ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ಅವಶೇಷಗಳ ಸಾರ್ವಜನಿಕ ಗೌರವದರ್ಶನಕ್ಕೆ ತೆರೆ
ವ್ಯಾಟಿಕನ್ ವರದಿ
ಮಾರ್ಚ್ 22ರ ಭಾನುವಾರ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಬಸಿಲಿಕಾದ ಕಿರಿಯ ದೇವಾಲಯದಲ್ಲಿ ಒಂದು ತಿಂಗಳ ಕಾಲ ಪ್ರದರ್ಶನಕ್ಕೆ ಇಡಲಾಗಿದ್ದ ಅವರ ಅವಶೇಷಗಳ ಸಾರ್ವಜನಿಕ ಗೌರವದರ್ಶನಕ್ಕೆ ತೆರೆ ಬಿದ್ದಿತು.
ಮೊದಲ ಬಾರಿಗೆ ಅವರ ಅವಶೇಷಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ 3,70,000ಕ್ಕೂ ಹೆಚ್ಚು ಯಾತ್ರಿಕರು ಆಗಮಿಸಿ ಗೌರವ ಸಲ್ಲಿಸಿದರು. ಸಂತರ ನಿಧನದ 800ನೇ ವರ್ಷದ ಸ್ಮರಣಾರ್ಥ ಈ ವರ್ಷ ಆಯೋಜಿಸಲಾದ ಹಲವು ಕಾರ್ಯಕ್ರಮಗಳ ಭಾಗವಾಗಿ ಈ ಗೌರವದರ್ಶನ ನಡೆಯಿತು.
ವಂ. ಪ್ರಧಾನ ಗುರು ಜುಪ್ಪಿ: ಶಾಂತಿಯ ಸಂದೇಶವನ್ನು ಕೇಳೋಣ
ಈ ಒಂದು ತಿಂಗಳ ಅವಧಿಯನ್ನು ಸಮಾಪ್ತಿಗೊಳಿಸಲು, ಬೋಲೊಗ್ನಾದ ಮಹಾಧರ್ಮಗುರು ಮತ್ತು ಇಟಾಲಿಯನ್ ಧರ್ಮಗುರುಗಳ ಪರಿಷತ್ತಿನ ಅಧ್ಯಕ್ಷರಾದ ವಂ. ಪ್ರಧಾನ ಗುರು ಮಾತ್ತೆಯೊ ಜುಪ್ಪಿ ಅವರು ಹಿರಿಯ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ತಮ್ಮ ಉಪದೇಶದಲ್ಲಿ, ಇಂದಿನ ಕಾಲಘಟ್ಟವು ವೈಯಕ್ತಿಕತೆಯೂ ಸಂಘರ್ಷವೂ ತುಂಬಿರುವುದಾಗಿ ಉಲ್ಲೇಖಿಸಿ, “ಕೆಟ್ಟದನ್ನು ಕೆಟ್ಟದರಿಂದ ಎದುರಿಸುವುದು ಒಂದು ಭ್ರಾಂತಿ” ಎಂದು ಹೇಳಿದರು. ಕ್ರೈಸ್ತರು ಪುನರುತ್ಥಾನದಿಂದ ಉಗಮಿಸುವ “ಅಸ್ತ್ರವಿಲ್ಲದ ಶಕ್ತಿ”ಯನ್ನು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು—ಇದು ಮರಣಕ್ಕೂ, ಅದಕ್ಕೆ ದಾರಿ ಮಾಡುವ ಎಲ್ಲಕ್ಕೂ ವಿರುದ್ಧ ನಿಂತಿರುತ್ತದೆ.
“ಶಕ್ತಿಯನ್ನು ಮಹಿಮೆಪಡಿಸುವ ಈ ಕಾಲದಲ್ಲಿ,
ನಾವು ಶಾಂತಿಯ ಸಂದೇಶವನ್ನು ಕೇಳೋಣ. ನಾವು ‘ನಿಮಗೆ ಶಾಂತಿ ಇರಲಿ’ ಎಂದು ನಮ್ಮ ಮುಖಾಮುಖಿಯಾಗಿ ಮಾತುಗಳಿಂದಲೂ ಹೇಳಿದರೆ, ಎಷ್ಟು ಭಯ ಮತ್ತು ಹಿಂಸೆ ಈಗಾಗಲೇ ನಿವಾರಣೆಯಾಗುತ್ತಿತ್ತೋ!” ಎಂದು ಹೇಳಿದರು.
ನಿಜವಾದ ಶಾಂತಿಯ ಮಾರ್ಗ ನಿರ್ಮಾಣ
ವಂ. ಪ್ರಧಾನ ಗುರು ಜುಪ್ಪಿ ಅವರು ಕ್ರೈಸ್ತೀಯ ಸಂದೇಶದ ಹೃದಯವನ್ನು ಹೀಗೆ ವಿವರಿಸಿದರು: “ಲೋಕವನ್ನು ಆಳುವುದು ಶಕ್ತಿಯಲ್ಲ; ಅದನ್ನು ಬದಲಾಯಿಸಬಲ್ಲದು ಪ್ರೀತಿಯಷ್ಟೇ.”
ಸಂತ ಫ್ರಾನ್ಸಿಸ್ ಕುರಿತು ಮಾತನಾಡುತ್ತಾ, “ಅವರು ಒಬ್ಬ ಜನಾಂಗಕ್ಕೆ ಮಾತ್ರ ಸೇರಿಲ್ಲ; ಎಲ್ಲರಿಗೂ ಸೇರಿದ್ದಾರೆ” ಎಂದು ಹೇಳಿದರು. ಪ್ರತಿಯೊಬ್ಬನನ್ನೂ ಸಹೋದರನೆಂದು ಗುರುತಿಸುವ ಪ್ರೀತಿಯ ಪಾಠವನ್ನು ಅವರು ಕಲಿಸುತ್ತಾರೆ ಎಂದು ಹೇಳಿದರು. ಮುಂದುವರಿಸಿ,“ಇದು ವಿನಮ್ರ ಪ್ರೀತಿ,ಇದು ಕೈಬಿಡುವುದಿಲ್ಲ; ಮರಣವನ್ನೇ ನಿಷ್ಪ್ರಭಗೊಳಿಸಿ ಲೋಕವನ್ನು ಪುನಃ ಜೀವಂತಗೊಳಿಸುತ್ತದೆ.
ಸಂಘರ್ಷ ಮತ್ತು ವಿಭಜನೆಯಿಂದ ಬಳಲುತ್ತಿರುವ ಜಗತ್ತಿನಲ್ಲಿ, ಎಲ್ಲರೂ “ಶಾಂತಿಯ ನಿರ್ಮಾತೃಗಳಾಗಿರಿ”—ಗೋಡೆಗಳು ಏರಿದಲ್ಲಿ ಸೇತುವೆಗಳನ್ನು ನಿರ್ಮಿಸಿ, ಸುವಾರ್ತೆಯಲ್ಲಿ ಸಂವಾದದ ದಾರಿಯನ್ನು ಪುನಃ ಕಂಡುಹಿಡಿಯಿರಿ ಎಂದು ಅವರು ಕರೆ ನೀಡಿದರು.
ಸಂತ ಫ್ರಾನ್ಸಿಸ್ ಅವಶೇಷಗಳು: ಒಂದು ಮಹಾ ಸಾಂತ್ವನ
ಈ ಸಾರ್ವಜನಿಕ ಗೌರವದರ್ಶನದ ಅನುಭವವು ಅಸ್ಸಿಸಿಗೆ ಬಂದ ಸಾವಿರಾರು ಯಾತ್ರಿಕರಿಗೆ “ಒಂದು ಮಹಾ ಸಾಂತ್ವನ”ವಾಗಿತ್ತು ಎಂದು ವಂ. ಪ್ರಧಾನ ಗುರು ಜುಪ್ಪಿ ಹೇಳಿದರು.
ಸಂತ ಫ್ರಾನ್ಸಿಸ್ ಅವರ ಅವಶೇಷಗಳ ಮುಂದೆ ನಿಂತಾಗ, ಅನೇಕರು ತಮ್ಮ ಜೀವನದಲ್ಲಿ ದೇವರ ಉಪಸ್ಥಿತಿಯನ್ನು ಹೊಸದಾಗಿ ಅನುಭವಿಸಿದರು ಮತ್ತು ಆಂತರಿಕ “ಶಕ್ತಿ”ಯನ್ನು ಕಂಡುಕೊಂಡರು. “ಪಾವಿತ್ರ್ಯವೆಂದರೆ ಪರಿಪೂರ್ಣತೆ ಅಲ್ಲ; ಅದು ನಮ್ಮ ದಾರಿದ್ರ್ಯದ ಜೀವನದಲ್ಲೇ ದೇವರ ಪ್ರೀತಿಯ ಪ್ರತಿಫಲನ” ಎಂದು ಅವರು ಹೇಳಿದರು.
“ನಾವು ಫ್ರಾನ್ಸಿಸ್ ಸುತ್ತ ಸೇರಿರುವ ಒಂದು ಸಹೋದರತ್ವವಾಗಿದ್ದೇವೆ,” ಎಂದು ಪವಿತ್ರ ಸಮೂಹದ ಪಾಲಕರಾದ ವಂ.ಗುರು. ಮಾರ್ಕೊ ಮೋರೋನಿ ಹೇಳಿದರು.
“ಇಲ್ಲಿ ಸೇರಿದ್ದ 3,70,000 ಜನರು ಮತ್ತು ವಿಶ್ವದಾದ್ಯಂತ ಇರುವ ಇನ್ನೂ ಅನೇಕರಿಗೆ ಇದು ಒಂದು ಪ್ರಾರ್ಥನಾಮಯ ಸಹೋದರತ್ವ. ಈ ಮೌನ ಮತ್ತು ದುರ್ಬಲ ಎಲುಬುಗಳ ಚಿಹ್ನೆಯಲ್ಲಿ, ಆತ್ಮದಿಂದ ಜೀವಂತಗೊಂಡ ಜೀವನದ ಶಕ್ತಿಯನ್ನು ಕಾಣಲು ಜನರು ಬಂದಿದ್ದರು,” ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಹಕರಿಸಿದ, ಸಂಘಟಿಸಿದ ಮತ್ತು ಭಾಗವಹಿಸಿದ ಎಲ್ಲರಿಗೂ ವಂ.ಗುರು ಮೋರೋನಿ ಕೃತಜ್ಞತೆ ಸಲ್ಲಿಸಿದರು.
ನಮ್ಮನ್ನು ಕರೆದ ಸಂತ ಫ್ರಾನ್ಸಿಸ್
ಪವಿತ್ರ ಕಾನ್ವೆಂಟಿನ ಸಂವಹನ ನಿರ್ದೇಶಕರಾದ ವಂ.ಗುರು ಜೂಲಿಯೊ ಚೆಸಾರೆ, “ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಾರೆ ಎಂದು ನಾನು ನಿರೀಕ್ಷಿಸಿದ್ದೇನಾ ಎಂದು ಹಲವರು ಕೇಳಿದರು—ಹೌದು, ಜನರು ಫ್ರಾನ್ಸಿಸ್ ಅವರನ್ನು ಭೇಟಿಯಾಗಲು ಬರುತ್ತಾರೆ ಎಂಬುದರಲ್ಲಿ ನನಗೆ ಅನುಮಾನ ಇರಲಿಲ್ಲ” ಎಂದು ಹೇಳಿದರು.
“ಆದರೆ ನಾನು ನಿರೀಕ್ಷಿಸದಿದ್ದು ಯಾತ್ರೆಯ ವಿಧಾನ—ಮೌನ, ಸಹನೆ, ಫೋನ್‌ಗಳನ್ನು ಬದಿಗಿಟ್ಟು ನಡೆಯುವ ಅನುಭವ. ಇಲ್ಲಿ ಫ್ರಾನ್ಸಿಸ್ ಅವರ ಅವಶೇಷಗಳೂ ಜಿಯೊಟ್ಟೊ ಅವರ ಚಿತ್ರಗಳೂ ಇದ್ದರೂ, ನಿಜವಾಗಿ ನಾವು ಫ್ರಾನ್ಸಿಸ್ ಅವರನ್ನು ನೋಡಲು ಬಂದಿಲ್ಲ; ಅವರು ನಮ್ಮ ಹೃದಯಗಳೊಂದಿಗೆ ಮಾತಾಡಲು ನಮ್ಮನ್ನು ಕರೆದರು,” ಎಂದು ಅವರು ಹೇಳಿದರು.
ಅವರು ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಲು ಸಹಕರಿಸಿದ ಪತ್ರಕರ್ತರು ಮತ್ತು ಸಂವಹನ ಸಿಬ್ಬಂದಿಗೂ ಧನ್ಯವಾದಗಳನ್ನು ತಿಳಿಸಿದರು.
ಹೊಸತನದ ಉಸಿರು
ಈ ಒಂದು ತಿಂಗಳ ಗೌರವದರ್ಶನವು ಪುನರುಜ್ಜೀವನ ಮತ್ತು ಅರ್ಥಪೂರ್ಣ ಭೇಟಿಗಳ ಸಮಯವಾಗಿತ್ತು. ಇಟಲಿ ಮಾತ್ರವಲ್ಲದೆ ಬ್ರೆಜಿಲ್, ಅಮೆರಿಕ, ತಾಂಜಾನಿಯಾ, ಭಾರತ, ಕೊರಿಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಸಹ ಧಾರ್ಮಿಕ ಸಹೋದರರು ಇಲ್ಲಿ ಸೇರಿದ್ದರು. ಈ ಕಾರ್ಯಕ್ರಮದ ಅಂಗವಾಗಿ “ಸು ಕ್ವೆಸ್ಟೋ ಕೊಲ್ಲೆ” (“ಈ ಗುಡ್ಡದ ಮೇಲೆ”) ಎಂಬ ಗೀತೆಗೆ ಸಂಗೀತ ವೀಡಿಯೋ ಕೂಡ ಸಿದ್ಧಪಡಿಸಲಾಯಿತು.
ಇದಲ್ಲದೆ, ಪವಿತ್ರ ಕಾನ್ವೆಂಟಿನ ಸಂಕೀರ್ಣದಲ್ಲಿ ಪ್ರಮುಖ ಪರಿಷ್ಕರಣೆಗಳನ್ನು ಮಾಡಿ, ಎಲ್ಲರೂ ಸುಲಭವಾಗಿ ಅವಶೇಷಗಳನ್ನು ಭೇಟಿ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಯಿತು. ಈ ಸಮಾನತೆ ಮತ್ತು ಒಳಗೊಳ್ಳುವಿಕೆಯ ಮನೋಭಾವವೇ ಸಂತ ಫ್ರಾನ್ಸಿಸ್ ಅವರ ಆತ್ಮವನ್ನು ಪ್ರತಿಬಿಂಬಿಸುತ್ತದೆ—ಅವರು ತಮ್ಮ ಜೀವನವನ್ನು ಅತೀ ದುರ್ಬಲರತ್ತ ತಲುಪುವುದರಿಂದಲೇ ಆರಂಭಿಸಿದ್ದರು.
ಮುಂದುವರಿಯುವ ಯಾತ್ರೆ
ಕೊನೆಯ ಯಾತ್ರಿಕರು ಹೊರಟ ನಂತರ, ಸಂಜೆ ಸಮಯದಲ್ಲಿ ಸಂತರ ಅವಶೇಷಗಳನ್ನು ಬಸಿಲಿಕಾದ ಒಳಗಿನ ಸಮಾಧಿಗೆ ಸ್ಥಳಾಂತರಿಸಲಾಯಿತು. ಈ ಖಾಸಗಿ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್ಕನ್ ಸಹೋದರರು ಮಾತ್ರ ಭಾಗವಹಿಸಿದರು. ಇದರೊಂದಿಗೆ ಸಾರ್ವಜನಿಕ ಗೌರವದರ್ಶನ ಅಂತ್ಯಗೊಂಡಿತು.
ಆದರೆ “ಸಂತ ಫ್ರಾನ್ಸಿಸ್ ಜೀವಂತವಾಗಿದ್ದಾರೆ” ಎಂಬ ಧ್ಯೇಯವು 2026ರವರೆಗೆ ಮುಂದುವರಿಯಲಿದೆ. ಅವರ ಸಂದೇಶದ ಶಾಶ್ವತ ಶಕ್ತಿಯನ್ನು ಮತ್ತು ಎಲ್ಲರೊಂದಿಗೂ ಮಾತಾಡುವ ಸಾಮರ್ಥ್ಯವನ್ನು ಮುಂದಿನ ಕಾರ್ಯಕ್ರಮಗಳು ಹೊತ್ತೊಯ್ಯಲಿವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).