ಸಿಂಗಪುರ: ಪುನರುತ್ಥಾನ ಮಹೋತ್ಸವದ ವೇಳೆ ಹೊಸ ಕಥೋಲಿಕರ ಅತಿ ದೊಡ್ಡ ಸಂಖ್ಯೆ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಸಿಂಗಪುರದಲ್ಲಿನ ಕಥೋಲಿಕ ಧರ್ಮಸಭೆ, ಕಳೆದ ಹತ್ತು ವರ್ಷಗಳಲ್ಲಿ ಅತಿ ದೊಡ್ಡ ಸಂಖ್ಯೆಯ ಹೊಸ ವಿಶ್ವಾಸಿಗಳನ್ನು ಈ ಬರುವ ಪುನರುತ್ಥಾನ ಮಹೋತ್ಸವದ ಸಂದರ್ಭದಲ್ಲಿ ಸ್ವಾಗತಿಸಲು ಸಿದ್ಧಗೊಳ್ಳುತ್ತಿದೆ. ಧರ್ಮೋಪದೇಶ ವಿಭಾಗ (OFC) ನೀಡಿದ ಮಾಹಿತಿಯ ಪ್ರಕಾರ, ಸುಮಾರು 978 ದೀಕ್ಷಾಸ್ನಾನಾಭ್ಯರ್ಥಿಗಳು ಮತ್ತು 155 ಅಭ್ಯರ್ಥಿಗಳು ಫೆಬ್ರವರಿ 21 ಮತ್ತು 22ರಂದು ನಡೆದ ಇಂಗ್ಲಿಷ್ ಭಾಷೆಯ “Rite of Election and Call to Continuing Conversion” ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವು ಇಮ್ಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಧರ್ಮಕೇಂದ್ರ ಮತ್ತು ಕ್ರಿಸ್ತ ರಾಜರ ಧರ್ಮಕೇಂದ್ರಗಳಲ್ಲಿ ನಡೆಯಿತು.
ಇದಕ್ಕೆ ಹೆಚ್ಚುವರಿಯಾಗಿ, ಮಾರ್ಚ್ 1ರಂದು ನಡೆದ ಮ್ಯಾಂಡರಿನ್ ಭಾಷೆಯ Rite of Election ಕಾರ್ಯಕ್ರಮದಲ್ಲಿ ಸುಮಾರು 111 ದೀಕ್ಷಾಸ್ನಾನಾಭ್ಯರ್ಥಿಗಳು ಮತ್ತು ಆರು ಅಭ್ಯರ್ಥಿಗಳು ಭಾಗವಹಿಸಿದರು.
ಪುನರುತ್ಥಾನ ಮಹೋತ್ಸವದತ್ತದ ಪಯಣ
ಸಾಮಾನ್ಯವಾಗಿ ಉಪವಾಸಕಾಲದ ಮೊದಲ ಭಾನುವಾರದಲ್ಲಿ ಆಚರಿಸಲ್ಪಡುವ Rite of Election, ಧರ್ಮಸಭೆಗೆ ಸೇರ್ಪಡೆಯಾಗುವವರ ಅಂತಿಮ ಸಿದ್ಧತಾ ಹಂತವನ್ನು ಸೂಚಿಸುತ್ತದೆ.
ದೀಕ್ಷಾಸ್ನಾನಾಭ್ಯರ್ಥಿಗಳು — ಇನ್ನೂ ದೀಕ್ಷಾಸ್ನಾನವನ್ನು ಸ್ವೀಕರಿಸದವರು — ಮತ್ತು ಅಭ್ಯರ್ಥಿಗಳು — ಈಗಾಗಲೇ ಇತರ ಕ್ರೈಸ್ತ ಪರಂಪರೆಗಳಲ್ಲಿ ದೀಕ್ಷಾಸ್ನಾನ ಪಡೆದವರು — ಪುನರುತ್ಥಾನ ಮಹೋತ್ಸವದ ಜಾಗರಣೆಯಲ್ಲಿ ಆರಂಭಿಕ ಸಂಸ್ಕಾರಗಳನ್ನು ಸ್ವೀಕರಿಸಲು ಸಿದ್ಧರಾಗಿರುವಾಗ ಧರ್ಮಸಭೆಗೆ ಅಧಿಕೃತವಾಗಿ ಪರಿಚಯಿಸಲ್ಪಡುತ್ತಾರೆ.
ಪೂಜಾ ವಿಧಿಯಲ್ಲಿ, ದೀಕ್ಷಾಸ್ನಾನಾಭ್ಯರ್ಥಿಗಳು ವೇದಿಕೆಯ ಬಳಿ ಬಂದು “ಆಯ್ಕೆಯ ಪುಸ್ತಕ” ಎಂಬ ಪುಸ್ತಕದಲ್ಲಿ ತಮ್ಮ ಹೆಸರುಗಳನ್ನು ದಾಖಲಿಸುತ್ತಾರೆ. ಇದು ಕ್ರಿಸ್ತನನ್ನು ಅನುಸರಿಸುವ ತಮ್ಮ ಬದ್ಧತೆಯನ್ನು ಮತ್ತು ಧರ್ಮಸಭೆಯಲ್ಲಿ ಸಂಪೂರ್ಣವಾಗಿ ಸೇರ್ಪಡೆಯಾಗಲು ತಮ್ಮ ಸಿದ್ಧತೆಯನ್ನು ಸೂಚಿಸುತ್ತದೆ.
“ದೇವರು ನಿಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ”
ಕ್ಯಾಥೋಲಿಕ್ ನ್ಯೂಸ್ ಸಿಂಗಾಪುರ ವರದಿ ಪ್ರಕಾರ, ಧರ್ಮೋಪದೇಶ ವಿಭಾಗದ ನಿರ್ದೇಶಕರಾದ ವಂ. ಗುರು ಟೆರನ್ಸ್ ಕೇಶವನ್ ಅವರು, ನಂಬಿಕೆ ಅಂತಿಮವಾಗಿ ದೇವರ ಮುಂದಾಳತ್ವಕ್ಕೆ ನೀಡುವ ಪ್ರತಿಕ್ರಿಯೆಯಾಗಿದೆ ಎಂದು ಭಾಗವಹಿಸಿದವರಿಗೆ ನೆನಪಿಸಿದರು. “ನೀವು ಧರ್ಮಸಭೆಗೆ ಬರಲು ಮತ್ತು ದೇವರನ್ನೂ ನಂಬಿಕೆಯನ್ನು ಇನ್ನಷ್ಟು ತಿಳಿಯಲು ಒಂದು ಆಯ್ಕೆ ಮಾಡಿಕೊಂಡಿದ್ದೀರಿ, ಇಂದು ನಾವು ಆಚರಿಸುತ್ತಿರುವುದು ದೇವರ ಆಯ್ಕೆ — ದೇವರು ನಿಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ.”
ಅವರು ವಿಶ್ವಾಸಿಗಳಿಗೆ ಉಪವಾಸಕಾಲವನ್ನು ಕೇವಲ ತ್ಯಾಗದ ಕಾಲವಾಗಿ ನೋಡದೆ, ಆಳವಾದ ಆಂತರಿಕ ಪರಿವರ್ತನೆಯ ಅವಕಾಶವಾಗಿ ಕಾಣುವಂತೆ ಉತ್ತೇಜಿಸಿದರು. “ಹೆಚ್ಚು ಮುಖ್ಯವಾದ ಪ್ರಶ್ನೆ ಏನೆಂದರೆ,ಈ ಆಚರಣೆಗಳು ನಮಗೆ ದೇವರು ಬಯಸುವ ವ್ಯಕ್ತಿಗಳಾಗಲು ಸಹಾಯ ಮಾಡುತ್ತಿವೆಯೇ ಎಂಬುದು.”
ಪವಿತ್ರ ಗ್ರಂಥದ ಮೂಲಕ ನಂಬಿಕೆಯನ್ನು ಬಲಪಡಿಸುವುದು
ಕ್ಯಾಥೋಲಿಕ್ ನ್ಯೂಸ್ ಸಿಂಗಾಪುರ ವರದಿ ಪ್ರಕಾರ, ತಮ್ಮ ಪ್ರವಚನದಲ್ಲಿ ಪ್ರಧಾನ ಗುರು ವಿಲಿಯಂ ಗೋಹ್ ಅವರು ದೀಕ್ಷಾಸ್ನಾನಾಭ್ಯರ್ಥಿಗಳಿಗೆ ದೇವರೊಂದಿಗೆ ತಮ್ಮ ಸಂಬಂಧವನ್ನು ಪ್ರತಿದಿನ ಪವಿತ್ರ ಗ್ರಂಥದ ಧ್ಯಾನದ ಮೂಲಕ ಗಾಢಗೊಳಿಸಲು ಕರೆ ನೀಡಿದರು.
“ನಿಮ್ಮ ನಂಬಿಕೆಯಲ್ಲಿ ಬಲವಾಗಿರಲು ಬಯಸಿದರೆ, ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ದೇವರ ವಾಕ್ಯದ ಧ್ಯಾನ ಮಾಡಲು ಸಮಯ ಮೀಸಲಿಡಬೇಕು,” ಎಂದು ಅವರು ಹೇಳಿದರು.
ಉಪವಾಸಕಾಲದ ಮಹತ್ವವನ್ನು ಒತ್ತಿಹೇಳುತ್ತಾ, “ಪುನರುತ್ಥಾನ ಮಹೋತ್ಸವದ ಸಿದ್ಧತಾ ಅವಧಿಯಲ್ಲಿ, ಯಾವುದೇ ಕಾರಣಗಳನ್ನು ಹೇಳದೆ ಅಥವಾ ನಮ್ಮನ್ನು ನ್ಯಾಯೀಕರಿಸಿಕೊಳ್ಳದೆ, ನಮ್ಮ ಪಾಪಪೂರ್ಣತೆ ಮತ್ತು ಮುರಿತವನ್ನು ಸಂಪೂರ್ಣ ವಿನಮ್ರತೆಯಿಂದ ಒಪ್ಪಿಕೊಳ್ಳಲು ನಾವು ಸಮಯ ತೆಗೆದುಕೊಳ್ಳೋಣ. ಆಗ ಮಾತ್ರ ನಾವು ನಮ್ಮ ಭೂತಕಾಲದಿಂದ ಮುಕ್ತರಾಗಬಹುದು ಮತ್ತು ಆತನ ಸಂತೋಷ, ಪ್ರೀತಿ ಮತ್ತು ಶಾಂತಿಯ ಜೀವನದಲ್ಲಿ ಪಾಲ್ಗೊಳ್ಳಬಹುದು” ಎಂದು ಹೇಳಿದರು,
ಪರಿವರ್ತನೆಯ ಕಥೆಗಳು
ಧರ್ಮಸಭೆಗೆ ಸೇರ್ಪಡೆಯಾಗಲು ಸಿದ್ಧರಾಗಿರುವವರಲ್ಲಿ, 55 ವರ್ಷದ ಡಾ. ಸುಸನ್ನಾ ಬೇ ಎಂಬ ಶೈಕ್ಷಣಿಕ ವ್ಯಕ್ತಿಯೂ ಇದ್ದಾರೆ. ಪ್ರೊಟೆಸ್ಟೆಂಟ್ ಹಿನ್ನೆಲೆಯಿದ್ದರೂ, ಅವರಿಗೆ ಕಥೋಲಿಕ ಧರ್ಮದತ್ತ ಆಕರ್ಷಣೆ ಬಹುಕಾಲದಿಂದಲೂ ಇತ್ತು ಎಂದು ಅವರು ಹೇಳಿದ್ದಾರೆ.
ಕಥೋಲಿಕ ಸ್ನೇಹಿತರ ಪ್ರೋತ್ಸಾಹ ಮತ್ತು ವಿವಾಹ ತಯಾರಿ ಕಾರ್ಯಕ್ರಮಗಳಲ್ಲಿ ಪಡೆದ ಅನುಭವಗಳ ಪರಿಣಾಮವಾಗಿ, ಅವರು ತಮ್ಮ ತಾಯಿಯೊಂದಿಗೆ ಸೇರಿ Rite of Christian Initiation of Adults (RCIA) ಕಾರ್ಯಕ್ರಮಕ್ಕೆ ಸೇರಿದರು.
ಇನ್ನೊಬ್ಬ ಅಭ್ಯರ್ಥಿಯಾದ, ಚೀನಾದ ಮೂಲದ 22 ವರ್ಷದ ರಾಷ್ಟ್ರೀಯ ಸೇವಕರಾದ ಶ್ರೀ ವಾಂಗ್ ಶಿ ಹೆಂಗ್ ಅವರು, ಸಂಸ್ಕೃತಿಯ ಬದಲಾವಣೆಗಳಿಗೆ ಹೊಂದಿಕೊಳ್ಳಲು ಹೋರಾಡುತ್ತಿದ್ದ ಸಮಯದಲ್ಲಿ ತಮ್ಮ ಮನೆ ಮಾಲಕಿಯ ಮೂಲಕ ಕಥೋಲಿಕ ನಂಬಿಕೆಯನ್ನು ಪರಿಚಯಿಸಿಕೊಂಡರು ಎಂದು ಹಂಚಿಕೊಂಡಿದ್ದಾರೆ.
“ಆರಂಭದಲ್ಲಿ ಬಲಿಪೂಜೆ ನನಗೆ ಗೊಂದಲಕಾರಿಯಾಗಿ ಅನುಭವವಾಯಿತು,ಆದರೆ ನಿಧಾನವಾಗಿ ಅದು ನನಗೆ ಬಲದ ಮೂಲವಾಗಿ ಪರಿಣಮಿಸಿತು”ಎಂದು ಅವರು ನೆನಪಿಸಿಕೊಂಡರು.
ಧರ್ಮಪ್ರಚಾರ ಮತ್ತು ಸಾಕ್ಷ್ಯ
ವಂ. ಗುರು ಕೇಶವನ್ ಅವರು ಯಾವುದೇ ಅಧಿಕೃತ ಅಧ್ಯಯನ ನಡೆಯದಿದ್ದರೂ, ಈ ಸಂಖ್ಯೆಯ ಏರಿಕೆಗೆ ವಿಶೇಷವಾಗಿ ಯುವಜನರ ನಡುವೆ ನಡೆಯುತ್ತಿರುವ ಸಕ್ರಿಯ ಧರ್ಮಪ್ರಚಾರ ಕಾರ್ಯಗಳು ಮತ್ತು 2024ರಲ್ಲಿ ನಡೆದ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಸಿಂಗಪುರ ಭೇಟಿ ಕಾರಣವಾಗಿರಬಹುದು ಎಂದು ಸೂಚಿಸಿದರು.
“ಕಥೋಲಿಕ ಸಮುದಾಯದ ಧರ್ಮಪ್ರಚಾರ ಕಾರ್ಯಗಳ ಮೂಲಕವೇ ಜನರು ಸ್ಪರ್ಶಿತರಾಗಿ, ಕ್ರಿಸ್ತನನ್ನು ಅನುಸರಿಸಲು ಪ್ರೇರಿತರಾಗುತ್ತಾರೆ,” ಎಂದು ಅವರು ಹೇಳಿದರು.
ಪುನರುತ್ಥಾನ ಮಹೋತ್ಸವ ಸಮೀಪಿಸುತ್ತಿರುವಂತೆಯೇ, ಸಿಂಗಪುರ ಧರ್ಮಕ್ಷೇತ್ರವು ಈ ಹೊಸ ವಿಶ್ವಾಸಿಗಳ ಪೀಳಿಗೆಯನ್ನು ಸ್ವಾಗತಿಸಲು ಸಿದ್ಧಗೊಳ್ಳುತ್ತಿದೆ — ಪ್ರತಿಯೊಬ್ಬರೂ ತಮ್ಮದೇ ಆದ ನಂಬಿಕೆ, ಪರಿವರ್ತನೆ ಮತ್ತು ನಿರೀಕ್ಷೆಯ ಕಥೆಯನ್ನು ಹೊತ್ತುಕೊಂಡಿದ್ದಾರೆ.