ಕ್ಯಾಮರೂನ್‌ನ ವಾಯುವ್ಯ ಪ್ರದೇಶದ ಬಮೆಂಡಾ ನೆರೆಹೊರೆಯಲ್ಲಿ, ಕಾರಿಟಾಸ್ ಸಿಬ್ಬಂದಿಯೊಬ್ಬರು ಮಹಿಳೆಯರ ಗುಂಪಿಗೆ ವ್ಯವಹಾರ ಕೌಶಲಗಳ ತರಬೇತಿ ನೀಡುತ್ತಿರುವ ದೃಶ್ಯ. ಈ ತರಬೇತಿಯು ಆಂಗ್ಲೋಫೋನ್ ಬಿಕ್ಕಟ್ಟಿನ ತುರ್ತು ಪ್ರತಿಕ್ರಿಯೆ ಯೋಜನೆಯ (ACER) ಜೀವನೋಪಾಯದ ಭಾಗವಾಗಿದೆ. ಫೋಟೋ: ಯುಜೀನ್ ರಿಂಗ್ಯು / CRS ಕ್ಯಾಮರೂನ್‌ನ ವಾಯುವ್ಯ ಪ್ರದೇಶದ ಬಮೆಂಡಾ ನೆರೆಹೊರೆಯಲ್ಲಿ, ಕಾರಿಟಾಸ್ ಸಿಬ್ಬಂದಿಯೊಬ್ಬರು ಮಹಿಳೆಯರ ಗುಂಪಿಗೆ ವ್ಯವಹಾರ ಕೌಶಲಗಳ ತರಬೇತಿ ನೀಡುತ್ತಿರುವ ದೃಶ್ಯ. ಈ ತರಬೇತಿಯು ಆಂಗ್ಲೋಫೋನ್ ಬಿಕ್ಕಟ್ಟಿನ ತುರ್ತು ಪ್ರತಿಕ್ರಿಯೆ ಯೋಜನೆಯ (ACER) ಜೀವನೋಪಾಯದ ಭಾಗವಾಗಿದೆ. ಫೋಟೋ: ಯುಜೀನ್ ರಿಂಗ್ಯು / CRS 

ಕ್ಯಾಮರೂನ್‌ನ ಕಥೋಲಿಕ ಪರಿಹಾರ ಸೇವೆಗಳು(CRS): ಸತ್ಕಾರ್ಯದಲ್ಲಿ ವಿಶ್ವಾಸ

ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಏಪ್ರಿಲ್ 15ರಿಂದ 18ರವರೆಗೆ ಕ್ಯಾಮರೂನ್‌ಗೆ “ಶಾಂತಿಯ ಸಂದೇಶವಾಹಕರಾಗಿ” ಭೇಟಿ ನೀಡಲಿದ್ದಾರೆ. ದಶಕಗಳಿಂದ, (CRS)ಕಥೋಲಿಕ ಪರಿಹಾರ ಸೇವೆಗಳಂತಹ ಮಾನವೀಯ ಸಂಸ್ಥೆಗಳು ಆ ಸಂದೇಶವನ್ನು ಜೀವನದಲ್ಲಿ ಅಳವಡಿಸಲು ಸಹಾಯ ಮಾಡುತ್ತಿವೆ.

ಲೇಖಕರು: ಕ್ಲಾಡಿಯ ಟೊರೆಸ್

ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಏಪ್ರಿಲ್ 15ರಿಂದ 18ರವರೆಗೆ ಭೇಟಿ ನೀಡಲಿರುವ ಕ್ಯಾಮರೂನ್‌ನ ವಿಶ್ವಾಸಿಗಳಿಗೆ “ಶಾಂತಿಯ ಸಂದೇಶವಾಹಕರಾಗಿರುತ್ತಾರೆ.” ಆ ಸಂದೇಶವನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ, ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಾನವೀಯ ಸಂಸ್ಥೆಗಳು—ದಶಕಗಳಿಂದ ಅತಿ ದುರ್ಬಲರ ಅಗತ್ಯಗಳಿಗೆ ಆದ್ಯತೆ ನೀಡುತ್ತಿರುವವು—ಮುಖ್ಯ ಪಾತ್ರವಹಿಸುತ್ತಿವೆ.

ಇವುಗಳಲ್ಲಿ ಕಥೋಲಿಕ ಪರಿಹಾರ ಸೇವೆಗಳು (CRS) ಒಂದಾಗಿದೆ; ಇದು ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರ ಅಧಿಕೃತ ಅಂತರರಾಷ್ಟ್ರೀಯ ಮಾನವೀಯ ಸಂಸ್ಥೆಯಾಗಿದ್ದು, 1960ರಿಂದ ಪಶ್ಚಿಮ ಆಫ್ರಿಕಾದ ಈ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅಗತ್ಯವಿರುವವರಿಗೆ ತುರ್ತು ನೆರವನ್ನು ಒದಗಿಸುತ್ತಿದೆ. 2024ರಲ್ಲಿ, ಇದು ಕ್ಯಾಮರೂನ್‌ನ ಎಲ್ಲಾ ಹತ್ತು ಪ್ರದೇಶಗಳಲ್ಲಿ 43,379 ಜನರಿಗೆ ಜೀವನದಲ್ಲಿ ಬದಲಾವಣೆ ತರಬಹುದಾದ ಸೇವೆಗಳನ್ನು ಒದಗಿಸಿದೆ.

ಹಿಂಸೆಯಿಂದ ಸ್ಥಳಾಂತರಗೊಂಡವರಿಗೆ ಸಹಾಯ

ಎಲ್’ಒಸ್ಸರ್ವಾತೋರೆ ರೋಮಾನೊ ಜೊತೆ ಮಾತನಾಡಿದ ಸಿಆರ್‌ಎಸ್‌ನ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ಪ್ರಾದೇಶಿಕ ಕಚೇರಿಯ ಕಾರ್ಯಕ್ರಮ ಗುಣಮಟ್ಟದ ಉಪ ಪ್ರಾದೇಶಿಕ ನಿರ್ದೇಶಕಿ ಕ್ಯಾರೊಲೈನ್ ಅಗಾಲ್ಹೈರ್ ಮತ್ತು ಕ್ಯಾಮರೂನ್, ಚಾಡ್ ಮತ್ತು ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಸಿಆರ್‌ಎಸ್‌ನ ಸಂವಹನ ಅಧಿಕಾರಿ ಮೇಬಲ್ ಚೆಂಜೋ ಅವರು, ಉತ್ತರ-ಪಶ್ಚಿಮ ಪ್ರದೇಶದಲ್ಲಿರುವ ಆಂಗ್ಲೋಫೋನ್ ಸಂಕಷ್ಟವನ್ನು ತಮ್ಮ ಸಂಸ್ಥೆಯ ಪ್ರಮುಖ ಸವಾಲುಗಳಲ್ಲಿ ಒಂದಾಗಿ ಸೂಚಿಸಿದರು.

2017ರಿಂದ ಇಂಗ್ಲಿಷ್ ಭಾಷಿಕ ವಿಭಜನೆಪರ ಪಡೆಗಳು ಮತ್ತು ಸರ್ಕಾರದ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಿದ್ದು, ಇದರಿಂದ ಮಾನವೀಯ ಸೇವಕರಿಗೆ ಪೀಡಿತರನ್ನು ತಲುಪುವುದು ಹಲವುವೇಳೆ ಕಷ್ಟವಾಗುತ್ತದೆ. “ಕೆಲವು ಪ್ರದೇಶಗಳಲ್ಲಿ ಧರ್ಮಸಭೆ ಮತ್ತು ಅದರ ಆರೋಗ್ಯ ಕೇಂದ್ರಗಳು ಅಥವಾ ಶಾಲೆಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾಗಿವೆ,” ಎಂದು ಅಗಾಲ್ಹೈರ್ ವಿವರಿಸಿದರು; ಅವು ಅಮೂಲ್ಯವಾದ ಸಂಪನ್ಮೂಲಗಳು ಮತ್ತು ನೆರವನ್ನು ಒದಗಿಸುತ್ತಿವೆ.

2019ರಿಂದ ಸಿಆರ್‌ಎಸ್ ಕ್ಯಾಮರೂನ್‌ನ ಉತ್ತರ-ಪಶ್ಚಿಮ ಪ್ರದೇಶದಲ್ಲಿ ತುರ್ತು ಪ್ರತಿಕ್ರಿಯೆ ಯೋಜನೆಯನ್ನು ಜಾರಿಗೆ ತರುತ್ತಿದೆ. “ನಾವು ಅಲ್ಲಿ 1,50,000ಕ್ಕಿಂತ ಹೆಚ್ಚು ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಸೇವೆ ನೀಡಲು ಸಾಧ್ಯವಾಗಿದೆ,” ಎಂದು ಚೆಂಜೋ ಹೇಳಿದರು; ಇವರಲ್ಲಿ ಅನೇಕರು ತಮ್ಮ ಮನೆಗಳು ಮತ್ತು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ.

ಈ ಯೋಜನೆಯಡಿಯಲ್ಲಿ ಕುಟುಂಬಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು—ಹಂಡೆಗಳು, ಬಕೆಟ್‌ಗಳು, ಮಂಚಗಳು ಮತ್ತು ತಟ್ಟೆಗಳು—ಖರೀದಿಸಲು ಬಳಸಬಹುದಾದ ಎಲೆಕ್ಟ್ರಾನಿಕ್ ವೌಚರ್‌ಗಳನ್ನು ನೀಡಲಾಗುತ್ತದೆ. “ಅವರು ಇರುವ ಸಮುದಾಯಗಳಲ್ಲಿ ನೆಲೆಸಿಕೊಳ್ಳಲು ಸಹಾಯವಾಗಲೆಂದು ನಾವು ಈ ವಸ್ತುಗಳನ್ನು ನೀಡುತ್ತೇವೆ,” ಎಂದು ಚೆಂಜೋ ಹೇಳಿದರು.

ಯೋಜನೆಯ ಮತ್ತೊಂದು ಭಾಗವಾಗಿ, ಭಾಗವಹಿಸುವವರಿಗೆ ಸ್ವಂತ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ತರಬೇತಿ ನೀಡಲಾಗುತ್ತದೆ, ಇದರಿಂದ ಅವರು ದೀರ್ಘಕಾಲಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಸಿಆರ್‌ಎಸ್ ಭಾಗವಹಿಸುವವರಿಗೆ ಕೋಳಿ ಸಾಕಾಣಿಕೆ ತರಬೇತಿ ನೀಡಿದೆ. “ನಾವು ಅವರಿಗೆ ಮರಿಗಳು ಮತ್ತು ಕೋಳಿ ಸಾಕಾಣಿಕೆ ಸಾಧನಗಳನ್ನೂ ನೀಡಿದ್ದೇವೆ,” ಎಂದು ಚೆಂಜೋ ಹೇಳಿದರು. ಕೆಲವರು ಈಗಲೂ ಉತ್ತಮವಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅವರು ಸೇರಿಸಿದರು.

ಇನ್ನೊಂದು ಪ್ರಮುಖ ಸವಾಲು ಪಕ್ಕದ ದೇಶಗಳಿಂದ ಬರುವ ನಿರಾಶ್ರಿತರ ಪ್ರವಾಹವಾಗಿದೆ—ಪೂರ್ವದ ಮಧ್ಯ ಆಫ್ರಿಕಾ ಗಣರಾಜ್ಯದಿಂದ (ಈಗ ಸ್ವಲ್ಪ ಕಡಿಮೆ) ಮತ್ತು ಉತ್ತರದ ನೈಜೀರಿಯಾದಿಂದ. ಚಾಡ್ ಸರೋವರ ಪ್ರದೇಶದಲ್ಲಿ ಬೋಕೋ ಹರಾಮ್ ನಡೆಸಿದ ಹಿಂಸೆ, ಆಹಾರ ಕೊರತೆ ಮತ್ತು ಹವಾಮಾನ ಸಂಬಂಧಿತ ತುರ್ತು ಪರಿಸ್ಥಿತಿಗಳು ಜನರನ್ನು ಸ್ಥಳಾಂತರಗೊಳ್ಳಲು ಕಾರಣವಾಗಿವೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಆರ್‌ಎಸ್ ಆರಂಭಿಕ ಪುನಶ್ಚೇತನ ಯೋಜನೆಯನ್ನು ಜಾರಿಗೆ ತಂದಿದ್ದು, “ಕುಟುಂಬಗಳು ತಮ್ಮ ಜೀವನೋಪಾಯವನ್ನು ಮರುಸ್ಥಾಪಿಸಲು ಸಹಾಯ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ,” ಎಂದು ಅಗಾಲ್ಹೈರ್ ಹೇಳಿದರು. “ಹೊಸ ಜನರು ಬಂದ ಸಮುದಾಯಗಳಲ್ಲಿ, ನಾವು ಮೂಲಸೌಕರ್ಯ ಬೆಂಬಲ ನೀಡಿದ್ದೇವೆ,” ಎಂದು ಅವರು ವಿವರಿಸಿದರು; ಇದರಲ್ಲಿ ಆರೋಗ್ಯ ಕೇಂದ್ರಗಳು ಮತ್ತು ತರಗತಿಗಳು ಸೇರಿವೆ.

ಯುವಜನರಿಗೆ ಸಾಮಾಜಿಕ ಏಕತೆ ಕುರಿತು ತರಬೇತಿ

ಆ ಯೋಜನೆಯ ಮತ್ತೊಂದು ಭಾಗವಾಗಿ “ಸಾಮಾಜಿಕ ಏಕತೆ ಕುರಿತು ತರಬೇತಿ” ನೀಡಲಾಗಿತ್ತು ಎಂದು ಅಗಾಲ್ಹೈರ್ ಹೇಳಿದರು. ಇದರಿಂದ ಸ್ವೀಕರಿಸುವ ಸಮುದಾಯಗಳು ಮತ್ತು ಹೊಸದಾಗಿ ಬಂದವರು—ನೈಜೀರಿಯಾದ ಶರಣಾರ್ಥಿಗಳಾಗಲಿ, ನೈಜೀರಿಯಾದಲ್ಲಿ ದೀರ್ಘಕಾಲ ವಾಸಿಸಿ ಮರಳಿದ ಕ್ಯಾಮರೂನಿನವರಾಗಲಿ, ಅಥವಾ ಹತ್ತಿರದ ಗ್ರಾಮಗಳಿಂದ ಸ್ಥಳಾಂತರಗೊಂಡವರಾಗಲಿ—ಎಲ್ಲರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಲಾಯಿತು. “ಒಂದು ಗ್ರಾಮವು ಅಚಾನಕವಾಗಿ ದ್ವಿಗುಣವಾಗುವುದು ಮತ್ತು ಇಷ್ಟು ಹೊಸ ಜನರು ಅಲ್ಲಿಗೆ ಬರುವುದು ಎಂದಿಗೂ ಸುಲಭವಲ್ಲ.”

ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ಭೇದಗಳ ವಿಷಯದಲ್ಲಿ, ಸಿಆರ್‌ಎಸ್ “ಯುವ ರಾಯಭಾರಿಗಳು” ಮತ್ತು ಇತರರಿಗೆ ತರಬೇತಿ ನೀಡಿ, “ವಿವಾದಗಳನ್ನು ಪರಿಹರಿಸುವುದು ಮತ್ತು ತಮ್ಮ ಸಮುದಾಯಗಳಲ್ಲಿ ಸಾಮಾಜಿಕ ಏಕತೆಯನ್ನು ನಿರ್ಮಿಸುವುದು, ಶಾಂತಿಯುತ ಸಹವಾಸವನ್ನು ಸಾಧಿಸುವುದು, ಗ್ರಾಮ ಮಟ್ಟದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಸಂಘರ್ಷಗಳನ್ನು ಉತ್ತಮವಾಗಿ ನಿರ್ವಹಿಸುವುದು” ಎಂಬುದನ್ನು ಕಲಿಸಿತು ಎಂದು ಅವರು ಹೇಳಿದರು.

ಆ ಯೋಜನೆ ಕೆಲವು ವರ್ಷಗಳ ಹಿಂದೆ ಮುಗಿದಿದ್ದರೂ, ತರಬೇತಿ ಪಡೆದವರು “ತಮ್ಮ ಸಮುದಾಯಗಳಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ”; ಅವರು “ವಿಭಿನ್ನ ಗುಂಪುಗಳ ನಡುವೆ ಸಂಭಾಷಣೆಯನ್ನು ಸುಗಮಗೊಳಿಸಿ, ಇಲ್ಲದಿದ್ದರೆ ಪರಸ್ಪರ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದಾದ ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಾರೆ” ಎಂದು ಅವರು ಸೂಚಿಸಿದರು.

ಈ ದೀರ್ಘಕಾಲಿಕ ಸ್ಥೈರ್ಯವು ಅತ್ಯಂತ ಅಗತ್ಯವಾಗಿದೆ, ಏಕೆಂದರೆ 2025ರ ಆರಂಭದಿಂದ ಸಂಸ್ಥೆ ಎದುರಿಸುತ್ತಿರುವ ನೆರವು ಕಡಿತಗಳು ಪರಿಣಾಮ ಬೀರಿವೆ; ಆಗ ಅಮೇರಿಕದ ಆಡಳಿತವು ಕ್ಯಾಮರೂನ್‌ನ ಅನೇಕ ಸಿಆರ್‌ಎಸ್ ಯೋಜನೆಗಳಿಗೆ ಪ್ರಮುಖ ದಾನಿಯಾಗಿದ್ದ ಯುಎಸ್ಎಐಡಿಯನ್ನು ಮುಚ್ಚಿತ್ತು.

ಚೆಂಜೋ ಅವರು ವಿವರಿಸಿದಂತೆ, ನಿಧಿಗಳ ಮೂಲಗಳನ್ನು ವಿಭಿನ್ನಗೊಳಿಸುವುದು ಮತ್ತು “ಇತರೆ ಸ್ಥಳೀಯ ಸಹಭಾಗಿಗಳ ಸಾಮರ್ಥ್ಯವನ್ನು ಬಲಪಡಿಸುವುದು, ಅವರು ತುರ್ತು ಪ್ರತಿಕ್ರಿಯೆಗಳ ಮುಂಚೂಣಿಯಲ್ಲಿ ಇರಲು” ಸಹಾಯ ಮಾಡುವುದು—ಇವು ಕಡಿತಗಳ ಪರಿಣಾಮವನ್ನು ತಗ್ಗಿಸಲು ಕೈಗೊಂಡ ಕೆಲವು ಕ್ರಮಗಳಾಗಿವೆ.

“ನಾವು ಇಲ್ಲಿ ಇರುವುದೇ ಅಮೇರಿಕದ ಧರ್ಮಾಧ್ಯಕ್ಷರ ಇಚ್ಛೆಯಾದ ದುರ್ಬಲ ಪರಿಸ್ಥಿತಿಗಳಲ್ಲಿ ಬದುಕುತ್ತಿರುವ ಮತ್ತು ಸಂಕಷ್ಟ ಅನುಭವಿಸುತ್ತಿರುವ ಜನರನ್ನು ಬೆಂಬಲಿಸಲು ಮತ್ತು ಸಕ್ರಿಯೆಗಳನ್ನು ಕಾರ್ಯಗತಗೊಳಿಸಲು ನಾವು ಇಲ್ಲಿದ್ದೇವೆ. ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ನಮ್ಮನ್ನು ಅತ್ಯಂತ ಅಗತ್ಯವಿರುವ ಸಮುದಾಯಗಳಲ್ಲಿ ನಾವು ಸದಾ ಇರುತ್ತೇವೆ.”

ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ: ಭರವಸೆಯ ಸಂದೇಶವಾಹಕ

ನಿರಂತರ ಅಗತ್ಯಗಳು ಮತ್ತು ಸೀಮಿತ ಸಂಪನ್ಮೂಲಗಳ ಈ ಹಿನ್ನೆಲೆಯಲ್ಲಿಯೇ, ಈ  ಭೇಟಿಗೆ ವಿಶೇಷ ಮಹತ್ವವಿದೆ. ಸ್ಥಳೀಯರು ಪೂಜ್ಯ ತಂದೆಯನ್ನು ಸ್ವಾಗತಿಸಲು ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಉತ್ಸಾಹದ ವಾತಾವರಣವಿದೆ ಎಂದು ಚೆಂಜೋ ವಿವರಿಸಿದರು; ಅವರು ಆಂಗ್ಲ ಭಾಷಿಕ ಉತ್ತರ-ಪಶ್ಚಿಮ ಭಾಗದಲ್ಲಿರುವ ಯೌಂಡೇ, ಡೌಅಲಾ ಮತ್ತು ಬಮೆಂಡಾ ನಗರಗಳಿಗೆ ಭೇಟಿ ನೀಡಲಿದ್ದಾರೆ.

“ಜಗದ್ಗುರುಗಳು ಭರವಸೆಯ ಸಂದೇಶವಾಹಕರಾಗಿದ್ದಾರೆ. ಕಥೋಲಿಕ ಧರ್ಮಸಭೆಯ ಉನ್ನತಾಧಿಕಾರಿಯೇ ಕ್ಯಾಮರೂನ್‌ಗೆ ಬರುತ್ತಿರುವುದು—ಅದೇ ಅಲ್ಲ, ಈಗಾಗಲೇ ದಶಕಕ್ಕೂ ಸಮೀಪವಾಗಿ ಸಂಕಷ್ಟ ಅನುಭವಿಸುತ್ತಿರುವ ಜನರನ್ನು ಭೇಟಿ ಮಾಡಲು ವಿಶೇಷವಾಗಿ ಬಮೆಂಡಾಗೆ ತೆರಳುತ್ತಿರುವುದು—ಜನರಿಗೆ ಕೆಲವು ಧೈರ್ಯವನ್ನು ನೀಡುತ್ತದೆ… ಅದು ಆ ಭಾಗದ ಜನರಿಗೆ ಒಂದು ಚಿಕ್ಕ ಭರವಸೆ ಮತ್ತು ಸಮಾಧಾನವಾಗುತ್ತದೆ,” ಎಂದು ಅವರು ಹೇಳಿದರು. “ಜಗದ್ಗುರುಗಳು ಸಹಾನುಭೂತಿಯ ಮನುಷ್ಯ, ಅವರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ” ಎಂಬ ಅರಿವು ಅವರಿಗೆ ದೊರೆಯುತ್ತದೆ.

ಚೆಂಜೋ ಅವರು ಪೂಜ್ಯ ತಂದೆಯವರ ಉಪಸ್ಥಿತಿಯಿಂದ ಕ್ಯಾಮರೂನ್ ಜನರ ಆತಿಥ್ಯ, ಸ್ಥೈರ್ಯ ಮತ್ತು ದೃಢನಿಶ್ಚಯದ ಬಗ್ಗೆ ಹೆಚ್ಚಿನ ಗಮನ ಸೆಳೆಯಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. “ಜನರು ಮತ್ತು ನಾಯಕರು ಎಲ್ಲರೂ ಒಟ್ಟಾಗಿ ಕ್ಯಾಮರೂನ್ ಅನ್ನು ತಮ್ಮ ಶ್ರೇಷ್ಠ ಪ್ರಯತ್ನವನ್ನು ಮಾಡುತ್ತಿರುವ ದೇಶವೆಂದು ನೋಡಲಿ” ಎಂದು ಅವರು ಹೇಳಿದರು.

ಅಮೇರಿಕಾದವರಾದ ಅಗಾಲ್ಹೈರ್ ಅವರು 2020ರಿಂದ 2024ರವರೆಗೆ ಸಿಆರ್‌ಎಸ್ ಕ್ಯಾಮರೂನ್ ಜೊತೆ ಕೆಲಸ ಮಾಡಿದ್ದು, ಅದಕ್ಕೂ ಮೊದಲು 2006ರಿಂದ 2009ರವರೆಗೆ ಪೀಸ್ ಕಾರ್ಪ್ಸ್ ಜೊತೆ ಕಾರ್ಯನಿರ್ವಹಿಸಿದ್ದರು. ಕೆಲವೊಮ್ಮೆ ಜನರು ಕ್ಯಾಮರೂನ್ ಅನ್ನು ‘ಆಫ್ರಿಕಾದ ಸಂಕ್ಷಿಪ್ತ ರೂಪ’ ಎಂದು ಕರೆಯುತ್ತಾರೆ ಎಂದು ಅವರು ಹೇಳಿದರು, ಏಕೆಂದರೆ “ಇಲ್ಲಿ ಎಲ್ಲವೂ ಸ್ವಲ್ಪ ಸ್ವಲ್ಪ ಇದೆ: ಉತ್ತರದಲ್ಲಿ ಸಾಹೆಲ್ ಪ್ರದೇಶ, ದಕ್ಷಿಣ-ಪಶ್ಚಿಮದಲ್ಲಿ ಹುಲ್ಲುಗಾವಲು ಪ್ರದೇಶಗಳು, ಪೂರ್ವದಲ್ಲಿ ಕಾಂಗೋ ಮಳೆಕಾಡು—ಭೌಗೋಳಿಕವಾಗಿ ಹಲವು ವೈವಿಧ್ಯತೆ ಇದೆ.”

300ಕ್ಕೂ ಹೆಚ್ಚು ಜನಾಂಗಗಳು ಇಲ್ಲಿ ಇರುವುದನ್ನು ಕೂಡ ಅವರು ಉಲ್ಲೇಖಿಸಿದರು; ಪ್ರತಿಯೊಂದಕ್ಕೂ ತಮ್ಮದೇ ಆದ ಸಾಂಸ್ಕೃತಿಕ ಮತ್ತು ಭಾಷಾ ವೈಶಿಷ್ಟ್ಯಗಳಿವೆ. “ಕ್ಯಾಮರೂನಿನವರು ಅತ್ಯಂತ ಒಳ್ಳೆಯ, ಆಸಕ್ತಿದಾಯಕ, ಚೈತನ್ಯಮಯ ಮತ್ತು ಸ್ನೇಹಪರ ಜನರು. ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುವ ಅನುಭವ ನನಗೆ ಸಂತೋಷ ನೀಡಿದೆ; ಉತ್ತಮ ಭವಿಷ್ಯವನ್ನು ನೋಡಲು ಇರುವ ಸಹಕಾರ ಮನೋಭಾವವು ಅವರಿಗೆ ಮಾತ್ರವಲ್ಲ, ನನಗೂ ಉತ್ಸಾಹವನ್ನು ನೀಡುತ್ತದೆ,” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

12 ಏಪ್ರಿಲ್ 2026, 19:50