ಕಿಲಾಂಬಾದಲ್ಲಿ ಪೂಜ್ಯ ಜಗದ್ಗುರುಗಳ ಪವಿತ್ರ ಬಲಿಪೂಜೆಯಲ್ಲಿ ಸಂಗೀತಗಾರರು, ಮಿಷನರಿಗಳು ಮತ್ತು ವೈದ್ಯರು
ಲೇಖಕರು: ಕ್ಲಾಡಿಯಾ ಟೊರೆಸ್ – ಕಿಲಾಂಬಾ, ಆಂಗೋಲಾ
ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಲುವಾಂಡಾ ಕರಾವಳಿ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಯೋಜಿತ ನಗರ ಪ್ರದೇಶವಾದ ಕಿಲಾಂಬಾದಲ್ಲಿ ಪವಿತ್ರ ಬಲಿಪೂಜೆ ಆಚರಿಸಿದರು. ಸುಮಾರು 1,00,000 ಜನರು ಏಪ್ರಿಲ್ 19 ರ ಭಾನುವಾರದ ಪೂಜೆಯಲ್ಲಿ ಭಾಗವಹಿಸಿದರು—ಲುವಾಂಡಾದಿಂದ ಮಾತ್ರವಲ್ಲದೆ, ಪೋಲ್ಯಾಂಡ್, ಇಟಲಿ ಮತ್ತು ದೂರದ ಉರುಗ್ವೆಯಿಂದಲೂ ಜನರು ಬಂದಿದ್ದರು.
ಸಂಗೀತದ ಮೂಲಕ ನಂಬಿಕೆಯ ಅಭಿವ್ಯಕ್ತಿ
‘500 vozes’ ಗಾಯನ ವೃಂದದ ಸಂಗೀತದಿಂದ ಉತ್ಸವಮಯ ವಾತಾವರಣ ಮೂಡಿದ್ದು, ಅಂಗೋಲಾ ಮತ್ತು ಸಾಂ ತೋಮೆಯ ಧರ್ಮಾಧ್ಯಕ್ಷರ ಸಭೆ (CEAST)ಗೆ ಸೇರಿರುವ ಧರ್ಮಪ್ರಾಂತ್ಯಗಳು ಮತ್ತು ಮಹಾಧರ್ಮಪ್ರಾಂತ್ಯಗಳ ಗಾಯನ ವೃಂದಗಳನ್ನು ಪ್ರತಿನಿಧಿಸುತ್ತ, ರಾಷ್ಟ್ರೀಯ ಪ್ರಾರ್ಥನಾ ಕಾರ್ಯಾಲಯದ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
“ಜನರನ್ನು ಕುಣಿಯುವಂತೆ ಮಾಡುವ ಎಲ್ಲಾ ಸಂಗೀತವನ್ನು ವಾದಿಸಲು ನಾವು ಇಲ್ಲಿ ಬಂದಿದ್ದೇವೆ,” ಎಂದು ಪವಿತ್ರ ಬಲಿಪೂಜೆಯಲ್ಲಿ ಕೀಬೋರ್ಡ್ ವಾದಿಸುತ್ತಿದ್ದ ಇಬ್ಬರು ಯುವಕರಲ್ಲಿ ಒಬ್ಬರಾದ ವಾದಕ ಲೂಯಿಸ್ ಮುಕ್ಸಿಂಡಾ ಹೇಳಿದರು. ಅವರಿಗಾಗಿ, ಇಂತಹ ಕಾರ್ಯಕ್ರಮದಲ್ಲಿ ವಾದಿಸುವುದು ಇದೇ ಮೊದಲ ಬಾರಿಯಾಗಿದ್ದು “ಇದು ಬಹಳ ಉತ್ತಮ ಅವಕಾಶ ಮತ್ತು ನನಗೆ ತುಂಬಾ ಉತ್ಸಾಹವಾಗುತ್ತಿದೆ,” ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಉರುಗ್ವೆ ಮತ್ತು ಪೋಲ್ಯಾಂಡ್‌ನ ಮಿಷನರಿಗಳು
ಪಾಸ್ಕಾ ಹಬ್ಬದ ಮೂರನೇ ಭಾನುವಾರದ ಪವಿತ್ರ ಬಲಿಗಾಗಿ, ಬಿಳಿ ವಸ್ತ್ರ ಧರಿಸಿದ ಯಾಜಕರ ದೊಡ್ಡ ಗುಂಪೊಂದು ಮೊದಲ ಕೆಲವು ಸಾಲುಗಳಲ್ಲಿ ಕುಳಿತಿತ್ತು. ಅವರಲ್ಲಿ ಉರುಗ್ವೆಯಿಂದ ಬಂದ ಮಿಷನರಿ ಯಾಜಕರಾದ ವಂ. ಗುರು ಆಂದ್ರೆಸ್ ಅಲ್ಗೋರ್ಟಾ ಕೂಡ ಇದ್ದರು; ಅವರು ಅನೇಕ ವರ್ಷಗಳಿಂದ ಅಂಗೋಲಾದಲ್ಲಿ ವಾಸವಿದ್ದು, ಲುವಾಂಡಾದ ಸಾಂ ಪೌಲೋ ಧರ್ಮಕೇಂದ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.
“ಪೂಜ್ಯ ಜಗದ್ಗುರು ನಮ್ಮೊಂದಿಗೆ ಇಲ್ಲಿರುವುದು ನಮಗೆ ತುಂಬಾ ಸಂತೋಷವಾಗಿದೆ,” ಎಂದು ಅವರು ಹೇಳಿದರು. ಬೆಂಗುಯೆಲಾ ಎಂಬ ಕರಾವಳಿ ನಗರದಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಬಾಧಿತರಾದ ಜನರೊಂದಿಗೆ ಪೂಜ್ಯ ಜಗದ್ಗುರು ತೋರಿಸಿದ ಸಮೀಪತೆಗೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಏಪ್ರಿಲ್ 18 ರಂದು ಅಂಗೋಲಾ ಸರ್ಕಾರದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಪ್ರವಾಹಕ್ಕೆ ಬಲಿಯಾದವರನ್ನೂ ಮತ್ತು ತಮ್ಮ ಮನೆಗಳನ್ನು ಕಳೆದುಕೊಂಡವರನ್ನೂ ಸ್ಮರಿಸಿದರು.
“ಪೂಜ್ಯ ಜಗದ್ಗುರು ಅವರ ನೋವಿನಲ್ಲಿ ಪಾಲ್ಗೊಂಡರು. ಆ ಕ್ಷಣದಲ್ಲಿ ಅವರು ಕೇವಲ ಬೆಂಗುಯೆಲಾನನ್ನೇ ಅಲ್ಲ, ಎಲ್ಲ ಅಂಗೋಲಾ ಜನರನ್ನೂ ಅಪ್ಪಿಕೊಂಡಂತಾಯಿತು,” ಎಂದು ಉರುಗ್ವೆಯ ಮಿಷನರಿ ಹೇಳಿದರು.
ಅಲ್ಲಿ ಪೋಲ್ಯಾಂಡ್‌ನ ಫ್ರಾನ್ಸಿಸ್ಕನ್ ಮಿಷನರಿ ಆಫ್ ಮೇರಿ ಸಂಘದ ಸಹೋದರಿ ಕ್ರಿಸ್ತಿನಾ ಜಾಚ್ವಿಯಜಾ ಕೂಡ ಇದ್ದರು; ಅವರು ಅಂಗೋಲಾದಲ್ಲಿ ಸೇವಾ ಕಾರ್ಯ, ಶಿಕ್ಷಣ ಮತ್ತು ತಮ್ಮ ಸಭೆಯ ತರಬೇತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. “ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವುದು ಅದ್ಭುತವಾಗಿದೆ,” ಎಂದು ಅವರು ಹೇಳಿದರು, ಮತ್ತು ಪೂಜ್ಯ ಜಗದ್ಗುರುವಿನ ಈ ಭೇಟಿಯು ಅಂಗೋಲಾದ ಹೊಸ ಸುವಾರ್ತಾ ಪ್ರಚಾರಕ್ಕೆ ಬಹಳ ಉಪಯುಕ್ತವಾಗಲಿದೆ ಎಂಬ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.
ಸೇವೆಯಲ್ಲಿ ತೊಡಗಿರುವ ವೈದ್ಯರು
ಅಲ್ಲಿ ಇಟಲಿಯಿಂದ ಬಂದ ಬಾಲರೋಗ ತಜ್ಞರಾದ ಸರ್ಜಿಯೋ ಫಕ್ಕಿನಿ ಮತ್ತು ಎಲಿಯೋನೋರಾ ಬಿಯಾಸೊಟ್ಟೊ ಕೂಡ ಇದ್ದರು; ಅವರು ಲುವಾಂಡಾದ ಡಿವೈನ್ ಪ್ರಾವಿಡೆನ್ಸ್ ಆಸ್ಪತ್ರೆಯಲ್ಲಿ ಎರಡು ವರ್ಷದ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಕ್ಕಳಲ್ಲಿನ ಅಪೌಷ್ಟಿಕತೆಯ ನಿವಾರಣೆಗೆ ಕೆಲಸ ಮಾಡುತ್ತಿದ್ದಾರೆ, ಇದನ್ನು ಎಲಿಯೋನೋರಾ “ಸಂಕೀರ್ಣ” ವಿಷಯವೆಂದು ವಿವರಿಸಿ, ಕೆಲವೊಮ್ಮೆ ಅದು ಅವರನ್ನು ಅತ್ಯಂತ “ಕಷ್ಟಕರ ಪರಿಸ್ಥಿತಿಗಳಲ್ಲಿ” ಇಡುತ್ತದೆ ಎಂದರು. ಸವಾಲುಗಳಿದ್ದರೂ ಸಹ, “ನಾವು ಸಾಧ್ಯವಾದಷ್ಟು ಮಾಡಲು ಪ್ರಯತ್ನಿಸುತ್ತೇವೆ,” ಎಂದು ಅವರು ಹೇಳಿದರು.
“ನಮ್ಮ ಕೆಲಸ, ಈಗಾಗಲೇ ಕಷ್ಟಕರವಾಗಿರುವ ಈ ಪರಿಸ್ಥಿತಿಯಲ್ಲಿಯೂ ಅತೀ ಹಿಂದುಳಿದವರ ಮತ್ತು ಅಂಚಿನಲ್ಲಿರುವವರ ಬಳಿಗೆ ನಮ್ಮನ್ನು ಕರೆದೊಯ್ಯುತ್ತದೆ; ಮತ್ತು ಇಂತಹ ಜನರ ಬಳಿಯೇ ಇರಲು ಬಯಸುವ ಪೂಜ್ಯ ಜಗದ್ಗುರುವಿನ ಸಾನ್ನಿಧ್ಯ ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ಸೇವೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ” ಎಂದು ಸರ್ಜಿಯೋ ಸೇರಿಸಿದರು.
ಅಂಗೋಲಾದ ಡಿವೈನ್ ವರ್ಡ್ ಮಿಷನರಿ ಯಾಜಕರಾದ ವಂ. ಗುರು ಡ್ಯಾನಿಯಲ್ ಮಲಾಂಬಾ ಅವರು, “ಶಾಂತಿಯ ಯಾತ್ರಿಕ” ಮತ್ತು ಭರವಸೆಯ ಸಂದೇಶವಹಕರಾಗಿ ಪೂಜ್ಯ ಜಗದ್ಗುರುರನ್ನು ಸ್ವಾಗತಿಸುವುದು ಅಂಗೋಲಾದ ಕ್ರೈಸ್ತರಿಗೆ ಸಂತೋಷದ ಮೂಲವಾಗಿದೆ ಎಂದು ಹೇಳಿದರು. ಜೊತೆಗೆ, ಜನರಿಗೆ ಇನ್ನೂ “ಸಾಮಾಜಿಕ ಶಾಂತಿ, ಹೃದಯದ ಶಾಂತಿ ಮತ್ತು ಸಮಪಾಲಿನ ಸಹಜೀವನದ ಶಾಂತಿ” ಅಗತ್ಯವಿದೆ ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).