ನೂತನ ಅಧ್ಯಕ್ಷೀಯ ಮಂಡಳಿ : CEAMA 2026-2030 ನೂತನ ಅಧ್ಯಕ್ಷೀಯ ಮಂಡಳಿ : CEAMA 2026-2030 

ಅಮೆಜಾನ್ ಧರ್ಮಸಭೆಯ ವತಿಯಿಂದ ಸಹಯಾತ್ರೆ ಮತ್ತು ಬಹುಸಂಸ್ಕೃತಿಯ ದಾರಿಯನ್ನು ಬಲಪಡಿಸುವ ಸಭೆ

ಅಮೆಜಾನ್ ಧರ್ಮಸಭೆಯ (CEAMA) ಧಾರ್ಮಿಕ ಸಭೆ 2026–2030 ಅವಧಿಗೆ ತನ್ನ ಅಧ್ಯಕ್ಷ ಮಂಡಳಿಯನ್ನು ನವೀಕರಿಸಿ, ವಿವಿಧ ತರಬೇತಿಗಳು, ಸೇವೆಗಳು ಮತ್ತು ಸಂಸ್ಕೃತಿಗಳು ಅಮೆಜಾನ್ ಪ್ರದೇಶದ ಜೀವಸೇವೆಗೆ ಒಂದಾಗುವ ಸಹಯಾತ್ರೆಯ ಧಾರ್ಮಿಕ ದಾರಿಯನ್ನು ಬಲಪಡಿಸಿದೆ.

ಲೇಖಕರು: ಜೋಹಾನ್ ಪಚೆಕೊ

“ಇಗೋ, ನೂತನ ಕಾರ್ಯವನು ನಾನೆಸಗುವೆಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? (ಯೆಶಾಯ 43:19) ಎಂಬ ಬೈಬಲ್ ವಾಕ್ಯದಿಂದ ಪ್ರೇರಿತವಾಗಿ, ಅಮೆಜಾನ್ ಧರ್ಮಸಭೆ (CEAMA) ಮಾರ್ಚ್ 16ರಿಂದ 19ರವರೆಗೆ ತನ್ನ 6ನೇ ಸಾಮಾನ್ಯ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ 2026–2030 ಅವಧಿಗೆ ಹೊಸ ಅಧ್ಯಕ್ಷ ಮಂಡಳಿಯನ್ನು ಆಯ್ಕೆ ಮಾಡಲಾಗಿದ್ದು, ಅಮೆಜಾನ್ ಪ್ರದೇಶಗಳಲ್ಲಿ ತನ್ನ ಧರ್ಮಪ್ರಚಾರ ಮತ್ತು ಸಹಯಾತ್ರೆಯ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿದೆ.

CEAMAಯ ಹೊಸ ಅಧ್ಯಕ್ಷ ಮಂಡಳಿಯಲ್ಲಿ ಬ್ರೆಜಿಲ್‌ನ ಮನಾಉಸ್ ಮಹಾಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಪೂಜ್ಯ ಲಿಯೋನಾರ್ಡೊ ಸ್ಟೈನರ್ (OFM) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪೆರುದ ಪುಎರ್ಟೋ ಮಾಲ್ಡೊನಾಡೋ ಪ್ರೇಷಿತ ಧರ್ಮಪ್ರಾಂತ್ಯದ ಗುರು ಜೆಸುಸ್ ಹುವಾಮಾನ್, ಬೊಲಿವಿಯಾದ ನ್ಯುಫ್ಲೋ ಡೆ ಚಾವೆಜ್ ಪ್ರೇಷಿತ ಧರ್ಮಪ್ರಾಂತ್ಯದ ಜುವಾನ್ ಉರಾನಾವಿ, ಗಯಾನಾದ ಜಾರ್ಜ್‌ಟೌನ್ ಧರ್ಮಪ್ರಾಂತ್ಯದ ಮಾರ್ವಾ ಜಾಯ್ ಹಾಕ್ಸ್‌ವರ್ಥ್ ಮತ್ತು ಬ್ರೆಜಿಲ್‌ನ ಮನಾಉಸ್ ಮಹಾಧರ್ಮಪ್ರಾಂತ್ಯದ ಸಹೋದರಿ ಸೋನಿಯಾ ಮಾರಿಯಾ ಪಿನ್ಹೋ ಡೆ ಮಾತೋಸ್ ಅವರನ್ನು ಮಂಡಳಿ ಒಳಗೊಂಡಿದೆ.

“ಅಮೆಜಾನ್ ಧರ್ಮಸಭೆ, ಕೊಲಂಬಿಯಾದ ಬೋಗೋಟಾದಲ್ಲಿ CEAMA ಸಭೆಯಲ್ಲಿ ಸೇರಿದೆ,” ಎಂದು ಪ್ರಧಾನ ಗುರುಗಳಾದ ಪೂಜ್ಯ ಲಿಯೋನಾರ್ಡೊ ಸ್ಟೈನರ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು. “ನಮ್ಮ ಧರ್ಮಪ್ರಚಾರ ಸೇವೆಯನ್ನು ನಾವು ಮರುಪರಿಶೀಲಿಸುತ್ತಿದ್ದೇವೆ, ಅದನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರತ್ಯೇಕ ಧರ್ಮಕೇಂದ್ರಗಳು, ಧರ್ಮಪ್ರಾಂತ್ಯಗಳು, ಗುರುಗಳು ಮತ್ತು ಪ್ರೇಷಿತ ಧರ್ಮಪ್ರಾಂತ್ಯಗಳ ಕಾರ್ಯಗಳಿಗೆ ಕೆಲವು ಸಾಮಾನ್ಯ ದಿಕ್ಕುಗಳನ್ನು ಕಂಡುಹಿಡಿಯಲು ನಾವು ಯತ್ನಿಸುತ್ತಿದ್ದೇವೆ. ಇದು ನಾವು ಕೈಗೊಂಡಿರುವ ಪಥವಾಗಿದ್ದು, ಅದನ್ನು ಮುಂದುವರಿಸಲು ನಾವು ಬಯಸುತ್ತೇವೆ.”

ಈ ಸಭೆಯಲ್ಲಿ ಹೊಸ ಅಧ್ಯಕ್ಷ ಮಂಡಳಿಯ ಆಯ್ಕೆಯೂ ನಡೆದಿರುವುದಾಗಿ ಅವರು ಹೇಳಿದರು. “ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಕನಸಾದ ಅಮೆಜಾನ್ ಪ್ರದೇಶದ ಧರ್ಮಸಭೆಗಳತ್ತ ಸಾಗುವ ಸಹಯಾತ್ರೆಯ ದಾರಿಯನ್ನು ಮುಂದುವರಿಸಲು ನಾವು ಬಯಸುತ್ತೇವೆ. Querida Amazonia ದಲ್ಲಿ ಅವರು ನಮಗೆ ನೀಡಿದ ನಾಲ್ಕು ಕನಸುಗಳನ್ನು — ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಮತ್ತು ಧಾರ್ಮಿಕ ಸ್ಥಿತಿಗಳನ್ನು — ನಾವು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ.”

“ಈ ರೀತಿಯ ಧರ್ಮಸಭೆಯ ಜೀವನವು ಆಳವಾಗಿ ಸಹಯಾತ್ರೆಯೂ ಧರ್ಮಪ್ರಚಾರದ ದಾರಿಯೂ ಆಗಿದೆ. ದೇವರು ನಮಗೆ ಆಶೀರ್ವದಿಸಲಿ, ಅಮೆಜಾನ್ ಮಾತೆ ಸದಾ ನಮ್ಮೊಂದಿಗೆ ಇರಲಿ,” ಎಂದು ಅವರು ಹೇಳಿದರು.

ಹೊಸ ಅಧ್ಯಕ್ಷ ಮಂಡಳಿಯ ವೈವಿಧ್ಯತೆ CEAMAಯ ಸಹಯಾತ್ರೆಯ ಸ್ವರೂಪವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಒಂದಾಗಿ ನಡೆಯುವ, ವಿವಿಧ ವರಗಳು ಮತ್ತು ಸೇವೆಗಳನ್ನು ಮೌಲ್ಯಮಾಪನ ಮಾಡುವ, ಮತ್ತು ಸ್ಥಳೀಯ ವಾಸ್ತವಿಕತೆಯಿಂದ ಸವಾಲುಗಳನ್ನು ಸ್ವೀಕರಿಸುವ ಧರ್ಮಸಭೆಯ ಜೀವಂತ ರೂಪವಾಗಿದೆ. ಇದು ಅಮೆಜಾನ್ ಮುಖ ಹೊಂದಿದ ಧರ್ಮಸಭೆಯ ಕನಸಿನ ನೈಜ ವ್ಯಕ್ತೀಕರಣವಾಗಿದ್ದು, ಸಂಸ್ಕೃತಿಗಳ ಸಂವಾದ, ಪಾಲ್ಗೊಳ್ಳುವಿಕೆ ಮತ್ತು ಹಂಚಿಕೊಂಡ ಜವಾಬ್ದಾರಿ ಅದರ ಮೂಲಾಧಾರಗಳಾಗಿವೆ.

ಮಾರ್ವಾ ಜಾಯ್ ಹಾಕ್ಸ್‌ವರ್ಥ್ — CEAMA ಉಪಾಧ್ಯಕ್ಷೆ

ಅಮೆಜಾನ್ ಜನಾಂಗವನ್ನು ಪ್ರತಿನಿಧಿಸುವ ಗಯಾನಾದ ಜಾರ್ಜ್‌ಟೌನ್ ಧರ್ಮಪ್ರಾಂತ್ಯದವರಾದ ಮಾರ್ವಾ ಜಾಯ್ ಹಾಕ್ಸ್‌ವರ್ಥ್, CEAMA ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮಕುಶಿ ಜನಾಂಗಕ್ಕೆ ಸೇರಿದ ಅವರು ದಕ್ಷಿಣ ರುಪುನುನಿ ಪ್ರದೇಶದ ಟಿಪುರು ಸಮುದಾಯದಲ್ಲಿ ಜನಿಸಿದ್ದು, ತಮ್ಮ ಶಿಕ್ಷಣ ಹಾಗೂ ಸಮುದಾಯ ಸೇವೆಯನ್ನು ಅಲ್ಲಿ ಬೆಳೆಸಿಕೊಂಡಿದ್ದಾರೆ.

“ಈ ದಿನಗಳು ಅತ್ಯಂತ ಮಾಹಿತಿ ತುಂಬಿದವು ಮತ್ತು ಚೈತನ್ಯದಿಂದ ಕೂಡಿದವು,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. “ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ನಡೆದ ಪ್ರತಿಯೊಂದು ಕಾರ್ಯದಲ್ಲೂ ಭಾಗವಹಿಸಿದ್ದೇನೆ. ಇಲ್ಲಿ ಕಳೆದ ಸಮಯ ಅತ್ಯಂತ ಮಹತ್ವದ್ದಾಗಿದೆ. ಇಂದು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ನನಗೆ ಸಂಪೂರ್ಣ ಅಚ್ಚರಿಯಾಯಿತು. ಇದು ದೊಡ್ಡ ಹೊಣೆಗಾರಿಕೆಯ ಸ್ಥಾನವೆಂದು ನನಗೆ ಗೊತ್ತಿದೆ, ಆದರೆ ನಾನು ಒಬ್ಬಳಲ್ಲ ಎಂಬುದೂ ನನಗೆ ತಿಳಿದಿದೆ.”

ಅವರ ಸೇವೆ ಗ್ರಾಮೀಣ ಮತ್ತು ಮೂಲನಿವಾಸಿ ಪರಿಸರಗಳಲ್ಲಿ ಕೇಂದ್ರೀಕೃತವಾಗಿದ್ದು, ಸಂಸ್ಕೃತಿಗಳ ನಡುವಿನ ಶಿಕ್ಷಣವನ್ನು ಉತ್ತೇಜಿಸುವುದರ ಮೂಲಕ ಸ್ಥಳೀಯ ಜನಾಂಗಗಳ ಗುರುತು, ಭಾಷೆ ಮತ್ತು ಪರಂಪರೆಗಳನ್ನು ಬಲಪಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಶಿಕ್ಷಣ ವಿಧಾನದಲ್ಲಿ ಪಾರಂಪರಿಕ ಜ್ಞಾನ ಮತ್ತು ಆಧುನಿಕ ವಿಧಾನಗಳ ಸಂಯೋಜನೆ ಕಂಡುಬರುತ್ತದೆ, ಇದರಿಂದ ಹೊಸ ಪೀಳಿಗೆಗಳಿಗೆ ಅರ್ಥಪೂರ್ಣ ಶಿಕ್ಷಣ ಪ್ರಕ್ರಿಯೆಗಳು ರೂಪುಗೊಳ್ಳುತ್ತಿವೆ.

ಅಮೆಜಾನ್ ಪ್ರದೇಶ ಮತ್ತು ಸಂವಹನ

ಸಭೆಯ ಸಂದರ್ಭದಲ್ಲಿ ಸಂವಹನದ ಪಾತ್ರದ ಕುರಿತು ಮಾತನಾಡಿದ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಪೌಲೊ ರುಫಿನಿ, ಅಮೆಜಾನ್ ಪ್ರದೇಶದಲ್ಲಿ ಧರ್ಮಸಭೆಯ ಸಂವಹನದ ಜವಾಬ್ದಾರಿಯನ್ನು ಒತ್ತಿಹೇಳಿದರು. “ವಾಣಿಜ್ಯ ಅಥವಾ ಭೌಗೋಳಿಕ ರಾಜಕೀಯ ತರ್ಕಗಳಿಂದ ನಿಯಂತ್ರಿತವಾಗಿರುವ ಜಾಗತಿಕ ಮಾಧ್ಯಮ ವ್ಯವಸ್ಥೆಯಲ್ಲಿ, ಅಮೆಜಾನ್ ಪ್ರದೇಶದ ಪರಿಸರ ಸಂಕಷ್ಟ ಮತ್ತು ಅದರ ಕಥೆಗಳನ್ನು ಹೇಳುವ ಆಸಕ್ತಿ ಕಾಣಿಸುವುದಿಲ್ಲ,” ಎಂದು ಅವರು ಹೇಳಿದರು.

“ಸಂವಹನವನ್ನು ಕೇವಲ ಸುದ್ದಿಗಳನ್ನು ಹರಡುವುದಾಗಿ ನೋಡಬಾರದು. ಸುದ್ದಿಗಳು ಅಗತ್ಯ, ಆದರೆ ಅವುಗಳ ಆಯುಷ್ಯ ಬಹಳ ಕಡಿಮೆ. ಯಾವುದು ಮುಖ್ಯ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ವ್ಯವಸ್ಥೆಯೊಳಗೆ ಅವು ಕಾರ್ಯನಿರ್ವಹಿಸುತ್ತವೆ. ಅಮೆಜಾನ್ ಕಥೆಗಳು ದುರಂತ, ಶೃಂಗ ಸಭೆ ಅಥವಾ ಮೂಲನಿವಾಸಿ ನಾಯಕರ ಹತ್ಯೆ ಸಂಭವಿಸಿದಾಗ ಮಾತ್ರ ಹೊರಬರುತ್ತವೆ; ನಂತರ ಮತ್ತೆ ಮರೆಯಾಗುತ್ತವೆ. ಈ ಮೌನವನ್ನು ಮುರಿಯಲು ಸೃಜನಶೀಲತೆ ಅಗತ್ಯ,” ಎಂದು ಅವರು ಹೇಳಿದರು.

ಅವರು, “ಅಧಿಪತ್ಯ ಸಾಧಿಸಿರುವ ವೇದಿಕೆಗಳಲ್ಲಿ ನಾವು ಕಾರ್ಯನಿರ್ವಹಿಸಬೇಕು, ಆದರೆ ಅದೇ ಮಾಧ್ಯಮ ವ್ಯವಸ್ಥೆಯ ನಿಯಮಗಳಿಗೆ ಒಳಪಡುವಂತಾಗಬಾರದು. ಈ ವಿಷಯಗಳಲ್ಲಿ ಪರಿಣಾಮಕಾರಿ ಜಾಗತಿಕ ಸಂವಹನಕ್ಕಾಗಿ ವಿಭಿನ್ನ ಭಾಷೆಗಳ ಸಮನ್ವಯ ಅಗತ್ಯ, ಪ್ರತಿಯೊಂದು ತನ್ನದೇ ಪ್ರೇಕ್ಷಕರನ್ನು ಹೊಂದಿರುತ್ತದೆ.”

“ಇಲ್ಲಿಯೇ ಸೃಜನಶೀಲತೆಗೆ ಅವಕಾಶವಿದೆ. ನಿಮ್ಮ ಸಂವಹನ ಅಮೆಜಾನ್ ಬಗ್ಗೆ ಮಾತ್ರವಲ್ಲ, ಅಮೆಜಾನ್‌ನಿಂದಲೇ ಬರಬೇಕು,” ಎಂದು ಅವರು ಹೇಳಿದರು.

ಅಮೆಜಾನ್‌ನಲ್ಲಿ ಧರ್ಮಪ್ರಚಾರಕರು: ಪೂಜ್ಯ ಜಗದ್ಗುರುಗಳ ಸಂದೇಶ

CEAMA ಸಭೆಯ ಉದ್ಘಾಟನೆಯಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಪೂಜ್ಯ ಜಗದ್ಗುರು 14ನೆ ಲಿಯೋ, ಅಮೆಜಾನ್ ಧರ್ಮಸಭೆಗೆ ಪ್ರೇರಣೆ ನೀಡಿದರು. “ಗುರುಗಳು ಮತ್ತು ವಿಶ್ವಾಸಿಗಳು ಸೇರಿ, ಅಮೆಜಾನ್ ಪ್ರದೇಶದಲ್ಲಿ ಧರ್ಮಪ್ರಚಾರ ಶಿಷ್ಯರ ಗುರುತನ್ನು ಬಲಪಡಿಸುವ ಕಾರ್ಯವನ್ನು ಮುಂದುವರಿಸಿ,” ಎಂದು ಅವರು ಹೇಳಿದರು.

“ನಿಮಗಿಂತ ಮೊದಲು ನಡೆದ ಅನೇಕ ಪುರುಷರು ಮತ್ತು ಮಹಿಳೆಯರ ರಕ್ತದಿಂದ ನೀರಾಯಿಸಿದ ಈ ದಾರಿಯಲ್ಲಿ ನೀವು ಬೀಜ ಬಿತ್ತಿರಿ. ಅವರು ಕ್ರಿಸ್ತನ ಪಾಡುಗಳೊಂದಿಗೆ ಒಂದಾಗಿ, ಅಮೆಜಾನ್‌ನಲ್ಲಿ ಬೆಳೆಯುತ್ತಿರುವ ಮಹಾ ವೃಕ್ಷದ ಬೇರುಗಳಾಗಿದ್ದಾರೆ,” ಎಂದು ಅವರು ಹೇಳಿದರು.

“ಸಭೆಯ ಉದ್ದೇಶಗಳಲ್ಲಿ ಒಂದಾಗಿ ಸಹಯಾತ್ರೆಯ ಧಾರ್ಮಿಕ ಸೇವಾ ದಿಕ್ಕುಗಳನ್ನು ರೂಪಿಸುವುದು ನನಗೆ ಸಂತೋಷ ತಂದಿದೆ. ಇದು ‘ಪ್ರತಿ ಮಾನವನನ್ನು ಅಪಾರವಾಗಿ ಪ್ರೀತಿಸುವ ದೇವರನ್ನು ಪ್ರಕಟಿಸುವ ಕಾರ್ಯಕ್ಕೆ’ ಉಪಯುಕ್ತ ಸಾಧನವಾಗಬಹುದು,” ಎಂದು ಅವರು ಹೇಳಿದರು, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ Querida Amazonia (64) ಅನ್ನು ಉಲ್ಲೇಖಿಸುತ್ತಾ.

ತಮ್ಮ ಹೊಸ ಅವಧಿ ಮತ್ತು ಕಾರ್ಯವನ್ನು ಮುಂದುವರಿಸುತ್ತಿರುವ CEAMA, ಜೀವದ ರಕ್ಷಣೆ, ಜನಾಂಗಗಳ ಗೌರವ ಮತ್ತು ನಮ್ಮೆಲ್ಲರ ಮನೆಯಾದ ಭೂಮಿಯ ಬಗ್ಗೆ ಕಾಳಜಿ ವಹಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಅಮೆಜಾನ್ ಜನರೊಂದಿಗೆ ನಂಬಿಕೆ, ಭರವಸೆ ಮತ್ತು ಆಳವಾದ ಧರ್ಮಪ್ರಚಾರ ಮನೋಭಾವದೊಂದಿಗೆ ಸಹಯಾತ್ರೆಯಲ್ಲಿ ಮುಂದುವರಿಯುವ ಸಂಕಲ್ಪವನ್ನು ಈ ಸಭೆ ದೃಢಪಡಿಸಿದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

20 ಮಾರ್ಚ್ 2026, 15:23