ಹುಡುಕಿ

2026.03.02 Card. Timothy Radcliffe visita a Kyiv 2026.03.02 Card. Timothy Radcliffe visita a Kyiv 

ಪ್ರಧಾನ ಗುರು ರಾಡ್‌ಕ್ಲಿಫ್: ಯುದ್ಧದ ಸಮಯದಲ್ಲಿ ಕ್ರೈಸ್ತರು ನಿರೀಕ್ಷೆಯ ಜನರಾಗಿರಬೇಕು

ಡೊಮಿನಿಕನ್ ಪ್ರಧಾನ ಗುರು ತಿಮೋಥಿ ರಾಡ್‌ಕ್ಲಿಫ್, ಯುದ್ಧದಿಂದ ಸಂಕಷ್ಟದಲ್ಲಿರುವ ಉಕ್ರೇನ್‌ಗೆ ಭೇಟಿ ನೀಡಿರುವ ಸಂದರ್ಭದಲ್ಲಿ, ಸಂಘರ್ಷದ ಕಾಲದಲ್ಲಿ ಪ್ರಾರ್ಥನೆ ಮತ್ತು ಕ್ರೈಸ್ತ ನಿರೀಕ್ಷೆಯ ಅಗತ್ಯತೆಯ ಕುರಿತು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಲೇಖಕರು: ವಂ. ಗುರು ಮಾರಿಯುಷ್ ಕ್ರಾವಿಯೆಕ್, SSP

ಡೊಮಿನಿಕನ್ ಪ್ರಧಾನ ಗುರು ತಿಮೋಥಿ ರಾಡ್‌ಕ್ಲಿಫ್, ಸ್ಥಳೀಯ ಧರ್ಮಸಭೆಗೆ ಹಾಗೂ ಬೋಧಕರ ಸಂಘದ ಸಮುದಾಯಗಳಿಗೆ ತಮ್ಮ ಐಕ್ಯತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ಯುದ್ಧಬಾಧಿತ ಉಕ್ರೇನ್‌ಗೆ ಆಗಮಿಸಿದ್ದಾರೆ.

ಫೆಬ್ರವರಿ 27ರಂದು ಅವರು ರಾಜಧಾನಿ ಕೀವ್‌ಗೆ ಆಗಮಿಸಿ, ಕೀವ್-ಝಿಟೊಮಿರ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೂಜ್ಯ ವಿಟಾಲಿಯ್ ಕ್ರಿವಿಟ್ಸ್ಕಿ ಅವರನ್ನು ಭೇಟಿ ಮಾಡಿ, ಯುದ್ಧದಲ್ಲಿ ಬಲಿಯಾದ ಸೈನಿಕರ ಸ್ಮಾರಕ ಸ್ಥಳಕ್ಕೆ ಗೌರವ ಸಲ್ಲಿಸಿದರು. ಫೆಬ್ರವರಿ 28ರಿಂದ ಮಾರ್ಚ್ 1ರವರೆಗೆ ಆಧ್ಯಾತ್ಮಿಕ ಶಿಬಿರವನ್ನು ನಡೆಸಿ, ತಮ್ಮ ಎರಡು ವಾರಗಳ ಪ್ರವಾಸದ ಉಳಿದ ದಿನಗಳನ್ನು ಡೊಮಿನಿಕನ್ ಸಹೋದರರನ್ನು ಭೇಟಿ ಮಾಡುವುದಕ್ಕೆ ಮೀಸಲಿಟ್ಟಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಪ್ರವಾಸದ ಆರಂಭಿಕ ಅನುಭವ ಹಾಗೂ ಯುದ್ಧದ ಅನಿಶ್ಚಿತತೆ ಮತ್ತು ನೋವಿನ ನಡುವೆ ಕ್ರೈಸ್ತರು ಪ್ರಾರ್ಥನೆ ಮತ್ತು ನಿರೀಕ್ಷೆಯಲ್ಲಿ ದೃಢವಾಗಿರುವ ಅಗತ್ಯವನ್ನು ಅವರು ವಿವರಿಸಿದರು.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯರೇ, ನಿಮಗೆ, ಉಕ್ರೇನ್‌ಗೆ ನೀವು ನೀಡಿದ ಈ ಭೇಟಿ ಮತ್ತು ಉಕ್ರೇನಿನ ಜನರೊಂದಿಗೆ ಇಲ್ಲಿರುವುದರ ವೈಯಕ್ತಿಕ ಮಹತ್ವ ಮತ್ತು ಅರ್ಥವೇನು?

ಪ್ರಧಾನ ಗುರು  ರಾಡ್‌ಕ್ಲಿಫ್: ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿ ನೀಡಿದ್ದ ಉಕ್ರೇನ್ ದೇಶದಲ್ಲಿ ಮತ್ತೆ ಇರುವುದಕ್ಕೆ ನನಗೆ ಅಪಾರ ಸಂತೋಷವಾಗಿದೆ. ಸಹೋದರರ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಸಂಕಷ್ಟದಲ್ಲಿರುವ ದೇಶಗಳಿಗೆ ಭೇಟಿ ನೀಡುವಾಗ ನಾನು ಯಾವಾಗಲೂ ಏನನ್ನಾದರೂ ಕಲಿಯುತ್ತೇನೆ. ಇಲ್ಲಿ ಸಹೋದರರು ಮತ್ತು ಸಹೋದರಿಯರೊಂದಿಗೆ ಇರುವುದಕ್ಕೂ, ಅವರಿಂದ ಕಲಿಯುವುದಕ್ಕೂ ಬಂದಿದ್ದೇನೆ.

ಪ್ರಶ್ನೆ: ನೀವು ನಿಮ್ಮೊಂದಿಗೆ ತರುವ ಮುಖ್ಯ ಸಂದೇಶವೇನು?

ಯಾವುದೇ ಸ್ಥಳಕ್ಕೆ ಪೂರ್ವಸಿದ್ಧ ಸಂದೇಶದೊಂದಿಗೆ ಬರಬಾರದು ಎಂಬುದು ನನ್ನ ನಂಬಿಕೆ. ಮೊದಲು ಆಲಿಸಬೇಕು. ಜನರನ್ನು ಆಲಿಸಿದ ನಂತರವೇ ಹೇಳಬೇಕಾದ ಮಾತು ಹುಟ್ಟಬೇಕು. ಆದ್ದರಿಂದ ಮಾತನಾಡುವುದಕ್ಕಿಂತ ಕೇಳುವುದಕ್ಕಾಗಿಯೇ ಬಂದಿದ್ದೇನೆ. ಇದು ಸಹಯಾತ್ರೆಯ(ಸಿನೊಡಲ್) ಮಾರ್ಗದ ಹೃದಯ — ದೇವರನ್ನು ಆಲಿಸುವುದು, ಪರಸ್ಪರರನ್ನು ಆಲಿಸುವುದು.

ಪ್ರಶ್ನೆ: ನೀವು ನಡೆಸಿದ ಆಧ್ಯಾತ್ಮಿಕ  ಶಿಬಿರದ ವಿಷಯ ‘ಪರಲೋಕ ಪ್ರಾರ್ಥನೆ’ ಆಗಿತ್ತು. ಏಕೆ ಈ ವಿಷಯ?

ನೋವು ಮತ್ತು ಯುದ್ಧದ ಸಮಯದಲ್ಲಿ ಪ್ರಾರ್ಥನೆ ಅತ್ಯಂತ ಅವಶ್ಯಕ. ಪರಲೋಕ ಪ್ರಾರ್ಥನೆ ಎಲ್ಲಾ ಪ್ರಾರ್ಥನೆಗಳಲ್ಲಿಯೇ ಶ್ರೇಷ್ಠವಾದದ್ದು. ಯೇಸು ಸ್ವತಃ ಜೆರುಸಲೇಮಿಗೆ ಹೋಗಿ, ಪಾಡುಗಳನ್ನು ಅನುಭವಿಸಿ ಮರಣವನ್ನು ಎದುರಿಸಲಿರುವ ಸಂದರ್ಭದಲ್ಲಿ ಈ ಪ್ರಾರ್ಥನೆಯನ್ನು ಮಾಡಿದರು. ಗೆಗೆತ್ಸೆಮನೆ ತೋಪಿನಲ್ಲಿ ತಾನು ಅನುಭವಿಸಬೇಕಾದ ಪಾಡನ್ನು ಎದುರುನೋಡುತ್ತಲೂ ಇದೇ ಪರಲೋಕ ಪ್ರಾರ್ಥನೆಯನ್ನು ಮಾಡಿದರು.ಆಆದ್ದರಿಂದ ಸಂಕಷ್ಟಗಳನ್ನು ಎದುರಿಸುವ ಪ್ರತಿಯೊಬ್ಬರಿಗೂ ಪ್ರಭುವಿನ ಪ್ರಾರ್ಥನೆಯು ಮಹತ್ತರ ದೈವಿಕ ವರವಾಗಿದೆ.

ಪ್ರಶ್ನೆ: ನಾವು ಕೀವ್‌ನಲ್ಲಿ ರಷ್ಯಾ ಮಾಡುತ್ತಿರುವ ಶೆಲ್ ದಾಳಿಗಳ ಇದ್ದೇವೆ; ನಮ್ಮ ಸಹೋದರರು ಮತ್ತು ನಿಮ್ಮ ಸ್ನೇಹಿತ ಲೂಕಾಸ್ ಜೆರುಸಲೇಮ್‌ನಲ್ಲಿ ಇದ್ದಾರೆ. ಯುದ್ಧವು ಈಗ ಹೊಸ ಹಾಗೂ ಗಂಭೀರ ಹಂತಕ್ಕೆ ಪ್ರವೇಶಿಸಿರುವಂತೆ ಕಾಣುತ್ತಿದೆ. ಉಕ್ರೇನಿನ ಮತ್ತು ಪವಿತ್ರ ಭೂಮಿಯ ಪರಿಸ್ಥಿತಿಯ ಕುರಿತು ನಿಮ್ಮ ಅಭಿಪ್ರಾಯವೇನು?

ಪ್ರಪಂಚದ ಅನೇಕ ಭಾಗಗಳಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಯುರೋಪ್, ಮಧ್ಯಪ್ರಾಚ್ಯ ಮಾತ್ರವಲ್ಲ, ಆಫ್ರಿಕಾದಲ್ಲಿಯೂ ಯುದ್ಧಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಶಾಂತಿ ಸಾಧ್ಯವೆಂಬ ಸಾಕ್ಷಿಯನ್ನು ನೀಡುವುದು ಕ್ರೈಸ್ತರ ಕರ್ತವ್ಯ. ಯುದ್ಧ ಅನಿವಾರ್ಯವಲ್ಲ. ಯುದ್ಧದ ಸಮಯದಲ್ಲಿ ನಾವು ನಿರೀಕ್ಷೆಯ ಜನರಾಗಿರಬೇಕು.

ಕ್ರೈಸ್ತರ ಮೂಲ ಸಂದೇಶವೇ ನಿರೀಕ್ಷೆ. ಪವಿತ್ರ ಪರಮಪ್ರಸಾದ ಸ್ಥಾಪಿತವಾದುದು ಕೊನೆಯ ಭೋಜನದ ಸಂದರ್ಭದಲ್ಲಿ — ಮುಂದೆ ಮರಣ ಮತ್ತು ಹಿಂಸೆಯೇ ಎದುರಿರುವ ಕ್ಷಣದಲ್ಲಿ, ಯೇಸು ತನ್ನನ್ನೇ ಅರ್ಪಿಸಿದರು. ಅದು ನಿರೀಕ್ಷೆಯ ಸಂಸ್ಕಾರ. ಉಕ್ರೇನ್ ಜನರಿಗೆ ಮತ್ತು ಯುದ್ಧ ಮುಂದುವರಿಯುತ್ತಿರುವ ಎಲ್ಲೆಡೆ ಇರುವ ಜನರಿಗೆ ನನ್ನ ಸಂದೇಶ ಒಂದೇ- ನಮ್ಮ ನಿರೀಕ್ಷೆ ಪ್ರಭುವಿನಲ್ಲಿ. ಅಂತಿಮವಾಗಿ ಆತನ ಶಾಂತಿಯೇ ಜಯಿಸುತ್ತದೆ.

ಪ್ರಶ್ನೆ: 'ಕೊನೆಯ ಏಳು ಪದಗಳು' (The Seven Last Words) ಎಂಬ ನಿಮ್ಮ ಪುಸ್ತಕ—ಶಿಲುಬೆಯ ಮೇಲೆ ಕ್ರಿಸ್ತನು ಉಚ್ಚರಿಸಿದ ಕೊನೆಯ ಏಳು ವಾಕ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಈಗ ಉಕ್ರೇನ್ ಭಾಷೆಯಲ್ಲಿ ಪ್ರಕಟವಾಗಿದೆ.ನಿಮ್ಮ ಈ ಪುಸ್ತಕವನ್ನು ಹೇಗೆ ವಿವರಿಸುತ್ತೀರಿ?

ಈ ಚಿಕ್ಕ ಪುಸ್ತಕವು ಪರಸ್ಪರ ಆಲಿಸುವ ಅಗತ್ಯತೆಯನ್ನು ಒತ್ತಿಹೇಳುತ್ತದೆ. ಹಿಂಸಾಚಾರದ ಕಾಲದಲ್ಲಿ ಕಿವಿಗಳನ್ನು ಮುಚ್ಚಿಕೊಳ್ಳುವ ಪ್ರಲೋಭನೆ ಉಂಟಾಗುತ್ತದೆ. ಆದರೆ ನಾವು ಆಲಿಸಬೇಕು. ವಿಶೇಷವಾಗಿ ಅಸಮ್ಮತಿಯ ಸಂದರ್ಭಗಳಲ್ಲಿ ಪರಸ್ಪರ ಆಲಿಸಬೇಕು. ನಮ್ಮ ಜಗತ್ತು ಘೋಷಣೆಗಳಿಂದ ತುಂಬಿದೆ; ಆದರೆ ನಿಜವಾದ ಸಂವಾದ ಕಡಿಮೆ. ದೇವರ ಕರೆಯು ಮನಸ್ಸು ಮತ್ತು ಹೃದಯಗಳನ್ನು ತೆರೆಯುವುದಾಗಿದೆ.

ರೋಮ್‌ನಲ್ಲಿ ನಡೆದ ಪ್ರಧಾನ ಗುರುಗಳ ಪರಿಷತ್ತಿನಲ್ಲಿ ಪೂಜ್ಯ ಜಗದ್ಗುರುಗಳು 14ನೇ ಲಿಯೋ ಮೊದಲಿಗೆ ಪರಸ್ಪರ ಆಲಿಸುವುದನ್ನು ಒತ್ತಿಹೇಳಿದರು. ಹಿಂಸಾಚಾರದಿಂದ ತುಂಬಿರುವ ಜಗತ್ತಿಗೆ ಇದು ಧರ್ಮಸಭೆಯ ಮಹತ್ವದ ಕಾಣಿಕೆ.ನಾವು ಕಿವಿಗಳಿಂದ ಮಾತ್ರವಲ್ಲ, ಮನಸ್ಸು ಮತ್ತು ಕಲ್ಪನೆಯಿಂದಲೂ ಆಲಿಸಬೇಕು — ಇತರರು ನಮಗಿಂತ ವಿಭಿನ್ನವಾಗಿ ಯೋಚಿಸುವುದಕ್ಕೆ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಮಾರ್ಚ್ 2026, 15:36