ಡಿಜಿಟಲ್ ಮಿಷನರಿಗಳು: ಜನರನ್ನು ಪ್ರಭಾವಿಸುವವರನ್ನು ಪ್ರಭಾವಿಸುವವರು ಯಾರು?
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
“ಡಿಜಿಟಲ್ ಕ್ಷೇತ್ರದಲ್ಲಿ ಕೇವಲ ಹಾಜರಿರುವುದೇ ಗುರಿಯಲ್ಲ; ಜನರು ಇರುವ ಸ್ಥಳಕ್ಕೆ ಹೋಗಿ, ಅವರಿಗೆ ದಾರಿಯನ್ನು ತೆರೆದು, ಅವರನ್ನು ತಂದೆಯ ಮನೆಗೆ ಸೇರಿಸುವುದು ಮುಖ್ಯ,” ಎಂದು ಧರ್ಮಸಭೆಯ ಸಂವಹನ ಡಿಕಾಸ್ಟ್ರಿಯ ಕಾರ್ಯದರ್ಶಿಯಾದ ವಂ. ಗುರು ಲೂಸಿಯೊ ರೂಯಿಸ್, ಸಮಾವೇಶದ “ಡಿಜಿಟಲ್ ಮಿಷನರಿಗಳು: ಯಾವ ತರಬೇತಿ?”ಎಂಬ ಆರಂಭಿಕ ವಿಷಯದ ಕುರಿತಾದ ತಮ್ಮ ಭಾಷಣದಲ್ಲಿ. ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಂಡಿತರು, ಸಂವಹನ ತಜ್ಞರು, ಯಾಜಕರು ಮತ್ತು ಸಮರ್ಪಿತ ಧಾರ್ಮಿಕ ಸೇವಕ-ಸೇವಕಿಯರು ಭಾಗವಹಿಸಿ, ಇಂದಿನ ಮಾನವ ಸಂಬಂಧಗಳು ಹಾಗೂ ಸಾಮಾಜಿಕ ಜೀವನವನ್ನು ರೂಪಿಸುತ್ತಿರುವ ಡಿಜಿಟಲ್ ಸಂಸ್ಕೃತಿಯ ನಡುವೆ ಸುವಾರ್ತೆಯನ್ನು ಹೇಗೆ ಪರಿಣಾಮಕಾರಿಯಾಗಿ ಘೋಷಿಸಬಹುದು ಎಂಬುದರ ಕುರಿತು ಚರ್ಚಿಸಿದರು.
2026ರ ಮಾರ್ಚ್ 17ರಂದು ರೋಮ್‌ನ ಪವಿತ್ರ ಶಿಲುಬೆಯ ಜಗದ್ಗುರುಗಳ ವಿಶ್ವವಿದ್ಯಾಲಯದ “ದ್ವಿತೀಯ ಜಿಯೋವನ್ನಿ ಪೌಲೊ” ಮುಖ್ಯ ಸಭಾಂಗಣದಲ್ಲಿ ಈ ಸಮಾವೇಶ ನಡೆಯಿತು. ಜಗದ್ಗುರುಗಳ ಅಧಿಕಾರ ವ್ಯಾಪ್ತಿಗೆ ಒಳಪಡುವ ಪವಿತ್ರ ಶಿಲುಬೆಯ ವಿಶ್ವವಿದ್ಯಾಲಯ, ಲಾಟರನ್ ವಿಶ್ವವಿದ್ಯಾಲಯ, ಗ್ರೆಗೋರಿಯನ್ ವಿಶ್ವವಿದ್ಯಾಲಯ ಹಾಗೂ ಸಲೇಸಿಯನ್ ವಿಶ್ವವಿದ್ಯಾಲಯಗಳ ಸಂವಹನ ವಿಭಾಗಗಳು, ಧರ್ಮಸಭೆಯ ಸಂವಹನ ಡಿಕಾಸ್ಟ್ರಿಯ ಸಹಯೋಗದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿತ್ತು.
ಧಾರ್ಮಿಕ ಪಾಲನಾ ತರಬೇತಿ ಮತ್ತು ಜವಾಬ್ದಾರಿ
ಮೊದಲ ಅಧಿವೇಶನದಲ್ಲಿ ಡಿಜಿಟಲ್ ಸುವಾರ್ತಾ ಪ್ರಚಾರದ ಧಾರ್ಮಿಕ ಪಾಲನಾ ಆಯಾಮವನ್ನು ವಿವರಿಸಲಾಯಿತು. ಸಂವಹನವು ಕೇವಲ ತಾಂತ್ರಿಕ ಕೌಶಲ್ಯವಲ್ಲ; ಅದನ್ನು ಧರ್ಮಸಭೆಯ ಸೇವೆಯ ಮೂಲಭೂತ ಅಂಶವಾಗಿಯೇ ಪರಿಗಣಿಸಬೇಕು ಎಂಬುದು ಇಲ್ಲಿ ಒತ್ತಿಹೇಳಲಾಯಿತು.
ಲಾಟರನ್ ಜಗದ್ಗುರುಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮಸ್ಸಿಮಿಲಿಯಾನೊ ಪದೂಲಾ ಅವರು ಡಿಜಿಟಲ್ ಸಂಸ್ಕೃತಿ ಮತ್ತು ನಂಬಿಕೆಯ ಜೀವನದ ಅನುಭವಗಳ ನಡುವಿನ ಪರಸ್ಪರ ಸಂಬಂಧದಿಂದ ಹೊಸ ಧಾರ್ಮಿಕ ಪಾಲನಾ ದೃಷ್ಠಿಕೋನ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು. ಧಾರ್ಮಿಕ ಜೀವನವು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಠಿಣ ಶ್ರೇಣೀಕರಣಕ್ಕಿಂತ ಹೆಚ್ಚು ಸಂಬಂಧಗಳ ಜಾಲದ ಮೂಲಕ ವ್ಯಕ್ತವಾಗುತ್ತಿದೆ. “ಧರ್ಮಸಭೆ ಸತ್ಸಂಕಲ್ಪದ ಪುರುಷರು ಮತ್ತು ಮಹಿಳೆಯರನ್ನು ಡಿಜಿಟಲ್ ಕ್ಷೇತ್ರದಲ್ಲಿ ಸೃಜನಾತ್ಮಕ ಕಾರ್ಯಕರ್ತರಾಗಿ ರೂಪಿಸಬೇಕು,” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವಿಚಾರವನ್ನು ಮುಂದುವರಿಸಿ, ಲಾಟರನ್ ವಿಶ್ವವಿದ್ಯಾಲಯದ ಮತ್ತೊಬ್ಬ ಪ್ರಾಧ್ಯಾಪಕರಾದ ಪೌಲೊ ಅಸೋಲಾನ್ ಅವರು, ಡಿಜಿಟಲ್ ಮಿಷನರಿಗಳ ರೂಪುಗೊಳಿಸುವಿಕೆ ಕೇವಲ ಸಂವಹನ ತಂತ್ರಗಳಿಗೆ ಸೀಮಿತವಾಗಿರಬಾರದು; ಅದು ತತ್ವಶಾಸ್ತ್ರೀಯ ವಿವೇಕದೊಂದಿಗೆ ಸಾಗಬೇಕು, ಧಾರ್ಮಿಕ ಪಾಲನಾ ತತ್ವಶಾಸ್ತ್ರವು ಪೂರ್ವಸಿದ್ಧ ಉತ್ತರಗಳ ಸಂಗ್ರಹವಲ್ಲ; ದೇವರು ನೈಜ ಸಂದರ್ಭಗಳಲ್ಲಿ ಧರ್ಮಸಭೆಯ ಮೂಲಕ ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದನ್ನು ಅರಿಯುವುದು ಮುಖ್ಯ,” ಎಂದು ಅವರು ಹೇಳಿದರು.
ಡಿಜಿಟಲ್ ಪರಿಸರದ ಆಧ್ಯಾತ್ಮಿಕ ಸವಾಲು
ಈ ಸಮಾವೇಶದಲ್ಲಿ ಡಿಜಿಟಲ್ ಸಂಸ್ಕೃತಿಯಿಂದ ಉದ್ಭವವಾಗುವ ಆಧ್ಯಾತ್ಮಿಕ ಸವಾಲುಗಳನ್ನೂ ವಿಶ್ಲೇಷಿಸಲಾಯಿತು. ಗ್ರೆಗೋರಿಯನ್ ವಿಶ್ವವಿದ್ಯಾಲಯದ ವಂ. ಗುರು ಪೀಟರ್ ಲಾ ಅವರು, ಆನ್‌ಲೈನ್ ಸಂವಹನದ ಸ್ವಭಾವವು ಆಳವಾದ ಸಂಭಾಷಣೆಗೆ ಬದಲಾಗಿ ಮೇಲ್ಮಟ್ಟದ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ ಎಂದು ಎಚ್ಚರಿಸಿ,“ಡಿಜಿಟಲ್ ವಾತಾವರಣ ತಟಸ್ಥವಲ್ಲ; ಅದು ನಿರಂತರ ಗಮನ ಸೆಳೆಯುವ ರೀತಿಯಲ್ಲಿ ರೂಪುಗೊಂಡಿದೆ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಫೆಲಿಪೆ ಡೊಮಿಂಗ್ವೆಜ್ ಅವರು, ಡಿಜಿಟಲ್ ಮಿಷನರಿಗಳು ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ವಿನಯ, ಆಂತರಿಕ ಶಾಂತಿ ಮತ್ತು ನಿಜವಾದ ದೇವರ ಅನುಭವವನ್ನು ಬೆಳೆಸಬೇಕು ಎಂದು ತಿಳಿಸಿದರು. “ದೇವರೊಂದಿಗೆ ನಮ್ಮ ಸಂಬಂಧವೇ ಮೊದಲ ಆದ್ಯತೆ. ಮೌನ ಮತ್ತು ಪ್ರಾರ್ಥನೆಗೆ ಸಮಯವನ್ನು ಮೀಸಲಿಡಬೇಕು,” ಎಂದು ಅವರು ಹೇಳಿದರು.
ಮಾನವೀಯ ತರಬೇತಿ ಮತ್ತು ಡಿಜಿಟಲ್ ಪ್ರಭಾವ
ಮತ್ತೊಂದು ಅಧಿವೇಶನದಲ್ಲಿ ಡಿಜಿಟಲ್ ಪ್ರಚಾರದ ಮಾನವಶಾಸ್ತ್ರೀಯ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಚರ್ಚಿಸಲಾಯಿತು.
ಸಲೇಸಿಯನ್ ಜಗದ್ಗುರುಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮಾರಿಯಾ ಪೌಲಾ ಪಿಚ್ಚಿನಿ ಅವರು ಮಂಡಿಸಿದ ಅಧ್ಯಯನವು ಧಾರ್ಮಿಕ ಡಿಜಿಟಲ್ ಪ್ರಭಾವಶಾಲಿಗಳ ಪ್ರಭಾವವು ವಿವಿಧ ವಯೋಮಾನದ ಜನರಲ್ಲಿ ವಿಸ್ತರಿಸುತ್ತಿರುವುದನ್ನು ತೋರಿಸಿತು. 74 ಶೇಕಡಾ ಜನರು ಇವರನ್ನು ನಂಬಲರ್ಹರೆಂದು ಪರಿಗಣಿಸಿದರೂ, ಬಹುತೇಕರು ಅವರನ್ನು ನೇರವಾಗಿ ಭೇಟಿಯಾಗಿಲ್ಲ ಎಂಬುದನ್ನು ಅಧ್ಯಯನವು ಸೂಚಿಸಿತು.
ಪ್ರಾಧ್ಯಾಪಕರಾದ ವಂ. ಗುರು ಫಾಬಿಯೊ ಪಾಸ್ಕ್ವಾಲೆಟ್ಟಿ ಅವರು, ಇಂದಿನ ಪರಿಸ್ಥಿತಿಯಲ್ಲಿ ಧರ್ಮಸಭೆಯೊಳಗಿನ ವಿಶ್ವಾಸಾರ್ಹತೆಯ ಸಂಕಷ್ಟ, ಧರ್ಮನಿರಪೇಕ್ಷತೆಯ ಏರಿಕೆ ಮತ್ತು ಹೊಸ ಡಿಜಿಟಲ್ ಅಧಿಕಾರ ಮಾದರಿಗಳ ನಡುವೆಯೂ, ಡಿಜಿಟಲ್ ಮಿಷನರಿಗಳಿಗೆ ದೃಢವಾದ ಮಾನವೀಯ ತರಬೇತಿ ಅಗತ್ಯ ಎಂದು ಹೇಳಿದರು.
“ಡಿಜಿಟಲ್ ವೇದಿಕೆಗಳಲ್ಲಿ ನಿಯಮಗಳನ್ನು ನಾವು ರೂಪಿಸುವುದಿಲ್ಲ; ಸಂಸ್ಥೆಗಳು ರೂಪಿಸುತ್ತವೆ. ಆದ್ದರಿಂದ ಸಾಕ್ಷಿಯೇ ಮುಖ್ಯ, ತಂತ್ರವಲ್ಲ,” ಎಂದು ಅವರು ಹೇಳಿದರು.
ಬೌದ್ಧಿಕ ತರಬೇತಿ ಮತ್ತು ಸತ್ಯದ ಸಾಕ್ಷ್ಯ
ಕೊನೆಯ ಅಧಿವೇಶನದಲ್ಲಿ ಬೌದ್ಧಿಕ ಮತ್ತು ತತ್ವಶಾಸ್ತ್ರೀಯ ತರಬೇತಿಯ ಮಹತ್ವವನ್ನು ಒತ್ತಿ ಹೇಳಲಾಯಿತು. ಪವಿತ್ರ ಶಿಲುಬೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಜುವಾನ್ ನರ್ಬೋನಾ ಅವರು, ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಸಂಸ್ಕೃತಿಯ ನಡುವೆಯೂ ಆಳವಾದ ಅಧ್ಯಯನ ಮತ್ತು ಚಿಂತನೆ ಅನಿವಾರ್ಯ ಎಂದು ಹೇಳಿದರು.
“ನಂಬಿಕೆ ನಮ್ಮ ವಿವೇಕದೊಂದಿಗೆ ಮಾತನಾಡುತ್ತದೆ, ಏಕೆಂದರೆ ಅದು ಸತ್ಯವನ್ನು ಪ್ರತಿಪಾದಿಸುತ್ತದೆ. ವಿವೇಕವಿಲ್ಲದ ನಂಬಿಕೆ ನಿಜವಾದ ಕ್ರೈಸ್ತ ನಂಬಿಕೆಯಲ್ಲ,” ಎಂದು ಅವರು ಜ್ಞಾಪಿಸಿದರು.
“ಪ್ರತಿ ಪರಿಣಾಮಕಾರಿ ಸಂದೇಶದ ಹಿಂದೆ ಅಧ್ಯಯನ, ಚಿಂತನೆ ಮತ್ತು ಬೌದ್ಧಿಕ ಸಿದ್ಧತೆ ಇರುತ್ತದೆ” ಎಂಬ ಮಾತಿನೊಂದಿಗೆ ಅಧಿವೇಶನ ಮುಕ್ತಾಯವಾಯಿತು.
ಯುವ ಡಿಜಿಟಲ್ ಮಿಷನರಿಗಳಿಗೆ ಪ್ರೇರಣೆ
ಡಿಜಿಟಲ್ ಸುವಾರ್ತಾ ಪ್ರಚಾರಕ್ಕೆ ಹೊಸದಾಗಿ ಪ್ರವೇಶಿಸುವವರಿಗೆ ಅನಸ್ತಾಸಿಯಾ ಪಿಂಟೋ ಅವರು ಪ್ರೇರಣಾದಾಯಕ ಸಂದೇಶ ನೀಡಿದರು. “ಭಯಪಡಬೇಡಿ. ನೀವು ಇರುವ ಸ್ಥಳದಿಂದಲೇ ಆರಂಭಿಸಿ,” ಎಂದು ಅವರು ಹೇಳಿದರು. “ಆರಂಭದಲ್ಲೇ ಸಾವಿರಾರು ಜನರನ್ನು ತಲುಪಬೇಕೆಂಬ ಅವಶ್ಯಕತೆ ಇಲ್ಲ. ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರ ಅನುಭವವನ್ನು ಮೂಡಿಸಬಹುದು ಎಂದರೆ ಅದೇ ಮಹತ್ವದ ಸಾಧನೆ,” ಎಂದು ಅವರು ಹೇಳಿದರು.
ವಂ. ಗುರು ರಾಬ್ ಗಾಲಿಯಾ ಅವರ ಮಾತುಗಳನ್ನು ಉಲ್ಲೇಖಿಸಿ ಅವರು ಹೇಳಿದರು: “ನಾವು ಕೆಲವೊಮ್ಮೆ ಮುಂದೆ ಬರಲು ಹೆದರುತ್ತೇವೆ — ಆದರೆ ಹೆದರಿದರೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ದೇವರಿಗೆ ನಮ್ಮ ಸಾಮರ್ಥ್ಯಕ್ಕಿಂತ ನಮ್ಮ ಲಭ್ಯತೆ ಮುಖ್ಯ.”
ನಂಬಿಕೆ ಮತ್ತು ಸಂಸ್ಕೃತಿಯ ಏಕೀಕರಣ
ಸಮ್ಮೇಳನದ ಅಂತ್ಯದಲ್ಲಿ, ಪವಿತ್ರ ಶಿಲುಬೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡೇನಿಯಲ್ ಅರಾಸಾ ಅವರು ಮುಖ್ಯ ಪ್ರಶ್ನೆಯನ್ನು ಮುಂದಿಟ್ಟರು: “ಪ್ರಭಾವಶಾಲಿಗಳನ್ನು ಪ್ರಭಾವಿಸುವವರು ಯಾರು?”
ಡಿಜಿಟಲ್ ಯುಗದಲ್ಲಿ ಧರ್ಮಸಭೆಯ ಸಾನ್ನಿಧ್ಯ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಸುವಾರ್ತಾ ಪ್ರಚಾರವು ನಿಜವಾದ ಸಾಕ್ಷಿ, ವೈಯಕ್ತಿಕ ಸಂಬಂಧ ಮತ್ತು ಶಾಶ್ವತ ಸತ್ಯದ ಮೇಲೆ ಆಧಾರಿತವಾಗಿರಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).