ಆಫ್ರಿಕಾದಲ್ಲಿ ಎಂಟನೇ ದಿನ: ಪೂಜ್ಯ ಜಗದ್ಗುರು ಲಿಯೋ ಅವರಿಂದ ವೃದ್ಧರ ಭೇಟಿ ಮತ್ತು ಸೌರಿಮೊದಲ್ಲಿ ಭಕ್ತರೊಂದಿಗೆ ಪ್ರಾರ್ಥನೆ
ಲೇಖಕರು: ಕ್ಲಾಡಿಯಾ ಟೊರೆಸ್ – ಕಿಲಾಂಬಾ, ಆಂಗೋಲಾ
ಪೂಜ್ಯ ಜಗದ್ಗುರು ಲಿಯೋ ಹದಿನಾಲ್ಕನೇ ಅವರು ಅಂಗೋಲಾದಲ್ಲಿನ ತಮ್ಮ ಕೊನೆಯ ಪೂರ್ಣ ದಿನದಲ್ಲಿ ಸುಮಾರು 2,000 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ.
ವೃದ್ಧರೊಂದಿಗೆ ಭೇಟಿ
ಏಪ್ರಿಲ್ 20ರ ಸೋಮವಾರ ಬೆಳಿಗ್ಗೆ, ಅವರು ಅಂಗೋಲಾದ ರಾಜಧಾನಿಯಿಂದ ಸುಮಾರು 950 ಕಿಲೋಮೀಟರ್ ದೂರದಲ್ಲಿರುವ ಸೌರಿಮೊ ನಗರಕ್ಕೆ ವಿಮಾನದಲ್ಲಿ ತೆರಳಿದರು. ಅಲ್ಲಿ ಅವರು ವೃದ್ಧರ ಆರೈಕೆ ಮಂದಿರವನ್ನು ಭೇಟಿ ಮಾಡಿದರು, ಅಲ್ಲಿ ಅವರನ್ನು ಹಾಡು ಮತ್ತು ನೃತ್ಯಗಳೊಂದಿಗೆ ಸ್ವಾಗತಿಸಲಾಯಿತು.
ತಮ್ಮ ಸಂದೇಶದಲ್ಲಿ, ವೃದ್ಧರಿಗೆ ಕೇವಲ ಸಹಾಯ ಮಾತ್ರವಲ್ಲ, ಅವರನ್ನು ಆಲಿಸುವ ಅಗತ್ಯವೂ ಇದೆ, ಏಕೆಂದರೆ ಅವರು “ಒಂದು ಜನಾಂಗದ ಜ್ಞಾನವನ್ನು ಸಂರಕ್ಷಿಸುತ್ತಾರೆ” ಎಂದು ಪೂಜ್ಯ ಜಗದ್ಗುರು ಹೇಳಿದರು.
ಸೌರಿಮೊದಲ್ಲಿ ಪವಿತ್ರ ಬಲಿಪೂಜೆ
ಸಂಕ್ಷಿಪ್ತ ಭೇಟಿಯ ನಂತರ, ಪೂಜ್ಯ ಜಗದ್ಗುರು ಅವರು ಸ್ವರ್ಗಾರೋಹಣ ಮಾತೆಯ ಪ್ರಧಾನ ದೇವಾಲಯದ ಸಮೀಪದಲ್ಲಿ ಭಕ್ತರೊಂದಿಗೆ ಪವಿತ್ರ ಬಲಿಪೂಜೆಯನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಪ್ರದೇಶದಲ್ಲಿ ಸುಮಾರು 40,000 ಜನರು ಕೂಡಿದ್ದರು. ಅಂದಾಜು 20,000 ಜನರು ಆವರಣದ ಹೊರಭಾಗದಲ್ಲೂ ನಿಂತು ದೂರದಿಂದಲೇ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ತೀವ್ರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಲವರು ಛತ್ರಿಗಳನ್ನು ಹಿಡಿದಿದ್ದರು, ಆದರೆ ಆ ಬಿಸಿಲು ಸಹ ಅವರನ್ನು ಪವಿತ್ರ ತಂದೆಯವರೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುವುದನ್ನು ತಡೆಯಲಿಲ್ಲ.
ತಮ್ಮ ಉಪದೇಶದಲ್ಲಿ, ಇಂದು “ಅನೇಕ ಜನರ ಭರವಸೆ ಹಿಂಸಾಚಾರದಿಂದ ಕುಗ್ಗುತ್ತಿದೆ, ಅಧಿಕಾರಿಗಳಿಂದ ದುರುಪಯೋಗಗೊಳ್ಳುತ್ತಿದೆ ಮತ್ತು ಶ್ರೀಮಂತರಿಂದ ವಂಚಿಸಲ್ಪಡುತ್ತಿದೆ” ಎಂದು ಪೂಜ್ಯ ಜಗದ್ಗುರು ಹೇಳಿದರು. “ಅನ್ಯಾಯವು ಹೃದಯಗಳನ್ನು ಭ್ರಷ್ಟಗೊಳಿಸಿದಾಗ, ಎಲ್ಲರಿಗೂ ಸೇರಿದ ಅನ್ನವು ಕೆಲವರ ಸ್ವತ್ತಾಗುತ್ತದೆ. ಈ ದುಷ್ಟತೆಗಳ ನಡುವೆ, “ಕ್ರಿಸ್ತನು ಜನರ ಕೂಗನ್ನು ಆಲಿಸಿ, ನಮ್ಮ ಇತಿಹಾಸವನ್ನು ನವೀಕರಿಸುತ್ತಾನೆ; ನಮ್ಮನ್ನು ಪ್ರತಿಯೊಂದು ಪತನದಿಂದ ಎತ್ತಿ, ಪ್ರತಿಯೊಂದು ನೋವಿನಲ್ಲಿ ಧೈರ್ಯ ನೀಡುತ್ತಾನೆ ಮತ್ತು ನಮ್ಮ ಕರ್ತವ್ಯದಲ್ಲಿ ಉತ್ತೇಜನ ನೀಡುತ್ತಾನೆ” ಎಂದು ಅವರು ಹೇಳಿದರು.
“ನಿಜವಾದ ನಂಬಿಕೆಯನ್ನು” ಬಿಟ್ಟು “ಮೂಢನಂಬಿಕೆಗಳ ಆಚರಣೆಗಳನ್ನು” ಅಳವಡಿಸಿಕೊಳ್ಳುವ ಅಪಾಯದ ಬಗ್ಗೆ ಅವರು ಎಚ್ಚರಿಕೆ ನೀಡಿದರು; ಅಲ್ಲಿ ದೇವರು ಕೇವಲ ನಮಗೆ ಅನುಕೂಲವಾದಾಗ ಮಾತ್ರ ಹುಡುಕಲ್ಪಡುವ ಮತ್ತು ಅಷ್ಟರವರೆಗೆ ಮಾತ್ರ ಇರುವ ವಿಗ್ರಹವಾಗುತ್ತಾನೆ ಎಂದು ಹೇಳಿದರು.
ಹಾಗೆಯೇ “ಕ್ರಿಸ್ತನನ್ನು ಹುಡುಕುವ ತಪ್ಪಾದ ಉದ್ದೇಶಗಳ”; ಉದಾಹರಣೆಗೆ, “ಅವನನ್ನು ಗುರು(ಪಾಶ್ಚಿಮಾತ್ಯ ಮತ್ತು ಆಧುನಿಕ ಜಗತ್ತಿನಲ್ಲಿ "ಗುರು" ಎಂದರೆ ಕೇವಲ ಒಳ್ಳೆಯ ಹಿತವಚನ ನೀಡುವ, ಯೋಗ ಅಥವಾ ಜೀವನಶೈಲಿಯನ್ನು ಕಲಿಸಿಕೊಡುವ ಒಬ್ಬ ತರಬೇತುದಾರ) ಅಥವಾ ಶುಭಲಾಭದ ಸಾಧನವೆಂದು ಪರಿಗಣಿಸುವ” ವಿರುದ್ಧವೂ ಅವರು ಎಚ್ಚರಿಕೆ ನೀಡಿದರು.
ಧರ್ಮಾಧ್ಯಕ್ಷರು, ಯಾಜಕರು, ಸಮರ್ಪಿತರು ಮತ್ತು ಸೇವಾ ಕಾರ್ಯಕರ್ತರೊಂದಿಗೆ ಭೇಟಿ
ಪವಿತ್ರ ಬಲಿಪೂಜೆಯ ನಂತರ, ಪೂಜ್ಯ ಜಗದ್ಗುರು ಅವರು ವಿಮಾನದಲ್ಲಿ ಮತ್ತೆ ಲುವಾಂಡಾಕ್ಕೆ ತೆರಳಿ, ಫಾತಿಮಾ ಮಾತೆಯ ಧರ್ಮಕೇಂದ್ರದಲ್ಲಿ ಧರ್ಮಾಧ್ಯಕ್ಷರು, ಯಾಜಕರು, ಉಪಯಾಜಕರು, ಸಮರ್ಪಿತ ಮಹಿಳೆಯರು ಮತ್ತು ಪುರುಷರು ಹಾಗೂ ಸೇವಾ ಕಾರ್ಯಕರ್ತರೊಂದಿಗೆ ಭೇಟಿ ನಡೆಸಿದರು. ಅವರು ತಮ್ಮ ಸೇವೆಯಲ್ಲಿ ಅವರನ್ನು ಉತ್ತೇಜಿಸಿ, ಅವರು ತಮ್ಮ ಕರೆಯನ್ನು ಎಷ್ಟು ಉದಾರತೆಯಿಂದ ಅಂಗೀಕರಿಸುತ್ತಾರೋ ಅದನ್ನು ದೇವನು ತಿಳಿದಿದ್ದಾನೆ ಎಂದು ಭರವಸೆ ನೀಡಿದರು. “ನೀವು ಅವನ ಪ್ರೀತಿಗಾಗಿ, ಸುವಾರ್ತೆಯ ಸತ್ಯದಿಂದ ನಿಮ್ಮ ಜನರನ್ನು ಪೋಷಿಸುವ ಸಲುವಾಗಿ ಮಾಡುವ ಯಾವುದರ ಮೇಲೂ ಆತ ನಿರ್ಲಕ್ಷ್ಯ ತೋರಿಸುವುದಿಲ್ಲ,” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).