ಹುಡುಕಿ

2026.03.06 PS170 COPERTINA: Suor Mercy con funzionari del governo keniota che discutono questioni relative alla tratta di esseri umani 2026.03.06 PS170 COPERTINA: Suor Mercy con funzionari del governo keniota che discutono questioni relative alla tratta di esseri umani 

ಕೀನ್ಯಾ: ಡಿಜಿಟಲ್ ಯುಗದಲ್ಲಿ ಮಾನವ ಕಳ್ಳಸಾಗಣೆಗೆ ವಿರುದ್ಧ ಹೋರಾಡುತ್ತಿರುವ ಸಹೋದರಿಯರು

ಅಪರಾಧಿಗಳು ಮರೆಮಾಚಲು ಪ್ರಯತ್ನಿಸಿದರೂ, ಮಾನವ ಕಳ್ಳಸಾಗಣೆ ಮಾನವ ಗೌರವವನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಗಡಿಗಳು, ಸಂಸ್ಕೃತಿಗಳು, ದುರ್ಬಲರು, ದಾರಿದ್ರ್ಯಪೀಡಿತ ಸಮುದಾಯಗಳು ಮತ್ತು ನಿರಾಶರಾದವರನ್ನೂ ತಾಕುತ್ತದೆ. ನಾವು ಯೋಚಿಸುವುದಕ್ಕಿಂತ ಇದು ನಮಗೆ ಇನ್ನಷ್ಟು ಸಮೀಪದಲ್ಲಿದೆ—ಅವಕಾಶದ ಭರವಸೆಯಂತೆ ನಮ್ಮ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೀನ್ಯಾದ ತಲಿತಾ ಕುಮ್ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಸಹೋದರಿಯರು ಸ್ಥಳೀಯ ಹಾಜರಾತಿ ಮತ್ತು ಜಾಗತಿಕ ಪ್ರಭಾವ ಹೊಂದಿರುವ ಬಲವಾದ ಜಾಲವನ್ನು ನಿರ್ಮಿಸುತ್ತಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ಮಾನವ ಕಳ್ಳಸಾಗಣೆಗಾರರು ಜಾಗತಿಕವಾಗಿ ಡಿಜಿಟಲ್ ಯುಗವನ್ನು ಬಳಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ನಡೆಯುವ ಲಾಭದಾಯಕ ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಟದಲ್ಲಿ ಧಾರ್ಮಿಕ ಸಹೋದರಿಯರು ಮುಂಚೂಣಿಯಲ್ಲಿದ್ದಾರೆ. ಈ ಹೋರಾಟವನ್ನು ಅವರು ತಲಿತಾ ಕುಮ್ ಕೀನ್ಯಾ ಎಂಬ ಜಾಗತಿಕ ಜಾಲದ ಮೂಲಕ ನಡೆಸುತ್ತಿದ್ದಾರೆ. ಈ ಜಾಲವು ರೋಮ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ಮೇಲ್ವಿಚಾರಕಿಯರ ಒಕ್ಕೂಟ (UISG) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಸಂತ ಜೋಸೆಫ್ ಫ್ರಾನ್ಸಿಸ್ಕನ್ ಸಭೆಯ ಸಹೋದರಿ ಮರ್ಸಿ ಮ್ವೈ, ತಲಿತಾ ಕುಮ್ ಕೀನ್ಯಾದ ನಿರ್ದೇಶಕಿ, ನಂಬಿಕೆ, ಸಹಕಾರ ಮತ್ತು ಸ್ಥಳೀಯ ಕ್ರಮಗಳು ಮಾನವ ಕಳ್ಳಸಾಗಣೆಯ ವಿರುದ್ಧದ ಹೋರಾಟವನ್ನು ಹೇಗೆ ರೂಪಾಂತರಿಸುತ್ತಿವೆ ಎಂಬುದನ್ನು ವಿವರಿಸುತ್ತಾರೆ.

ಹೋರಾಟ

ದಯೆಯ ಜುಬಿಲಿ ವರ್ಷದ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ನೀಡಿದ ಕರೆಗನುಗುಣವಾಗಿ, ಮಾನವ ಕಳ್ಳಸಾಗಣೆಯ ಸಂತ್ರಸ್ತರನ್ನು ತಲುಪುವ ಉದ್ದೇಶದಿಂದ ತಲಿತಾ ಕುಮ್ ಕೀನ್ಯಾ 2016ರ ಫೆಬ್ರವರಿಯಲ್ಲಿ ಸ್ಥಾಪಿಸಲಾಯಿತು. 2022ರಲ್ಲಿ ಕಾನ್ರಾಡ್ ಹಿಲ್ಟನ್ ಪ್ರತಿಷ್ಠಾನದ ಸಹಾಯದಿಂದ ಈ ಮುಂದಾಳತ್ವವು ಮತ್ತಷ್ಟು ಬಲ ಪಡೆದುಕೊಂಡಿತು.

ಈ ಸಂಸ್ಥೆ ಜಾಗತಿಕ ತಲಿತಾ ಕುಮ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ದಾನಾತ್ಮಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತದೆ. ಕೀನ್ಯಾದಾದ್ಯಂತ ಧಾರ್ಮಿಕ ಪುರುಷರು, ಧಾರ್ಮಿಕ ಮಹಿಳೆಯರು, ಯುವಜನರು ಮತ್ತು ಸಾಮಾನ್ಯ ವಿಶ್ವಾಸಿಗಳನ್ನು ಒಳಗೊಂಡ ಸದಸ್ಯತ್ವದೊಂದಿಗೆ, ಗ್ರಾಮಗಳು, ಗಡಿ ಪ್ರದೇಶಗಳು, ನಗರ ವಸತಿ ಪ್ರದೇಶಗಳು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ನಡೆಯುವ ಕಳ್ಳಸಾಗಣೆಗೆಯ ವಿರುದ್ಧ ಹೋರಾಡಲು ಸಹಕಾರ ಒದಗಿಸುತ್ತದೆ.

ನೆಲಮಟ್ಟದಲ್ಲಿ ಮತ್ತು ಆನ್‌ಲೈನ್‌ನಲ್ಲಿ ತಡೆಗಟ್ಟುವ ಕ್ರಮಗಳು

“ಮಾನವ ಕಳ್ಳಸಾಗಣೆ ಕೇವಲ ಆಫ್ರಿಕಾದ ಸಮಸ್ಯೆಯಲ್ಲ,” ಎಂದು ಸಹೋದರಿ ಮರ್ಸಿ ಹೇಳುತ್ತಾರೆ. ಇದು ಉತ್ತಮ ಅವಕಾಶಗಳನ್ನು ಹುಡುಕುವ ಎಲ್ಲಾ ವಯಸ್ಸಿನ ಜನರನ್ನು ತಾಕುವ ಜಾಗತಿಕ ಸಂಕಷ್ಟ ಎಂದು ಅವರು ಒತ್ತಿ ಹೇಳುತ್ತಾರೆ. ಕಳ್ಳಸಾಗಣೆ ಸೈಬರ್ ಅಪರಾಧಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಅಪರಾಧಿಗಳು ಡಿಜಿಟಲ್ ಜಗತ್ತನ್ನು ಬಳಸಿ ಜನರನ್ನು ಬಲೆಗೆ ಬೀಳಿಸುತ್ತಾರೆ.

ಈ ಅಪರಾಧ ಜಾಲದ ವಿರುದ್ಧ ತಲಿತಾ ಕುಮ್, ತಡೆ-ರಕ್ಷಣೆ-ಸಹಭಾಗಿತ್ವ ಎಂಬ ಮೂರು ಪ್ರಮುಖ ಮಾರ್ಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅಪರಾಧದ ಸ್ವರೂಪವೇ ಪರಸ್ಪರ ಸಂಪರ್ಕಿತವಾಗಿರುವುದರಿಂದ ಹೋರಾಟವೂ ಅದೇ ರೀತಿಯಾಗಿ ನಡೆಯಬೇಕು ಎಂಬುದು ಇದರ ದೃಷ್ಟಿಕೋನ.

“ಅನೇಕ ಜನರು ತಮ್ಮನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬುದನ್ನು ತುಂಬಾ ತಡವಾಗಿ ತಿಳಿದುಕೊಳ್ಳುತ್ತಾರೆ,” ಎಂದು ಸಹೋದರಿ ಮರ್ಸಿ ಹೇಳುತ್ತಾರೆ. ನಕಲಿ ಉದ್ಯೋಗ ಜಾಹೀರಾತುಗಳು, ಸುಳ್ಳು ವೀಸಾ ಭರವಸೆಗಳು ಮತ್ತು ರಹಸ್ಯ ಆನ್‌ಲೈನ್ ಸಂದರ್ಶನಗಳು ಸಾಮಾನ್ಯವಾಗಿ ಬಳಸುವ ಬಲೆಗಳಾಗಿವೆ.

ಇದನ್ನು ತಡೆಯಲು ಸಹೋದರಿಯರು ಮತ್ತು ಅವರ ಸಹಭಾಗಿಗಳು ಕಾರ್ಯಾಗಾರಗಳು, ಸಮುದಾಯ ಸಭೆಗಳು ಮತ್ತು ಧರ್ಮಕೇಂದ್ರಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಮಾನವ ಕಳ್ಳಸಾಗಣೆ ಹೇಗೆ ನಡೆಯುತ್ತದೆ ಮತ್ತು ಅದರ ಎಚ್ಚರಿಕೆ ಸೂಚನೆಗಳು ಯಾವುವು ಎಂಬುದನ್ನು ಸಮುದಾಯಗಳಿಗೆ ತಿಳಿಸಲಾಗುತ್ತದೆ.

ಸಹಭಾಗಿತ್ವ

ಪೊಲೀಸ್ ಅಧಿಕಾರಿಗಳು ಮತ್ತು ಗಡಿ ಭದ್ರತಾ ಸಿಬ್ಬಂದಿಗೆ ಮಾನವ ಕಳ್ಳಸಾಗಣೆಯ ಸೂಚನೆಗಳನ್ನು ಗುರುತಿಸಲು ತರಬೇತಿ ನೀಡಲಾಗುತ್ತದೆ. ಇದು ಕ್ರಿಮಿನಲ್ ತನಿಖಾ ನಿರ್ದೇಶನಾಲಯ (DCI), ಲಿಂಗ ಸಮಾನತೆ ಸಚಿವಾಲಯದ ಕಳ್ಳಸಾಗಣೆ ವಿರುದ್ಧದ ಘಟಕ ಮತ್ತು ವಿದೇಶಾಂಗ ಇಲಾಖೆಯೊಂದಿಗೆ ಸಹಯೋಗದಲ್ಲಿ ನಡೆಯುತ್ತದೆ.

ಸೊಮಾಲಿಯಾ, ಇಥಿಯೋಪಿಯಾ, ದಕ್ಷಿಣ ಸೂಡಾನ್, ಉಗಾಂಡಾ ಮತ್ತು ತಾಂಜೇನಿಯಾ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೀನ್ಯಾದ ಗಡಿ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುತ್ತದೆ.

ರಕ್ಷಣೆಯಿಂದ ಚೇತರಿಕೆಯವರೆಗಿನ ಮಾರ್ಗ

ಸಂತ್ರಸ್ತರನ್ನು ಸರ್ಕಾರದ ಸೂಚನೆಗಳು, ಸಹಭಾಗಿ ಸಂಸ್ಥೆಗಳು, ಧಾರ್ಮಿಕ ಸಂಘಗಳು ಮತ್ತು ಉಚಿತ ಸಹಾಯವಾಣಿ ಮೂಲಕ ಗುರುತಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ರಕ್ಷಣಾ ಕಾರ್ಯಾಚರಣೆಗಳನ್ನು ಕಾನೂನು ಜಾರಿಗೆ ಸಂಬಂಧಿಸಿದ ಸಂಸ್ಥೆಗಳು ನಡೆಸುತ್ತವೆ. ತಮ್ಮ ದೇಶಕ್ಕೆ ಮರಳಿದ ಬಳಿಕ ಸಂತ್ರಸ್ತರನ್ನು ಸಹೋದರಿಯರು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ಕರೆದೊಯ್ಯುತ್ತಾರೆ.

ಬಚಾವಾದವರು-ಬದುಕುಳಿದವರು ತಮ್ಮ ಅನುಭವಗಳು ಮತ್ತು ಅಗತ್ಯಗಳನ್ನು ನಿರ್ಣಯಿಸಲು ತಪಾಸಣೆಗೆ ಒಳಗಾಗುತ್ತಾರೆ, ಹೆಚ್ಚಿನವರಿಗೆ ಆಘಾತವನ್ನು ಪರಿಹರಿಸಲು ಮಾನಸಿಕ ಬೆಂಬಲ ಬೇಕಾಗುತ್ತದೆ. ಅವರು ವೈದ್ಯಕೀಯ ಆರೈಕೆ, ಸಣ್ಣ ವ್ಯವಹಾರಗಳ ಮೂಲಕ ಆರ್ಥಿಕ ಸಬಲೀಕರಣ ಮತ್ತು ಅವರ ಚೇತರಿಕೆಗೆ ಬೆಂಬಲ ನೀಡಲು ವೃತ್ತಿಪರ ತರಬೇತಿಯನ್ನು ಪಡೆಯುತ್ತಾರೆ.

“ನಮ್ಮ ಗುರಿ ಸಮಗ್ರ ಪುನಃಸೇರಿಕೆ,” ಎಂದು ಸಹೋದರಿ ಮರ್ಸಿ ಹೇಳುತ್ತಾರೆ. ಸ್ವಾತಂತ್ರ್ಯ ಎಂದರೆ ಕೇವಲ ರಕ್ಷಣೆ ಪಡೆಯುವುದು ಮಾತ್ರವಲ್ಲ; ಗೌರವದೊಂದಿಗೆ ಜೀವನವನ್ನು ಮರುನಿರ್ಮಿಸುವುದಾಗಿದೆ ಎಂದು ಅವರು ವಿವರಿಸುತ್ತಾರೆ.

ಮುಂಚೂಣಿಯಲ್ಲಿ ಸಹೋದರಿಯರು

ಈ ಕಾರ್ಯದಲ್ಲಿ ಧಾರ್ಮಿಕ ಸಹೋದರಿಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರು ಸಮುದಾಯ ತರಬೇತಿಗಳನ್ನು ಆಯೋಜಿಸುತ್ತಾರೆ, ಪ್ರಕರಣಗಳನ್ನು ಗುರುತಿಸುತ್ತಾರೆ, ಬಚಾವಾದವರಿಗೆ ಮಾರ್ಗದರ್ಶನ ನೀಡುತ್ತಾರೆ, ಸಮಾಲೋಚನೆ ಒದಗಿಸುತ್ತಾರೆ ಮತ್ತು ಕೌಶಲ್ಯ ತರಬೇತಿಗಾಗಿ ತಮ್ಮ ಸಂಸ್ಥೆಗಳನ್ನು ತೆರೆದಿಡುತ್ತಾರೆ.

ಮಾಲಿಂಡಿ ಮತ್ತು ಮೊಂಬಾಸಾ ಮುಂತಾದ ಕರಾವಳಿ ಪ್ರದೇಶಗಳಲ್ಲಿ ಅವರು ಮಾನವ ಕಳ್ಳಸಾಗಣೆ ಮತ್ತು ಲಿಂಗ ಆಧಾರಿತ ಹಿಂಸೆಗೆ ಒಳಗಾದವರನ್ನು ರಕ್ಷಿಸುವ ಕಾರ್ಯದಲ್ಲಿಯೂ ನೇರವಾಗಿ ತೊಡಗಿದ್ದಾರೆ.

ಸಹೋದರಿ ಮರ್ಸಿ ಒಂದು ಸ್ಪರ್ಶಿಸುವ ಘಟನೆಯನ್ನು ಹಂಚಿಕೊಳ್ಳುತ್ತಾರೆ. ಬರುಂಡಿ ದೇಶದ ಒಬ್ಬ ಮಹಿಳೆಯನ್ನು ಕೀನ್ಯಾಕ್ಕೆ ಕಳ್ಳಸಾಗಣೆ ಮಾಡಿ ನಂತರ ತನ್ನ ಮಕ್ಕಳೊಂದಿಗೆ ಬಂಧನದಲ್ಲಿಟ್ಟಿದ್ದರು. ತಲಿತಾ ಕುಮ್, DCI, ವಕೀಲರು, ರಾಯಭಾರ ಕಚೇರಿ ಮತ್ತು ಅವರ್ ಲೇಡಿ ಆಫ್ ಆಫ್ರಿಕಾ ಮಿಷನರಿ ಸಹೋದರಿಯರ ಸಹಕಾರದಿಂದ ಆ ಮಹಿಳೆ ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗಿದ್ದು ಸುರಕ್ಷಿತವಾಗಿ ತಮ್ಮ ದೇಶಕ್ಕೆ ಮರಳಿಸಲಾಯಿತು.

ಈ ಘಟನೆ ಸಂತ್ರಸ್ತರಿಗೆ ತೋರಿಸುವ ಏಕತೆ ರಾಷ್ಟ್ರೀಯ ಗಡಿಗಳನ್ನು ಮೀರುತ್ತದೆ ಎಂಬುದನ್ನು ತೋರಿಸುತ್ತದೆ.

ಡಿಜಿಟಲ್ ಸವಾಲುಗಳು

ಕಳ್ಳಸಾಗಣೆಗಾರರು ನಿರಂತರವಾಗಿ ತಮ್ಮ ವಿಧಾನಗಳನ್ನು ಬದಲಿಸುತ್ತಿದ್ದಾರೆ. ಡಿಜಿಟಲ್ ನೇಮಕಾತಿ, ಸೈಬರ್ ವಂಚನೆ ಮತ್ತು ವಿದೇಶಗಳಲ್ಲಿ ನಡೆಯುವ ಆನ್‌ಲೈನ್ ಮೋಸಗಳಲ್ಲಿ ಭಾಗವಹಿಸಲು ಐಟಿ ವೃತ್ತಿಪರರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಯುವಜನರನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ತಲಿತಾ ಕುಮ್ ಕೀನ್ಯಾ ಕಳ್ಳಸಾಗಣೆ ಜಾಲಗಳಿಂದ ನೇರ ಬೆದರಿಕೆಗಳನ್ನೂ ಎದುರಿಸುತ್ತಿದೆ. ಬಚಾವಾದವರ ಅಗತ್ಯಗಳು ಲಭ್ಯವಿರುವ ಸಂಪನ್ಮೂಲಗಳನ್ನು ಮೀರಿವೆ. ನಿಧಿಗಳ ಕೊರತೆ, ಭದ್ರತಾ ಅಪಾಯಗಳು ಮತ್ತು ಸಂತ್ರಸ್ತರ ಮಾನಸಿಕ ಗಾಯಗಳು ಮುಂದುವರಿಯುವ ಸವಾಲುಗಳಾಗಿವೆ. ಆದರೂ ಸಹೋದರಿಯರು ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

ಜಾಗತಿಕ ಜವಾಬ್ದಾರಿ

ಮಾನವ ಕಳ್ಳಸಾಗಣೆ ಮೌನ, ವಿಭಜನೆ ಮತ್ತು ಅಜ್ಞಾನದಲ್ಲಿ ಬೆಳೆಯುತ್ತದೆ. ಆದರೆ ತಲಿತಾ ಕುಮ್ ಕೀನ್ಯಾ, ಸಹಕಾರ, ಜಾಗೃತಿ, ನಂಬಿಕೆ ಮತ್ತು ಧೈರ್ಯದ ವಿಭಿನ್ನ ಮಾರ್ಗವನ್ನು ತೋರಿಸುತ್ತದೆ.

ಸಹೋದರಿ ಮರ್ಸಿ ಹೇಳುವಂತೆ, ಒಂದೇ ಸಂಸ್ಥೆ ಈ ಅಪರಾಧವನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ. “ಇದು ಜಾಗತಿಕ ಅಪರಾಧ. ಆದ್ದರಿಂದ ಜಾಗತಿಕ ಪ್ರತಿಕ್ರಿಯೆಯೂ ಅಗತ್ಯ. ಸರ್ಕಾರಗಳು, ಧರ್ಮಸಭೆಗಳು, ಶಾಲೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಮುದಾಯಗಳು—ಎಲ್ಲರೂ ಪಾತ್ರವಹಿಸಬೇಕು. ಒಟ್ಟಾಗಿ ನಾವು ಅಪರಾಧಿಗಳನ್ನು ಎದುರಿಸಿ ಸ್ವಾತಂತ್ರ್ಯವನ್ನು ಮರಳಿ ತರುವುದು ಸಾಧ್ಯ,” ಎಂದು ಅವರು ಹೇಳಿದರು.

ಈ ಕಾರ್ಯದಲ್ಲಿ ಸಹೋದರಿಯರ ಸಾಕ್ಷಿ ಜಗತ್ತಿಗೆ ಒಂದು ಸಂದೇಶ ನೀಡುತ್ತದೆ: ಶೋಷಣೆ ಒಂದು ಕ್ಲಿಕ್ ವೇಗದಲ್ಲಿ ಹರಡುವ ಈ ಯುಗದಲ್ಲಿ, ಜಾಗೃತಿ, ಕರುಣೆ ಮತ್ತು ಸಮೂಹ ಜವಾಬ್ದಾರಿ ಇನ್ನಷ್ಟು ವೇಗವಾಗಿ ಚಲಿಸಬೇಕು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

12 ಮಾರ್ಚ್ 2026, 19:14