ಈಕ್ವಟೋರಿಯಲ್ ಗಿನಿಯಾಕ್ಕೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಅಪೋಸ್ತೋಲಿಕ್ ಭೇಟಿಯ ಘೋಷವಾಕ್ಯ  ಮತ್ತು ಚಿಹ್ನೆ ಈಕ್ವಟೋರಿಯಲ್ ಗಿನಿಯಾಕ್ಕೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಅಪೋಸ್ತೋಲಿಕ್ ಭೇಟಿಯ ಘೋಷವಾಕ್ಯ ಮತ್ತು ಚಿಹ್ನೆ 

ಈಕ್ವಟೋರಿಯಲ್ ಗಿನಿಯ ಧರ್ಮಾಧ್ಯಕ್ಷರು: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿ ‘ದೇವರಿಂದ ಬಂದ ಅಪ್ಪುಗೆ’

ಈಕ್ವಟೋರಿಯಲ್ ಗಿನಿಯ ಧರ್ಮಾಧ್ಯಕ್ಷರು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ದೇಶದ ಪ್ರೇಷಿತ ಯಾತ್ರೆಯನ್ನು ಎಲ್ಲರೂ “ಕೃಪೆಯ ಸಮಯ” ಎಂದು ಸ್ವಾಗತಿಸಲು ಆಹ್ವಾನಿಸುತ್ತಿದ್ದಾರೆ — ಇದು ಪರಿವರ್ತನೆ, ಏಕತೆ ಮತ್ತು ಭರವಸೆಯನ್ನು ಉತ್ತೇಜಿಸುವ ಸಮಯವೆಂದು ಅವರು ಹೇಳಿದ್ದಾರೆ. ಇಂದಿನ ಸವಾಲುಗಳ ನಡುವೆಯೂ, ಆಧ್ಯಾತ್ಮಿಕ ಜೀವನವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದುಈಕ್ವಟೋರಿಯಲ್ ಅವರು ಕರೆ ನೀಡಿದ್ದಾರೆ.

ಲೇಖಕರು : ಸೆಬಾಸ್ತಿಯನ್ ಸಾನ್ಸೋನ್ ಫೆರಾರಿ

ಆಧ್ಯಾತ್ಮಿಕ ಸಿದ್ಧತೆ ಮತ್ತು ಯಾಜಕ ಸೇವೆಯ ನವೀಕರಣಕ್ಕೆ ಕರೆ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಈಕ್ವಟೋರಿಯಲ್ ಗಿನಿ ದೇಶದ ಪ್ರೇಷಿತ ಭೇಟಿ (ಏಪ್ರಿಲ್ 21ರಿಂದ 23, 2026ರವರೆಗೆ) ನಡೆಯಲು ಇನ್ನೂ ಎರಡು ವಾರಗಳಿಗೂ ಕಡಿಮೆ ಅವಧಿ ಉಳಿದಿರುವಾಗ — ಆಫ್ರಿಕಾ ಭೇಟಿಯ ಸಮಾಪ್ತಿಯಾಗಿ ನಡೆಯುವ ಈ ಯಾತ್ರೆಯ ಹಿನ್ನೆಲೆಯಲ್ಲಿ — ಸ್ಥಳೀಯ ಧರ್ಮಸಭೆ ತನ್ನ ಆಧ್ಯಾತ್ಮಿಕ ಸಿದ್ಧತೆಯನ್ನು ಗಟ್ಟಿಗೊಳಿಸುತ್ತಿದೆ. ಇದಕ್ಕಾಗಿ ಎರಡು ಪ್ರಮುಖ ಕರೆಗಳನ್ನು ನೀಡಲಾಗಿದೆ: ಯಾಜಕ ಸೇವೆಯ ನವೀಕರಣ ಮತ್ತು ದೇವರ ಜನರ ವಿಶ್ವಾಸವನ್ನು ಪುನರುಜ್ಜೀವನಗೊಳಿಸುವುದು.

“ನಮ್ಮ ಜೀವನ ಮತ್ತು ಯಾಜಕ ಸೇವೆಯ ಮೂಲಾಧಾರಗಳನ್ನು ಬಲಪಡಿಸಿ, ನವೀಕರಿಸೋಣ” ಎಂಬುದು ಈಕ್ವಟೋರಿಯಲ್ ಗಿನಿಯ ಯಾಜಕರಿಗೆ ಧರ್ಮಾಧ್ಯಕ್ಷೀಯ ಸಮಾವೇಶ ಮಂಡಳಿ ಕೇಂದ್ರ ಆಹ್ವಾನವಾಗಿದೆ. ಮೊಂಗೋಮೊ ಮಹಾಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಗುರು ಜುವಾನ್ ಡೊಮಿಂಗೋ-ಬೆಕಾ ಏಸೋನೋ ಆಯಾಂಗ್ ಸಹಿ ಮಾಡಿರುವ ಸಂದೇಶದಲ್ಲಿ, “ಧರ್ಮಸಭೆಗೆ ಸೇವೆ ಸಲ್ಲಿಸುವ ಪ್ರೀತಿಯ ರಹಸ್ಯವೆಂದು ಅರ್ಥಮಾಡಿಕೊಳ್ಳಲ್ಪಡುವ ಯಾಜಕ ವೃತ್ತಿಯ ಅಮೂಲ್ಯ ವರಕ್ಕಾಗಿ ಧರ್ಮಸಭೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದೆ” ಎಂದು ಹೇಳಿದ್ದಾರೆ.

ಈ ಸಂದೇಶವು ಧರ್ಮಸಭೆಯ, “ಮಾನವನನ್ನು ದೇವರೊಂದಿಗೆ ಮತ್ತೆ ಒಂದಾಗಿಸುವುದು” ಎಂಬ ಮೂಲ ಧ್ಯೇಯವನ್ನು ನೆನಪಿಸಿ ಯಾಜಕನು ಕೇವಲ ಸೇವಕನಲ್ಲ; ಅವನು ಮತ್ತೊಂದು ಕ್ರಿಸ್ತ — ಕ್ರಿಸ್ತನ ರಕ್ಷಣಾಕಾರ್ಯವನ್ನು ಜನರಿಗೆ ಗೋಚರವಾಗಿಸುವವನಾಗಿರುತ್ತಾನೆ  ಎಂದು ಒತ್ತಿ ಹೇಳುತ್ತದೆ.

ಈ ಹಿನ್ನೆಲೆಯಲ್ಲಿ, ಧರ್ಮಾಧ್ಯಕ್ಷರು ಆಂತರಿಕ ಜೀವನದ ಕಾಳಜಿಗೆ ಒತ್ತು ನೀಡುತ್ತಾ “ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಜೀವನವು “ನಂಬಿಕೆಗರ್ಹ ಯಾಜಕತ್ವದ ಆಧಾರಸ್ತಂಭಗಳು.” ದೇವರೊಂದಿಗೆ ದಿನನಿತ್ಯದ ಸಂಬಂಧವಿಲ್ಲದೆ, ಧಾರ್ಮಿಕ ಸೇವೆಯ ಶಕ್ತಿ ಕ್ಷೀಣಿಸುತ್ತದೆ ಎಂದು ಅವರು ಎಚ್ಚರಿಸುತ್ತಾರೆ. ಕ್ರಿಯಾಶೀಲತೆಯ ಅತಿರೇಕ ಅಥವಾ ಮೇಲ್ಮೈತನದ ಪ್ರಲೋಭನೆಗಳ ನಡುವೆ, ಎಲ್ಲಾ ಪ್ರೇಷಿತ ಕಾರ್ಯವು ಆಳವಾದ ಆಂತರಿಕ ಜೀವನದಿಂದಲೇ ಹರಿದು ಬರಬೇಕು: “ಈ ಅಮೂಲ್ಯ ಸಂಪತ್ತನ್ನು ನಾವು ಮಣ್ಣಿನ ಪಾತ್ರೆಗಳಲ್ಲಿ ಹೊತ್ತಿದ್ದೇವೆ, ಅದರಿಂದ ಶಕ್ತಿಯು ದೇವರಿಂದಲೇ ಬರುತ್ತದೆ ಎಂಬುದು ಸ್ಪಷ್ಟವಾಗುತ್ತದೆ.”

ಇದೇ ವೇಳೆ, ಯಾಜಕರ ಸಹೋದರತ್ವದ ಅನುಭವವು “ಅತ್ಯಾವಶ್ಯಕವಾಗಿದ್ದರೂ ಇನ್ನೂ ಪೂರ್ಣವಾಗದ ಕಾರ್ಯ” ಎಂದು ಈ ಪತ್ರವು ಉಲ್ಲೇಖಿಸುತ್ತದೆ. ಈ ದೃಷ್ಟಿಯಿಂದ, “ದೇವರಿಗೂ ಮಾನವರಿಗೂ ಇನ್ನಷ್ಟು ಹತ್ತಿರವಾಗುವುದು, ಮೌನವನ್ನು ಬೆಳೆಸುವುದು — ಏಕೆಂದರೆ ದೇವರು ಮೌನದಲ್ಲೇ ಮಾತನಾಡುತ್ತಾನೆ” ಎಂಬ ಅಗತ್ಯವನ್ನು ಬಲವಾಗಿ ಒತ್ತಿ ಹೇಳಲಾಗಿದೆ.

ಸಂಪೂರ್ಣ ದೇವರ ಜನರಿಗೆ “ಕೃಪೆಯ ಸಮಯ”

ಯಾಜಕರಿಗೆ ನೀಡಿದ ಈ ಕರೆ, ದೇವರ ಸಂಪೂರ್ಣ ಜನರಿಗೆ ಉದ್ದೇಶಿಸಿದ ವಿಶಾಲ ಸಂದೇಶದ ಒಂದು ಭಾಗವಾಗಿದೆ. ಫೆಬ್ರವರಿಯಲ್ಲಿ ಧರ್ಮಾಧ್ಯಕ್ಷರು ಸಹಿ ಮಾಡಿದ ಈ ಸಂದೇಶವು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ದೇಶ ಭೇಟಿ ವಿಷಯದಡಿ ಹೀಗೆ ಹೇಳುತ್ತದೆ:

“ಕ್ರಿಸ್ತ — ಭರವಸೆಯ ಭವಿಷ್ಯದತ್ತ

ಈಕ್ವಟೋರಿಯಲ್ ಗಿನಿಯ ಬೆಳಕು.” ಬರುವ ಜಗದ್ಗುರುಗಳ ಭೇಟಿ ಕೇವಲ ಐತಿಹಾಸಿಕ ಘಟನೆ ಮಾತ್ರವಲ್ಲ; ಅದು ನಿಜವಾದ ಕೈರೋಸ್ — ಕೃಪೆಯ ಕಾಲ.  ಇದು ತನ್ನ ಇತಿಹಾಸವನ್ನು ಮರುಪರಿಶೀಲಿಸುವ, ವಿಶ್ವಾಸವನ್ನು ನವೀಕರಿಸುವ ಮತ್ತು ಭವಿಷ್ಯದತ್ತ ಭರವಸೆಯಿಂದ ತೆರೆದುಕೊಳ್ಳುವ ಸಮಯವೆಂದು ನಿರೂಪಿಸಲಾಗಿದೆ.

ಈ ಅರ್ಥದಲ್ಲಿ, ಯಾಜಕರು ವಿಶ್ವಾಸಿಗಳನ್ನು ಕ್ರೈಸ್ತ ಜೀವನದ ಹೃದಯವನ್ನು,ಕ್ರಿಸ್ತನೊಂದಿಗೆ ವೈಯಕ್ತಿಕ ಸಂಬಂಧವನ್ನು, ಜೀವನವನ್ನು ಮಾರ್ಗದರ್ಶನ ಮಾಡುವ ಮತ್ತು ಪರಿವರ್ತಿಸುವ ಬೆಳಕನ್ನು ಮರುಕಂಡುಕೊಳ್ಳಲು ಆಹ್ವಾನಿಸುತ್ತಾರೆ.  “ನಾವು ಹೊಳೆಯಲು ಕರೆಯಲ್ಪಟ್ಟವರು,” ಎಂದು ಅವರು ಸುವಾರ್ತೆಯನ್ನು ಉಲ್ಲೇಖಿಸಿ ಹೇಳುತ್ತಾರೆ. ವಿಶ್ವಾಸವನ್ನು ಕೇವಲ ಘೋಷಿಸುವುದರಿಂದ ಸಾಲದು; ಅದು ನ್ಯಾಯ, ಸೇವೆ ಮತ್ತು ದಾನಧರ್ಮದ ನೈಜ ಕಾರ್ಯಗಳಲ್ಲಿ — ದೈನಂದಿನ ಜೀವನದಲ್ಲಿ — ಬದುಕಬೇಕು.

ವಿಶ್ವಾಸದ ಸ್ಮರಣೆ ಮತ್ತು ಸವಾಲುಗಳು

ಧರ್ಮಾಧ್ಯಕ್ಷರ ಸಂದೇಶವು 1982ರಲ್ಲಿ ನಡೆದ ಪೂಜ್ಯ ಸಂತ ಎರಡನೇ ಜಾನ್ ಪಾಲ್  ಅವರ ಐತಿಹಾಸಿಕ ಭೇಟಿಯನ್ನು ನೆನಪಿಸುತ್ತದೆ — ದೇಶವು ಹಲವು ವರ್ಷಗಳ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಿದ “ಅದ್ಭುತ ಭೇಟಿ” ಎಂದು ಅದನ್ನು ಪರಿಗಣಿಸಲಾಗಿದೆ. ಆದರೆ, ಹಲವು ದಶಕಗಳ ನಂತರವೂ, ವಿಶ್ವಾಸವು ಹೊಸ ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಅವರು “ಬಿಸಿನೂ ಇಲ್ಲ, ಚಳಿಯೂ ಇಲ್ಲದ” ಕ್ರೈಸ್ತ ಅನುಭವದ ಬಗ್ಗೆ ಮಾತನಾಡುತ್ತಾರೆ — ಪವಿತ್ರತೆಯ ಭಾವನೆ ಕುಗ್ಗುವುದು, ಸಂಸ್ಕಾರಗಳ ಆಚರಣೆ ಕಡಿಮೆಯಾಗುವುದು, ಧಾರ್ಮಿಕ ಮಿಶ್ರಣ (syncretism) ಹೆಚ್ಚಾಗುವುದು, ಮತ್ತು ಅತಿರೇಕಿ ಅರ್ಥೈಸಿಕೆಗಳಿಂದ ಉಂಟಾಗುವ ವಿಭಜನೆಗಳು ಇದರ ಲಕ್ಷಣಗಳಾಗಿವೆ.

ಇದರ ಜೊತೆಗೆ, ಪೋಷಕರಿಂದ ಮಕ್ಕಳಿಗೆ ವಿಶ್ವಾಸವನ್ನು ಹಸ್ತಾಂತರಿಸುವಿಕೆ ಕುಗ್ಗುತ್ತಿದೆ; ಧರ್ಮಕೇಂದ್ರದ ಗುಂಪುಗಳು ಮತ್ತು ಸಂಘಗಳಲ್ಲಿ ಮೇಲ್ಮೈತನ ಹೆಚ್ಚಾಗಿದೆ; ಯುವಜನರಿಗೆ ಪ್ರೇರಣೆ ನೀಡುವ ಆದರ್ಶ ವ್ಯಕ್ತಿಗಳ ಕೊರತೆ ಇದೆ; ಉತ್ತಮ ಮೌಲ್ಯಗಳು ಮತ್ತು ಉನ್ನತ ಆಶಯಗಳತ್ತ ಬೆಳೆಸುವ ಸಾಮಾಜಿಕ ಸಂಸ್ಥೆಗಳ ಅಭಾವವೂ ಕಾಣಿಸುತ್ತದೆ. ಇದಕ್ಕೆ ಜೊತೆಗೆ ಭ್ರಷ್ಟಾಚಾರ, ಕುಟುಂಬದ ದುರ್ಬಲತೆ, ಮತ್ತು   ಯುವಜನರಲ್ಲಿ ಧರ್ಮಸಭೆಯಿಂದ ದೂರವಾಗುವಿಕೆ ಎಂಬ ಸಾಮಾಜಿಕ ಸಮಸ್ಯೆಗಳೂ ಸೇರಿವೆ.

ಆದರೆ ಇದು ನಿರಾಶೆಯ ದೃಷ್ಟಿಕೋನವಲ್ಲ. ಬದಲಾಗಿ, ಇದನ್ನು ನವೀಕರಣದ ಅವಕಾಶವೆಂದು ಅರ್ಥಮಾಡಿಕೊಳ್ಳಲಾಗುತ್ತಿದೆ. ಹೊರಗೆ ಒಣಗಿದಂತೆ ಕಾಣುವ ಮರವು ತನ್ನ ಬೇರುಗಳನ್ನು ಬಲಪಡಿಸುವಂತೆ, ಧರ್ಮಸಭೆಯೂ ತನ್ನ ವಿಶ್ವಾಸವನ್ನು ಆಳಪಡಿಸಿ ಹೊಸ ಫಲಗಳನ್ನು ತರುವಂತೆ ಕರೆಯಲ್ಪಟ್ಟಿದೆ.

ಪರಿವರ್ತನೆ, ಸಂಧಾನ ಮತ್ತು ಭರವಸೆ

ಈ ಹಿನ್ನೆಲೆಯಲ್ಲಿಯೇ, ಧರ್ಮಾಧ್ಯಕ್ಷರು ಜಗದ್ಗುರುಗಳ ಭೇಟಿಗೆ ಸ್ಪಷ್ಟವಾದ ಸಿದ್ಧತಾ ಮಾರ್ಗವನ್ನು ಸೂಚಿಸುತ್ತಾರೆ: ತೀವ್ರವಾದ ಪ್ರಾರ್ಥನೆ, ನಿಜವಾದ ಪರಿವರ್ತನೆ, ಮತ್ತು ಸಮೂಹದ ಸಂಧಾನ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಆಗಮನವು “ದೇವರ ಅಪ್ಪುಗೆಯನ್ನು ಸ್ವೀಕರಿಸುವ ಅವಕಾಶ” ಆಗಿರುತ್ತದೆ ಎಂದು ಅವರು ನೆನಪಿಸುತ್ತಾರೆ. ಅದೇ ಸಮಯದಲ್ಲಿ, ಈಕ್ವಟೋರಿಯಲ್ ಗಿನಿಯ ಜನರ ನಡುವೆ ಸಂಬಂಧಗಳನ್ನು ಮರುನಿರ್ಮಿಸುವ ಅವಕಾಶವೂ ಆಗಿರುತ್ತದೆ. ಅವರು ಕೇಳುವ ಮೂಲ ಪ್ರಶ್ನೆ ನೇರವಾಗಿದೆ — ಸಮಾಜದ ಪ್ರತಿಯೊಂದು ವಲಯವನ್ನೂ ಪ್ರಶ್ನಿಸುತ್ತದೆ: ಈ ಭೇಟಿಯ ನಂತರ, ನಮ್ಮ ಪರಸ್ಪರ ಸಂಬಂಧಗಳು ಉತ್ತಮವಾಗುತ್ತವೆಯೇ?

ಭೇಟಿಯ ಧಾರ್ಮಿಕ ಸೇವಾ ಮಹತ್ವ

ಜಗದ್ಗುರುಗಳ ಈಕ್ವಟೋರಿಯಲ್ ಗಿನಿ ದೇಶದ ಯಾತ್ರಾ ಕಾರ್ಯಕ್ರಮವು ಈ ಸಮಗ್ರ ಅರ್ಥವನ್ನು ಪ್ರತಿಬಿಂಬಿಸುತ್ತದೆ. ಮಲಾಬೊದಲ್ಲಿ, ಗೌರವ ಮತ್ತು ಭರವಸೆಯ ದಾರಿಯಾಗಿ ಶಿಕ್ಷಣದ ಮೇಲೆ ಗಮನ ಕೊಡಲಾಗುತ್ತದೆ; ಮೊಂಗೋಮೊದಲ್ಲಿ, ಸುವಾರ್ತೆಯನ್ನು ಸಾರಿದವರ ಸ್ಮರಣೆಯನ್ನು ಆಚರಿಸಲಾಗುತ್ತದೆ; ಮತ್ತು ಬಾಟಾದಲ್ಲಿ, ವಿಶೇಷವಾಗಿ ಭವಿಷ್ಯದ ಪ್ರಧಾನ ಪಾತ್ರಧಾರಿಗಳಾದ ಯುವಜನರ ಮತ್ತು ಕುಟುಂಬಗಳ ಕಡೆ ಗಮನ ಹರಿಸಲಾಗುತ್ತದೆ.

ಈ ಭೇಟಿಯನ್ನು ಸ್ವಾಗತಿಸಲು, ಧರ್ಮಕೇಂದ್ರಗಳನ್ನು ಪ್ರಾರ್ಥನೆಯನ್ನು ಹೆಚ್ಚಿಸಲು, ಬಲಿಪೂಜೆಯಲ್ಲಿ ವಿಶೇಷ ಉದ್ದೇಶಗಳನ್ನು ಸೇರಿಸಲು, ಹಾಗೂ ವಿಶ್ವಾಸಿಗಳು ಈ ಭೇಟಿಯ ಅರ್ಥವನ್ನು ಗ್ರಹಿಸುವಂತೆ ಧರ್ಮೋಪದೇಶ ಕಾರ್ಯಕ್ರಮಗಳನ್ನು ಉತ್ತೇಜಿಸಲು ಆಹ್ವಾನಿಸಲಾಗಿದೆ.

ಅಂತಿಮವಾಗಿ, ಈಕ್ವಟೋರಿಯಲ್ ಗಿನಿಯ ಧರ್ಮಸಭೆ ಕ್ರೈಸ್ತ ಜೀವನವನ್ನು ನವೀಕರಿಸಲು, ಸುವಾರ್ತಾ ಕಾರ್ಯವನ್ನು ಬಲಪಡಿಸಲು ಪೇತ್ರನ ಉತ್ತರಾಧಿಕಾರಿಯನ್ನು ಸ್ವಾಗತಿಸಲು ಸಿದ್ಧವಾಗುತ್ತಿದೆ ಮತ್ತು ವಿಶೇಷವಾಗಿ ಅತ್ಯಂತ ಅಗತ್ಯವಿರುವವರಲ್ಲಿ  ಭರವಸೆಯನ್ನು ಪುನರುಜ್ಜೀವನಗೊಳಿಸಲು ಇದು ಒಂದು ಅವಕಾಶವಾಗಿದೆ.

ಲೋಕದ ಬೆಳಕಾದ ಕ್ರಿಸ್ತನ ಮೇಲೆ ದೃಷ್ಟಿ ನೆಟ್ಟಿರುವ ಧರ್ಮಾಧ್ಯಕ್ಷರು, ದೇಶದ ಎಲ್ಲರಿಗೂ ದೇವರನ್ನು ಮರೆಯಬಾರದು ಎಂದು, ಹಾಗೂ ಸಮಾಜವನ್ನು ಒಳಗಿನಿಂದ ಪರಿವರ್ತಿಸಬಲ್ಲ ಜೀವಂತ ವಿಶ್ವಾಸವನ್ನು ಮರುಕಂಡುಕೊಳ್ಳಲು ಆಹ್ವಾನಿಸುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

10 ಏಪ್ರಿಲ್ 2026, 15:14