2026.03.18 Gruppo di Chesterton Schools Network dagli Stati Uniti 2026.03.18 Gruppo di Chesterton Schools Network dagli Stati Uniti 

ಚೆಸ್ಟರ್ಟನ್ ಅವರ ನಂಬಿಕೆಯ ಸಾಕ್ಷಿಯನ್ನು ರೋಮ್‌ಗೆ ತಂದ ಅಮೇರಿಕದ ವಿದ್ಯಾರ್ಥಿಗಳು

ಅಮೇರಿಕದ ವಿವಿಧ ಭಾಗಗಳಿಂದ ಸುಮಾರು 240 ವಿದ್ಯಾರ್ಥಿಗಳು 10 ದಿನಗಳ ಯಾತ್ರೆಯ ಅಂಗವಾಗಿ ಇಟಲಿಗೆ ಆಗಮಿಸಿ, ರೋಮ್‌ನ ಪವಿತ್ರ ಪೇತ್ರರಚೌಕದಲ್ಲಿ ಜಗದ್ಗುರು ಪೂಜ್ಯ ಲಿಯೋ ಅವರ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಭಾಗವಹಿಸಿದರು. “ಸುವಾರ್ತೆಯ ಸತ್ಯವನ್ನು ಅಲಕ್ಷಿಸುವ ಧ್ವನಿಗಳ ಮಧ್ಯೆ ನಾವು ಅದಕ್ಕೆ ವಿರುದ್ದವಾಗಿ ಸುವಾರ್ತೆಯನ್ನು ಕೇಳುವ ಗುರುತಾಗಬೇಕು” ಎಂಬುದು ಅವರ ಯಾತ್ರೆಯ ಉದ್ದೇಶವೆಂದು ಅವರ ಆಧ್ಯಾತ್ಮಿಕ ಮಾರ್ಗದರ್ಶಕರು ಹೇಳಿದರು.

ಲೇಖಕರು: ಕೀಲ್ ಗಸ್ಸಿ ಮತ್ತು ಫ್ಯಾಬ್ರಿಜಿಯೊ ಪೆಲೋನಿ

ಪ್ರತಿ ವಾರವೂ ಜಗತ್ತಿನ ನಾನಾ ಭಾಗಗಳಿಂದ ಬರುವ ಯಾತ್ರಿಕರು ಪವಿತ್ರ ಪೇತ್ರರ ಚೌಕದಲ್ಲಿ ಜಗದ್ಗುರುಗಳ ಸಾಮಾನ್ಯ ಸಭೆಗೆ ಸೇರುತ್ತಾರೆ. ಈ ವಾರ, ವಿದ್ಯಾರ್ಥಿಗಳ ಒಂದು ಗುಂಪು ತಮ್ಮ ಅಂತಿಮ ಯಾತ್ರೆಯ ಭಾಗವಾಗಿ ರೋಮ್‌ಗೆ ಆಗಮಿಸಿ, ಜಗದ್ಗುರು ಲಿಯೋ ಅವರನ್ನು ಕಾಣುವ ಅವಕಾಶ ಪಡೆದರು.

ಚೆಸ್ಟರ್ಟನ್ ರೋಮ್ ಯಾತ್ರೆ ಪ್ರತಿವರ್ಷ ನಡೆಯುತ್ತಿದ್ದು, ಅಮೇರಿಕದ ವಿವಿಧ ಪ್ರದೇಶಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳನ್ನು “ನಿತ್ಯ ನಗರ” ರೋಮ್‌ಗೆ ತರುತ್ತದೆ.

ಎರಡನೇ ದಿನ: ಜಗದ್ಗುರುಗಳೊಂದಿಗೆ ಭೇಟಿ

ಮುಂದಿನ ಎಂಟು ದಿನಗಳಲ್ಲಿ ವಿದ್ಯಾರ್ಥಿಗಳು ರೋಮ್, ಫ್ಲಾರೆನ್ಸ್ ಮತ್ತು ಅಸ್ಸಿಸಿ ನಗರಗಳಲ್ಲಿ ದೇವಾಲಯಗಳು ಮತ್ತು ಪವಿತ್ರ ಯಾತ್ರಾ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸದ ನಡುವೆ ತಮಗೆ ಆಳವಾದ ಅನುಭವವನ್ನು ಪಡೆಯುವ ಅವಕಾಶ ಅವರಿಗೆ ದೊರೆಯುತ್ತದೆ.

ಇಲ್ಲಿನ ಅನುಭವದ ಬಗ್ಗೆ ಇಲಿನಾಯ್ಸ್ ರಾಜ್ಯದ ಪವಿತ್ರ ಕುಟುಂಬ ಚೆಸ್ಟರ್ಟನ್ ಅಕಾಡೆಮಿಯ ವಿದ್ಯಾರ್ಥಿನಿ ನೋರಾ ಕೆನ್ನಡಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, “ಯಾತ್ರೆಯ ಎರಡನೆಯ ದಿನವಾದರೂ, ಇದು ನನ್ನ ಜೀವನದ ಅತ್ಯುತ್ತಮ ಅನುಭವ” ಎಂದು ಹೇಳಿದರು.

ತಮ್ಮ ಸ್ನೇಹಿತರೊಂದಿಗೆ ಈ ಅನುಭವವನ್ನು ಹಂಚಿಕೊಳ್ಳುವ ಅವಕಾಶ ತನಗೆ ಮರೆಯಲಾಗದ ನೆನಪು ಎಂದೂ ಅವರು ಹೇಳಿದರು. ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳನ್ನು ಕಾಣುವುದು ತನಗೆ ವಿಶೇಷ ಕ್ಷಣವಾಗಿತ್ತು ಎಂದು ಹೇಳಿದ ಅವರು, “ಅವರು ನಮ್ಮ ಮುಂದೆ ಸಾಗಿದ ಕ್ಷಣ, ಹಾಗೂ ಇಂಗ್ಲಿಷ್‌ನಲ್ಲಿ ನಮಗೆ ಮಾತಾಡಿದಾಗ ಉಂಟಾದ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ,” ಎಂದು ಹೇಳಿದರು.

ಚಿಕಾಗೋ ಸಮೀಪದ ಚೆಸ್ಟರ್ಟನ್ ಅಕಾಡೆಮಿಯ ವಿದ್ಯಾರ್ಥಿ ಕೊನ್ಸ್ಟಾಂಟಿನೋಸ್ ಕಾರ್ನೆಜಿಸ್ ಕೂಡ ಇದೇ ಅನುಭವವನ್ನು ಹಂಚಿಕೊಂಡರು. “ಇಲ್ಲಿ ಇರುವುದೇ ದೇವರ ಆಶೀರ್ವಾದದಂತೆ ಅನಿಸುತ್ತದೆ. ಪ್ರಥಮ ವರ್ಷದಿಂದಲೇ ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೆ,” ಎಂದು ಅವರು ಹೇಳಿದರು.

ಈ ಯಾತ್ರೆಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ವಂ. ಗುರು ಜೋಸೆಫ್ ಜಾನ್ಸನ್ ತಮ್ಮ ಪಾತ್ರವನ್ನು ವಿವರಿಸುತ್ತಾ, ಯುವಜನರ ಯಾತ್ರೆಯಲ್ಲಿ ಅವರಿಗೆ ಜೊತೆಯಾಗುವುದು ಮತ್ತು ಮಾರ್ಗದರ್ಶನ ನೀಡುವುದು ತಮ್ಮ ಕರ್ತವ್ಯವೆಂದು ಹೇಳಿದರು.

ಈ ವರ್ಷ ಯಾತ್ರೆ ಇನ್ನಷ್ಟು ವಿಶೇಷವಾಗಿತ್ತು, ಏಕೆಂದರೆ ಈ 240 ವಿದ್ಯಾರ್ಥಿಗಳಿಗೆ ತಮ್ಮದೇ ದೇಶದ ಜಗದ್ಗುರು ಲಿಯೋ ಅವರನ್ನು ಕಾಣುವ ಅವಕಾಶ ದೊರೆಯಿತು. “ನಮ್ಮದೇ ದೇಶದಿಂದ ಬಂದ ಜಗದ್ಗುರುಗಳನ್ನು ಕಂಡು ಸಂತೋಷಿಸುವುದರ ಜೊತೆಗೆ, ಜಗತ್ತಿನ ಎಲ್ಲಾ ಕಥೋಲಿಕರೊಂದಿಗೆ ಇಲ್ಲಿ ಒಗ್ಗೂಡುವ ಅನುಭವ ನಮಗೆ ದೊರೆಯಿತು,” ಎಂದು ಅವರು ಹೇಳಿದರು.

ಪವಿತ್ರ ಪೇತ್ರರ ಚೌಕದಲ್ಲಿರುವ ಬೆರ್ನಿನಿಯ ಮಹಾ ಕಂಬಗಳ ಸಾಲುಗಳು ಜಗತ್ತಿನ ಎಲ್ಲ ಯಾತ್ರಿಕರನ್ನು ಸ್ವಾಗತಿಸುತ್ತಿರುವುದು “ನಾವು ಒಂದೇ ಕುಟುಂಬ, ಒಂದೇ ನಂಬಿಕೆಯ ಸಹೋದರ-ಸಹೋದರಿಯರು” ಎಂಬ ಸಂದೇಶವನ್ನು ತೋರಿಸುತ್ತವೆ ಎಂದು ಅವರು ಹೇಳಿದರು.

ಚೆಸ್ಟರ್ಟನ್ ಶಾಲೆಗಳ ಜಾಲವು ಅಮೇರಿಕದ ವರ್ಜೀನಿಯಾದ ಫ್ರಂಟ್ ರಾಯಲ್‌ನ ಪ್ರೊರೋಮ್ ಟೂರ್ಸ್ ಸಂಸ್ಥೆಯೊಂದಿಗೆ ಸಹಕರಿಸಿ ಈ ಯಾತ್ರೆಗಳನ್ನು ಆಯೋಜಿಸುತ್ತದೆ. ಪ್ರೊರೋಮ್ ಟೂರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋ ಲಾಂಗ್ ಅವರು 2019ರಿಂದ ಈ ಯಾತ್ರೆಗಳನ್ನು ಆಯೋಜಿಸುತ್ತಿದ್ದಾರೆ. ಭಕ್ತಿಯುತ ಕಥೋಲಿಕರ ತಂಡದೊಂದಿಗೆ ಅವರು ಈ ಯಾತ್ರೆಯನ್ನು ಅರ್ಥಪೂರ್ಣ ಮತ್ತು ಆಳವಾದ ನಂಬಿಕೆಯ ಅನುಭವವಾಗಿಸಲು ಪ್ರಯತ್ನಿಸುತ್ತಿದ್ದಾರೆ.

“ಪ್ರತಿ ಕಥೋಲಿಕರೂ ಸಂತರು ನಡೆದ ದಾರಿಯಲ್ಲಿ ನಡೆಯಬೇಕು, ರಕ್ತಸಾಕ್ಷಿಗಳು ಪ್ರಾರ್ಥಿಸಿದ ಸ್ಥಳಗಳಲ್ಲಿ ಪ್ರಾರ್ಥಿಸಬೇಕು, ಅದ್ಭುತಗಳಿಗೆ ಸಾಕ್ಷಿಯಾದ ಕಲ್ಲುಗಳನ್ನು ಸ್ಪರ್ಶಿಸಬೇಕು ಎಂಬ ಅವಕಾಶವನ್ನು ಹೊಂದಬೇಕು,” ಎಂದು ಅವರು ಹೇಳಿದರು.

“ಸಾಮಾನ್ಯ ವಿವೇಕದ ಪ್ರೇಷಿತ”ನ ಪ್ರೇರಣೆ

ಈ ವಿದ್ಯಾರ್ಥಿಗಳು ಚೆಸ್ಟರ್ಟನ್ ಶಾಲೆಗಳ ಜಾಲಕ್ಕೆ ಸೇರಿದ್ದು, ಅಮೇರಿಕದಾದ್ಯಂತ ಕಥೋಲಿಕ ಪ್ರೌಢಶಾಲೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಧಾರ್ಮಿಕ ಸಂಘಟನೆಯಾಗಿದೆ.

ಇಂಗ್ಲಿಷ್ ಲೇಖಕ, ತತ್ತ್ವಜ್ಞ ಮತ್ತು ಧರ್ಮಪರ ರಕ್ಷಕರಾದ ಜಿ.ಕೆ. ಚೆಸ್ಟರ್ಟನ್ ಅವರ ಜೀವನ ಮತ್ತು ಚಿಂತನೆ ಈ ಶಿಕ್ಷಣ ವ್ಯವಸ್ಥೆಗೆ ಪ್ರೇರಣೆಯಾಗಿದೆ. “ಸಾಮಾನ್ಯ ವಿವೇಕದ ಪ್ರೇಷಿತಾ” ಎಂದು ಕರೆಯಲ್ಪಡುವ ಅವರ ಆಲೋಚನೆಗಳನ್ನು ಆಧರಿಸಿ, ಎಲ್ಲರಿಗೂ ಲಭ್ಯವಾಗುವಂತಹ ಸಮಗ್ರ ಮತ್ತು ಶ್ರೇಷ್ಠ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ನೋರಾ ತನ್ನ ಅನುಭವವನ್ನು ವಿವರಿಸುತ್ತಾ, “ನಮ್ಮ ಶಾಲೆಯಲ್ಲಿ ನಂಬಿಕೆ ಎಲ್ಲದರ ಕೇಂದ್ರವಾಗಿದೆ — ದೈನಂದಿನ ಪವಿತ್ರ ಬಲಿ, ಪಾಪನಿವೇದನೆ, ಆರಾಧನೆ ಮಾತ್ರವಲ್ಲ, ನಮ್ಮ ಸ್ಗೆಳೆತನಗಳಲ್ಲಿಯೂ ಕ್ರಿಸ್ತನ ಸಾನ್ನಿಧ್ಯ ಇದೆ,” ಎಂದು ಹೇಳಿದರು.

ಈ ಶಾಲೆಗಳಲ್ಲಿ ಬೌದ್ಧಿಕ, ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ರೂಪುಗೊಳಿಸುವಿಕೆ ಎಂಬ ಮೂರು ಮುಖ್ಯ ಆಯಾಮಗಳ ಮೇಲೆ ಶಿಕ್ಷಣ ನೀಡಲಾಗುತ್ತದೆ. ಹೋಮರ್, ಪ್ಲೇಟೋ, ಡಾಂಟೆ, ಪವಿತ್ರ ತೋಮಸ್ ಅಕ್ವಿನಾಸ್, ಅಸ್ಸಿಸಿಯ ಪವಿತ್ರ ಫ್ರಾನ್ಸಿಸ್ ಮತ್ತು ಜಿ.ಕೆ. ಚೆಸ್ಟರ್ಟನ್ ಅವರ ಕೃತಿಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. “ಈ ಪಠ್ಯಕ್ರಮ ನನಗೆ ಯೋಚಿಸುವುದು ಮತ್ತು ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿಸಿದೆ,” ಎಂದು ನೋರಾ ಹೇಳಿದರು.

ನಂಬಿಕೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. “ನನ್ನ ಸಹಪಾಠಿಗಳು ಕ್ರಿಸ್ತನ ಕಡೆಗೆ ನನ್ನನ್ನು ಹತ್ತಿರಗೊಳಿಸುತ್ತಾರೆ; ನಾನೂ ಅವರಿಗಾಗಿ ಅದನ್ನೇ ಮಾಡುತ್ತೇನೆ,” ಎಂದು ಅವರು ಹೇಳಿದರು.

ಇಂದಿನ ಕಾಲದಲ್ಲಿ ‘ವಿರೋಧದ ಗುರುತು’

ವಂ. ಗುರು ಜೋಸೆಫ್ ಜಾನ್ಸನ್ ಅವರು ಚೆಸ್ಟರ್ಟನ್ ಅವರ ಉದಾಹರಣೆಯನ್ನು ನೆನಪಿಸಿಕೊಂಡು, “ಚೆಸ್ಟರ್ಟನ್ ಅವರ ಕಾಲದಲ್ಲಿನ ಸುತ್ತಮುತ್ತಲಿನ ಚಿಂತನೆಗಳಿಗೆ ವಿರೋಧದ ಗುರುತಾಗಿದ್ದರು. ಇಂದೂ ನಾವು ಸುವಾರ್ತೆಯ ಸತ್ಯವನ್ನು ಅಲಕ್ಷಿಸುವ ಧ್ವನಿಗಳ ವಿರುದ್ಧ ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ,” ಎಂದು ಹೇಳಿದರು.

ಇಂದಿನ ಜಗತ್ತಿನಲ್ಲಿ ಸುವಾರ್ತೆಯ ಸಾಕ್ಷಿಗಳಾಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು. “ಈ ಜಗತ್ತಿನಲ್ಲಿ ಈಗಾಗಲೇ ಕೋಪದ ಧ್ವನಿಗಳು ಹೆಚ್ಚು. ನಾವು ಸಂತೋಷ, ನಿರೀಕ್ಷೆ ಮತ್ತು ಪ್ರೀತಿಯ ಮೂಲಕ ಸಾಕ್ಷಿಯಾಗಬೇಕು,” ಎಂದು ಅವರು ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಮಾರ್ಚ್ 2026, 19:06