ಹುಡುಕಿ

FILE PHOTO: AI boom brings fresh risks to US markets, and more money to M&A FILE PHOTO: AI boom brings fresh risks to US markets, and more money to M&A  (REUTERS)

ಕೃತಕ ಬುದ್ಧಿಮತ್ತೆಯ ಕುರಿತು ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರ ಸಮತೋಲನ ದೃಷ್ಟಿಕೋನ

ಸ್ಪ್ಯಾನಿಷ್ ಲೇಖಕ ಜಾವಿಯರ್ ಸರ್ಕಾಸ್ ಅವರ 2026ರ ವಿಶ್ವ ಸಾಮಾಜಿಕ ಸಂವಹನ ದಿನದಂದು, ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ನೀಡಿದ ಸಂದೇಶದ ಕುರಿತು ಚಿಂತನೆ.

ಲೇಖಕರು: ಜಾವಿಯರ್ ಸರ್ಕಾಸ್

“ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ 60ನೇ ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ನೀಡಿದ ಸಂದೇಶ ಒಂದು ಮಹತ್ವದ ಪಾಠವಾಗಿದೆ. ಇದು ಕಥೋಲಿಕರಿಗೆ ಮಾತ್ರವಲ್ಲ, ಕಥೋಲಿಕರಲ್ಲದವರಿಗೂ; ವಿಶ್ವಾಸಿಗಳಿಗೆ ಮಾತ್ರವಲ್ಲ, ವಿಶ್ವಾಸವಿಲ್ಲದವರಿಗೂ ಮಹತ್ವದ್ದಾಗಿದೆ. ರಾಜಕೀಯ, ಧಾರ್ಮಿಕ, ನೈತಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳನ್ನು ಒಳಗೊಂಡಿರುವ ಅದರ ಅನೇಕ ಪರಿಣಾಮಗಳ ಕಾರಣದಿಂದಲೂ ಇದು ಮಹತ್ವದ್ದಾಗಿದೆ. ಇನ್ನೂ ಅನೇಕ ಕಾರಣಗಳಿವೆ; ಆದರೆ ಅವುಗಳ ಬಗ್ಗೆ ಇಲ್ಲಿ ವಿವರವಾಗಿ ಹೇಳಲು ನನಗೆ ಸಾಧ್ಯವಿಲ್ಲ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ.

ನಾನು ಕೃತಕ ಬುದ್ಧಿಮತ್ತೆಯ ತಜ್ಞನಲ್ಲ. ಆದರೆ ಇತಿಹಾಸದ ವಿವಿಧ ಹಂತಗಳಲ್ಲಿ ದೊಡ್ಡ ತಾಂತ್ರಿಕ ಕ್ರಾಂತಿ ಸಂಭವಿಸಿದಾಗಲೆಲ್ಲ ಪುನಃ ಪುನಃ ಕೇಳಿಬರುವ ಅದೇ ರೀತಿಯ ಅಥವಾ ಸಮಾನವಾದ ಭಯಾನಕ ಭವಿಷ್ಯವಾಣಿಗಳನ್ನು ಕೇಳಿದಾಗ ನನಗೆ ಆಶ್ಚರ್ಯವಾಗುತ್ತದೆ. (ಕೃತಕ ಬುದ್ಧಿಮತ್ತೆ ನಿಜಕ್ಕೂ ಒಂದು ದೊಡ್ಡ ತಾಂತ್ರಿಕ ಕ್ರಾಂತಿ ಎಂಬುದರಲ್ಲಿ ಸಂಶಯವಿಲ್ಲ.) ಪ್ಲೇಟೋನ Phaedrus ಕೃತಿಯಲ್ಲಿ ರಾಜ ತಾಮಸ್ ಬರವಣಿಗೆಯ ಆವಿಷ್ಕಾರವನ್ನು ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾನೆ. ಅದು ತುಂಬಾ ಅಪಾಯಕಾರಿ ಆವಿಷ್ಕಾರ ಎಂದು ಹೇಳುತ್ತಾ, ಅದು “ಜನರ ಆತ್ಮದಲ್ಲಿ ವಿಸ್ಮರಣೆಯನ್ನು ನೆಡುತ್ತದೆ” ಮತ್ತು “ಸ್ಮರಣೆಯನ್ನು ಉಪಯೋಗಿಸುವುದನ್ನು ನಿಲ್ಲಿಸುತ್ತದೆ”, ಏಕೆಂದರೆ ಜನರು ಬರೆಯಲ್ಪಟ್ಟದ್ದರ ಮೇಲೆ ಅವಲಂಬಿತರಾಗುತ್ತಾರೆ ಎಂದು ಹೇಳುತ್ತಾನೆ. ಇದಲ್ಲದೆ, ಬರವಣಿಗೆ ಗುರು ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧವನ್ನು ಅಪ್ರಸ್ತುತವಾಗಿಸುತ್ತದೆ — ಅದು ಎಲ್ಲ ರೀತಿಯ ಕಲಿಕೆಯಿಗೂ ಅತ್ಯಂತ ಅಗತ್ಯವಾದ ಸಂಬಂಧ. ಬರವಣಿಗೆ ಜನರಿಗೆ ನಿಜವಾದ ಜ್ಞಾನವನ್ನು ನೀಡುವುದಿಲ್ಲ; ಬದಲಾಗಿ “ಜ್ಞಾನದ ಅಹಂಕಾರವನ್ನು” ಮಾತ್ರ ನೀಡುತ್ತದೆ, ಅದು ನಿಜವಾದ ಸಂಸ್ಕೃತಿಯ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಪ್ಲೇಟೋನ ಪಾತ್ರ ಹೇಳುತ್ತದೆ.

ಪ್ಲೇಟೋ ನಂತರ ಅನೇಕ ಶತಮಾನಗಳ ಬಳಿಕ, ಗುಟೆನ್‌ಬರ್ಗ್ ಮುದ್ರಣಯಂತ್ರವನ್ನು ಆವಿಷ್ಕರಿಸಿದಾಗ ಇದೇ ರೀತಿಯ ಅಥವಾ ಸಮಾನವಾದ ಆಕ್ಷೇಪಣೆಗಳು ಮತ್ತೆ ಕೇಳಿಬಂದವು. ಹೊಸ ಆವಿಷ್ಕಾರದ ಮೂಲಕ ಸಂಸ್ಕೃತಿ ಹಿಂದೆ ಇದ್ದ ಮಿತಿಗಳನ್ನು ಮೀರಿ ವ್ಯಾಪಕವಾಗಿ ಹರಡುವುದು, ಗ್ರಂಥಾಲಯಗಳೊಳಗೆ ಮಾತ್ರ ಸೀಮಿತವಾಗಿದ್ದ ಜ್ಞಾನ ಈಗ ದೊಡ್ಡ ಸಂಖ್ಯೆಯ ಜನರಿಗೆ ತಲುಪುವುದು ಎಂದು ಅನೇಕರು ಊಹಿಸಿದರು. ಇದರಿಂದ ಜ್ಞಾನ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಸಾಮಾನ್ಯ ಜನರಿಗೆ ತಲುಪುವ ಸಲುವಾಗಿ ಸಾಮಾನ್ಯವಾಗಿಬಿಡುತ್ತದೆ ಎಂದು ಹೇಳಿದರು. ಪರಿಣಾಮವಾಗಿ ಹೆಚ್ಚು ಗಂಭೀರವಾದ ಸಂಸ್ಕೃತಿ — ನಿಜವಾದ ಹೊಸ ಸಂಸ್ಕೃತಿ — ಕುಸಿದು ಹೋಗಿ ಕೊನೆಗೆ ನಾಶವಾಗುತ್ತದೆ ಎಂದು ಅವರು ಭಾವಿಸಿದರು.

ಇತ್ತೀಚೆಗೆ ದೂರದರ್ಶನ, ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ಕೂಡ ಇದೇ ರೀತಿಯ ಮಾತುಗಳನ್ನು ನಾವು ಕೇಳಿದ್ದೇವೆ. ಆದರೆ ಸತ್ಯವೇನೆಂದರೆ, ಬರವಣಿಗೆಯ ಆವಿಷ್ಕಾರವು ನಿಜವಾದ ಸಂಸ್ಕೃತಿಯ ಅಂತ್ಯಕ್ಕೆ ಕಾರಣವಾಗಲಿಲ್ಲ; ಬದಲಾಗಿ ಬೇರೆ ರೀತಿಯ ಸಂಸ್ಕೃತಿಯ ಉದಯಕ್ಕೆ ಕಾರಣವಾಯಿತು. ಅದೇ ರೀತಿ, ಮುದ್ರಣಯಂತ್ರವು ಉನ್ನತ ಸಂಸ್ಕೃತಿಯ ಅಂತ್ಯವನ್ನುಂಟು ಮಾಡಲಿಲ್ಲ ಬದಲಿಗೆ ಕ್ರಾಂತಿಗೆ ನಾಂದಿಯಾಯಿತು. ಅದಕ್ಕೆ ಸಾಕ್ಷಿಯಾಗಿ, ಶೇಕ್ಸ್‌ಪಿಯರ್ ಮತ್ತು ಸರ್ವಾಂಟೆಸ್ ಹೋಮರ್ ಮತ್ತು ವರ್ಜಿಲ್‌ ನಮ್ಮ ಮುಂದಿದ್ದಾರೆ.

ನಾನು ಕೃತಕ ಬುದ್ಧಿಮತ್ತೆಯಲ್ಲಿ ಯಾವುದೇ ಅಪಾಯಗಳಿಲ್ಲ ಎಂದು ಹೇಳುವುದಿಲ್ಲ; ಅದರ ಅಭಿವೃದ್ಧಿಯನ್ನು ನಾವು ಗಮನದಿಂದ ನೋಡಬೇಕಾಗಿಲ್ಲ ಎಂದೂ ಹೇಳುವುದಿಲ್ಲ. ನಾನು ಹೇಳುವುದೇನೆಂದರೆ, ಬರವಣಿಗೆ, ಮುದ್ರಣಯಂತ್ರ ಅಥವಾ ಇಂಟರ್‌ನೆಟ್‌ಗಳಂತೆ ಇದನ್ನೂ ಒಳ್ಳೆಯದಕ್ಕಾಗಿ ಬಳಸಬೇಕು, ಕೆಟ್ಟದಕ್ಕಾಗಿ ಅಲ್ಲ. ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ನಮ್ಮ ಮೇಲೆ, ನಮ್ಮ ಸಾರ್ವಜನಿಕ ಅಧಿಕಾರಗಳು ಅದರ ಮೇಲೆ ಹೇಗೆ ನಿಯಂತ್ರಣ ವಹಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಬರವಣಿಗೆ ಮತ್ತು ಮುದ್ರಣಯಂತ್ರಗಳಂತೆ, ಕೃತಕ ಬುದ್ಧಿಮತ್ತೆಯನ್ನೂ ಒಳ್ಳೆಯದಕ್ಕೂ ಕೆಟ್ಟದಕ್ಕೂ ಬಳಸಬಹುದು. ಅದನ್ನು ಬಳಸಿ Don Quixote ಅನ್ನು ಪ್ರಕಟಿಸಬಹುದು; ಅದೇ ರೀತಿ Mein Kampf ಅನ್ನು ಕೂಡ ಪ್ರಕಟಿಸಬಹುದು.

ತಂತ್ರಜ್ಞಾನವೇ ಸಮಸ್ಯೆಯಲ್ಲ. ಸಮಸ್ಯೆ ಎಂದರೆ ನಾವು ತಂತ್ರಜ್ಞಾನವನ್ನು ಹೇಗೆ ಬಳಸುತ್ತೇವೆ ಎಂಬುದು. ತಂತ್ರಜ್ಞಾನ ಸಂಪೂರ್ಣವಾಗಿ ತಟಸ್ಥವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ ತಂತ್ರಜ್ಞಾನವನ್ನು ಮಾನವರೇ ನಿರ್ಮಿಸಿದ್ದಾರೆ. ಆದ್ದರಿಂದ ಅದರ ಮೂಲಕ ನಡೆಯುವ ಒಳ್ಳೆಯದಕ್ಕೂ ಕೆಟ್ಟದಕ್ಕೂ ನಾವು ಹೊಣೆಗಾರರು — ಅದು ಬರವಣಿಗೆಯಾಗಿರಲಿ, ಮುದ್ರಣಯಂತ್ರವಾಗಿರಲಿ ಅಥವಾ ಕೃತಕ ಬುದ್ಧಿಮತ್ತೆಯಾಗಿರಲಿ.

ನಾನು ತಪ್ಪಾಗದಿದ್ದರೆ, ಕೃತಕ ಬುದ್ಧಿಮತ್ತೆಯ ಬಗ್ಗೆ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರ ದೃಷ್ಟಿಕೋನವೂ ಇದೇ ಆಗಿದೆ. ಜಗದ್ಗುರುಗಳು ಅಂತ್ಯಕಾಲದ ದೃಷ್ಟಿಯಲ್ಲಿ   ಯೋಚಿಸುವವರಲ್ಲ. ಈ ಹೊಸ ತಂತ್ರಜ್ಞಾನ ನಮ್ಮ ಎಲ್ಲಾ ದುಃಖಗಳಿಗೆ ಅಥವಾ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ನಮ್ಮ ನಾಗರಿಕತೆಯನ್ನು ಅಥವಾ ಕನಿಷ್ಠ ನಮ್ಮ ಸಂಸ್ಕೃತಿಯನ್ನು ನಾಶಮಾಡುತ್ತದೆ ಎಂದು ಅವರು ಭಾವಿಸುವುದಿಲ್ಲ. ಆದರೆ ಅವರು ಅತಿಯಾದ ಆಶಾವಾದಿಯೂ ಅಲ್ಲ. ಈ ಹೊಸ ತಂತ್ರಜ್ಞಾನವೇ ನಮ್ಮ ಜೀವನವನ್ನು ಸ್ವತಃ ಉತ್ತಮಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದೂ ಅವರು ನಂಬುವುದಿಲ್ಲ. “ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ನೀಡುವ ಅವಕಾಶಗಳನ್ನು ಧೈರ್ಯ, ದೃಢತೆ ಮತ್ತು ವಿವೇಕದಿಂದ ಸ್ವೀಕರಿಸುವುದು ಎಂದರೆ ಅದರೊಳಗಿನ ಸಂಕೀರ್ಣತೆಗಳು, ಸಮಸ್ಯೆಗಳು ಮತ್ತು ಅಪಾಯಗಳನ್ನು ಕಡೆಗಣಿಸುವುದಲ್ಲ,” ಎಂದು ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಬರೆಯುತ್ತಾರೆ.

ಜಗದ್ಗುರುಗಳು ಇದನ್ನು ಸ್ಪಷ್ಟವಾಗಿ ಅರಿತಿದ್ದಾರೆ. ಅವರು “ಸರ್ವಜ್ಞ ಸ್ನೇಹಿತನಂತೆ ಕೃತಕ ಬುದ್ಧಿಮತ್ತೆಯ ಮೇಲೆ ಅಜ್ಞಾನಿ ಮತ್ತು ಪ್ರಶ್ನೆಯಿಲ್ಲದ ಅವಲಂಬನೆ” ಬಗ್ಗೆ, ಎಲ್ಲ ಜ್ಞಾನದ ಮೂಲ, ಎಲ್ಲಾ ನೆನಪುಗಳ ಭಂಡಾರ, ಎಲ್ಲಾ ಸಲಹೆಗಳ “ಓರಾಕಲ್”(ದೇವವಾಣಿ) ಎಂದು ಅದನ್ನು ಕಾಣುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಗದ್ಗುರುಗಳ ದೃಷ್ಟಿಯಲ್ಲಿ ಕೃತಕ ಬುದ್ಧಿಮತ್ತೆ ಯಾವುದೇ ಮಾಂತ್ರಿಕ ಪರಿಹಾರವೂ ಅಲ್ಲ; ದೈತ್ಯಸ್ವರೂಪದ ಸಾಧನವೂ ಅಲ್ಲ. ನಾವು ಅದನ್ನು ಹೇಗೆ ಬಳಸುತ್ತೇವೋ ಅದೇ ಅದರ ಸ್ವರೂಪವನ್ನು ನಿರ್ಧರಿಸುತ್ತದೆ. ಆದ್ದರಿಂದ ಅದರ ಅಭಿವೃದ್ಧಿ ಮುಖ್ಯವಾಗಿ ಒಂದು ಸವಾಲಾಗಿದೆ: ಅದನ್ನು ಬಳಸಿ ಹೆಚ್ಚು ನ್ಯಾಯಯುತ, ಹೆಚ್ಚು ಸಮಾನತೆಯ ಮತ್ತು ಹೆಚ್ಚು ಸಂತೋಷಕರ ಸಮಾಜವನ್ನು ನಿರ್ಮಿಸುವುದು.

ಅದಕ್ಕಾಗಿಯೇ ಜಗದ್ಗುರುಗಳು ಹೇಳುತ್ತಾರೆ: “ನಮ್ಮ ಮುಂದಿರುವ ಕಾರ್ಯ ಡಿಜಿಟಲ್ ಆವಿಷ್ಕಾರವನ್ನು ನಿಲ್ಲಿಸುವುದು ಅಲ್ಲ; ಅದನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು ಮತ್ತು ಅದರ ದ್ವಂದ್ವ ಸ್ವಭಾವವನ್ನು ಅರಿಯುವುದು.” ಅದರ ಸ್ಪಷ್ಟ ಪ್ರಯೋಜನಗಳನ್ನೂ, ಅಷ್ಟಾಗಿ ಗೋಚರಿಸದ ಅಪಾಯಗಳನ್ನೂ ತಿಳಿದುಕೊಳ್ಳುವುದು ಅಗತ್ಯ. ಮೊದಲನೆಯದು ಉತ್ತೇಜಿಸಲು ಮತ್ತು ಎರಡನೆಯದು ತಪ್ಪಿಸಲು. ಕೃತಕ ಬುದ್ಧಿಮತ್ತೆಯನ್ನು ನಮ್ಮ ಶತ್ರುವಾಗಿ ಅಲ್ಲ, ನಮ್ಮ ಸಹಾಯಕರಾಗಿ ರೂಪಿಸಲು, ಜಗದ್ಗುರುಗಳು ಮೂರು ಮೌಲ್ಯಗಳನ್ನು ಉಲ್ಲೇಖಿಸುತ್ತಾರೆ: ಜವಾಬ್ದಾರಿ, ಸಹಕಾರ ಮತ್ತು ಶಿಕ್ಷಣ.

ಕೃತಕ ಬುದ್ಧಿಮತ್ತೆಯ ಮಾಲೀಕರು, ಸೃಷ್ಟಿಕರ್ತರು ಮತ್ತು ಪ್ರೋಗ್ರಾಮರ್‌ಗಳು; ರಾಜಕಾರಣಿಗಳು; ನಿಯಂತ್ರಣ ಸಂಸ್ಥೆಗಳು; ಪತ್ರಕರ್ತರು — ಮತ್ತು ಅವರನ್ನು ಗಮನಿಸುವ ಕರ್ತವ್ಯವಿರುವ ನಾಗರಿಕರು — ಇವರ ಜವಾಬ್ದಾರಿ, ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ನಿರ್ಧರಿಸುವ ವಿವಿಧ ಕ್ಷೇತ್ರಗಳ ನಡುವಿನ ಸಹಕಾರ ಮತ್ತು ಅದರ ಬಳಕೆದಾರರ ಶಿಕ್ಷಣ — ಅಂದರೆ ನಮ್ಮೆಲ್ಲರ ಶಿಕ್ಷಣ. ಈ ಮೂರು ಕರ್ತವ್ಯಗಳು ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ರೂಪಿಸುತ್ತವೆ. ನನ್ನ ಅಭಿಪ್ರಾಯದಲ್ಲಿ ಅದು ಅತ್ಯಗತ್ಯವೂ ಆಗಿದೆ.

ಜಗದ್ಗುರುಗ ಫ್ರಾನ್ಸಿಸ್ ಅವರ ನಿಧನದಿಂದ ಸುಮಾರು ಒಂದು ವರ್ಷ ಕಳೆದರೂ, ಅನೇಕರು — ಕಥೋಲಿಕರೂ ಹಾಗೂ ಕಥೋಲಿಕರಲ್ಲದವರೂ — ಜಗದ್ಗುರುಗಳಾದ 14ನೆ ಲಿಯೋ ಯಾವ ರೀತಿಯ ಜಗದ್ಗುರುಗಳಾಗಿರಬಹುದು ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದಾರೆ, ವಿಶೇಷವಾಗಿ ಫ್ರಾನ್ಸಿಸ್ ಅವರೊಂದಿಗೆ ಹೋಲಿಕೆ ಮಾಡುವಾಗ. ಮೊದಲಿನಿಂದಲೇ ಕಾಣಿಸಿದಂತೆ, ಈ ಜಗದ್ಗುರುಗಳು ತನ್ನ ಪೂರ್ವಾಧಿಕಾರಿ ಉದ್ರೇಕಗೊಳಿಸಿದ ಅಲೆಗಳನ್ನು ಶಮನಗೊಳಿಸಲು ಬಂದವರಂತೆ ಕಾಣುತ್ತಾರೆ. ವಿಷಯದಲ್ಲಿ ಅವರು ಫ್ರಾನ್ಸಿಸ್ ಅವರೊಂದಿಗೆ ನಿರಂತರತೆಯನ್ನು ಹೊಂದಿದ್ದಾರೆ; ಆದರೆ ರೂಪದಲ್ಲಿ ಭಿನ್ನತೆಯನ್ನು ತೋರಿಸುತ್ತಾರೆ.

ಯಾವುದೇ ಆಗಿರಲಿ, ಈ ದಸ್ತಾವೇಜು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ: ಜಗದ್ಗುರು ಫ್ರಾನ್ಸಿಸ್ ಅವರಂತೆ ಜಗದ್ಗುರುಗಳಾದ 14ನೆ ಲಿಯೋ ಕೂಡ ನಮ್ಮ ಕಾಲದ ಅತ್ಯಂತ ತುರ್ತು ಪ್ರಶ್ನೆಗಳನ್ನು ಧೈರ್ಯದಿಂದ, ಸ್ಪಷ್ಟ ಮನಸ್ಸಿನಿಂದ ಮತ್ತು ಪೂರ್ವಗ್ರಹವಿಲ್ಲದೆ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಧರ್ಮಸಭೆ ನಮ್ಮೆಲ್ಲರಿಗೂ ಉಪಯುಕ್ತವಾಗುವ ಮಾರ್ಗಗಳಲ್ಲಿ ಒಂದಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

12 ಮಾರ್ಚ್ 2026, 09:41