2026.03.13 Assisi Pellegrini tedesco 2026.03.13 Assisi Pellegrini tedesco 

ಸಂತ ಫ್ರಾನ್ಸಿಸ್ ಅವರ ಅವಶೇಷಗಳನ್ನು ಕಾಣಲು ಅಸ್ಸಿಸಿಗೆ ಯಾತ್ರಿಕರ ಹರಿವು

ಈ ತಿಂಗಳಲ್ಲಿ ಲಕ್ಷಾಂತರ ಯಾತ್ರಿಕರು ಅಸ್ಸಿಸಿಗೆ ಭೇಟಿ ನೀಡಿ ಸಂತ ಫ್ರಾನ್ಸಿಸ್ ಅವರ ಅವಶೇಷಗಳನ್ನು ಗೌರವದಿಂದ ವಂದಿಸುತ್ತಿದ್ದಾರೆ. ಅವರ ಮರಣದ ನಂತರ ಕಳೆದ 800 ವರ್ಷಗಳಲ್ಲಿ ಮೊದಲ ಬಾರಿಗೆ ಅವು ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಲೇಖಕರು: ಜೋಸೆಫ್ ತಲ್ಲೊಕ್ – ಅಸ್ಸಿಸಿ

ಈ ವರ್ಷದ ಮೊದಲು ಸಂತ ಫ್ರಾನ್ಸಿಸ್ ಅವರ ಅವಶೇಷಗಳು — ಅವರ ಮರಣದ ನಂತರ ಕಳೆದ 800 ವರ್ಷಗಳಲ್ಲಿ ಕೇವಲ ಒಮ್ಮೆ ಮಾತ್ರ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು — ಅದು 1978ರಲ್ಲಿ ಒಂದು ದಿನ ಮಾತ್ರ. ಈಗ, ಸಂತರ ನಿಧನದ 800ನೇ ವಾರ್ಷಿಕೋತ್ಸವದ ಅಂಗವಾಗಿ, ಅವುಗಳನ್ನು ಒಂದು ತಿಂಗಳ ಕಾಲ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಇದುವರೆಗೆ ಸುಮಾರು 2,20,000 ಯಾತ್ರಿಕರು ಈ ಅವಶೇಷಗಳನ್ನು ವಂದಿಸಲು ಬಂದಿದ್ದಾರೆ. ಫ್ರಾನ್ಸಿಸ್ ಜೀವಿಸಿದ್ದ ಹಾಗೂ ಅವರ ದೇಹಾವಶೇಷಗಳು ಇರುವ ಮಧ್ಯ ಇಟಲಿಯ ಬೆಟ್ಟದ ಪಟ್ಟಣ ಅಸ್ಸಿಸಿಯ ಫ್ರಾನ್ಸಿಸ್ಕನ್ ಸಹೋದರರು ಈ ಸಂಖ್ಯೆ 4,00,000ರವರೆಗೆ ಏರಬಹುದು ಎಂದು ಅಂದಾಜಿಸುತ್ತಿದ್ದಾರೆ.

ಅಸ್ಸಿಸಿಯಲ್ಲಿ ಯಾತ್ರಿಕರಿಗೆ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಆಸ್ಟ್ರೇಲಿಯಾದ ಫ್ರಾನ್ಸಿಸ್ಕನ್ ವಂ. ಗುರು ಬೆನೆಡಿಕ್ಟ್ ಲಾ ವೋಲ್ಪೆ, “ಇಲ್ಲಿ ಬರುವ ಪ್ರತಿಯೊಬ್ಬರೂ ಅವರು ಸಂತ ಫ್ರಾನ್ಸಿಸ್ ಅವರನ್ನು ಭೇಟಿಯಾದ ಅನುಭವದೊಂದಿಗೆ ಹೊರಟು ಹೋಗುತ್ತಾರೆ. ಅವರು ಫ್ರಾನ್ಸಿಸ್ ಅವರ ಆತ್ಮವನ್ನು, 800 ವರ್ಷಗಳ ನಂತರವೂ ಇಂದಿಗೂ ಜನರೊಂದಿಗೆ ಮಾತನಾಡುವ ವ್ಯಕ್ತಿಯನ್ನು ಅವರ ವ್ಯಕ್ತಿತ್ವವನ್ನು ಅನುಭವಿಸುತ್ತಾರೆ.” ಎಂದು ಹೇಳುತ್ತಾರೆ

ಸಂತ ಫ್ರಾನ್ಸಿಸ್ ಸಮಾಧಿಯಿರುವ ಬಸಿಲಿಕಾದ ಪ್ರಕಟಣೆಯ ಪ್ರಕಾರ, ಈ ಅವಶೇಷಗಳ ಪ್ರದರ್ಶನವು, “ಫ್ರಾನ್ಸಿಸ್ ನಮಗೆ ಬಿಟ್ಟಿರುವ ಆಧ್ಯಾತ್ಮಿಕ ಪರಂಪರೆಯನ್ನು ಮತ್ತೆ ಕಂಡುಹಿಡಿಯುವ ಆಹ್ವಾನವಾಗಿದೆ — ಶಾಂತಿ ಮತ್ತು ಸಹೋದರತ್ವದ ಅವರ ಸಂದೇಶವು ಇಂದಿಗೂ ಮಾನವಕುಲದ ಹೃದಯವನ್ನು ಸ್ಪರ್ಶಿಸುತ್ತದೆ.”

ಯುದ್ಧದಿಂದ ತುಂಬಿದ ವಿಶ್ವದಲ್ಲಿ ಆಂತರಿಕ ಶಾಂತಿ

ಸಂತ ಫ್ರಾನ್ಸಿಸ್ ಅಸ್ಸಿಸಿಯ ನಗರ ಗೋಡೆಯ ಹೊರಭಾಗದಲ್ಲಿ ಸಮಾಧಿಯಾಗಲು ಆಯ್ಕೆ ಮಾಡಿದ್ದರು. ಆ ಸ್ಥಳವನ್ನು ‘ಕೊಲ್ಲೊ ದ್’ಇನ್ಫೆರ್ನೊ’ (ನರಕದ ಬೆಟ್ಟ) ಎಂದು ಕರೆಯಲಾಗುತ್ತಿತ್ತು, ಅಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು.

ಇಂದು ಅಲ್ಲಿ ಎರಡು ಹಂತಗಳಲ್ಲಿ ನಿರ್ಮಿಸಲಾದ ಭವ್ಯ ಬಸಿಲಿಕಾ ಇದೆ. ಪ್ರಸಿದ್ಧ ಕಲಾವಿದ ಜಿಯೊಟ್ಟೋ ಅವರ ಭಿತ್ತಿಚಿತ್ರಗಳಿಂದ ಅಲಂಕರಿಸಲಾದ ಈ ಬಸಿಲಿಕಾ ವಿಶೇಷವಾಗಿ ಸಂತನ ದೇಹಾವಶೇಷಗಳನ್ನು ಇರಿಸಲು ನಿರ್ಮಿಸಲಾಯಿತು. ಕೆಳಗಿನ ಬಸಿಲಿಕಾದಲ್ಲಿ ಯಾತ್ರಿಕರು ಸಂತ ಫ್ರಾನ್ಸಿಸ್ ಅವರ ಅಸ್ಥಿಪಂಜರವನ್ನು ವೀಕ್ಷಿಸಲು ಸಾಲಿನಲ್ಲಿ ನಿಂತಿದ್ದಾರೆ. ಕೆಲವು ಯಾತ್ರಿಕರು ವೀಲ್ಚೇರ್‌ನಲ್ಲಿ ಬರುತ್ತಾರೆ. ಪ್ರತಿಯೊಬ್ಬರೂ ಎಲುಬುಗಳ ಮುಂದೆ ಕೆಲವು ಕ್ಷಣಗಳು ಮೌನದಲ್ಲಿ ಪ್ರಾರ್ಥನೆ ಮಾಡುತ್ತಾರೆ.

ಇಂದು ಸಂತನ ಜೀವನವು ನಮಗೆ ಯಾವ ಸಂದೇಶವನ್ನು ನೀಡುತ್ತದೆ? ವಂ. ಗುರು ಲಾ ವೋಲ್ಪೆ ಅವರ ಪ್ರಕಾರ, ಸಂತ ಫ್ರಾನ್ಸಿಸ್ ಯೇಸುವನ್ನು ಭೇಟಿಯಾದಾಗ ಕಂಡುಕೊಂಡ ಆಂತರಿಕ ಶಾಂತಿಯೇ ಅವರ ಜೀವನದ ಮೂಲವಾಗಿದೆ. ಇಂದಿನ ವಿಶ್ವದಲ್ಲಿ ಕಾಣದಂತಾಗುತ್ತಿರುವ ರಾಜಕೀಯ ಶಾಂತಿಯ ಮೂಲವೂ ಇದೇ ಎಂದು ಅವರು ಹೇಳುತ್ತಾರೆ.

ಸಂತ ಫ್ರಾನ್ಸಿಸ್ ನಮಗೆ ಕಲಿಸುವುದು ಏನೆಂದರೆ, ದೇವರನ್ನು ಅನುಭವಿಸಿದಾಗ ದೊರೆಯುವ ಆಂತರಿಕ ಶಾಂತಿ. “ಈ ಶಾಂತಿ ನಮ್ಮ ಹೃದಯಗಳಲ್ಲಿ ಬೆಳೆಯಬಹುದು, ನಮ್ಮ ಸಮುದಾಯಗಳಲ್ಲಿ ಹರಡಬಹುದು, ಮತ್ತು ನಂತರ ಸಂಪೂರ್ಣ ವಿಶ್ವಕ್ಕೂ ವಿಸ್ತರಿಸಬಹುದು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮಾರ್ಚ್ 2026, 07:50