಹೇಳಿದರು. ಅಲ್ಲಿಂದ ನಮ್ಮ ವಿಭಜನೆಗಳ ಮೇಲೆ ಗಮನಕೊಡುವುದನ್ನು ಬಿಟ್ಟು ನಾವು ಆ ಒಳ್ಳೆಯದನ್ನು ಒಪ್ಪಿಕೊಂಡು, ಅದನ್ನೇ ಆಧಾರವಾಗಿಟ್ಟುಕೊಂಡು ಮುಂದುವರಿಯಬಹುದು” ಎಂದು ಅವರು ಹೇಳಿದರು.
ಕಾಸಾ ಸ್ವತಃ ಸಮೃದ್ಧ ಇತಿಹಾಸವನ್ನು ಹೊಂದಿದೆ. ಮೂಲತಃ ಇದು 17ನೇ ಶತಮಾನದ ಡೊಮಿನಿಕನ್ ಮಠವಾಗಿದ್ದು, 1859ರಲ್ಲಿ ಪೂಜ್ಯ ಜಗದ್ಗುರು ಒಂಬತ್ತನೇ ಪಿಯುಸ್ ಅವರಿಂದ ಸ್ಥಾಪಿಸಲ್ಪಟ್ಟ ನಾರ್ತ್ ಅಮೆರಿಕನ್ ಕಾಲೇಜಿನ ಮೊದಲ ಮನೆಯಾಗಿತು. ದ್ವಿತೀಯ ಮಹಾಯುದ್ಧದ ನಂತರ, ಗುರುತರಬೇತಿ ಕೇಂದ್ರ ಜನಿಕುಲಮ್ ಬೆಟ್ಟಕ್ಕೆ ಸ್ಥಳಾಂತರಗೊಂಡಿತು; ನಂತರ ಕಾಸಾವನ್ನು ಯಾಜಕರ ಉನ್ನತ ಅಧ್ಯಯನಕ್ಕಾಗಿ ವಾಸಸ್ಥಳವಾಗಿ ರೂಪಾಂತರಿಸಲಾಯಿತು. ಇಂದು, ಸುಮಾರು 40 ಯಾಜಕರು ಇಲ್ಲಿ ವಾಸಿಸುತ್ತಿದ್ದು, ರೋಮ್‌ನ ವಿವಿಧ ಪೊಂಟಿಫಿಕಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.“ಹಿಂದಿನಷ್ಟು ಸಂಖ್ಯೆಯಿಲ್ಲದಿದ್ದರೂ ಸಹ, ನಮ್ಮಲ್ಲಿ ಬಲವಾದ ಮತ್ತು ದೃಢವಾದ ಸಮುದಾಯವಿದೆ ಎಂಬುದರಿಂದ ನಾವು ತುಂಬಾ ಸಂತೋಷವಾಗಿದ್ದೇವೆ,” ಎಂದು ಮಾನ್ಸಿಂನೋರ್. ಮಿಲಿಯಾ ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).