ಹುಡುಕಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮೊನಾಕೋ ಅಪೋಸ್ತೋಲಿಕ ಪ್ರವಾಸದ ಚಿಹ್ನೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮೊನಾಕೋ ಅಪೋಸ್ತೋಲಿಕ ಪ್ರವಾಸದ ಚಿಹ್ನೆ 

ಮೊನಾಕೋ ಧರ್ಮಾಧ್ಯಕ್ಷರು: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ‘ಅದೃಶ್ಯ ದಾರಿದ್ರ್ಯಗಳನ್ನು’ ಗುರುತಿಸಲು ಸಹಾಯ ಮಾಡುವರು

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮೊನಾಕೋಗೆ ನಡೆಯಲಿರುವ ಅಪೋಸ್ತೋಲಿಕ ಪ್ರವಾಸದ ಹಿನ್ನೆಲೆ, ಮೊನಾಕೋ ಧರ್ಮಾಧ್ಯಕ್ಷರಾದ ಡೊಮಿನಿಕ್-ಮರಿ ಡೇವಿಡ್ ಅವರು, ಧನಸಂಪತ್ತಿ ಹೊರಗೆ ಕಾಣಿಸಿಕೊಂಡರೂ ಅದರೊಳಗೆ ಮಗುಚಿಕೊಂಡಿರುವ “ಏಕಾಂತ” ಮತ್ತು “ಜೀವನದ ಅರ್ಥದ ಸಂಕಟ” ಕುರಿತು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಲೇಖಕರು: ಎಡೋಆರ್ಡೊ ಗಿರಿಬಾಲ್ಡಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮಾರ್ಚ್ 28ರಂದು, ಶನಿವಾರ, ಮೊನಾಕೋ ಪ್ರಿನ್ಸಿಪಾಲಿಟಿಗೆ ಒಂದು ದಿನದ ಅಪೋಸ್ತೋಲಿಕ ಪ್ರವಾಸವನ್ನು ಆರಂಭಿಸಲಿದ್ದಾರೆ.

ಫ್ರೆಂಚ್ ರಿವಿಯೆರಾದ ಈ ಚಿಕ್ಕ ಯುರೋಪಿಯನ್ ದೇಶವನ್ನು ಸಾಮಾನ್ಯವಾಗಿ ಐಶ್ವರ್ಯದ ಕೇಂದ್ರವಾಗಿ ಕಾಣಲಾಗುತ್ತದೆ. ಆದರೆ ಇಲ್ಲಿ ಬರುವವರ ಧನಸಂಪತ್ತು ಹಲವುವೇಳೆ ಅಡಗಿರುವ ಏಕಾಂತ ಮತ್ತು ಆತಂಕವನ್ನು ಮರೆಮಾಚುತ್ತದೆ ಎಂದು ಮೊನಾಕೋ ಧರ್ಮಾಧ್ಯಕ್ಷರಾದ ಡೊಮಿನಿಕ್-ಮರಿ ಡೇವಿಡ್ ತಿಳಿಸಿದ್ದಾರೆ.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿಗೆ ಮುನ್ನ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಈ ಸಂದರ್ಶನದಲ್ಲಿ, ಐಶ್ವರ್ಯದ ಮಧ್ಯದಲ್ಲಿರುವ ನಗರದಲ್ಲಿ ಧರ್ಮಸಭೆಯ ಆತ್ಮೀಯ ಧಾರ್ಮಿಕ ಪಾತ್ರವನ್ನು ಧರ್ಮಾಧ್ಯಕ್ಷರು ವಿವರಿಸುತ್ತಾರೆ.

ಪ್ರಶ್ನೆ: ಮಹೋದಯರೇ, ಮೊನಾಕೋದ ಬಹುಸಾಂಸ್ಕೃತಿಕ ಸ್ವರೂಪವನ್ನು ಸಾಕಷ್ಟು ಒತ್ತಿಹೇಳಲಾಗುವುದಿಲ್ಲ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿಯ ಸಂದರ್ಭದಲ್ಲಿ ಈ ಪ್ರಿನ್ಸಿಪಾಲಿಟಿಯ ವಾಸ್ತವಿಕತೆ ವಿಶ್ವ ಧರ್ಮಸಭೆಗೆ ಏನು ಹೇಳುತ್ತದೆ?

ನಾನು ಆರು ವರ್ಷಗಳ ಹಿಂದೆ ಧರ್ಮಾಧ್ಯಕ್ಷನಾಗಿ ಬಂದಾಗ ನನಗೆ ಹೆಚ್ಚು ಆಶ್ಚರ್ಯ ತಂದ ಸಂಗತಿ ಏನೆಂದರೆ—ಕೇವಲ ಎರಡು ಚದರ ಕಿಲೋಮೀಟರ್‌ ವಿಸ್ತೀರ್ಣವಿರುವ ಈ ಚಿಕ್ಕ ರಾಜ್ಯದಲ್ಲಿ ಬಹಳ ವಿಭಿನ್ನ ವಾಸ್ತವಿಕತೆಗಳು ಒಂದೇ ಜಾಗದಲ್ಲಿ ವಾಸಿಸುತ್ತಿವೆ.

ಮೊನಾಕೋದಲ್ಲಿ ಸುಮಾರು 150 ದೇಶಗಳ ಜನರು ಇದ್ದಾರೆ: ಒಂದು ಅರ್ಥದಲ್ಲಿ, ಈ ಚಿಕ್ಕ ಜಾಗದಲ್ಲೇ ವಿಶ್ವದ ಪ್ರತಿರೂಪವೇ ಕಾಣುತ್ತದೆ. ಸಾಮಾನ್ಯವಾಗಿ ಇದನ್ನು ಕೇವಲ ಐಶ್ವರ್ಯದ ನಗರವೆಂದು ಒಂದು ರೀತಿಯ ಕಲ್ಪಿತ ಚಿತ್ರದಲ್ಲಿ ಕಾಣಲಾಗುತ್ತದೆ. ಆದರೆ ವಾಸ್ತವವಾಗಿ, ಇದರ ಶ್ರೀಮಂತಿಕೆ ವಿವಿಧ ಮೂಲಗಳ ವೈವಿಧ್ಯದಿಂದ ಮತ್ತು ಒಂದು ಮಟ್ಟದ ಸಾಮಾಜಿಕ ಮಿಶ್ರಣದಿಂದ ಬರುತ್ತದೆ.

ಬಹಳ ಮಂದಿ ಮೊನಾಕೋದಲ್ಲಿ ಕೆಲಸ ಮಾಡುತ್ತಾರೆ, ಆದರೆ ಅಲ್ಲೇ ವಾಸಿಸುವುದಿಲ್ಲ. ಈ ಎಲ್ಲವುಗಳು ನಮ್ಮ ದೇಶಕ್ಕೂ ಧರ್ಮಸಭೆಗೂ ಶ್ರೀಮಂತಿಕೆಯನ್ನು ನೀಡುತ್ತವೆ. ಈ ಕಾರಣದಿಂದ, ಇಂತಹ ಚಿಕ್ಕ ದೇಶಕ್ಕೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಭೇಟಿ ನೀಡುವುದು ಮಹತ್ವದ ಅರ್ಥವನ್ನು ಹೊಂದಿದೆ, ಏಕೆಂದರೆ ಅವರು ಸಂಪೂರ್ಣ ವಿಶ್ವವನ್ನು ಉದ್ದೇಶಿಸಿ ಮಾತನಾಡುತ್ತಾರೆ

ಅವರ ಧಾರ್ಮಿಕಕಾರ್ಯವು ಶುಭಸಂದೇಶವನ್ನು ಸಾರುವುದು, ನಂಬಿಕೆಯನ್ನು ಬಲಪಡಿಸುವುದು ಮತ್ತು ಶಾಂತಿ ಹಾಗೂ ಮಾನವ ಗೌರವದ ಸಂದೇಶವನ್ನು ಹರಡುವುದಾಗಿದೆ. ಆದ್ದರಿಂದ, ಈ ಭೇಟಿ ನಮ್ಮ ಚಿಕ್ಕ ರಾಜ್ಯದ ಗಡಿಗಳನ್ನು ಮೀರಿ ಪ್ರತಿಧ್ವನಿಸುವ ಸಾಧ್ಯತೆ ಇದೆ.

ಪ್ರಶ್ನೆ: ಮೊನಾಕೋವನ್ನು ಐಶ್ವರ್ಯದ ಸಂಕೇತವಾಗಿ ಕಾಣಲಾಗುತ್ತದೆ. ಆದರೆ ಯಾವ ರೀತಿಯ ದಾರಿದ್ರ್ಯಗಳು ಕಾಣಿಸದೇ ಉಳಿದಿವೆ? ಅವು ಆರ್ಥಿಕವಾಗಿಯೂ, ಸಂಬಂಧಾತ್ಮಕವಾಗಿಯೂ, ಆತ್ಮೀಯವಾಗಿಯೂ ಅಥವಾ ಸಾಂಸ್ಕೃತಿಕವಾಗಿಯೂ ಇದೆಯೇ?

ದಾರಿದ್ರ್ಯಗಳು ಬಹಳವಿವೆ ಮತ್ತು ಬಹಳ ಆಳವಾಗಿವೆ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಮಾಧ್ಯಮಗಳು ನೀಡುವ ಚಿತ್ರಣದಾಚೆಗೆ ಇರುವ ವಾಸ್ತವಿಕತೆಯನ್ನು ತಿಳಿಯಲು ಸಹಾಯ ಮಾಡಿದವರ ಮೂಲಕ ನಾನು ಇದನ್ನು ಅರಿತುಕೊಂಡೆ.

ಮೊದಲು ಭೌತಿಕ ದಾರಿದ್ರ್ಯಗಳು ಇವೆ—ಅವು ಬಹಳ ಬಾರಿ ಅಡಗಿರುವುದರಿಂದ ಕಾಣುವುದೇ ಕಷ್ಟ. ಪ್ರಿನ್ಸಿಪಾಲಿಟಿಯ ಸುತ್ತಮುತ್ತ ಕೆಲಸ ಮಾಡುವ ಅನೇಕ ಜನರು ಅಲ್ಲಿ ವಾಸಿಸದಿದ್ದರೂ ದೇಶದ ಜೀವನಕ್ಕೆ ಕೊಡುಗೆ ನೀಡುತ್ತಾರೆ. ಆದರೆ ಕೆಲವೊಮ್ಮೆ ಅವರು ವಾಸಸ್ಥಳ ಅಥವಾ ಜೀವನ ವೆಚ್ಚದ ವಿಷಯದಲ್ಲಿ ಸಂಕಷ್ಟವನ್ನು ಎದುರಿಸುತ್ತಾರೆ. ನಮ್ಮ ಧರ್ಮಪ್ರಾಂತ್ಯ ಸೇರಿ ಅನೇಕ ಸಂಸ್ಥೆಗಳು ಇಂತಹ ಪರಿಸ್ಥಿತಿಗಳತ್ತ ಗಮನ ಹರಿಸುತ್ತಿವೆ.

ಈ ಭೌತಿಕ ಕಷ್ಟಗಳ ಜೊತೆಗೆ ಇನ್ನೊಂದು ದಾರಿದ್ರ್ಯವೂ ಇದೆ: ಏಕಾಂತ ಮತ್ತು ಜೀವನದ ಅರ್ಥದ ಸಂಕಟ.

ಒಬ್ಬರಿಗೆ ಭೌತಿಕವಾಗಿ ಯಾವುದೇ ಕೊರತೆಗಳಿಲ್ಲದಾಗ, ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ—ನಮ್ಮ ಬದುಕಿನ ಅರ್ಥವೇನು? ಏಕಾಂತದಿಂದ ಬಳಲುತ್ತಿರುವವರನ್ನು ಕಾಣುವುದು ಅಪರೂಪವಲ್ಲ. ಮಕ್ಕಳ ಶಿಕ್ಷಣದ ವಿಷಯದಲ್ಲಿ ಗೊಂದಲದಲ್ಲಿರುವ ಪೋಷಕರನ್ನೂ ನಾವು ನೋಡುತ್ತೇವೆ. ವಿಭಜನೆಗಳು ಮತ್ತು ಕುಟುಂಬದ ಸಮಸ್ಯೆಗಳು, ಜೀವನ ಹೊರಗೆ ಸುಲಭವಾಗಿ ಕಾಣುತ್ತಿದ್ದರೂ, ಒಳಗೆ ಹೆಚ್ಚು ತೀವ್ರವಾಗಿ ಹೊಡೆತ ನೀಡುತ್ತವೆ.

ಆದ್ದರಿಂದ, ಈ ಅಡಗಿರುವ ದಾರಿದ್ರ್ಯಗಳತ್ತ ಗಮನ ಹರಿಸುವುದು, ಪರಸ್ಪರ ಕಾಳಜಿ ವಹಿಸುವುದು ಮತ್ತು ಕಣ್ಣಿಗೆ ಕಾಣಿಸದಿದ್ದರೂ ನಿಜವಾಗಿರುವ ಹಾಗೂ ನೋವುಂಟುಮಾಡುವ ಪರಿಸ್ಥಿತಿಗಳನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ.

ಪ್ರಶ್ನೆ: ಸುಖಸೌಲಭ್ಯ ಸಾಮಾನ್ಯವೆಂದು ಕಾಣುವ ಪರಿಸ್ಥಿತಿಯಲ್ಲಿ, ಧರ್ಮಸಭೆ ದಾರಿದ್ರ್ಯವನ್ನು ಗುರುತಿಸುವ ಮತ್ತು ಪ್ರತಿಕ್ರಿಯಿಸುವ ವಿಧಾನ ಬದಲಾಗುತ್ತದೆಯೇ?

ಐಕ್ಯತೆ ಇಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತದೆ. ಮೊನಾಕೋದಲ್ಲಿ ಕಾರಿತಾಸ್ ಮೊನಾಕೋ, ಸೇಂಟ್ ವಿನ್ಸೆಂಟ್ ಡಿ ಪಾಲ್ ಸಭೆ, ಲೀಜನ್ ಆಫ್ ಮೇರಿ ಹಾಗೂ ಅನೇಕ ಧಾರ್ಮಿಕ ಮತ್ತು ನಾಗರಿಕ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಅವು ಸಂಕಷ್ಟದಲ್ಲಿರುವ ಮಕ್ಕಳು, ದುರ್ಬಲ ಕುಟುಂಬಗಳು, ವೃದ್ಧರು ಮತ್ತು ರೋಗಿಗಳನ್ನು ನೋಡಿಕೊಳ್ಳುತ್ತಿವೆ.

ಈ ಕಾಳಜಿ ಧರ್ಮಸಭೆಯ ಕಾರ್ಯದಲ್ಲೂ ಪ್ರತಿಫಲಿಸುತ್ತದೆ. ನಮ್ಮ ಉದ್ದೇಶವೆಂದರೆ—ಒಬ್ಬರನ್ನೊಬ್ಬರು ನೋಡಿಕೊಳ್ಳುವುದು ಮತ್ತು ಉತ್ತಮ ಜೀವನಮಟ್ಟವಿರುವ ದೇಶದಲ್ಲಿ ಬದುಕುವುದರಲ್ಲಿ ಮಾತ್ರ ತೃಪ್ತಿಪಡುವುದಲ್ಲ. ಮೊನಾಕೋದಲ್ಲಿ ನಮ್ಮ ಧರ್ಮಪ್ರಚಾರದ ಕರ್ತವ್ಯವೆಂದರೆ, ಅಗತ್ಯವಿರುವವರತ್ತ ಇನ್ನಷ್ಟು ಗಮನ ಹರಿಸಿ, ಶುಭಸಂದೇಶವನ್ನು ಸಾಕ್ಷಿಯಾಗುವ ಯಾವುದೇ ಅವಕಾಶವನ್ನು ಕೈಚೆಲ್ಲದಿರುವುದು.

ಪ್ರಶ್ನೆ: ಶ್ರೀಮಂತರು ಬಡವರಿಂದ ಆಧ್ಯಾತ್ಮಿಕವಾಗಿ ಏನಾದರೂ ಪಡೆಯುವ ಘಟನೆಗಳನ್ನು ನೀವು ಗಮನಿಸಿದ್ದೀರಾ?

ಧರ್ಮಸಭೆ ಮಾತನಾಡುವಾಗ—ಧರ್ಮಕೇಂದ್ರಗಳಲ್ಲಿ, ಚಳುವಳಿಗಳಲ್ಲಿ ಅಥವಾ ಧರ್ಮಾಧ್ಯಕ್ಷರ ಮೂಲಕ—ಯಾವುದೇ ವಿಶೇಷ ಗುಂಪನ್ನು ಆಯ್ಕೆಮಾಡುವುದಿಲ್ಲ. ದೇಶದ ಕೆಲವು ಪ್ರಮುಖ ಸಂದರ್ಭಗಳಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡುವ ಅವಕಾಶವೂ ನಮಗೆ ಸಿಗುತ್ತದೆ.

ಒಂದು ಮಾತು, ಉಪದೇಶ ಅಥವಾ ಸಾಕ್ಷಿಯ ಫಲವನ್ನು ಅಳೆಯುವುದು ಕಷ್ಟ. ಅದನ್ನು ಕೇಳುವವರೇ ಹೇಳಬೇಕು. ಆದರೂ, ಕೆಲವೊಮ್ಮೆ ಪ್ರತಿಕ್ರಿಯೆಗಳು ಬರುತ್ತವೆ—ಅವು ಸಂದೇಶವು ಸಮಯದೊಂದಿಗೆ ಜನರ ಹೃದಯಕ್ಕೆ ತಲುಪುತ್ತದೆ ಎಂಬುದನ್ನು ತೋರಿಸುತ್ತವೆ. ಇದೇ ನಮ್ಮ ಗುರಿ: ಮೇಲ್ಮೈಯಲ್ಲಿ ಉಳಿಯದೆ, ವ್ಯಕ್ತಿಯ ಅಂತರಾಳವನ್ನು ಸ್ಪರ್ಶಿಸುವುದು.

ವ್ಯಕ್ತಿಯ ಪಾತ್ರ ಅಥವಾ ಸ್ಥಾನ ಏನೇ ಇರಲಿ, ಅವನ ಒಳಗಿನ ಮನಸ್ಸು ಸವಾಲಿಗೆ ಒಳಗಾಗಬೇಕು ಮತ್ತು ಹೃದಯವು ಜೀವನವನ್ನು ಬದಲಾಯಿಸುವ ಮಾತಿಗೆ ತೆರೆದಿರಬೇಕು.

ಫಲಗಳು ತಕ್ಷಣ ಕಾಣಿಸದಿದ್ದರೂ, ಅನೇಕರು ಕೇಳುತ್ತಾರೆ ಮತ್ತು ನಿಧಾನವಾಗಿ ಒಂದು ದಾರಿ ತೆರೆದುಕೊಳ್ಳುತ್ತದೆ. ದೀಕ್ಷಾಸ್ನಾನ ಪಡೆಯಲು ಅಥವಾ ಮತ್ತೆ ದೇವಾಲಯಗಳಿಗೆ ಮರಳುವವರ ಸಂಖ್ಯೆಯ ಹೆಚ್ಚಳದಲ್ಲಿಯೂ ಇದನ್ನು ಕಾಣಬಹುದು.

ಪ್ರಶ್ನೆ:ನೀವು ಜನರಿಗೆ ಅವರು ನಿರೀಕ್ಷಿಸದ ಮಾತುಗಳನ್ನು ಹೇಳುವ ಸಂದರ್ಭಗಳಿವೆಯೇ?

ಇಲ್ಲಿ ಕಥೋಲಿಕ ಧರ್ಮವು ರಾಜ್ಯ ಧರ್ಮವಾಗಿದೆ. ಆದ್ದರಿಂದ ಅನೇಕರು ಧರ್ಮಾಧ್ಯಕ್ಷರು ಮತ್ತು ಧರ್ಮಸಭೆ ಮುಖ್ಯವಾಗಿ ಆಧ್ಯಾತ್ಮಿಕ ಅನುಭವ ಮತ್ತು ನಂಬಿಕೆಯ ಸ್ವೀಕಾರದ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸುತ್ತಾರೆ.

ಆದರೆ ರಾಷ್ಟ್ರೀಯ ಹಬ್ಬಗಳು ಅಥವಾ ಪ್ರಮುಖ ಸಂದರ್ಭಗಳಲ್ಲಿ, ನಾನು ಒಂದು ವಿಷಯವನ್ನು ನೆನಪಿಸಲು ಪ್ರಯತ್ನಿಸುತ್ತೇನೆ—ಕಥೋಲಿಕ ನಂಬಿಕೆ ಕೇವಲ ಸಂಸ್ಕೃತಿ ಅಥವಾ ಇತಿಹಾಸವಲ್ಲ. ಅದು ನಮ್ಮ ಬದುಕಿನ ವಿಧಾನ, ಆಯ್ಕೆಗಳು ಮತ್ತು ವಿವೇಚನೆಗೆ ಸಂಬಂಧಿಸಿದ ಜವಾಬ್ದಾರಿಯಾಗಿದೆ.

ಇದು ಕೆಲವರಿಗೆ ಹೊಸ ದೃಷ್ಟಿಕೋನವಾಗಬಹುದು. ಕಥೋಲಿಕ ಎಂದು ಕರೆಯಿಸಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅದರ ಪರಿಣಾಮಗಳನ್ನು ಜೀವನದಲ್ಲಿ ಅನುಸರಿಸಬೇಕು.

ಯಾರಾದರೂ ಆಶ್ಚರ್ಯಪಡುತ್ತಿದ್ದರೆ, ಅದು ಇದೇ ಕಾರಣದಿಂದ—ನಂಬಿಕೆ ಜೀವನದಲ್ಲಿ ನಿಜವಾದ ಸಮನ್ವಯವನ್ನು ಕೇಳುತ್ತದೆ.

ಪ್ರಶ್ನೆ: ಮೊನಾಕೋದಲ್ಲಿನ ಧರ್ಮಸಭೆಯ ಧಾರ್ಮಿಕಕಾರ್ಯವನ್ನು ಒಂದು ಶುಭಸಂದೇಶದ ಸಾಮತಿಯ ಚಿತ್ರದಲ್ಲಿ ಹೇಳಬೇಕಾದರೆ ಯಾವುದನ್ನು ಆರಿಸುತ್ತೀರಿ?

ನನಗೆ ಎರಡು ಶುಭಸಂದೇಶದ ಸಾಮತಿಗಳು ನೆನಪಿಗೆ ಬರುತ್ತವೆ. ಮೊದಲನೆಯದು—ಕಳೆದುಹೋದ ಕುರಿ: ದೂರದಲ್ಲಿರುವವರಿಗೂ ಶುಭಸಂದೇಶ ತಲುಪಲು ನಮ್ಮ ಎಲ್ಲ ಶಕ್ತಿಗಳನ್ನು ಬಳಸುವುದು.

ಎರಡನೆಯದು—ಜಕ್ಕಾಯನ ಘಟನೆ. ಸಮಾಜದಲ್ಲಿ ಸ್ಥಾನ ಹೊಂದಿದ್ದರೂ, ಉತ್ತಮ ಹೆಸರು ಇರದ ವ್ಯಕ್ತಿಯ ಮನೆಗೆ ಶುಭಸಂದೇಶದ ಸಂತೋಷವನ್ನು ತೋರಿಸಲು ಯೇಸು ಹೋಗುತ್ತಾರೆ . ಸನ್ನಿಹಿತತೆ ಮತ್ತು ಸ್ನೇಹದ ಮೂಲಕ, ದೇವರ ರಾಜ್ಯ ಈಗಾಗಲೇ ಅವನ ಜೀವನದಲ್ಲೇ ಇದೆ ಎಂಬುದನ್ನು ಯೇಸು ಅವನಿಗೆ ತೋರಿಸುತ್ತಾರೆ.

ಆದ್ದರಿಂದ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿ ನಮಗೆ ಒಂದು ಮಹಾ ಕೃಪೆಯಾಗುತ್ತದೆ ಎಂದು ನಾನು ನಂಬುತ್ತೇನೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

24 ಮಾರ್ಚ್ 2026, 18:15