ಹುಡುಕಿ

ದೇವರ ದಾಸಿ ಅನ್ನೆಲ್ಲಾ ಜೆರ್ವಾಸ್ ಅವರ  ಸಂತ ಪದವಿ ಪ್ರಕ್ರಿಯೆಯು ಪ್ರಸ್ತುತ ಡಯಾಸಿಸನ್ ಹಂತದಲ್ಲಿದೆ (ಸಿಸ್ಟರ್ ಅನ್ನೆಲ್ಲಾ ಗಿಲ್ಡ್) ದೇವರ ದಾಸಿ ಅನ್ನೆಲ್ಲಾ ಜೆರ್ವಾಸ್ ಅವರ ಸಂತ ಪದವಿ ಪ್ರಕ್ರಿಯೆಯು ಪ್ರಸ್ತುತ ಡಯಾಸಿಸನ್ ಹಂತದಲ್ಲಿದೆ (ಸಿಸ್ಟರ್ ಅನ್ನೆಲ್ಲಾ ಗಿಲ್ಡ್)  (Sister Annella Guild)

ಅನ್ನೆಲ್ಲಾ ಜೆರ್ವಾಸ್ ಅವರ ಕಥೆ: ಸ್ಥಳೀಯ ಪವಿತ್ರತೆಯ ಮಾದರಿ

ಅಮೆರಿಕದ ಮಿನೆಸೋಟಾ ರಾಜ್ಯದ 26 ವರ್ಷದ ಯುವತಿ, ತನ್ನ ನಿಧನದ ಶತಮಾನ ನಂತರವೂ, “ಜೀವನದ ಪ್ರತಿಯೊಂದು ಸ್ಥಿತಿಯಲ್ಲಿರುವ ಭಕ್ತರನ್ನು ಧರ್ಮಸಭೆಯಲ್ಲಿ ಯೇಸು ಕ್ರಿಸ್ತನೊಂದಿಗೆ ತಮ್ಮ ಸಂಬಂಧವನ್ನು ಆಳಪಡಿಸಲು” ಪ್ರೇರೇಪಿಸುತ್ತಿರುವುದರಿಂದ, ಸಂತ ಪದವಿ ಘೋಷಣೆಯ ಮಾರ್ಗದಲ್ಲಿರುವ ಅಮೆರಿಕ ಮೂಲದ ಇನ್ನೂ ನೂರು ಮಂದಿಯ ಪಟ್ಟಿಗೆ ಸೇರ್ಪಡೆಯಾಗಿದ್ದಾಳೆ.

ಲೇಖಕರು: ಕೀಲ್ ಗಸ್ಸಿ

ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಜನಿಸಿದವರಲ್ಲಿ, ಧರ್ಮಸಭೆಯು ಅಧಿಕೃತವಾಗಿ ಸಂತ ಪದವಿ ಘೋಷಿಸಿರುವವರು ಕೇವಲ ಮೂವರು: ಸಂತ ಎಲಿಜಬೆತ್ ಆನ್ ಸೆಟನ್, ಸಂತ ಕ್ಯಾಥರಿನ್ ಡ್ರೆಕ್ಸೆಲ್ ಮತ್ತು ಸಂತ ಕಾಟೇರಿ ಟೆಕಕ್ವಿಥಾ.

ಆದರೆ ಸಂತ ಪದವಿ ಘೋಷಣೆಯ ದಾರಿಗೆ ಸಾಗುತ್ತಿರುವ ಪುರುಷರು ಮತ್ತು ಮಹಿಳೆಯರ ಪಟ್ಟಿ ಬಹಳ ದೀರ್ಘವಾಗಿದೆ. ಈಗ ಅಮೆರಿಕದಲ್ಲಿ ಜನಿಸಿದ ಕನಿಷ್ಠ 100 ಮಂದಿಗೆ ಸಂತ ಪದವಿ ಘೋಷಣೆಯ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಪಟ್ಟಿಗೆ ಇತ್ತೀಚೆಗೆ ಸೇರಿರುವವರಲ್ಲಿ ದೇವರ ಸೇವಕಿ ಸಹೋದರಿ ಅನ್ನೆಲ್ಲಾ ಜೆರ್ವಾಸ್ ಕೂಡ ಒಬ್ಬರು. 1900ರಲ್ಲಿ ಜನಿಸಿ ಮಿನೆಸೋಟಾದಲ್ಲಿ ಬೆಳೆದ ಅವರು, ವಲಸಿಗ ಪೋಷಕರ ಮಗಳು. ಬಾಲ್ಯದಲ್ಲಿಯೇ ಭಕ್ತಿಭಾವಕ್ಕಾಗಿ ಪ್ರಸಿದ್ಧರಾಗಿದ್ದರು. ಉತ್ತರ ಡಕೊಟಾದ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ, ಪ್ರತಿದಿನ ಒಂದು ಮೈಲು ದೂರ ನಡೆದು ಪವಿತ್ರ ಬಲಿಪೂಜೆಗೆ ಹಾಜರಾಗುತ್ತಿದ್ದರು.

“ಇಂದು ನಮಗಾಗಿ ಸಹೋದರಿ ಅನ್ನೆಲ್ಲಾ ಅವರ ಜೀವನದ ಸಂದೇಶವೇನು?” ಎಂದು ಕ್ರೂಕ್‌ಸ್ಟನ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಆಂಡ್ರೂ ಕೊಜೆನ್ಸ್ ಅವರು, ದೇವರ ಸೇವಕಿ ಅನ್ನೆಲ್ಲಾ ಜೆರ್ವಾಸ್ ಅವರ ಸಂತ ಪದವಿ ಪ್ರಕ್ರಿಯೆಯ ಆರಂಭಿಕ ಪವಿತ್ರ ಬಲಿಪೂಜೆಯಲ್ಲಿ ತಮ್ಮ ಉಪನ್ಯಾಸದಲ್ಲಿ ಪ್ರಶ್ನಿಸಿದರು. “ನಾವು ಎಲ್ಲರೂ ಪಾಡುಗಳ ಸುವಾರ್ತೆಯನ್ನು ಬದುಕುವಲ್ಲಿ ನಮ್ಮದೇ ಆದ ಪಾತ್ರವನ್ನು ಹೊಂದಿದ್ದೇವೆ.”

ಜೀವನದ ಎಲ್ಲಾ ಹಂತಗಳಿಗೆ ಪ್ರೇರಣೆ

ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ ಅಮಾಂಡಾ ಜರ್ಫೇಸ್, ಈ ಧರ್ಮಪ್ರಾಂತ್ಯ ಹಂತದ ಸಂತ ಪದವಿ ಪ್ರಕ್ರಿಯೆಯ ಸಂತಘೋಷಣಾ ವಿಷಯ ಪ್ರಸ್ತಾಪಕರಾಗಿದ್ದು, ಸಹೋದರಿ ಅನ್ನೆಲ್ಲಾ ಜೆರ್ವಾಸ್ ಅವರನ್ನು “ಜೀವನದ ಪ್ರತಿಯೊಂದು ಸ್ಥಿತಿಯಲ್ಲಿರುವ ಭಕ್ತರನ್ನು ಧರ್ಮಸಭೆಯಲ್ಲಿ ಯೇಸುವಿನೊಂದಿಗೆ ತಮ್ಮ ಸಂಬಂಧವನ್ನು ಗಟ್ಟಿಯಾಗಿಸುವಲ್ಲಿ ಪ್ರೇರೇಪಿಸುವ ವ್ಯಕ್ತಿ” ಎಂದು ವಿವರಿಸಿದರು. ಅನ್ನಾ ಕೋರ್ದೇಲಿಯಾ ಜೆರ್ವಾಸ್ ಎಂಬ ಹೆಸರಿನಲ್ಲಿ ಜನಿಸಿದ ಅವರು, ಕೇವಲ 15 ವರ್ಷದ ವಯಸ್ಸಿನಲ್ಲಿ ಮಿನೆಸೋಟಾದ ಸೆಂಟ್ ಜೋಸೆಫ್‌ನ ಬೆನೆಡಿಕ್ಟಿನ್ ಆಶ್ರಮಕ್ಕೆ ಸೇರಿ, “ಅನ್ನೆಲ್ಲಾ” ಎಂಬ ಹೆಸರನ್ನು ಸ್ವೀಕರಿಸಿದರು. ಅವರ ದಯೆ, ಹಾಸ್ಯಭಾವ ಮತ್ತು ಪವಿತ್ರ ಪರಮ ಪ್ರಸಾದ ಹಾಗೂ ಮಾತೆ ಮರಿಯಳ ಮೇಲಿನ ಆಳವಾದ ಭಕ್ತಿ  ವಿಶೇಷವಾಗಿ ಸ್ಮರಣೀಯವಾಗಿದೆ. 

ಆದರೆ ಅವರು ನೋವನ್ನು ಅನುಭವಿಸಿದ ವಿಧಾನವೇ ಅವರ ಶಾಶ್ವತ ಪರಂಪರೆಯನ್ನು ರೂಪಿಸಿದೆ.

“ಅವರು ನೋವನ್ನು ಕ್ರೈಸ್ತ ದೃಷ್ಟಿಕೋನದಲ್ಲಿ ‘ಪರಿತಾಪದ ಮೂಲಕ ವಿಮೋಚನೆ’ ಎಂಬ ಅರ್ಥದಲ್ಲಿ ಸ್ವೀಕರಿಸಿದರು,” ಎಂದು ಜರ್ಫೇಸ್ ವಿವರಿಸಿದರು. ಗಂಭೀರ ಚರ್ಮರೋಗ (Pityriasis Rubra Pilaris) ಮತ್ತು ಹೊಟ್ಟೆ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಸುಮಾರು ನಾಲ್ಕು ವರ್ಷಗಳ ಕಾಲ ತೀವ್ರ ನಡುಕ, ಉಷ್ಣ ಜ್ವರ, ತೀವ್ರ ಕಡಿತ ಮತ್ತು ದಿನನಿತ್ಯ ಚರ್ಮದ ದೊಡ್ಡ ಪ್ರಮಾಣದ ಉದುರುವಿಕೆಯನ್ನು ಅನುಭವಿಸಿದರು.

ಆದರೂ, ದೂರು ಹೇಳುವುದಕ್ಕಿಂತ, ಅವರು “ದೇವರು ಅನುಮತಿಸುವುದನ್ನು ಸ್ವೀಕರಿಸಲು ಕೃಪೆ” ಯಾಚಿಸಿದರು. ಜರ್ಫೇಸ್ ಅವರು ಹೇಳಿದಂತೆ, ದೇವರ ಸೇವಕಿಯ ಈ ಚಿಕ್ಕ ಜೀವನವು “ನೋವಿನ ವಿಮೋಚನಾ ಮೌಲ್ಯ ಮತ್ತು ದೇವರ ಯೋಜನೆಯ ಮೇಲೆ ಸಂಪೂರ್ಣ ನಂಬಿಕೆಯ ಸೌಂದರ್ಯಕ್ಕೆ ಶಕ್ತಿಯುತ ಸಾಕ್ಷಿಯಾಗಿ ಉಳಿದಿದೆ.”

ಸಾಮಾನ್ಯ ಜೀವನದ ಅಸಾಮಾನ್ಯತೆ

ಸಹೋದರಿ ಅನ್ನೆಲ್ಲಾ ಕೇವಲ 26 ವರ್ಷ ಬದುಕಿದ್ದರೂ, ಅವರ ಚಿಕ್ಕ ಜೀವನ ಇಂದಿನ ಯುವಜನರಿಗೆ — ಅವರ ನಿಧನದ ಶತಮಾನ ನಂತರವೂ ಪ್ರೇರಣೆಯಾಗಿದೆ. “ಅವರ ಜೀವನವು, ಸಾಮಾನ್ಯ ಜೀವನ ದೇವರಿಗೆ ಸಂಪೂರ್ಣವಾಗಿ ಅರ್ಪಿತವಾಗಿದಾಗ ಅಸಾಮಾನ್ಯವಾಗಬಹುದು ಎಂಬುದನ್ನು ತೋರಿಸುತ್ತದೆ,” ಎಂದು ಜರ್ಫೇಸ್ ಹೇಳಿದರು.

ಅವರ ಜೀವನ “ಸಂತೋಷ, ದಯೆ, ಪ್ರಾರ್ಥನೆ ಮತ್ತು ದೇವರ ಮೇಲಿನ ಪ್ರೀತಿಯಿಂದ ತುಂಬಿತ್ತು.” ಅವರು ತಮ್ಮ ರೋಗದ ಮಧ್ಯೆಯೂ ಹಾಸ್ಯಭಾವವನ್ನು ಕಳೆದುಕೊಳ್ಳಲಿಲ್ಲ. ಜರ್ಫೇಸ್ ಅವರ ಮಾತಿನಲ್ಲಿ, “ನಾವು ದಿನನಿತ್ಯದ ನೋವಿನಲ್ಲಿ ಹಾಸ್ಯವನ್ನು ಕಾಣುವುದು ಅಪರೂಪ.” ಆದರೂ, ಸಹೋದರಿ ಅನ್ನೆಲ್ಲಾ ಪರೀಕ್ಷೆಗಳ ಮಧ್ಯೆಯೂ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಬಹುದು ಎಂಬ ನಂಬಿಕೆಯನ್ನು ತೋರಿಸಿದರು.

2024ರ ನವೆಂಬರ್‌ನಲ್ಲಿ ಸಂತ ಪದವಿ ಪ್ರಕ್ರಿಯೆ ಆರಂಭಿಸಲು ನಡೆದ ಸಲಹಾ ಹಂತದಲ್ಲಿ ಅಮೆರಿಕದ ಧರ್ಮಾಧ್ಯಕ್ಷರಿಗೆ ಮಾತನಾಡಿದ ಧರ್ಮಾಧ್ಯಕ್ಷ ಕೊಜೆನ್ಸ್ ಅವರು, ವಿಶೇಷವಾಗಿ ಯುವಜನರಿಗೆ ಪವಿತ್ರ ಪರಮ ಪ್ರಸಾದ ಸಂಸ್ಕಾರದ ಆರಾಧನೆಯ ಮಹತ್ವವನ್ನು ಅವರು ನೀಡಿದ ಸಾಕ್ಷಿಯನ್ನು ಉಲ್ಲೇಖಿಸಿದರು.

“ಇಂದಿನ ಯುವಜನರಿಗೆ, ಸಹೋದರಿ ಅನ್ನೆಲ್ಲಾ ಅವರ ಜೀವನ ನಾವು ಸಂತರಾಗಲು ಕರೆಯಲ್ಪಟ್ಟಿದ್ದೇವೆ ಎಂಬ ಸುಂದರ ನೆನಪು,” ಎಂದು ಜರ್ಫೇಸ್ ಹೇಳಿದರು.

ಸಂತ ಪದವಿ ಘೋಷಣೆಯ ಮಾರ್ಗದಲ್ಲಿ

ಪ್ರಸ್ತುತ, ಸಹೋದರಿ ಅನ್ನೆಲ್ಲಾ ಅವರ ಸಂತ ಪದವಿ ಘೋಷಣೆಯ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ — ಇದನ್ನು ಧರ್ಮಪ್ರಾಂತ್ಯ ಹಂತ ಎಂದು ಕರೆಯಲಾಗುತ್ತದೆ — ಇದು 2025ರ ಅಕ್ಟೋಬರ್ 8ರಂದು ಆರಂಭವಾಯಿತು. ಇದರಲ್ಲಿ ಅಧಿಕಾರಿಗಳ ನ್ಯಾಯಮಂಡಳಿ ಸಂದರ್ಶನಗಳನ್ನು ನಡೆಸುತ್ತಿದೆ ಮತ್ತು ಐತಿಹಾಸಿಕ ಆಯೋಗವು ದಾಖಲೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುತ್ತಿದೆ. ಇದರ ಉದ್ದೇಶ ಸಹೋದರಿ ಅನ್ನೆಲ್ಲಾ ಅವರ ಜೀವನದ ಸಂಪೂರ್ಣ ಚಿತ್ರಣವನ್ನು ರೂಪಿಸುವುದು. “ಅವರ ಪವಿತ್ರತೆಯ ಖ್ಯಾತಿ ಮತ್ತು ಅವರು ಧರ್ಮಸಭೆ ‘ವೀರಗುಣ’ ಎಂದು ಕರೆಯುವ ಜೀವನವನ್ನು ಬದುಕಿದ್ದಾರೆಯೇ ಎಂಬುದನ್ನು ಅರಿಯುವುದು ಮುಖ್ಯ,” ಎಂದು ಜರ್ಫೇಸ್ ಹೇಳಿದರು. ಈ ಹಂತ ಮುಗಿದ ನಂತರ, ಈ ಪ್ರಕ್ರಿಯೆ ರೋಮ್‌ನಲ್ಲಿರುವ ಸಂತ ಪದವಿ ಘೋಷಣೆಯ ವಿಭಾಗಕ್ಕೆ ಸಾಗುತ್ತದೆ. ಅಲ್ಲಿ ಧರ್ಮಪ್ರಾಂತ್ಯದ ದಾಖಲೆಗಳನ್ನು ಪರಿಶೀಲಿಸಿ “ಸ್ಥಾನ” (Positio)ಎಂಬ ದಸ್ತಾವೇಜಾಗಿ ರೂಪಿಸಲಾಗುತ್ತದೆ. ನಂತರ ಧಾರ್ಮಿಕ ತಜ್ಞರು ಅದನ್ನು ಅಧ್ಯಯನ ಮಾಡುತ್ತಾರೆ. “ಅವರು ನಿಜವಾಗಿಯೂ ವೀರಗುಣದ ಜೀವನವನ್ನು ನಡೆಸಿದ್ದಾರೆ ಎಂದು ತೀರ್ಮಾನಿಸಿದರೆ, ಅದನ್ನು ಪೂಜ್ಯ ಜಗದ್ಗುರುಗಳಿಗೆ ಸಲ್ಲಿಸಲಾಗುತ್ತದೆ; ನಂತರ ಅವರು ಅವರನ್ನು ‘ವಂದನೀಯ’ ಎಂದು ಘೋಷಿಸಬಹುದು,” ಎಂದು ಜರ್ಫೇಸ್ ಹೇಳಿದರು.

ಮಿನೆಸೋಟಾದಿಂದ ರೋಮ್ ತನಕ: ಶತಮಾನ ಪರಂಪರೆ

ಸಹೋದರಿ ಅನ್ನೆಲ್ಲಾ ಅಮೆರಿಕವನ್ನು ಎಂದಿಗೂ ಬಿಟ್ಟಿರಲಿಲ್ಲ. ಆದರೂ, ಅವರ ಕಥೆಯನ್ನು ಹೇಳುವುದು ಕಥೋಲಿಕ ನಂಬಿಕೆಯ ವಿಶಾಲ ಕಥೆಯನ್ನು ಹಂಚಿಕೊಳ್ಳುವುದೇ ಎಂದು ಸಂತಘೋಷಣಾ ವಿಷಯ ಪ್ರಸ್ತಾಪಕರು, ವಿವರಿಸಿದರು. ಅದಕ್ಕಾಗಿ, ಅವರ ನಿಧನದ ಶತಮಾನೋತ್ಸವದ ಅಂಗವಾಗಿ, ಅವರ ಪ್ರಕ್ರಿಯೆಯನ್ನು ಉತ್ತೇಜಿಸುವ ಸಂಘವು ರೋಮ್‌ಗೆ ಯಾತ್ರೆಯನ್ನು ಆಯೋಜಿಸಿದೆ.

“ಧರ್ಮಸಭೆಯ ಹೃದಯವಾದ ರೋಮ್, ಈ ಶತಮಾನೋತ್ಸವವನ್ನು ಆಚರಿಸಲು ಅತ್ಯಂತ ಸೂಕ್ತ ಸ್ಥಳ… ನಮ್ಮ ನಂಬಿಕೆಯ ಮೂಲಗಳನ್ನು ಎದುರಿಸಲು, ಸಂತ ಪೇತ್ರ ಮತ್ತು ಸಂತ ಪೌಲರು ತಮ್ಮ ಜೀವವನ್ನು ಅರ್ಪಿಸಿದ ಸ್ಥಳಗಳಲ್ಲಿ ಪ್ರಾರ್ಥಿಸಲು, ಪ್ರಾರಂಭಿಕ ಕ್ರೈಸ್ತರು ಆರಾಧಿಸಿದ ಸ್ಥಳಗಳಲ್ಲಿ ನಿಲ್ಲಲು,” ಎಂದು ಜರ್ಫೇಸ್ ಹೇಳಿದರು.

ಸ್ಥಳೀಯ ಪವಿತ್ರತೆಯ ಅಗತ್ಯ

ಜಾಗತಿಕ ಮಟ್ಟದಲ್ಲಿ ಸಂತ ಪದವಿ ಘೋಷಣೆಯ ಪಟ್ಟಿಯು ವಿಸ್ತರಿಸುತ್ತಿರುವ ಈ ಕಾಲದಲ್ಲಿ, ಜರ್ಫೇಸ್ ಅವರು ಒಂದು ಪ್ರಮುಖ ವಿಷಯವನ್ನು ಒತ್ತಿಹೇಳಿದರು: “ಇಂದಿನ ದಿನಗಳಲ್ಲಿ ಮನೆ ಸಮೀಪದಲ್ಲಿರುವ ಪವಿತ್ರತೆಯ ಮಾದರಿಗಳ ಅಗತ್ಯ ವಿಶೇಷವಾಗಿದೆ.” ಜನರು ತಮ್ಮದೇ ಸಂಸ್ಕೃತಿಯಲ್ಲಿ ಬದುಕಿದ, ತಮ್ಮದೇ ಸವಾಲುಗಳನ್ನು ಎದುರಿಸಿದ ಮತ್ತು ಅವುಗಳ ಮಧ್ಯೆ ಕ್ರೈಸ್ತ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತೋರಿಸಿದವರನ್ನು ನೋಡಲು ಬಯಸುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

26 ಮಾರ್ಚ್ 2026, 18:21