ಹುಡುಕಿ

 ಅಲ್ಜೀರಿಯಾದ ಅನ್ನಾಬಾದಲ್ಲಿ ಜನರನ್ನು  ವಂದಿಸುತ್ತಿರುವ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅಲ್ಜೀರಿಯಾದ ಅನ್ನಾಬಾದಲ್ಲಿ ಜನರನ್ನು ವಂದಿಸುತ್ತಿರುವ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ  (@Vatican Media)

ಪೂಜ್ಯ ಜಗದ್ಗುರು ಅವರ ಅಲ್ಜೀರಿಯಾ ಭೇಟಿ ಸಹೋದರತ್ವಪೂರ್ಣ ಜಗತ್ತಿಗೆ ಉತ್ತೇಜನ

ಅಲ್ಜೀರಿಯಾದ ಕಥೋಲಿಕರು, ಪೂಜ್ಯ ಜಗದ್ಗುರು ಅವರ ಅಪೋಸ್ತೋಲಿಕ ಪ್ರವಾಸ ಹೇಗೆ ನಡೆಯುತ್ತಿದೆ ಮತ್ತು ಅವರ ಭೇಟಿಯಿಂದ ಏನು ಪರಿಣಾಮ ಉಂಟಾಗಬಹುದು ಎಂಬ ಕುರಿತು ತಮ್ಮ ಆಶೆಗಳು ಮತ್ತು ಅನುಭವಗಳನ್ನು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗಿನ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಲೇಖಕರು: ಸ್ಟೀಫನ್ ವಾನ್ ಕೆಂಪಿಸ್ ಮತ್ತು ಇಸಬೆಲ್ಲಾ ಎಚ್. ಡಿ ಕಾರ್ವಾಲೋ

ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಅಲ್ಜೀರಿಯಾ ಅಪೋಸ್ತೋಲಿಕ ಪ್ರವಾಸ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಅಲ್ಲಿ ಇರುವ ಕಥೋಲಿಕರು ಈ ಭೇಟಿಯನ್ನು ಉತ್ತೇಜನದ ಜೊತೆಗೆ, ದೇಶದ ಬಹುಮತ ಜನಸಂಖ್ಯೆಯಾಗಿರುವ ಮುಸ್ಲಿಮರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವ ಅವಕಾಶವೆಂದು ನೋಡುತ್ತಿದ್ದಾರೆ.

ಅಲ್ಜೀರಿಯಾದಲ್ಲಿ ಈ ಭೇಟಿಗೆ ಸಂಬಂಧಿಸಿದ ಸಂವಹನ ಕಾರ್ಯದರ್ಶಿಯಾಗಿರುವ ವೈಟ್ ಫಾದರ್ (ಆಫ್ರಿಕಾ ಮಿಷನರಿ) ವಂ. ಜೋಸೆ ಮಾರಿಯಾ ಕ್ಯಾಂಟಲ್ ರಿವಾಸ್ ಅವರ ಪ್ರಕಾರ, ಈ ಪ್ರವಾಸವು ಸ್ಥಳೀಯ ಕ್ರೈಸ್ತ ಸಮುದಾಯಗಳನ್ನು “ಈ ಭೂಮಿಯಲ್ಲಿ ಯೇಸುವಿನ ಸಾಕ್ಷಿಗಳಾಗಿ” ಮುಂದುವರಿಯಲು ಪ್ರೇರೇಪಿಸುವ ಅವಕಾಶವಾಗಿದೆ.

ಅವರು ಇನ್ನೂ, ಪೂಜ್ಯ ಜಗದ್ಗುರುರನ್ನು ಸ್ವಾಗತಿಸಲು ಸ್ಥಳೀಯ ಆಡಳಿತವು ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಉಲ್ಲೇಖಿಸಿ, ಅವರು “ರಾಷ್ಟ್ರದ ಮುಖ್ಯಸ್ಥರಾಗಿ” ಮತ್ತು “ಧರ್ಮಸಭೆಯ ಮುಖ್ಯಸ್ಥರಾಗಿ” ಎರಡೂ ರೀತಿಯ ಭೇಟಿಯನ್ನು ಮಾಡುತ್ತಿರುವುದರಿಂದ, ಇದು “ನೈತಿಕ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ನಾಯಕತ್ವ” ಹೊಂದಿದ ಭೇಟಿಯಾಗಿದೆ ಎಂದು ಹೇಳಿದರು.

“ಎರಡೂ ವಿಧದ ಪ್ರೋಟೋಕಾಲ್‌ಗಳನ್ನು ನಿರ್ವಹಿಸುವಲ್ಲಿ ಮತ್ತು ಸಂಯೋಜಿಸುವಲ್ಲಿ ಅಧಿಕಾರಿಗಳು ಬಹಳ ಲವಚಿಕತೆಯನ್ನು ತೋರಿಸಿದ್ದಾರೆ,” ಎಂದು ಅವರು ವಿವರಿಸಿದರು.

ವಂ. ರಿವಾಸ್ ಅವರು ಇನ್ನೂ, ಅನೇಕ ಅಲ್ಜೀರಿಯಾ ಮುಸ್ಲಿಮರಿಗೆ ಪೂಜ್ಯ ಜಗದ್ಗುರು ಯಾರು, ಅಥವಾ ಅವರ ಸಂತ ಆಗಸ್ಟಿನ್ ಅವರೊಂದಿಗೆ ಇರುವ ಸಂಬಂಧ ಏನು, ಮತ್ತು ಅದು ಅವರ “ದೈನಂದಿನ ಜೀವನದೊಂದಿಗೆ” ಹೇಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸೂಚಿಸಿದರು.

ಆದ್ದರಿಂದ ಈ ಪ್ರವಾಸವು, “ಈ ಆಧ್ಯಾತ್ಮಿಕ ನಾಯಕರನ್ನು ಇಂದಿನ ಮುಸ್ಲಿಂ ಜನರೊಂದಿಗೆ ಸಂಪರ್ಕಿಸುವುದು, ಮತ್ತು ನಾವು ಪರಸ್ಪರ ಏನು ಕಲಿಯಬಹುದು, ಹೇಗೆ ಒಬ್ಬರಿಂದ ಮತ್ತೊಬ್ಬರು ಪಾಠಗಳನ್ನು ಸ್ವೀಕರಿಸಬಹುದು ಎಂಬುದನ್ನು ಅರಿಯಲು ಉತ್ತಮ ಅವಕಾಶವಾಗಿದೆ” ಎಂದು ಅವರು ಹೇಳಿದರು.

ಸಹೋದರತ್ವಪೂರ್ಣ ಜಗತ್ತಿಗೆ ಉತ್ತೇಜನ

ಅದೇ ರೀತಿಯಲ್ಲಿ, ಏಪ್ರಿಲ್ 13ರಂದು ಪೂಜ್ಯ ಜಗದ್ಗುರು ಅವರು ಅಲ್ಜೀರಿಯಾ ಸಮುದಾಯವನ್ನು ಭೇಟಿಯಾದ “ಆಫ್ರಿಕಾ ಮಾತೆಯ ಬಸಿಲಿಕಾ”ದ ರೆಕ್ಟರ್ ವಂ. ಪೀಟರ್ ಕ್ಲೇವರ್ ಕೋಘ್ ಅವರು, ಈ ದೇವಾಲಯವು ಕಥೋಲಿಕರಿಗೆ ಮಾತ್ರವಲ್ಲ, ಇತರರಿಗೂ ಮಹತ್ವದ ಕೇಂದ್ರವಾಗಿದ್ದು, ಅನೇಕ ಜನರನ್ನು ಒಟ್ಟುಗೂಡಿಸುತ್ತದೆ ಎಂದು ವಿವರಿಸಿದರು.

“ಬಹಳ ಬಾರಿ, ಕ್ರೈಸ್ತರಲ್ಲದವರೂ ಈ ಬಸಿಲಿಕಾಗೆ ಬರುತ್ತಾರೆ. ಅವರಿಗೆ ಇದರೊಂದಿಗೆ ಒಂದು ನಂಟಿದೆ. ಅವರು ಇಲ್ಲಿ ಪ್ರಾರ್ಥನೆ ಮಾಡಲು ಬರುತ್ತಾರೆ ಮತ್ತು ಇಲ್ಲಿ ಶಾಂತಿಯನ್ನು ಅನುಭವಿಸುತ್ತೇವೆ ಎಂದು ಹೇಳುತ್ತಾರೆ. ಅವರು ತಮ್ಮ ಅಗತ್ಯಗಳಿಗಾಗಿ ಕಥೋಲಿಕ ಕ್ರೈಸ್ತರಂತೆ ಕನ್ಯಾ ಮರಿಯಮ್ಮನವರಲ್ಲಿ ಬೇಡಿಕೊಳ್ಳುತ್ತಾರೆ” ಎಂದು ಅವರು ಹೇಳಿದರು. ಈ ಬಸಿಲಿಕಾದ ಪೀಠದ ಮೇಲಿರುವ ಶಾಸನವು ಹೀಗೆ ಹೇಳುತ್ತದೆ: “ಆಫ್ರಿಕಾ ಮಾತೆಯೇ, ನಮ್ಮಗಾಗಿ ಮತ್ತು ಮುಸ್ಲಿಮರಿಗಾಗಿ ಪ್ರಾರ್ಥಿಸು.” ಇದು ಈ ಸಂದರ್ಭಕ್ಕೆ ಹೊಂದಿಕೊಂಡಂತಾಗಿದೆ.

ಇದೇ ವೇಳೆ, ಏಪ್ರಿಲ್ 13ರಂದು ಅಲ್ಜೀರಿಯಾ ಸಮುದಾಯದೊಂದಿಗೆ ನಡೆದ ಭೇಟಿಯಲ್ಲಿ, ಅಲ್ಜಿಯರ್ಸ್ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಜೀನ್-ಪಾಲ್ ವೆಸ್ಕೋ ಅವರು ತಮ್ಮ ಪ್ರಾರಂಭಿಕ ಮಾತುಗಳಲ್ಲಿ, ಈ ದೇವಾಲಯಕ್ಕೆ ಬರುವವರಲ್ಲಿ ಹತ್ತು ಜನರಲ್ಲಿ ಒಂಬತ್ತು ಮಂದಿ ಮುಸ್ಲಿಮರು ಎಂದು ತಿಳಿಸಿದ್ದಾರೆ.

“ಈ ಬಸಿಲಿಕಾ ಯಾವಾಗಲೂ ಜನರನ್ನು ಆಕರ್ಷಿಸುವ ಪ್ರಮುಖ ಕೇಂದ್ರವಾಗಿದೆ,” ಎಂದು ವಂ. ಕೋಘ್ ಹೇಳಿದರು. “ಇದರ ಮಹತ್ವದ ಕಾರಣದಿಂದ ಇಲ್ಲಿ ಅನೇಕ ಜನರು ಬರುತ್ತಾರೆ.” ಶನಿವಾರಗಳಲ್ಲಿ (ಬಹುತೇಕ ಮುಸ್ಲಿಂ ದೇಶಗಳಲ್ಲಿ ವಾರದ ವಿಶ್ರಾಂತಿ ದಿನ) ಮತ್ತು ಹಬ್ಬದ ದಿನಗಳಲ್ಲಿ, ಈ ದೇವಾಲಯವು ದಿನಕ್ಕೆ ಸುಮಾರು 1000 ಮಂದಿ ಭೇಟಿದಾರರನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.

ತಮ್ಮ ಬಸಿಲಿಕಾ ಜನರನ್ನು ಒಂದಾಗಿಸುವ ಸ್ಥಳವಾಗಿರುವಂತೆ, ಪೂಜ್ಯ ಜಗದ್ಗುರು ಅವರ ಅಲ್ಜೀರಿಯಾ ಭೇಟಿ ಸಹ “ಒಂದು ಭೇಟಿಯ ಕ್ಷಣವಾಗಲಿ; ಇಲ್ಲಿ ನಮ್ಮ ಸಂಬಂಧಗಳು, ಸಂವಾದದ ಪ್ರಯತ್ನಗಳು, ಒಟ್ಟಿಗೆ ಬದುಕುವ ಮನೋಭಾವ, ಸಹಿಷ್ಣುತೆ ಮತ್ತು ಶಾಂತಿ ಮುಂಚೂಣಿಗೆ ಬರಲಿ” ಎಂದು ವಂ. ಕೋಘ್ ಆಶಿಸಿದರು.

“ಇದು ಈ ವಿಷಯಗಳ ಬಗ್ಗೆ ಮುಂಚೆ ಗಮನ ಹರಿಸದಿದ್ದ ಅನೇಕ ಜನರಿಗೆ ಸಹ ಅರಿವು ಮೂಡಿಸಬಹುದು; ‘ನಮಗೆ ಉತ್ತಮವಾದ, ಹೆಚ್ಚು ಸಹೋದರತ್ವಪೂರ್ಣ ಜಗತ್ತು ಅಗತ್ಯ’ ಎಂದು ಹೇಳುವಂತೆ ಮಾಡಬಹುದು” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

14 ಏಪ್ರಿಲ್ 2026, 20:25