ವಿಶ್ವದ ಧರ್ಮಗುರುಗಳ ಸಿನೊಡ್ ಸಭೆ ಮಹಿಳಾ ಪ್ರತಿನಿಧಿಗಳೊಂದಿಗೆ ಜಗದ್ಗುರುಗಳ ಭೇಟಿಯ ಚಿತ್ರ (ವ್ಯಾಟಿಕನ್ ಮೀಡಿಯಾ ಡಿವಿಷನ್ ಫೋಟೋ) ವಿಶ್ವದ ಧರ್ಮಗುರುಗಳ ಸಿನೊಡ್ ಸಭೆ ಮಹಿಳಾ ಪ್ರತಿನಿಧಿಗಳೊಂದಿಗೆ ಜಗದ್ಗುರುಗಳ ಭೇಟಿಯ ಚಿತ್ರ (ವ್ಯಾಟಿಕನ್ ಮೀಡಿಯಾ ಡಿವಿಷನ್ ಫೋಟೋ)  (VATICAN MEDIA Divisione Foto)

ಪ್ರಧಾನ ಗುರು ಹೋಲ್ಲೆರಿಕ್: ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಮಹತ್ವ

ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಸಿನೋಡ್ ಅಧ್ಯಯನ ಗುಂಪಿನ ವರದಿ ಪ್ರಕಟಣೆ, ಪ್ರಧಾನ ಗುರು ಹೋಲ್ಲೆರಿಕ್ ಅವರ ಪ್ರಕಾರ, ಧರ್ಮಸಭೆಯಲ್ಲಿ ಹೆಚ್ಚಿನ ಸೇರ್ಪಡೆಗೆ ದಾರಿ ತೋರಿಸುವ “ಮಹತ್ವದ ಹೆಜ್ಜೆ” ಆಗಿದೆ. ಆದರೆ, ಮಹಿಳೆಯರಿಗೆ ಅಭಿಷೇಕಿತ ಸೇವೆಯಲ್ಲಿ ಪ್ರವೇಶ ನೀಡುವ ವಿಷಯದಲ್ಲಿ ಯಾವುದೇ ಮುಂದಿನ ಬೆಳವಣಿಗೆಗಾಗಿ, ಧರ್ಮಸಭೆಯ ಒಗ್ಗಟ್ಟನ್ನು ಕಾಪಾಡಲು ವಿಶಾಲವಾದ ಸಮಗ್ರ ಏಕಮನಸ್ಸಿನ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಲೇಖಕರು : ಗುಡ್ರುನ್ ಸೈಲರ್ ಮತ್ತು ಲಿಂಡಾ ಬೋರ್ಡೋನಿ

ಲಕ್ಸಂಬರ್ಗ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರೂ, ಧರ್ಮಾಧ್ಯಕ್ಷರ ಹದಿನಾರನೇ ಸಿನೋಡ್‌ನ ಸಾಮಾನ್ಯ ಮಹಾಸಭೆಯ (ಸಿನೋಡ್ ಆನ್ ಸಿನೋಡಾಲಿಟಿ) ಪ್ರಧಾನ ವರದಿಗಾರರೂ ಆಗಿರುವ ಪ್ರಧಾನ ಗುರು ಜೀನ್-ಕ್ಲೋಡ್ ಹೋಲ್ಲೆರಿಕ್, S.J., ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತ ಸಿನೋಡ್ ಅಧ್ಯಯನ ಗುಂಪಿನ ವರದಿ ಪ್ರಕಟಣೆಯನ್ನು ಒಂದು ಮಹತ್ವದ ಮುಂದಿನ ಹೆಜ್ಜೆ ಎಂದು ವಿವರಿಸಿದ್ದಾರೆ. ಆದರೆ, ಅಭಿಷೇಕಿತ ಸೇವೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಯಾವುದೇ ಭವಿಷ್ಯದ ಬೆಳವಣಿಗೆಗಳಿಗೆ ಧರ್ಮಸಭೆಯ ವ್ಯಾಪಕವಾದ ಏಕಮನಸ್ಸು ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

“ಧರ್ಮಸಭೆಯ ಜೀವನ ಮತ್ತು ನಾಯಕತ್ವದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ” ಎಂಬ ವಿಷಯದ ಮೇಲೆ ಅಧ್ಯಯನ ಮಾಡಿದ ಅಧ್ಯಯನ ಗುಂಪು ಸಂಖ್ಯೆ 5 ಈ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಇತ್ತೀಚೆಗೆ ಸಿನೋಡ್‌ನ ಪ್ರಧಾನ ಸಚಿವಾಲಯ, ಸಿನೋಡ್ ನಂತರದ ಮನನ ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಿದೆ.

ವಿವಾದಾತ್ಮಕ ಉಲ್ಲೇಖದ ಹಿನ್ನೆಲೆ

ಹಿಂದೆ ಬಾನ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಸಂದರ್ಭದಲ್ಲಿ, ಪ್ರಧಾನ ಗುರು ಹೋಲ್ಲೆರಿಕ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದರು: “ದೀರ್ಘಾವಧಿಯಲ್ಲಿ, ದೇವರ ಜನರ ಅರ್ಧ ಭಾಗವು ಅಭಿಷೇಕಿತ ಸೇವೆಗೆ ಪ್ರವೇಶವಿಲ್ಲದೆ ನೋವು ಅನುಭವಿಸುತ್ತಿದ್ದರೆ, ಧರ್ಮಸಭೆ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.”

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನ ಗುರು ಅವರು ಈ ಹೇಳಿಕೆಯನ್ನು ಸ್ಪಷ್ಟಪಡಿಸಿದರು. ಇದು ವಿಶೇಷವಾಗಿ ಮಹಿಳೆಯರನ್ನು ಡೀಕನ್ ಸೇವೆಗೆ ಅಭಿಷೇಕಿಸುವ ಸಾಧ್ಯತೆಯ ಕುರಿತ ಚರ್ಚೆಗೆ ಸಂಬಂಧಿಸಿದ್ದು, ದೀರ್ಘಾವಧಿಯ ದೃಷ್ಟಿಕೋನದಲ್ಲಿಯೇ ಹೇಳಲ್ಪಟ್ಟದ್ದೆಂದು ಹೇಳಿದರು.

ಅಂತಹ ಪ್ರಶ್ನೆಗಳು ಧರ್ಮಸಭೆಯೊಳಗಿನ ವಿಭಜನೆ ತಪ್ಪಿಸಲು ವ್ಯಾಪಕವಾದ ಏಕಮನಸ್ಸನ್ನು ಅಗತ್ಯಪಡಿಸುತ್ತವೆ ಎಂಬ ತಮ್ಮ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು. ಸೇವಾ ವಿಚಾರಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳು ವಿಭಜನೆಗೆ ಕಾರಣವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿ ಅವರು ಆಂಗ್ಲಿಕನ್ ಸಮುದಾಯದಲ್ಲಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿದರು.

ಕಥೋಲಿಕ ಧರ್ಮಸಭೆಯಲ್ಲಿನ ಏಕತೆಯು ಆಳವಾಗಿದೆ ಆದ್ದರಿಂದ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರ. ಮತ್ತೆ ಒತ್ತಿ ಹೇಳುವುದಾದರೆ, ಈ ವಿಷಯವು “ಡೀಕನ್ ಸೇವೆಗೆ ಅಭಿಷೇಕ” ಕುರಿತದ್ದಾಗಿದ್ದು, ಅದರ ಕ್ರಮವು ದೀರ್ಘಾವಧಿಯದ್ದಾಗಿದೆ ಎಂದು ಅವರು ಹೇಳಿದರು.

ಐದನೇ ಅಧ್ಯಯನ ಗುಂಪು : “ಮಹತ್ವದ ಹೆಜ್ಜೆ”

ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರಿಂದ ಸ್ಥಾಪಿಸಲ್ಪಟ್ಟ ಐದನೇ ಅಧ್ಯಯನ ಗುಂಪಿನ ವರದಿಯನ್ನು, ಪ್ರಧಾನ ಗುರು ಹೋಲ್ಲೆರಿಕ್ ಅವರು ಮಹತ್ವದ ಬೆಳವಣಿಗೆ ಎಂದು ವಿವರಿಸಿ, “ಇದು ಒಂದು ದೊಡ್ಡ ಹೆಜ್ಜೆ,” ಎಂದು ಅವರು ಹೇಳಿದರು. ಮುಂದುವರಿಸಿ, “ಮಹಿಳೆಯರು ಧರ್ಮಸಭೆಯಲ್ಲಿ ಸ್ವಾಗತಿಸಲ್ಪಟ್ಟವರಾಗಿದ್ದಾರೆ ಎಂಬ ಭಾವನೆ ಅವರಿಗೆ ಅತ್ಯಂತ ಮುಖ್ಯ. ಕೇವಲ ಧರ್ಮಸಭೆಯ ಆಸನಗಳನ್ನು ತುಂಬುವುದಕ್ಕಾಗಿ ಅಲ್ಲ, ಆದರೆ ಧರ್ಮಸಭೆಯ ಜೀವನದಲ್ಲಿಯೂ, ಧರ್ಮಸಭೆಯ ಪ್ರೇಷಿತ ಕಾರ್ಯದಲ್ಲಿಯೂ ಸಂಪೂರ್ಣವಾಗಿ ಪಾಲ್ಗೊಳ್ಳಲು ಅವಕಾಶ ದೊರಕಬೇಕು.” ಪ್ರಧಾನ ಗುರು ಅವರು ಈ ಚರ್ಚೆ ಇನ್ನೂ ತೆರೆಯಲ್ಪಟ್ಟದ್ದೇ ಆಗಿದೆ ಎಂದು ದೃಢಪಡಿಸಿದರು. ಸಮಸ್ಯೆಗಳನ್ನು ಗುರುತಿಸುವುದೇ ಸಿನೋಡಲ್ ಪ್ರಕ್ರಿಯೆಯ ಒಂದು ಮಹತ್ವದ ಭಾಗವೆಂದು ಅವರು ಹೇಳಿದರು.

ನಾಯಕತ್ವದ ಕಡೆಗಿನ ಮಾರ್ಗಗಳು

ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ “ಇದನ್ನು ಹೇಗೆ ಮಾಡಬೇಕು ಎಂಬ ದಾರಿಯನ್ನು ತೋರಿಸುತ್ತಿದ್ದಾರೆ” ಎಂದು ಪ್ರಧಾನ ಗುರು ಹೇಳಿದರು. ರೋಮನ್ ಕುರಿಯಾದ ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿರುವ ಇತ್ತೀಚಿನ ನಿರ್ಧಾರಗಳನ್ನು ಅವರು ನಿಧಾನವಾದ ಬದಲಾವಣೆಯ ಸ್ಪಷ್ಟ ಉದಾಹರಣೆಯಾಗಿ ಸೂಚಿಸಿದರು.

ತಮ್ಮ ಸ್ವಂತ ಮಹಾಧರ್ಮಪ್ರಾಂತ್ಯದಲ್ಲಿಯೂ ನಡೆದಿರುವ ಬೆಳವಣಿಗೆಗಳನ್ನು ಅವರು ಉಲ್ಲೇಖಿಸಿದರು. ಅವರ ಮಾತಿನಲ್ಲಿ, ಮಹಿಳೆಯರು ಈಗ ಮಹತ್ವದ ಧಾರ್ಮಿಕ ಸೇವಾ ಕ್ಷೇತ್ರಗಳಿಗೆ ಜವಾಬ್ದಾರರಾಗಿರುವ ಧರ್ಮಾಧ್ಯಕ್ಷೀಯ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ — ಸಾಮಾಜಿಕ ಸೇವೆ ಮತ್ತು ಆಧ್ಯಾತ್ಮಿಕ ತರಬೇತಿ ಸೇರಿದಂತೆ. ಜೊತೆಗೆ, ಗುರುದೀಕ್ಷಾಭ್ಯರ್ಥಿಗಳ ಜೊತೆಯಾಗಿರುವ ತಂಡಗಳಲ್ಲಿಯೂ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಪ್ರಯೋಗದಲ್ಲಿ ಒಗ್ಗಟ್ಟು ಮತ್ತು ವೈವಿಧ್ಯತೆ

ಪ್ರಧಾನ ಗುರು ಹೋಲ್ಲೆರಿಕ್ ಅವರ ಮಾತಿನಲ್ಲಿ, ಸ್ಥಳೀಯ ಧರ್ಮಸಭೆಗಳಲ್ಲಿ — ವಿಶೇಷವಾಗಿ ಅಭಿಷೇಕಿತವಲ್ಲದ ಸೇವೆಗಳಲ್ಲಿ — ವಿಭಿನ್ನ ಧಾರ್ಮಿಕ ವಿಧಾನಗಳು ಇರಬಹುದು; ಆದರೆ ಯಾವುದೇ ಬೆಳವಣಿಗೆಗಳು ವಿಶ್ವವ್ಯಾಪಿ ಧರ್ಮಸಭೆಯೊಂದಿಗಿನ ಒಗ್ಗಟ್ಟಿನಲ್ಲಿ ಇರಬೇಕು.

“ಇದು ಯಾವಾಗಲೂ ರೋಮ್‌ನ ಧರ್ಮಾಧ್ಯಕ್ಷರೊಂದಿಗೆ ಸಂವಾದದಲ್ಲಿ ನಡೆಯಬೇಕು — ಏಕೆಂದರೆ ಅವರು ಒಗ್ಗಟ್ಟಿನ ಜವಾಬ್ದಾರರು. ಇದನ್ನು ಚೆನ್ನಾಗಿ ಆಲೋಚಿಸಿ ಮಾಡಬೇಕು; ಕೇವಲ ಮಾಡಬೇಕೆಂದು ತುರ್ತುಪಡಿಸಬಾರದು,” ಎಂದು ಅವರು ಹೇಳಿದರು.

ಸ್ಥಳೀಯ ಧರ್ಮಸಭೆಗಳಲ್ಲಿ ವಿಭಿನ್ನ ವೇಗಗಳು ಇರಬಹುದು ಎಂಬುದನ್ನೂ ಅವರು ಒಪ್ಪಿಕೊಂಡರು — ಏಕೆಂದರೆ ಅದು ಸಂಸ್ಕೃತಿಯ ಭಾಗವಾಗಿದೆ, ಮತ್ತು ಆ ಸಂಸ್ಕೃತಿಯಲ್ಲಿ ಮಹಿಳೆಯರ ಸ್ಥಾನಕ್ಕೆ ಸಂಬಂಧಿಸಿದೆ. ಆದರೆ, ಅಭಿಷೇಕಿತ ಸೇವೆಯ ವಿಷಯದಲ್ಲಿ, ವಿಭಜನೆ ತಪ್ಪಿಸಲು ವಿಶ್ವವ್ಯಾಪಿ ಏಕಮನಸ್ಸು ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೊನೆಗೆ, ಯುವಜನರು ವ್ಯಕ್ತಪಡಿಸುವ ಧಾರ್ಮಿಕ ಚಿಂತನೆಗಳ ಬಗ್ಗೆ ಮಾತನಾಡುತ್ತಾ ಅವರು ಹೇಳಿದರು: “ಧರ್ಮಶಾಸ್ತ್ರ ಅಧ್ಯಯನ ಮಾಡಿದ ಮಹಿಳೆಯರಷ್ಟೇ ಅಲ್ಲ, ನಾನು ಯುವಕರೊಂದಿಗೆ ಇದ್ದಾಗ, ನಮ್ಮ ಯುವತಿಯರಲ್ಲಿ ಅನೇಕರು ದುಃಖದಲ್ಲಿದ್ದಾರೆ ಎಂಬುದನ್ನು ನಾನು ಅನುಭವಿಸುತ್ತೇನೆ — ಏಕೆಂದರೆ ಧರ್ಮಸಭೆ ಅವರನ್ನು ಸಂಪೂರ್ಣವಾಗಿ ಗುರುತಿಸುತ್ತಿಲ್ಲ ಎಂಬ ಭಾವನೆ ಅವರಿಗೆ ಇದೆ.” “ ಇದು ಯಾಜಕನಾಗಿ  ನನಗೆ ಅತೀವ ದುಃಖವನ್ನು ಉಂಟುಮಾಡುತ್ತದೆ” ಎಂದು ಹೇಳಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

10 ಏಪ್ರಿಲ್ 2026, 15:04