ಧರ್ಮಸಭೆಯಲ್ಲಿ ಮಹಿಳೆಯರು: ‘ನಮಗೆ ನಿರ್ದಿಷ್ಟವಾದ ಪಾತ್ರವಿದೆ’
ಲೇಖಕರು: ಕೀಲ್ ಗಸ್ಸಿ
ಮಾರ್ಚ್ 9ರಂದು ರೋಮ್ ನಗರದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಬಂದ ಮಹಿಳೆಯರು ಸೇರಿಕೊಂಡು “ವಿಶ್ವಾಸಿ ಮಹಿಳೆಯರು: ಭವಿಷ್ಯದ ವಿದ್ಯಾರ್ಥಿ ನಾಯಕಿಯರು” ಎಂಬ ವಿಷಯದಡಿ ಜಗದ್ಗುರುಗಳ ಅಧಿಕಾರ ಪೀಠದಿಂದ ಮಾನ್ಯತೆ ಪಡೆದ ಬ್ರಿಟನ್ ಮತ್ತು ಆಸ್ಟ್ರೇಲಿಯಾ ರಾಯಭಾರ ಕಚೇರಿಗಳ ಸಂಯುಕ್ತ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 13 ರಾಷ್ಟ್ರಗಳಿಗೆ ಸೇರಿದ 15 ಮಹಿಳೆಯರು ದಿನಪೂರ್ತಿ ನಡೆದ ಅಧ್ಯಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಶ್ವಾಸ, ಮೌಲ್ಯಗಳು ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಧರ್ಮಸಭೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು.
ಈ ಮಹಿಳೆಯರು ರೋಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಂದ ಆಗಮಿಸಿದ್ದರು. ದಿನಪೂರ್ತಿ ನಡೆದ ಸಂವಾದಗಳಲ್ಲಿ ವಿಶ್ವಾಸದಿಂದ ಪ್ರೇರಿತ ಮಹಿಳಾ ನಾಯಕತ್ವವು ಶಾಂತಿ ನಿರ್ಮಾಣ, ಬಡತನ ನಿವಾರಣೆ, ಶಿಕ್ಷಣ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಲು ಹೇಗೆ ಸಹಕಾರಿಯಾಗಿದೆ ಎಂಬುದರ ಕುರಿತು ಚರ್ಚೆ ನಡೆಯಿತು.
‘A ಅಥವಾ B’ ಎಂಬ ಆಯ್ಕೆಯ ಪ್ರಶ್ನೆಯಲ್ಲ
ಕಾರ್ಯಕ್ರಮದ ಆರಂಭದಲ್ಲಿ ಜಗದ್ಗುರುಗಳ ಅಧಿಕಾರ ಪೀಠದ ಕೆನಡಾದ ರಾಯಭಾರಿ ಜಾಯ್ಸ್ ನೆಪಿಯರ್, ಆಸ್ಟ್ರೇಲಿಯಾದ ರಾಯಭಾರಿ ಕೀತ್ ಪಿಟ್, ಮತ್ತು ಬ್ರಿಟನ್‌ನ ರಾಯಭಾರಿ ಕ್ರಿಸ್ಟೊಫರ್ ಟ್ರಾಟ್ ಮಾತನಾಡಿದರು. ರಾಯಭಾರಿ ನೆಪಿಯರ್ ಅವರ ಭಾಷಣದ ಕುರಿತು ಭಾಗವಹಿಸಿದ ಕೆಲ ಮಹಿಳೆಯರು ತಮ್ಮ ಅನುಭವವನ್ನು ಹಂಚಿಕೊಂಡರು. ಕುಟುಂಬ ಜೀವನ, ಉದ್ಯೋಗ ಮತ್ತು ಆತ್ಮಿಕ ಜೀವನವನ್ನು ಸಮತೋಲನದಿಂದ ನಡೆಸುತ್ತಿರುವ ಮಹಿಳೆಯ ಉದಾಹರಣೆ ಅವರಿಗೆ ಪ್ರೇರಣೆಯಾಯಿತು ಎಂದು ಅವರು ಹೇಳಿದರು.
ಕೊಲಂಬಿಯಾದ ಡಾನಿಯೆಲಾ ನಿನೋ ಗಿರಾಲ್ಡೊ, ಇತ್ತೀಚೆಗೆ ವಿವಾಹವಾಗಿರುವ ಮತ್ತು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಉದ್ಯೋಗಿನಿ, ಈ ಉದಾಹರಣೆ ತನ್ನನ್ನು ವಿಶೇಷವಾಗಿ ಸ್ಪರ್ಶಿಸಿತು ಎಂದು ಹೇಳಿದರು. ಹೆರಿಗೆಯ ನಂತರ ಏನಾಗಬಹುದು ಎಂಬ ಭಯದಿಂದ ಮಹಿಳೆಯರು ಹಿಂದೆ ಸರಿಯಬಾರದು ಎಂದು ಅವರು ಹೇಳಿದರು.
ಕೆನಡಾದ ರಾಯಭಾರಿಯ ಉದಾಹರಣೆಯನ್ನು ನೋಡಿದಾಗ ಕೆಲಸ ಮತ್ತು ತಾಯಿತನವನ್ನು ಸಮತೋಲನಗೊಳಿಸುವುದನ್ನು ಭಯಪಡುವ ಅಗತ್ಯವಿಲ್ಲ ಎಂಬ ವಿಶ್ವಾಸ ಬಂದಿತು ಎಂದು ಗಿರಾಲ್ಡೊ ಹೇಳಿದರು. ಧರ್ಮಸಭೆಯಲ್ಲಿನ ತನ್ನ ಸೇವಾ ಕರೆಯನ್ನು ತ್ಯಜಿಸಬೇಕಾಗಿಲ್ಲ ಎಂಬ ಭರವಸೆ ಕೂಡ ಇದರಿಂದ ದೊರಕಿತು.
“ನಮಗೆ ಮಾರ್ಗದರ್ಶಕ ಉದಾಹರಣೆಗಳು ತುಂಬಾ ಅಗತ್ಯ. ಕೆಲವೊಮ್ಮೆ ಜೀವನದಲ್ಲಿ ‘A ಅಥವಾ B’ ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಮಾತ್ರ ಆರಿಸಬೇಕೆಂದು ನಾವು ಭಾವಿಸುತ್ತೇವೆ. ಆದರೆ ಇಂತಹ ಉದಾಹರಣೆಗಳು ನಮ್ಮ ಮುಂದೆ ಸಾಗುವ ದಾರಿಯನ್ನು ತೋರಿಸುತ್ತವೆ,” ಎಂದು ಅವರು ಹೇಳಿದರು.
ಮಹಿಳೆಯರ ಅವಿಭಾಜ್ಯ ಪಾತ್ರ
ಕಾರ್ಯಕ್ರಮದ ಅಂತ್ಯದಲ್ಲಿ ಕೆನ್ಯದ ಮೇರಿ ವಾಂಗಿಥಿ ಮುಗೊ ಮಾತನಾಡಿ, ಮಹಿಳೆಯರ ಸಾಧನೆಗಳನ್ನು ಆಚರಿಸುವುದಷ್ಟೇ ಅಲ್ಲ, ಹಿಂಸಾತ್ಮಕ ಪರಿಸ್ಥಿತಿಗಳಿಂದ ತಮ್ಮ ಧ್ವನಿಯನ್ನು ಕಳೆದುಕೊಂಡ ಮಹಿಳೆಯರನ್ನು ಕೂಡ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ Sema Nami ಸಂಸ್ಥೆಯ ಸ್ಥಾಪಕಿಯಾಗಿರುವ ಹಾಗೂ ತಲಿಥಾ ಕುಂ (Talith Kum) ಯುವ ರಾಯಭಾರಿಯಾಗಿರುವ ಮುಗೊ ಅವರಿಗಿದು ಮಹಿಳೆಯರ ಶೋಷಣೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕರೆಯಾಯಿತು.
ಮಾನವ ಕಳ್ಳಸಾಗಣೆಯಿಂದ ಬದುಕುಳಿದವರೊಂದಿಗೆ ನೇರವಾಗಿ ಕೆಲಸ ಮಾಡುವ ಅನುಭವದಿಂದ ಮಹಿಳೆಯರು ಇಲ್ಲಿ ವಿಶೇಷ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು. ಇಂತಹ ಅನುಭವದ ನಂತರ ಅನೇಕರು ಸಹಾಯಕ್ಕಾಗಿ ಧರ್ಮಸಭೆಯತ್ತ ಬರುತ್ತಾರೆ ಮತ್ತು ಅವರಿಗೆ ಹೆಚ್ಚಾಗಿ ಯಾಜಕರು ಸಿಗುತ್ತಾರೆ.
ಆದರೆ ಮಹಿಳೆಯ ಅನುಭವವನ್ನು ಯಾಜಕರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮುಗೊ ಅಭಿಪ್ರಾಯಪಟ್ಟರು. “ಅಲ್ಲಿಯೇ ಮಹಿಳೆಯರ ಪಾತ್ರ ಆರಂಭವಾಗುತ್ತದೆ. ನಾವು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳುತ್ತೇವೆ. ಯಾರಾದರೂ ಅನುಭವಿಸಿದ ನೋವನ್ನು ನಾನು ಸಂಪೂರ್ಣವಾಗಿ ತಿಳಿಯದಿದ್ದರೂ, ಮಹಿಳೆಯಾಗಿ ಅವರ ಅನುಭವವನ್ನು ಸುಮಾರು 90 ಶೇಕಡಾ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ,” ಎಂದು ಅವರು ಹೇಳಿದರು.
ಪ್ರೇರಣೆಯ ಮೂಲಗಳು
ಸಮಾಜದಲ್ಲಿಯೂ ಧರ್ಮಸಭೆಯಲ್ಲಿಯೂ ಮಹಿಳೆಯರ ಪಾತ್ರ ಪುರುಷರ ಪಾತ್ರದಿಂದ ಭಿನ್ನವಾಗಿದೆ. ಅದು ಯಾಜಕತ್ವದಂತೆಯೂ, ಧಾರ್ಮಿಕ ಸಹೋದರರ ಜೀವನದಂತೆ ಅಲ್ಲ. ಈ ಕಾರ್ಯಕ್ರಮದ ಉದ್ದೇಶ ಕಥೋಲಿಕ ಧರ್ಮಸಭೆಯಲ್ಲಿ ಸ್ಥಳೀಯ ಹಾಗೂ ವಿಶ್ವಮಟ್ಟದಲ್ಲಿಯೂ ಮಹಿಳೆಯರಿಗೆ ಮಹತ್ವದ ಪಾತ್ರವಿದೆ ಎಂಬುದನ್ನು ಒತ್ತಿ ಹೇಳುವುದಾಗಿತ್ತು.
“ದೀಕ್ಷಾಸ್ನಾನ ಪಡೆದ ಕಥೋಲಿಕ ಮಹಿಳೆಯರಾಗಿ, ವಿಶೇಷವಾಗಿ ಮಹಿಳೆಯರ ಹಾಗೂ ಮಕ್ಕಳ ಸಮಸ್ಯೆಗಳ ವಿಷಯದಲ್ಲಿ ನಮಗೆ ನಿರ್ದಿಷ್ಟವಾದ ಪಾತ್ರವಿದೆ,” ಎಂದು ಮುಗೊ ಹೇಳಿದರು. ಕಷ್ಟಕರ ಹಿನ್ನೆಲೆಯಿಂದ ಬಂದ ಯುವತಿಯರು ಮತ್ತು ಮಹಿಳೆಯರಿಗೆ ಧರ್ಮಸಭೆಯಲ್ಲಿ ನಾಯಕತ್ವ ಸ್ಥಾನಗಳಲ್ಲಿ ಮಹಿಳೆಯರನ್ನು ನೋಡುವುದು ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
“ಇದು ಸುಲಭದ ದಾರಿ ಆಗುವುದಿಲ್ಲ. ಆದರೆ ಭವಿಷ್ಯದ ನಾಯಕಿಯರಾಗಿ ಮುಂದುವರಿಯಲು ನಮಗೆ ಭರವಸೆಯಿದೆ,” ಎಂದು ಅವರು ಹೇಳಿದರು.
ಈ ಕಾರ್ಯಕ್ರಮವು ಧರ್ಮಸಭೆಯೊಳಗಿನ ನಾಯಕತ್ವ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಮಹಿಳೆಯರನ್ನು ಪರಿಚಯಿಸಿತು. ಇದು ಗಿರಾಲ್ಡೊ ಅವರಿಗೆ ವಿಶೇಷವಾಗಿ ಪ್ರೇರಣೆಯಾಯಿತು. ಧರ್ಮಸಭೆ ಮತ್ತು ರಾಜತಾಂತ್ರಿಕ ವಲಯಗಳ ನಡುವಿನ ಸಂಬಂಧವನ್ನು ನೋಡಿದಾಗ ಅದು ತಮ್ಮಲ್ಲಿ ಹೊಸ ಆಶೆಯನ್ನು ಮೂಡಿಸಿತು ಎಂದು ಅವರು ಹೇಳಿದರು.
“ನಾನು ಇಲ್ಲಿ ರೋಮ್‌ನಲ್ಲಿ ಸಾಮಾನ್ಯ ಮಹಿಳೆಯಾಗಿ ಅಧ್ಯಯನ ಮಾಡುತ್ತಿದ್ದೇನೆ. ಕೆಲವೊಮ್ಮೆ ನಾನು ಕಲಿಯುತ್ತಿರುವ ಎಲ್ಲವನ್ನು ಹೇಗೆ ಒಟ್ಟುಗೂಡಿಸಬಹುದು ಎಂಬುದು ಸ್ಪಷ್ಟವಾಗುವುದಿಲ್ಲ. ಆದರೆ ನಾನು ನಿಲ್ಲಬಾರದು ಎಂಬುದು ನನಗೆ ಗೊತ್ತಿದೆ,” ಎಂದು ಅವರು ಹೇಳಿದರು. ಮಹಿಳಾ ರಾಯಭಾರಿಗಳು, ಪತ್ರಕರ್ತರು ಮತ್ತು ಸಂವಹನ ತಜ್ಞರು—ಧರ್ಮಸಭೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಮಾನ್ಯ ಮಹಿಳೆಯರು—ಗಿರಾಲ್ಡೊ ಅವರಿಗೆ ದೊಡ್ಡ ಪ್ರೇರಣೆಯಾಗಿ ಪರಿಣಮಿಸಿದರು.
ಹೊಸ ಬೆಂಬಲ ಜಾಲ
ಈ ಕಾರ್ಯಕ್ರಮವು ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರನ್ನು ಒಗ್ಗೂಡಿಸುವ ಮೂಲಕ ಪರಸ್ಪರ ಬೆಂಬಲದ ಜಾಲವನ್ನು ನಿರ್ಮಿಸಲು ಸಹಾಯ ಮಾಡಿದೆ ಎಂದು ಗಿರಾಲ್ಡೊ ಮತ್ತು ಮುಗೊ ಇಬ್ಬರೂ ಹೇಳಿದರು.
ಮುಗೊ ಅವರ ಪ್ರಕಾರ, ಇದು “ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಶೋಷಣೆಯ ವಿರುದ್ಧದ ಹೋರಾಟದಲ್ಲಿ ಒಂದು ಹೆಜ್ಜೆ ಮುಂದೆ ಸಾಗಿರುವಂತಾಗಿದೆ.” “ಮಹಿಳೆಯರಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಸಂಪರ್ಕ ಸಾಧಿಸಿ ಮಾತನಾಡಲು ಮತ್ತು ಬೆಂಬಲಿಸಲು ಅವಕಾಶಗಳು ಅಗತ್ಯ,” ಎಂದು ಗಿರಾಲ್ಡೊ ಹೇಳಿದರು.
ಇಂತಹ ಸಂಪರ್ಕ ಜಾಲಗಳು ಮಹಿಳೆಯರು ಪರಸ್ಪರದಿಂದ ಕಲಿಯಲು ಮತ್ತು ಒಟ್ಟಾಗಿ ಬೆಳೆಯಲು ಸಹಾಯ ಮಾಡುತ್ತವೆ. “ಈ ಪ್ರಯಾಣದಲ್ಲಿ ನಾವು ಒಂಟಿಯಲ್ಲ ಎಂಬುದನ್ನು ಅರಿಯಲು ಇದು ಬಹಳ ಮುಖ್ಯ,” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).