2026.02.27 PS169 COPERTINA: Sr. Lourdes visita una donna malata di cancro 2026.02.27 PS169 COPERTINA: Sr. Lourdes visita una donna malata di cancro 

ಫಿಲಿಪ್ಪಿನ್ಸ್: ಆಹಾರ,ಶಕ್ತಿ, ಸಾಂತ್ವನ ಸೇವೆ ನೀಡುತ್ತಿರುವ ಮಿಷನರಿ ಸಹೋದರಿಯರು

ಪರಮಪವಿತ್ರ ಪರಮಪ್ರಸಾದದ ಮಿಷನರಿ ಸಹೋದರಿಯರು ಮನಿಲಾ ನಗರದ ಬಂದರು ಪ್ರದೇಶದಲ್ಲಿರುವ ಅತೀ ಹಿಂದುಳಿದ ಬೇಸ್ಕೊ ವಸತಿ ಪ್ರದೇಶದ ಬಡ ಕುಟುಂಬಗಳಿಗೆ ಪವಿತ್ರ ಪರಮಪ್ರಸಾದದಲ್ಲಿರುವ ಯೇಸುವಿನ ಪ್ರೀತಿಯನ್ನು ಕೊಂಡೊಯ್ಯುತ್ತಿದ್ದಾರೆ. ಸಂಪೂರ್ಣ ಬಡತನದಲ್ಲಿ ಬದುಕುತ್ತಿರುವ ಅನೇಕ ಜನರ ಜೀವನದಲ್ಲಿ ನಿರೀಕ್ಷೆಯ ಬೀಜ ಬಿತ್ತುತ್ತಿದ್ದಾರೆ.

ಲೇಖಕರು:ವಂ. ಸಹೋದರಿ ಮರಿಯಾ ಡೆಲ್ ಪಿನೋ ರೊಡ್ರಿಗಸ್ ಡಿ ರಿವೇರಾ ಆಲಿವ್ಸ್, MSS

ಪರಮಪವಿತ್ರ ಪರಮಪ್ರಸಾದದ ಮಿಷನರಿ ಸಹೋದರಿಯರ ಜೀವನವೂ ಹಾಗೂ ಅವರ ಧರ್ಮಸ್ಪೂರ್ತಿ ಮತ್ತು ಸೇವಾ ಧ್ಯೇಯವನ್ನು ಹಂಚಿಕೊಳ್ಳುವ ಸಾಮಾನ್ಯ ಭಕ್ತರ ಜೀವನವೂ ಪವಿತ್ರ ಪರಮಪ್ರಸಾದ, ಮರಿಯಮ್ಮನ ಭಕ್ತಿ ಮತ್ತು ಸೇವಾ ಚೇತನದಿಂದ ಗುರುತಿಸಲ್ಪಟ್ಟಿದೆ.

ಪವಿತ್ರ ಪರಮಪ್ರಸಾದವೇ ಅವರು ಅನುಭವಿಸುವ ಮತ್ತು ಕಾರ್ಯರೂಪಕ್ಕೆ ತರುವ ಪ್ರತಿಯೊಂದು ಸೇವೆಯ ಹೃದಯವಾಗಿದೆ. ಆರಾಧನೆಯಲ್ಲಿನ ದೀರ್ಘ ಅನುಭವವು ಅವರ ಜೀವನದಲ್ಲಿ ಉದಾರ ಮತ್ತು ಸಂತೋಷಭರಿತ ಸಮರ್ಪಣೆಯಾಗಿ ಪ್ರತಿಫಲಿಸುತ್ತದೆ.

ಸಹೋದರಿಯರು ಪ್ರತಿದಿನ ಬೇಸ್ಕೊ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅತಿ ದುರಸ್ಥಿತಿಯಲ್ಲಿರುವ ಜನರ ಜೀವನಮಟ್ಟವನ್ನು ಸುಧಾರಿಸುವುದು ಅವರ ಉದ್ದೇಶ. ಬಾಲ್ಯದ ಅಪೌಷ್ಟಿಕತೆ, ಅನಾರೋಗ್ಯ, ಶಿಕ್ಷಣದ ಅಭಾವ, ಮಾನವೀಯತೆಯನ್ನೇ ಪ್ರಶ್ನಿಸುವಂತಹ ವಾಸಸ್ಥಳಗಳು—ಇವೆಲ್ಲವೂ ಜನರು ಎದುರಿಸುವ ಕಠಿಣ ವಾಸ್ತವಿಕತೆ.

ಸೂಪ್ ಕಿಚನ್ ಯೋಜನೆ ಮತ್ತು ತರಬೇತಿ

ಸಹೋದರಿಯರ ಯೋಜನೆಗಳಲ್ಲಿ ಅನ್ನದಾಸೋಹ ಪ್ರಮುಖವಾದುದು. ಮೂರರಿಂದ ಹತ್ತು ವರ್ಷ ವಯಸ್ಸಿನ ಮಕ್ಕಳಿಗೆ ಆಹಾರ ಮತ್ತು ಶಿಕ್ಷಣ ಒದಗಿಸುವುದು ಇದರ ಉದ್ದೇಶ. ಜೊತೆಗೆ, ಮಕ್ಕಳಿಗೆ ಪ್ರಾರ್ಥನೆ ಮತ್ತು ಪವಿತ್ರ ಪರಮಪ್ರಸಾದದಲ್ಲಿರುವ ಯೇಸುವಿನ ಆರಾಧನೆಯನ್ನು ಕಲಿಸಲಾಗುತ್ತದೆ.

ಪವಿತ್ರ ಪರಮಪ್ರಸಾದ ಆರಾಧನೆ ಮಕ್ಕಳ ಮತ್ತು ಅವರ ಕುಟುಂಬಗಳ ಜೀವನಕ್ಕೆ ಹೇಗೆ ಪ್ರೇರಣಾಶಕ್ತಿಯಾಗುತ್ತದೆ ಎಂಬುದಕ್ಕೆ ಸಹೋದರಿಯರು ಸಾಕ್ಷ್ಯವಾಗಿದ್ದಾರೆ. ಅನೇಕ ಹೇಳದ ಕಥೆಗಳು ಯೇಸುವಿನ ಹೃದಯದಲ್ಲೇ ಉಳಿದಿವೆ; ಅವರ ಸನ್ನಿಧಿಯಲ್ಲೇ ಅವರು ಬಲವನ್ನು ಮತ್ತು ಧೈರ್ಯವನ್ನು ಕಂಡುಕೊಳ್ಳುತ್ತಾರೆ.

ಸರಳ ಕಾರ್ಯಗಳಲ್ಲಿ ಜೀವಂತವಾಗಿರುವ ಪವಿತ್ರ ಪರಮಪ್ರಸಾದ

“ನಮ್ಮ ಸೇವಾ ಕ್ಷೇತ್ರದಲ್ಲಿ ನಾವು ಅನುಭವಿಸುವ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು ಭಾನುವಾರದ ಪವಿತ್ರ ಪರಮಪ್ರಸಾದ ಆಚರಣೆ,” ಎಂದು ವಂ. ಸಹೋದರಿ ಲಿಲಿಯಂ ಮರಿಯಾ ತಬೋರ್ದಾ ವಿಯಾನಾ ಹೇಳುತ್ತಾರೆ.

“ಮಕ್ಕಳು ತಮ್ಮ ಅತ್ಯುತ್ತಮ ಬಟ್ಟೆಗಳನ್ನು ಧರಿಸಿ ಪವಿತ್ರ ಬಲಿಪೂಜೆಗೆ ಸಿದ್ಧರಾಗುತ್ತಿರುವುದನ್ನು ನೋಡುವುದು ಎಷ್ಟು ಸುಂದರ! ‘ತಾರಾ, ಮಾಗ್ಮಿಸಾ ತಯೋ!’ (‘ಬನ್ನಿ, ಸಾಮೂಹಿಕ ಪ್ರಾರ್ಥನೆಗೆ ಹೋಗೋಣ.’)ಎಂದು ಅವರು ಹರ್ಷದಿಂದ ಕೂಗುತ್ತಾರೆ. ಬಡತನದ ನಡುವೆಯೂ ಪ್ರಭುವಿನ ಸಂತೋಷವು ಅವರ ಜೀವನವನ್ನು ತುಂಬಿದೆ.

ಕಾಣಿಕೆಯ ಸಮಯದಲ್ಲಿ ಪ್ರತೀ ಕುಟುಂಬವು ದೀರ್ಘ ಮೆರವಣಿಗೆಯಲ್ಲಿ ಸೇರಿ ತಮ್ಮ ಪರಿಶ್ರಮದ ಫಲವನ್ನು   ಪ್ರಭುವಿಗೆ ಅರ್ಪಿಸುತ್ತದೆ. ಈ ಕಾಣಿಕೆಗಳು ಎರಡು ರಾತ್ರಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿದ ದುಡಿಮೆಯ, ಅಥವಾ ಬೀದಿ ಮಾರುಕಟ್ಟೆಯಲ್ಲಿ ಪೆಟ್ಟಿಗೆಗಳನ್ನು ಹೊರುವ ಶ್ರಮದ ಪ್ರತಿಫಲಗಳಾಗಿರುತ್ತವೆ.

“ಪವಿತ್ರ ಶುಭ ಸಂದೇಶದ ಬಡ ವಿಧವೆಯೋಪಾದಿ ತಮ್ಮ ಬಳಿ ಇರುವ ಅಲ್ಪವನ್ನೇ ಪ್ರಭುವಿಗೆ ಅರ್ಪಿಸುವುದನ್ನು ಕಂಡಾಗಲೆಲ್ಲಾ ನಾನು ಭಾವುಕಳಾಗುತ್ತೇನೆ “ಎಂದು ವಂ. ಸಹೋದರಿ ಲಿಲಿಯಂ ಹೇಳಿದ್ದಾರೆ.

ಅನುಬಂಧ ಮತ್ತು ಆಲಿಸುವುದು

ಮಿಷನರಿ ಸಹೋದರಿಯರು ಕುಟುಂಬಗಳನ್ನು ಭೇಟಿ ಮಾಡುತ್ತಾ, ಅವರನ್ನು ಆಲಿಸುತ್ತಾ, ಪ್ರೀತಿಯಿಂದ ನೆರವಾಗುತ್ತಾ ಸಮುದಾಯದ ದೈನಂದಿನ ಜೀವನದಲ್ಲಿ ಪಾಲ್ಗೊಳ್ಳುತ್ತಾರೆ. ದೇಶದಲ್ಲಿ ಸಾಮಾನ್ಯವಾಗಿರುವ ಚಂಡಮಾರುತಗಳಿಂದ ಎಲ್ಲವನ್ನು ಕಳೆದುಕೊಳ್ಳುವವರಿಗೆ ಅವರು ನೆರವಾಗುತ್ತಾರೆ. ಒಂದು ಸರಳ ಅಪ್ಪುಗೆ, ಒಂದು ನಗು, ಅಥವಾ ಕೈ ಹಿಡಿಯುವುದು—ಇವುಗಳೆಲ್ಲವೂ ಅವರ ನೋವಿನ ನಡುವೆ ಆಶೆಯ ಬೆಳಕಾಗುತ್ತದೆ.

“ಬಡವರು ನನ್ನ ಸ್ನೇಹಿತರು,” ಎಂದು ಪರಮಪವಿತ್ರ ಪರಮಪ್ರಸಾದದ ಮಿಷನರಿ ಸಹೋದರಿಯರ ಸ್ಥಾಪಕಿ ಧನ್ಯ ಮರಿಯಾ ಎಮಿಲಿಯಾ ರಿಕ್ವೆಲ್ಮೆ ಹೇಳುತ್ತಿದ್ದರು.

ಲೂಸಿ ಎಂಬ ಸ್ವಯಂಸೇವಕಿ, ಮಿಷನರಿ ಸಹೋದರಿಯರು ಸ್ಥಾಪಿಸಿದ ಪರಮಪವಿತ್ರ ಪರಮಪ್ರಸಾದದ ಪ್ರಾರ್ಥನಾ ಮಂದಿರಕ್ಕೆ ಈಗ ಹೊಣೆಗಾರರಾಗಿರುವವರು, ಹದಿನೈದು ವರ್ಷಗಳಿಗಿಂತ ಹೆಚ್ಚು ಕಾಲದ ಹಿಂದೆ ಬೇಸ್ಕೊ ಪ್ರದೇಶಕ್ಕೆ ಆಗಮಿಸಿದ್ದರು.

ಆರಂಭದಲ್ಲಿ ಮಿಷನ್ ಕಾರ್ಯವನ್ನು ದೂರದಿಂದ ವೀಕ್ಷಿಸುವವರಾಗಿದ್ದರು. ಮನೆಯೊಳಗೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಚಿಂತನೆಗಳಲ್ಲಿ ಮುಳುಗಿ, ದುಃಖದಿಂದ ಕುಗ್ಗಿದ ಸ್ಥಿತಿಯಲ್ಲಿ, ಬೆಳಿಗ್ಗೆ 3 ಗಂಟೆಯಿಂದ ಮುಂದಿನ ದಿನ ಮಧ್ಯಾಹ್ನ 4 ಗಂಟೆಯವರೆಗೆ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಕೆಲಸ ಮಾಡುತ್ತಿದ್ದರು; ಅದನ್ನು ಮಾರಾಟ ಮಾಡಿ ದೊರಕುವ ಅಲ್ಪ ಲಾಭದಿಂದ ಕುಟುಂಬದ ಆಹಾರ ಅಗತ್ಯಗಳನ್ನು ಪೂರೈಸುತ್ತಿದ್ದರು.

ಕಾಲಕ್ರಮೇಣ ದೇವರ ಪ್ರೀತಿ ತಮ್ಮ ನೋವಿಗಿಂತ ಮಹತ್ತಾದುದು ಎಂಬ ಅರಿವು ಬೆಳೆಯಿತು. ಇಂದು ಮಿಸ್ಸಾಮಿ (Missami) ಕುಟುಂಬದ ಸದಸ್ಯರಾಗಿದ್ದು (ಸಹೋದರಿಯರು ಮತ್ತು ಸಾಮಾನ್ಯರು ತಮ್ಮ ಜೀವನ ಮತ್ತು ಧರ್ಮಸ್ಪೂರ್ತಿಯನ್ನು ಹಂಚಿಕೊಳ್ಳುವ ಸಮೂಹ), ಸಮುದಾಯದ ಇತರ ಮಹಿಳೆಯರೊಂದಿಗೆ ಸೇವಾ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

“ನಾವು ಯೇಸುವಿನಿಂದ, ಪವಿತ್ರ ಪರಮಪ್ರಸಾದದಿಂದ ಕಳುಹಿಸಲ್ಪಟ್ಟವರಾಗಿದ್ದೇವೆ,” ಎಂದು ಮಹಿಳೆಯರು ಹೇಳುತ್ತಾರೆ. ಅವರು ಆಹಾರ ಯೋಜನೆಗೆ ಅಡುಗೆ ಮಾಡುತ್ತಾರೆ, ಮಕ್ಕಳಿಗೆ ಬೋಧಿಸುತ್ತಾರೆ, ಭಾನುವಾರದ ಪವಿತ್ರ ಪರಮಪ್ರಸಾದ ಆಚರಣೆಯಲ್ಲಿ ಸಹಕರಿಸುತ್ತಾರೆ ಮತ್ತು ಮಕ್ಕಳನ್ನು ಸಂಸ್ಕಾರಗಳಿಗೆ ಸಿದ್ಧಗೊಳಿಸುತ್ತಾರೆ.

ಒದಗಿಸುವ ದೇವರಲ್ಲಿ ನಿರೀಕ್ಷೆ

ಮಾನವ ಸಂಪನ್ಮೂಲಗಳು ಕಡಿಮೆಯಾಗುತ್ತಿರುವಂತಹ ಹಿಂದುಳಿದ ಪ್ರದೇಶದಲ್ಲಿಯೂ ದೇವರ ಕೃಪೆ ಮೌನವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ರೋಗ, ಮರಣ, ಚಂಡಮಾರುತಗಳು ಮತ್ತು ಬಡತನದ ನಡುವೆಯೂ ಜೀವನದ ಅದ್ಭುತವು ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ವಿನಯಿಗಳ ನಂಬಿಕೆ ಜೀವಂತವಾಗಿದೆ.

ಯಾರಿಗಾದರೂ ಸಾಮಾನ್ಯಕ್ಕಿಂತ ಹೆಚ್ಚು ಏನಾದರೂ ಇದ್ದರೆ, ಅವರು ಅದನ್ನು ತಮ್ಮ ನೆರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಪರಸ್ಪರ ನೆರವಾಗುತ್ತಾ ಬದುಕು ಸಾಗಿಸುತ್ತಾರೆ. ಏಕತೆ ಶಕ್ತಿಯೆಂದು ತಿಳಿದು, ಅವರು ನಿರೀಕ್ಷೆಯನ್ನು ಹೆಚ್ಚಿಸುತ್ತಾರೆ. ಈ ಗಡಿಯ ಸೇವಾ ಕ್ಷೇತ್ರದಲ್ಲಿ ಸಹೋದರಿಯರು ಅನೇಕ ಜನರ ಆಕಾಂಕ್ಷೆಗಳನ್ನು ನೆರವೇರಿಸುತ್ತಿದ್ದಾರೆ—ವ್ಯಕ್ತಿಗಳಾಗಿ ಕಾಣಿಸಿಕೊಳ್ಳುವುದು, ಗೌರವ ಪಡೆಯುವುದು, ತಮ್ಮ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಗಳ ಹೊರೆಗಾರರಾಗಿರುವುದು.

ತಮ್ಮ ಸಾಕ್ಷಿಯ ಮೂಲಕ, ಸಹೋದರಿಯರು ಅತ್ಯಂತ ಹಿಂದುಳಿದವರ ಹಿತಕ್ಕಾಗಿ ತಮ್ಮ ಜೀವಿತವನ್ನು ಅರ್ಪಿಸುತ್ತಾರೆ. ಪೂಜ್ಯ ಜಗದ್ಗುರು 14ನೇ ಲಿಯೋ ತಮ್ಮ ಪ್ರೇಷಿತ ಉಪದೇಶ Dilexit te(ಅವನು ನಿನ್ನನ್ನು ಪ್ರೀತಿಸಿದನು) ಯಲ್ಲಿ ಹೇಳಿದಂತೆ: “ಹಿಂದುಳಿದವರ ಮತ್ತು ಅಧಿಕಾರವಿಲ್ಲದವರೊಂದಿಗೆ ಸಂಪರ್ಕವು ಇತಿಹಾಸದ ಪ್ರಭುವನ್ನು ಭೇಟಿಯಾಗುವ ಮೂಲಭೂತ ಮಾರ್ಗವಾಗಿದೆ. ಬಡವರಲ್ಲಿ ಆತನು ಇನ್ನೂ ನಮ್ಮೊಂದಿಗೆ ಮಾತನಾಡುತ್ತಾನೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಮಾರ್ಚ್ 2026, 16:27