ಪ್ರಭುವಿನ ದಿನದ ಧ್ಯಾನ: ನನ್ನ ಪ್ರಭುವೇ,ನನ್ನ ದೇವರೇ
ಲೇಖಕರು: ವಂ. ಗುರು ಎಡ್ಮಂಡ್ ಪವರ್
ಇಂದಿನ ಯೋವಾನ್ನರ ಶುಭಸಂದೇಶದ ೨೦ನೆಯ ಅಧ್ಯಾಯವು, ಕ್ರಮವಾಗಿ ಎರಡು ಭಾನುವಾರ ಸಂಜೆಗಳಲ್ಲಿ ನಡೆದ ಘಟನೆಗಳನ್ನು ವಿವರಿಸುತ್ತದೆ: ಮೊದಲದು ಪುನರುತ್ಥಾನದ ದಿನ, ಮತ್ತೊಂದು ಅದರ ಮುಂದಿನ ಭಾನುವಾರ — ಅಂದರೆ ಇಂದಿನ ದಿನ.
ನಾಲ್ಕನೇ ಶುಭಸಂದೇಶಕಾರನ ಶೈಲಿಯಂತೆ, ಇಲ್ಲಿ ಆಳವಾದ ಅರ್ಥಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಓದಲು ಅಗತ್ಯವಿದೆ. ಪ್ರತಿ ಸಂದರ್ಭದಲ್ಲೂ ಶಿಷ್ಯರು ಒಂದು ಕೊಠಡಿಯಲ್ಲಿ ಇದ್ದಾರೆ; ಅದು ಸೀಮಿತವಾದ ಸ್ಥಳದೊಳಗಿನ ಮುಚ್ಚಿದ ಅನುಭವವನ್ನು ಕೊಡುತ್ತದೆ — ಭಯ ಮತ್ತು ಆತ್ಮರಕ್ಷಣೆಯಿಂದ ನಿರ್ಮಿತವಾದ ಒಂದು ಬಂಧನದಂತಿದೆ.
ಇನ್ನೊಂದು ರೂಪಕದಲ್ಲಿ ಹೇಳುವುದಾದರೆ, ಅದು ಕಲ್ಲಿನ ಸಮಾಧಿಯಂತಿದೆ — ದೊಡ್ಡ ಕಲ್ಲಿನಿಂದ ಮುಚ್ಚಲ್ಪಟ್ಟ ಸ್ಥಳ. ಪ್ರಭು ಯೇಸು ಪುನರುತ್ಥಾನಗೊಂಡಿದ್ದಾರೆ; ಆದರೆ ಈಗ ಅವರು ಶಿಷ್ಯರ ಮರಣಸಮಾನವಾದ ಭಯದ ಸಮಾಧಿಯೊಳಗೆ ಪ್ರವೇಶಿಸುತ್ತಾರೆ.
ಎರಡೂ ಭಾನುವಾರಗಳಲ್ಲಿ “ಬಾಗಿಲುಗಳು ಮುಚ್ಚಲ್ಪಟ್ಟಿದ್ದವು” ಎಂಬ ಪುನರುಕ್ತಿ, ಈ ಘಟನೆ ಸಂಪೂರ್ಣವಾಗಿ ಶಾಬ್ದಿಕವಲ್ಲ ಎಂಬುದನ್ನು ಸೂಚಿಸುತ್ತದೆ. ಪ್ರಭು ಯೇಸು, ಅವರನ್ನು ಭಯದಿಂದ ಹೊರತೆಗೆದು ಹೊಸ ಜೀವನದತ್ತ ನಡೆಸಲು ಒಳನುಗ್ಗುತ್ತಾರೆ.
ಪ್ರತಿ ಸಂದರ್ಭದಲ್ಲೂ ಅವರ ಆರಂಭಿಕ ವಂದನೆ ಒಂದು ಪೂಜಾ ಸ್ವರೂಪವನ್ನು ಹೊಂದಿದೆ: “ನಿಮಗೆ ಶಾಂತಿ ಇರಲಿ.”
ಇದಕ್ಕೆ ತಕ್ಷಣವೇ ಅವರು ತಮ್ಮ ಗಾಯಗಳನ್ನು ತೋರಿಸುತ್ತಾರೆ. ಇಲ್ಲಿ ಯಾತನೆ ನಡೆದಿಲ್ಲವೆಂಬ ನಾಟಕವಿಲ್ಲ; ಅಥವಾ ಅದು ಈಗ ನಡೆಯುತ್ತಿರುವುದರಲ್ಲಿ ಪ್ರಮುಖವಲ್ಲವೆಂಬುದೂ ಅಲ್ಲ. ಪಾಡುಗಳನ್ನು ಪ್ರಭು ಅನುಭವಿಸಿರುವುದು ಸತ್ಯ, ಮತ್ತು ಅದು ಈಗಿನ ಅನುಭವದ ಕೇಂದ್ರದಲ್ಲಿಯೇ ಇದೆ. ಶಿಷ್ಯರೂ ನಮ್ಮಂತೆಯೇ, ನೋವನ್ನು ಅನುಭವಿಸಬೇಕಾಗುತ್ತದೆ.
ಪ್ರಭು ಯೇಸು ಈಗಾಗಲೇ ಪೇತ್ರನಿಗೆ ಊಟದ ಸಮಯದಲ್ಲಿ ಹೇಳಿದ್ದರು: “ನಾನು ಹೋಗುವ ಸ್ಥಳಕ್ಕೆ ನೀನು ಈಗ ಬರಲಾರೆ; ಆದರೆ ನಂತರ ಬರುವೆ.” (ಯೋವಾನ್ನ 13:36)
ಅವರನ್ನು ಕಂಡಾಗ ಶಿಷ್ಯರು ಸಂತೋಷಪಟ್ಟರು — “ಪ್ರಭು ಯೇಸುವನ್ನು ಕಂಡು ಶಿಷ್ಯರು ಹರ್ಷಪಟ್ಟರು.” ಮತ್ತೆ “ಶಾಂತಿ ಇರಲಿ” ಎಂದು ಹೇಳಿ, ಅವರು ಪವಿತ್ರಾತ್ಮನ ವರವನ್ನು ಅವರ ಮೇಲೆ ಉಸಿರಾಗಿ ಊದುತ್ತಾರೆ. ನಾಲ್ಕನೇ ಶುಭಸಂದೇಶದಲ್ಲಿ ಇದು ಪವಿತ್ರಾತ್ಮರ ಅಭಿಷೇಕದ ಕ್ಷಣವಾಗಿದೆ.
ಪೌಲನು ಹೇಳುವಂತೆ, ಪವಿತ್ರಾತ್ಮರ ಫಲಗಳು — ಪ್ರೀತಿ, ಸಂತೋಷ, ಶಾಂತಿ (ಗಲಾತ್ಯರು 5:22). ಇಂದಿನ ಪಾಸ್ಕಾ ಸಂದರ್ಭದಲ್ಲಿರುವ ಈ ಶುಭಸಂದೇಶದಲ್ಲಿ, ಪವಿತ್ರಾತ್ಮರ ಮೊದಲ ಫಲಗಳೇ ನೀಡಲ್ಪಡುತ್ತವೆ ಮತ್ತು ಸ್ವೀಕರಿಸಲ್ಪಡುತ್ತವೆ. ಪ್ರೀತಿ ಎಂಬ ಪದವನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅದು ಇಲ್ಲವೆಂದು ಹೇಳಬಹುದೇ? ಪ್ರಭು ಯೇಸು ತಮ್ಮ ಶಿಷ್ಯರಿಗೆ ಈಗಾಗಲೇ ಹೇಳಿದ್ದರು: “ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ…(”ಯೊವಾನ್ನ 15:13)
ಎರಡನೇ ಭಾನುವಾರ ತೋಮನು ಬರುತ್ತಾನೆ; ಅವನೊಂದಿಗೆ ನಾವು ಸಹ ಈ ಘಟನೆಗೆ ಪ್ರವೇಶಿಸುತ್ತೇವೆ. ಅವನ ಅನುಮಾನವನ್ನು ನಾವು ಹಂಚಿಕೊಳ್ಳುತ್ತೇವೇ? ನಾವು ನೋಡದದ್ದನ್ನು ನಿಜವಾಗಿ ನಂಬಬಹುದೇ? ಇತರರ ಮಾತನ್ನು ನಂಬಬಹುದೇ? ನಮ್ಮ ಭಯಗಳ ಸೀಮೆಗಳೊಳಗೆ, ಇಂದಿನ ಲೋಕದ ಸಂಕಷ್ಟಗಳ ನಡುವೆ, ಶಾಂತಿ ಮತ್ತು ಸಂತೋಷ ಇರಬಹುದೇ?
ತೋಮನು ನೋಡಿ ನಂಬುತ್ತಾನೆ; ಆದರೆ ಅವನು ಸುವಾರ್ತೆಯ ಅಂತಿಮ ಘೋಷಣೆಯಾಗಿ ಹೇಳುವ- “ನನ್ನ ಪ್ರಭುವೇ,ನನ್ನ ದೇವರೇ!” — ಈ ವಿಶ್ವಾಸವೇ ಅಂತಿಮ ಶಿಖರವಲ್ಲ.
ಇನ್ನೂ ಎತ್ತರವಾದ ವಿಶ್ವಾಸವಿದೆ: “ಕಾಣದೆ ವಿಶ್ವಾಸಿಸುವವರು ಧನ್ಯರು.”
ಈ ಜನಸಮೂಹದ ನಡುವೆ ನಾವೆಲ್ಲರೂ ನಿಂತಿದ್ದೇವೆ; ಭಗವಂತನಲ್ಲಿ ನಮ್ಮ ನಂಬಿಕೆಯು ಭರವಸೆ ಮತ್ತು ಪ್ರೀತಿಯಿಂದ ನಡೆಸಲ್ಪಡುತ್ತದೆ: ನಮಗಾಗಿ ಆತನ ಪ್ರೀತಿ ಮತ್ತು ಅದಕ್ಕೆ ನಮ್ಮ ವಿಶ್ವಾಸಾರ್ಹ ಪ್ರತಿಕ್ರಿಯೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).