2026.03.13 cardinale Timothy Radcliffe visita in Ucraina 2026.03.13 cardinale Timothy Radcliffe visita in Ucraina 

ಪ್ರಧಾನ ಗುರು ರಾಡ್ಕ್ಲಿಫ್: ಉಕ್ರೇನ್‌ನ ದುಃಖ ವಿಶ್ವದ ದುಃಖ

ಪ್ರಧಾನ ಗುರು ತಿಮೊಥಿ ರಾಡ್ಕ್ಲಿಫ್, O.P., ಉಕ್ರೇನ್‌ಗೆ ನೀಡಿದ ತಮ್ಮ ಭೇಟಿಯನ್ನು ಪೂರ್ಣಗೊಳಿಸಿ, ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯುದ್ಧದಿಂದ ನಲುಗಿರುವ ದೇಶದಲ್ಲಿ ತಮಗೆ ಅತ್ಯಂತ ಮನಮುಟ್ಟಿದ ಭೇಟಿಗಳ ಕುರಿತು ಮನನ ಮಾಡಿದ್ದಾರೆ.

ಲೇಖಕರು: ವಂ. ಗುರು ಜರೋಸ್ವಾವ್ ಕ್ರಾವಿಯೆಚ್, OP ಮತ್ತು ಸಹೋದರಿ ಅಲಿನಾ ಎ. ಪೆಟ್ರೌಸ್ಕೈತೆ, SCM

ಪ್ರಧಾನ ಗುರು ತಿಮೊಥಿ ರಾಡ್ಕ್ಲಿಫ್ ಇತ್ತೀಚೆಗೆ ಉಕ್ರೇನ್‌ಗೆ ಪ್ರಯಾಣಿಸಿ ಸ್ಥಳೀಯ ಧರ್ಮಸಭೆ ಹಾಗೂ ಪ್ರಚಾರಕರ ಸಂಘದ (Dominican Order) ಸಮುದಾಯಗಳಿಗೆ ತಮ್ಮ ಬೆಂಬಲ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಿದರು. ಫೆಬ್ರವರಿ 27ರಂದು ಅವರು ರಾಜಧಾನಿ ಕೀವ್‌ಗೆ ಆಗಮಿಸಿ ದೇಶದ ವಿವಿಧ ನಗರಗಳಿಗೆ ಭೇಟಿ ನೀಡಿದರು.

ಯುದ್ಧದಿಂದ ನಾಶವಾದ ದೇಶದಲ್ಲಿ ತಮ್ಮ ಅನುಭವವನ್ನು ನೆನಪಿಸಿಕೊಂಡ ಪ್ರಧಾನ ಗುರು, ತಮ್ಮ ಪ್ರಯಾಣದ ಸಮಯದಲ್ಲಿ ನಡೆದ ಅತ್ಯಂತ ಮನಮುಟ್ಟುವ ಭೇಟಿಗಳ ಬಗ್ಗೆ ವಿವರಿಸಿದರು. ಭೀಕರ ನಾಶ ಮತ್ತು ಹಾನಿಯ ಮಧ್ಯೆಯೂ ಜನರು “ಭವಿಷ್ಯವನ್ನು ನಿರ್ಮಿಸಲು ಇಲ್ಲಿ ಉಳಿದು ತಮ್ಮ ಶಕ್ತಿಮೇರಿದ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು.

“ದುಃಖ ಅನುಭವಿಸುತ್ತಿರುವ ಉಕ್ರೇನ್ ಜನರು ನಮ್ಮ ಸಹೋದರರು ಮತ್ತು ಸಹೋದರಿಯರು ಎಂಬುದನ್ನು ನಾವು ಮರೆಯಬಾರದು”ಎಂದು ಒತ್ತಿ ಹೇಳಿದರು.

ಕೆಳಗೆ ವಂ. ಗುರು ಜರೋಸ್ವಾವ್ ಕ್ರಾವಿಯೆಚ್ ದಾಖಲಿಸಿದ ಸಂದರ್ಶನದ ಭಾಗವನ್ನು ಲಿಖಿತ ರೂಪದಲ್ಲಿ ನೀಡಲಾಗಿದೆ.

ಪ್ರಧಾನ ಗುರುಗಳೇ, ನೀವು ಇತ್ತೀಚೆಗೆ ಉಕ್ರೇನ್‌ಗೆ ಭೇಟಿ ನೀಡಿ ಮರಳಿದ್ದೀರಿ. ನಿಮ್ಮ ಪ್ರಯಾಣದ ವೇಳೆ ಯಾವ ಯಾವ ಸ್ಥಳಗಳಿಗೆ ಭೇಟಿ ನೀಡಿದಿರಿ?

ನಾವು ನಮ್ಮ ಪ್ರಯಾಣವನ್ನು ಕೀವ್‌ನಲ್ಲಿ ಆರಂಭಿಸಿದೆವು. ಅದು ಒಂದು ಆಳವಾದ ಅನುಭವವಾಗಿತ್ತು. ಸೇನಾ ಆಸ್ಪತ್ರೆಗೆ ಭೇಟಿ ನೀಡಿದಾಗ ಗಾಯಗೊಂಡ ಸೈನಿಕರನ್ನು ಮತ್ತು ಆಸ್ಪತ್ರೆಯ ನಿರ್ದೇಶಕರಾದ ಇವಾನ್ ಯಾವೋರ್ಸ್ಕಿಯನ್ನು ಭೇಟಿ ನನಗೆ ತುಂಬಾ ಮನಮುಟ್ಟಿತು. ನಂತರ ನಾವು ಫಾಸ್ಟಿವ್‌ಗೆ ತೆರಳಿ ಸೇಂಟ್ ಮಾರ್ಟಿನ್ ಮಿಷನ್ ಅನ್ನು ಭೇಟಿ ಮಾಡಿದೆವು. ಅಲ್ಲಿ ಸಂತೋಷದಿಂದ ಸೇವೆ ಸಲ್ಲಿಸುತ್ತಿದ್ದ ಅನೇಕ ಸ್ವಯಂಸೇವಕರನ್ನು ನೋಡಿದಾಗ ತುಂಬಾ ಪ್ರೇರಣೆ ದೊರೆಯಿತು. ಅವರು ಮಕ್ಕಳ ಕಾಳಜಿ ವಹಿಸುವುದಲ್ಲದೆ ಸ್ಥಳೀಯ ಜನರನ್ನು ದೇವರ ಜನರಿಗೆ ಸೇವೆ ಮಾಡಲು ಪ್ರೇರೇಪಿಸುತ್ತಿದ್ದರು.

ಖೆರ್ಸನ್ ನನಗೆ ಅತ್ಯಂತ ಮನಮುಟ್ಟಿದ ಸ್ಥಳವಾಗಿತ್ತು. ಅಲ್ಲಿ ಯುದ್ಧವು ಸಮುದಾಯದ ಜೀವನವನ್ನು ಹೇಗೆ ನಾಶಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಅಲ್ಲಿ ಕೆಲವೇ ವೃದ್ಧರು ಮಾತ್ರ ಉಳಿದಿದ್ದಾರೆ. ಆದರೂ ಅಲ್ಲಿ ನಾವು ಅಪಾರ ಧೈರ್ಯವನ್ನು ಕಂಡೆವು. ಜನರು ತಮ್ಮ ದೇಶವನ್ನು ಬಿಟ್ಟು ಹೋಗದೆ ಭವಿಷ್ಯವನ್ನು ನಿರ್ಮಿಸಲು ಸಂಕಲ್ಪಿಸಿದ್ದಾರೆ. ಒಡೆಸಾದಲ್ಲಿ ನಾವು ಸುಂದರವಾದ ಭೇಟಿಯನ್ನು ಅನುಭವಿಸಿದೆವು. ಅಲ್ಲಿ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಸ್ಟಾನಿಸ್ಲಾವ್ ಶಿರೋಕೋರಾಡಿಯುಕ್ ಅವರು ನಮಗೆ ಆತ್ಮೀಯ ಸ್ವಾಗತ ನೀಡಿದರು.

 ನಂತರ ನಾವು ಮತ್ತೆ ಕೀವ್‌ಗೆ ಮರಳಿ ಅಲ್ಲಿಂದ ಖಾರ್ಕಿವ್‌ಗೆ ಪ್ರಯಾಣಿಸಿದೆವು. ಖಾರ್ಕಿವ್ ಭಾರೀ ಹಾನಿಯನ್ನು ಅನುಭವಿಸಿದ್ದರೂ ಅಲ್ಲಿ ಮತ್ತೆ ಆಶೆಯ ಅದ್ಭುತ ಸಂಕೇತಗಳನ್ನು ಕಂಡೆವು.ಅಲ್ಲಿ ಒರಿಯನಿಸ್ಟ್ ಸಹೋದರಿಯರು ಏಕಾಂಗಿ ತಾಯಂದಿರೊಂದಿಗೆ ಮಾಡುತ್ತಿರುವ ಸೇವೆಯನ್ನು ನೋಡಿದೆವು. ಅದು ಸಂತೋಷದಿಂದ ತುಂಬಿದ ಸ್ಥಳವಾಗಿತ್ತು. ಜೊತೆಗೆ ಗ್ರೀಕ್ ಕಥೋಲಿಕ ಸಮುದಾಯದ ಬಲಿಪೂಜೆಯಲ್ಲಿ ಭಾಗವಹಿಸಿ ಖಾರ್ಕಿವ್-ಜಪೊರಿಜ್ಜಿಯಾ ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಪಾವ್ಲೋ ಹೋಂಚಾರುಕ್ ಅವರನ್ನು ಭೇಟಿಯಾದೆವು.

ಕೊನೆಯಲ್ಲಿ ಮತ್ತೆ ಕೀವ್‌ಗೆ ಮರಳಿದಾಗ  ಮನೆಗೆ ಬಂದ ಅನುಭವದಂತಿತ್ತು. ಉಕ್ರೇನ್ ತೊರೆಯುವ ಸಮಯ ಬಂದಾಗ ಮನೆಗೆ ಹಿಂತಿರುಗುವುದಕ್ಕೆ ಸಂತೋಷವಾಗಿದ್ದರೂ, ನಾನು ಪ್ರೀತಿಸಿ ಗೌರವಿಸಲು ಪ್ರಾರಂಭಿಸಿದ ಜನರನ್ನು ಬಿಡಬೇಕಾದ್ದರಿಂದ ದುಃಖವೂ ಉಂಟಾಯಿತು.

ನೀವು ಉಕ್ರೇನ್‌ನಲ್ಲಿ ಹಲವಾರು ದಿನಗಳನ್ನು ಕಳೆದಿದ್ದೀರಿ ಮತ್ತು ಮುಂಚೂಣಿಯಲ್ಲಿರುವ ಖೇರ್ಸನ್ ಮತ್ತು ರಷ್ಯಾದ ಗಡಿಯ ಬಳಿಯ ಖಾರ್ಕಿವ್‌ಗೆ ಭೇಟಿ ನೀಡಿದ್ದೀರಿ.ಈ ಅನುಭವದಿಂದ ನೀವು ಯಾವ ಮಹತ್ವದ ಚಿಂತನೆಗಳನ್ನು ಪಡೆದಿದ್ದೀರಿ?

ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನೂ ಸಮಯ ಬೇಕಾಗಿದೆ. ಖೆರ್ಸನ್‌ನಲ್ಲಿ ನನ್ನ ಮನಸ್ಸಿನಲ್ಲಿ ಉಳಿದ ಅತ್ಯಂತ ಸುಂದರ ದೃಶ್ಯವೆಂದರೆ ಜನರಿಗಾಗಿ ಅಲ್ಲಿ ಸ್ವಯಂಸೇವಕರು ತಾಜಾ ರೊಟ್ಟಿಯನ್ನು ಬೇಯಿಸುತ್ತಿದ್ದದ್ದು.

ನಾವು ಪ್ರತಿದಿನ “ಪ್ರಭುವಿನ ಪ್ರಾರ್ಥನೆ”ಯಲ್ಲಿ “ನಮಗೆ ಇಂದಿನ ದಿನದ ಆಹಾರವನ್ನು ಕೊಡಿ” ಎಂದು ಪ್ರಾರ್ಥಿಸುತ್ತೇವೆ. ಅಲ್ಲಿ ಆ ಪ್ರಾರ್ಥನೆಯ ನಿಜವಾದ ಅರ್ಥವನ್ನು ನೋಡಿದೆವು. ಆದರೆ ಅದೇ ಸಮಯದಲ್ಲಿ ಡ್ರೋನ್‌ಗಳನ್ನು ಕಂಡು ಜನರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಅರಿತೆವು. ಅವರ ದಿನದಿಂದ ದಿನಕ್ಕೆ ಹಿಂಸೆಯ ಭೀತಿಯಲ್ಲಿ ಬದುಕುತ್ತಿರುವ ಒತ್ತಡ ಮತ್ತು ದಣಿವು ಸ್ಪಷ್ಟವಾಗಿ ಕಾಣುತ್ತಿತ್ತು.

ನಿಮ್ಮನ್ನು ಹೆಚ್ಚು ಸ್ಪರ್ಶಿಸಿದ ಭೇಟಿ ಯಾವುದು?

ಖಾರ್ಕಿವ್‌ನಲ್ಲಿ ಏಕಾಂಗಿ ತಾಯಂದಿರ ಮಕ್ಕಳೊಂದಿಗೆ ನಡೆದ ಭೇಟಿ ಅತ್ಯಂತ ಮನಮುಟ್ಟುವಂತಿತ್ತು. ಈ ಮಕ್ಕಳು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ. ತಮ್ಮ ಭವಿಷ್ಯವೇನು ಎಂಬುದರ ಬಗ್ಗೆ ಹಲವರು ಆತಂಕದಲ್ಲಿದ್ದಾರೆ. ಆ ಮಕ್ಕಳಿಗೆ ಸಹೋದರಿಯರು ನೀಡಿದ ಸಂತೋಷವನ್ನು ನೋಡುವುದು ಅತ್ಯಂತ ಅದ್ಭುತ ಅನುಭವವಾಗಿತ್ತು. ಖೆರ್ಸನ್‌ನಲ್ಲಿ ಬಹುತೇಕ ಒಬ್ಬರೇ ಉಳಿದು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ವಂ. ಗುರು ಮಾಕ್ಸಿಮ್ ಪಾಡ್ಲೆವ್ಸ್ಕಿ ಅವರೊಂದಿಗೆ ನಡೆದ ಮಾತುಕತೆ ನನಗೆ ತುಂಬಾ ಆಳವಾದ ಅನುಭವವಾಗಿತ್ತು.

ನಿಮ್ಮ ಭೇಟಿಯ ಸಮಯದಲ್ಲಿ, ನೀವು ಓರಿಯೊನೈನ್ ಸಿಸ್ಟರ್ಸ್, ಕಾರ್ಮೆಲೈಟ್ಸ್, ಬೆಸಿಲಿಯನ್ ಫಾದರ್ಸ್ ಮತ್ತು ಡೊಮಿನಿಕನ್ನರು ಮುಂತಾದ ಧಾರ್ಮಿಕ ಸಮುದಾಯಗಳ ಸದಸ್ಯರನ್ನು ಭೇಟಿ ಮಾಡಿದ್ದೀರಿ. ಯುದ್ಧದ ಕಾಲದಲ್ಲಿ ಧಾರ್ಮಿಕ ಸೇವಕ-ಸೇವಕಿಯರ ಪಾತ್ರವೇನು?

ಧಾರ್ಮಿಕ ಸೇವಕ-ಸೇವಕಿಯರರಾಗಿರುವುದರ ಮಹತ್ವವೆಂದರೆ ನೀವು ಸಹೋದರ ಅಥವಾ ಸಹೋದರಿಯಾಗಿರುವುದು. ಯುದ್ಧದ ಸಮಯದಲ್ಲಿ ಜನರು ತಮ್ಮನ್ನು ಕುರಿತು ಮಾತ್ರ ಯೋಚಿಸಿ ಹಿಮ್ಮೆಟ್ಟುವ ಅಪಾಯವಿದೆ. ಆದರೆ ಪೂಜ್ಯ ಜಗದ್ಗುರು ಫ್ರಾನ್ಸಿಸ್ ನಮ್ಮನ್ನು ವಿಶ್ವವನ್ನೆಲ್ಲ ಅಪ್ಪಿಕೊಳ್ಳುವ ಸಹೋದರತ್ವಕ್ಕೆ ಕರೆಯುತ್ತಾರೆ. ಪ್ರತಿಯೊಬ್ಬ ಧಾರ್ಮಿಕ ವ್ಯಕ್ತಿಯೂ ಆ ಸಹೋದರತ್ವದ ಸಂಕೇತವಾಗಿರಬೇಕು.

ನೀವು ಅಗತ್ಯವಿರುವ ಅನೇಕ ಜನರನ್ನು ಭೇಟಿ ಮಾಡಿದ್ದೀರಿ. ಪ್ರಪಂಚದಾದ್ಯಂತ ಜನರು ಉಕ್ರೇನ್‌ಗೆ ಹೇಗೆ ಸಹಾಯ ಮಾಡಬಹುದು ಮತ್ತು ಬೆಂಬಲಿಸಬಹುದು? ಇದೀಗ ಅತ್ಯಂತ ಮುಖ್ಯವಾದ ಅಗತ್ಯ ಯಾವುದು?

ನಾವೆಲ್ಲರೂ ಉಕ್ರೇನ್‌ನ ದುಃಖವು ಕೇವಲ ಒಂದು ದೇಶದ ದುಃಖವಲ್ಲ, ಅದು ಸಂಪೂರ್ಣ ವಿಶ್ವದ ದುಃಖವೆಂಬುದನ್ನು ನೆನಪಿಸಿಕೊಳ್ಳಬೇಕು. ಈ ವಿಶ್ವ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಉಳಿಯುವ ವಿಶ್ವವಾಗಿರಬೇಕೇ ಇಲ್ಲವೇ ಎಂಬ ಪ್ರಶ್ನೆಯೇ ಇಂದು ನಮ್ಮ ಮುಂದೆ ಇದೆ. ದುಃಖ ಅನುಭವಿಸುತ್ತಿರುವ ಉಕ್ರೇನ್ ಜನರು ನಮ್ಮ ಸಹೋದರರು ಮತ್ತು ಸಹೋದರಿಯರು — ಪ್ರವಾದಿ ಯೆಶಾಯನು ಹೇಳಿದಂತೆ “ನಮ್ಮದೇ ಮಾಂಸ ಮತ್ತು ನಮ್ಮದೇ ರಕ್ತ.”

ಮಧ್ಯಪ್ರಾಚ್ಯದಲ್ಲಿಯೂ ಯುದ್ಧ ನಡೆಯುತ್ತಿದೆ. ನೀವು ಶಾಂತಿಗಾಗಿ ಹಲವು ಮನವಿಗಳನ್ನು ಮಾಡಿದ್ದೀರಿ; ಪ್ರಸ್ತುತ ಭಯವನ್ನು ಅನುಭವಿಸುತ್ತಿರುವವರಿಗೆ ನಿಮ್ಮಲ್ಲಿ ಭರವಸೆಯ ಮಾತುಗಳಿವೆಯೇ? ಭಯದಲ್ಲಿರುವವರಿಗೆ ನೀವು ಏನು ಹೇಳಲು ಬಯಸುತ್ತೀರಿ?

ಭರವಸೆ ಯಾವಾಗಲೂ ಇರುತ್ತದೆ. ನಾವು ಪ್ರತಿ ಬಾರಿ ಬಲಿಪೂಜೆಯನ್ನು ಆಚರಿಸುವಾಗ, ಭರವಸೆ ಕಾಣಿಸದಿದ್ದರೂ, ಭರವಸೆಯ ಸಂಸ್ಕಾರವನ್ನು ಆಚರಿಸುತ್ತೇವೆ. ಜನರನ್ನು ಕೊಂದು ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ತಪ್ಪು ಭ್ರಮೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವುದನ್ನು ನೋಡುವುದು ನನಗೆ ತುಂಬಾ ದುಃಖಕರ.

ಆದರೆ ನಿಧಾನವಾಗಿ ವಿಶ್ವವು ಒಂದು ಸತ್ಯವನ್ನು ಅರಿಯಲಿ: ಶಾಂತಿ ಸಾಧ್ಯವಾಗುವುದು ನಾವು ಪರರನ್ನೂ ನಮ್ಮ ಸಹೋದರರು ಮತ್ತು ಸಹೋದರಿಯರಾಗಿ ಗುರುತಿಸಿದಾಗ ಮಾತ್ರ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮಾರ್ಚ್ 2026, 07:25