ಸಹೋದರ ಮ್ಯಾಥ್ಯೂ: ಯುವಜನರು ದೇವರೊಂದಿಗೆ ಮತ್ತು ಪರಸ್ಪರ ನಿಜವಾದ ಸಂಬಂಧವನ್ನು ಬಯಸುತ್ತಾರೆ
ಲೇಖಕರು:ಸ್ವಿತ್ಲಾನಾ ದುಖೋವಿಚ್
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮಾರ್ಚ್ 21ರಂದು, ಶನಿವಾರ, ತೈಝೆ ಸಭೆಯ ಮುಖ್ಯಸ್ಥ ಸಹೋದರ ಮ್ಯಾಥ್ಯೂ ಅವರನ್ನು ಖಾಸಗಿ ಭೇಟಿಯಲ್ಲಿ ಭೇಟಿಯಾದರು. ಈ ಭೇಟಿಯ ನಂತರ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ತೈಝೆ ಸಭೆಯ ಏಕತೆಯ ಧರ್ಮಪ್ರಚಾರ ಕಾರ್ಯ ಮತ್ತು ಯುವಜನರೊಂದಿಗೆ ನಡೆಯುತ್ತಿರುವ ಸೇವೆಗಳ ಬಗ್ಗೆ ಜಗದ್ಗುರುಗಳು ನೀಡಿದ ಬೆಂಬಲಕ್ಕಾಗಿ ಸಹೋದರ ಮ್ಯಾಥ್ಯೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಪ್ರಶ್ನೆ: ಸಹೋದರ ಮ್ಯಾಥ್ಯೂ, ನೀವು ಶನಿವಾರ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಭೇಟಿಯಾದಿರಿ. ಆ ಭೇಟಿಯ ಬಗ್ಗೆ ಏನು ಹೇಳಲಿಚ್ಛಿಸುತ್ತೀರಿ?
ಮೊದಲು ಹೇಳಬೇಕಾದರೆ, ಇದು ಪೂಜ್ಯ ತಂದೆಯವರೊಂದಿಗೆ ನನ್ನ ಎರಡನೇ ಭೇಟಿ ಆಗಿತ್ತು. ಕಳೆದ ವರ್ಷದ ಜುಲೈ ತಿಂಗಳಲ್ಲಿ ಅವರನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದೆ. ಇತಿಹಾಸದ ದೃಷ್ಟಿಯಿಂದ ನೋಡಿದರೆ, ತೈಝೆ ಸಭೆಯ ಮುಖ್ಯಸ್ಥರು ಮಾರ್ಚ್ ತಿಂಗಳಲ್ಲಿ ರೋಮ್‌ಗೆ ಬರುವುದು ಒಂದು ಸಂಪ್ರದಾಯವಾಗಿದೆ. ಆ ಸಂಪ್ರದಾಯದಂತೆ ನಾನು ಈ ಬಾರಿ ಬಂದಾಗ, ಮತ್ತೆ ಅವರನ್ನು ಭೇಟಿ ಮಾಡುವ ಅವಕಾಶ ಸಿಗಬಹುದೇ ಎಂದು ಕೇಳಿದೆ. ತಕ್ಷಣವೇ ‘ಹೌದು’ ಎಂಬ ಉತ್ತರ ಸಿಕ್ಕಿತು. ಅದು ನನಗೆ ಬಹಳ ಸಂತೋಷ ತಂದಿತು.
ಅವರು ನಮ್ಮ ಸಭೆಯ ಕರೆಯನ್ನು ಬಹಳ ದೃಢವಾಗಿ ಸಮರ್ಥಿಸಿದರು. ನಾವು ವಿಭಿನ್ನ ಕ್ರೈಸ್ತ ಪರಂಪರೆಗಳಿಗೆ ಸೇರಿದ ಸಹೋದರರನ್ನು ಒಳಗೊಂಡಿರುವ ಏಕತೆಯ ಸಭೆಯಾಗಿದ್ದೇವೆ. ಈ ಏಕತೆಯ ಸಂಕೇತ ನಮಗೆ ಅತ್ಯಂತ ಮಹತ್ವದ್ದಾಗಿದೆ. ಅದೇ ಸಮಯದಲ್ಲಿ, ದೇವಜನರೊಳಗಿನ ಏಕತೆಯ ಸೇವಕರಾಗಿ ರೋಮ್ ಧರ್ಮಾಧ್ಯಕ್ಷರ ಸೇವೆಯತ್ತ ಅವರು ತೋರಿಸಿದ ಗಮನವೂ ನಮಗೆ ಪ್ರೇರಣೆಯಾಗಿದೆ. ಈ ವಿಷಯದಲ್ಲಿ ಅವರು ಬಹಳ ದೃಢವಾಗಿದ್ದರು ಮತ್ತು ನಮ್ಮ ಕಾರ್ಯಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ನಾವು ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ಮಾತನಾಡಿದೆವು — ಏಕತೆ ಮತ್ತು ಶಾಂತಿ. ಈ ಎರಡೂ ವಿಷಯಗಳು ಆರಂಭದಿಂದಲೂ ಅವರ ಧ್ಯೇಯಗಳಾಗಿ ಉಳಿದಿವೆ.
ಯುದ್ಧದಿಂದ ಬಾಧಿತವಾಗಿರುವ ಪ್ರದೇಶಗಳಾದ ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ನೋವಿನ ಕುರಿತು ನಾವು ಚರ್ಚೆ ಮಾಡಿದೆವು. ನಾವು ನಮ್ಮ ಕಾಳಜಿಗಳನ್ನು ಹಂಚಿಕೊಂಡೆವು. ನಾವು ಯಾವ ರೀತಿಯ ಐಕ್ಯತೆಯ ಸಂಕೇತಗಳನ್ನು ನೀಡಬಹುದು, ಮತ್ತು ಸಂವಾದದ ಮಾರ್ಗಗಳನ್ನು ಹೇಗೆ ತೆರೆಯಬಹುದು ಎಂಬುದರ ಬಗ್ಗೆ ಚಿಂತನೆ ಮಾಡಿದೆವು.ನಾವು ನೋಡುತ್ತಿರುವುದು ಏನೆಂದರೆ, ಶಸ್ತ್ರಾಸ್ತ್ರಗಳು ಶಾಂತಿಯನ್ನು ತರುವುದಿಲ್ಲ. ಆದ್ದರಿಂದ ನಿಜವಾದ ಶಾಂತಿಯ ದಾರಿಗಳನ್ನು ಹೇಗೆ ನಿರ್ಮಿಸಬಹುದು ಎಂಬುದರ ಕುರಿತು ನಾವು ಪರಿಶೀಲನೆ ನಡೆಸಿದೆವು.
ಇದೇ ವೇಳೆ, ಕ್ರೈಸ್ತರ ನಡುವಿನ ಏಕತೆ ಮತ್ತು ಕಥೋಲಿಕ ಧರ್ಮಸಭೆಯೊಳಗಿನ ಏಕತೆಯ ವಿಷಯಗಳನ್ನೂ ನಾವು ಚರ್ಚಿಸಿದೆವು. ಈ ಎರಡೂ ವಿಷಯಗಳು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಪ್ರಮುಖವಾಗಿವೆ.
ನಾನು ಗಮನಿಸಿದ ಮತ್ತೊಂದು ಪ್ರಮುಖ ವಿಷಯವೆಂದರೆ, ಇಂದಿನ ಯುವಜನರ ಪರಿಸ್ಥಿತಿಯ ಬಗ್ಗೆ ಪವಿತ್ರ ತಂದೆಯವರಿಗೆ ಇರುವ ಆಳವಾದ ಕಾಳಜಿ. ಮಹಾಮಾರಿಯ ನಂತರ, ಅನೇಕ ಯುವಜನರು ಏಕಾಂತ ಜೀವನಕ್ಕೆ ಒಳಗಾಗಿದ್ದಾರೆ. ಕೆಲವೊಮ್ಮೆ ಅವರಿಗೆ ಇತರರ ಸಂಪರ್ಕವೇ ಅಗತ್ಯವಿಲ್ಲವೆಂದು ಭಾಸವಾಗುತ್ತದೆ. ಆದರೆ ತೈಝೆಯಲ್ಲಿ ನಾವು ವಿವಿಧ ಹಿನ್ನೆಲೆಯ ಯುವಜನರನ್ನು ಸ್ವಾಗತಿಸುತ್ತೇವೆ. ಅವರು ಬಹುಶಃ ಏಕಾಂತದಿಂದ ಬಂದವರಾಗಿದ್ದರೂ, ನಾವು ನೀಡುವ ಅನುಭವದ ಮೂಲಕ ಅವರು ಮತ್ತೆ ಸಮುದಾಯ ಜೀವನದ ಮಹತ್ವವನ್ನು ಕಂಡುಕೊಳ್ಳುತ್ತಾರೆ.
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ನಾನು ಯಾವಾಗಲೂ ಭೇಟಿಯಾದಾಗ ಸಂತೋಷನೀಡುವ ಒಂದು ವಿಷಯವೇನೆಂದರೆ, ಅವರಿಗೆ ಕೇಳುವ ಅಪರೂಪದ ಸಾಮರ್ಥ್ಯವಿದೆ. ಅವರು ನಿಮಗೆ ಬೇಕಾದಷ್ಟು ಸಮಯವನ್ನು ಕೊಡುತ್ತಾರೆ. ಅವರು ಯಾವತ್ತೂ ಅವಸರದಲ್ಲಿರುವಂತೆ ವರ್ತಿಸುವುದಿಲ್ಲ. ಇದು ತುಂಬಾ ಮನಮುಟ್ಟುವಂತಹ ಅನುಭವ. ಅವರ ದಿನಗಳು ಬಹಳ ದೀರ್ಘವಾಗಿರುವುದರಿಂದ, ಅವರು ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನಾನು ಕೆಲವೊಮ್ಮೆ ಯೋಚಿಸುತ್ತೇನೆ. ಅವರಲ್ಲಿ ಆತ್ಮದ ಉದಾರತೆ ಮತ್ತು ಭೇಟಿಗೆ ಬರುವವರೊಂದಿಗೆ ಒಟ್ಟಿಗೆ ನಡೆಯುವ ನಿಜವಾದ ಬಯಕೆ ಇದೆ ಎಂಬುದನ್ನು ನಾನು ಸ್ಪಷ್ಟವಾಗಿ ಅನುಭವಿಸಿದ್ದೇನೆ.
ಇಂದಿನ ಜಗತ್ತಿನಲ್ಲಿ, ಜವಾಬ್ದಾರಿಯ ಸ್ಥಾನದಲ್ಲಿರುವವರು ಅಥವಾ ರಾಜಕಾರಣಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೂಗಾಡುವುದೇ ಕಾಣುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಮತ್ತೆ ಕೇಳುವುದನ್ನು ಹೇಗೆ ಕಲಿಯಬಹುದು? ಕೇಳುವುದು ಎಂದರೆ ನಾವು ಎಲ್ಲದರಲ್ಲೂ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಅದು ಒಂದು ಅವಕಾಶವನ್ನು ಸೃಷ್ಟಿಸುತ್ತದೆ — ನಾವು ನಿರೀಕ್ಷಿಸದ ರೀತಿಯಲ್ಲಿ ಒಟ್ಟಿಗೆ ಹೆಜ್ಜೆ ಇಡುವ ಅವಕಾಶ. ಇತರರನ್ನು ಕೇಳುವುದು ಮತ್ತು ಭಿನ್ನಾಭಿಪ್ರಾಯಗಳಿದ್ದರೂ ಗೌರವದಿಂದ ನಡೆದುಕೊಳ್ಳುವುದು ಇಂದಿನ ಜಗತ್ತಿಗೆ ಒಂದು ನಿಜವಾದ ಸಂಕೇತವಾಗಿದೆ.
ಪ್ರಶ್ನೆ: ನೀವು ಹೇಳಿದಂತೆ, ನಿಮ್ಮ ಸಭೆಯ ಕರೆಯು ಕ್ರೈಸ್ತರಲ್ಲಿಯೂ ಹಾಗೂ ಮಾನವ ಕುಟುಂಬದಲ್ಲಿಯೂ ಏಕತೆಯನ್ನು ನಿರ್ಮಿಸುವುದಾಗಿದೆ. ಇತಿಹಾಸದ ಪುಟಗಳಲ್ಲಿ ಸೇರುವಂತಹ ಘಟನೆಗಳು ಸಂಭವಿಸುತ್ತಿರುವ ಈ ನಿರ್ದಿಷ್ಟ ಅವಧಿಯಲ್ಲಿ, ಒಂದು ಸಮುದಾಯವಾಗಿ ನಿಮಗೆ ಈ ಗುರಿಯ ಮೇಲೆ ಕೆಲಸ ಮಾಡುವುದು ಕಷ್ಟವೇ?
ನಾನು ಯಾವಾಗಲೂ ನೆನಪಿಸಿಕೊಳ್ಳುವುದು ಏನೆಂದರೆ, ಈ ಸಭೆ ಯುದ್ಧದ ಕಾಲಘಟ್ಟದಲ್ಲೇ ಹುಟ್ಟಿಕೊಂಡದ್ದು. ನಮ್ಮ ಸ್ಥಾಪಕರಾದ ಸಹೋದರ ರೋಜರ್, ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ತಟಸ್ಥ ಸ್ವಿಟ್ಜರ್‌ಲ್ಯಾಂಡ್ ದೇಶವನ್ನು ಬಿಟ್ಟು, ಫ್ರಾನ್ಸ್‌ನ ತೈಝೆ ಗ್ರಾಮಕ್ಕೆ ಬಂದರು. ಆ ಸಮಯದಲ್ಲಿ ಫ್ರಾನ್ಸ್ ಎರಡು ಭಾಗಗಳಾಗಿ ವಿಭಜನೆಯಾಗಿತ್ತು — ಉತ್ತರ ಭಾಗವನ್ನು ನಾಜಿಗಳು ಆಕ್ರಮಿಸಿಕೊಂಡಿದ್ದರು, ದಕ್ಷಿಣ ಭಾಗವನ್ನು ಸ್ವತಂತ್ರ ಭಾಗವೆಂದು ಕರೆಯಲಾಗುತ್ತಿತ್ತು. ಅವರು ಮೊದಲಿಗೆ ಎರಡು ವರ್ಷಗಳ ಕಾಲ ಒಬ್ಬರೇ ಇದ್ದರು. ನಂತರ ಪರಿಸ್ಥಿತಿ ಅಪಾಯಕಾರಿಯಾಗುತ್ತಿದ್ದಂತೆ ಅವರು ಸ್ವಿಟ್ಜರ್‌ಲ್ಯಾಂಡ್‌ಗೆ ಹಿಂತಿರುಗಿದರು. ಯುದ್ಧದ ನಂತರ ಅವರು ಮೊದಲ ಸಹೋದರರೊಂದಿಗೆ ಮತ್ತೆ ತೈಝೆಗೆ ಮರಳಿ ಬಂದರು.
ಈ ಸ್ಥಾಪನೆಯ ಕಥೆ ನನ್ನೊಂದಿಗೆ ಇಂದಿಗೂ ಬಹಳ ಮಾತನಾಡುತ್ತದೆ. ಇದು ನಮಗೆ ಒಂದು ಕರೆಯನ್ನು ನೀಡುತ್ತದೆ — ನಾವು ಕೇವಲ ತೈಝೆಯಲ್ಲೇ ಅಲ್ಲ, ಮಾನವ ಕುಟುಂಬದಲ್ಲಿ ಇರುವ ವಿಭಜನೆಯ ಸ್ಥಳಗಳಲ್ಲಿಯೂ ಹಾಜರಾಗಬೇಕು.
ಇಂದಿನ ಪಶ್ಚಿಮ ಜಗತ್ತಿನಲ್ಲಿ ದೊಡ್ಡ ಅಪಾಯವೆಂದರೆ ನಿರ್ಲಕ್ಷ್ಯ. ನಾವು ಯುದ್ಧಗಳು ದೂರದಲ್ಲಿವೆ ಎಂದು ಹೇಳಬಹುದು, ಅವು ನಮ್ಮನ್ನು ಸ್ಪರ್ಶಿಸುವುದಿಲ್ಲವೆಂದು ಭಾವಿಸಬಹುದು. ಆದರೆ ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಇದು ಕೇವಲ ಇಂಧನದ ಬೆಲೆ ಏರಿಕೆಯಾಗುವ ವಿಷಯವಲ್ಲ. ಇದು ನಮ್ಮ ರಾಷ್ಟ್ರಗಳಾಗಿ ಬದುಕುವ ಸ್ವಾತಂತ್ರ್ಯ ಮತ್ತು ನಮಗೆ ನೀಡಲ್ಪಟ್ಟ ನಂಬಿಕೆಯಲ್ಲಿ ಬದುಕುವ ಹಕ್ಕಿನ ವಿಷಯವಾಗಿದೆ. ಇವು ಅತ್ಯಂತ ಮೂಲಭೂತವಾದ ಸಂಗತಿಗಳು. ನಾವು ನಿರ್ಲಕ್ಷ್ಯಕ್ಕೆ ಒಳಗಾದರೆ, ಈ ಪರಿಸ್ಥಿತಿಗಳು ಬೇಗನೆ ನಮ್ಮ ಮೇಲೂ ಭಾರವಾಗುತ್ತವೆ.
ಆದ್ದರಿಂದ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರನ್ನು ನಾವು ಹೇಗೆ ನೆನಪಿಸಿಕೊಳ್ಳಬಹುದು? ಬೇರೆ ದೇಶಗಳಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವವರನ್ನು ಹೇಗೆ ಮರೆಯದೆ ಇರಬಹುದು? ಇದು ಕೇವಲ ಒಂದೇ ಮಾರ್ಗದಲ್ಲಿ ಸಾಧ್ಯ — ಐಕ್ಯತೆಯ ಸ್ಪಷ್ಟ ಸಂಕೇತಗಳನ್ನು ಹುಡುಕುವ ಮೂಲಕ. ಅವರನ್ನು ಭೇಟಿ ಮಾಡುವ ಮೂಲಕ, ಯಾವುದಾದರೂ ರೀತಿಯಲ್ಲಿ ಸಂಪರ್ಕವನ್ನು ಉಳಿಸಿಕೊಳ್ಳುವ ಮೂಲಕ. ಉಕ್ರೇನ್ ಅಥವಾ ಮಧ್ಯಪ್ರಾಚ್ಯದಲ್ಲಿರುವ ಸ್ನೇಹಿತರಿದ್ದರೆ, ಅವರೊಂದಿಗೆ ಸಂಪರ್ಕದಲ್ಲಿರಿ. ಅವರನ್ನು ಮರೆಯಬೇಡಿ.
ಇದು ಹಿಂದಿನ ಕಾಲಕ್ಕಿಂತ ಹೆಚ್ಚು ಸವಾಲಾಗಿದೆಯೇ? ನನಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸವಾಲುಗಳು ಸದಾ ಇದ್ದವೆ. ಆದರೆ ಇಂದು ಒಂದು ಸ್ಪಷ್ಟ ಸವಾಲು ಇದೆ — ನಿರ್ಲಕ್ಷ್ಯಕ್ಕೆ ಒಳಗಾಗದೆ ಇರುವುದು ಮತ್ತು ನಿರಾಶೆಗೆ ಒಳಗಾಗದೆ ಇರುವುದು. ನಾನು ಉಕ್ರೇನ್‌ಗೆ ಹೋದಾಗ, ಜನರು ಎಷ್ಟು ಧೈರ್ಯದಿಂದ ಬದುಕುತ್ತಿದ್ದಾರೆ ಎಂಬುದನ್ನು ನೋಡುತ್ತೇನೆ. ಅವರು ನಿರಾಶೆಗೆ ಒಳಗಾಗುವುದಿಲ್ಲ. ದುಃಖ ಇದೆ, ಆದರೆ ಅದರ ನಡುವೆಯೂ ಅವರು ನಿಲ್ಲುತ್ತಾರೆ. ನಾನು ಕ್ರಿಸ್ಮಸ್ ಸಂದರ್ಭದಲ್ಲಿ ಜಪೊರಿಜ್ಝಿಯಾದಲ್ಲಿ ಇದ್ದಾಗ, “ಕತ್ತಲೆಯೊಳಗೆ ಬೆಳಕು ಹೊಳೆಯುತ್ತದೆ, ಮತ್ತು ಕತ್ತಲೆ ಅದನ್ನು ಜಯಿಸಲಿಲ್ಲ” ಎಂಬ ಅನುಭವವನ್ನು ನಾನು ನೇರವಾಗಿ ಕಂಡೆ.
ಈ ರೀತಿಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನರ ಸಾಕ್ಷ್ಯ ನಮಗೆ ಅಗತ್ಯ. ಅವರ ಕಥೆಗಳನ್ನು ನಾವು ಕೇಳಬೇಕು. ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಸಮಾಧಿಗಳನ್ನು ಕೂಡ ಭೇಟಿ ಮಾಡಬೇಕು.
ಪ್ರಶ್ನೆ: ಈ ನಿರ್ಲಕ್ಷ್ಯದ ಬಗ್ಗೆ ನೀವು ಏನು ಯೋಚಿಸುತ್ತೀರಿ? ಒಬ್ಬ ಕ್ರೈಸ್ತನು ನಿರ್ಲಕ್ಷ್ಯವಾಗಿರಬಹುದೇ?
ಹೌದು, ನೀವು ಏನು ಕೇಳುತ್ತಿದ್ದೀರಿ ಎಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇನೆ. ಒಬ್ಬ ಕ್ರೈಸ್ತನು ನಿರ್ಲಕ್ಷ್ಯವಾಗಿರಬಹುದು, ಏಕೆಂದರೆ ಕ್ರೈಸ್ತನು ಮಾನವನು. ಆದರೆ ನಾವು ಮತ್ತೆ ಮತ್ತೆ ಸುವಾರ್ತೆಯ ಕಡೆಗೆ ಹಿಂತಿರುಗುವುದು ಹೇಗೆ ಎಂಬುದು ಮುಖ್ಯ. ಪ್ರಭು ಯೇಸು ನಮಗೆ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂದು ಹೇಳುತ್ತಾರೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ, ನನ್ನ ನೆರೆಯವನಿಗೆ ಏನಾಗುತ್ತಿದೆ ಎಂಬುದನ್ನು ನೋಡಿದಾಗ ನಾನು ನಿರ್ಲಕ್ಷ್ಯವಾಗಿರಲು ಸಾಧ್ಯವಿಲ್ಲ.
ಪ್ರಭು ಯೇಸು ಮತ್ತೊಮ್ಮೆ ಹೇಳುತ್ತಾನೆ: “ನನ್ನ ಅತಿ ಚಿಕ್ಕ ಸಹೋದರರಲ್ಲಿ ಒಬ್ಬರಿಗೆ ನೀವು ಮಾಡಿದದ್ದು ನನಗೆ ಮಾಡಿದಂತೆಯೇ.” ಇದರಿಂದ, ನೋವು ಅನುಭವಿಸುತ್ತಿರುವವರ ಕಡೆ ನಮ್ಮ ಗಮನ ಮತ್ತು ಕ್ರಿಸ್ತನ ಕಡೆ ನಮ್ಮ ಗಮನ ನಡುವಿನ ನೇರ ಸಂಬಂಧವನ್ನು ನಾವು ನೋಡಬಹುದು. ನನ್ನ ಅನಿಸಿಕೆಯಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು “Dilexi te” ಎಂಬ ತಮ್ಮ ಸಂದೇಶದಲ್ಲಿ ಇದನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ — ಬಡವರನ್ನು ಕ್ರಿಸ್ತನಿಂದ ಬೇರ್ಪಡಿಸಲಾಗುವುದಿಲ್ಲ.
ಇಂದು ನಾವು ನೋಡುತ್ತಿರುವ ದಾರಿದ್ರ್ಯ, ವಿಶೇಷವಾಗಿ ಯುದ್ಧದ ಸಂದರ್ಭಗಳಲ್ಲಿ ಕಂಡುಬರುವ ದಾರಿದ್ರ್ಯ, ನಮಗೆ ಒಂದು ತುರ್ತು ಕರ್ತವ್ಯವನ್ನು ಒಡ್ಡುತ್ತದೆ.
ಖಂಡಿತವಾಗಿಯೂ, ಎಲ್ಲರೂ ಉಕ್ರೇನ್ ಅಥವಾ ಮಧ್ಯಪ್ರಾಚ್ಯಕ್ಕೆ ಹೋಗಿ ಭೇಟಿ ನೀಡಲು ಸಾಧ್ಯವಿಲ್ಲ. ಅದು ಸ್ಪಷ್ಟ. ಆದರೆ ಪ್ರತಿಯೊಬ್ಬರೂ ಮಾಡಬಹುದಾದ ಒಂದು ಕಾರ್ಯವಿದೆ — ಅದು ಪ್ರಾರ್ಥನೆ. ಆ ಪ್ರಾರ್ಥನೆಯೇ ನಮಗೆ ಜಾಗೃತಿಯನ್ನು ನೀಡುತ್ತದೆ. ಅದು ಈ ಪರಿಸ್ಥಿತಿಗಳನ್ನು ನಾವು ಮರೆಯದಂತೆ ಮಾಡುತ್ತದೆ. ಅದೇ ಪ್ರಾರ್ಥನೆ ನಮ್ಮೊಳಗೆ ಹೊಸ ಚಿಂತನೆಗಳನ್ನು ಹುಟ್ಟಿಸಬಹುದು — ಇತರರಿಗೆ ಸಹಾಯ ಮಾಡುವ ಮಾರ್ಗಗಳನ್ನು, ಉದಾಹರಣೆಗೆ ನಮ್ಮ ದೇಶಗಳಲ್ಲಿ ಆಶ್ರಯಾರ್ಥಿಗಳಾಗಿರುವವರನ್ನು ಅಥವಾ ತಮ್ಮ ಮನೆಗಳನ್ನು ಬಿಟ್ಟು ಬಂದು ಸಂಕಷ್ಟದಲ್ಲಿರುವವರನ್ನು ನೆರವು ನೀಡುವ ಮಾರ್ಗಗಳನ್ನು ಹುಡುಕುವಂತೆ ಮಾಡುತ್ತದೆ.
ಇದು ಪ್ರತಿಯೊಬ್ಬರಿಗೂ ಸಾಧ್ಯವಾದದ್ದು. ಪ್ರತಿಯೊಬ್ಬರೂ ಪ್ರಾರ್ಥಿಸಬಹುದು.
ಪ್ರಶ್ನೆ: ನೀವು ಬಹಳಷ್ಟು ನೋವನ್ನು ನೋಡುತ್ತಿರುವಾಗ ಅದನ್ನು ವೈಯಕ್ತಿಕವಾಗಿ ಹೇಗೆ ನಿರ್ವಹಿಸುತ್ತೀರಿ? ಕೆಲವೊಮ್ಮೆ ಇಷ್ಟು ನೋವನ್ನು ನೋಡಿದಾಗ, ನಾವು ಏನೂ ಮಾಡಲಾಗುವುದಿಲ್ಲವೆಂದು ಭಾವಿಸಿ, ನಮ್ಮ ಮನಸ್ಸು ಸ್ವತಃ ದೂರವಾಗಲು ಪ್ರಯತ್ನಿಸುವುದಿಲ್ಲವೇ?
ಇಂಗ್ಲಿಷ್‌ನಲ್ಲಿ ನಾವು “compassion fatigue” ಎಂಬ ಪದವನ್ನು ಬಳಸುತ್ತೇವೆ. ಅಂದರೆ, ನಾವು ಅಷ್ಟು ಹೆಚ್ಚು ದುಃಖಕರ ಪರಿಸ್ಥಿತಿಗಳನ್ನು ನೋಡುತ್ತೇವೆ, ಕೊನೆಯಲ್ಲಿ ನಾವು ಸಂಪೂರ್ಣವಾಗಿ ನಮ್ಮನ್ನು ಅದರಿಂದ ಮುಚ್ಚಿಕೊಳ್ಳುತ್ತೇವೆ. ಇದು ನಮ್ಮೆಲ್ಲರಿಗೂ ಒಂದು ಅಪಾಯವಾಗಿದೆ.
ಆದರೆ ನಾವು ಒಪ್ಪಿಕೊಳ್ಳಬೇಕಾದ ಒಂದು ಸಂಗತಿ ಏನೆಂದರೆ, ಪ್ರತಿಯೊಬ್ಬರಿಗೂ ಒಂದೇ ರೀತಿಯ ಸಾಮರ್ಥ್ಯವಿಲ್ಲ. ಎಲ್ಲರೂ ಇಂತಹ ನೋವನ್ನು ಎದುರಿಸಲು ಸಾಧ್ಯವಿಲ್ಲ. ಅದರಿಂದ ಅವರು ಕೆಟ್ಟವರು ಅಥವಾ ನಿರ್ಲಕ್ಷ್ಯರಾಗಿದ್ದಾರೆ ಎಂದು ಅರ್ಥವಲ್ಲ. ನಾವು ಎಲ್ಲರೂ ನಮ್ಮ ಮಿತಿಗಳನ್ನು ಹೊಂದಿದ್ದೇವೆ.
ನಾನು ಇದನ್ನು ನಮ್ಮ ಸಹೋದರರಲ್ಲಿಯೂ ನೋಡುತ್ತೇನೆ. ಕೆಲವರು ಇತರರ ನೋವಿನಲ್ಲಿ ಅಷ್ಟು ತೊಡಗಿಕೊಳ್ಳುತ್ತಾರೆ, ಅವರು ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾರೆ. ಅದು ತುಂಬಾ ಕಷ್ಟಕರ ಪರಿಸ್ಥಿತಿ, ಮತ್ತು ಅವರಿಗೆ ಸಹಾಯ ಅಗತ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು — ಅವರು ಎಷ್ಟು ಮಟ್ಟಿಗೆ ಇಂತಹ ನೋವನ್ನು ಹೊತ್ತುಕೊಳ್ಳಬಹುದು ಎಂಬುದನ್ನು ತಿಳಿಯಬೇಕು.
ಆದರೆ ಎಲ್ಲರಿಗೂ ಸಾಮಾನ್ಯವಾಗಿ ಸಾಧ್ಯವಾದ ಒಂದು ವಿಷಯವಿದೆ — ಅದು ಪ್ರಾರ್ಥನೆಯ ಮೂಲಕ ಈ ಪರಿಸ್ಥಿತಿಗಳನ್ನು ನೆನಪಿಸಿಕೊಳ್ಳುವುದು.
ಪ್ರಶ್ನೆ: ನೀವು ಹೇಳಿದಂತೆ, ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದರೂ, ಏಕಾಂತವನ್ನು ಅನುಭವಿಸುತ್ತಿದ್ದಾರೆ. ಆದರೆ ಅವರು ತೈಝೆಗೆ ಬರುತ್ತಾರೆ. ಅವರು ಅಲ್ಲಿ ಏನು ಕಂಡುಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಿ?
ಇದು ನಿಜವಾಗಿಯೂ ಅದ್ಭುತ ಸಂಗತಿಯಾಗಿದೆ. ತೈಝೆಗೆ ಬರುವವರು ಸಮುದಾಯ ಜೀವನದ ಅನುಭವವನ್ನು ಬಯಸುತ್ತಾರೆ, ಅವರು ಅದನ್ನು ಹಿಂದಿನ ಜೀವನದಲ್ಲಿ ಅನುಭವಿಸಿರದಿದ್ದರೂ ಕೂಡ.
ಅನೇಕ ರೀತಿಯಲ್ಲಿ ನಾವು ಆಶೀರ್ವದಿಸಲ್ಪಟ್ಟಿದ್ದೇವೆ. ಅನೇಕ ಯುವಜನರು ಏಕಾಂತ ಪರಿಸ್ಥಿತಿಗಳಿಂದ ಬರುತ್ತಾರೆ. ಅವರು ತೈಝೆಗೆ ಬಂದ ಮೊದಲ ಕೆಲವು ದಿನಗಳಲ್ಲಿ, ಇತರರೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಲ್ಲ. ಆದರೆ ಅವರು ಇದು ಒಂದು ಸುರಕ್ಷಿತ ವಾತಾವರಣವೆಂದು ಅರಿತಾಗ, ಅವರೊಳಗೆ ನಿಧಾನವಾಗಿ ಒಂದು ಬದಲಾವಣೆ ಉಂಟಾಗುತ್ತದೆ.
ದಿನಕ್ಕೆ ಮೂರು ಬಾರಿ ನಡೆಯುವ ಪ್ರಾರ್ಥನೆಗಳು ಅವರನ್ನು ಒಳಗೆಳೆದುಕೊಳ್ಳುತ್ತವೆ. ವಾರದ ಕೊನೆಯಲ್ಲಿ, ನಾವು ಯುವಜನರನ್ನು ಕೇಳಿದಾಗ — “ನಿಮಗೆ ಯಾವುದು ಹೆಚ್ಚು ಸ್ಪರ್ಶಿಸಿತು?” — ಬಹುತೇಕ ಎಲ್ಲರೂ ಹೇಳುವುದು, ಪ್ರಾರ್ಥನೆಯ ಸಮಯದಲ್ಲಿ ಅನುಭವಿಸಿದ ಮೌನ.
ಇದು ಇಂದಿನ ಕಾಲದಲ್ಲಿ ಆಶ್ಚರ್ಯಕರ ಸಂಗತಿ. ಏಕೆಂದರೆ ನಾವು ನಿರಂತರವಾಗಿ ಮಾಹಿತಿಯಿಂದ, ಸೂಚನೆಗಳಿಂದ, ಶಬ್ದಗಳಿಂದ ಆವರಿಸಲ್ಪಟ್ಟಿದ್ದೇವೆ. ಆದರೂ ಮೌನದ ಮೇಲೆ ಒಂದು ಆಳವಾದ ಬಯಕೆ ಇದೆ. ನನ್ನ ಅನಿಸಿಕೆಯಲ್ಲಿ, ಇದು ಪ್ರತಿಯೊಬ್ಬರೊಳಗಿನ ಸಹಜ ಹಂಬಲ. ಇದು ಒಂದು ದಾಹದಂತೆ.
ನಾವು ದೇವರ ರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ. ಆದ್ದರಿಂದ ದೇವರ ಸಾನ್ನಿಧ್ಯದಲ್ಲಿರಬೇಕೆಂಬ ಒಂದು ಆಳವಾದ ಬಯಕೆ ನಮ್ಮೊಳಗಿದೆ. ಮೌನವು ಅದಕ್ಕೆ ಅವಕಾಶ ನೀಡುತ್ತದೆ. ಅನೇಕ ಯುವಜನರಿಗೆ ಇದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರು ತಮಗಿಂತ ದೊಡ್ಡವರೊಬ್ಬರ ಸಾನ್ನಿಧ್ಯದಲ್ಲಿದ್ದಾರೆ ಎಂಬ ಅನುಭವವನ್ನು ಸವಿಯುತ್ತಾರೆ.
ನಮ್ಮ ಕರ್ತವ್ಯವೆಂದರೆ ಅವರನ್ನು ಕೇಳುವುದು ಮತ್ತು ಅವರು ಅನುಭವಿಸುತ್ತಿರುವುದಕ್ಕೆ ಪದಗಳನ್ನು ನೀಡಲು ಅವರಿಗೆ ಸಹಾಯ ಮಾಡುವುದು. ಅನೇಕ ಯುವಜನರು ಧರ್ಮಸಭೆಯ ಹಿನ್ನೆಲೆಯಿಂದ ಬಂದವರಲ್ಲ. ಕುಟುಂಬಗಳಲ್ಲಿ ನಂಬಿಕೆಯ ಹಂಚಿಕೆ ಹಿಂದಿನಂತಿಲ್ಲ. ಆದರೂ ಅವರೊಳಗೆ ಒಂದು ನಿಜವಾದ ಹುಡುಕಾಟ ಇದೆ.
ತೈಝೆಯಲ್ಲಿ ನಾನು ಹಲವಾರು ಬಾರಿ ನನ್ನೊಳಗೆ ಹೇಳಿಕೊಳ್ಳುವುದು — ನಾವು ಅಷ್ಟೇನು ದೊಡ್ಡ ಕೆಲಸ ಮಾಡುತ್ತಿಲ್ಲ. ನಾವು ಬಾಗಿಲುಗಳನ್ನು ತೆರೆಯುತ್ತೇವೆ, ಸ್ವಲ್ಪ ಹಾಡುತ್ತೇವೆ, ಮತ್ತು ಉಳಿದದ್ದು ನಮ್ಮ ಮೇಲೆ ಅವಲಂಬಿತವಾಗಿರುವುದಿಲ್ಲ. ಯುವಜನರು ಪರಸ್ಪರ ಸಂಪರ್ಕ ಸಾಧಿಸುತ್ತಾರೆ. ಅವರು ತಮ್ಮ ಆಸೆಗಳು ಮತ್ತು ಹುಡುಕಾಟಗಳು ಒಂದೇ ರೀತಿಯದ್ದಾಗಿವೆ ಎಂದು ಕಂಡುಕೊಳ್ಳುತ್ತಾರೆ.
ಅವರು ಮತ್ತೊಂದು ಪ್ರಮುಖ ಸಂಗತಿಯನ್ನು ಕಲಿಯುತ್ತಾರೆ — ತಮ್ಮ ಅಭಿಪ್ರಾಯಗಳಿಗೆ ಒಪ್ಪದವರೊಂದಿಗೆ ಕೂಡ ಅವರು ಒಟ್ಟಿಗೆ ನಡೆಯಬಹುದು. ಇದು ಇಂದಿನ ಜಗತ್ತಿನಲ್ಲಿ ದೊಡ್ಡ ಸವಾಲಾಗಿದೆ. ನಾವು ಒಂದು ಸ್ಥಳವನ್ನು ಒದಗಿಸುತ್ತೇವೆ. ಎಲ್ಲರೂ ಏನು ಯೋಚಿಸಬೇಕು, ಏನು ಮಾಡಬೇಕು ಎಂದು ನಾವು ನಿಯಂತ್ರಿಸುವುದಿಲ್ಲ. ಇದರಲ್ಲಿ ಒಂದು ಅಪಾಯವಿದೆ, ಆದರೆ ಅದನ್ನು ಸ್ವೀಕರಿಸುವುದು ಮೌಲ್ಯಯುತವಾಗಿದೆ.
ಪ್ರಶ್ನೆ: ಮುಂದಿನ ಯುರೋಪಿಯನ್ ಯುವಜನರ ಸಭೆ ಪೋಲ್ಯಾಂಡ್‌ನ ಲೋಡ್ಜ್ ನಗರದಲ್ಲಿ ನಡೆಯಲಿದೆ. ದೇಶದ ಆಯ್ಕೆ ಸಭೆಯ ಸ್ವರೂಪವನ್ನು ಬದಲಾಯಿಸುತ್ತದೆಯೇ?
ಹೌದು, ಖಂಡಿತವಾಗಿಯೂ. ಪ್ರತಿವರ್ಷದ ಅಂತ್ಯದಲ್ಲಿ ನಡೆಯುವ ಯುರೋಪಿಯನ್ ಸಭೆಗಳಿಗೆ ಸಂಬಂಧಿಸಿದಂತೆ, ನಾವು ಸ್ಥಳೀಯ ಧರ್ಮಸಭೆಯ ಕರೆಗೆ ಸ್ಪಂದಿಸಲು ಹೆಚ್ಚು ಪ್ರಯತ್ನಿಸುತ್ತಿದ್ದೇವೆ. ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ, ವಿವಿಧ ಧರ್ಮಪ್ರಾಂತ್ಯಗಳು ಭಾಗವಹಿಸಲು ಬಯಸಿದವು. ಅದು ಕೇವಲ ಪ್ಯಾರಿಸ್‌ನ ಸಭೆಯಲ್ಲ, ವಿವಿಧ ಪ್ರದೇಶಗಳ ಆತಿಥ್ಯವನ್ನು ಒಳಗೊಂಡಿತ್ತು. ಸ್ಥಳೀಯ ಪ್ರಶ್ನೆಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿತ್ತು. ಉದಾಹರಣೆಗೆ, ಆರಾಧನೆಯ ಸಮಯಗಳನ್ನು ನಾವು ಸೇರಿಸಿದ್ದೇವೆ — ಇದು ಮೊದಲು ಇರಲಿಲ್ಲ. ಆದರೆ ಫ್ರಾನ್ಸ್‌ನಲ್ಲಿ ಅದು ಕಥೋಲಿಕ ಪರಂಪರೆಯ ಭಾಗವಾಗಿದೆ. ಆದ್ದರಿಂದ ನಾವು ಅದಕ್ಕೆ ಹೊಂದಿಕೊಳ್ಳಬೇಕಾಯಿತು. ಪೋಲ್ಯಾಂಡ್‌ನಲ್ಲಿಯೂ ಇದೇ ರೀತಿಯ ಅಗತ್ಯಗಳು ಎದುರಾಗಬಹುದು. ಲೋಡ್ಜ್‌ನ ಧರ್ಮಾಧ್ಯಕ್ಷರಾಗಿದ್ದ ಪ್ರಧಾನ ಗುರು ಗ್ರೆಗೊರ್ಜ್ ರ್ಯಿಸ್ ಅವರು ನಮ್ಮನ್ನು ಹಲವಾರು ಬಾರಿ ಆಹ್ವಾನಿಸಿದ್ದರು. ನಾವು ಒಪ್ಪಿಕೊಂಡ ನಂತರ, ಅವರನ್ನು ಕ್ರಾಕೋವ್‌ಗೆ ವರ್ಗಾಯಿಸಲಾಯಿತು. ಈಗ ಅಲ್ಲಿನ ಹೊಸ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಕ್ರಾಜೆವ್ಸ್ಕಿ ಅವರು ಬಡವರಿಗಾಗಿ ಕೆಲಸಮಾಡುವ ಹೃದಯ ಹೊಂದಿರುವ ವ್ಯಕ್ತಿ. ಉಕ್ರೇನ್‌ನ ಪರವಾಗಿ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ಅವರು ನಮಗೆ ಆತ್ಮೀಯವಾಗಿ ಸ್ವಾಗತ ನೀಡುತ್ತಾರೆ ಎಂದು ನಾನು ನಂಬುತ್ತೇನೆ.
ಪ್ರಶ್ನೆ: ಪೋಲ್ಯಾಂಡ್‌ನಲ್ಲಿ ನಡೆಯುತ್ತಿರುವುದರಿಂದ ಉಕ್ರೇನ್ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆಯೇ?
ಹೌದು, ಅದು ಬಹಳ ಸಾಧ್ಯ. ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಸುಮಾರು ಸಾವಿರ ಉಕ್ರೇನ್ ಯುವಜನರು ಭಾಗವಹಿಸಿದ್ದರು ಕೆಲವರು ಉಕ್ರೇನ್‌ನಿಂದ ಬಂದರೆ, ಕೆಲವರು ವಲಸಿಗರಾಗಿದ್ದರು. ಪ್ಯಾರಿಸ್‌ಗೆ ಪ್ರಯಾಣಿಸುವುದು ಅವರಿಗೆ ಸುಲಭವಲ್ಲ. ಆದರೆ ಪೋಲ್ಯಾಂಡ್‌ಗೆ ಬರಲು ಅವರಿಗೆ ಹೆಚ್ಚು ಅನುಕೂಲವಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರು ಯುರೋಪಿಯನ್ ಕುಟುಂಬದ ಒಂದು ಭಾಗವೆಂದು ಅನುಭವಿಸಲು ಅವರಿಗೆ ಒಂದು ಸ್ಥಳವನ್ನು ಒದಗಿಸುವುದು ಅತ್ಯಂತ ಮುಖ್ಯ.ಇದು ಈ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).